ಸಂಜು : ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು

ಗೊರೂರು ಶಿವೇಶ್

ರಾಜಕುಮಾರ್ ಹಿರಾನಿ ಮತ್ತು ‘ರಾಜಮೌಳಿ’ ಎಂಬ ಇಬ್ಬರು ‘ರಾ’ ನಿರ್ದೇಶಕರು ಇಂದು ಭಾರತೀಯ ಚಿತ್ರರಂಗವನ್ನು ಆಳುತ್ತಿರುವವರು.

ಬಾಹುಬಲಿ ಸೀರಿಸ್ 1-2 ರ ಮೂಲಕ ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ದಾಖಲೆ ಬರೆದರೆ ತಮ್ಮ ಆರಂಭದ ಮುನ್ನಾಬಾಯಿ ಸೀರಿಸ್ 1-2 ರ ಮೂಲಕದ ಹೊಸ ಟ್ರೆಂಡ್ ಆರಂಭಿಸಿದ ರಾಜಕುಮಾರ್ ಹಿರಾನಿ ನಂತರ ತ್ರಿ-ಈಡಿಯಟ್ಸ್ ಹಾಗೂ ಪಿ.ಕೆ. ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗವನ್ನಷ್ಟೆ ಅಲ್ಲದೆ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಪಡೆದವರು.

ಇದರಿಂದಾಗಿಯೆ ಅವರು ವಿವಾದಾತ್ಮಕ ನಾಯಕ ಸಂಜಯ್‍ದತ್ ಜೀವನ ಚರಿತ್ರೆಯನ್ನಾಧರಿಸಿದ ‘ಸಂಜು’ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದಾಗಲೆ ಅವರ ಅಭಿಮಾನಿಗಳ ಜೊತೆಗೆ ಸಾಮಾನ್ಯ ಜನರು ಅಪಾರ ನಿರೀಕ್ಷೆಯಿಂದ ಕಾಯುವಂತೆ ಮಾಡಿತ್ತು. ಚಿತ್ರದ ಮೊದಲ 3 ದಿನಗಳ ಗಳಿಕೆ ಹೊರಬಿದ್ದಿದ್ದು, ಬಾಹುಬಲಿಯ ನಂತರದ ಸ್ಥಾನದಲ್ಲಿ ಸಂಜು ಬಂದು ನಿಂತು ಹೊಸ ದಾಖಲೆ ಸೃಷ್ಟಿಸಿದೆ.

ಈಗ ಬಯೋಪಿಕ್‍ಗಳ ಜಮಾನ. ಕುಸ್ತಿಪಟು ಪೊಗಾಟ್ ಕುಟುಂಬದ ಜೀವನಚರಿತ್ರೆ ಆಧರಿಸಿದ ಅಮೀರ್ ಖಾನ್ ಅಭಿನಯದ ದಂಗಲ್, ಎಂ.ಎಸ್. ದೋನಿ ಅನ್‍ಟೋಲ್ಡ್ ಸ್ಟೋರಿ, ಬಾಗ್ ಮಿಲ್ಕಾ ಬಾಗ್, ಮೇರಿ ಕೋಮ್ ಕಷ್ಟ ದುರ್ಗಮ ಹಾದಿ ಹಿಡಿದು ಯಶ ಸಾಧಿಸಿದ ಬಗ್ಗೆ ಆಟಗಾರರ ಜೀವನವನ್ನು ಚಿತ್ರಿಸಿದರೆ, ಪಾಕಿಸ್ತಾನದಲ್ಲಿ ಬೇಹುಗಾರಿಕೆ ಮಾಡಿದ ಭಾರತೀಯ ಗೂಡಚಾರಿಣಿಯ ಜೀವನದ ಘಟನೆಯಾಧರಿಸಿದ ‘ರಾಜಿ’ ಮತ್ತು ತಮಿಳು, ತೆಲುಗು ಚಿತ್ರರಂಗವನ್ನು ಆಳಿದ ಕಳೆದ ಅರವತ್ತು-ಎಪ್ಪತ್ತು ದಶಕದ ನಾಯಕಿಯ ಜೀವನ ಚರಿತ್ರೆಯನ್ನಾಧರಿಸಿದ ಮಹಾನಟಿ ಚಿತ್ರಗಳು ಕಳೆದ ಕೆಲ ವರ್ಷಗಳಿಂದೀಚೆಗೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದು ಹೆಸರು ಮಾಡಿವೆ.

ಆ ನಿಟ್ಟಿನಲ್ಲಿ ಮತ್ತೊಂದು ಚಿತ್ರ ‘ಸಂಜು’

ಅರವತ್ತರ ದಶಕದ ಚಿತ್ರ ನೋಡಿದವರಿಗೆ ಈಗಲೂ ನೆನಪಿರುವ ಚಿತ್ರ ‘ಮದರ್ ಇಂಡಿಯಾ’. ಇವತ್ತಿಗೂ ಭಾರತೀಯ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ಹೆಸರಾದ ಆ ಚಿತ್ರದ ನಾಯಕಿ ನರ್ಗೀಸ್. ಆ ಕಾಲದ ಷೋಮ್ಯಾನ್ ಎಂದು ಹೆಸರಾಗಿದ್ದ ರಾಜ್‍ಕಪೂರ್ ರೊಡಗಿನ ಒಡನಾಟ ಮುರಿದುಬಿದ್ದ ನಂತರ ಮದರ್ ಇಂಡಿಯಾದ ಚಿತ್ರದಲ್ಲಿ ಮಗನ ಪಾತ್ರಧಾರಿಯಾಗಿದ್ದ ಸುನಿಲ್‍ದತ್ ಚಿತ್ರದ ಷೂಟಿಂಗ್ ಸಂದರ್ಭದಲ್ಲಿ ಆದ ಬೆಂಕಿ ಅವಘಡದಿಂದ ಕಾಪಾಡಿ ಆಕೆಯನ್ನು ವರಿಸಿದ್ದು ಮತ್ತೊಂದು ಬಯೋಪಿಕ್ ನಿರ್ದೇಶಕರಿಗೆ ಸ್ಪೂರ್ತಿಯಾಗುವ ಕಥೆ.

ಇವರ ಮಗ ಸಂಜಯ್‍ದತ್ ಬಾಲ್ಯದಿಂದಲೇ ಹಾದಿ ತಪ್ಪಿದ ಹುಡುಗನಾಗಿ ಸುದ್ದಿ ಮಾಡಿದವ. ಆತನ ಮೊದಲ ಚಿತ್ರ ‘ರಾಕಿ’ ಬ್ಲಾಕ್‍ಬಸ್ಟರ್ ಚಿತ್ರವಾದರೂ ಆತನ ಮುಂದಿನ ಚಿತ್ರಗಳು ಸಾಲು ಸಾಲಾಗಿ ತೋಪಾದಾವು. ಮುಂದೆ ಪುನರ್ಜನ್ಮ ಕಂಡಿದ್ದು ರಾಜಕುಮಾರ್ ಹಿರಾನಿಯವರ ಮುನ್ನಾ ಬಾಯಿ ಎಂ.ಬಿ.ಬಿ.ಎಸ್ ಹಾಗೂ ಲಗೆ ರಹೋ ಮುನ್ನಾಬಾಯಿ ಚಿತ್ರಗಳಿಂದ. ಐದಾರು ವರ್ಷಗಳ ಅವರಿಬ್ಬರ ಒಡನಾಟ, ಸ್ನೇಹ ಬಾಲಿವುಡ್‍ನ ಅತ್ಯಂತ ವಿವಾದಾತ್ಮಕ ನಟನ ಜೀವನ ಚರಿತ್ರೆಯನ್ನಾಧರಿಸಿ ಚಿತ್ರ ನಿರ್ಮಿಸಲು ಪ್ರೇರಣೆ ನೀಡಿರಲು ಸಾಕು.

ಈಗಾಗಲೇ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡವರಿಗೆ ಸಂಜಯ್‍ದತ್ ಎಂದೊಡನೆ ಮಾದಕ ವಸ್ತುಗಳ ವ್ಯಸನಿ, ಕುಡುಕ, ಲಂಪಟ, ಸ್ತ್ರೀಲೋಲ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆ (ಏಕೆ-56) ಆಧಾರದ ಮೇಲೆ ಜೈಲು ಕಂಡು ಮೊನ್ನೆ ಮೊನ್ನೆ ಜೈಲಿನಿಂದ ಬಿಡುಗಡೆಯಾದವ… ಮುಂತಾದ ಚಿತ್ರಗಳು ಕಣ್ಮುಂದೆ ಬರುತ್ತದೆ. ಚಿತ್ರವು ಅದೇ ಕಥೆಯ ಜಾಡಿನಲ್ಲಿ ಸಾಗಿದೆ.

ಆದರೆ ಆತನಿಗೆ ಪತ್ರಿಕೆಗಳು ಟೆರರಿಸ್ಟ್ ಎಂಬುದಾಗಿ ಬಿಂಬಿಸಿರುವುದನ್ನು ಸಾರಾ ಸಗಟಾಗಿ ನಿರಾಕರಿಸಲೆಂದೆ ಚಿತ್ರದ ದ್ವಿತಿಯಾರ್ಧ ಮೀಸಲಾಗಿದೆ. ಪತ್ರಿಕೆಗಳು ಪ್ರಸಾರ ಸಂಖ್ಯೆ ಏರಿಸಲು ಹಾಗೂ ಟಿವಿಗಳು ತಮ್ಮ ಚಾನಲ್‍ನ ಟಿ.ಆರ್.ಪಿ ಏರಿಸಿಕೊಳ್ಳಲು ಗಾಳಿಸುದ್ದಿಗಳನ್ನೇ ನಂಬಲರ್ಹ ಮೂಲಗಳಿಂದ ಎಂತಲೋ ಇಲ್ಲವೆ ಸುದ್ದಿಯ ತಲೆಬರಹಕ್ಕೆ ಪ್ರಶ್ನಾರ್ಥಕ ಚಿಹ್ನೆ ಇಟ್ಟು (?) ಇಟ್ಟು ಸುದ್ದಿ ಮಾಡುವುದರ ಹಿಂದಿನ ಪ್ರಮಾದವನ್ನು ಇಲ್ಲಿ ಬಿಂಬಿಸಲಾಗಿದೆ.

ವಿವಾದಾತ್ಮಕ ಮತ್ತು ಪ್ರಚಲಿತ ವಿದ್ಯಮಾನಳಿಗೆ ಹಾಸ್ಯ, ವಿಡಂಬನೆ, ಪಂಚ್‍ಲೈನ್‍ಗಳ ಒಗ್ಗರಣೆ ಹಾಕಿ ಉಣಬಡಿಸುವ ಯಶಸ್ವಿ ಫಾರ್ಮುಲಾದ ಮೂಲಕ ಹಿಂದಿನ ಚಿತ್ರಗಳಲ್ಲಿ ಗೆದ್ದಿದ್ದ ಹಿರಾನಿ ಇಲ್ಲೂ ಅದೇ ಸೂತ್ರವನ್ನು ಬಳಸಿದ್ದಾರೆ. ಕೆಲ ಪಾತ್ರಗಳ ಅಭಿನಯ, ಉಚ್ಚಾರಣೆಯ ರೀತಿ ತ್ರಿ ಈಡಿಯಟ್ಸ್ ನ ಬೊಮನ್ ಇರಾನಿ ಹಾಗೂ ಓಮಿ ವೈದ್ಯರನ್ನು ತಟ್ಟನೆ ನೆನಪಿಗೆ ತರುತ್ತದೆ.

“ಜೀವನದ ಕೆಟ್ಟ ಆಯ್ಕೆಗಳು ಒಳ್ಳೆ ಕಥೆಗಳಾಗುತ್ತವೆ” ಎಂದು ಸಂಜುವನ್ನು ಕುರಿತು ಚಿತ್ರದ ಪಾತ್ರ ಹೇಳುವಂತೆ ಸಂಜುವಿನ ಕೆಟ್ಟ ಆಯ್ಕೆಗಳನ್ನು ಹೇಳುವ ಭರದಲ್ಲಿ ಹಿರಾನಿ ಸಂಜಯ್‍ದತ್‍ನ ಜೀವನದ ಅನೇಕ ವಿವಾದಾತ್ಮಕ ವಿಷಯವನ್ನು ಹೇಳದೆ ಬಿಟ್ಟಿದ್ದಾರೆ.

ಮೊದಲ ಪತ್ನಿ ರಿಚಾ ಶರ್ಮ ಮೊದಲ ಮಗಳ ಕುರಿತಾಗಿ ಇಲ್ಲಿ ಯಾವುದೇ ಪ್ರಸ್ತಾಪವಿಲ್ಲ ಕುವೆಂಪುರ ‘ರಾಮಾಯಣ ದರ್ಶನಂ’ನ ರಾವಣನಂತೆ ಪಂಪನ ಕರ್ಣ, ರನ್ನನ ದುರ್ಯೋನನಂತೆ ಇಲ್ಲಿ ಧೀರೋದಾತ್ತ ನಾಯಕನಾಗಿ ಚಿತ್ರಿಸಲು ಯತ್ನಿಸಿದ್ದಾರೆ. ಚಿತ್ರ ನೋಡಿ ಹೊರಬಂದಾಗ ಟೆರರಿಸ್ಟ್ ಸ್ಥಾನವನ್ನು ನೀಗಿಸಿ ಮುನ್ನಾಬಾಯಿ ಪಾತ್ರ ನೆನಪಿನಲ್ಲಿ ಉಳಿಯುವಂತೆ ಹಿರಾನಿ ರೂಪಿಸಿರುವುದು ತನ್ನ ಮೊದಲೆರಡು ಚಿತ್ರಗಳ ನಾಯಕನಿಗೆ ಸಲ್ಲಿಸಿದ ಕಾಣಿಕೆಯಂತೆ ಭಾಗವಹಿಸುತ್ತದೆ.

ಇಡೀ ಚಿತ್ರದ ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಿರಾನಿಗೆ ಚಿತ್ರದ ಗೆಲುವು ಅರ್ಧ ಕೀರ್ತಿ ಸಂದರೆ ಉಳಿದರ್ಧ ಅಲ್ಲಿನ ಪಾತ್ರದಾರಿಗಳಿಗೆ ಸಲ್ಲಬೇಕು. ಸಂಜಯ್‍ದತ್‍ನನ್ನೇ ನೋಡಿದಂತೆ ಭಾಸವಾಗುವ ರಣಬೀರ್ ಕಪೂರ್ ತಾನೊಬ್ಬ ಅತ್ಯುತ್ತಮ ನಟ ಎಂಬುದನ್ನು ಸಾಬೀತು ಪಡಿಸಿದರೆ ಆತನ ಸ್ನೇಹಿತ ಕಮಲೇಶನ ಪಾತ್ರಧಾರಿ ವಿಕಿ ಕುಶಾಲ್ ಮತ್ತು ಸಂಜುವಿನ ತಂದೆ ಸುನಿಲ್‍ದತ್‍ನ ಪಾತ್ರಧಾರಿ ಪರೇಶ್‍ ರಾವಲ್‍ರವರ ಪೈಪೋಟಿಯ ಅಭಿನಯ ಗಮನ ಸೆಳೆಯುತ್ತದೆ.

ಕಚಗುಳಿಯಿಟ್ಟು ನಗಿಸುವ ಜೊತೆಗೆ ಜೀವನದ ಅನುಭವ ಆಧ್ಯಾತ್ಮದ ಸಾರವನ್ನು ಚಿತ್ರಗೀತೆಗಳ ಸಾಲುಗಳ ಮೂಲಕ ದಾಟಿಸುವ ರೀತಿ ಮೆಚ್ಚುಗೆಗೆ ಪಾತ್ರವಾಗುವುದಲ್ಲದೆ ಚಿತ್ರವನ್ನು ಗೆಲ್ಲಿಸುವಲ್ಲಿ ಸಹಾಯಕವಾಗಿದೆ. ತಂದೆ – ಮಗನ ಬಾಂದವ್ಯ, ಆತ್ಮೀಯ ಸ್ನೇಹಿತರ ನಡುವಿನ ಒಡನಾಟ ಮುದ ನೀಡುತ್ತಲೆ ಚಿತ್ರದ ಕೊನೆಯ ದೃಶ್ಯಗಳು ಕಣ್ಣನ್ನು ಒದ್ದೆ ಮಾಡಿಸುತ್ತಾ ಆಪ್ತವಾಗುತ್ತದೆ. ಫಾದರ್ಸ್‍ ಡೇ ಹಾಗೂ ಪ್ರೆಂಡ್‍ಶಿಪ್‍ ಡೇಗಳಿಗೆ ಹೇಳಿ ಮಾಡಿಸಿದ ಚಿತ್ರವೆಂದು ಭಾಸವಾಗುತ್ತದೆ.

ರಾಕ್‍ಸ್ಟಾರ್, ಬರ್ಫಿ, ಹೇ ಜವಾನಿ ಹೇ ದಿವಾನಿ ಹೊರತುಪಡಿಸಿ ಉಳಿದೆಲ್ಲ ಚಿತ್ರಗಳು ಫ್ಲ್ಯಾಪ್ ಆಗಿ ಗೆಲುವಿಗಾಗಿ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ದೊರೆತ ಪಾತ್ರವನ್ನು ರಣಬೀರ್ ಕಪೂರ್ ಸದುಪಯೋಗಪಡಿಸಿಕೊಂಡಿದ್ದು 3 ಶೇಡ್‍ನ ಪಾತ್ರಕ್ಕಾಗಿ ಆತನ ತಯಾರಿ, ತನ್ಮಯತೆ, ಸಮರ್ಪಣಾ ಭಾವ ಚಿತ್ರದಲ್ಲಿ ಸಮರ್ಪಕವಾಗಿ ಮೂಡಿ ಬಂದಿದ್ದು ಆತನ ಪಾಲಿಗೆ ‘ಸಂಜು’ ಟರ್ನಿಂಗ್‍ ಪಾಯಿಂಟ್ ಆಗುವುದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply