ಕಿರಣ್ಮಯಿ ಪತ್ರಕರ್ತೆಯಾದರು..


ನನಗೆ ನೆನಪಾಗುವುದು ‘ಮುಂಗಾರು’ ಪತ್ರಿಕೆ. ಯಾಕೆಂದರೆ ಆ ಪತ್ರಿಕೆ ಎಷ್ಟು ಜನರನ್ನು ಅಣಿಗೊಳಿಸಿತು, ಅವರು ಈಗ ಏನಾಗಿದ್ದಾರೆ ಎಂದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಆ ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ರೂಪಿಸಿಕೊಂಡವರು ‘ಕಿರಣ್ಮಯಿ’ ಎನ್ನುವಾಕೆ.

ನಾನು ಕ್ಲಾಕ್ ಟವರ್ ನಲ್ಲಿರುವ ಜೆ.ವಿ. ಸನ್ ಕಟ್ಟಡದಲ್ಲಿ ‘ಮುಂಗಾರು’ ಕಚೇರಿಯಲ್ಲಿದ್ದೆ. ಅದು 1985-86ರ ಕಾಲ ಅಂದುಕೊಂಡಿದ್ದೇನೆ. ಒಂದು ದಿನ ವಡ್ಡರ್ಸೆ ರಘುರಾಮ ಶೆಟ್ಟರು ನನಗೆ ಫೋನ್ ಮಾಡಿದರು. ‘ನೋಡೋ ತಮ್ಮ ನಿನ್ನ ಬಳಿಗೆ ಕಿರಣ್ಮಯಿ ಬರುತ್ತಾರೆ. ಅವರು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿದ್ದಾರೆ. ಆಕೆಗೆ ನಮ್ಮ ಪತ್ರಿಕೆಯಲ್ಲಿ ಟ್ರೈನಿಂಗ್ ಮಾಡಬೇಕಂತೆ. ಅವರು ಮೂರು ತಿಂಗಳು ಇರುತ್ತಾರೆ. ಅವರನ್ನು ನೀನು ಪತ್ರಿಕಾಗೋಷ್ಠಿಗೆ ಕರೆದೊಯ್ಯಿ. ಬೇಕಾದರೆ ಸಣ್ಣಪುಟ್ಟ ಲೇಖನಕ್ಕೂ ಬಳಸಿಕೋ’ ಎಂದರು.

ನನಗೂ ಅದೇ ಮೊದಲು ಸ್ನಾತಕೋತ್ತರ ವಿದ್ಯಾರ್ಥಿನಿ ಟ್ರೈನಿಂಗ್ ಮಾಡಲು ಬರುತ್ತಾರೆಂದು ಕೇಳಿದ್ದು. ಆಕೆಗೆ ಏನಾದರೂ ಕಲಿಸಬೇಕು. ಬರಲಿ ಬಂದ ಮೇಲೆ ನೋಡಿದರಾಯಿತು ಎಂದುಕೊಂಡೆ. ಶೆಟ್ಟರು ಹೇಳಿದಂತೆಯೇ ಒಂದು ಗಂಟೆಯಲ್ಲೇ ಆಕೆ ಬಂದರು.

ಕಚೇರಿಯಲ್ಲಿ ನಾನೇ ಮೊದಲು ಸಿಗುವುದು. ನಂತರ ಜಾಹೀರಾತು ವಿಭಾಗ, ಪ್ರಸಾರ ವಿಭಾಗ. ಮುಂದೆ ಲೆಕ್ಕಪರಿಶೋಧನೆ, ಆಮೇಲೆ ಸಂಪಾದಕರು ಕುಳಿತುಕೊಳ್ಳುವ ಚೇಂಬರ್.

ಆಕೆ ಬಂದವರೇ ‘ಇಲ್ಲಿ ಚಿದಂಬರ ಬೈಕಂಪಾಡಿ ಎಲ್ಲಿ ಸಿಗುತ್ತಾರೆ. ಅವರನ್ನು ನೋಡಬೇಕಿತ್ತು’ ಎಂದರು. ನಾನು ‘ನೀವು ’ಎಂದೆ. ‘ನಾನು ಕಿರಣ್ಮಯಿ ಅಂತ’ ಎಂದರು. ಆಗಲೇ ನೆನಪಾಯಿತು ಶೆಟ್ಟರು ಹೇಳಿದ್ದು. ಕುಳಿತುಕೊಳ್ಳಿ ನಾನೇ ಎಂದೆ. ಆಕೆ ಬೇರೆ ಯಾರೋ ಇರುತ್ತಾರೆ ಅಂದುಕೊಂಡಿರಬೇಕು, ಆದ ಕಾರಣವೇ ಆಕೆಗೆ ಮುಜುಗರವಾಗಿತ್ತು. ‘ಸಾರಿ ಸಾರ್ ನೀವು ಅಂತ ಗೊತ್ತಿರಲಿಲ್ಲ’ ಎಂದರು. ಪರವಾಗಿಲ್ಲ ಅದಕ್ಕೇನಂತೆ ಎಂದೆ.

ಅವರ ಬಗ್ಗೆ ಕೇಳಿದೆ. ಆಕೆ ಧಾರವಾಡಲ್ಲಿ ಕಲಿಯುತ್ತಿರುವುದು, ಊರು ಶಿವಮೊಗ್ಗ ಜಿಲ್ಲೆ ಇತ್ಯಾದಿ ಇತ್ಯಾದಿ ವಿವರ ಕೊಟ್ಟರು. ಇಲ್ಲಿ ಕುಂಜೆತ್ತಬೈಲ್ ನಲ್ಲಿ ಸಂಬಂಧಿಕರ ಮನೆಯಲ್ಲಿದ್ದೇನೆ ಎಂದು ತಿಳಿಸಿದರು. ಸಂಬಂಧಿ ಎಂ.ಸಿ.ಎಫ್ ನಲ್ಲಿರುವುದಾಗಿ ಹೇಳಿದರು.

‘ನೀವು ಬೆಳಿಗ್ಗೆ 10 ಗಂಟೆಗೆ ಬನ್ನಿ, ಸಂಜೆ 5 ಅಥವಾ 6 ಗಂಟೆಗೆ ಹೋಗಿ. ದಿನದಲ್ಲಿ ಕೆಲವು ಪತ್ರಿಕಾಗೋಷ್ಠಿ ಇರುತ್ತವೆ, ಕೆಲವು ಕಾರ್ಯಕ್ರಮಗಳು, ಸಂಜೆ ಕ್ರೈಮ್ ನ್ಯೂಸ್ ಇರುತ್ತವೆ. ಸಂಜೆ ತಡವಾಗುತ್ತೆ’ ಎಂದೆ. ಆಕೆ ತಟ್ಟನೆ ‘ನಾನು ತಡವಾಗಿಯೇ ಮನೆಗೆ ಹೋಗುತ್ತೇನೆ. ನಾನು ಬಹಳಷ್ಟು ಕಲಿಯಬೇಕು’ ಎಂದರು.

‘ನಿಮ್ಮ ಇಷ್ಟ ಆದರೆ ತಡವಾದರೆ ಮನೆಯಲ್ಲಿ ಎಲ್ಲಾ ಕಾಯುತ್ತಾರಲ್ಲ’ ಎಂದಾಗ ಆಕೆ ಪರವಾಗಿಲ್ಲ ಎಂದರು. ಆಕೆಯ ಮಾತನ್ನು ಕೇಳಿಯೇ ತಿಳಿದುಕೊಂಡೆ ಹುಡುಗಿ ಚೂಟಿ ಎಂದು.

ಆ ದಿನ ಎರಡು ಪತ್ರಿಕಾಗೋಷ್ಠಿಗೆ ಆಕೆಯನ್ನೂ ಕರೆದುಕೊಂಡು ಹೋದೆ, ಸಂಜೆಯಾಗುತ್ತಲೇ ಪೊಲೀಸ್ ಠಾಣೆಗೆ ಫೋನ್ ಮಾಡಿ ಕ್ರೈಮ್ ನ್ಯೂಸ್ ತೆಗೆದುಕೊಳ್ಳುತ್ತಿದ್ದೆ. ಪೊಲೀಸ್ ಠಾಣೆಗೆ ಫೋನ್ ಮಾಡುವಾಗ ಆಕೆಯೂ ಇದ್ದರು. ನಾನು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜೊತೆ ತಮಾಷೆ ಮಾತನಾಡುತ್ತಿದ್ದೆ, ಅವರು ಕೂಡಾ. ಈಕೆಗೆ ವಿಚಿತ್ರ ಅನುಭವವಾಗುತ್ತಿತ್ತು.

ಫೋನ್ ಮಾಡಿದ ಮೇಲೆ ಆಕೆ ಪ್ರಶ್ನೆ ಕೇಳಿದರು. ನಾನು ಉತ್ತರಿಸಿ ನೀವೇ ಅವರೊಂದಿಗೆ ಮಾತನಾಡಿದರೆ ತಿಳಿಯುತ್ತೆ ಅವರು ಎಷ್ಟು ಕ್ಲೋಸ್ ಎಂದೆ. ಅಯ್ಯೋ ಬೇಡಾ ನನಗೆ ಭಯವಾಗುತ್ತೆ ಎಂದರು. ಆ ದಿನ ಸಂಜೆ 7  ಗಂಟೆಯಾಗುತ್ತಲೇ ನೀವು ಹೋಗಿ ತಡವಾಯಿತು ಎಂದೆ. ಆಕೆ ನೀವು ಎಷ್ಟು ಗಂಟೆಗೆ ಹೋಗುತ್ತೀರಿ ಎಂದರು. ‘ನಾನು ಹೋಗುವ ಸಮಯ ನಿಗಧಿಯಲ್ಲ. ರಾತ್ರಿ 10 ಗಂಟೆಯಾದರೂ ಸರಿ’ ಎಂದೆ. ಆಕೆಗೆ ಏನನ್ನಿಸಿತೋ ಸರಿ ನಾನು ಹೊರಡುತ್ತೇನೆ ಎಂದು ಹೊರಟು ನಿಂತರು. ಆಕೆಯನ್ನು ಕೇಳಿದೆ ಬಸ್ ಎಲ್ಲಿ ನಿಲ್ಲುತ್ತೇ ಗೊತ್ತೆ ಎಂದು. ನಾನು ಕೇಳುತ್ತೇನೆ ಎಂದವಳೇ ಗುಡ್ ನೈಟ್ ಎಂದು ಹೋದಳು.

ಹೀಗೆ ಸಾಗಿತ್ತು ಆಕೆಯ ಟ್ರೈನಿಂಗ್ ಅಂದುಕೊಂಡಿರಾ. ಇನ್ನೂ ಇದೇ ಕೇಳಿ. ‘ ಒಂದು ದಿನ ಬಸ್ ಹಂಪನಕಟ್ಟೆಯಲ್ಲಿ ಹುಡುಗನಿಗೆ ಡಿಕ್ಕಿಯಾಗುವುದನ್ನು ತಪ್ಪಿಸಿತು. ಅದೊಂದು ಘಟನೆ, ಆ ಘಟನೆಗೆ ಕಾರಣ ರಸ್ತೆಯಲ್ಲಿದ್ದ ಹೊಂಡ. ಅದರ ಬಗ್ಗೆ ನೀವು ಒಂದು ಪುಟ್ಟ ಲೇಖನ ಬರೆದುಕೊಡಿ ಆದೀತಾ’  ಎಂದೆ. ಸರಿ ನಾನು ಪ್ರಯತ್ನಿಸುತ್ತೇನೆ ಎಂದವಳೇ ಆ ಹೊಂಡ ನೋಡಲು ಹೊರಟರು.

ಅವರು ಎರಡು ಗಂಟೆಯಾದರೂ ಬರಲೇ ಇಲ್ಲ. ಎಲ್ಲಿಗೆ ಹೋದರಪ್ಪ ಎಂದು ಒಂಥರಾ ಗಾಬರಿಯೂ ಆಗಿತ್ತು. ಹೋಗಿ ಹೋಗಿ ಈಕೆಗೆ ಲೇಖನ ಬರೆಯಲು ಹೇಳಿದ್ದೇ ಮಿಷ್ಟಿಕ್ ಆಯ್ತಾ ಎನ್ನುವ ಚಿಂತೆ. ಕೊನೆಗೆ ಆಕೆ ಬಂದರು. ಬಂದವರೇ ಲೇಖನವನ್ನು ತಂದಿದ್ದರು. ಓದಿ ನೋಡಿ ಖುಷಿಯಾಯ್ತು. ಪರವಾಗಿಲ್ಲ ಲೇಖನವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ ಎಂದೆ. ಆ ಲೇಖನವನ್ನು ತಿದ್ದುಪಡಿ ಮಾಡಿ ತೋರಿಸಿದೆ. ಲೇಖನಕ್ಕೆ ಹೊಂಡದ ಫೋಟೋ ಕೂಡಾ ತರಿಸಿ ಆ ಲೇಖನ ಮತ್ತು ಫೋಟೋ ಸಮೇತ ಪ್ರೆಸ್ ಗೆ ಕಳುಹಿಸಿದೆ. ಮರುದಿನ ಪತ್ರಿಕೆಯಲ್ಲಿ ಆ ಲೇಖನ ಪ್ರಕಟವಾಗಿತ್ತು, ಅದನ್ನು ಮೊದಲೇ ನೋಡಿದ್ದ ಆಕೆ ನಗುತ್ತಾ ಬಂದರು. ‘ಲೇಖನ ಚೆನ್ನಾಗಿ ಪ್ರಕಟವಾಗಿದೆ’ ಎಂದು ಖುಷಿ ಪಟ್ಟರು. ಹೌದು ಚೆನ್ನಾಗಿದೆ ಎಂದೆ.

ಈ ಲೇಖನ ಆಕೆ ಬರೆದ ಮೊಟ್ಟಮೊದಲ ಲೇಖನವಾಗಿತ್ತು. ಬಹುಷಃ ಈಗಲೂ ಆಕೆಗೆ ನೆನಪಾಗುತ್ತಿರಬೇಕು. ಮತ್ತೆ ಒಂದು ಸಲ ಬಿ. ಜನಾರ್ಧನ ಪೂಜಾರಿ ಹಣಕಾಸು ಖಾತೆ ರಾಜ್ಯ ಸಚಿವರ ಸಂದರ್ಶನ ಮಾಡಿಕೊಂಡು ಬಂದರು. ಅದೂ ಕೂಡಾ ಉತ್ತಮ ಲೇಖನ. ನಾನು ತಮಾಷೆಗಾಗಿ ಕೇಳಿದೆ ನಿಮಗೆ ಅರ್ಥವಾಯಿತೇ ಅವರು ಮಾತನಾಡಿದ್ದು ಎಂದು. ಅಯ್ಯೋ ದೇವರೇ ಮೊದಲು ಅವರು ಏನು ಮಾತನಾಡುತ್ತಾರೆ ಎಂದೇ ಗೊತ್ತಾಗಲಿಲ್ಲ. ನಂತರ ನಾನೇ ಅರ್ಥ ಮಾಡಿಕೊಂಡೆ ಎಂದಾಗ ನಿಜಕ್ಕೂ ಆಕೆಯ ಸಾಮರ್ಥ್ಯದ ಬಗ್ಗೆ ಖುಷಿಯಾಯಿತು.

ಯಾಕೆಂದರೆ ಪೂಜಾರಿಯವರ ಭಾಷಣವನ್ನು ಕೇಳಿದವರಿಗೇ ಮಾತ್ರ ಗೊತ್ತು ಅವರು ಏನನ್ನು ಹೇಳುತ್ತಿದ್ದಾರೆಂದು. ಅವರ ಭಾಷಣವನ್ನು ವರದಿ ಮಾಡುವುದು ನಿಜಕ್ಕೂ ಕಷ್ಟ. ಅವರು ಮಾತಿನಲ್ಲಿ ತಪ್ಪಾದರೂ ಕೂಡಾ ನಾವು ಸರಿಪಡಿಸಿ ಬರೆಯಬೇಕು. ಅವರ ಮಾತಿನಲ್ಲಿ ಉದ್ದೇಶಪೂರ್ವಕ ಮಿಸ್ಟೇಕ್ ಮಾಡುವುದಿಲ್ಲ, ಆದರೆ ಮಾತನಾಡುವ ಭರದಲ್ಲಿ ಕೆಲವು ಸಲ ವಿಷಯವೇ ನಮಗೆ ತಪ್ಪಾಗಿ ಅರ್ಥವಾಗುತ್ತದೆ. ಈ ಮಾತನ್ನು ಕಲಿಸಿದವರು ಹಿರಿಯ ಪತ್ರಕರ್ತರಾಗಿದ್ದ ಪ.ಗೋ.

ಇದೂ ಕೂಡಾ ಕಿರಣ್ಮಯಿಯವರ ಸಂದರ್ಶನ ಅದರಲ್ಲೂ ಜನಾರ್ಧನ ಪೂಜಾರಿಯವರದು ಅದ್ಬುತ. ಆಗ ಅವರು ಸಿಗುವುದೇ ತುಂಬಾ ಕಷ್ಟ. ಅವರು ಸಂದರ್ಶನಕ್ಕೆ ಒಪ್ಪಿದರು ಎನ್ನುವುದೇ ಒಂದು ಖುಷಿ. ಈ ನೆನಪನ್ನು ಆಗಾಗ ಹೇಳಿಕೊಳ್ಳುತ್ತಿದ್ದರು.

ಹೀಗೆ ಅವರು ಪತ್ರಿಕೋದ್ಯಮ ತರಬೇತಿ ಮುಗಿಸಿ ಪಾಸ್ ಆಗಿ ಹೋದರು. ಅವರನ್ನು ನಾನು ಮತ್ತೆ ನೋಡಿದ್ದು ಪಿಐಬಿ (ಪ್ರೆಸ್ ಇನ್ಫರ್ ಮೇಷನ್ ಬ್ಯೂರೋ) ಯಲ್ಲಿ ಅಧಿಕಾರಿಯಾದ ಮೇಲೆ. ಅದೂ ಅವರೇ ನನ್ನನ್ನು ಗುರುತಿಸಿದರು ಬೆಂಗಳೂರಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ.

ಹೀಗೆ ಹುಡುಗಿಯಾದರೂ ಕಿರಣ್ಮಯಿ ಪತ್ರಕರ್ತೆಯಾಗುವ ಕನಸು ಕಂಡಿದ್ದರು. ಮಾಡುವ ಕೆಲಸದಲ್ಲಿ ಬದ್ಧತೆ ಮತ್ತು ಶಿಸ್ತು ಎಲ್ಲವನ್ನೂ ಮೈಗೂಡಿಸಿಕೊಂಡು ರಾತ್ರಿಯಾದರೂ ಪೊಲೀಸ್ ಗೆ ಫೋನ್ ಮಾಡಿ ಸುದ್ದಿ ಸಂಗ್ರಹಿಸುವ ತನಕ ಆಕೆಗೆ ನೆಮ್ಮದಿಯಿರಲಿಲ್ಲ. ಆಕೆಗೆ ಶುಭವಾಗಲಿ.

Leave a Reply