ಹೇಸಿಗೆಗಳ ವಾಸನೆಯೇ ಬಾರದಂತೆ.. ಸಂಜು

 

 

 

– ಭಾಸ್ಕರ ಬಂಗೇರ

 

ರಾಜಕುಮಾರ್ ಹಿರಾನಿ ತರಹದ ಗೆಳೆಯರಿದ್ದರೆ ನಮ್ಮ ಎಂತಹ ಕೆಟ್ಟ ಬದುಕನ್ನು ಕೂಡ ಹೇಸಿಗೆಗಳ ವಾಸನೆಯೇ ಬಾರದಂತೆ ಮನರಂಜನಾತ್ಮಕವಾಗಿ ಜಗತ್ತಿಗೆ ಹೇಳಬಲ್ಲರು.

ಸಂಜಯ್ ದತ್ ಬದುಕನ್ನು ಕೇಂದ್ರೀಕರಿಸಿಕೊಂಡು ಕತೆ ಹೇಳುತ್ತಾ ಬರುವ ಸಿನೆಮಾ ಕೊನೆಗೆ ಇಬ್ಬರು ಸ್ನೇಹಿತರನ್ನು ಒಂದಾಗಿಸಿ ಮತ್ತದೇ ಮಾಮೂಲಿ ಹಿಂದಿ ಸಿನೆಮಾಗಳಂತೆ ಕೊನೆಯಾಗುತ್ತದೆ.

ರಾಜಕುಮಾರ್ ಹಿರಾನಿಯ ಹಳೆಯ ಚಿತ್ರಕತೆಯ ತಂತ್ರಗಳನ್ನು ಈ ಸಿನೆಮಾದಲ್ಲಿಯೂ ಬಳಸಲಾಗಿದೆ. ಜನಪ್ರಿಯ ನಟನಾಗಿರುವುದರ ಜೊತೆಗೆ ಪ್ರಭಾವಿ ಸಂಸದರ ಮಗನಾಗಿದ್ದುಕೊಂಡು ಪುಡಿ ರೌಡಿಯ ಮನೆಗೆ ಮುಖ ಮುಚ್ಚಿಕೊಂಡು ಹೋಗುವುದು ನಗೆ ತರಿಸುತ್ತದೆ.

ಸಂಜಯ್ ದತ್ ವೈಯಕ್ತಿಕ ಬದುಕನ್ನು ಚಿತ್ರಕತೆಗೆ ಇಳಿಸುವ ಸಂದರ್ಭದಲ್ಲಿ ನಿರ್ದೇಶಕರು ತನ್ನ ನೆಚ್ಚಿನ ಗೆಳೆಯನ ತಪ್ಪುಗಳನ್ನು ಭಾವೋದ್ವೇಗದ ಬಂಧನದಲ್ಲಿ ಬಚ್ಚಿಡುವ ಹಾಗು ಅನಗತ್ಯವಾಗಿ ವೈಭವೀಕರಿಸುವ ಕಾರ್ಯವನ್ನು ಮಾಡಿದ್ದಾರೆ. ಸಂಜಯ್ ದತ್ ಮೊದಲಿನೆರಡು ಪತ್ನಿಯರಾದ ರಿಚಾ ಶರ್ಮ ಹಾಗು ರಿಯಾ ಪಿಳ್ಳೈ ಕುರಿತಾದ ಯಾವ ಮಾಹಿತಿಯು ಸಿನೆಮಾದಲ್ಲಿಲ್ಲ. ಮುನ್ನೂರಕ್ಕೂ ಹೆಚ್ಚಿನ ಮಹಿಳೆಯರ ಜೊತೆ ಮಲಗಿದ್ದೇನೆ ಎನ್ನುವ ಅಸಹ್ಯಕಾರಿ ಸತ್ಯವನ್ನು ಬರಹಗಾರ್ತಿಯ ನಗುವಿನ ಪ್ರತಿಕ್ರಿಯೆಯೊಂದಿಗೆ ಅದೊಂದು ತಮಾಷೆ ಎನ್ನುವಂತೆ ತೋರಿಸಲಾಗಿದೆ.

ಸಿನೆಮಾದುದ್ದಕ್ಕೂ ಮಾಧ್ಯಮಗಳನ್ನು ಏಕಮುಖವಾಗಿ ನಿಂದಿಸುವ ಕೆಲಸವನ್ನು ಮಾಡಲಾಗಿದೆ. ಜಗತ್ತನ್ನೇ ಬೆಚ್ಚಿ ಬೀಳಿಸುವಂತಹ ಮುಂಬೈ ಬಾಂಬ್ ಬ್ಲಾಸ್ಟ್ ಘಟನೆ ನಡೆದಿರುವ ಸಂದರ್ಭದಲ್ಲಿ ಎಕೆ-56 ಹೊಂದಿರುವುದು ಸಣ್ಣ ಸುದ್ದಿಯೇ? ತನ್ನ ತಂದೆಯ ರಕ್ಷಣೆಗೆ ಎಕೆ-56 ಹೊಂದಿದ್ದೆ ಎಂದೆಲ್ಲ ಹೇಳುವುದು ಪೇಲವ ಸಂಭಾಷಣೆ ಅನಿಸಿತು. ಮೊಹಮ್ಮದ್ ಅಜರುದ್ದೀನ್ ಬದುಕಿನ ಕುರಿತಾದ ಸಿನೆಮಾ ಬಂದಾಗಲು ಇದೆ ರೀತಿಯಲ್ಲಿ ದೊಡ್ಡ ತಪ್ಪುಗಳನ್ನು ಸಣ್ಣದು ಮಾಡುವ ಯತ್ನ ನಡೆದಿತ್ತು.

ರಣಬೀರ್ ಕಪೂರ್ ವೃತ್ತಿ ಜೀವನದ ಮಹತ್ತರ ಸಿನೆಮಾವಿದು.

‘ರಾಕ್ ಸ್ಟಾರ್’ ಹಾಗು ‘ಬರ್ಫಿ’ ಸಿನೆಮಾದ ಅಪ್ಪಟ ಕಲಾವಿದ ಈ ಸಿನೆಮಾದಲ್ಲಿಯೂ ಕೂಡ ನಮಗೆ ಕಾಣ ಸಿಗುತ್ತಾನೆ. ಸಂಜಯ್ ದತ್ ಆಂಗಿಕ ಚಲವನಲವನ್ನು ಯತಾವತ್ತಾಗಿ ಅನುಕರಿಸುವುದರ ಜೊತೆಗೆ ಬದುಕಿನ ವಿವಿದ ಮಜಲುಗಳನ್ನು ಭಿನ್ನ ರೂಪಗಳೊಂದಿಗೆ ನಟಿಸುವುದು ನಿಜಕ್ಕೂ ಸವಾಲಿನ ಕೆಲಸ. ತನ್ನ ನಂಬಿಕೆಗಳಿಗೆ ಹೊರತಾದ ಪಾತ್ರ ಪೋಷಣೆ ಮಾಡಿರುವ ಹಿರಿಯ ನಟ ಪರೇಶ್ ರಾವಲ್ ಅವರನ್ನು ತೆರೆಯ ಮೇಲೆ ನೋಡುವುದೇ ಒಂದು ಖುಷಿ. ವಿಕ್ಕಿ ಕೌಶಲ್ ಅವರದ್ದು ಕೂಡ ನೆನಪಿನಲ್ಲಿ ಉಳಿಯುವ ಪಾತ್ರ. ತೆರೆ ಮೇಲೆ ಕಡಿಮೆ ಜಾಗ ಪಡೆದಿರುವ ನಾಲ್ಕು ಮಹಿಳಾ ಪಾತ್ರಗಳಲ್ಲಿ ಅನುಷ್ಕಾ ಶರ್ಮ ಹಾಗು ಸೋನಮ್ ಕಪೂರ್ ನಟನೆ ಅಷ್ಟಕಷ್ಟೇ. ಮನೀಷಾ ಕೊಯಿರಾಲ ಹಾಗು ದಿಯಾ ಮಿರ್ಜಾ ಕೆಲವೇ ಕ್ಷಣ ಕಾಣಿಸಿಕೊಂಡರು ಪಾತ್ರಕ್ಕೆ ತೂಕವಿದೆ.

ಸಂಜಯ್ ದತ್ತ್ ಬದುಕನ್ನು ದೂರವಿಟ್ಟು ಇದೊಂದು ಕೇವಲ ಕಮರ್ಷಿಯಲ್ ಸಿನೆಮಾ ಎಂದು ನೋಡಿದರೆ “ಸಂಜು” ಒಂದೊಳ್ಳೆ ಮನರಂಜನಾ ಸಿನೆಮಾ. ದ್ವಿತಿಯಾರ್ಧದಲ್ಲಿ ಚಿತ್ರಕತೆ ಅತ್ತಿತ್ತ ಆಗಿದ್ದನ್ನು ನುಂಗಿಕೊಂಡರೆ ಕೌಟುಂಬಿಕ ಪ್ರೇಕ್ಷಕರಿಗೆ ಬೇಕಾದ ಎಲ್ಲವೂ ಈ ಸಿನೆಮಾದಲ್ಲಿದೆ. ಅದನ್ನು ಬಿಟ್ಟರೆ ಬಯೋ ಪಿಕ್ ಸಿನೆಮಾ ವಿಭಾಗದಲ್ಲಿ ಇದೊಂದು ಕೆಟ್ಟ ಬೆಳವಣಿಗೆ.

4 comments

  1. ರಾಜ್ ಕಪೂರ್ ಒಮ್ಮೆ ‘ನಾನು ಕನಸುಗಳ ಮಾರಾಟಗಾರ’ ಎಂದು ಪತ್ರಕರ್ತರಿಗೆ ಟಾಂಗ್ ಕೊಟ್ಟಿದ್ದರು. ನಾವು ದಿನದ ೨೪ ಗಂಟೆಗಳೂ ಹುಬ್ಬು ಗಂಟಿಕ್ಕಿಕೊಂಡು ಕೂರಲು ಆಗುವುದಿಲ್ಲ. ಸ್ವಲ್ಪ ತಮಾಷೆ, ಮನರಂಜನೆಯೂ ಬೇಕಾಗುತ್ತದೆ. ನೂರಾರು ಕೋಟಿಗಳನ್ನು ಖರ್ಚು ಮಾಡಿ ಸಿನಿಮಾಗಳನ್ನು ನಿರ್ಮಿಸುವ ಇಂದಿನ ಕಾಲದಲ್ಲಿ ಅದನ್ನು ಲಾಭದ ಜತೆಗೆ ವಾಪಸ್ಸು ಪಡೆಯುವ ದರ್ದು ನಿರ್ಮಾಪಕರಿಗಿರುತ್ತದೆ. ಅದನ್ನು ತಪ್ಪು ಎಂದು ಹೇಳಲಾಗುವುದೆ?

  2. ಶ್ರೀರಂಗ ಅವರೆ ನಿಮ್ಮ ಮಾತು ಸರಿ , ಸಿನಿಮಾ ರುಚಿಯಾಗಿ ತೆಗೆಯುವುದು ಖಂಡಿತವಾಗಿ ತಪ್ಪಲ್ಲ. ಸಿನಿಮಾ ಮೂಲತಃ ಮನರಂಜನೆಯ ಸಾಧನ. ಹಾಗಿದ್ದರೆ ತಾನೆ ಜನ ಬರುವುದು , ಹಾಕಿದ ಪೈಸೆ ವಸೂಲಾಗುವುದು. ಆದರೆ ಅದಕ್ಕೆ ಬೇಕಾದಷ್ಟು ಕತೆಗಳಿವೆ , ಕತೆ ಹೆಣೆಯುವವರಿದ್ದಾರೆ. ಅವುಗಳನ್ನು ಸಿನಿಮಾ ಮಾಡಿದರೆ ನಮಗೂ ಚೆಂದ ನಿಮಗೂ ಚೆಂದ.

    ಅದು ಬಿಟ್ಟು ತ್ರಿಲೋಕದಾದ್ಯಂತ ಸುಖ್ಯಾತಿ ಕುಖ್ಯಾತಿ ಪಡೆದು ಕಣ್ಮುಂದೆ ಗುಂಡುಕಲ್ಲಿನ‌ ಹಾಗೆ ಇರುವವರ ಕತೆಯನ್ನು ಆರಿಸಿಕೊಂಡು ರುಚಿಯಾಗಿ ಹೇಳಬಾರದು. ಆಮೇಲಾಮೇಲೆ ಇದೇ ಒಂದು ಖಯಾಲಿಯಾಗಿ ಬದುಕಲ್ಲಿ ಏನು‌ ಮಾಡಿದರೂ ಪರವಾಗಿಲ್ಲ , ಹೆಂಗಿದ್ರೂ ಬಯೊಪಿಕ್ ತೆಗೆಯೊವಾಗ ಡೈರೆಕ್ಟರ್ ಅಡ್ಜಸ್ಟ್ ಮಾಡಿ ನೆಗಟೀವ್ ಅಂಶ ಮುಚ್ಚಾಕ್ತಾರೆ ಇಲ್ಲ ಅಳು ಬರುವ‌ ತರಹ ತೆಗೆದು ತಪ್ಪನ್ನೂ‌ ಒಪ್ಪ ಮಾಡ್ತಾರೆ ಅನ್ನುವ ಮನೋಭಾವ ಬೆಳೆದು‌ಬಿಡುತ್ತದೆ.

  3. ಸಿನಿಮಾಗಳಿಗೆ ತಲೆ ಬುಡ ಇಲ್ಲದ ಕಥೆ ಹೆಣೆಯುವವರು ಸಾಕಷ್ಟು ಜನ ಇದ್ದಾರೆ ಎಂಬುದು ಸರಿ. ಅಂತಹ ಸಿನಿಮಾಗಳು ಕನ್ನಡದಲ್ಲಿ ವಾರಕ್ಕೆ ನಾಲ್ಕೈದರಂತೆ ಹಾಗೆ ಬಂದು ಹೀಗೆ ಹೋಗುತ್ತಿವೆ. ಈಗ ಕನ್ನಡದಲ್ಲಿ ವರ್ಷಕ್ಕೆ ೧೫೦-೨೦೦ರಷ್ಟು ಸಿನಿಮಾಗಳು ಬಂದರೂ ೩೫% ಪಡೆದು ಪರವಾಗಿಲ್ಲ ಎಂದು ಅನಿಸಿಕೊಳ್ಳುವುವು ಐದಾರು ಮಾತ್ರ. ಇಂತಹ ಸ್ಥಿತಿಯಲ್ಲಿ ಸ್ವಲ್ಪಮಟ್ಟಿಗಾದರೂ ನಿಜದ ‘ಎಳೆ’ ಇರುವಂತಹ ಬಯೋಪಿಕ್ ಗಳು ವಾಸಿಯಲ್ಲವೆ? ನಮಗೆ ಕಂಡದ್ದು ಮಾತ್ರ ‘ಸತ್ಯ’ವೇ? ಅದೇ ಅಂತಿಮವೇ?

  4. ಎಲ್ಲಾ ಕುಖ್ಯಾತರ ಜೀವನದ ‘ಸತ್ಯ ಕಥೆ’ಯೂ ಚಲನಚಿತ್ರವಾಗುತ್ತವೆಯೇ? ಹಾಗೆ ಆಗಿದ್ದರೆ ಇತರ ಚಿತ್ರಗಳು ಇರಲೇಬಾರದಿತ್ತು. ಒಬ್ಬ ನಿರ್ದೇಶಕನಿಗೆ ಈತನ ಕಥೆ ಆರಿಸಿಕೊಂಡರೆ ನಿರ್ಮಾಪಕ ಹಾಕಿದ ಹಣಕ್ಕೆ ಮೋಸವಾಗಲಾರದು ಎಂದು ಅನಿಸುತ್ತದೆಯೋ ಅಂಥ ತ್ರಿಲೋಕದಲ್ಲೂ ಸುಖ್ಯಾತರೋ, ಕುಖ್ಯಾತರೋ ಆದವರ ಕಥೆ ಮಾತ್ರ ಆರಿಸಿಕೊಂಡು ಹಣ ಕೊಟ್ಟು ಬಂದ ಪ್ರೇಕ್ಷಕ ಸುಮಾರು ಎರಡುವರೆ ಗಂಟೆಗಳ ಕಾಲ ಚಿತ್ರಮಂದಿರಗಳಲ್ಲಿ ಕೂತಿರುವಂತೆ ಮಾಡಲು ಒಂದಷ್ಟು ‘ಫಾರ್ಮುಲಾ’ ಪ್ರಕಾರ ಚಲನಚಿತ್ರ ಮಾಡುತ್ತಾರೆ ಅಲ್ಲವೆ?

Leave a Reply