ನನ್ನ ಬೈಕಿಗೆ ಹಾಕುವ ಪೆಟ್ರೋಲ್ ರೇಟು ಜಾಸ್ತಿಯಾದರೂ ಪರವಾಗಿಲ್ಲ, ಖುಷಿಯಿಂದ ಕೊಡುತ್ತೇನೆ..

ಪ್ರೊಫೆಸರ್ ಬದುಕಿದ್ದಿದ್ದರೆ ಈ  ‘ಅವಿವೇಕಿ’ ಗಳನ್ನು ಬಾರುಗೋಲಿನಿಂದ ಬಾರಿಸುತ್ತಿದ್ದರು!

ಕಾಂಗ್ರೆಸ್‌ನ ಹಿರಿಯ ನಾಯಕ- ಶಾಸಕರೂ ಆದ ಹೆಚ್.ಕೆ ಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ  ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ನೋವು, ಸಿಟ್ಟನ್ನು ತೋಡಿಕೊಂಡಿದ್ದಾರೆ.

ಅವರ ಈ ಹೇಳಿಕೆ ನನಗೆ  ಆಶ್ಚರ್ಯ ಉಂಟುಮಾಡಿತು.

ಬಿಜೆಪಿಯ  ನಾಯಕರಾದ ಜಗದೀಶ್‌ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರುಗಳು  ಕೂಡ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಹೇಳುತ್ತಿದ್ದರ ಬಗ್ಗೆ ನನಗೇನೂ ಹೊಸತು ಕಾಣಲಿಲ್ಲ. ಅವರು ವಿರೋಧ ಪಕ್ಷವಾಗಿ ಇಂತಹ ಹೇಳಿಕೆಗಳು ಕೇವಲ ಪೊಲಿಟಿಕಲ್ ಸ್ಟೇಟ್‌ಮೆಂಟ್‌ಗಳಾಗುತ್ತವೆ ಅಷ್ಟೇ. ಆದರೆ ಆಳುವ ಪಕ್ಷದವರೇ ಆಗಿರುವ ಹೆಚ್. ಕೆ ಪಾಟೀಲ್ ಅವರ ಅಸಮಾಧಾನ ಮಾತ್ರ ನನಗೆ ಸೋಜಿಗವೆನಿಸಿತು.

ಹೆಚ್.ಕೆ ಪಾಟೀಲ್  ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ನಿರಂತರವಾಗಿ  ಸಚಿವರಾಗಿ ಪ್ರಭಾವಿ ಎಂದೆಣಿಸಬಹುದಾದ ಖಾತೆಗಳನ್ನೇ ನಿಭಾಯಿಸಿದವರು. ಮುಖ್ಯಮಂತ್ರಿ ಅಭ್ಯರ್ಥಿ ಎಂಬಷ್ಟರ ಮಟ್ಟಿಗೆ ಬೆಳೆದು ನಿಂತಿರುವ ನಾಯಕ ಎಂದರೂ ಸರಿಯೇ. ಉತ್ತರ ಕರ್ನಾಟಕದ ವಾರಸುದಾರಿಕೆಯನ್ನು ಎಂದಿಗೂ ಬಿಟ್ಟುಕೊಡದೆ ಇರುವವರು. ಈಗ ತಮ್ಮದೇ ಪಕ್ಷದ ಪಾಲುದಾರಿಕೆಯ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು  ದನಿ ಎತ್ತಿ ಅವರ ಅಸಮಾಧಾನದ ನೋವು ತೋಡಿಕೊಂಡದ್ದು ವ್ಯಕ್ತಿಗತ ಬೆತ್ತಲಾಗಿರುವುದಲ್ಲದೆ ‘ಬೇರಾವ’ ಅರ್ಥವನ್ನು ಧ್ವನಿಸಲು ಸಾಧ್ಯ?

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿ ತಮ್ಮ ಭಾಗಕ್ಕೆ ಒಂದು ಸಾವಿರ ಕೋಟಿ ರೂ ಗಳಿಗೂ ಹೆಚ್ಚು ಅನುದಾನ ಬಾಚಿಕೊಂಡ ಹೆಚ್.ಕೆ ಪಾಟೀಲ್ ಅವರಿಗೆ  ಈ ಹಣ ಉತ್ತರ ಕರ್ನಾಟಕದ ಅಭಿವೃದ್ದಿಯ ಪಾಲು ಎಂದು ಯಾಕೆ ಅನಿಸಿಲಿಲ್ಲ.? ಈ ಹಣದ ಸದುಪಯೋಗದ ಬಗ್ಗೆ ಲೆಕ್ಕ ಕೊಡುವ ಜವಾಬ್ದಾರಿ ಯಾರದ್ದು ಎಂಬುದಕ್ಕೆ  ಪಾಟೀಲರು ಜವಾಬು ಕೊಡಬೇಕು.

ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನ ಎಲ್ಲಾ ಯೋಜನೆಗಳನ್ನು ಒಳಗೊಂಡು ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದರೂ ಅದನ್ನು ಗ್ರಹಿಸಲಾರದ ಪಾಟೀಲರು ಸಚಿವ ಸ್ಥಾನಕ್ಕಾಗಿ ಉತ್ತರ ಕರ್ನಾಟಕದ ಅಭಿವೃದ್ದಿಯ ಮುಸುಕು ಹೊದ್ದುಕೊಂಡು ಮಾತನಾಡುತ್ತಿರುವುದು ನಿಚ್ಚಳವಾಗಿ ಗೋಚರವಾಗುತ್ತಿದೆ.
ಎಂ.ಬಿ ಪಾಟೀಲ್ ನೀರಾವರಿ ಸಚಿವರಾಗಿ  ಅತ್ಯಂತ ಶ್ರದ್ಧೆಯಿಂದ ಉತ್ತರದ ಜಿಲ್ಲೆಗಳ ಜಮೀನುಗಳಿಗೆ ಕಾಲುವೆ ತೋಡಿ ನೀರು ಹರಿಸಿರುವುದು ಯಾಕೆ ‘ಅಭಿವೃದ್ದಿಯ ನ್ಯಾಯ’ ಎಂದು ಹಚ್. ಕೆ ಪಾಟೀಲರಿಗೆ ಕಾಣುತ್ತಿಲ್ಲ.! ಹಿರಿತನ ಎಂಬುದು ಈ ಮಟ್ಟಿಗೆ ಸ್ವಾರ್ಥಕ್ಕಿಳಿದರೆ ಅದು ತನ್ನ ಭಾಗದ ಜನಸಮುದಾಯಕ್ಕೆ ಬಗೆದ ವಿದ್ರೋಹ ಮಾತ್ರ ಆಗಬಲ್ಲದು.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಬೆನ್ನಲ್ಲೇ ಅವರ ವಿರುದ್ಧ ಅನುದಾನ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯದ ಕೂಗು ಎದ್ದಿದೆ. ಮತ್ತೂ  ಎಬ್ಬಿಸಲಾಗುತ್ತಿದೆ. ಎಂದಿನಂತೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಬಜೆಟ್ ಜೆಡಿಎಸ್ ಪ್ರಾಬಲ್ಯದ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಆಕ್ಷೇಪಣೆ, ಆಕ್ರೋಶಗಳು, ಪೊಲಿಟಿಕಲ್ ಸ್ಟೇಟ್ಮೆಂಟ್ ಗಳು ಹರಿದಾಡುತ್ತಿವೆ.

ಒಂದು ನಾಗರಿಕ ಸರ್ಕಾರದ ಬಜೆಟ್ ರಾಜ್ಯದ ಎಲ್ಲಾ ಕೋನಗಳಲ್ಲೂ ಸಮತೋಲನವಾಗಿ ಇರಬೇಕಾದದ್ದು ನ್ಯಾಯವೇ. ಅದು ರಾಜಧರ್ಮ ಕೂಡ. ಹಾಗೊಮ್ಮೆ ಬಜೆಟ್ ಅದು ಪಕ್ಷಪಾತಿಯಾಗಿದ್ದೇ ಅದರೆ ಅದನ್ನು ಖಂಡಿಸಬೇಕಾದದ್ದೇ. ಹಾಗೆ ನೋಡಿದರೆ ಎಲ್ಲ ಮುಖ್ಯಮಂತ್ರಿಗಳ ಕಾಲದಲ್ಲೂ ತಮ್ಮ ತಮ್ಮ ಜಿಲ್ಲೆಗಳಿಗೆ ಆದ್ಯತೆ ನೀಡಿಕೊಂಡೆ ಬಂದಿದ್ದಾರೆ.

ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ, ಆ ನಂತರ ಮುಖ್ಯಮಂತ್ರಿಯಾದ ಕಾಲವಂತೂ ಅವರ ತವರು ಜಿಲ್ಲೆ ಶಿವಮೊಗ್ಗಕ್ಕೆ ಶುಕ್ರ ದೆಸೆಯೇ ಆಗಿತ್ತು. ನಾನು ಇದೇ ಜಿಲ್ಲೆಯವನಾಗಿದ್ದರಿಂದ ಶಿವಮೊಗ್ಗ ಜಿಲ್ಲೆಗೆ ಭರಪೂರ ಹಣ ತಂದು ಅಭಿವೃದ್ದಿ ಮಾಡಿದ ಯಡಿಯೂರಪ್ಪ ಅವರ ಬಗ್ಗೆ ಮೆಚ್ಚುಗೆಯ ಅಭಿಮಾನದ ಸ್ವಾರ್ಥವೂ ನನಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ  ಬಹುಶಃ ಕಳೆದ ೪೦ ವರ್ಷಗಳಲ್ಲಿ ಕಾಣದ ಅಭಿವೃದ್ದಿ ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ಕೇವಲ ೪೪ ತಿಂಗಳಲ್ಲಿ ಕಂಡಿತ್ತು. ಯಡಿಯೂರಪ್ಪ ಅವರು ಮಂಡಿಸಿದ ಪ್ರತಿ ಬಜೆಟ್ ನಲ್ಲೂ ಶಿವಮೊಗ್ಗ ಜಿಲ್ಲೆಯದ್ದು ಸಿಂಹಪಾಲು. ಅವತ್ತು ಕೂಡ ಪ್ರಾದೇಶಿಕ ಅಸಮಾನತೆಯ ಕೂಗು ಕೇಳಿ ಬಂದಿತ್ತು. ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ತಮಗೆ ಹೆಚ್ಚಿನ ಬಲ ಕೊಟ್ಟ ಜಿಲ್ಲೆಗಳಿಗೆ ಅವರೇ ಹೇಳಿದಂತೆ ಒಂದಿನ್ನೂರು ಕೋ.ರೂ ಗಳನ್ನು ಹೆಚ್ಚಿಗೆ ಕೊಟ್ಟಿರಬಹುದು. ಆದರೆ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದಾಗಿ ಘೋಷಿಸಿರುವಾಗ ಪ್ರಾದೇಶಿಕ ಅಸಮತೋಲನ , ಅನ್ಯಾಯದ ಮಾತೆಲ್ಲಿ ಬಂದಿದೆ? ಪ್ರಾದೇಶಿಕ ಅಸಮಾನತೆ ನೆಪದಲ್ಲಿ ಈಗ ನಡೆಯುತ್ತಿರುವುದು ಕೇವಲ ರಾಜಕೀಯ ವಿರೋಧದ ಹಗೆತನವಷ್ಟೆ.

ಎಸ್.ಆರ್. ಕಂಠಿ, ವಿರೇಂದ್ರ ಪಾಟೀಲ್, ಎಸ್.ಆರ್ ಬೊಮ್ಮಾಯಿ, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆಯವರಂತ ಉತ್ತರ ಕರ್ನಾಟಕದ ಘಟಾನುಘಟಿ ನಾಯಕರುಗಳು  ರಾಜ್ಯವನ್ನಾಳಿದರೂ ಉತ್ತರ ಕರ್ನಾಟಕದ ಅಭಿವೃದ್ದಿಯ ಕೂಗು ಇನ್ನೂ ಜೀವಂತವಿದೆ ಎನ್ನುವುದಾದರೆ ಇದನ್ನು ಉತ್ತರ ಕರ್ನಾಟಕದ ಇವತ್ತಿನ ನಾಯಕರುಗಳು ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ.

ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದ ವಿರೇಂದ್ರ ಪಾಟೀಲರು ನಂತರ  ನಡೆದ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ. ಇದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಅವರು ಹೇಳಿದ್ದು , ಚಿಂಚೋಳಿಯ ತನ್ನೂರಿಗೆ ಒಂದು ರಸ್ತೆ ಇಲ್ಲ ಎಂದ ಮೇಲೆ ಮತ ಯಾಕೆ ಹಾಕಬೇಕು ಎಂದು ಸಮರ್ಥಿಸಿಕೊಂಡಿದ್ದರು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರು ತನ್ನೂರಿಗೆ ಒಂದು ರಸ್ತೆಯನ್ನೂ ಮಾಡಿಕೊಳ್ಳಲಿಲ್ಲವೆಂದಾದರೆ ಅವರೊಬ್ಬ ಅಸಮರ್ಥ ಮುಖ್ಯಮಂತ್ರಿಯಲ್ಲವೆ? ಅವರಲ್ಲಿನ ಇಚ್ಛಾಶಕ್ತಿಯ ದಿವಾಳಿತನವಲ್ಲವೆ?

ಹುಬ್ಬಳಿ-ಧಾರವಾಡ ಅವಳಿನಗರಗಳನ್ನು ಒಂದು ಸುತ್ತು ಹಾಕಿ ಬನ್ನಿ, ಧೂಳು ಕುಡಿದು ದಮ್ಮು ಕಟ್ಟಿ ಆಸ್ಪತ್ರೆ ಸೇರುವುದು ಶತಃಸಿದ್ಧ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ  ಅವರ  ಜನಬದ್ದತೆ ಕೆಂಪು ಧೂಳಿನಂತೆ ಕಣ್ಣಿಗೆ ರಾಚುತ್ತದೆ. ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರು ಕರಾವಳಿಗೆ ಕೊಟ್ಟು ಉಡುಗೊರೆ ಏನು? ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕಡೆಗಣಿಸಲಾಗುತ್ತಿದೆ ಎಂದು ಕೂಗುವ ಉತ್ತರ ಕರ್ನಾಟಕದ ಈ ನಾಯಕರು ಆತ್ಮವಂಚನೆಯ ಕೊಳದಲ್ಲಿ ಈಜುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರಿಂದ ಉತ್ತರ ಭಾಗಕ್ಕೊಂದು  political perceptive ಬಂದಿತ್ತು. ಜಾತಿಯ ಬಲವೇ ಇಲ್ಲದ ಧರ್ಮಸಿಂಗ್ ತಮ್ಮ ಮಿತಿಯಲ್ಲೇ ಅಭಿವೃದ್ದಿಗೆ ದುಡಿದರು. ಅದರ ಪರಿಣಾಮ ಅರ‍್ಟಿಕಲ್ 371 ತಿದ್ದುಪಡಿಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಒಳಗೊಂಡವು. ಇದರಿಂದ ಸಾವಿರಾರು ಕೋಟಿ ರೂ.ಗಳು ಹರಿದು ಬರುತ್ತಿದೆ.

ದುರಂತವೆಂದರೆ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಉತ್ತರದ ನಾಯಕರುಗಳು ವಿಫಲರಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವೆಂಬುದು ರಾಜಕೀಯ ನಾಯಕರ ಅಸ್ತಿತ್ವದ ಅಸ್ತ್ರವಾಗಿದೆ.  ವಾಸ್ತವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ನೈಸರ್ಗಿಕ ಸಂಪತ್ತು. ಮತ್ತು ಈ ಭಾಗದ ಆಳರಸರು ಸಮಾಜಮುಖಿಯಾಗಿ ದುಡಿದಿದ್ದರಿಂದ ದಕ್ಷಿಣದ ಭಾಗ ಅಭಿವೃದ್ದಿಯಲ್ಲಿ ಮೇಲೆಂಬಂತೆ ಕಾಣಬಹುದು.

ಮೈಸೂರು ಒಡೆಯರು ಈ ಭಾಗದಲ್ಲಿ ತಂದ ಶೈಕ್ಷಣಿಕ ಸುಧಾರಣೆಗಳು, ಭೂಮಿಯ ಹಂಚಿಕೆ , ನಡೆದ ಜನಪರ ಹೋರಾಟಗಳು ಸಾಮಾಜಿಕ ಅರಿವನ್ನು ಹೆಚ್ಚಿಸಿದ ಪರಿಣಾಮ ತುಸು ಹೆಚ್ಚಂತೆ ಅಭಿವೃದ್ದಿ ಕಂಡಿರಬಹುದು, ಕೆ.ಆರ್.ಎಸ್ ನಂತಹ ನೀರಾವರಿ ಯೋಜನಗೆಳಿಗೆ ಹಿಂದಿನ ರಾಜಪ್ರಭುತ್ವಗಳೇ ಅಡಿಗಲ್ಲು ಹಾಕಿದ್ದು ಕೃಷಿ ಬದುಕಿಗೆ ಬಲ ನೀಡಿದ್ದವು. ಆದರೆ ಉತ್ತರದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ಯೂಡಲ್ ಪ್ರಭುತ್ವ, ಪಾಳೆಗಾರ-ಜಮೀನ್ದಾರಿ  ಪದ್ದತಿಗಳು ಇಂದಿಗೂ ಪಳೆಯುಳಿಕೆಗಳಂತೆ ಮೆರೆಯುತ್ತಿವೆ.

ಕರ್ನಾಟಕ ಏಕೀಕರಣದ ನಂತರ ಪ್ರಜಾತಂತ್ರವಾದಿಗಳಾಗಿ ಆಳಿದವರು ಉತ್ತರದ ಭೂಮಿಯನ್ನು ಹಸನು ಮಾಡಲು ಯಾಕೆ ಸಾಧ್ಯವಾಗಲಿಲ್ಲ. ಇನ್ನೆಷ್ಟು ವರ್ಷ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಂಬ ಘೋಷಣೆ ಕೂಗುತ್ತಾ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತೀರ? ಪ್ರಾದೇಶಿಕ ಸಮತೋಲನವೆಂಬುದು ರಾಜಕೀಯ ಹೇಳಿಕೆಗಳ ಸೋಗಿನಲ್ಲಿಲ್ಲ. ಬದ್ದತೆಯ ಪ್ರಾಮಾಣಿಕತೆಯಲ್ಲಿದೆ.

ಇಲ್ಲಿ ಮುಖ್ಯವಾಗಿ ಕಾಣಿಸುತ್ತಿರುವ ಸಂಗತಿಯೆಂದರೆ ರಾಜಕೀಯ ಅಸಹಿಷ್ಣುತೆಯೊಂದು ಘಟಸರ್ಪದಂತೆ ಹೆಡೆ ಎತ್ತಿ ತೂಗುತ್ತಿದೆ. ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚಿನ ಸ್ಥಾನ ಬಂದಿದೆ. ಆದರೆ ಬಹುಮತವಿಲ್ಲ. ರಾಜಕೀಯ ಸಾಧ್ಯತೆಯ ಒಳಗೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಇದು ಹೆಚ್ಚಿನ ಸ್ಥಾನಗಳನ್ನು ಪಡೆದ ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೀಗ ಬಳಸುತ್ತಿರುವ ಅಸ್ತ್ರವೇ ಉತ್ತರ -ದಕ್ಷಿಣದ ತಾರತಮ್ಯ ಕೂಗು. ಮತ್ತು ರೈತರ ಸಾಲ ಮನ್ನಾ ಎಂಬ ಮಾನವೀಯ ನೆಲೆಯ ನೆರವನ್ನು ಜಾತಿಯ ಸೋಂಕಿನಲ್ಲಿ ಅದ್ದಿ ತೆಗೆಯುತ್ತಿರುವುದು.

ರಾಜ್ಯದ ಸಮ್ಮಿಶ್ರ ಸರ್ಕಾರ ಕೊನೆಗೂ ರೈತರ ಸಾಲವನ್ನು ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ೨.೧೮ ಲಕ್ಷ ಕೋ.ರೂ.ಗಳ ರಾಜ್ಯದ ಬಜೆಟ್ ನಲ್ಲಿ ೩೪.೦೦೦ ಕೋ.ರೂ. ಗಳನ್ನು ಸಾಲಕ್ಕಾಗಿ ಮೀಸಲಿಡುವುದು ಸರ್ಕಾರ ನಡೆಸುವವರಿಗೆ ದೊಡ್ಡ ಆರ್ಥಿಕ ಸವಾಲನ್ನೇ ಒಡ್ಡುತ್ತದೆ. ಚುನಾವಣಾ ಸಂದರ್ಭದಲ್ಲಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬದ್ದತೆಯನ್ನು ತೋರಿದ್ದಾರೆ. ಎದುರಾಗಬಹುದಾದ ಆರ್ಥಿಕ ಸವಾಲನ್ನು ಎದುರುಗೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಹಾಗೆ ನೋಡಿದರೆ ಚುನಾವಣೆ ಕಾಲಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದವು.

ಸಾಲಮನ್ನಾದ ಜಾತಿವಾರು ಮತ್ತು ಧರ್ಮವಾರು, ಪ್ರಾದೇಶಿಕವಾರು ಫಲಾನುಭವಿಗಳು ಯಾರ‍್ಯಾರು ಎಂಬ ಕೋಷ್ಠಕ(?)ವೊಂದು ಸೋಷಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದೆ. ಕೆಲವು ನ್ಯೂಸ್ ಚಾನಲ್‌ಗಳಂತೂ ಅದನ್ನು ಮುಂದಿಟ್ಟುಕೊಂಡು ಲಿಂಗಾಯಿತ, ಒಕ್ಕಲಿಗ ಮಾದಿಗ, ಕುರುಬ ಮುಸ್ಲಿಂ ಎಂದು ರೈತರನ್ನು ಹಂಚಿಕೊಂಡು ಸಮುದಾಯ ಸೀಳುವ ಕೆಲಸಗಳಿಗೆ ಮುಂದಾಗಿವೆ.

ಉತ್ತರ ಕರ್ನಾಟಕ ಶೇ.೧೫.೩, ಕರಾವಳಿ ಶೇ. ೨.೯, ಮಲೆನಾಡು ಶೇ.೪.೧, ದಂತೆ ರೈತರಿಗೆ ಸಾಲ ಮನ್ನಾದ ಫಲ ದಕ್ಕಿದೆ ಎಂಬಂತೆ ಪ್ರಾದೇಶಿಕವಾರು ಗುರುತಿಸಿದ್ದರೆ,  ಇನ್ನೂ ಜಾತಿವಾರು ರೈತರುಗಳು ಸಾಲಮನ್ನಾದ ಫಲಾನುಭವಿಗಳಾಗಿರುವ ಪ್ರಮಾಣವೆಂದರೆ ಒಕ್ಕಲಿಗ ಜಾತಿಯ ರೈತರು  ಶೇ. ೩೨  ಲಾಭವನ್ನು ಪಡೆದಿದ್ದು, ಸಾಲಮನ್ನಾದ ಸಿಂಹಪಾಲು ಒಕ್ಕಲಿಗರಿಗಾಗಿದೆ. ಲಿಂಗಾಯಿತ ರೈತರಿಗೆ ಶೇ. ೧೦.೯, ಆದಿ ಕರ್ನಾಟಕ ಜಾತಿಗೆ ಶೇ.೧೧.೯ ಹೀಗೆ ಜಾತಿವಾರು ಸಾಲಮನ್ನಾದ ವಿವರವನ್ನು ಆ ಕೋಷ್ಟಕ ತೋರುತ್ತಿದ್ದು, ರೈತರನ್ನು ಜಾತಿಯ ಆಧಾರದ ಮೇಲೆ ಪಾಲು ಮಾಡಿಕೊಂಡು ಸರ್ಕಾರದ ಬದ್ದತೆಯನ್ನು ಜಾತಿಯ ಸೋಂಕಿನಲ್ಲಿ ತೊಳೆದು ಹಾಕುವ ವಿಕೃತ ಕೆಲಸವೊಂದು ನಡೆದಿದೆ.

ರೈತ ಸಂಘಟನೆಯಲ್ಲಿ ಜಾತಿ ಕೇಳಿದವನನ್ನು ಒದ್ದು ಹೊರ ಹಾಕಿ ಎನ್ನುತ್ತಿದ್ದ ಪ್ರೊ ನಂಜುಂಡಸ್ವಾಮಿ ಅವರು  ಇವತ್ತು ಬದುಕಿದ್ದಿದ್ದರೆ  ಈ ಕೋಷ್ಟಕವನ್ನು ತಂದ ‘ಅವಿವೇಕಿ’ಗಳನ್ನು , ಅದನ್ನೇ ಇಟ್ಟುಕೊಂಡು  ಆಗಬಾರದ್ದು ಆಗಿಹೋಗಿದೆ ಎಂಬಂತೆ ಅರಚಾಡುತ್ತಿರುವ  ಸಂವೇದನೆಯನ್ನೆ ಕಳೆದುಕೊಂಡ ಮಾಧ್ಯಮ ಪ್ರಭೂತಿಗಳನ್ನು ಕಂಬಕ್ಕೆ ಕಟ್ಟಿ ಬಾರುಗೋಲಿನಿಂದ ಬಾರಿಸಿ ಎಂದು ಕರೆ ನೀಡುತ್ತಿದ್ದರು.

ಜಾತಿ ವ್ಯವಸ್ಥೆಯಲ್ಲಿ ರೈತನೂ ಯಾವುದಾದರೂ ಒಂದು ಜಾತಿಯಲ್ಲಿ ಹುಟ್ಟಿರುತ್ತಾನೆ. ಆದರೆ ಆತ ಎಂದೆಂದಿಗೂ ಜಾತ್ಯಾತೀತನಾಗಿಯೇ ನಿಂತಿದ್ದಾನೆ. ಆತನಿಗೆ ಸಾಲ ಕೊಡುವ ಸಂಸ್ಥೆಗಳು ಜಾತಿ ಕೇಳುವುದಿಲ್ಲ. ಸಣ್ಣರೈತ, ದೊಡ್ಡ ರೈತ,  ಬೆಳೆ ಸಾಲ. ಪಂಪ್ ಸೆಟ್ ಸಾಲ. ಕೊಳವೆ ಬಾವಿ ಸಾಲ. ಟ್ರ್ಯಾಕ್ಟರ್ ಸಾಲ.. ಇತ್ಯಾದಿ ವೃತ್ತಿ ಆಧಾರಿತ ಭಾಗಗಳಿಂದ ಗುರುತಿಸಲಾಗುತ್ತದೆಯೇ ವಿನಃ ಲಿಂಗಾಯಿತ ರೈತ, ಒಕ್ಕಲಿಗ ರೈತ, ಮಾದಿಗ ರೈತ, ಕುರುಬ ರೈತ ಅಂತ ಗುರುತಿಸುವುದಿಲ್ಲ.

ಒಕ್ಕಲುತನ ವೆಂದರೆ ಒಕ್ಕಲಿಗ ಜಾತಿಯಲ್ಲ. ಅದೊಂದು ರೈತಾಪಿ ಬದುಕು. ಇಂತಹ ಸಾಮಾನ್ಯ ಸಂಗತಿಯೂ ಅರಿವಿಲ್ಲದ ಅವಿವೇಕಿಗಳು ಸಾಲಮನ್ನಾ ದ ಜಾತಿವಾರು ಫಲಾನುಭವಿಗಳ ಪಟ್ಟಿಯನ್ನು ಹುಟ್ಟುಹಾಕಿರುವುದರ ಹಿಂದೆ ಜನಾಂಗೀಯ ದ್ವೇಷವನ್ನು  ಪ್ರಚೋದಿಸುವ ರಾಜಕೀಯ ಸಂಚು ಅಲ್ಲದೆ ಬೇರೇನು ಇರಲು ಸಾಧ್ಯ?

ಅದೇನೆ ಇರಲಿ,  ನನ್ನ ಬೈಕಿಗೆ ಹಾಕುವ ಪೆಟ್ರೋಲ್ ರೇಟು ಜಾಸ್ತಿಯಾದರೂ ಪರವಾಗಿಲ್ಲ. ಖುಷಿಯಿಂದ ಕೊಡುತ್ತೇನೆ.   ಅನ್ನದಾತನ  ಋಣ ಸಂದಾಯಕ್ಕೆ ಕೈ ಜೋಡಿಸಿದ ಸಮಾಧಾನ ನನಗಿದೆ. ಒಕ್ಕಲಮಕ್ಕಳ ಹೊಟ್ಟೆ ತಣ್ಣಗಿರಲಿ….

2 Responses

  1. ಶ್ರೀರಂಗ ಯಲಹಂಕ says:

    ಮಾಧ್ಯಮದ ಪ್ರಭೂತಿಗಳನ್ನು ಕಂಬಕ್ಕೆ ಕಟ್ಟಿ ಬಾರುಗೋಲಿನಿಂದ ಬಾರಿಸಿ ಎಂದು ಕರೆ ಕೊಡುವುದು ಯಾವ ಪ್ರೊಫೆಸರ್ ಗೂ ಅಷ್ಟು ಸುಲಭವಲ್ಲ. ಇಂದು ನಮ್ಮ ಕೆಲವು ಬುದ್ಧಿಜೀವಿಗಳನ್ನು ಪ್ರೀತಿಸುವ ಅವರ ಪ್ರಿಯ ಶಿಷ್ಯರಿಗೆ ‘……ಅವರು ಈಗ ಇರಬೇಕಿತ್ತು’, ‘…..ಇವರು ಈಗ ಬದುಕಿರಬೇಕಿತ್ತು’ ಎಂದು ಹಳಹಳಿಸುವ ಒಂದು ಮೇನಿಯಾ ಆವರಿಸಿಕೊಂಡಿದೆ. ಅದರಿಂದ ಅವರುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸುವೆ.

  2. ರಘುನಾಥ says:

    ವಸ್ತುನಿಷ್ಠ ಬರಹ ಅಭಿನಂದನ

Leave a Reply

%d bloggers like this: