ಪೋಸ್ಟ್ ಬಾಕ್ಸ್ ಗೆ ಮೊದಲ ಲೆಟರ್ ಬಂದು ಬಿತ್ತು..

‘ನಾನು ಪಿ ಸಾಯಿನಾಥ್ ಅವರನ್ನು ನೋಡಲೇಬೇಕು’ ಎಂದು ಹಠ ಹಿಡಿದ ಹುಡುಗ ಸಂದೀಪ್ ಈಶಾನ್ಯ. ನನಗೆ ತಕ್ಷಣ ನೆನಪಾಗಿದ್ದು ನನ್ನ ಯೌವ್ವನವೇ. ಹೀಗೇ ಹಠ ಹಿಡಿದು ಎಲ್ಲವನ್ನೂ ಧಕ್ಕಿಸಿಕೊಳ್ಳುತಿದ್ದ ನೆನಪು ಧುತ್ತೆಂದು ಎದ್ದುಬಂತಿತು. ಸರಿ ಬನ್ನಿ ಎಂದೆ. ಸಂದೀಪ್ ನೇರವಾಗಿ ಸಾಯಿನಾಥ್ ಕಾರ್ಯಕ್ರಮಕ್ಕೆ ಬರಲಿಲ್ಲ, ತಮ್ಮ ಮುಗ್ಧತೆ, ತುಂಟತನ, ಸಂಕೋಚಗಳ ಸಮೇತ ‘ಅವಧಿ’ಯ ಅಂಗಳದೊಳಗೆ ನಡೆದು ಬಂದುಬಿಟ್ಟ.

ಸಂದೀಪ್ ‘ಅವಧಿ’ಗೆ ಅದಕ್ಕೂ ಮೊದಲಿನಿಂದಲೇ ಪರಿಚಿತ. ತನ್ನ ಕಾಡುವ, ಭಿನ್ನ ಕವಿತೆಗಳಿಂದ. ಪಿ ಸಾಯಿನಾಥ್ ಕಾರಣದಿಂದಲೇ ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟದ್ದು ಎಂದು ಸಮಯ ಸಿಕ್ಕಾಗಲೆಲ್ಲಾ ಜ್ಞಾಪಿಸಿಕೊಳ್ಳುವ ಈಶಾನ್ಯ ನಾನು ಅನುವಾದಿಸಿದ ಸಾಯಿನಾಥರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯ ರಂಗ ಆವೃತ್ತಿ ತಿರುವು ಹಾಕುತ್ತಿದ್ದಾಗ ಆ ವಿಡಿಯೋದಲ್ಲಿ ಕಾಣಿಸಿಕೊಂಡುಬಿಟ್ಟಿದ್ದ. ನೋಡಿದರೆ ಆ ನಾಟಕದಲ್ಲಿ ಆತ ಪಾತ್ರಧಾರಿ.

ಅಲ್ಲಿಂದ ಇಲ್ಲಿಯವರೆಗೂ ಸಂದೀಪ್ ‘ಅವಧಿ’ಯ ಜೊತೆ ಹೆಜ್ಜೆ ಹಾಕಿದ್ದಾನೆ. ಈಗ ಅವಧಿಯ ಅಂಕಣಕಾರ.

ಆತನ ನಾಡಿಮಿಡಿತ ಗೊತ್ತಾಗಬೇಕಾದರೆ ಬನ್ನಿ ಪ್ರತೀ ವಾರ ಅವನ ಮನದಾಳ ಹೊಕ್ಕು ನೋಡಿ

-ಸಂ

ಈಗಲೂ ಆ ಸೇತುವೆಯನ್ನು

ದಾಟಲಾರದ

ಅದೆಷ್ಟೋ ಮಕ್ಕಳಿದ್ದಾರೆ ಅಲ್ಲಿ..

ಅಣ್ಣ ಸ್ಕೂಲ್ ಗೆ ಸೇರಿದಾಗ ತಿಂಗಳಿಗೆ ಐದು ರೂಪಾಯಿ ಫೀಸು, ನಾನು ಅದೇ ಸ್ಕೂಲಿಗೆ ಸೇರುವ ಹೊತ್ತಿಗೆ ಅದೇ ಐದು ರೂಪಾಯಿಗಳ ಫೀಸು ಐದಿನೈದು ರೂಪಾಯಿಗಳಾಗಿ ಮಾರ್ಪಾಡಾಗಿತ್ತು ಎಂದು ನೆನಪು.

ಹುಡುಗಿಯೂ ಅಲ್ಲದ ಹೆಂಗಸೂ ಅಲ್ಲದ ಧ್ಯಾನಸ್ಥ ಸ್ಥಿತಿಯನ್ನು ಹೆಣ್ಣೊಬ್ಬಳು ತನ್ನೊಳಗೆ ಅನುಭವಿಸುವಂತೆ ಮೈಸೂರು ಅರಮನೆಯಿಂದ ಸರಿಯಾಗಿ ಏಳು ಕಿಲೋ ಮೀಟರ್ ದೂರಕ್ಕಿರುವ ನನ್ನ ಹುಟ್ಟೂರು ಹಿನಕಲ್ ಕೂಡ ಹಳ್ಳಿಯೂ ಅಲ್ಲದ ನಗರವೂ ಅಲ್ಲದ ಅದೊಂದು ಬಗೆಯ ಸ್ಥಿತಿಯನ್ನು ತನ್ನೊಳಗೆ ಅನುಭವಿಸುತ್ತಿತ್ತು. ಇಂದಿಗೂ ಅದೇ ಸ್ಥಿತಿಯನ್ನು ಅನುಭವಿಸುತ್ತಿದೆ.

ನಮ್ಮ ಊರಿನಲ್ಲಿದ್ದ ಏಕ ಮಾತ್ರ ಪ್ರೈವೇಟ್ ಸ್ಕೂಲ್ ನಮ್ಮದು. “ಕಾನ್ವೆಂಟ್” ಎಂಬ ಮೌಖಿಕ ತೂಗು ಹಲಗೆಯನ್ನು ತನ್ನ ಕೊರಳಿಗೆ ತಾನೇ ನೇತು ಹಾಕಿಕೊಂಡಿದ್ದರೂ ಹಳೆಯ ಮಂಗಳೂರು ಹೆಂಚಿನ ಮನೆಯಂತ ಕ್ಲಾಸ್ ರೂಮ್ ಗಳು ಮಾತ್ರ ಚದುರಿಹೋದ ದ್ವೀಪಗಳಂತೆ ಕಾಣುತ್ತಿದ್ದವು.

ಪ್ರೈಮರಿ ಕ್ಲಾಸ್ ರೂಮುಗಳು ಈಶಾನ್ಯ ದಿಕ್ಕಿಗೂ, ಹೈಸ್ಕೂಲು ಕ್ಲಾಸ್ ರೂಮುಗಳು ನಡುಬೀದಿಯಲ್ಲೂ, ಹೈಯರ್ ಪ್ರೈಮರಿ ಕ್ಲಾಸ್ ರೂಮುಗಳು ಮತ್ತೊಂದು ದಿಕ್ಕಿಗಿದ್ದರೆ ಟೀಚರ್ ಗಳು ಕೂರುತಿದ್ದ ಸ್ಟಾಫ್ ರೂಮುಗಳು ಅದೆಲ್ಲೋ ಒಂದು ಹೆಸರಿಲ್ಲದ ಅನಾಥ ಮೂಲೆಗೆ ಅಂಟಿಕೊಂಡಿತ್ತು.

ಉಳಿದಂತೆ ಸುತ್ತಲೂ ಬಯಲು. ಹಸಿರು ಮತ್ತು ಸಣ್ಣ ಕಾಡು. ಹೀಗೆ ಅನೇಕ ಓರೆಕೋರೆಗಳಿಂದ ತುಂಬಿಹೋಗಿದ್ದ ನನ್ನ ಸ್ಕೂಲಿನ ನಕಾಶೆ ಒಂದು ನಿರ್ಧಿಷ್ಟ ಆಕಾರವಿಲ್ಲದ ಸೈನ್ಸ್ ಟೆಕ್ಸ್ಟ್ ಬುಕ್ಕಿನಿಂದ ಬಿಡುಗಡೆ ಹಂಬಲಿಸುವ ಅಮೀಬಾದಂತೆ ಭಾಸವಾಗುತ್ತಿತ್ತು.

ಮೂರನೇ ಕ್ಲಾಸಿರಬೇಕು ಎಂದು ಅಂದಾಜು. ಜೋರು ಮಳೆ ಏನಾದರು ಬಡಿದುಹೋದರೆ ನಾವು ಕೂರುತ್ತಿದ್ದ ಕ್ಲಾಸ್ ರೂಮುಗಳು ನೀರಿನಿಂದ ಆವೃತವಾಗಿಬಿಡುತ್ತಿದ್ದವು. ನಾವು ಕೂರುತ್ತಿದ್ದ ಬೆಂಚುಗಳ ಅರ್ಧದಷ್ಟು ಎತ್ತರಕ್ಕೆ ಮಳೆಯ ನೀರು ತುಂಬಿಹೋಗುತ್ತಿತ್ತು.

ಟೀಚರ್ ಗಳು ನೀರಿನಲ್ಲಿ ನೆನೆದು ಒದ್ದೆಯಾಗಿರುತ್ತಿದ್ದ ನಮ್ಮನ್ನು ಎದುರಾಳಿ ದೇಶದ ಬಾಂಬ್ ದಾಳಿಗೆ ತುತ್ತಾದ ನಂತರ ಮೌನದ ಮೂಲಕವೇ ಪ್ರಲವಿಸುವ ಸಂತ್ರಸ್ತರನ್ನು ನೋಡುವಂತೆ ತದೇಕವಾಗಿ ನೋಡುತ್ತಿದ್ದರು. ನಾವು ಮಾತ್ರ ಅವರ ಆ ನೋಟದ ಅರಿವನ್ನು ಧಿಕ್ಕರಿಸಿದವರಂತೆ ಅದೇ ನೀರಿನಲ್ಲಿ ಒಮ್ಮೊಮ್ಮೆ ಇನ್ನಷ್ಟು ಒದ್ದೆಯಾಗುತ್ತಿದ್ದೆವು.

ಆ ಘಳಿಗೆಗೆ ನಮ್ಮನ್ನು ಅದರಿಂದ ಶಾಪ ವಿಮೋಚನೆಗೊಳಿಸುವ ಯಕ್ಷಿಣಿಯರಂತೆ ಸ್ಕೂಲಿನ ಆಯಾಗಳು ಬಕೇಟು, ಗಡಸು ಬಟ್ಟೆ ಹಾಗು ಪೊರಕೆ ಹಿಡಿದು ಅವತರಿಸಿಬಿಡುತ್ತಿದ್ದರು. ಪುಟಾಣಿ ಶೂಗಳನ್ನು ತೊಡುತ್ತಿದ್ದ ಎಳೆಯ ಕಂಗಳಿನ ನಮ್ಮನೆಲ್ಲ ಹೊರಗೆ ಸಾಲಾಗಿ ನಿಲ್ಲಿಸಿ ಅಥವಾ “ಮಕ್ಕಳೇ ಈಗ ಒಂದು ಗಂಟೆ ಆಟಕ್ಕೆ ಹೋಗಿ” ಅಂತೆನೋ ಹೇಳಿ ಹೊರಗೆ ಕಳುಹಿಸಿ ಕ್ಲಾಸ್ ರೂಮನ್ನು ಸಾಫು ಮಾಡಲು ಅಣಿಯಾಗುತ್ತಿದ್ದರು.

ಆ ಕ್ಷಣಕ್ಕೆ ಉಳಿದವರು ಏನು ಮಾಡಿದರು, ಏನೆಲ್ಲಾ ಆಟವಾಡಿದರು ಗೊತ್ತಿಲ್ಲ, ಆದರೆ ನನ್ನ ಕಣ್ಣುಗಳು ವಿಜಯನಗರದ ರಸ್ತೆಗೆ ಹಾದುಹೋಗುವುದಕ್ಕಿದ್ದ ಅದೊಂದು ಸೇತುವೆಯನ್ನು ಮಾತ್ರ ದಿಟ್ಟಿಸಿ ನೋಡುವುದರಲ್ಲೇ ಸಾಕಷ್ಟು ಸಾರಿ ಕಳೆದು ಹೋಗಿದ್ದವು.

ನಾವು ಆಟವಾಡಿ ದಣಿದು ಮರಳುವುದರೊಳಗೆ ಆಯಾಗಳು ‘ಸುಡೋಕು’ ಆಟದ ಚಚ್ಚೌಕ ಮನೆಗಳಂತ ಕ್ಲಾಸ್ ರೂಮನ್ನು ಸಾಫು ಮಾಡಿಬಿಟ್ಟಿರುತ್ತಿದ್ದರು. ಕ್ಲಾಸ್ ರೂಮಿನ ಗೋಡೆಗಳನ್ನ ಮಣ್ಣಿನಿಂದ ಕಟ್ಟಿದ್ದ ಕಾರಣ ಮಳೆಯಲ್ಲಿ ನೆನೆದು ಒದ್ದೆಯಾಗಿದ್ದರಿಂದ ಗೋಡೆಗಳ ಯಾವುದೋ ಮೂಲೆಗಳಿಂದ ಸಣ್ಣಗಿ‌ನ ನೀರಿನ ಹನಿಯೊಂದು ಗೆರೆ ಎಳೆದಂತೆ ಇಳಿಯುತ್ತಲೇ ಇರುತ್ತಿತ್ತು. ನಂತರ ಅದೇ ಗೋಡೆಗಳು ತಮ್ಮ ದೇಹದಿಂದ ಹೊಮ್ಮಿಸುತ್ತಿದ್ದ ಅದೊಂದು ಬಗೆಯ ಅವರ್ಣೀಯವಾದ ಕಂಪನ್ನು ನಮ್ಮ ನಾಸಿಕಗಳಿಗೆ ಗುಟ್ಟಾಗಿ ತಲುಪಿಸುತ್ತಿದ್ದವು.

ನನ್ನ ಮೂರನೇ ಕ್ಲಾಸಿನ ದಿನಗಳು ಎಂದರೆ ಈಗಲೂ ನೆನಪಾಗುವುದು ಕಮಲ ಮಿಸ್ಸು ಹಾಡಿತೋರಿಸಿದ ನಿಸಾರ್ ಅಹಮ್ಮದರ “ನಿತ್ಯೋತ್ಸವ” ಪದ್ಯ ಮತ್ತು ಅರ್ಥವಾಗದ ಮಹಾಕಾವ್ಯದಂತೆ ತಲುಪಲಾರದೆ ಹೋಗಿದ್ದ ವಿಜಯನಗರದ ಕಡೆಗಿದ್ದ ಅದೊಂದು ಸೇತುವೆ.

ಹೀಗೆ ತನ್ನದೆ ಅನೇಕ ಸ್ವಂತ ಚರ್ಯೆಗಳನ್ನು ಇಂದಿಗೂ ಕಾಪಿಟ್ಟುಕೊಂಡು ನಮ್ಮ ನೆನಪಿನ ಅಕ್ಷಯ ಪಾತ್ರೆಯನ್ನು ಬರಿದು ಮಾಡದ ನಮ್ಮ ಸ್ಕೂಲಿನ ಕುರಿತು ಅಲ್ಲಿ ಓದಿದ ನನಗೆ ಮತ್ತು ನನ್ನಂತಹ ಅದೆಷ್ಟೋ ಮಕ್ಕಳಿಗೆ ಇರುವುದು ಎರಡೇ ತಕರಾರು.

ಒಂದು- ನಮ್ಮ ಸ್ಕೂಲಿನ ಹೆಸರು

ಮತ್ತೊಂದು- ವಿಜಯನಗರದ ದಿಕ್ಕಿಗಿದ್ದ ಆ ಸೇತುವೆ.

ನಮ್ಮ ಸ್ಕೂಲಿನ ಹೆಸರು “ಶ್ರೀಮತಿ ಚಿಕ್ಕಮ್ಮ ವಿದ್ಯಾಸಂಸ್ಥೆ”.

ಈ ಹೆಸರನ್ನ ನಮ್ಮನ್ನು ಅವಮಾನಗೊಳಿಸುವುದಕ್ಕಾಗೇ ಇಟ್ಟಿದ್ದಾರೆ ಎನ್ನುವಷ್ಟು ನಾವು ಹುಡುಗರು ಕುಪಿತರಾಗಿದ್ದೆವು.

ಅದರಲ್ಲೂ ಯಾವುದೇ ಹೊಸತನಕ್ಕೆ ತೆರೆದುಕೊಳ್ಳುವ ಅವಕಾಶವೇ ಇಲ್ಲದ ಹಿನಕಲ್ಲಿನಂತ ಸಣ್ಣ ಊರಿನ ನಮಗೆ “ಚಿಕ್ಕಮ್ಮ” ಎನ್ನುವ ಸ್ಕೂಲಿನ ಹೆಸರು ಸಾಕಷ್ಟು ಕಾಡಿಸಿತ್ತು.

ಯಾರಾದರೂ ನಮ್ಮ ಮನೆಗೆ ಬರುವ ನೆಂಟರು ನನ್ನನ್ನು ಅಥವಾ ಅಣ್ಣನನ್ನು ಕರೆದು “ನೀನು ಯಾವ ಸ್ಕೂಲ್ ಗೆ ಹೋಗ್ತಾ ಇದೀಯಾ”  ಎಂದು ಕೇಳಿದಾಗ “ಚಿಕ್ಕಮ್ಮ” ಎಂದು ಪೇಲವವಾಗಿ ಉಚ್ಚಾರವಾಗುವ ಸ್ಕೂಲಿನ ಹೆಸರು ಹೇಳುವುದಕ್ಕೆ ಮುಜುಗರಗೊಂಡವರಂತೆ ಮುಖ ಕಿವುಚಿ “ಅಯ್ಯೋ ಹೋಗಿ ಅಂಕಲ್ ನಮ್ಮಮ್ಮನ್ನ ಕೇಳಿ” ಎಂದು ಸಬೂಬು ಹೇಳಿ ಅಲ್ಲಿಂದ ಕಾಲು ಕೀಳುತ್ತಿದ್ದವು.

ಆದರೆ ಸೇತುವೆಯ ಆ ಬದಿಗಿರುವ ವಿಜಯನಗರದ ಮಕ್ಕಳಿಗೆ ಈ ಸ್ಥಿತಿ ಇದ್ದಂತಿರಲಿಲ್ಲ. ಸೇತುವೆಯ ಆ ಬದಿಗೆ ಸೆಂಟ್ ಜಾನ್ಸ್, ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್, ಚಿನ್ಮಯ ವಿದ್ಯಾಲಯ, ಪುಷ್ಕರಣಿ ವಿದ್ಯಾಸಂಸ್ಥೆ ಮತ್ತು ಅರುಣೋದಯದಂತ ಕಾವ್ಯಾತ್ಮಕ ಹೆಸರಿನ ಸ್ಕೂಲುಗಳಿದ್ದವು. ಆ ಹೆಸರುಗಳು ಉಚ್ಛಾರ ಮಾಡುವುದಕ್ಕೆ ಮತ್ತು ಯಾರಾದರು ಕೇಳಿದರೆ ಹೇಳುವುದಕ್ಕೆ ಲಾಯಕ್ಕಾಗಿವೆ ಎನ್ನುವುದು ನಮ್ಮ ಆವತ್ತಿನ ಬಹುದೊಡ್ಡ ನಂಬಿಕೆ.

ನಾನು ಮೊದಲು ಅಪ್ಪಟ ವಿಜಯನಗರದ ದ್ವೇಷಿಯಾಗಿದ್ದೆ. ಅಲ್ಲಿನ ಸ್ಕೂಲುಗಳು, ಸ್ವಚ್ಚವಾದ ಡಾಂಬರು ರಸ್ತೆಗಳು, ಪಾರ್ಕುಗಳು, ಒಂದೆರಡು ಸ್ಕೇಟಿಂಗ್ ಹಾಗೂ ಟೆನಿಸ್ ಕ್ಲಬ್ ಸೇರಿದಂತೆ ಅಲ್ಲಿನ ಐಷಾರಾಮಿ ಮನೆಗಳು ಮತ್ತವರ ಜೀವನಶೈಲಿ ನನ್ನ ಆ ಎಳೆಯ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಮತ್ತು ಪ್ರಶ್ನೆಗಳನ್ನು ಆವತ್ತಿಗೆ ಮೂಡಿಸಿಬಿಟ್ಟಿದ್ದವು. ಅಲ್ಲಿನ ಒಂದಿಷ್ಟು ಮನೆಯ ಮಕ್ಕಳು ನಮ್ಮ ಸ್ಕೂಲಿನಲ್ಲಿದ್ದರು ನಿಜ, ಆದರೆ ಅವರು ಸೇತುವೆಯ ಈ ತುದಿಗಿದ್ದ ಹಿನಕಲ್ಲಿನ ಮಕ್ಕಳಂತೆ ಯಾವತ್ತಿಗೂ ಇರಲಿಲ್ಲ.

ವಿಜಯನಗರದಿಂದ ಬರುವ ಮಕ್ಕಳು ಸ್ಕೂಲ್ ಗೆ ನಡೆದು ಬರುವ ಬದಲು ಚಂದದ ಸೈಕಲಿನಲ್ಲಿ ಬರುತ್ತಿದ್ದರು. ಪ್ರತಿ ತಿಂಗಳು ಫೀಸು ಕಟ್ಟುವ ಎಲ್ಲ ಆರ್ಥಿಕ ಸಾಮರ್ಥ್ಯವೂ ಅವರಲ್ಲಿತ್ತು. (ನಮ್ಮ ಸ್ಕೂಲಿನಲ್ಲಿ ಪ್ರತಿ ತಿಂಗಳು ಫೀಸು ಕಟ್ಟುವ ಪದ್ದತಿ ಇದೆ.‌ ಸ್ಕೂಲಿನ ಆರಂಭದಲ್ಲೆ ವರ್ಷದ ಫೀಸನ್ನು ತೆಗೆದುಕೊಳ್ಳುವುದಿಲ್ಲ. ಈಗಲೂ ಇದೇ ಪದ್ದತಿ ಇದೆ. ಬಡವರಿಗೆ ಉಪಯೋಗವಾಗಲಿ ಎಂದು ಈ ಪದ್ದತಿಯನ್ನ ಅನುಸರಿಸಲಾಗುತ್ತಿದೆ)  ಅವರ ನೋಟ್ ಬುಕ್ಕುಗಳು, ಜಾಮೆಟ್ರಿ ಬಾಕ್ಸ್,  ತೊಡುತ್ತಿದ್ದ ಯೂನಿಫಾರಂ ಎಲ್ಲವೂ ಹದವಾಗಿರುತ್ತಿದ್ದವು. ಅವರ ಅಪ್ಪ ಅಥವಾ ಅಮ್ಮ ಆಗಾಗ ಸ್ಕೂಲ್‌ಗೆ ಬಂದು ಟೀಚರ್ ಗಳ ಬಳಿ ಮಾತನಾಡಿ ತಮ್ಮ ಮಗ ಅಥವ ಮಗಳು ಹೇಗೆ ಓದುತ್ತಿದ್ದಾನೆ ಅವನ ನಡವಳಿಕೆ ಹೇಗಿವೆ ಎನ್ನುವುದನ್ನು ವಿಚಾರಿಸುತ್ತಿದ್ದರು.

ಸೇತುವೆಯ ಈ ತುದಿಯ ಹಿನಕಲ್ಲಿನ ಮಕ್ಕಳಿಗೆ ಈ ಅದೃಷ್ಟ ಅಷ್ಟಾಗಿ ಇರಲಿಲ್ಲ. ಸಣ್ಣ ಕೂಲಿ ಮಾಡುವ, ಹರಟೆ ಹೊಡೆಯುತ್ತಲೇ ಬದುಕು ಕಳೆದುಕೊಂಡ, ಫ್ಯಾಕ್ಟರಿಗಳಲ್ಲಿ ದುಡಿಯುವ, ಸಣ್ಣ ವ್ಯಾಪಾರ ಮಾಡುವಂತಹವರ, ಅಮ್ಮ ಮನೆ ಕೆಲಸ ಮಾಡುತ್ತ ಅಪ್ಪ‌ ಕುಡಿದು ಪ್ರತಿರಾತ್ರಿ ಗೋಳು ಹಾಕಿಕೊಳ್ಳುವ ದೊಡ್ಡ ಪಡೆಯಿಂದ ಬಂದ ಮಕ್ಕಳೇ ಹೆಚ್ಚಾಗಿದ್ದರು.

ಅಂತಹ ಪಡೆಯ ಪಟುಗಳನ್ನ ಪುಟ್ಟ ವಯಸ್ಸಿ‌ನ ನಾನು ಸಾಕಷ್ಟು ಕಂಡಿದ್ದೆ. ಇಂತಹ ಅಸಾಧಾರಣ ವಾತಾವರಣದಲ್ಲಿ ಕಳೆದುಹೋಗುತ್ತಿದ್ದವರ ಮಕ್ಕಳು ಸ್ಕೂಲಿನ‌ ಕಡೆಗೆ ಮುಖ ಮಾಡಿ ಅಕ್ಷರಗಳ ಸಹವಾಸ ಮಾಡುವುದು ಕೂಡ ಒಂದು ಸಾಹಸವಾಗಿತ್ತು. ಅಂತಹ ಮನೆಯ ಮಕ್ಕಳಿಗೆ ತಾವು ಏನು ಓದುತ್ತಿದ್ದೇವೆ ಈ ಓದಿನ ಮೂಲಕ ನಾವು ಸಾಧಿಸಬಹುದಾದ ಗಮ್ಯ ಯಾವುದು ಎನ್ನುವ ಸಾಮಾನ್ಯ ಪ್ರಶ್ನೆಯನ್ನು ತಮಗೆ ತಾವು ಕೇಳಿಕೊಂಡಂತೇನೂ ಇರಲಿಲ್ಲ.

ಇದು ನನಗೆ ಗೊತ್ತಾಗಿದ್ದು ಹೀಗೆ. ನಮ್ಮ‌ ಸ್ಕೂಲಿನಲ್ಲಿ ಪ್ರತಿ ಯೂನಿಟ್ ಟೆಸ್ಟ್ ನಡೆದ ನಂತರ ಟೀಚರ್ ಗಳು ನೀವು ತೆಗೆದುಕೊಂಡ ಮಾರ್ಕ್ಸ್ ನ್ನ ನಿಮ್ಮ ಅಪ್ಪ‌ಅಮ್ಮನಿಗೆ ತೋರಿಸಿ ಸಹಿ ಹಾಕಿಸಿಕೊಂಡು ಬನ್ನಿ ಎನ್ನುತ್ತಿದ್ದರು. ಅಂತಹ ಒಳ್ಳೆಯ ಪ್ರತಿಭಾವಂತ ವಿಧ್ಯಾರ್ಥಿಯಲ್ಲ‌ದ‌ ನಾನು ಓದಿನ ಅರಿವಿದ್ದ ಅಪ್ಪನಿಗೆ ನನ್ನ ಮಾರ್ಕ್ಸ್ ತೋರಿಸಿ ಒಂದಿಷ್ಟು ಸುಳ್ಳುಗಳನ್ನ ಹೇಳಿ ಅಮ್ಮನಿಂದ ಸಹಿ ಹಾಕಿಸಿಕೊಳ್ಳುತ್ತಿದ್ದೆ. ಅಮ್ಮ ಓದಿದ್ದು ಕೇವಲ ಮೂರನೇ ಕ್ಲಾಸು. ಅವಳಿಗೆ ಅಷ್ಟಾಗಿ ಏನೂ ತಿಳಿಯುತ್ತಿರಲಿಲ್ಲ. ಅವಳು ಸಹಿ ಹಾಕುವಾಗ ಅವಳ ಅಕ್ಷರಗಳು ಪ್ರಯಾಸ ಪಡುವ ಪ್ರಯಾಣಿಕನಂತೆ ಇಷ್ಟ ಬಂದ ಕಡೆಗೆ ಚಲಿಸಿಬಿಟ್ಟಿರುತ್ತಿದ್ದವು.

ನಾನು ಉಳಿದವರ ಪುಸ್ತಕಗಳಲ್ಲಿರುತ್ತಿದ್ದ ಸಹಿಗಳ ಆಕಾರವನ್ನ ಮತ್ತು ಚಂದವನ್ನ ಗಮನಿಸುವ ಮೂಲಕ ಅವರ ಅಪ್ಪ ಅಮ್ಮ‌ನ ವಿದ್ಯಾರ್ಹತೆ ಎಷ್ಟಿರಬಹುದು ಎಂದು ಒಳಗೇ ಅಂದಾಜು ಮಾಡಿಕೊಳ್ಳುತ್ತಿದ್ದೆ. ಅದರಲ್ಲೂ ಸೇತುವೆ ಆ ತುದಿಯ ವಿಜಯನಗರದ ಮಕ್ಕಳ‌ ಬುಕ್ಕುಗಳಲ್ಲಿ ಇರುತ್ತಿದ್ದ ಸಹಿ ಬಹುತೇಕ ಇಂಗ್ಲಿಷ್ ನಲ್ಲಿದ್ದು ಚಂದದ ಆಕಾರವನ್ನು ಹೊಂದಿರುತ್ತಿತ್ತು. ಬಹುತೇಕ ವಿಜಯನಗರದಿಂದ ಬರುತ್ತಿದ್ದವರ ಅಪ್ಪ ಅಮ್ಮಂದಿರು ಅಕ್ಷರದ ಅರಿವಿದ್ದವರಾಗಿದ್ದರು. ಇದೇ ಕಾರಣದಿಂದ ಸ್ಕೂಲಿನ‌ ಕಡೆಯ ಬೆಲ್ಲು ಹೊಡೆದಾಗ ವಿಜಯನಗರ ಮಕ್ಕಳಂತೆ ನಾನು ಕೂಡ ಆ ಸೇತುವೆಯನ್ನ ದಾಟಿ ಆ ಬದಿಗೆ ಹೋಗುವ ಹುಡುಗನಾಗಿ ಹುಟ್ಟಬೇಕಿತ್ತು, ಆಗ ನನ್ನ ನೋಟ್ ಬುಕ್ಕಿಗೂ ಇಂಗ್ಲಿಷ್ ನಲ್ಲಿ ಚಂದದ ಆಕಾರವಿರುವ ಸಹಿ ಮಾಡುವ ಅಮ್ಮ‌ ಇರುತ್ತಿದ್ದಳು ಎನಿಸುತ್ತಿತ್ತು.
ಸೇತುವೆ ಈ ಬದಿಯ ಹಿನಕಲ್ಲಿನ ಸ್ಥಿತಿ ಸೇತುವೆಯ ಆ ಬದಿಗಿದ್ದ ವಿಜಯನಗರಕ್ಕೆ ತದ್ವಿರುದ್ಧವಾಗಿತ್ತು.

ಇಲ್ಲಿ ಸಣ್ಣ ಅಗ್ರಹಾರ, ದಲಿತರ ಕೇರಿ, ಆಚಾರರ ಬೀದಿ, ಕುರುಬರ ಓಣಿಗಳು, ಲಿಂಗಾಯತರ ಬೀದಿಗಳು ಗೌಡರ ಮನೆಗಳ ವಠಾರ, ಒಂದೆರಡು ಶೆಟ್ಟರು ಮನೆಗಳ ಜತೆಗೆ ಊರಿಂದ ಊರಿಗೆ ವಲಸೆ ಬಂದ ಬಾಡಿಗೆದಾರ ಮನೆಗಳು…

..ಜತೆಗೆ ಅಲ್ಲಲ್ಲಿ ಹರಡಿಕೊಂಡಿದ್ದ ಗೂಡಂಗಡಿಗಳು ಒಂದು ಶೆಟ್ಟರ ಅಂಗಡಿ ಮತ್ತು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಉದ್ಘಾಟನೆಗೊಂಡಿದ್ದ ಪಶುಚಿಕಿತ್ಸಾಲಯ, ಸಾಯಿಸುತೆ, ತ್ರಿವೇಣಿ, ಎಚ್ ರಾಧಾದೇವಿ, ಕೃಷ್ಣಮೂರ್ತಿ ಪುರಾಣಿಕರ ಪುಸ್ತಕಗಳನ್ನೇ ತುಂಬಿಟ್ಟುಕೊಂಡಿದ್ದ ಧೂಳಿನಿಂದ ಕೂಡಿದ ಗ್ರಂಥಾಲಯ ಮತ್ತು ಅಪರೂಪಕ್ಕೊಮ್ಮೆ‌ ಡಾಕ್ಟರ್ ಮುಖ ಕಾಣುವ ಒಂದೇ ಒಂದು ಕ್ಲಿನಿಕ್ ಇತ್ತು ಅಷ್ಟೇ.

ಹಿನಕಲ್ಲಿನ ರಸ್ತೆಗಳು ಮನೆ, ಜನರು ಯಾವುದು ಮತ್ತು ಯಾರೊಬ್ಬರು ವಿಜಯನಗರದಂತೆ ನಾಜೂಕಾಗಿ ಶಿಸ್ತಿನಿಂದ ಬದುಕುವುದಕ್ಕೆ ಆಗಿರಲಿಲ್ಲ. ಮೂರನೇ ಕ್ಲಾಸಿನ ಹುಡುಗನಾಗಿದ್ದಾಗಲೂ ಈ ವೈರುಧ್ಯ ನನ್ನನ್ನು ಸಾಕಷ್ಟು ವಿಚಲಿತಗೊಳ್ಳುವಂತೆ ಮಾಡಿದೆ. ಸೇತುವೆಯ ಆ ತುದಿಗಿದ್ದ ವಿಜಯನಗರಕ್ಕೆ ನೆರವಾದ ಎಷ್ಟೋ ಸಾಧ್ಯತೆಗಳು ಸೇತುವೆಯ ಈ ತುದಿಗಿದ್ದ ಹಿನಕಲ್ಲಿಗೆ ಏಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಗಳು ಕಾಡಿವೆ.

ಹಿನಕಲ್ಲಿನ ಬಹುತೇಕ ಜನರು ಒಬ್ಬರ ಜಾತಿಯನ್ನು ಕೇರಿ, ಬೀದಿ, ಅಗ್ರಹಾರ ಹಾಗೂ ಓಣಿಗಳ ಮಾನದಂಡಗಳಿಂದ ಗುರುತಿಸುತ್ತಿದ್ದದ್ದು ಒಂದಿಷ್ಟು ವರ್ಷಗಳ ನಂತರ ಅರಿವಿಗೆ ಬಂತು. ನನ್ನೊಂದಿಗೆ ಓದುತ್ತಿದ್ದ ಹುಡುಗರು ಮನೆಗೆ ಬಂದರೆ ಅಮ್ಮ ಹಿಂದಿನಿಂದ ಬಂದು ನನ್ನ ಕಿವಿಯಲ್ಲಿ ಅವನು ಯಾವ ಜಾತಿ ಎಂದು ಮೆಲ್ಲಗೆ ಲಘುವಾಗಿ ಉಸುರಿ ಕೇಳುತ್ತಿದ್ದಳು. ನಾನು ಸಿಟ್ಟಾದವನಂತೆ ಮುಖ ಮಾಡಿದರೆ ಆ ಕ್ಷಣಕ್ಕೆ ಸುಮ್ಮನಿದ್ದು ಅವರು ಹೊರಟ ನಂತರ ತಿರುಗಿ ಅದೇ ಮಾತುಗಳನ್ನು ಕೇಳುತ್ತಿದ್ದಳು.

ನಾನು ಹಟಕೆ ಬಿದ್ದವನಂತೆ ಹೇಳದೆ ಹೋದರೆ ಯಾವುದಕ್ಕೂ ಇರಲಿ ಎಂದು ಬಂದುಹೋದ‌‌ ಹುಡುಗರು ತಿಂದುಹೋದ ತಟ್ಟೆಗಳನ್ನು ಮನೆಯ ಹೊರಗಿಟ್ಟು ಆ ನಂತರ ಹುಣಸೆಹುಳಿಯಲ್ಲಿ ತೊಳೆದು ಒಳಗೆ ತರುತ್ತಿದ್ದಳು. ಇದಕ್ಕೆ ಕಾರಣ ಇಷ್ಟೇ, ಸ್ಕೂಲಿನಲ್ಲಿದ್ದಾಗ ಒಮ್ಮೆ ಹರಿಜನ ಕೇರಿಯ ನನ್ನ ಗೆಳೆಯನೊಬ್ಬನ ಮನೆಯಲ್ಲಿ  ಹಬ್ಬದೂಟ ಮಾಡಿ ಬಂದಿದ್ದು ಮನೆಯಲ್ಲಿ ನಡೆದ ರಾದ್ಧಾಂತದಲ್ಲಿ ಜೀರ್ಣವಾಗಿತ್ತು. ಅಂದಿನಿಂದ ನನ್ನ ಮೇಲೆ ಮನೆಯಲ್ಲಿ ಅದೊಂದು ಬಗೆಯ ಗುಮಾನಿ ಶುರುವಾಗಿತ್ತು.‌

ಆಗೆಲ್ಲಾ ನನಗೆ ಸೇತುವೆಯ ಹೊರಗಿರುವ ವಿಜಯನಗರ ನೆನಪಾಗಿದೆ. ಸೇತುವೆಯ ಆ ಬದಿಗಿದ್ದ ವಿಜಯನಗರದಲ್ಲಿ ನನ್ನ ಅದೆಷ್ಟೋ ಗೆಳೆಯರಿದ್ದಾರೆ.  ನಾನು ಅವರ ಮನೆಗೆ ಸಾಕಷ್ಟು ಸಾರಿ ಹೋಗಿದ್ದೇನೆ ಆದರೆ ಅಲ್ಲಿ ಯಾವತ್ತಿಗೂ ನನ್ನ ಜಾತಿಯನ್ನು ಪ್ರಶ್ನೆ ಮಾಡಿರಲಿಲ್ಲ. ಇವೆಲ್ಲಕ್ಕಿಂತ ವಿಜಯನಗರದಲ್ಲಿ ಹಿನಕಲ್ಲಿನಂತೆ ಪ್ರತ್ಯೇಕವಾಗಿ ಜಾತಿಗಳನ್ನು ‌ಗುರುತಿಸುವ ಕೇರಿಗಳಾಗಲಿ, ಬೀದಿಯಾಗಲಿ, ಅಗ್ರಹಾರವಾಗಲಿ ಇರಲಿಲ್ಲ.

ಅಕ್ಷರ ಬಲ್ಲವರು ಜಾತಿಗಳಿಂತ ವಿಮುಖವಾಗಿರುತ್ತಾರೆ ಎನ್ನುವ ಕಲ್ಪನೆ ನನಗೆ ಮೂಡಿದ್ದು ವಿಜಯನಗರದ ಚಂದದ ಬೀದಿಗಳಲ್ಲೆ ಮೊದಲು. ‌ಓದಿನ ಮೂಲಕ ಜಾತಿಯಂತಹ ಅನಿಷ್ಠಗಳನ್ನು ಕಳೆದುಕೊಳ್ಳಬಹುದು ಎನ್ನುವ ಬಲವಾದ ನಂಬಿಕೆಯನ್ನ ವಿಜಯನಗರ ಆ ಕಾಲಕ್ಕೆ ನನ್ನೊಳಗೆ ಬಿತ್ತಿದ್ದವು. ಸೇತುವೆಯ ಈ ಬದಿಗಿದ್ದ ಹಿನಕಲ್ಲಿನ ಜನರು ಅಷ್ಟು ನೋವು, ಬಡತನ ಮತ್ತು ಓದಿನ ಕೊರತೆಯನ್ನು ಪರಿಗಣಿಸದೆ ಜಾತಿ ಪದ್ದತಿಯಂತ ಅಂಧಶ್ರದ್ಧೆಯನ್ನು ಮಾತ್ರ ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದದ್ದು ಮಾತ್ರ ಅನಕ್ಷರತೆ ಉಂಟುಮಾಡುವ ಕ್ರೌರ್ಯದಂತೆ ಕಂಡಿದೆ.

ಹಿನಕಲ್ಲಿನಂತ ಹಿಂದುಳಿದವರು ಒಂದು ಉತ್ತಮ ಬದುಕಿಗಾಗಿ ಗಳಿಸಬೇಕಾಗಿದ್ದು ಮತ್ತು ಕಳೆದುಕೊಳ್ಳಬೇಕಾಗಿದ್ದರ ನಡುವೆ ನಿರಂತರವಾಗಿ ಮಥಿಸಿಕೊಂಡು ಹದವಾಗುವ ಅವಕಾಶವನ್ನ ಕಳೆದುಕೊಂಡವರು ಎಂದು ಸಾಕಷ್ಟು ಸಾರಿ ಅನಿಸಿದೆ.

10 comments

 1. ಪ್ರೀತಿಯ ಸಂದೀಪ
  ಒಂದು ಇಡಿ ಲೇಖನವೇ ಒಂದು ಮೆಟಾಫರನಂತೆ .

  ಜಾತಿಗಳ ನಡುವಿನ ಭೇದವನ್ನು ಮೇಲುಕೀಳೆಂಬ ಭಾವವನ್ನು ಬಾಲ್ಯ ಹೇಗೆ ಒಂದು ಸೇತುವೆಯ ಆಚೆ ಮತ್ತು ಈಚೆ ನೋಡಿ ದೆ….

 2. ಒಳ್ಳೆ ಆರಂಭ ಸಂದೀಪ. ಆಡೋ ಕಾಯೋ ದಿನಚರಿಯ ಇನ್ನೊಂದು ಮಗ್ಗಲಿನಂತಿದೆ.

 3. ಸಂದೀಪ್ ನಿಮ್ಮ ಪರಿಚಯ ನನಗಿಲ್ಲ…ಆದರೆ‌ನಿಮ್ಮೊಳಗೊಬ್ಬ ಸಂವೇದನಾ ಶೀಲ ಬರಹಗಾರನಿದ್ದಾನೆ..ಅಭಿನಂದನೆಗಳು… ನಿಮ್ಮ ಹಿಣಕಲ್ ಮತ್ತು ಪಕ್ಕ ದ ವಿಜಯನಗರ ಗಳನ್ನು ನಾನು ಬಹುಕಾಲದಿಂದ ಬಲ್ಲೆ..ನೀವು ಹೇಳಿದ ಜಾಗಗಳಲ್ಲಿ ನಾನು ಬಹಳ ಸಲ ಓಡಾಡಿದ್ದೇನೆ..ಕುವೆಂಪು ಟ್ರಸ್ಟ್ ಹತ್ತಿರ ಕಾಳಿದಾಸ ರಸ್ತೆ ಯಲ್ಲಿ ನಮ್ಮ ಮನೆ…೧೯೮೩ ರಲ್ಲಿ ನಮ್ಮ ಮನೆಯ ಎದುರು ಬಸ್ ಬರುತ್ತಿರಲಿಲ್ಲ. ಯಾಕೆಂದರೆ ಚಂದ್ರ ಕಲಾ ಆಸ್ಪತ್ರೆ ಯ ಬಳಿ ಡೆಡ್ ಎಂಡ್….ಕಪಾಲಿ ಐಸ್ ಕ್ರೀಂ ಹತ್ತಿರ ಸರ್ಕಲ್ ನಲ್ಲಿ ಗಂಗೋತ್ರಿ ಗೆ ಹೋಗುವ ಬಸ್ ಕಾಳಿದಾಸ ರಸ್ತೆ ಯಿಂದ ತಿರುಗಿ ಹೋಗುತ್ತಿತ್ತು…ಈಗಿನ‌ವಿಜಯನಗರ ಹೊಲಗಳಿಂದ ತುಂಬಿತ್ತು.. ಅಲ್ಲಿ ತಗ್ಗಿನಲ್ಲಿ ಕೆರೆಯೂ ಇತ್ತು…ನಾವು ಅಲ್ಲಿ ‌ವಾಕ್ ಹೋಗುತ್ತಿದ್ದೆವು..ಕುವೆಂಪು ಕವಿತೆ ಯ ಕಿಟ್ಟಯ್ಯನ ಹೊಲ ಇಲ್ಲಿಯೇ ಇತ್ತು ಅಂದುಕೊಳ್ಳುತ್ತಿದ್ದೆವು…. ನಿಮ್ಮ ಹಿಣಕಲ್ ಟಿಪಿಕಲ್ ಹಳ್ಳಿ ಆಗಿತ್ತು… ಹಾಸನ..ಮಡಿಕೇರಿ ರಸ್ತೆಯ ಪಕ್ಕದ ಲ್ಲಿ….. ಈಗ ಮೈಸೂರು ಗೆ ಹೋದಾಗ ವಿಜಯನಗರ ದ ಪಾರ್ಕ್ ನಲ್ಲಿ ವಾಕ್ ಹೋಗುತ್ತೇನೆ..ಅಲ್ಲಿ ಪಕ್ಕದಲ್ಲಿ ನಮ್ಮ ಮೇಡಂ ವಿಜಯಾದಬ್ಬೆ ಯವರ ಮನೆಯಿದೆ .ಅವರು ಇಲ್ಲ….ನಿಮ್ಮ ಹಿಣಕಲ್ ಅತ್ಯಾಧುನಿಕ ಹೋಟೆಲ್ ಜತೆಗೆ ಹಳ್ಳಿ ಯ ಸಂತೆಯನ್ನೂ ಹೊಂದಿದೆ… ನಾನು ಹಿಣಕಲ್ ಊರನ್ನು ವಿಜಯನಗರದ ದ್ರುಷ್ಟಿಯಿಂದ ನೋಡಿ ದ್ದೆ…ನೀವು ಹೊಸ ಕನ್ನಡಕ ಕೊಟ್ಟಿರಿ….ಅಭಿನಂದನೆಗಳು

 4. ಮತ್ತೊಮ್ಮೆ ಬಾಲ್ಯದ ಗ್ರಹಿಕೆಗಳನ್ನು ಮರುಕಳಿಸಿದ ಲೇಖನ ಸಂದೀಪ್ ಅವರೆ. ವಿದ್ಯಾವಂತರು ಜಾತಿ ಮನಸ್ಥಿತಿಯನ್ನು ಮೀರಿದವರು ಎನ್ನುವ ಕಲ್ಪನೆ ಅದೆಷ್ಟು ಸುಂದರ. ತೀರಾ ಮೊನ್ನೆ ನೆನ್ನೆಯವರೆಗೂ ನನ್ನ ಕಲ್ಪನೆಯೂ ಅದೇ ಆಗಿತ್ತು. ಆದರೆ, ಅಕ್ಷರವಂತರ ಎರಡಲಗಿನ ಈ ಕತ್ತಿ ಅನಕ್ಷರಸ್ಥ ಮನಸ್ತಿತಿಗಲಿಗಿಂತ ತುಂಬಾ ಪಟ್ಟು ಅಪಾಯಕಾರಿ ಎನಿಸಿದೆ. ಸುಂದರ ಸಿಮಿಲಿಗಳು ಗಮನಸೆಳೆದವು.

 5. ಓದುತ್ತ ನನಗೂ ಬಾಲ್ಯದ ನೆನಪು ಕಾಡಿತು.
  ನಿಮ್ಮ ಬರವಣಿಗೆಯ ಶೈಲಿ ಇಷ್ಟವಾಯಿತು. ಅಭಿನಂದನೆಗಳು.

 6. ಎಷ್ಟು ಚಂದದ ಬರವಣಿಗೆ.. ತುಂಬಾ ಖುಷಿ ಆಗುವ ಬರಹ.

 7. Sandeep,
  Nice article ….
  Nanna school days na nenpu madisidira….
  Sanna halligaliina odu ..shale …mathu mane hagu Jati elavanna achkattagi Eli namalli matte namde balyavanna nenpisiddira…
  Thank you

Leave a Reply