ಪಂಪನೇ ಹೇಳಿದ ಮಾತಿದು.. ಸೆಕ್ಸ್ ಇಲ್ಲದೇ ಇರಬಾರದು..

ಪಂಪ ಹೇಳಿ ಕೊಡುವ ಲೈಂಗಿಕ ಶಿಕ್ಷಣ …

ಜಗತ್ತಿನ ಜೀವರಾಶಿಗಳಲ್ಲಿ ಕಾಮಕ್ರಿಯೆ ಒಂದಲ್ಲ ಒಂದು ರೀತಿಯಲ್ಲಿ ಅಭಿವ್ಯಕ್ತವಾಗುತ್ತಿರುತ್ತದೆ.ಇದು ಸೃಷ್ಟಿಯ ನಿಯಮ. ಕಾಮ ವಿಹಿತವಾದ ಜೀವರಾಶಿ ಪ್ರಕೃತಿಯಲ್ಲಿ ಯಾವುದೂ ಇಲ್ಲ.ಮನುಷ್ಯ ಜೀವಿಯ ಬದುಕಲ್ಲಂತೂ ಕಾಮಕ್ರಿಯೆ ಇತರ ಜೀವಿಗಳಿಗಿಂಥ ವಿಶೇಷವಾದ ಸ್ಥಾನವನ್ನು ಪಡೆದಿದೆ.

ಭಾರತೀಯ ತತ್ವಶಾಸ್ತ್ರದ ಪ್ರಕಾರ (ಹಿಂದೂಗಳಲ್ಲಿ) ಮೈಥುನವನ್ನು ಪೂಜೆಯೆಂದು ಪರಿಗಣಿತವಾಗಿದೆ.

ಶತಪಥಬ್ರಾಹ್ಮಣದಲ್ಲಿ ಪ್ರಿಯಳೊಡನೆ ಕೂಡುವುದರಿಂದ ಒಬ್ಬನು ಪೂರ್ಣನಾಗುತ್ತಾನೆ. ಗಂಡು- ಹೆಣ್ಣು ಕೂಡಿ ಒಂದು ಪೂರ್ಣತೆ. ಇಲ್ಲದಿದ್ದರೆ ಗಂಡು ಅರ್ಧ ಹೆಣ್ಣು ಅರ್ಧ ಸಂತತಿಯಿಲ್ಲ ಎಂದಿದೆ. ಹಾಗಾಗಿ ಭಾರತೀಯರಲ್ಲಿ ” ಕಾಮ ಎನ್ನುವುದು ಪುರುಷಾರ್ಥಗಳಲ್ಲಿ ಒಂದು. ಮೋಕ್ಷ ಪ್ರಾಪ್ತಿಯಾಗಬೇಕಾದರೆ “ಕಾಮ” ಅನಿವಾರ್ಯವಾದದ್ದು ಅದಕ್ಕೆ, ಪುರುಷಾರ್ಥಗಳಲ್ಲಿ ಕಾಮ ದ ನಂತರವೇ ಮೋಕ್ಷ ಇರುವುದು.

 

Indian lovers in tantric position north-west India original manufact 10-11 century
** Note: Shallow depth of field

ಇಂಥ ಕಾಮದ ಬಗೆಗೆ ಭಾರತದಲ್ಲಿ ಶಾಸ್ತ್ರಗಳೇ ಹುಟ್ಟಿಕೊಂಡಿವೆ. ಮಾನವ ಬದುಕಿನ,ಅನಿವಾರ್ಯವಾದ “ಕಾಮ” ನಮ್ಮ ಕನ್ನಡ ಕವಿಗಳನ್ನೂ ಕಾಡಿದೆ. ಕಾಮದ ಪ್ರಕೃತಿ, ವಿಕೃತಿಗಳ ಬಗೆಗೆ ಕೆಲವು ಕವಿಗಳು ಸಾಂದರ್ಭಿಕವಾಗಿ ಚರ್ಚಿಸಿದ್ದರೆ, ಇನ್ನೂ ಕೆಲವರು ಅದನ್ನು ತಮ್ಮ ಕಾವ್ಯದ ವಸ್ತುವನ್ನಾಗೆ ಮಾಡಿಕೊಂಡಿದ್ದಾರೆ.

ನಮ್ಮ ಆದಿಕವಿ ಪಂಪನಂತೂ ಎರಡೂ ಕಾವ್ಯಗಳಲ್ಲಿ ಸಾಂದರ್ಭಿಕವಾಗಿ ಅಲ್ಲಲ್ಲಿ ಬದುಕಿನಲ್ಲಿ ಕಾಮದ ಮಹತ್ವವನ್ನು ಕುರಿತ ವಿವರಣೆಯನ್ನು, ಅದರ ಸೊಗಸನ್ನು ಪ್ರಸ್ತಾಪಿಸಿದ್ದಾನೆ.

ಕಾಮಕ್ರಿಯೆ ಯಾಂತ್ರಿಕವಾದರೆ ಬದುಕು ನಿಸ್ಸಾರವಾಗುತ್ತದೆ. ಬದುಕನ್ನು ರಸಪೂರ್ಣಗೊಳಿಸುವ ಬಗೆಯನ್ನು ಪಂಪ ಈ ಮುಂದೆ ಕೊಟ್ಟಿರುವ ಪದ್ಯದಲ್ಲಿ ವಿವರಿಸಿದ್ದಾನೆ.

“ರತದೊಳಗ್ಗಳಂ ಮುಖರತಂ ಸುರತೋತ್ಸವಮೆಂದು ಕಾಮಿನೀಪ್ರತತಿಗೆ ತೋರ್ಪವೊಲ್ ಮಧುರ,ಸೀತ್ಕೃತನಾದದೊಳುಣ್ಮಿ ಪೊಣ್ಮಿ
ಚೂಷಿತಕಮನ್ ಔಪರಿಷ್ಟಕರತಂಗಳ ಭೇದದೊಳೊಂದಿದ ಆಮ್ರಚೂಷಿತಕಮನ್ ಆಮ್ರಪಕ್ವಫಲದೊಳ್ ಶುಕಕಾಮಿನಿ ಚೆಲ್ವುದೋರಿದಳ್”

ಪಂಪನ ‘ಆದಿಪುರಾಣ’ದ ಹನ್ನೊಂದನೆ ಆಶ್ವಾಸದ 97ನೇ ಪದ್ಯವಿದು.

ಭರತನು ದಿಗ್ವಜಯಕ್ಕೆ ಹೊರಟಾಗ ಅವನ ಜೊತೆಯಲ್ಲಿ ಇಡೀ ಅಂತಃಪುರವೇ ಹೊರಡುತ್ತದೆ. ಮುಂದೆ ಒಂದು ನದಿ ತಟದಲ್ಲಿ ಬೀಡು ಬಿಡುತ್ತಾರೆ. ಆತನ ಅಸಂಖ್ಯಾತ ಮಡದಿಯರು ಆ ನದಿಯ ಪಕ್ಕದಲ್ಲಿ ಇದ್ದ ಉದ್ಯಾನವನಕ್ಕೆ ಹೋಗುತ್ತಾರೆ. ವಸಂತಮಾಸದ ಸಮಯವದು. ಆ ಉದ್ಯಾನವನದಲ್ಲಿನ ಮರ, ಗಿಡಗಳನ್ನು ಕಂಡು ಸಂಭ್ರಮಿಸುವ ಆತನ ಸುಂದರ ಮಡದಿಯರಲ್ಲಿ ಒಬ್ಬಳಿಗೆ ಮಾವಿನ ಮರದಲ್ಲಿ ಕಂಡ ದೃಶ್ಯವೇ ಮೇಲಿನ ಪದ್ಯ.

ಪದ್ಯದ ಸಾರಂಶವಿಷ್ಟು.

‘ಮುಖರತವುಳ್ಳ ಸಂಭೋಗವು ರತಿಕ್ರೀಡೆಯಲ್ಲಿ ಅತ್ಯುತ್ತಮವಾದದ್ದು ಎಂದು ಕಾಮಿನಿಯರಿಗೆ ತೋರಿಸುವಂತೆ, ಹೆಣ್ಣು ಗಿಳಿಯೊಂದು, ಮಾವಿನ ಹಣ್ಣಿನ ಮೇಲೆ ಕುಳಿತು ಅದನ್ನು ಬಾಯಿಂದ ಕಚ್ಚಿ ಚಪ್ಪರಿಸುತ್ತಾ, ಮಧುರವಾಗಿ ಸೀತ್ಕರಿಸುತ್ತಾ ಔಪರಿಷ್ಟಕರತಗಳಲ್ಲಿ ಒಂದಾದ ಆಮ್ರಚೂಷಿತಕದ ಪ್ರಯೋಗ ಪಾಠವನ್ನು ಭರತನ ಮಡದಿಯರಿಗೆ ತೋರಿಸುವಂತಿತ್ತು’

( 1 ಔಪರಿಷ್ಟಕರತ ಎಂದರೆ- ಗಂಡಿನ ಮೇಲೆ ಹೆಣ್ಣು ಮಲಗಿ ಸಂಭೋಗಿಸುವ ವಿಧಾನಗಳು.

2) ಆಮ್ರ ಚೂಷಿತಕ ಎಂದರೆ – ಮಾವಿನ ಹಣ್ಣನ್ನು ಬಾಯಿಂದ ಕಚ್ಚಿ, ಚೀಪಿ, ಚಪ್ಪರಿಸುವುದು.)

ಪಂಪ ಮೇಲೆ ವಿವರಿಸುವ ಮಾತುಗಳು ನಮ್ಮ ಬದುಕು ಒಪ್ಪವಾಗಬೇಕಾದರೆ ಇತರ ಅಗತ್ಯಗಳ ಜೊತೆಗೆ ಗಂಡು – ಹೆಣ್ಣಿನ ಜೊತೆಗೆ ಇಂಥ intimate sexual relationship ನ ಅಗತ್ಯತೆಯನ್ನು ಎತ್ತಿಹಿಡಿಯುವುದರ ಮುಖಾಂತರ ಆರೋಗ್ಯಕರವಾದ ಲೈಂಗಿಕ ಶಿಕ್ಷಣದ ಪಾಠಗಳನ್ನು ಹೇಳಿಕೊಡುತ್ತಿದ್ದಾನೆ.

5 comments

 1. ಕುಮಾರವ್ಯಾಸಭಾರತ ದಲ್ಲೂ ದಿನಕ್ಕೊಮ್ಮೆ ಸಂಭೋಗ ಆರೋಗ್ಯಕರ ಎನ್ನಲಾಗಿದೆ

  • ಹಾಗೆ ಎಲ್ಲಿ ಹೇಳಿದೆ ಎಂದು ಸ್ವಲ್ಪ ತಿಳಿಸಿದರೆ ಈ ಲೇಖನಕ್ಕೆ ಎರಡನೆಯ ಭಾಗ ಬರೆಯಬಹುದು! (ಕುಮಾರವ್ಯಾಸ ಭಾರತದ ಯಾವ ಪರ್ವ ಇತ್ಯಾದಿ, ಪದ್ಯವನ್ನೇ ಇಲ್ಲಿ ಹಾಕಿದರೆ ಇನ್ನೂ ಒಳಿತು! )

 2. “ಥೂ ಪೋಲಿ” ಅಂಕಣದಲ್ಲಿ ಪೋಲಿ ಕತೆಗಳನ್ನೇ ಪುಟಗಟ್ಟಲೆ ಬರೆಯಿರಿ, ಓದಿ ಆನಂದಿಸೋಣ; ಪಂಪನ ಕಾವ್ಯಗಳ ಬಗ್ಗೆ ಬಂಡಿಗಟ್ಟಲೆ ಬರೆಯಿರಿ, ಓದಿ ಆನಂದಿಸೋಣ; ಅಥವಾ ಪಂಪನ ಕಾವ್ಯದಲ್ಲಿ ಚೆಲ್ಲವರಿದಿರುವ ವಿವಿಧ ಸುರತೋತ್ಸವಗಳನ್ನು ವಿವರವಿವರವಾಗಿ ವರ್ಣಿಸಿರಿ, ಅದನ್ನೂ ಓದಿ ಆನಂದಿಸೋಣ – ಆದರೆ ಪಂಪನದ್ದಲ್ಲದ ಮಾತನ್ನು ಅವನ ಗಂಟಲಲ್ಲೇಕೆ ತುರುಕುತ್ತೀರಿ? ದಾರಿತಪ್ಪಿಸುವ ಶೀರ್ಷಿಕೆಗಳನ್ನು ಕೊಡುವ ಬದಲು, ಬರೆಯುವುದನ್ನು ದಯವಿಟ್ಟು ಅರ್ಥ ಮಾಡಿಕೊಂಡು ಬರೆಯಬಾರದೇ ಎಂಬುದು ಗಂಭೀರ ಓದುಗರ ಮನವಿ.

  ಕಾಮವು ಪುರುಷಾರ್ಥಗಳಲ್ಲೊಂದೆಂದು ಪಂಪನೊಬ್ಬನೇ ಏನು, ಸಾವಿರಾರು ವರ್ಷಗಳಿಂದ ಅನೇಕರು ಸಾರಿಸಾರಿ ಹೇಳಿದ್ದಾರೆ, ಪ್ರಶ್ನೆ ಅದಲ್ಲ. ಶೀರ್ಷಿಕೆಯಲ್ಲಿ “ಪಂಪನೇ ಹೇಳಿದ ಮಾತಿದು.. ಸೆಕ್ಸ್ ಇಲ್ಲದೇ ಇರಬಾರದು..” ಎಂದು ಹೇಳಿದ ಮೇಲೆ, ಬರಹದಲ್ಲಿ, ಆ ಶೀರ್ಷಿಕೆಯಲ್ಲಿ ಹೇಳಿದ ಮಾತು ಆಕರಸಹಿತ ಬರಬೇಕಲ್ಲವೇ? ಸೆಕ್ಸ್/ಸಂಭೋಗ ಇಲ್ಲದೇ ಇರಬಾರದು ಎಂಬ (ಅಥವಾ ಅಟ್ ಲೀಸ್ಟ್ “ಶೃಂಗಾರವಿಲ್ಲದ ಬಾಳೂ ಬಾಳೇ”, ಅಥವಾ “ಹುಟ್ಟಿದ ಮೇಲೆ ಶೃಂಗಾರ ಸುಖವಿಲ್ಲದೇ ಬಾಳಬಹುದೇ” ಎಂದಾದರೂ ಅರ್ಥ ಬರುವ) ಅಭಿಪ್ರಾಯವನ್ನು ತಿಳಿಸುವ ಯಾವುದಾದರೂ ಪದ್ಯ/ಭಾಗವನ್ನೆತ್ತಿಕೊಂಡು ವಿವರಿಸಿದ್ದರೆ ನಿಮ್ಮ ಶೀರ್ಷಿಕೆಗೂ ಬರಹಕ್ಕೂ ಒಂದು ಸಾಂಗತ್ಯವಿರುತ್ತಿತ್ತು. ಆದರೆ ನೀವು ಆರಿಸಿಕೊಂಡ ಆದಿಪುರಾಣದ ಪದ್ಯ ಇದು:

  ರತದೊಳಗಗ್ಗಳಂ ಮುಖರತಂ ಸುರತೋತ್ಸವಮೆಂದು ಕಾಮಿನೀ
  ಪ್ರತತಿಗೆ ತೋರ್ಪವೊಲ್ ಮಧುರ ಸೀತ್ಕೃತನಾದದೊಳುಣ್ಮಿ ಪೊಣ್ಮಿ ಚೂ
  ಷಿತಕಮನೌಪರಿಷ್ಟಕರತಂಗಳ ಭೇದದೊಳೊಂದಿದಾಮ್ರಚೂ
  ಷಿತಕಮನಾಮ್ರಪಕ್ವಫಲದೊಳ್ ಶುಕಕಾಮಿನಿ ಚೆಲ್ವುದೋರಿದಳ್

  ಅದರ ಅರ್ಥವೂ ನೀವು ಬಹುತೇಕ ಸರಿಯಾಗಿಯೇ ಹಿಡಿದಿರುವಂತೆ ‘ಮುಖರತವುಳ್ಳ ಸಂಭೋಗವು ರತಿಕ್ರೀಡೆಯಲ್ಲಿ ಅತ್ಯುತ್ತಮವಾದದ್ದು ಎಂದು ಕಾಮಿನಿಯರಿಗೆ ತೋರಿಸುವಂತೆ, ಹೆಣ್ಣು ಗಿಳಿಯೊಂದು, ಮಾವಿನ ಹಣ್ಣಿನ ಮೇಲೆ ಕುಳಿತು ಅದನ್ನು ಬಾಯಿಂದ ಕಚ್ಚಿ ಚಪ್ಪರಿಸುತ್ತಾ, ಮಧುರವಾಗಿ ಸೀತ್ಕರಿಸುತ್ತಾ ಔಪರಿಷ್ಟಕರತಗಳಲ್ಲಿ ಒಂದಾದ ಆಮ್ರಚೂಷಿತಕದ ಪ್ರಯೋಗ ಪಾಠವನ್ನು ಭರತನ ಮಡದಿಯರಿಗೆ ತೋರಿಸುವಂತಿತ್ತು’

  ಸರಿ, ವಸಂತಮಾಸದ ಉನ್ಮತ್ತ ಶೃಂಗಾರವನ್ನು ವರ್ಣಿಸುವ ಲೆಕ್ಕವಿಲ್ಲದಷ್ಟು ಪದ್ಯಗಳಲ್ಲಿ ಇದೊಂದು, ಕಾಮಶಾಸ್ತ್ರದ ಭಂಗಿಯೊಂದನ್ನು ಪ್ರಕೃತಿ ಭರತನ ಮಡದಿಯರಿಗೆ ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿತ್ತು ಎಂಬ ವರ್ಣನೆಗಷ್ಟೇ ಈ ಪದ್ಯ ಸೀಮಿತ. ಇಲ್ಲಿ ಸೆಕ್ಸ್ ಇಲ್ಲದೇ ಇರಬಾರದು ಎಂಬ ಅಭಿಪ್ರಾಯವು ನೇರವಾಗಿಯಾಗಲೀ ಸುತ್ತಿಬಳಸಿಯಾಗಲೀ ಎಲ್ಲಿ ಸ್ವಾಮಿ ಬರುತ್ತದೆ? “ಅಡುಗೆ ಮನೆಯಿಂದ ಸಾರುಗಳ ರಾಜನಾದ ಮೀನಿನ ಸಾರಿನ ಸುಗಂಧವು ಮೂಗಿಗೆ ಬಡಿಯುತ್ತಿದೆ, ಆಹಾ! ಏನು ಸೊಗಸೋ” ಎಂದರೆ ಅದು ಸಾರಿನ ವರ್ಣನೆಯೇ ಹೊರತು “ಮೀನಿನ ಸಾರಿಲ್ಲದೇ ಬದುಕಬಾರದು/ಊಟ ಮಾಡಬಾರದು” ಎಂದಂತೆ ಆಗಲೀ, ಮೀನಿನ ಸಾರು ಬದುಕಿಗೆ ಅತಿ ಮುಖ್ಯ ಎಂದಂತೆ ಆಗಲೀ ಅಲ್ಲ ಅಲ್ಲವೇ?

  “ಥೂ ಪೋಲಿ” ಅಂಕಣಕ್ಕೆ ಪಂಪನಿಂದಲೇ ಏನಾದರೂ ಬೇಕಾದರೆ ಆತನಲ್ಲಿ ಅಂಥವು ಬೇಕಾದಷ್ಟಿದೆ – ಸೂಳೆಗೇರಿಯನ್ನು, ಸುರತವನ್ನು ಬಹುವಿಸ್ತಾರವಾಗಿ ವರ್ಣಿಸಿದ್ದಾನೆ, ಇಲ್ಲದಿದ್ದರೆ ಜನ್ನನ ಯಶೋಧರಚರಿತೆಯಿದೆ, ಅಥವಾ ಜನ್ನನೇ ಅನುಭವಮುಕುರವೆಂಬ ಕಾಮಶಾಸ್ತ್ರಗ್ರಂಥ ಬರೆದಿದ್ದಾನೆ, ಅದನ್ನೊಂದಷ್ಟು ತಡಕಿದರೆ ಈ ಅಂಕಣಕ್ಕೆ ಬೇಕಾದಷ್ಟು ಸಿಕ್ಕೀತು – ಕಾಮದ ವಿಷಯದಲ್ಲಿ ಯಾವ ಸಂಕೋಚವನ್ನೂ ಇಟ್ಟಿಲ್ಲ ಹಳಗನ್ನಡ ಕವಿಗಳು. ಆದರೆ ಅವರ ಪೋಲಿ ಮಾತುಗಳೇನಿದ್ದರೂ ಅವರದ್ದಾಗಿಯೇ ಬರಲಿ, ನಿಮ್ಮದು ನಿಮ್ಮದಾಗಿ.

 3. ಆಹಾ, ಏನು ದಿವಿನಾಗಿ ವರ್ಣಿಸಿದ್ದೀರಿ ಮಾರಾಯ್ರೆ! ನಿಮ್ಮ ಈ ವರ್ಣನೆ ನೋಡಿ…
  ೧. ನಮ್ಮ ಪಡ್ಡೆ ಹುಡುಗರಲ್ಲಿ ಹಳಗನ್ನಡ ಕಲಿತು ಆದಿಪುರಾಣ, ಕುಮಾರವ್ಯಾಸ ಭಾರತ ಮುಂತಾದ ಪುಸ್ತಕಗಳನ್ನು ಓದುವ ಉತ್ಸುಕತೆ ಮೂಡೀತು ಅಥವಾ
  ೨. ನಮ್ಮ ಘನ ಸರಕಾರದವರು ಅಶ್ಲೀಲಕಾವ್ಯಗಳೆಂದು ಅವನ್ನು ನಿಷೇಧಿಸಲಿಕ್ಕೂ ಸಾಕು
  ೨ನೆಯದು ಆಗುವ ಮುನ್ನ, ೧ನೆಯದನ್ನು ಪ್ರೋತ್ಸಾಹಿಸಲು ಸಾಧ್ಯವಾದಷ್ಟು ಕಡೆ ಪ್ರಸರಿಸುವ ಪ್ರಯತ್ನ ಮಾಡುತ್ತೇನೆ ಮಹನೀಯರೆ _/\_
  ಇಂತಹ ಮುಕ್ತಾಫಲಗಳನ್ನು ನಿಮ್ಮ ಲೇಖನಿಯಿಂದ ಎದುರು ನೋಡುತ್ತಾ…

Leave a Reply