ಜಯಶ್ರೀ ಕಾಸರವಳ್ಳಿ ಹೊಸ ಕಥಾ ಸಂಕಲನದೊಂದಿಗೆ..

ಖ್ಯಾತ ಲೇಖಕಿ ಜಯಶ್ರೀ ಕಾಸರವಳ್ಳಿ ಮತ್ತೊಂದು ಕಥಾ ಸಂಕಲನದೊಂದಿಗೆ ಸಜ್ಜಾಗಿದ್ದಾರೆ. ಅಂಕಿತ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಇದೇ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಈ ಕೃತಿಗೆ ಮಹತ್ವದ ವಿಮರ್ಶಕರಾದ ಟಿ ಪಿ ಅಶೋಕ್ ಅವರು ಬರೆದ ಮುನ್ನುಡಿ ಇಲ್ಲಿದೆ

ಟಿ.ಪಿ. ಅಶೋಕ

ತಮ್ಮ ಕತೆಗಳು, ವಿಮರ್ಶೆಗಳು, ಪ್ರಬಂಧಗಳು ಮತ್ತು ಅನುವಾದಗಳಿಂದ ಈಗಾಗಲೇ ಪರಿಚಿತರಾಗಿರುವ ಶ್ರೀಮತಿ ಜಯಶ್ರೀ ಕಾಸರವಳ್ಳಿಯವರು ಇದೀಗ ತಮ್ಮ ಹೊಸ ಕಥಾ ಸಂಕಲನವನ್ನು ಹೊರತರುತ್ತಿದ್ದಾರೆ. ಮನುಷ್ಯ ಸ್ವಭಾವ, ಸಂಬಂಧಗಳ ಸಂಕೀರ್ಣತೆ ಮತ್ತು ನಿಗೂಢತೆಗಳ ಬಗ್ಗೆ ಅವರಿಗಿರುವ ಯಾವತ್ತೂ ಕುತೂಹಲಗಳು ಕ್ರಮೇಣ ಒಂದು ಬಗೆಯ ಬೆರಗಾಗಿ, ಆ ಕುರಿತ ಧ್ಯಾನಗಳಾಗಿ ಬೆಳೆಯುತ್ತ ಬಂದಿರುವುದನ್ನು ನಾನು ಹಲವು ವರ್ಷಗಳಿಂದ ಗಮನಿಸುತ್ತಿದ್ದೇನೆ.

ತಮ್ಮ ಜೀವನಾನುಭವವನ್ನು ಸಾಹಿತ್ಯ ಮತ್ತು ಸಿನೆಮಾಗಳಿಂದ ಮತ್ತಷ್ಟು ಸಮೃದ್ಧಗೊಳಿಸಿಕೊಳ್ಳುತ್ತ, ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಹಲವು ಸಾಧ್ಯತೆಗಳನ್ನು ಪರೀಕ್ಷಿಸಿಕೊಳ್ಳುತ್ತ ಅವರು ಮುನ್ನಡೆದಿದ್ದಾರೆ. ಅವರ ಅನುವಾದಗಳಲ್ಲೂ ಕಥನ ಪ್ರಕಾರದ ಬೇರೆ ಬೇರೆ ಆಯಾಮಗಳನ್ನು ಶ್ರದ್ಧೆಯಿಂದ ಅವಲೋಕಿಸುವ, ಕಲಿಯುವ ಪ್ರಯತ್ನ ಕಾಣುತ್ತದೆ. ವಿದ್ಯುನ್ಮಾನ ಮಾಧ್ಯಮದ ಬಗ್ಗೆ ಅವರಿಗಿರುವ ಆಸಕ್ತಿ ಮತ್ತು ಕುತೂಹಲಗಳನ್ನೂ ಇದೇ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳಬಹುದು. ಕೇವಲ ವೈಯಕ್ತಿಕ ಅನುಭವಕ್ಕೆ ಕಟ್ಟುಬೀಳದೆ ತಾವು ಅನುಸಂಧಾನ ಮಾಡುವ ಇತರ ಕೃತಿಗಳ ಅನುಭವಗಳನ್ನು ತಮ್ಮ ರಚನೆಗಳಲ್ಲಿ ಸೃಷ್ಟ್ಯಾತ್ಮಕವಾಗಿ ಹೂಡಿ ಆ ಚಲನಶೀಲ ಮುಖಾಮುಖಿಯಲ್ಲಿ ಹೊಸದೇನಾದರೂ ಹೊಳೆಯಬಹುದೇ ಎಂಬ ನಿರೀಕ್ಷೆಯಲ್ಲಿ ಅವರು ಕತೆ ಕಟ್ಟುತ್ತಾರೆ.

ಬಾಲ್ಯದ ಸ್ಮೃತಿಗಳನ್ನು ಮಾತ್ರ ನೆಚ್ಚಿಕೊಳ್ಳದೆ ತೀರ ಸಮಕಾಲೀನವಾದ ಅನುಭವಗಳನ್ನೂ ಅವರು ತಮ್ಮ ಕತೆಗಳಲ್ಲಿ ಒಳಗೊಳ್ಳುತ್ತಾರೆ. ಗ್ರಾಮೀಣ ವಿವರಗಳಂತೆ ಮಹಾನಗರದ ವಿವರಗಳೂ ಅವರ ಕಥಾಶರೀರವನ್ನು ನಿರ್ಮಿಸುತ್ತವೆ. ಅವರ ಎಲ್ಲ ರಚನೆಗಳೂ ಒಂದೇ ಮಟ್ಟದ ಸಿದ್ಧಿಯನ್ನು ಪಡೆದಿಲ್ಲ. ಅನೇಕ ಕತೆಗಳು ಅಪೂರ್ಣದಂತೆ ಆ ಕ್ಷಣಕ್ಕೆ ಕಂಡರೂ ಮತ್ತೆ ಕೆಲವು ಕತೆಗಳು ಕೇವಲ ನಿರೂಪಕರ ಅನಿಯಂತ್ರಿತ ಲಹರಿಗಳಾಗಿ ಸೊಕ್ಕಿಬಿಟ್ಟಿರುವಂತೆ ಮೇಲ್ನೋಟಕ್ಕೆ ಭಾಸವಾದರೂ, ಅದು ಹಾಗಲ್ಲ.

ಚಂದವಾಗಿ ಕತೆ ಹೇಳುವುದಕ್ಕಷ್ಟೇ ಅಲ್ಪತೃಪ್ತರಾಗದೆ ಕಥನ ಪ್ರಕ್ರಿಯಲ್ಲೇ ಸತ್ಯವನ್ನು ಕಾಣಬೇಕೆಂದು ಹಂಬಲಿಸುವ ಎಲ್ಲ ಪ್ರಯೋಗಶೀಲರಲ್ಲೂ ಕಂಡುಬರುವ ಒಂದು ಸಾಮಾನ್ಯ ಸಂಗತಿ ಇದು. ಬಿಡಿ ಕತೆಗಳ ಸೋಲು ಗೆಲುವುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಒಟ್ಟಾರೆ ತಮ್ಮ ಶೋಧವನ್ನು ತಮಗೆ ಸಾಧ್ಯವಾದ ತೀವ್ರತೆ ಮತ್ತು ತನ್ಮಯತೆಗಳಲ್ಲಿ ಮುಂದುವರೆಸಿಕೊಂಡು ಬರುತ್ತಿರುವುದರಿಂದಲೇ ಜಯಶ್ರೀ ಅವರಿಗೆ ತಮ್ಮ ಸೃಜನಶೀಲತೆಯನ್ನು ಜತನದಿಂದ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎನಿಸುತ್ತದೆ.

ಹಾಗೆಂದು‘ಪ್ರಯೋಗಕ್ಕಾಗಿ ಪ್ರಯೋಗ’ ಎಂಬ ಅತಿಗೂ ಅವರು ಹೋಗಿಲ್ಲ. ಪ್ರಸ್ತುತ ಸಂಕಲನದ ‘ಸಹಿಷ್ಣುತೆ, ಅಸಹಿಷ್ಣುತೆ ನಡುವೆ’, ‘ಸ್ಪರ್ಶ ಸುಖ’, ‘ಸುಮ್ಮನೆ ಇರುವೆ ಬಿಟ್ಟುಕೊಳ್ಳುವುದೆಂದರೆ’ ಮುಂತಾದ ಕತೆಗಳನ್ನೂ ಒಳಗೊಂಡಂತೆ ಅವರು ತಮ್ಮಷ್ಟಕ್ಕೆ ಸ್ವಸಂಪೂರ್ಣವಾದ ಅನೇಕ ಒಳ್ಳೆಯ ಕತೆಗಳನ್ನು ಬರೆದು ಸಮಕಾಲೀನ ಕತೆಗಾರರ ನಡುವೆ ತಮ್ಮದೇ ಛಾಪನ್ನು ಮೂಡಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ.

ಪ್ರಸ್ತುತ ಸಂಕಲನದ ಎಲ್ಲ ಕತೆಗಳಲ್ಲೂಅಸ್ವಸ್ಥ ಮನಸ್ಥಿತಿಗಳ, ಪರಿಸ್ಥಿತಿಗಳ, ಪ್ರಪಂಚಗಳ ಅನಾವರಣ ನಡೆದಿದೆ. ಪರ್ಯಾಯವಾಗಿ, ಮನಸ್ಸು ಅಸ್ವಸ್ಥಗೊಂಡಿರುವುದರಿಂದ ಸುತ್ತಲ ಲೋಕವೂ ರೋಗಗ್ರಸ್ತವೆಂಬಂತೆ ಕಾಣ ಸುತ್ತಿದೆಯೋ ಅಥವಾ ಅಸ್ವಸ್ಥ ಸಮಾಜವು ಮನಸ್ಸುಗಳ ಅಸ್ವಾಸ್ಥ್ಯಕ್ಕೆ ಕಾರಣವಾಗುತ್ತಿದೆಯೋ ಎಂಬ ಚಿಂತನೆಯೂ ಈ ಕತೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿದಿದೆ.

ತಾವು ಕಾರಣವಾಗದ ತಮ್ಮ ಮಾನಸಿಕ, ದೈಹಿಕ ವಿಕೃತಿಗಳಿಂದಾಗಿ ತಮ್ಮ ಸುತ್ತಲ ಜನಗಳ ಅವಹೇಳನ, ಅನಾದರಗಳಿಗೂ ಬಲಿಯಾಗುವ ಹಲವು ವ್ಯಕ್ತಿಗಳ ಪಾಡು ಇಲ್ಲಿನ ಕೆಲವು ಕತೆಗಳಲ್ಲಿ ಚಿತ್ರಿತವಾಗಿದೆ. ವಿಧಿ ಎನ್ನುವುದು ಕೆಲವೊಮ್ಮೆ ಬಿಡಿಸಲಾಗದ ಜೀವನದ ನಿಗೂಢತೆಯಲ್ಲಿ ಸೂಚಿತವಾದರೆ ಮತ್ತೆ ಕೆಲವು ಬಾರಿ ವ್ಯಕ್ತಿ ನಿರ್ಧರಿಸಲಾಗದ, ನಿಯಂತ್ರಿಸಲಾಗದ ಇತಿಹಾಸದ ಇಕ್ಕಟ್ಟುಗಳಲ್ಲಿ ವ್ಯಕ್ತವಾಗುತ್ತದೆ. ತಮ್ಮ ವಿಧಿಯನ್ನು ದಿಟ್ಟವಾಗಿ ಎದುರಿಸುವ, ಹಾಗೆ ಮಾಡಲು ಹಲವು ಉಪಾಯ-ಒಳ ಉಪಾಯಗಳನ್ನು ಹೊಂಚಿಕೊಳ್ಳುವ ಪಾತ್ರಗಳೂ ಇಲ್ಲಿ ಕಾಣಿಸಿಕೊಂಡಿವೆ.

ತಮ್ಮ ಪೂರ್ವಗ್ರಹಗಳಿಂದ ತಮ್ಮ ಮನಸ್ಸನ್ನೂ ಸಂಬಂಧಗಳನ್ನೂ ಘಾಸಿಗೊಳಿಸಿಕೊಂಡಿರುವ ವ್ಯಕ್ತಿಗಳಂತೆ ಕ್ರಮೇಣ ವ್ಯಗ್ರತೆಯಿಂದ ಸ್ಪಷ್ಟತೆಗೆ, ಶಾಂತತೆಗೆ ಮುಖ ಮಾಡುವ ಪಾತ್ರಗಳೂ ಇಲ್ಲಿಕಂಡುಬರುತ್ತವೆ. ಅಂದರೆ ಲೇಖಕಿ ಒಂದು ಸಿದ್ಧಾಂತಕ್ಕೆ, ಸೂತ್ರಕ್ಕೆ ಇಲ್ಲವೇ ನಿಲುವಿಗೆ ತಮ್ಮನ್ನು ಬಂಧಿಸಿಕೊಳ್ಳದೆ ತಮ್ಮ ಶೋಧವನ್ನು ಸಾಕಷ್ಟು ಮುಕ್ತವಾಗಿ ಇಟ್ಟುಕೊಂಡಿರುವುದು ಕಾಣುತ್ತದೆ. ಇದರಿಂದಾಗಿ ಜಯಶ್ರೀ ಅವರ ಕತೆಗಳಿಗೆ ವೈವಿಧ್ಯ ಲಭಿಸಿದೆ. ಪರ್ಯಾಯವಾಗಿ ಅದು ಲೇಖಕಿ ಜೀವನವನ್ನು ಅದರ ಹಲವು ಸಾಧ್ಯತೆಗಳಲ್ಲಿ, ಆಯಾಮಗಳಲ್ಲಿ ಗ್ರಹಿಸಿ, ನಿರೂಪಿಸಲು ಬೇಕಾದ ಅವಕಾಶವನ್ನು ಸಾಧ್ಯ ಮಾಡಿದೆ.

ಈ ವೈವಿಧ್ಯ ಅವರ ನಿರೂಪಣಾ ಶೈಲಿಯಲ್ಲಿಯೂ ಕಾಣಿಸಿಕೊಂಡಿದೆ. ಕೇವಲ ವಾಸ್ತವವಾದಕ್ಕೆ ಅವರು ಕಟ್ಟುಬಿದ್ದಿಲ್ಲ. ಕೆಲವು ಕತೆಗಳಲ್ಲಂತೂ ನೋಡ ನೋಡುತ್ತಿದ್ದಂತೆ ವಾಸ್ತವಿಕ ಚಿತ್ರಣಗಳು ವಾಸ್ತವೇತರ ಪಾತಳಿಗಳಲ್ಲಿ ವಿಸ್ತರಿಸಿಕೊಳ್ಳುತ್ತವೆ. ವಿವರಗಳು ಸಂಕೇತಗಳಾಗಿ ಬೆಳೆಯುವ ಹಲವು ಉದಾಹರಣೆಗಳು ಇಲ್ಲಿವೆ. ಗದ್ಯದ ನಿರೂಪಣೆ ಜಡ್ಡುಗಟ್ಟಿದಾಗ ಭಾಷೆ ಕಾವ್ಯಾತ್ಮಕವಾಗಲು ಹವಣ ಸುವ ನಿದರ್ಶನಗಳೂ ಅಲ್ಲಲ್ಲಿ ಕಾಣ ಸಿಕೊಂಡಿವೆ. ಜಯಶ್ರೀ ಅವರ ಬಿಡಿ ಕತೆಗಳ ಸಾಪೇಕ್ಷ ಸೋಲು ಗೆಲುವುಗಳಿಗಿಂತ ಒಟ್ಟಾರೆ ಕಥನ ಪ್ರಕ್ರಿಯೆಯಲ್ಲಿ ಮೂಡುವ ಸೃಜನಶೀಲ ಚಡಪಡಿಕೆಗಳು ಮುಖ್ಯವಾಗಿ ತೋರುತ್ತವೆ.

‘ಮುತ್ತಿನಡ್ಡಿಗೆ’ ಕತೆಯು ನತದೃಷ್ಟ ಹೆಣ್ಣೊಬ್ಬಳ್ಳ ಹೃದಯ ವಿದ್ರಾವಕತೆ, ಅಂಥ ಹೆಣ್ಣೊಬ್ಬಳ ಮೇಲೆ ನಡೆಯುವ ದೌರ್ಜನ್ಯ, ಅವಳು ಅನುಭವಿಸುವ ಹಿಂಸೆ ಕನ್ನಡ ಓದುಗರಿಗೆ ಪರಿಚಿತವಾದದ್ದೇ. ಆದರೆ ಈ ಕತೆಯಲ್ಲಿ ಮುತ್ತಿನಡ್ಡಿಗೆ ಕೇವಲ ಒಂದು ವಸ್ತು ವಿವರವಾಗಿ ನಿಲ್ಲದೇ ಕೇಂದ್ರ ಪಾತ್ರದ ಒಳಗುದಿಗಳು ಮತ್ತು ಕನಸುಗಳನ್ನು ಧ್ವನಿಸುವ ಅಂಶವಾಗಿಯೂ ಮೂಡಿಬರುವ ರೀತಿಯಲ್ಲಿ ಜಯಶ್ರೀ ಅವರ ರಚನೆ ಹೆಚ್ಚಿನದನ್ನು ಒಳಗೊಳ್ಳುವ ಮಹತ್ವಾಕಾಂಕ್ಷೆಯನ್ನು ತೋರುವಂತಿದೆ.

‘ಇತಿಹಾಸದ ಪುಟಗಳೂ ಮತ್ತು ವಿಯಟ್ನಾಮ್‍ನ ಆ ಹೆಣ್ಣು ಮಗಳೂ’ ಕತೆಯ ವ್ಯಾಪ್ತಿ‘ಮುತ್ತಿನಡ್ಡಿಗೆ’ಗಿಂತ ಜಾಸ್ತಿ. ಬ್ಯೂಟಿ ಪಾರ್ಲರೊಂದರಲ್ಲಿ, ತನಗಿಂತ ಮೇಲಿನ ಸಾಮಾಜಿಕ ಸ್ತರದಲ್ಲಿರುವ ನಿರೂಪಕಿಯ ಮುಂದೆ, ಎರಡು ದಶಕಗಳ ಯುದ್ಧದ ನೆನಪುಗಳ ಭಾರ ಹೊತ್ತ ವಿಯಟ್ನಾಮೀ ಹೆಣ್ಣೊಬ್ಬಳ ಕಥನ ನಡೆಯುತ್ತದೆ. ಈ ಕಥನಕ್ಕೆ ವ್ಯಕ್ತಿವಿಶಿಷ್ಟ ಅಧಿಕೃತತೆಯ ಜತೆ ಜತೆಗೇ ಒಂದು ಕಾಲದ ಇತಿಹಾಸ ನಿರೂಪಣೆಯ ಆಯಾಮವೂ ತಾನಾಗಿಯೇ ಒದಗಿ ಬಂದಿದೆ ಎಂದು ವಿವರಿಸುವ ಕಾರಣವಿಲ್ಲ.

ಮಹತ್ವದ ಸಂಗತಿ ಎಂದರೆ ಆ ವಿಯಟ್ನಾಮೀ ಹೆಣ್ಣುಮಗಳು ಕೇವಲ ಇತಿಹಾಸದ ನೆನಪುಗಳಲ್ಲಿ ಬದುಕುತ್ತಿಲ್ಲ. ತನ್ನ ಜೀವನದಲ್ಲಿ ಏನೇನೋ ಆಗಿ ಅವಳು ಸದ್ಯ ಚೆನ್ನೈನಲ್ಲಿದ್ದಾಳೆ. ತನ್ನ ಕಸ್ಟಮರ್ ಆಗಿರುವ ನಿರೂಪಕಿಗೆ ಮುಂದಿನ ಚುನಾವಣೆಯಲ್ಲಿ ‘ಅಮ್ಮ’ನಿಗೆ ಮತ ಹಾಕಲು ಅವಳು ಮಾಡುವ ಕೋರಿಕೆಯಲ್ಲಿ ಅವಳು ತನ್ನ ಸದ್ಯದ ತುರ್ತಿನ ವರ್ತಮಾನವನ್ನು ಎದುರಿಸಬೇಕಾದ ಇತಿಹಾಸದ ಒತ್ತಡವಿದೆ. ಡಿಎಂಕೆ ಪಕ್ಷವು ಅಧಿಕಾರಕ್ಕೆ ಬಂದರೆ ಅದು ತಮಿಳನ್ನು ಕಡ್ಡಾಯ ಮಾಡಬಹುದು; ಆಗ ತಾನು ತನ್ನ ಮಗುವನ್ನು ತಮಿಳು ಟ್ಯೂಷನ್‍ಗೆ ಹಾಕಬೇಕಾದ ಆರ್ಥಿಕ ಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಅದನ್ನು ತಡೆಯಲು ಚುನಾವಣಾ ಪ್ರಕ್ರಿಯೆಯಲ್ಲಿ ತನ್ನ ಮಿತಿಯಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಇದೆ. ವಿಯೆಟ್ನಾಮಿನ ಇತಿಹಾಸ ತನ್ನನ್ನು ಬಾಧಿಸಿತ್ತು. ಈಗ ತಮಿಳುನಾಡಿನ ಇತಿಹಾಸವೂ ತನ್ನನ್ನು ಬಾಧಿಸುತ್ತಿದೆ.

ಹೀಗೆ ಈ ಕತೆಗೆ ತಾನೇ ತಾನಾಗಿ ಒಂದು ಬಗೆಯ ಚಲನಶೀಲತೆ ಬಂದುಬಿಟ್ಟಿದೆ. ಇವಳ ಮಾತಿನ ಪ್ರವಾಹ ಮತ್ತು ನಿರೂಪಕಿಯ ಮೌನವನ್ನು ಎದುರು ಬದರು ಮಾಡುವ ಕ್ರಮದಲ್ಲಿಇತಿಹಾಸಕ್ಕೆ ಎರಡು ಭಿನ್ನ ವರ್ಗಗಳು ಮುಖಾಮುಖಿಯಾಗುವ ವೈದೃಶ್ಯವನ್ನೂ ಕತೆ ದಾಖಲು ಮಾಡಿದೆ. ಈ ಕತೆಯ ಮಾಸ್ಟರ್ ಸ್ಟ್ರೋಕ್ ಯಾವುದೆಂದರೆ, ದೂರದ ವಿಯೆಟ್ನಾಮಿನಿಂದ ಆಕಸ್ಮಿಕವೆಂಬಂತೆ ಚೆನ್ನೈಗೆ ಬಂದು ತಮಿಳುನಾಡಿನ ಚುನಾವಣೆಯ ಪರಿಣಾಮವನ್ನು ತನ್ನ ವೈಯಕ್ತಿಕ ಬದುಕಿನಲ್ಲಿ ನೇರವಾಗಿ ಎದುರಿಸಬೇಕಾದ ಹೆಣ್ಣೊಬ್ಬಳ ಒತ್ತಡದ ಎದುರು ವೋಟರ್ ಐಡಿಯನ್ನೂ ಮಾಡಿಸಿರದ ನಿರೂಪಕಿಯ ಕಾಂಪ್ಲಸೆಂಟ್ ಮನೋಭಾವವನ್ನು ಲೇಖಕಿ ಮುಖಾಮುಖಿಯಾಗಿಸಿರುವ ರೀತಿ.

‘ಸಹಿಷ್ಣುತೆ, ಅಸಹಿಷ್ಣುತೆಗಳ ನಡುವೆ’ ಕತೆಯು ಈ ಕಾಲದ ದೊಡ್ಡ ಜಿಜ್ನಾಸೆಯೊಂದನ್ನು ತನ್ನ ಸೀಮಿತ ಕಾಲ ದೇಶಗಳ ಪರಿಧಿಯಲ್ಲಿ ಒಳಗೊಳ್ಳುವ ಸಾಹಸವನ್ನು ಮಾಡುತ್ತದೆ. ಕೆಲವೇ ಗಂಟೆಗಳಲ್ಲಿ, ಮಧ್ಯಮವರ್ಗದ ಮನೆಯ ಆವರಣದಲ್ಲಿಎರಡೇ ಮುಖ್ಯ ಪಾತ್ರಗಳ ಮಾತುಕತೆಗಳಲ್ಲಿ ಕತೆ ಕಟ್ಟಿಕೊಳ್ಳುತ್ತದೆ. ಕತೆಯೊಂದನ್ನು ಬರೆಯುವ ಪ್ರಯತ್ನದಲ್ಲಿ ತನ್ನದೇ ಲೋಕದಲ್ಲಿ ಮುಳುಗಿರುವ ಲೇಖಕಿ ನಿರೂಪಕಿ. ಜಗತ್ತಿನ ವಿದ್ಯಮಾನಗಳಿಗೆಲ್ಲ ಟಿವಿ ಪರದೆಯ ಮುಂದೆ ಕೇವಲ ಮೌನಸಾಕ್ಷಿ ಎಂಬಂತೆ  ಕುಳಿತಿರುವ ಅವಳ ಗಂಡ. ಹಾಗೆ ನೋಡಿದರೆ ಇಬ್ಬರೂ‘ತಿಳುವಳಿಕಸ್ಥ’ರೇ.

ಒಬ್ಬನು ಬಾಹ್ಯಜಗತ್ತನ್ನು ಟಿವಿ ಸ್ಟೋರಿಗಳ ಮೂಲಕ ಅನುಸಂಧಾನ ಮಾಡಿ ತನ್ನ ಅನುಭವವನ್ನು ಶ್ರೀಮಂತಗೊಳಿಸಿಕೊಳ್ಳಲು ಯತ್ನಿಸುತ್ತಿರುವವನು. ಮತ್ತೊಬ್ಬಳು ತನ್ನ ಅಂತರಂಗದ ಜಗತ್ತನ್ನು ಬಾಹ್ಯಜಗತ್ತಿನ ಮುಂದೆ ಕತೆಯ ಮೂಲಕ ಅನಾವರಣ ಮಾಡಲು ಹೆಣಗುತ್ತಿರುವವಳು. ಆಗ ಅಷ್ಟೇನೂ ಪರಿಚಿತನಲ್ಲದ, ಒಂದು ವರ್ಷದಿಂದ ಪಕ್ಕದ ಮನೆಯಲ್ಲಿರುವ ಹುಡುಗನೊಬ್ಬನ ಪ್ರವೇಶವಾಗುತ್ತದೆ. ತನ್ನ ಸ್ನೇಹಿತನೊಬ್ಬನಿಗೆ ಸೇರಿದ ದೊಡ್ಡ ಮೂಟೆಯೊಂದನ್ನು ಹಾಲಿನಲ್ಲಿಟ್ಟು ಅವನು ಅದನ್ನು ಆಮೇಲೆ ಕಲೆಕ್ಟ್ ಮಾಡಿಕೊಳ್ಳುವನೆಂದು ಅರುಹಿ ಹೊರಟುಹೋಗುತ್ತಾನೆ.

ಮೊದಮೊದಲು ಅದು ಕೇವಲ ಒಂದು ಮೂಟೆ. ಕ್ರಮೇಣ ಅದು ಜಗತ್ತಿನ ಸಮಸ್ಯೆ, ಸವಾಲುಗಳನ್ನೆಲ್ಲ ಹೊತ್ತ ರೂಪವೆಂಬಂತೆ ಈ ದಂಪತಿಯನ್ನು ಕಾಡಲಾರಂಭಿಸುತ್ತದೆ. ಆ ಮೂಟೆಯಲ್ಲಿ ಹೆಣವಿರಬಹುದೆ? ಈ ಹುಡುಗರು ನಿಜವಾಗಿ ಯಾರು? ಯಾಕೆ ಈ ಮೂಟೆಯನ್ನು ತಮ್ಮ ಮನೆಯಲ್ಲಿ ಇಡಲಾಗಿದೆ? ಮುಂತಾದ ಪ್ರಶ್ನೆಗಳು ಅವರನ್ನು ಬಾಧಿಸಲಾರಂಭಿಸುತ್ತವೆ. ಟಿವಿ ತೋರಿಸುವ ಎಲ್ಲ ವಿಕೃತಿಗಳು ಆ ಮೂಟೆಯಲ್ಲೇ ಸಂಗ್ರಹವಾದಂತೆ ಭಾಸವಾಗುತ್ತದೆ. ಇದು ಗಂಡ ಹೆಂಡತಿ ನಡುವೆ ಈಗಾಗಲೇ ಇರುವ ಇಕ್ಕಟ್ಟುಗಳನ್ನು ಮತ್ತಷ್ಟು ತೀವ್ರಗೊಳಿಸುತ್ತ ಹೋಗುತ್ತದೆ. ಬಾಹ್ಯಜಗತ್ತು ತನ್ನೆಲ್ಲ ಒತ್ತಡಗಳು, ಸಂದೇಹಗಳು, ಬಿಕ್ಕಟ್ಟುಗಳ ಸಮೇತ ಇವರಿಬ್ಬರ ಮನಸ್ಸನ್ನು ಪ್ರವೇಶಿಸಿಬಿಟ್ಟಿದೆ. ಅವರ ಪ್ರತಿಕ್ರಿಯೆ-ಪ್ರತಿಸ್ಪಂದನಗಳ ಸ್ವರೂಪವನ್ನೂ ಅದು ನಿಯಂತ್ರಿಸಿಬಿಟ್ಟಿದೆ.

ಈ ತಳಮಳ, ಅಸಂಬದ್ಧತೆಗಳ ವೈದೃಶ್ಯವೆಂಬಂತೆ ಕತೆಯ ಕೊನೆಯಲ್ಲಿ: ‘ಮತ್ತೊಬ್ಬ ಅಪರಿಚಿತ ಯುವಕ ಅದೆಷ್ಟೋ ವರುಷಗಳ ಸಲುಗೆಯೆಬಂತೆ ಆಪ್ತವಾಗಿ’ಇವರ ಮನೆಯನ್ನು ಪ್ರವೇಶಿಸಿ ಆ ಗಂಟನ್ನು ತೆಗೆದುಕೊಂಡು ಹೋಗುವುದಾಗಿ ತಿಳಿಸುತ್ತಾನೆ. ಅದರ ಪರಿಣಾಮವನ್ನು ಕತೆ ವಾಚ್ಯಗೊಳಿಸುವುದಿಲ್ಲ. ನಿತ್ಯ ಬದುಕಿನ ಸಾಮಾನ್ಯ ಸಂಗತಿಗಳಿಗೂ ಸಹಜವಾಗಿ ಸ್ಪಂದಿಸುವ ಮನಸ್ಥಿತಿಯನ್ನು ಕಳೆದುಕೊಂಡ ಇವತ್ತಿನ ಪರಿಸ್ಥಿತಿಯನ್ನು ಜಯಶ್ರೀ ಅವರ ಕತೆ ಸೂಕ್ಷ್ಮವಾಗಿ ಧ್ವನಿಸುತ್ತದೆ. ಯಾರು ಅಸ್ವಸ್ಥರು? ವ್ಯಕ್ತಿಗಳೋ, ಸಮಾಜವೋ? ಅಸ್ವಸ್ಥತೆ ಎಂಬುದು ನಿಜವಾಗಿ ನಾವು ಪರಿಭಾವಿಸುವ ರೀತಿಯಲ್ಲಿ ಹುಟ್ಟುವಂಥದ್ದೋ? ಎಂಬ ಪ್ರಶ್ನೆಗಳನ್ನು ಕತೆ ಮುಕ್ತವಾಗಿಟ್ಟು ಓದುಗರೂ ಲೇಖಕಿಯ ಶೋಧದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವಂತಿದೆ.

‘ಸ್ಪರ್ಶ ಸುಖ’ ಕತೆಯೂ ಇಂಥ ಕಾಲ ಮತ್ತು ಆವರಣಗಳ ನಡುವೆ ಹುಟ್ಟಿಕೊಂಡಿದೆ. ಲಿಂಗಭೇದದ ಸಂಕೀರ್ಣ ಪ್ರಶ್ನೆಗಳನ್ನು ದಿನನಿತ್ಯದ ಸಾಮಾನ್ಯ ಘಟನೆಯೊಂದರ ಮೂಲಕ ಎತ್ತಿ, ಹಾಗೆ ಮಾಡುವುದರ ಮೂಲಕ ನಮ್ಮ ನಮ್ಮ ನಿತ್ಯದ ಜೀವನ ಸಂದರ್ಭಗಳಲ್ಲೇ ಕತೆಗಳು ಹುಟ್ಟುವ ಚೋದ್ಯವನ್ನು ಲೇಖಕಿ ಸೂಚಿಸುತ್ತಿರುವ ಹಾಗೆ ಕಾಣುತ್ತದೆ.

ಹಾಗೆ ನೋಡಿದರೆ ಜಯಶ್ರೀ ಅವರು ಕತೆ, ಕಥನ ಇವುಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ತಮ್ಮ ರಚನೆಗಳಲ್ಲೇ ಕೆಲವೊಮ್ಮೆ ನೇರವಾಗಿ, ಹೆಚ್ಚಿನ ವೇಳೆ ಪರೋಕ್ಷವಾಗಿ ಚಿಂತಿಸುತ್ತ ಬಂದಿದ್ದಾರೆ. ‘ಅಂತರದ ನಡುವೆ’, ‘ಎ ಸ್ಮಾಲ್ ವಲ್ರ್ಡ್’ಇಂಥ ಬರಹಗಳು. ತಾವೇ ಕತೆಗಳಾಗಿ ಅವು ಅಷ್ಟೇನೂ ಯಶಸ್ವಿಯಾಗಿರದಿದ್ದರೂ ಕಥಾಮೀಮಾಂಸೆಯ ಹಲವು ಹೊಳಹುಗಳು ಇಲ್ಲಿ ಮಿಂಚಿಹೋಗುತ್ತವೆ.

ಸಾವು ಜಯಶ್ರೀ ಅವರ ಕತೆಗಳ ಮತ್ತೊಂದು ಮುಖ್ಯ ವಸ್ತು. ‘ಗಡಿಯಾರದಡಿಯಲ್ಲಿ’ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬನ ಕತೆ. ಏಳೇ ದಿನಗಳಲ್ಲಿ ಸಂಭವಿಸಬಹುದಾದ ಸಾವಿನ ನಿರೀಕ್ಷೆಯಲ್ಲಿ ತನ್ನ ಸದ್ಯದ ಬದುಕಿನ ರೀತಿ, ತನ್ನ ಕನಸುಗಳ ಅಸಂಬದ್ಧತೆ, ಸಾವನ್ನು ಎದುರಿಸುವ ಪ್ರಯತ್ನದಲ್ಲಿ ತನ್ನ ಇದುವರೆಗಿನ ಬದುಕಿನ ಸ್ವರೂಪವನ್ನು ಅವಲೋಕಿಸಿಕೊಳ್ಳುವ ಪ್ರಯತ್ನ-ಹೀಗೆ ಸಾವಿನ ಸಾಧ್ಯತೆ ಆವರಿಸಿಕೊಂಡಿರುವ ವ್ಯಕ್ತಿಯೊಬ್ಬನ ಅಂತರಂಗ ಬಹಿರಂಗಗಳನ್ನು ಕತೆ ಬಿಚ್ಚಿಡುತ್ತದೆ.

‘ಚಿತ್ರಗುಪ್ತನ ಸನ್ನಿಧಿಯಲ್ಲಿ’ ಎಂಬ ಕತೆಯಲ್ಲಿ ಲೇಖಕಿಯ ಕಲ್ಪನೆಗಳು ಸಾವಿನ ಆಚೆಗೂ ಹಬ್ಬುತ್ತವೆ. ತಾನು ಯಾರು ಎಂಬ ಪ್ರಶ್ನೆ ‘ಅಂತರದ ನಡುವೆ’ ಕತೆಯ ಸುನಂದೆಯನ್ನು ಈ ಲೋಕದಲ್ಲಿ ಬಾಧಿಸುವಂತೆ ‘ಚಿತ್ರಗುಪ್ತನ ಸನ್ನಿಧಿಯಲ್ಲಿ’ ಕತೆಯ ಕೇಂದ್ರ ಪಾತ್ರಕ್ಕೆ ‘ಪರ’ ಲೋಕದಲ್ಲೂ ಬಾಧಿಸುವ ವಿಪರ್ಯಾಸದಲ್ಲಿ ನಿಶ್ಚಿತ ಉತ್ತರವೇ ಇಲ್ಲದ ಮೂಲಭೂತ ಪ್ರಶ್ನೆಯೊಂದು ಆ ಪಾತ್ರಗಳನ್ನೂ ದಾಟಿ ಓದುಗರನ್ನೂ ಆವರಿಸಿಕೊಳ್ಳುವಂತಿದೆ.

‘ಮಾರ್ಜಾಲದ ಬಲೆಯಲ್ಲಿ’ ಹಾಗೂ ‘ಸುಮ್ಮನೆ ಇರುವೆ ಬಿಟ್ಟುಕೊಳ್ಳುವುದೆಂದರೆ’ ಕತೆಗಳಲ್ಲಿ ಲೇಖಕಿ ತಮ್ಮ ಶೋಧವನ್ನು ಇನ್ನೊಂದು ಬಗೆಯಲ್ಲಿ ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ‘ಮಾರ್ಜಾಲದ ಬಲೆಯಲ್ಲಿ’ ಕತೆಯಲ್ಲಿ ಕಥಾನಾಯಕನು ಬೆಕ್ಕೊಂದನ್ನು ಸಾಕ್ಷ್ಯವಾಗಿಟ್ಟುಕೊಂಡು ಅದರ ಮುಂದೆ ಮಾಡಿಕೊಳ್ಳುವ ಬಹಿರಂಗದ ನಿವೇದನೆಗಳಲ್ಲಿ ನಿಜಕ್ಕೂ ತನ್ನ ಅಂತರಂಗವನ್ನೇ ತಡಕುತ್ತಿರುತ್ತಾನೆ. ಆದರೆ ಬೆಕ್ಕು ಇಲ್ಲಿ ಕೇವಲ ಒಂದು ಮೂಕ ಸಾಕ್ಷಿ.

ಆದರೆ ‘ಸುಮ್ಮನೆ ಇರುವೆ ಬಿಟ್ಟುಕೊಳ್ಳುವುದೆಂದರೆ’ ಕತೆ ಇರುವೆಯನ್ನು ಕುರಿತ ಧ್ಯಾನದಲ್ಲಿ ತೊಡಗಿಕೊಂಡೇ ಇರುವಿಕೆಯ ಧ್ಯಾನದತ್ತ ಹೊರಳಿಕೊಂಡು ಬಿಡುತ್ತದೆ. ಶೀರ್ಷಿಕೆಯ ಲಘು ಧಾಟಿಯನ್ನೂ ಮೀರಿ ಕತೆ ಬೆಳೆದಿದೆ. ಒಂದು ಸಾಧಾರಣ ನುಡಿಗಟ್ಟು ಒಂದು ಬಗೆಯ ತಾತ್ವಿಕ ಶೋಧವನ್ನು ಅನುರಣ ಸುವ ಸಾಧ್ಯತೆಯನ್ನು ಪಡೆದುಕೊಂಡು ಬಿಡುತ್ತದೆ. ಪರ್ಯಾಯವಾಗಿ ಕಥಾನಾಯಕನ ಹೆಸರು ‘ಸಾಧಕ’ಎಂದಿರುವುದು ಕಾಕತಾಳೀಯವಲ್ಲ ಎನಿಸುತ್ತದೆ.

ಕೇವಲ ಸಾಂಪ್ರದಾಯಕವಾಗಿ ಕತೆ ಹೇಳುವ ಸುಲಭ ಮಾರ್ಗವನ್ನು ಕೈಬಿಟ್ಟು ಜಯಶ್ರೀ ನಿತ್ಯ ಪ್ರಯೋಗಶೀಲರಾಗಿ ಉಳಿದಿದ್ದಾರೆ. ಈ ಪ್ರಯೋಗಗಳು ಓದುಗರನ್ನೂ ಸೃಜನಶೀಲವಾಗಿಸಲಿ ಎಂದು ನಾನು ಹೃತ್ಪೂರ್ವಕ ಆಶಿಸುತ್ತೇನೆ.

Leave a Reply