‘ಅಪ್ಪೆ ಟೀಚರ್’ ಸಿನೆಮಾ ವಿರುದ್ಧ..

ಗುಲಾಬಿ ಬಿಳಿಮಲೆ 

‘ಅಪ್ಪೆ ಟೀಚರ್’ ಎಂಬ ತುಳು ಸಿನೆಮಾವು ಮಹಿಳಾ ವಿರೋಧಿ ಧೋರಣೆಗಳಿಂದ ಕೂಡಿದ್ದು ಅದರ ಸಂಭಾಷಣೆಗಳು ಹಾಗೂ ಕೆಲ ದೃಶ್ಯಗಳು ಅತ್ಯಾಚಾರಕ್ಕೆ ಪ್ರೇರಣೆ ನೀಡುವಂತಿದೆ ಎಂದು ಮಂಗಳೂರಿನ‌ ಮಹಿಳಾ ಸಂಘಟನೆಗಳು ಹಾಗೂ ಕೆಲ ಪ್ರಜ್ಞಾವಂತರು ಆ ಸಿನೆಮಾದ ಕೆಲ ದೃಶ್ಯಗಳನ್ನು ತೆಗೆಯುವಂತೆ ಒತ್ತಾಯಿಸಿ ಮಾಡಿದ ಮೆರವಣಿಗೆ ಹಾಗೂ ಸಾರ್ವಜನಿಕ ಕಾರ್ಯಕ್ರಮದ ಕುರಿತು ಕೆಲದಿನಗಳ ಹಿಂದೆ ಒಂದು ಪೋಸ್ಟ್ ಹಾಕಿದ್ದೆ.

ನಮ್ಮ ಮನವಿಗೆ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದುದರಿಂದ ನಮ್ಮ ಉಸ್ತುವಾರಿ ಸಚಿವರಾದ ಖಾದರ್ ರವರನ್ನು ಭೇಟಿ ಮಾಡಿ, ವಿವರಿಸಿ ಅವರಿಗೆ ಮನವಿ ನೀಡಿದೆವು. ಅವರು ಸಂಸ್ಕೃತಿ ಇಲಾಖೆಯ ಸಚಿವೆ ಜಯಮಾಲಾರವರಿಗೂ ವಿಷಯ ತಿಳಿಸಿ ಸೆನ್ಸಾರ್ ಬೋರ್ಡಿನೊಂದಿಗೆ ಮಾತಾಡುವುದಾಗಿ ಹೇಳಿದರು. ಆನಂತರವೂ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಇಂದು ಸಿನೆಮಾ ಶತದಿನವನ್ನು ಆಚರಿಸುತ್ತಿರುವುದು ಒಂದು ದಿನದ ಹಿಂದೆಯಷ್ಟೇ ನಮಗೆ ತಿಳಿಯಿತು. (ಸದ್ದಿಲ್ಲದೆ ಈ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದರು) ಅತ್ಯಂತ ವೇಗವಾಗಿ ಕಾರ್ಯತತ್ಪರರಾದ ನಾವು ಇಂದು ಕಪ್ಪು ಬಾವುಟ ಹಿಡಿದು ಕಾರ್ಯಕ್ರಮ ನಡೆದ ಪುರಭವನದ ಎದುರು ನಮ್ಮ ವಿರೋಧವನ್ನು ಸಾರಿದೆವು.

ನಿನ್ನೆ ಸುರಿವ ಜಡಿಮಳೆಯಲ್ಲಿ ಪೊಲೀಸ್ ಗೆ ಸುದ್ದಿನೀಡುವುದೇ ದುಸ್ತರವಾಗಿತ್ತು. ಆದರೆ ಇಂದು ಒಂದು ಹನಿಯೂ ಬೀಳದೆ ಮಳೆ ನಮ್ಮೊಡನೆ ಸಹಕರಿಸಿತ್ತು.
ಪುರಭವನದ ಎರಡೂ ಗೇಟುಗಳಲ್ಲಿ ಪೊಲೀಸರ ಪಡೆಯೇ ನಿಂತಿತ್ತು. ನಮ್ಮದು ಮೌನ ಪ್ರತಿಭಟನೆಯಾಗಿತ್ತು. ಆದರೂ ಸರ್ಪಗಾವಲಿನಂತೆ ನಮ್ಮನ್ನು ಕಾಯುತ್ತಾ ಅವರು ನಿಂತ ಪರಿ ನೋಡಬೇಕಿತ್ತು.

5.30 ಗೆ ಕಾರ್ಯಕ್ರಮವೆಂದು ನಮಗೆ ಸುದ್ದಿ ಸಿಕ್ಕಿತ್ತು. ನಾವು 5 ಗಂಟೆಗೇ ಒಟ್ಟು ಸೇರಿದ್ದೆವು.. 5.45 ಕ್ಕೆ ನಾವು ಪ್ರತಿಭಟನೆಯ ಸ್ಥಳ ತಲಪಿದೆವು. ಕಾರ್ಯಕ್ರಮ ಶುರುವಾಗಲೇ ಇಲ್ಲ. ನಮ್ಮೆದುರಿನಲ್ಲಿ ಅತಿಥಿಗಳನ್ನು ಕರೆತರಲಾಗದೆ ಸಂಘಟರು ಒದ್ದಾಡುತ್ತಿದ್ದುದು ಸ್ಪಷ್ಟವಾಗಿ ನಮಗೆ ಕಾಣುತ್ತಿತ್ತು.

ನಾವೋ ಗಂಟೆ ಏಳಾದರೂ ಅಲ್ಲಾಡದೆ ಕುಳಿತೆವು… ಕಾರ್ಯಕ್ರಮವೂ ಆರಂಭವಾಗಿಲ್ಲ.. ನಾನು ಮೆಲ್ಲಗೆ ಒಳಗೆ ಇಣುಕಿ ನೋಡಿದೆ.. ದೊಡ್ಡ ಪರದೆಯಲ್ಲಿ ಅದೇನೋ ಹಾಕಿದ್ದರು… ಗಂಟೆ ಏಳೂವರೆಯಾದಾಗ ಒಳಗಿಂದ ಕೆಲವರು ಎದ್ದು ಹೋಗ ತೊಡಗಿದರು. ಅದೇನೋ ನೃತ್ಯ ಶುರುವಾಗಿತ್ತು… ಕೊನೆಗೆ 7.45 ಕ್ಕೆ ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದೆವು…

ನಾವು ಇಷ್ಟೆಲ್ಲ ನಮ್ಮ ವಿರೋಧವನ್ನು ದಾಖಲಿಸುವಾಗ ಕೊನೆಯ ಪಕ್ಷ ನಮ್ಮನ್ನು ಒಂದು ಬಾರಿ ಆ ಸಿನೇಮಾದ ನಿರ್ದೇಶಕ, ನಿರ್ಮಾಪಕ ಭೇಟಿ ಮಾಡಬಹುದಿತ್ತು..ಇನ್ನು ಮುಂದೆ ಜಾಗ್ರತೆಯಾಗಿ ಸಿನೇಮಾ ಮಾಡುತ್ತೇನೆ ಎಂದಾದರೂ ಹೇಳಿಕೆ ನೀಡಬಹುದಿತ್ತು.

ಅವರ ದುರಹಂಕಾರಕ್ಕೆ ನಮ್ಮ ಧಿಕ್ಕಾರ..
ಇನ್ನು ಮುಂದಿನವರಿಗೆ ಇದು ಪಾಠವಾಗಲಿ

3 comments

  1. ಖಂಡಿತವಾಗಿ ಇದು ಮುಂದಿನವರಿಗೆ ಪಾಠವಾಗುತ್ತದೆ. ಕರಾವಳಿಯಲ್ಲಿ ಮಹಿಳೆಯರು ಎಲ್ಲಿ ಧ್ವನಿ ಎತ್ತಬೇಕೋ ಅಲ್ಲಿ ಧ್ವನಿಯೆತ್ತಲು ಆರಂಭಿಸಿದ್ದಾರೆ.
    ಅನುಪಮಾ ಪ್ರಸಾದ್.

  2. ಎಲ್ಲಾ ರೀತಿಯ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸಬೇಕು

Leave a Reply