ಕಾನೂನು ಸಚಿವರ ಪತ್ರಿಕಾಗೋಷ್ಠಿಗೆ ‘ಬಾಯ್ಕಾಟ್’

ಪತ್ರಿಕೆಯಲ್ಲಿ ವರದಿಗಾರರಿಗಿರುವ ವಿಪುಲ ಅವಕಾಶವೆಂದರೆ ‘ಬಾಯ್ಕಾಟ್’ ಮಾಡುವುದು.

ಯಾರಿಗೆ ಬೇಕಾದರು ‘ಬಾಯ್ಕಾಟ್’ ಮಾಡಬಹುದು. ಆದರೆ ಸಕಾರಣವಿರಬೇಕು. ಮೊದಲು ಇದು ಮಾಮೂಲಿಯಾಗಿತ್ತು. ಈಗ ‘ಬಾಯ್ಕಾಟ್’ ಎನ್ನುವುದೇ ಗೊತ್ತಿಲ್ಲ. ಇದಕ್ಕೆ ಕಾರಣವೆಂದರೆ ಈಗ ಇಲೆಕ್ಟ್ರಾನಿಕ್ ಮಾಧ್ಯಮಗಳಿವೆ. ನೀವು ಪ್ರಕಟಿಸದಿದ್ದರೂ ಬೇರೆಯವರು ಪ್ರಕಟಿಸುತ್ತಾರೆ. ಎಲ್ಲರನ್ನೂ ಪ್ರಕಟಿಸದಂತೆ ಮಾಡುವುದು ಈಗ ಅಸಾಧ್ಯ. ಮಿಗಿಲಾಗಿ ಈಗ ಪತ್ರಕರ್ತರಿಗೆ ಉದ್ಯೋಗ ಭದ್ರತೆ ಕೂಡಾ ಇಲ್ಲ.

ಇದು ನಾನು ಹೇಳುತ್ತಿರುವುದು 1986ರ ಅವಧಿ. ಆಗ ಮಂಗಳೂರಲ್ಲಿ ಪತ್ರಕರ್ತರಾಗಿದ್ದವರು ಪ. ಗೋಪಾಲಕೃಷ್ಣ, ಯು. ನರಸಿಂಹ ರಾವ್, ಎನ್.ಆರ್. ಉಭಯ, ಎ.ವಿ. ಮಯ್ಯ, ಮನೋಹರ ಪ್ರಸಾದ್, ನಾನು (ಚಿದಂಬರ ಬೈಕಂಪಾಡಿ), ಜಿ.ಪಿ.ಬಸವರಾಜು, ನಾಯಕ್ ಫಲಿಮಾರ್ಕರ್ ಮಾತ್ರ. ಊರಲ್ಲಿ ಏನೇ ಸುದ್ದಿಯಾದರೂ ಅದಕ್ಕೆ ನಾವೇ ಕಾರಣ. ಸುದ್ದಿ ಪ್ರಕಟವಾಗದಿದ್ದರೂ ನಾವೇ ಕಾರಣ.

ಒಂದು ದಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಚಿವರ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಆಗ ಎ.ಲಕ್ಷ್ಮಿಸಾಗರ್ ಸಚಿವರು. ಬೆಳಿಗ್ಗೆ 11.30 ಕ್ಕೆ ಪತ್ರಿಕಾಗೋಷ್ಠಿ, ಇದಕ್ಕೆ ತಾವು ಬರಬೇಕೆಂದು ಜಿಲ್ಲಾ ವಾರ್ತಾಧಿಕಾರಿ ನಾಯಕ್ ಪತ್ರ ಕಳುಹಿಸಿದ್ದರು.

ಸರಿ ಪತ್ರಿಕಾಗೋಷ್ಠಿ ಅದರಲ್ಲೂ ಕಾನೂನು ಸಚಿವರದ್ದು ಎಂದಮೇಲೆ ಏನಾದರೂ ಇದ್ದೇ ಇರುತ್ತೆ ಅಂದುಕೊಂಡು ನಾವು ಸಮಯಕ್ಕೆ ಸರಿಯಾಗಿ ಹೋದೆವು.

ಜಿಲ್ಲಾಧಿಕಾರಿ ಕಚೇರಿ ಗಿಜಿಗುಡುತ್ತಿತ್ತು. ಜನಜಂಗುಳಿ. ನಾವು ಹೋದೆವು ನಮಗೆ ಕುಳಿತುಕೊಳ್ಳಲು ಸೀಟಿರಲಿಲ್ಲ. ಅಷ್ಟರಲ್ಲಿ ಕಚೇರಿ ಒಳಗೆ ಸಭೆ ನಡೆಯುತ್ತಿತ್ತು. ಅಲ್ಲೇ ಇದ್ದ ನಾಯಕ್ ಹೊರಗೆ ಬಂದು ನಮಗೆ ಕುಳಿತುಕೊಳ್ಳಲು ಸೀಟು ಕೊಡಿಸಿದರು. ಎಲ್ಲರೂ ಕುಳಿತೆವು.  ಗಂಟೆ 11.30 ಆಯಿತು. ಸಚಿವರು ನಮ್ಮನ್ನು ಸಭೆಗೆ ಕರೆಯಲಿಲ್ಲ. ನಾವು ಹೊರಗೆ ಕುಳಿತುಕೊಂಡಿದ್ದೆವು. ಸಮಯ 12.00 ಗಂಟೆ ಆಯಿತು. ಇನ್ನೂ ಬರಲಿಲ್ಲ ನಮಗೆ ಬುಲಾವ್.

ಆಗ ಪ. ಗೋಪಾಲಕೃಷ್ಣರು ಮೂರು ನಾಲ್ಕು ಬೀಡಿ ಸುಟ್ಟಿದ್ದರು. ‘ಇನ್ನೂ ಎಷ್ಟು ಹೊತ್ತು ಕುಳಿತುಕೊಳ್ಳುತ್ತಿ’ ಎಂದು ನನ್ನನ್ನು ಕೇಳಿದರು. ಆಗ ನಾನು ‘ಅವರು ಕರೆಯುವ ತನಕ’ ಎಂದೆ.

‘ನಿನಗೆ ಬೇರೆ ಕೆಲಸವಿಲ್ಲವೇನೋ’ ಎಂದರು ಪ.ಗೋ. ಆಗ ನರಸಿಂಹ ರಾವ್ ಕೈಗಡಿಯಾರ ನೋಡಿಕೊಂಡರು. ಪ.ಗೋ ‘ರಾಯರೇ ಹೊಟ್ಟೆ ಚುರುಗುಟ್ಟುವ ಕಾಲ’ ಎಂದರು.

‘ಕರ್ಮ ಮಾರಾಯ ಏನು ಭಾಷಣ ಮಾಡುತ್ತಿದ್ದಾರೋ ಏನೋ’ ಎಂದರು ನರಸಿಂಹ ರಾವ್. 12.45 ಆದರೂ ಪತ್ರಿಕಾಗೋಷ್ಠಿ ನಡೆಸದಿರುವುದಕ್ಕೆ ನರಸಿಂಹ ರಾವ್ ಅಸಹನೆಗೊಂಡಿದ್ದರು. ಎ.ವಿ. ಮಯ್ಯ ಅವರು ‘ನಾಯಕರಿಗೆ ಕರೆಯಿರಿ ಏನು ಸಚಿವರು ಪತ್ರಿಕಾಗೋಷ್ಠಿ ಮಾಡ್ತಾರೋ ಇಲ್ಲವೋ ಕೇಳೋಣ’ ಎಂದರು.

ನಾಯಕ್ ಬಂದವರೇ ‘ಇನ್ನು ಸ್ವಲ್ಪ ಹೊತ್ತು ಬರ್ತಾರೆ ಬರ್ತಾರೆ’ ಎಂದು ಸಮಾಧಾನ ಮಾಡುವ ಯತ್ನ ಮಾಡಿದರು. ಈಗ ಪ.ಗೋ ಸಿಟ್ಟು ನೆತ್ತಿಗೇರಿತ್ತು. ‘ಏನು ನಾವು ಕೆಲಸವಿಲ್ಲದವರು, ನಿಮ್ಮ ಸಚಿವರಿಗೆ ಮಾತ್ರ ಕೆಲಸವಿದೆಯೇ ?’ ಎಂದರು ಸಿಡುಕಿನಿಂದ.

‘ಇಲ್ಲ ಇಲ್ಲ ಸಚಿವರು ನಿಮ್ಮನ್ನು ರಿಕ್ವೆಸ್ಟ್ ಮಾಡಿದ್ದಾರೆ ಪ್ಲೀಸ್ ಪ್ಲೀಸ್ ’ ಎಂದರು ನಾಯಕ್.

‘ನಿಮಗೆ ಇದೇ ಆಯ್ತು ಮಾರಾಯರೆ. ಬೇಡ ಹೋಗುವ ಬನ್ನಿ ಸಚಿವರಾದರೇನಂತೆ’ ಎಂದರು ಎ.ವಿ. ಮಯ್ಯ.

ನಾನು ಸುಮ್ಮನಿದ್ದುದನ್ನು ಕಂಡು ‘ಏನೋ ದಲಿತ ಮಾತಾಡು’ ಎಂದು ಛೇಡಿಸಿದರು (ನನ್ನನ್ನು ಪ.ಗೋ ದಲಿತ ಎಂದೇ ಕರೆಯುತ್ತಿದ್ದರು. ಮುಂಗಾರು ದಲಿತ ಪರವಾಗಿತ್ತು. ನಾನೂ ದಲಿತ ಪರವಾಗಿಯೇ ಬರೆಯುತ್ತಿದ್ದೆ ಆದ್ದರಿಂದ ಪ.ಗೋ ಹಾಗೆ ಕರುತ್ತಿದ್ದರು ತಮಾಷೆಗಾಗಿ) ಪ.ಗೋ. ‘ನನ್ನದೇನೂ ಇಲ್ಲ ನೀವು ಹೋಗುವ ಎಂದ್ರೆ ರೈಟ್ ’ ಎಂದೆ.

ಆಗ ನರಸಿಂಹ ರಾವ್ ‘ಇನ್ನು ಐದು ನಿಮಿಷ ನೋಡೋಣ, ಬರದಿದ್ದರೆ ಹೋಗೋಣ’ ಎಂದರು. ಎಲ್ಲರೂ ಸಮ್ಮತಿಸಿದೆವು. ‘ಐದು ನಿಮಿಷವಾಯ್ತು. ಹೋಗೋಣ ’ ಎಂದು ಜೋರಾಗಿಯೇ ಹೇಳಿದೆ ನಾನು. ಎಲ್ಲರೂ ಹೊರಟೆವು. ಕಚೇರಿಯಿಂದ ಮೆಟ್ಟಲು ಇಳಿದು ಕೆಳಗೆ ಬಂದು ಪ.ಗೋ ಬೀಡಿಗೆ ಬೆಂಕಿ ಹಚ್ಚಿದರು. ಕೆಳಕ್ಕೆ ಓಡಿಕೊಂಡು ಬಂದ ವಾರ್ತಾಧಿಕಾರಿ ‘ಪ್ಲೀಸ್ ಬನ್ನಿ ಬನ್ನಿ ’ ಗೋಗರೆಯ ತೊಡಗಿದರು.

ಪ.ಗೋ ‘ನಿಮಗೆ ಮಾತ್ರ ಟೈಮ್ ಸೆನ್ಸ್ ಅಂದುಕೊಂಡಿರಾ, ನಮಗೂ ಇದೆ ಟೈಮ್ ಸೆನ್ಸ್ ಹೋಗ್ರಿ ಹೋಗ್ರಿ’ ಎಂದರು.

ಈಗ ಮಯ್ಯರಿಗೆ ಒಂದು ಮನಸ್ಸು. ‘ಬನ್ರಾಯ್ಯಾ ಏನೋ ಹೇಳ್ತಾರಂತೆ, ಕರ್ಮವ’ ಎಂದರು. ‘ನೀವು ಬೇಕಾದ್ರೆ ಹೋಗಿ ಆದ್ರೆ ನಾವು ಬರುವುದಿಲ್ಲ‘ ಎಂದರು ಪ.ಗೋ.

ನಾನು ‘ಇದೇನು ಮಯ್ಯರೇ ಮತ್ತೆ ಹೋಗುವ ಅನ್ನುತ್ತೀರಿ. ಇದು ಸರಿಯಲ್ಲ. ಬೇಡ ಹೋಗುವ ಅಂದುಕೊಂಡು ಬಂದು ಈಗ ಉಲ್ಟಾ ಹೊಡಿತ್ತಿದ್ದಿರಲ್ಲಾ’ ಎಂದೆ.

ನರಸಿಂಹ ರಾವ್ ಗೂ ಸಿಟ್ಟು ಬಂದಿತ್ತು. ‘ಒಂದ್ಸಲಾ ಹೋಗುವ ಅಂದರೆ ಹೋಗುವುದೇ’ ಎಂದರು. ನಾಯಕ್ ಮತ್ತೆ ಮತ್ತೆ ರಿಕ್ವೆಸ್ಟ್ ಮಾಡಿದರು. ಆದರೆ ನಾವು ಅಲ್ಲಿಂದ ಹೊರಟುಬಿಟ್ಟೆವು.

ಎಲ್ಲರೂ ಪತ್ರಿಕಾಗೋಷ್ಠಿಗೆ ಬಾಯ್ ಕಾಟ್ ಮಾಡಿದ ಸುದ್ದಿ ಸಚಿವರ ಕಿವಿಗೂ ಬಿತ್ತು. ಮರುದಿನ ಸಚಿವರೇ ಖುದ್ದು ಪತ್ರಕರ್ತರಿಗೆ ಪತ್ರ ಬರೆದು ಕ್ಷಮೆ ಕೇಳಿದ್ದರು. ಈಗ ಈ ಬಾಯ್ಕಾಟ್ ಸಾಧ್ಯವೇ ?.

Leave a Reply