ನನ್ನ ಕಾಲಡಿ ನನ್ನ ಗುರು..

ವಿನತೆ ಶರ್ಮ

ಬಸವಳಿದ ದಿನಗಳಲಿ ಏಕಾಂತ

ಬೇಕೆನಿಸಿದಾಗ ನನ್ನೆದೆಯಲ್ಲಿ

ಎರೆಹುಳು ನಸುನಗುತ್ತದೆ ದೂರ

ಸರಿಸಿದರೂ ಗುರುವಾಜ್ಞೆ ಮೀರುವುದೇ.

 

ಜೊತೆಯಾರೂ ಇಲ್ಲ ನಾನೊಬ್ಬಂಟಿ

ಎಂಬ ಮುಖ ಹೊತ್ತಾಗ, ನನ್ನ ಪರಪಂಚ  

ಬಾಡಿದಾಗ ಎರೆಹುಳು ಹಲೋ ಹೇಳುತ್ತದೆ

ತಂಪು ಮಣ್ಣ ಉಂಡೆ ರಾಶಿ ಚೆಲ್ಲುತ್ತದೆ.  

 

ತಟ್ಟೆ ಖಾಲಿ ಹೊಟ್ಟೆ ತುಂಬಿಲ್ಲ

ಎಂಬ ಚಡಪಡಿಕೆಯ ಹೊತ್ತಲಿ

ಮತ್ತೆ ಕಾಣುತ್ತದೆ ಅದರ ಮೈಬಣ್ಣ

ತೋಟದಲ್ಲಿನ ಪರಂಗಿಹಣ್ಣಿನ ಕೆಂಪಿನಂತೆ.

 

ಬಿಸಿಲಬೇಗೆಯ ಕಳವಳಕ್ಕೆ

ಇದೋ ನನ್ನ ಉತ್ತರ ಎನ್ನುವಂತೆ

ಮಣ್ಣೊಳಗೆ ತಲೆಮರೆಸಿಕೊಂಡ

ಅದರ ಹಿಂಬಾಲಕಳು ನಾನು ಅಷ್ಟೇ.

ಯಾಕೋ ಏನೋ ಈ ನಡುವೆ ನನ್ನ

ಸ್ವಗತ ಹೆಚ್ಚುತ್ತಿದೆ. ಯಾರೊಡನೆ

ನನ್ನ ಸಂಭಾಷಣೆ ಎಂದವರಿಗೆ

ನನ್ನ ಕಣ್ಣು ದಿಟ್ಟಿಸುವುದು ಕಾಲಡಿ ನೆಲ.

 

ಒಮ್ಮೊಮ್ಮೆ ನಾನು ನೆಲಮಣ್ಣಶಾಯಿ

ಹಾಗೆ ಪವಡಿಸುವ ಸುಖ ನನ್ನದಾದ

ಕ್ಷಣಕ್ಕೆ ಚಿರಋಣಿ, ದಾರಿತೋರಿದ

ಗುರು ಎರೆಹುಳುವಿಗೆ ಶರಣು.  

 

ಗುರುವೇ, ನಿಮ್ಮೊಡನಿರುವ ಕೋಟಿ

ಗುರುವೃಂದದ ಜೊತೆ ಜೀವನ ಹೇಗಿದೆ?

‘ಇರುವೆ’ ಎನ್ನೋದೇ ನಮ್ಮೆಲ್ಲರ ಅರಿವು  

ಮಣ್ಣಿಂದ ಮಣ್ಣಿಗೆ ಅನ್ನೋದೇ ಜೀವನ.

 

ಒಮ್ಮೆ ಕೇಳಿದೆ, ಗುರುವೇ ನೀನಿಷ್ಟು ಸಣ್ಣ,

ಶಿಷ್ಯೆ ನಾನಿಷ್ಟು ದೊಡ್ಡ, ಯಾಕೆ?

ಬುದ್ಧನ ಸ್ಥಿರನಗೆಯೊಡನೆ ಬಂತೊಂದುತ್ತರ

ಬದುಕೆಂಬುದು ದೊಡ್ಡಸಣ್ಣ ಕಳೆದ ಸೊನ್ನೆ.

ಸಾವಯವವಿಲ್ಲದ ಕಲ್ಲುನೆಲದಲಿ

ಕೀರೆ, ದಂಟು, ಪಾಲಾಕು, ಬಸಳೆ

ಬೆಳಿ. ಇದು ಗುರು ಒಡ್ಡಿದ ಪರೀಕ್ಷೆ,

ದೊಡ್ಡಸಣ್ಣ ಲೆಕ್ಕವಿನ್ನೂ ನಡೆದಿದೆ.

1 comment

Leave a Reply