ಒಂದಿನಿತೂ ಬಿಡದೆ ಮುದ್ದಿಸಬೇಕು ನಾನು..

ದಿಶಾ ಗುಲ್ವಾಡಿ

ನನ್ನ ಕೋಣೆಯ ತುಂಬ
ಚಂದ್ರನೂರಿನ ನೆಂಟರು
ಕೊಟ್ಟು ಕಳುಹಿಸಿದ್ದಾನೆ
ಒಲವಿನ ಬೆಳಕನ್ನ
ಬೊಗಸೆ ತುಂಬಾ
ಒಂದಿನಿತೂ ಬಿಡದೆ
ಮುದ್ದಿಸಬೇಕು ನಾನು

ಜಗತ್ತಿನ ಸುಳ್ಳುಗಳನ್ನೆಲ್ಲ
ಪೋಣಿಸಿದ್ದಾನೆ ಅವನೂರಿನ
ದಾರಿಯಲ್ಲಿ ಅವನೊಡಲ
ಬೆಳಕಲ್ಲಿ ಎಲ್ಲ ಮರಗಳು
ನೆರಳ ಹೆತ್ತಿರಲು ನಾ
ಹುಡುಕುತ್ತಿರುವೆ ಅವನ ನೆರಳ

ಪದೇ ಪದೇ ಕಾಡಬೇಡ
ಹಾಲು ಬೆಳಕೇ!
ನನ್ನೊಂದಿಗೆ ಇರು ಎಂದು
ಮಡಿಲೊಳಗೇ ತಟ್ಟಿ ಮಲಗಿಸಿದ್ದೆ
ಬೆಳಗಾದರೆ ಎಲ್ಲ ಮಾಯ!
ಪ್ರತೀ ಹಗಲು ವಿರಹ ವೇದನೆ..

Leave a Reply