ಬೇಯದ ಬೇಳೆ

ಶ್ರೀಕಲಾ ಹೆಗಡೆ ಕಂಬ್ಳಿಸರ

ಗೇಯುವ ದೇಹಕ್ಕೆ ವ್ಯರ್ಥ ವ್ಯಂಜನವೂ

ಹೊಟ್ಟೆ ತುಂಬಿಸುವ ಹುರಿಗಡಲೆಯೇ.

ಇಳಿಸಲಾಗದ ಬತ್ತಳಿಕೆಯ ಭಾರ

ಹೊರುವವನ ಮಯ್ಯನ್ನು ಹುರಿಗಟ್ಟಿಸಲು ಸಾಕು.

 

ಕಾಲ ನಿಂತ ನೀರಾಗದೇ,

ಹೆಪ್ಪುಗಟ್ಟದೇ, ಆವಿಯಾಗದೇ, ಹಾರಿಹೋಗದೇ ಇದ್ದರೂ

ಬದುಕು ಬದಲಾಗಲು ಬಹಳ ಕಾಲವೇ ಬೇಕು.

 

ರೊಕ್ಕದ ಚಲಾವಣೆಯನ್ನೂ

ಊಟದ ತಟ್ಟೆಗೆ ಸುರಿದವನಿಗೆ

ಬೆಲೆ ಗೊತ್ತೋ ಗೊತ್ತಿಲ್ಲವೋ

ಹಸಿವನ್ನಂತೂ ಮುಂದೂಡುವಂತಿಲ್ಲ.

 

ರುಚಿಯ ಬಯಕೆಗಳು

ಅವನಲ್ಲೂ ಇವೆ, ಇವನಲ್ಲೂ ಇವೆ;

ಪಟ್ಟುಹಿಡಿದು ಕೂರದವನು ಹಿಗ್ಗಿದ್ದಾನೆ

ಹಠಹಿಡಿದವನಿಗೆ ಹಿಡಿ ಮಣ್ಣೇ ಗತಿ.

2 comments

Leave a Reply