ಜೀಕುವ ಜೋಕಾಲಿಯಾಗುವೆ ಗೆಳೆಯ..

ಅಲ್ಲಮ’ ಗಿರೀಶ ಜಕಾಪುರೆ
ಇದೇನು ಚಿಕ್ಕ ಸಸಿ ಎಂದು ಏಕೆ ಮೂಗುಮುರಿಯುವೆ ಗೆಳೆಯ
ಬೊಗಸೆ ನೀರು ಕೊಡು ಜೀವನವಿಡಿ ಆಸರೆಯಾಗುವೆ ಗೆಳೆಯ
ನಿನ್ನ ಪ್ರೀತಿಯ ರಂಗುರಂಗಿನ ಚಿಟ್ಟೆಗಳಿಗೆ ಮಕರಂದ ನೀಡುವೆ
ನಿನ್ನ ಜೀವದ ಹಕ್ಕಿಗಳಿಗೆ ಬೆಚ್ಚಗಿನ ಪೊಟರೆ ಕೊಡುವೆ ಗೆಳೆಯ
ಹುಂಬ ದನಗಳು ಬಂದು ನನ್ನ ಎದೆಯ ಸೀಳದಂತೆ ಕಾಪಾಡು
ನಾ ಪ್ರಾಣವಾಗಿ ನಿನ್ನ ಉಸಿರು ಉಸಿರಿಗೆ ಬೆರೆಯುವೆ ಗೆಳೆಯ
ಎಸೆದು ಬಿಡು ಈ ಕೊಡಲಿ ಗರಗಸ, ನೀಡು ನನಗೆ ಜೀವದಾನ
ಎಲ್ಲ ಕಾಲ, ಋತುಗಳಲೂ ನಿನಗಾಗಿ ಜೀವತೇಯುವೆ ಗೆಳೆಯ
ನಿನಗಾಗಿ‌ ಅರಳಿವೆ ಪಾರಿಜಾತ, ಜಾಜಿ, ಮಲ್ಲಿಗೆ, ಗುಲ್ಮೋಹರ್
ನಿನ್ನ ಪ್ರೇಯಸಿ ಬರುವ ಬೀದಿಗೆ ಹೂವಾಗಿ ಹರಡುವೆ ಗೆಳೆಯ
ಕೊಂಚ ವಿರಮಿಸು, ಬಿರುಬಿಸಲ ದಾರಿಗೆ ತಂಪು ನೆರಳಾಗುವೆ
ಹಸಿವೆಗೆ ಹಣ್ಣು ಕೊಟ್ಟು ದಾಹಕೆ ಮಳೆಯ ಕರೆಯುವೆ ಗೆಳೆಯ
ನನ್ನ ರೆಂಬೆ ಕೊಂಬೆಗಳಿಗೆ ಪಸರಿಸಲು ಅನುವು ಮಾಡಿಕೊಡು
ನಿನ್ನ ಮುದ್ದುಮಕ್ಕಳು ಜೀಕುವ ಜೋಕಾಲಿಯಾಗುವೆ ಗೆಳೆಯ
ಇದೇನೂ ಮಾಡಲಾಗದಿದ್ದರೆ ‘ಅಲ್ಲಮ’ ಕೊನೆಗೆ ಜೀವಕೊಟ್ಟು
ಚಿತೆಯಲಿ ಉರಿದು ನಿನ್ನೊಡನೆ ನಾನೂ… ಸಾಯುವೆ ಗೆಳೆಯ

Leave a Reply