ಗೀತಾ ಬುಕ್ ಹೌಸ್ ಪಿಗ್ಗಿ ಬಿದ್ದದ್ದು..

ಎಂ ಎನ್ ವಿಜಯೇಂದ್ರ 
ಪ್ರಜಾವಾಣಿಯ ‘ಮುಕ್ತಚಂದ’ದಲ್ಲಿ ‘ಅಕ್ಷರ ಪಯಣದ ಮೊದಲ ನೆನಪು’ ಲೇಖನದಲ್ಲಿ ನಮ್ಮ ನಡುವಣ ಕ್ರಾಂತಿಕಾರಿ ಕವಿ ಡಾ. ಸಿದ್ಧಲಿಂಗಯ್ಯ ತಮ್ಮ ಮೊದಲ ಕವನ ಸಂಕಲನ ‘ಹೊಲೆಮಾದಿಗರ ಹಾಡು’ ಪ್ರಕಟಗೊಂಡು ಕೆಲವೇ ದಿನಗಳಲ್ಲಿ ಒಂದು ಸಾವಿರ ಪ್ರತಿ ಮಾರಾಟವಾದ ಬಗ್ಗೆ ಹೇಳಿದ್ದಾರೆ.
ನಾನು ಆ ಸಮಯದಲ್ಲಿ ಅವೆನ್ಯೂ ರಸ್ತೆಯಲ್ಲಿ ಟೈಪಿಸುತ್ತಾ ಈ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದೆ. ಸಿದ್ದಲಿಂಗಯ್ಯನವರ ಪುಸ್ತಕ ಹೊರಬಂದ ಮೇಲೆ ಅದನ್ನುಮಾರುವ ಕೆಲಸವನ್ನು ನಾನು ಸೇರಿದಂತೆ ಜನ್ನಿ, ಪಟ್ಟಾಭಿ ಇತ್ಯಾದಿ ಗೆಳೆಯರು ಸ್ವಯಂ ಖುಷಿಯಿಂದ ಒಪ್ಪಿಕೊಂಡಿದ್ದೆವು.
ಅಗ ಬೆಂಗಳೂರಿನಲ್ಲಿ ಇದ್ದದ್ದು ಮೂರೂ ಮತ್ತೊಂದು ಪುಸ್ತಕದ ಅಂಗಡಿಗಳು. ಮೆಜಸ್ಟಿಕ್ ನಲ್ಲಿ ನವಕರ್ನಾಟಕ, ಮಹಾತ್ಮಗಾಂಧಿ ರಸ್ತೆಯ ಎರಡು ಪ್ರತಿಷ್ಟಿತ ಬುಕ್ ಷಾಪ್ ಗಳನ್ನು ಬಿಟ್ಟರೆ ಬಳೆಪೇಟೆ ವೃತ್ತದಲ್ಲಿದ್ದ ಗೀತಾ ಬುಕ್ ಹೌಸ್.
ಉಳಿದ ಪುಸ್ತಕಮಾರಾಟ ಮಳಿಗೆಗಳಲ್ಲಿ ಸಿದ್ದಲಿಂಗಯ್ಯನ ಪುಸ್ತಕವನ್ನು ಮಾರಾಟಕ್ಕೆ ಇಡುವುದು ಅಷ್ಟೇನು ಕಷ್ಟವಾಗಲಿಲ್ಲ. ಅದರೆ ಗೀತಾ ಬುಕ್ ಹೌಸ್ ನ ರಾಮಚಂದ್ರಯ್ಯ ಶೆಟ್ಟರು ಮಾತ್ರ ಪುಸ್ತಕದ ಟೈಟಲ್ ಕಾರಣವಾಗಿ ತಮ್ಮ ಮಳಿಗೆಯಲ್ಲಿ ಪುಸ್ತಕ ಇಟ್ಟು ಮಾರಲು ನಿರಾಕರಿಸಿದರು.
ಅವರ ಈ ನಿಲುವನ್ನು ಖಂಡಿಸಿ ಅವರಿಗೆ ಒಂದು ಪಾಠ ಕಲಿಸಬೇಕು. ಪುಸ್ತಕವೂ ಮಾರಾಟವಾಗಬೇಕು. ಆ ರೀತಿಯಲ್ಲಿ ಒಂದು ಉಪಾಯ ಹುಡುಕಿದೆವು.
ಮರುದಿನದಿಂದಲೆ  ಗೀತಾ ಬುಕ್ ಹೌಸ್ ಗೆ ನಾವು ಪುಸ್ತಕ ಕೊಳ್ಳುವವರ ನೆಪದಲ್ಲಿ ಒಳಹೋಗುವುದು, ಲೋಕಾಭಿರಾಮವಾಗಿ ಪುಸ್ತಕಗಳನ್ನು ನೋಡುತ್ತ “ಸಿದ್ದಲಿಂಗಯ್ಯನವರ ಹೊಸ ಪುಸ್ತಕ ಹೊಲೆಮಾದಿಗರ ಹಾಡು ಇಲ್ಲವೇನ್ರಿ?” ಎಂದು ಕೇಳುವುದು. ಅವರು ನಕಾರವಾಗಿ ಉತ್ತರಿಸಿದಾಗ ನಾವು ಆ ಪುಸ್ತಕದ ಬಗ್ಗೆ ವಾಚಾಮಗೊಚರ ಹೊಗಳಿ “ಇತರ ಅಂಗಡಿಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಸೇಲಾಗುತ್ತಿರುವ ಇಂತಹ ಪುಸ್ತಕ ಮಾರಲು ಇಟ್ಟುಕೊಳ್ಳದೆ ಎಂತಹ ಲಾಸು ಮಾಡಿಕೊಳ್ಳುತಿದ್ದೀರಿ” ಎಂದು ಮರುಕ ತೋರಿಸಿ ಹೊರಬರುವುದು.
ಇಡೀ ದಿನ ಇದೇ ನಾಟಕವನ್ನು ನಾವುಗಳು  ಗುಂಪಾಗಿ, ಒಂಟೊಂಟಿಯಾಗಿ ಯಶಸ್ವಿಯಾಗಿ ಪ್ರದರ್ಶಿಸಿ ಈ ಪುಸ್ತಕವನ್ನು ಮಾರಾಟಕ್ಕೆ ತೆಗೆದುಕೊಳ್ಳದೆ ತಾನು ವ್ಯವಹಾರಿಕವಾಗಿಯೂ ಅತಿ ದೊಡ್ಡದಾದ ತಪ್ಪು ಮಾಡಿದೆ ಎಂಬ ಹತಾಷ ಭಾವನೆ ಮಾಲೀಕರಲ್ಲಿ ತುಂಬುವಲ್ಲಿ ಯಶಸ್ವಿಯಾದೆವು.
ಒಂದೆರಡು ದಿನಗಳ ಕಾಲ ಈ ಪ್ರಹಸನ ಮುಗಿದ ನಂತರ ಪುಸ್ತಕವನ್ನು ಮತ್ತೊಮ್ಮೆ ಗೀತಾ ಬುಕ್ ಹೌಸ್ ಗೆ ತೆಗೆದುಕೊಂಡು ಹೋದಾಗ ಅದೇ ಮಾಲಿಕರು ಅದನ್ನು ಮಹಾಪ್ರಸಾದವೆಂಬಂತೆ ಸ್ವೀಕರಿಸಿ ೫೦೦ ಪ್ರತಿಗಳನ್ನು ಪೂರ್ತ ಹಣ ಕೊಟ್ಟು ಪಡೆದರು.
ಪುಸ್ತಕ ಮಾರಾಟದ ಈ ಪ್ರಸಂಗದಲ್ಲಿ ಅಂದಿನ‌ ಖ್ಯಾತ ಸಾಹಿತಿಗಳು, ಸೆಂಟ್ರಲ್ ಕಾಲೇಜಿನ ಅಸಂಖ್ಯ ಸಿದ್ದಲಿಂಗಯ್ಯ ಅಬಿಮಾನಿಗಳು, SFI ಹುಡುಗರು ಹೀಗೆ ಯಾರ್ಯಾರು ಬಾಗಿಯಾಗಿದ್ದರು ಈಗ ನೆನಪಾಗುತ್ತಿಲ್ಲ. ಅದರೆ ಅದನ್ನು ಯಶಸ್ವಿಯಾಗಿ ನಡೆಸಿದ ನೆನಪು ಅಚ್ಚಳಿಯದೆ ಉಳಿದಿದೆ.
(ಮರೆತಮಾತು – ನಮ್ಮ ಈ ತಂತ್ರಗಾರಿಕೆಯ ಪಲವಾಗಿ ಗೀತಾ ಬುಕ್ ಹೌಸ್ ನ ಒಳಸೇರಿದ್ದ ಪುಸ್ತಕಗಳು ಮಾತ್ರ ಸುಮಾರು ಕಾಲ ಮಾರಾಟವಾಗದೆ ಅಲ್ಲಿಯೇ ಉಳಿದಿತ್ತು ಎಂಬುದನ್ನೂ, ಒಬ್ಬ ಅಮಾಯಕ ಸಾಹಿತ್ಯಪ್ರೇಮಿ ಅಂಗಡಿ ಮಾಲೀಕನಿಗೆ ನಾವು ಮಂಕುಬೂದಿ ಎರಚಿದ್ದೆವು ಎಂಬುದನ್ನು ಇಂದು ನೆನಸಿಕೊಳ್ಳಲು ಒಂದಿಷ್ಟು ಕಸಿವಿಸಿಯಾಗುತ್ತಿದೆ)

2 Responses

  1. Sumangala says:

    ಒಹ್.. ಓದಿ ನಿಜಕ್ಕೂನಗು ಬಂದಿತು…! ಪಾಪದ ಮಾಲೀಕರಿಗೆ ಹಿಂಗೆ ಪುಸ್ತಕದ ಚಳ್ಳೆ ಹಣ್ಣು ತಿನ್ನಿಸುವುದೇ!!!
    ಆದರೂ ತರಲೆಗಳಿಗೆ ಜಯವಾಗಲಿ ಎನ್ನದೆ ಇರಲು ಸಾಧ್ಯವೇ??

  2. ಶ್ರೀರಂಗ ಯಲಹಂಕ says:

    ಬೆಂಗಳೂರಿನ ಬಳೆಪೇಟೆಯಲ್ಲಿ ಇದ್ದ ಪುಸ್ತಕದ ಅಂಗಡಿಯ ಹೆಸರು ಗೀತಾ ಬುಕ್ ಏಜೆನ್ಸಿಸ್. ಮೈಸೂರಿನ ನ್ಯೂಸ್ಟ್ಯಾಚ್ಯು ಸರ್ಕಲ್ ನಲ್ಲಿ ಇದ್ದದ್ದು ಗೀತಾ ಬುಕ್ ಹೌಸ್.

Leave a Reply

%d bloggers like this: