‘ಕಾಳು’ ಹೊತ್ತು ಜಯಲಕ್ಷ್ಮಿ ಪಾಟೀಲ್

ಜಯಲಕ್ಷ್ಮಿ ಪಾಟೀಲ್ ಅವರ ನೂತನ ಕಾದಂಬರಿ ‘ಮುಕ್ಕು ಚಿಕ್ಕಿಯ ಕಾಳು’ ಇಂದು ಬಿಡುಗಡೆಯಾಗುತ್ತಿದೆ. ಅಂಕಿತ ಪ್ರಕಾಶನ ಹೊರತರುತ್ತಿರುವಈಕೃತಿಗೆ ಕೆ. ಸತ್ಯನಾರಾಯಣ ಬರೆದ ಬೆನ್ನುಡಿ ಇಲ್ಲಿದೆ
ಜಯಲಕ್ಷ್ಮಿ ಪಾಟೀಲರ ಮೊದಲ ಕಾದಂಬರಿಯಲ್ಲಿ ಓದುಗರು ಮುಖ್ಯವಾಗಿ ಗಮನಿಸಬೇಕಾದ ಸಂಗತಿಗಳು. ನಾವೆಲ್ಲ ನೋಡುತ್ತಿರುವ ಬದುಕನ್ನು ಕಾದಂಬರಿಗಾರ್ತಿ ನಮ್ಮೆಲ್ಲರಿಗಿಂತ ಮತ್ತು ಸಾಹಿತ್ಯದ ಉಳಿದ ಪ್ರಕಾರಗಳಲ್ಲಿ ಬರೆಯುತ್ತಿರುವವರೆಲ್ಲರಿಗಿಂತಲೂ ಭಿನ್ನವಾಗಿ ವಿಶಿಷ್ಠವಾಗಿ ಕಾಣುತ್ತಾರೆ.
ಹಾಗೆಂದರೇನೆಂದು ವಿವರಿಸುವುದು ಕಷ್ಟ. ಆದರೆ ಇದು ಓದುವಾಗ ಅನುಭವಕ್ಕೆ ಬರುತ್ತಿರುತ್ತದೆ. ಬದುಕಿನ ವಿಸ್ತಾರ ಮತ್ತು ವೈವಿಧ್ಯಗಳು, ಪ್ರತಿನಿತ್ಯವೂ ಪಡೆದುಕೊಳ್ಳುವ ತಿರುವುಗಳನ್ನು ಸೂಕ್ಷ್ಮವಾಗಿ ಗುರುತಿಸುವ ಜಯಲಕ್ಷ್ಮಿಯವರ ಬರವಣಿಗೆಯ ರೀತಿಯಲ್ಲಿ ಇದು ನಮ್ಮ ಅನುಭವಕ್ಕೆ ಬರುತ್ತದೆ. ಬದುಕನ್ನು ಕೇವಲ ಪಾತ್ರಗಳ ಇಲ್ಲಾ ಕಥನದ ದೃಷ್ಟಿಯಿಂದ ಮಾತ್ರ ನೋಡದೆ ಬದುಕಿನ ವೈಶಾಲ್ಯತೆ ಮತ್ತು ಸಮಕಾಲಿನ ಇತಿಹಾಸದ ಚೌಕಟ್ಟಿನಲ್ಲಿ ಕೂಡ ನೋಡುವುದರಿಂದ ಜಯಲಕ್ಷ್ಮಿ ಭಾವನಾತ್ಮಕ ನೆಲೆಗಳ ಬಗ್ಗೆ ಬರೆಯುವಾಗಲೂ ವಸ್ತುನಿಷ್ಠತೆಯನ್ನು ಸಾಧಿಸುತ್ತಾರೆ.

ಪಳಗಿದ ಕಾದಂಬರಿಕಾರರು ಗಮನಿಸುವಂತೆ ಜಯಲಕ್ಷ್ಮಿ ಕೂಡ ಮನುಷ್ಯರು ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ಕಾಣುವಾಗಲೂ, ಹೇಗೆ ಬದುಕಲು ಬಯಸುತ್ತಾರೆ ಮತ್ತು ಕನಸುತ್ತಾರೆ ಎಂಬ ಸ್ತರವನ್ನು ಕೂಡ ಗಮನಿಸುತ್ತಾರೆ. ಹಾಗಾಗಿ ಈ ಕೃತಿ ಬಡತನ, ಕೀಳರಿಮೆ, ವೈಚಿತ್ರ್ಯಗಳ ದಾರುಣ ಕಥನ ಮಾತ್ರವಾಗದು. ಹಾಗೆ ಬರೆಯುವಾಗಲೂ ನಾವೆಲ್ಲ ಕಾಣುವ, ಕಾಣಲು ಹಂಬಲಿಸುವ ಕನಸಿನ, ಉಲ್ಲಾಸದ ಕ್ಷಣಗಳನ್ನು ಕೂಡ ಸೇರಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಕಾದಂಬರಿ ಕೇವಲ ನಮ್ಮ ಅನುಕಂಪವನ್ನು ಪ್ರೇರೇಪಿಸುವ ಬರವಣಿಗೆಯಾಗಿ ಬಿಡುತ್ತಿತ್ತು.
ಜಯಲಕ್ಷ್ಮಿ ಈ ಕಾದಂಬರಿಯ ವಸ್ತು ಮತ್ತು ಮನುಷ್ಯರನ್ನು ಬಹಳ ಸಂವತ್ಸರಗಳಿಂದ ತಮ್ಮ ಅಂತರಂಗದ ಪ್ರೀತಿಯ ಕಾವಿನಲ್ಲಿ ಜತನ ಮಾಡಿಕೊಂಡು ಬಂದಿದ್ದಾರೆ. ಇದರಿಂದಾಗಿ ಓದು ಒಂದು ಆತ್ಮೀಯ ಬೆಚ್ಚನೆಯ ಅನುಭವವನ್ನು ಕೊಡುತ್ತದೆ. ಅಭಿವ್ಯಕ್ತಿಯ ವಿಶಿಷ್ಟತೆಗೆ ಗಮನ ಕೊಡುವಷ್ಟೇ ಸಂವಹನಕ್ಕೂ ಆದ್ಯತೆ ನೀಡುವ ಜಯಲಕ್ಷ್ಮಿ, ಭಾಷೆಯ ಶಿಷ್ಠ ಮತ್ತು ಪ್ರಾದೇಶಿಕ ಸ್ತರಗಳೆರಡನ್ನು ಓದುಗಸ್ನೇಹಿಯಾಗಿ ಬಳಸುತ್ತಾರೆ.
ಜಯಲಕ್ಷ್ಮಿಯವರು ಈ ಕಾದಂಬರಿ ಬರೆಯುವಾಗ ಅವರ ಅಂತರಂಗದಲ್ಲಿ ಇನ್ನೂ ಹತ್ತಾರು ಕಾದಂಬರಿ ಕಥಾನಕಗಳು ಅಭಿವೃದ್ಧಿಗಾಗಿ ಹೊಂಚು ಹಾಕುತ್ತಿರುವುದು ಓದುಗರಿಗೆ ಗೊತ್ತಾಗಿ ಸಂತೋಷವಾಗುತ್ತದೆ. ಕಾದಂಬರಿಕಾರರಾಗಿ ದೀರ್ಘ ಕಾಲದ ಇನ್ನಿಂಗ್ಸ್‍ನಲ್ಲಿ ಬ್ಯಾಂಟಿಂಗ್ ಮಾಡಲು ಹೊರಟಿರುವ ಜಯಲಕ್ಷ್ಮಿಯವರಿಗೆ ಕನ್ನಡ ಓದುಗರ ಪರವಾಗಿ ಸ್ವಾಗತ ಮತ್ತು ಅಭಿನಂದನೆ.

3 comments

Leave a Reply