ಎ ಟೇಲ್ ಆಫ್ ಟು ವುಮೆನ್..

ಬಾಳು ನರಕ ಅನ್ನೋನು‌ ತಿರುಕ ಅಂದ್ರು ಗೆಳೆಯ ತಿಳಿದವರು
ನರಕದೊಳಗೆ ಸ್ವರ್ಗಾನೇ ಕಟ್ಟಿ ತೋರಿಸಿದರು ನಗುವವರು

– ಹಂಸಲೇಖಾ

***

ಪ್ರಪಂಚವೇ ಒಂದು ಸ್ವೀಟಿನಂಗಡಿ ನಾನು ನೀವು ನೋಣದಂತೆ
ಮುಖದಲ್ಲೊಂದು ಸ್ಮೈಲು ಇರಲಿ ಕಾಣಬೇಡಿ ಹೆಣದಂತೆ

– ಯೋಗರಾಜ್ ಭಟ್

———————————————————————-

ಪ್ರೀತಿ ಮಾಡು ತಪ್ಪೇನಿಲ್ಲಾ
ಅಂದರಿಲ್ಲಿ ಅರ್ಥ ಇಲ್ಲಾ
ಯಾರಾ ಮಾತಾ ಕೇಳಿ ಪ್ರೀತಿ ಮಾಡಿದೆ

– ಹಂಸಲೇಖಾ

***

ಕೆಲ್ಸಕ್ ಹೋದರೆ ಸಂಬ್ಳ ಕೊಡ್ತರೆ
ಬ್ಯಾಂಕಿಗ್ ಹೋದರೆ ಸಾಲ ಕೊಡ್ತರೆ
ಪ್ರೀತಿಯೊಳಗಡೆ ಏನು ಸಿಗ್ತದೆ ಠಢಠಣ್ ಠಢಣ್

– ಯೋಗರಾಜ್ ಭಟ್

———————————————————————

ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವಾಸಂತಿ
ಕಹಿಯನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ
ಓರೆಗಳನ್ನು‌ ಕೋರೆಗಳನ್ನು ಮನ್ನಿಸಿ ಮುದ್ದಿಸಿ
ಎಲ್ಲಾ ಸುಂದರವನ್ನೂ ನೋಡೋ ಒಳಗಣ್ಣೇ ಪ್ರೀತಿ
ನಿದಿರೆಯಾದರೂ ಅಲ್ಲೂ ಇಲ್ಲಾ
ಪ್ರೀತಿ ಇಲ್ಲದ ಅಣುಕಣವಿಲ್ಲಾ

– ಹಂಸಲೇಖಾ

***

ಜೀವ ಕಲೆವಾಮೃತಕೆ
ಒಲವೆಂದು ಹೆಸರಿಡಬಹುದೇ
ಪ್ರಾಣ ಉಳಿಸೋ ಖಾಯಿಲೆಗೆ
ಪ್ರೀತಿ ಎಂದೆನ್ನಬಹುದೇ
ಹೊಂಗನಸಾ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣ ಹನಿ ಸುಮ್ಮನೆ ಒಳಗೆ
ಅವಳನ್ನೇ ಜಪಿಸುವುದೇ ಒಲವೇ

– ಯೋಗರಾಜ್ ಭಟ್

———————————————————————–

ಹೂವೂ ಎಂದು ತಾನಾಗೇ ಅರಳಬೇಕಮ್ಮ
ಪ್ರೀತಿ ಎಂದು ತಾನಾಗೇ ಹುಟ್ಟಬೇಕಮ್ಮ

– ಹಂಸಲೇಖಾ

***

ಹಾವುಹಲ್ಲಿ ಮಂಡ್ರಗಪ್ಪೆ ಜಲ್ದಿ ಪ್ರೀತಿ ಮಾಡ್ತವೆ
ಮನ್ಸಾ ಮಾತ್ರ ಯಾಕೆ ಹಿಂಗೆ ಎಲ್ಲಾ ಲೇಟು ಮಾಡ್ತನೆ

– ಯೋಗರಾಜ್ ಭಟ್

———————————————————————

ಹೀಗೆ ಹಂಸಲೇಖಾ ಹಾಡುಗಳನ್ನು ಗುನುಗುವಾಗ ಥಟ್ ಎಂದು ಯೋಗರಾಜ್ ಭಟ್ಟರ ಸಾಲುಗಳು ನೆನಪಾದವು. ಹಂಸಲೇಖಾ ಗಂಭೀರವಾಗಿ ಹೇಳಲು ಬಯಸಿದ ಭಾವರ್ಥದ ಸಾಲುಗಳನ್ನೇ ಭಟ್ಟರು ಅವರ ವ್ಯಕ್ತಿತ್ವ ಸಹಜವಾದ ವ್ಯಂಗ್ಯದ ಛಂದೋಬದ್ಧ ಲಯದಲ್ಲಿ ಹೇಳುತ್ತಿದ್ದಾರೆ ಎನಿಸಿತು. ತತ್ಕ್ಷಣವೇ ಭಟ್ಟರ ಹಾಡುಗಳನ್ನ ಕೂತು ಒಂದು ಕಡೆ ಗುಡ್ಡೆ ಹಾಕಿ ಹಂಸಲೇಖಾರ ಹಾಡುಗಳ ಭಾವರ್ಥದೊಂದಿಗೆ ತಾಳೆಹಾಕುತ್ತ ಕೂತುಬಿಟ್ಟೆ. ಹಸುವನ್ನು ಕಂಡ ಒಡಲಾರಿದ ಕರುವಿನಂತೆ ಇಬ್ಬರ ಹಾಡುಗಳು ಒಂದೇ ಭಾವಾರ್ಥದೊಂದಿಗೆ ಕೆನೆಯಲು ಶುರುವಿಟ್ಟುಕೊಂಡವು.

ಪ್ರೀತಿ, ನೆನಪು, ಹತಾಶೆ, ದುಃಖ, ಬದುಕು, ಸಂಬಂಧ ಹೀಗೇ ಯಾವುದೋ ರೇಖೆಯ ಹೊರಗಿನ ಅನನ್ಯ ವ್ಯಾಖ್ಯಾನ ಸೇರಿದಂತೆ ಎಲ್ಲವೂ ಭಿನ್ನ ದಾಟಿಯಲ್ಲಿ ವ್ಯಕ್ತವಾಗಿದ್ದವು. ಆದರೆ ಭಿನ್ನ ದಾಟಿಯ ಅವುಗಳು ಹೊಮ್ಮಿಸುತ್ತಿದ್ದ ಅರ್ಥಗಳು ಮಾತ್ರ ಒಂದೇ ಹಾದಿಯಲ್ಲಿ ಕೈ ಕೈ ಹಿಡಿದು ಮೊದಲ ದಿನ ಸ್ಕೂಲ್ ಗೆ  ನಡೆಯುವ ಪುಟಾಣಿ ಮಕ್ಕಳಂತೆ ಕಾಣುತ್ತಿದ್ದವು. ಯಾಕೋ ಹಂಸಲೇಖಾ ಮತ್ತು ಯೋಗರಾಜ್ ಭಟ್ಟರು ಈ ತಲೆಮಾರಿನ ಆಧುನಿಕ ರೂಪಕದಂತೆ ಗೋಚರಿಸಿಬಿಟ್ಟರು.

ಈ ಇಬ್ಬರ ನಡುವೆ ನಡುವೆ ದಶಕಗಳಷ್ಟು ಕಾಲಘಟ್ಟದ ಅಂತರವಿದೆ, ಆದರೆ ಅವರಿಬ್ಬರು ಹೇಳಲು ಪ್ರಯತ್ನಿಸುತ್ತಿರುವ ಪ್ರೀತಿ ಮತ್ತು ಜೀವನಪ್ರೀತಿ ಎರಡು ಒಂದೇ ತೆರನಾದವು ಎನ್ನುವ ಅನುಮಾನ ಗಟ್ಟಿಯಾಗುತ್ತೂಸಿಮಂಹಹ ಅವರಿಬ್ಬರಿಗಷ್ಟೇ ಅಲ್ಲ, ಜಗತ್ತಿನ ಯಾವ ಕವಿ, ಕತೆಗಾರ, ಕುಂಚವಿಡಿದಾಡಿಸುವ ಕಲಾವಿದ, ಗಾಯಕರಂತೆ ಅಸಂಖ್ಯಾತರೂ ಮಾತನಾಡುವುದು ಮತ್ತು ಮಾತನಾಡುವುದಕ್ಕೆ ಉಳಿಸಿಕೊಂಡಿರುವುದು ಪ್ರೀತಿ ಮತ್ತು ಜೀವನಪ್ರೀತಿ ಎರಡ‌ರ ಕುರಿತು ಮಾತ್ರ.

ಏಕೆಂದರೆ ಕಾಲ ಸರಿಯುತ್ತದೆ‌. ಪ್ರೀತಿ ಮತ್ತು ಜೀವನಪ್ರೀತಿ ಅದೇ ಕಾಲದೊಂದಿಗೆ ಮಾರ್ಪಾಡಾಗುತ್ತದೆಯೇ ವಿನಃ ಕಾಲಕ್ಕೆ ಎದರಿ ಕಾಲವಾಗುವುದಿಲ್ಲ. ಅದಕ್ಕೆ ಪ್ರೀತಿ ಮತ್ತು ಜೀವನಪ್ರೀತಿ ಸಾರ್ವಕಾಲಿಕ.

***

ಮೂರು ದಿನಗಳ ಹಿಂದೆ ಮೆಟ್ರೋದಲ್ಲಿ ವೈಧವ್ಯ ಸಿಕ್ಕಿದ್ದಳು. ನನಗೆ ಮೆಟ್ರೋದಲ್ಲೇ ಪರಿಚಯವಾದ ಶಿರಸಿಯ ಹುಡುಗಿ ಈ ವೈಧವ್ಯ. ಅವಳು ಇಟಲಿ ಮೂಲದ ಐಟಿ ಕಂಪನಿಯಲ್ಲಿ ಮತ್ತು ನಾನು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುವುದರ ಹೊರತಾಗಿ ಇಬ್ಬರಿಗೂ ನಮ್ಮಿಬ್ಬರ ಕುರಿತ ಉಳಿದ ಯಾವ ವಯಕ್ತಿಕ ಗುರುತರವಾದ ಪರಿಚಯವು ಈವರೆಗೂ ಏರ್ಪಟ್ಟಿಲ್ಲ.

ಆದರೂ ಅದೊಂದು ಬಗೆಯ ಸಾಮ್ಯತೆಯ ಎಳೆ ಮಾತ್ರ ನಮ್ಮಿಬ್ಬರ ನಡುವೆ ಅಗೋಚರವಾಗಿ ತೂಗುತ್ತಲೆ ಇದೆ. ಅದೇ ಎಳೆಯ ಎರಡೂ ತುದಿಗಳಿಗೂ ನೇತುಬಿದ್ದವರಂತೆ ಇಬ್ಬರೂ ಜೀಕುತ್ತಲೇ ಇದ್ದೇವೆ. ಒಂಟಿತನವನ್ನ ದಂಡಿಯಾಗಿ ಜೊತೆಗೂಡಿಸುವ ಬೆಂಗಳೂರಿನಂತ ಮಹಾನಗರಗಳಲ್ಲಿ ಅನಿವಾರ್ಯವಾಗಿ ಉಳಿಸಿಕೊಳ್ಳಲಾರದ ಗುಟ್ಟುಗಳು ಆಗಾಗ ನಮ್ಮ ಸ್ವಪ್ರಜ್ಞೆಯ ಹೊರತಾಗಿಯೂ ಕೈ ಜಾರುತ್ತಿರುತ್ತವೆ.

ಹೀಗೆ ಯಾರಿಗೂ ಹೇಳದೆ ಉಳಿಸಿಕೊಂಡಿರುವ ಗುಟ್ಟುಗಳನ್ನ ಅಪರೂಪಕ್ಕೆ ಎದುರಾಗಬಹುದಾದ ದಿವ್ಯ ಘಳಿಗೆಗಳಲ್ಲಿ ಪಿಸುನುಡಿದುಕೊಳ್ಳುವ ನಾವಿಬ್ಬರು ಅದೊಂದು ಅತೀತ ರೇಖೆಯ ಹೊರಗೆ ನಿಂತು ಎಲ್ಲವನ್ನ ಹಂಚಿಕೊಳ್ಳುವ ಕ್ರಮವನ್ನು ಅರಿವಿಲ್ಲದೆ ಕಾಯ್ದಿಟ್ಟುಕೊಂಡಿದ್ದೇವೆ.

ಕೆಲವೊಮ್ಮೆ ತೀರಾ ಖಾಸಗಿಯಾದ ವಿಚಾರವನ್ನೂ ಅಚಾನಕ್ ಎನಿಸುವಂತೆ ಹಂಚಿಕೊಂಡಿದ್ದಕ್ಕೂ ಪುರಾವೆಗಳಿವೆ. ಆಫೀಸಿಗೆ ರಜಾ ಹಾಕಿ ಇಬ್ಬರೂ ಸಾಕು ಎನ್ನುವಷ್ಟು ಅದೇ ರಸ್ತೆಗಳಲ್ಲಿ ನಡೆದಿದ್ದೇವೆ. ನಮ್ಮ‌ ನಿಲ್ದಾಣ ದಾಟಿದ ನಂತರವೂ ಮೆಟ್ರೋದಲ್ಲೇ ಮೌನವಾಗಿ ಉಳಿದುಹೋಗಿದ್ದೇವೆ. ಹೀಗೆ ಅದು ಏನೇನೋ ಹೇಳತೀರದ ಹಳವಂಡಗಳು ಇಬ್ಬರದು. ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ಈಗಲೂ ಒಂದು ನಿರ್ಧಿಷ್ಠ ಹೆಸರನ್ನ ಗುರುತು ಮಾಡಿಟ್ಟುಕೊಂಡಿಲ್ಲ.  ಅದಕ್ಕೊಂದು ಹೆಸರಿನ ಅಗತ್ಯವಿದೆ ಎನ್ನುವ ಗೋಜಲು ಆವರಿಸಿಯೂ ಇಲ್ಲ‌. ಈ ತೀರಾ ಸಣ್ಣದಾದ ಸೃಷ್ಟಿಯಲ್ಲಿ ಅವಳು ಹುಡುಗಿ ನಾನು ಹುಡುಗ ಎನ್ನುವುದಷ್ಟೇ ನಂಬಿದ ಹುಂಬರಂತೆ ಆಗಾಗ ಎದುರಾಗಬಹುದಾದ ಘಳಿಗೆ ಅರ್ಪಿಸಿಕೊಂಡು ಉಳಿದುಹೋಗಿದ್ದೇವೆ.

ಮೂರು ದಿನಗಳ ಹಿಂದೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಎದುರಾದಾಗ ವೈಧವ್ಯಳ ಕಣ್ಣುಗಳು ಅತಿ ಎನ್ನುವಷ್ಟು ಕೆಂಪಾಗಿದ್ದವು. ಕಾಡಿಗೆಯೂ ಕಣ್ಣಿನ ತುದಿಯವರೆಗೂ ಜಾರಿ ಹರಡಿಕೊಂಡಿತ್ತು. ಎಂ.ಎನ್.ಸಿ ಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಅಳುವುದಿಲ್ಲ ಎನ್ನುವ ನನ್ನ ದಶಕಗಳಷ್ಟು ಹಳೆಯ ಸಹಜ ನಂಬಿಕೆಯನ್ನು ಆವತ್ತು ವೈಧವ್ಯ ಕ್ಷಣಾರ್ಧದಲ್ಲಿ ಚೂರಾಗಿಸಿದ್ದಳು.

ಸಾಮಾನ್ಯವಾಗೆ ಅವಳ ಒಡಲನ್ನ ಒಂದಿಷ್ಟು ಕೆದಕಿದೆ. ಮೂರನೇ ಕಿವಿಗೆ ಕಾದು ನಿಂತಿದ್ದವಳಂತೆ ಅವಳ ಒಳಗಿದ್ದ ಅಷ್ಟೂ ದುಗುಡಗಳನ್ನ ನನ್ನ ಕಿವಿಗಳಿಗೆ ವರ್ಗಾಯಿಸಿ ತಾನು ಹಗುರಾಗಲು ಯತ್ನಿಸಿದಳು.

ಆಗಿದ್ದು ಇಷ್ಟೇ. ವೈಧವ್ಯ ಯಾರನ್ನೋ ಒಂದಿಷ್ಟು ಕಾಲ ಇಷ್ಟಪಟ್ಟಿದ್ದಾಳೆ. ತನ್ನ ತ್ವರಿತಗತಿಯ ವೇಗಕ್ಕೆ, ಅವಳೇ ನಿರ್ಮಿಸಿಕೊಂಡಿರುವ ಚೌಕಟ್ಟಿನ‌ ಪರಿಧಿಯೊಳಗೆ ಬದುಕುವುದಕ್ಕೆ ಆ ಸಂಬಂಧ ಸತ್ವಭರಿತವಲ್ಲ ಎಂದು ಒಂದಿಷ್ಟು ತಿಂಗಳ ನಂತರ ಅನಿಸಿದೆ. ಹಾಗೊಂದು ಭಾವನೆ ಅವಳ ಎದೆಯಲ್ಲಿ ಟಿಸಿಲೊಡೆದ ಮರುಕ್ಷಣವೆ ಅಷ್ಟೇ ವೇಗವಾಗಿ ಅವಳ ಇಷ್ಟದ ಹುಡುಗನ ತೋಳ ತೆಕ್ಕೆಗಳಿಂದ ಕಳಚಿಕೊಳ್ಳಲು ಯತ್ನಿಸಿದ್ದಾಳೆ. ಬಹುತೇಕ ಕಳಚಿಕೊಂಡಿದ್ದಾಳೆ ಕೂಡ.

ಇದೆಲ್ಲವೂ ವೈಧವ್ಯಳ ನಿರ್ಧಾರವಷ್ಟೇ. ಅವಳಿಗೆ ಈಗಲೂ ಅವಳನ್ನ ಪ್ರೀತಿಸಿದ ಆ ಹುಡಗನ ನಿರ್ಧಾರ ಏನಿರಬಹುದು ಎಂದು ಕೇಳುವ ಆಸಕ್ತಿಯಾಗಲಿ ಅನಿವಾರ್ಯವಾಗಲಿ ಉಂಟಾದಂತೆ ಕಾಣಲಿಲ್ಲ. ಅದನ್ನು ಕೇಳುವ ಗೋಜಿಗೂ ಹೋಗಿಲ್ಲ. ಅವಳ ಹುಡುಗ ಈಗಲೂ ಗುಂಗಿ ಹುಳುವಿನಂತೆ ಇವಳ ಹಳೆಯ ಗುಂಗಿನಲ್ಲೇ ಉಳಿದುಹೋಗಿರಬಹುದಾ??

ನಾನು ಏನನ್ನೇ ಕೇಳಿದರೂ ಆ ಎಲ್ಲದಕ್ಕೂ ವೈಧವ್ಯಳ ಬಳಿ ಉತ್ತರಗಳ ಪೋಷಾಕನ್ನು ತೊಟ್ಟಿದ್ದ ಸಮರ್ಥನೆಯ ವಾಗ್ಭಾಣಗಳು ಸಿದ್ಧವಾಗಿದ್ದು ಅವಳ ಕಣ್ಣುಗಳಲ್ಲಿ ಡಾಳುಡಾಳಾಗಿ ಕಾಣಿಸಿತು.

ಅವಳ ಹುಡುಗ ಐಟಿ ಕಂಪನಿ ಉದ್ಯೋಗಿ. ತಿಂಗಳಿಗೆ ಅರವತ್ತು ಸಾವಿರ ಸಂಬಳ. ಆದರೆ ಅವನೀಗ ತನ್ನ ಕಂಪನಿಗೆ ಗುಡ್ ಬೈ ಹೇಳಿ ತನ್ನ ಆಸಕ್ತಿಯ ಕ್ಲೇ ಆರ್ಟ್ ಕೆಲಸ ಮಾಡ್ತೀನಿ ಎನ್ನುವ ಹಠಕ್ಕೆ ಬಿದ್ದಿದ್ದಾನೆ. ಅದರಲ್ಲೇ ಮಾಡಬಹುದಾದ ಸಾಧ್ಯತೆಗಳ ಹುಡುಕಾಟದಲ್ಲಿದ್ದಾನೆ.

ಮಲೆನಾಡಿನ ಯಾವುದೋ ಸಣ್ಣ ಊರಿನ ಮಧ್ಯಮ ವರ್ಗದ ಮನೆಯ ಹುಡುಗ ಅವನು. ಇಡೀ ಮನೆಯಲ್ಲಿ ದುಡಿಯುವ ಒಬ್ಬನೇ ಮಗ.‌ ಈಗ ಅರವತ್ತು ಸಾವಿರದಷ್ಟು ಸಂಬಳ ಕೈ ತಪ್ಪಿ ಹೋದರೆ?? ವೈಧವ್ಯಳನ್ನ ನಿಜಕ್ಕೂ ಕಾಡಿಸಿರುವುದು ಇದಷ್ಟೇ.

ಸಿಗುವ ಭಾನುವಾರದ ರಜಾ ದಿನದಲ್ಲೂ ಅವಳ‌ ಹುಡುಗ ಟೆರಸ್ ಮೇಲೆ ಮಣ್ಣು ಕಲಸಿಕೊಂಡು ವಿಚಿತ್ರಾಕಾರದ ಬೊಂಬೆಗಳನ್ನ ನಿರ್ಮಿಸಿ ಇವಳಿಗೆ ವಾಟ್ಸ್ ಆಪ್ ನಲ್ಲಿ ಫೋಟೋ ಕ್ಲಿಕ್ಕಿಸಿ ಕಳುಹಿಸುವುದು ರೇಜಿಗೆ ಎನಿಸಿದೆ. ಅವನು ಹೀಗೆ ಮಣ್ಣು ಕಲಸುವುದನ್ನೇ ಉದ್ಯೋಗವನ್ನಾಗಿಸಿಕೊಳ್ಳುವುದು ಇವಳಿಗೆ ಸುತಾರಂ ಇಷ್ಟವಾಗಿಲ್ಲ. ಸಾಲದಕ್ಕೆ ಜೀವ ಹೋಗುವಂತೆ ಹಚ್ಚಿಕೊಂಡಿದ್ದಾನೆ.‌ ಮುಂದೊಂದು ದಿನ ನಾವು ಅಂದುಕೊಂಡಂತೆ ಏನೂ ನಡೆಯದೇ ಹೋದರೆ? ಅವನು ನನ್ನನ್ನು ದೂರಬಹುದು! ಅವನು ಮತ್ತೊಂದು ದಿಕ್ಕಿಗೆ ಹೊರಳಿಕೊಳ್ಳಬಹುದು! ಈ ರಗಳೆಗಳೇಕೆ? ಇಬ್ಬರ ನಡುವಿನ ಕೊಂಡಿ ಕಳಚಿದರೆ ಈಗಲೇ ಕಳಚಿಹೋಗಲಿ. ನೋವು ಬಾಧಿಸಿದರೆ ಬಾಧಿಸಿಬಿಡಲಿ ಎನ್ನುವುದು ವೈಧವ್ಯಳ ಮತ್ತೊಂದು ತೀರ್ಮಾನ.

ಅವನು ಇನ್ನೂ ಗಟ್ಟಿಯಾಗಬೇಕು ಈಶಾನ್ಯ. ಐ ಮೀನ್ ಟು ಸೇ ಫಿನಾಶ್ಯಿಯಲಿ ಅವನು ಸೆಕ್ಯೂರ್ ಇಲ್ಲಾ ಕಣೋ. ಅದು ಅವನಿಗೂ ಮುಖ್ಯ. ಅವನು ಮಾಡುವ ಕ್ಲೇ ಆರ್ಟ್ ನನಗೆ ಓಕೆ ಆದರೆ ಮನೆಯವರಿಗೆ? ಎಂದಳು.

ಸೆಕ್ಯೂರಿಟಿ ಎಂದರೆ ಏನು?
ಸರಿ ಸೆಕ್ಯೂರಿಟಿ ಎಂದರೆ ಕೇವಲ ಫಿನಾಶ್ಯಿಯಲಿ ಎಂದು ನಿನ್ನ ತಲೆಗೆ ತುಂಬಿದವರು ಯಾರು? ಎಕನಾಮಿಕ್ ಸೆಕ್ಯೂರಿಟಿ ಎನ್ನುವುದರ ಹೊರತಾಗಿ ಬದುಕಿಗೆ ಮಾರಲ್ ಸೆಕ್ಯೂರಿಟಿ, ಎಮೋಷನಲ್ ಸೆಕ್ಯೂರಿಟಿ, ಫಿಶಿಕಲ್ ಸೆಕ್ಯೂರಿಟಿ, ಇಂಟೆಲೆಕ್ಚುಯಲ್ ಸೆಕ್ಯೂರಿಟಿಗಳಂತಹ ಇನ್ನೂ ಬೇಕಾದಷ್ಟು ಸೆಕ್ಯೂರಿಟಿಗಳಿವೆ. ಅದರ ಕುರಿತು ಈ ತಲೆಮಾರು ಯೋಚಿಸುವುದು ಯಾವಾಗ? ಇದೆಲ್ಲಕ್ಕೂ ಅಡಿಪಾಯವಾಗಿ ಫಿನಾಶ್ಯಿಯಲ್ ಸೆಕ್ಯೂರಿಟಿ ಇರಬೇಕು ಅಲ್ಲವಾ?

ಕೇಳಿದ್ದು ಇಷ್ಟೇ. ನಿನಗೆ ಮದುವೆಯಾಗಿದೆ ಎಂದುಕೊಳ್ಳೋಣ. ನೀನು ಬಯಸಿದಂತೆ “ಎಕನಾಮಿಕಲ್ ಸೆಕ್ಯೂರಿಟಿ” ಇರುವ ಹುಡುಗ ಅವನು. ಬೇಕಿದ್ದರೆ ನಿಮ್ಮ ಕಂಪನಿಯ ಟೀಮ್ ಲೀಡರ್ ಅಥವಾ ಎಂ.ಡಿ ಎಂದುಕೊಳ್ಳಬಹುದು.

ಈಗ ನಿನಗೆ ಇದ್ದಕ್ಕಿದ್ದಂತೆ ಸಣ್ಣ ಜ್ವರ ಕಾಣಿಸಿಕೊಂಡಿದೆ. ಆ ಕ್ಷಣಕ್ಕೆ ನಿನ್ನನ್ನು ಮದುವೆಯಾಗಿರುವ “ಎಕಾನಾಮಿಕಲಿ ಸ್ಟೇಬಲ್ಡ್” ಹುಡುಗ ನಿನ್ನ ಮುಖಕ್ಕೆ ರಾಚುವಂತೆ ದುಡ್ಡಿನ‌ ಕಂತೆಯೊಂದನ್ನ ಎಸೆದು, ಮನೆಯ ಹೊರಗೆ ಬೆನ್ಜ್ , ರೋಲ್ಸ್ ರಾಯ್ಸ್ ಮತ್ತೆ ಫೆರಾರಿ ಕಾರಿದೆ, ಡ್ರೈವರ್ ಅಲ್ಲೇ ಇದ್ದಾನೆ ಅವನೊಂದಿಗೆ ನರ್ಸಿಂಗ್ ಹೋಮ್ ಗೆ ಹೋಗಿ ಬಾ ಎಂದು ಹೊರಡುತ್ತಾನೆ. ನಿನಗಿರುವ ಜ್ವರದ ಪ್ರಮಾಣವನ್ನಾಗಲಿ, ನಿನ್ನ ಸಧ್ಯದ ಸ್ಥಿತಿಯನ್ನಾಗಲಿ ಅಥವಾ ನಿನ್ನೊಳಗಿನ ಆಲೋಚನೆಗಳನ್ನಾಗಲಿ ಏನನ್ನೂ ಕೇಳುವ ತಾಳ್ಮೆ ಎನ್ನುವುದು ಇರಲಿಕ್ಕಿಲ್ಲ.

ನೀನು ಬಯಸುವ “ಎಕಾನಾಮಿಕಲಿ ಸ್ಟೇಬಲ್ಡ್” ಹುಡುಗನಿಗೆ ಕೆಲಸವೇ ಮುಖ್ಯ. ಅವನಿಗೆ ಕೆಲಸವಷ್ಟೇ ಮುಖ್ಯವಾಗಿರುವ ಕಡೆ ಘಳಿಗೆವರೆಗೆ ಮಾತ್ರ ನೀನು ಬಯಸುವ “ಎಕಾನಾಮಿಕಲ್ ಸೆಕ್ಯೂರಿಟಿ” ನಿನ್ನದು. ಅದು ಕಳಚಿಬಿದ್ದರೆ ಇಲ್ಲಾ.

ಮತ್ತೊಂದು.
ಈಗ ನೀನು ಸಣ್ಣ ಗುಮಾಸ್ತನನ್ನೇ ಮದುವೆಯಾಗಿದ್ದೀಯಾ ಎಂದುಕೊಳ್ಳೋಣ‌. ಸಣ್ಣ ಸಂಬಳ. ತಿಂಗಳ ಸಂಬಳದಲ್ಲೇ ಜೀವನ ಸಾಗಬೇಕು. ಉಳಿತಾಯಕ್ಕೂ ಪರದಾಟ. ಆದರೂ ಇಬ್ಬರ ನಡುವೆ ಸಾಮರಸ್ಯವಿದೆ. ಹೀಗಾಗೇ ಬದುಕು ಚಂದ ಇದೆ.  ಈಗಲೂ ನಿನಗೆ ಸಣ್ಣ ಜ್ವರ ಬಂದಿದೆ. ಆ ಗಳಿಗೆಗೆ ನಿನ್ನ ಗುಮಾಸ್ತ ಗಂಡ, ಬೆಲ್ಲದ ಟೀ ಮಾಡಿ ನೀನು ಇದ್ದಲ್ಲಿಗೆ ಮೂತಿ ಹರಿದ ಒಂದು ಸ್ಟೀಲ್ ಲೋಟದಲ್ಲಿ ತಂದುಕೊಡುತ್ತಾನೆ. ತಲೆ ನೇವರಿಸಿ ನಿನ್ನ ಕೊರಳಿಗೆ ಕೈ ಇಟ್ಟು ಜ್ವರದ ಕಾವು ಪರೀಕ್ಷಿಸುತ್ತಾನೆ.
ಇವತ್ತು ಆಫೀಸ್ ಗೆ ರಜಾ ಹಾಕು ಎಂದು ಹೇಳಿ ತಾನೂ ಮಧ್ಯಾಹ್ನವೇ ಹೆಣಗಾಡಿ ರಜಾ ಪಡೆದು ಅವನ ಸೆಕೆಂಡ್ ಹ್ಯಾಂಡ್ ಲಡಾಯಿ ಸ್ಕೂಟರ್ ನಲ್ಲಿ ಹತ್ತಿರದ ಯಾವುದೋ ಕಿರಿದಾದ ಕ್ಲಿನಿಕ್ ಗೆ ಕರೆದು ತೋರುತ್ತಾನೆ. ಇದ್ದ ಹಣದಲ್ಲೇ ಪ್ರಿಸ್ಕ್ರಿಪ್ಶನ್ ಕೊಡಿಸಬಹುದು.

ಈ ಇಬ್ಬರಲ್ಲಿ ನಿನ್ನ ಆಯ್ಕೆ ಯಾರು?
ನಿನಗೆ ಇಲ್ಲಿ ಕಾಣಬಹುದಾದ ಸೆಕ್ಯೂರಿಟಿಗಳು ಯಾವುವು? ನೋಡು ಮೆಜೆಸ್ಟಿಕ್ ನಲ್ಲಿ ಹತ್ತು ರೂಪಾಯಿ ತೆತ್ತು ಲಸ್ಸಿ ಕುಡಿಯುವುದಕ್ಕೂ ನೂರು ಯೋಚನೆ ಮಾಡುವ ದಂಪತಿಗಳ ದಾಂಪತ್ಯದಲ್ಲೂ ಸಂಕಟಗಳಿವೆ. ಒಂದು ಲೋಟ ಕಾಫಿ ಕುಡಿಯುವುದಕ್ಕೂ ಗಾಜಿನ ಕೋಟೆಯಂತ ಐಷಾರಾಮಿ ಮಾಲ್ ಗಳ ಕದ ದಾಟುವ, ಕಾಫಿ ಮುಗಿಯುವುದರೊಳಗೆ ನಾಲ್ಕು ಟಿಶ್ಯೂ ಪೇಪರ್ ಬಳಸುವವರ ದಂಪತಿಗಳ ದಾಂಪತ್ಯದಲ್ಲೂ ಸಂಕಟಗಳಿವೆ. ಆ ಎರಡರ ನಡುವೆ ಅಂತಹ ಘನ ವ್ಯತ್ಯಾಸಗಳೇನೂ ಇಲ್ಲ.

ಆದರೆ ಸುಪ್ರೀಂ ಕೋರ್ಟ್ ನಲ್ಲಿ ಬಟವಾಡೆಯಾಗುತ್ತಿರುವ ಡಿವೋರ್ಸ್ ಕೇಸುಗಳು ಬಂದಿರುವುದು ಕಾಫಿ ಹೌಸ್ ನಲ್ಲಿ ಟಿಶ್ಯೂ ಬಳಸುವವರಿಂದಲೇ ಹೊರತು ಮೆಜೆಸ್ಟಿಕ್ ನಲ್ಲಿ ಹತ್ತು ರೂಪಾಯಿಯ ಲಸ್ಸಿ ಕುಡಿಯುವವರಿಂದ ಅಲ್ಲ ಅನ್ನೋದು ಸತ್ಯ.‌

ನನ್ನ ಉದಾಹರಣೆಗೆ ವೈಧವ್ಯ ನಕ್ಕಳು‌. ಅವಳ ನಗುವಿನಲ್ಲೇ ಅವಳ ಉತ್ತರಗಳೂ ಇದ್ದವು. ನಾನು ಮರಳಿ ಮಾತನಾಡಲಿಲ್ಲ. ಅವಳು ಒಳಗೆ ನಗುತ್ತಿದ್ದಳು. ಇಬ್ಬರೂ ಎಂ. ಜಿ ರೋಡ್ ನಲ್ಲಿ ಮೆಟ್ರೋ ಇಳಿದು ಚರ್ಚ್ ಸ್ಟ್ರೀಟ್ ನಲ್ಲಿರುವ ಇಂಡಿಯನ್ ಕಾಫಿ ಹೌಸ್ ನಲ್ಲಿ ತಿಂಡಿ ಮುಗಿಸಿ ಕೆಲಸಕ್ಕೆ ಹೊರಟೆವು.

ಹತ್ತು ನಿಮಿಷದ ಬಳಿಕ ವೈಧವ್ಯಗೆ ವಾಟ್ಸ್ ಆಪ್ ನಲ್ಲಿ ಬೇಂದ್ರೆಯಜ್ಜನ ಪದ್ಯದ ಕೆಲವು ಸಾಲುಗಳನ್ನು ಕಳುಹಿಸಿದೆ.

“ಅವನು ಕೊಟ್ಟ ವಸ್ತ್ರ ಒಡವಿ
ಅವಗೆ ನನಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬಾ ಮುತ್ತು”

ಮನುಷ್ಯ ಹದವಾಗಿ ಬದುಕುವುದಕ್ಕೆ ಬೇಕಾದ ಎಲ್ಲ ಸೆಕ್ಯೂರಿಟಿಗಳೂ ಈ ಸಾಲುಗಳಲ್ಲೇ ನಿಚ್ಚಳವಾಗಿವೆ ಎನಿಸುತ್ತದೆ ನನಗೆ‌.

ಆದರೆ ವೈಧವ್ಯಗೆ? ಗೊತ್ತಿಲ್ಲ. . .

***

ಈಶಾನ್ಯ ಏಕೆ‌ ನೀವು ನಿಮ್ಮ  ಬಾಲ್ಯದ ಹಳೆಯ ವಿಚಾರಗಳನ್ನೇ ಬರೆಯುತ್ತಿರಾ? ಒಂದು ವೇಳೆ ಬಾಲ್ಯದ ಎಲ್ಲ ಕತೆಗಳು ಮುಗಿದುಹೋದರೆ ಮತ್ತೇನೂ ಬರೆಯುತ್ತೀರಾ ಎನ್ನುವ ಪ್ರಶ್ನೆಯೊಂದು ಮೆಸೆಂಜರ್ ನಲ್ಲಿ  ನನ್ನ ಇನ್ ಬಾಕ್ಸ್ ಬಂದು ಬಿತ್ತು.

ಬಾಲ್ಯ ಎನ್ನುವುದು ಯಾವತ್ತಿಗೂ ಬತ್ತಿಹೋಗದ ಉಗ್ರಾಣ ಎನ್ನುವುದಷ್ಟೇ ನನ್ನ ನಂಬಿಕೆ. ಅದನ್ನೇ ಅವರಿಗೂ ಹೇಳಿದೆ. ಇದು ಕೂಡ ಅಂತಹದೇ ಒಂದು.

ಜಯಲಕ್ಷ್ಮಿ ಆಂಟಿ ಮೈಸೂರಿನ ನಮ್ಮ ಅಜ್ಜಿಯ ಮನೆಯಲ್ಲಿ ಬಾಡಿಗೆಗೆ ಇದ್ದವರು‌. ನನ್ನ ಬಾಲ್ಯದ ಬಹುತೇಕ ವರ್ಷಗಳಲ್ಲಿ ಅವರನ್ನು ಹತ್ತಿರದಿಂದ ನೋಡಿದ್ದೇನೆ. ನನ್ನ ಅಮ್ಮನ ಸಂಕಟಗಳ ಪಾಲುದಾರರು ಅವರು.

ಜಯಲಕ್ಷ್ಮಿ ಆಂಟಿಯ ಗಂಡ ಅರ್ಕುಲೆಸ್ ಸೈಕಲ್ ಹಿಂದಿನ ಕ್ಯಾರಿಯರ್ ಗೆ ಮರದ ಪೆಟ್ಟಿಗೆಯೊಂದನ್ನ ಜೋಡಿಸಿಟ್ಟುಕೊಂಡು, ಪೆಟ್ಟಿಗೆಯನ್ನ ಐಸ್ ಕ್ಯೂಬ್ ಗಳಿಂದ ಆವೃತಗೊಳಿಸಿ ಅದರಲ್ಲಿ ಕೋನ್
ಐಸ್ ಕ್ರೀಮ್ ಗಳನ್ನ ಮಾರುತ್ತಿದ್ದ ಸಣ್ಣ ವ್ಯಾಪರಿ. ಆದರೆ ಮಹಾಕುಡುಕ. ಐಸ್ ಕ್ರೀಮ್ ಮಾರಿದ ನಂತರ ಬರುವ ಆದಾಯವನ್ನ ಆವತ್ತಿನ ಸಂಜೆಯೇ ವಿಜಯ ಟೆಂಟ್ ಬಳಿಯಿದ್ದ ಸಾರಾಯಿ ಅಂಗಡಿಯ ಗಲ್ಲಾಪೆಟ್ಟಿಗೆಯನ್ನು ಸೇರಿಸಿಬಿಡುತ್ತಿದ್ದ ಮಹಾತ್ಮ ಆತ‌.

ಬಾಡಿಗೆ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬದುಕುತ್ತಿದ್ದ ಜಯಲಕ್ಷ್ಮಿ ಆಂಟಿ ಅವರ ಗಂಡನನ್ನ ಪ್ರತಿರಾತ್ರಿಯೂ ಕಾಯಬೇಕಾಗಿತ್ತು. ಬದುಕಿಗಾಗಿ ವಿಜಯನಗರದ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಅವರು ಬದುಕನ್ನ ಕಟ್ಟಿಕೊಳ್ಳಲು ಪ್ರತಿದಿನವೂ ಬದುಕಿಗೆ ಬೆನ್ನು ಮಾಡದೆ ಬಡಿದಾಡಿದವರು.

ರಾತ್ರಿ ಒಂಬತ್ತು. ಹತ್ತು, ಹನ್ನೊಂದು ಹೀಗೆ ತರಾಹವರಿ ಸಮಯದಲ್ಲಿ ಜಯಲಕ್ಷ್ಮಿ ಆಂಟಿಯ ಮನೆಗೆ ಸುದ್ದಿ ಬರುತ್ತಿತ್ತು.

* ಜಯಲಕ್ಷ್ಮಿ ನಿನ್ನ ಗಂಡ ಸಾರಾಯಿ ಅಂಗಡಿಯ ಎದುರು ಬಿದ್ದಿದ್ದಾನೆ.

* ಅವನ ಸೈಕಲ್ ಕಾಣುತ್ತಿಲ್ಲಾ.

* ಇಲ್ಲಿ ಗಣೇಶ ಟಿಫಾನಿಸ್ ಎದುರು ಯಾರೋ ಮಲಗಿದ್ದಾನೆ, ನಿನ್ನ ಗಂಡನೇ ಇರಬೇಕು ಹೋಗಿ ನೋಡು. ಹೀಗೆ ಅದು ವಿಕ್ಷಿಕ್ತ ಅವತಾರಗಳಲ್ಲಿ ವಿಚಾರಗಳು ಅವರನ್ನ ತಲುಪುತ್ತಿದ್ದವು.

ಈ ರೀತಿಯ ಚಿತಾವಣೆಯಾಗದ ಮಾತುಗಳು ಕೇಳಿ ಬಂದಾಗೆಲ್ಲಾ ಎರಡು ಪುಟ್ಟ ಮಕ್ಕಳ ತಾಯಿ ಜಯಲಕ್ಷ್ಮಿ ಆಂಟಿ ಅದೆಷ್ಟು ನೊಂದಿರಬಹುದು?

ಬೀದಿಯಲ್ಲಿ ಮೈ ಚಲ್ಲಿದ್ದ ಗಂಡನನ್ನ ತಾನೇ ತನ್ನ ನಿರ್ಭಲ ತೋಳುಗಳಿಂದ ಎಳೆದು ಅವನ ಭುಜಕ್ಕೆ ತನ್ನ
ಭುಜ ಜೋಡಿಸಿ ಗಂಡನನ್ನು ಮನೆಗೆ ಸೇರಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ ತಾಯಿಯಂತೆ ದಣಿದುಹೋಗುತ್ತಿದ್ದರು.

ಬೀದಿಯ ಮಕ್ಕಳು, ಹೆಂಗಸರು, ಮುದುಕಿಯರು ತನ್ನ ಗಂಡನನ್ನು ಆಡಿಕೊಂಡಾರು ಎಂದು ತಲೆ ತಗ್ಗಿಸುತ್ತಿದ್ದಳು. ಅವನು ಕುಡಿದು ಉಳಿಸಿದ ಚಿಲ್ಲರೆ ಹಣಕ್ಕಾಗಿ ಅವನ ಎಲ್ಲಾ ಕಿಸೆಗಳನ್ನೂ ಕಳ್ಳರಂತೆ ತಡಕಾಡುತ್ತಿದ್ದಳು. ಸಿಕ್ಕಿದ ಚಿಲ್ಲರೆಯಷ್ಟೇ ಅವಳ ಪಾಲಾಗುತ್ತಿತ್ತು. ಅವರ ಎರಡು ಹೆಣ್ಣು ಮಕ್ಕಳು ಸ್ಕೂಲ್ ನಲ್ಲಿ ಅವಮಾನದಿಂದ ಏನೂ ಮಾತನಾಡುತ್ತಿರಲಿಲ್ಲವಂತೆ. ಬೀದಿಯ ಒಂದಿಷ್ಟು ಮಕ್ಕಳೊಂದಿಗೆ ಆಟವಾಡಿದ ಅವರ ಮಕ್ಕಳು ಅಷ್ಟಾಗಿ ಯಾರೊಂದಿಗೂ ಬೆರೆತು ಆಟವಾಡಿದ್ದನ್ನ ನಾನು ನೋಡಲು ಸಾಧ್ಯವಾಗಲಿಲ್ಲ.

ಈಗ ಎಲ್ಲವೂ ಬದಲಾಗಿದೆ‌. ಜಯಲಕ್ಷ್ಮಿ ಆಂಟಿ ಮೊದಲಿನಂತಿಲ್ಲಾ. ಉಳಿಸಿದ ಹಣದಲ್ಲೆ
ಮೈಸೂರಿನಲ್ಲಿ ಚಂದದ ಮನೆ ಕಟ್ಟಿಕೊಂಡಿದ್ದಾರೆ. ಅವರನ ಗಂಡನಿಗೆ ಖಾಯಿಲೆ ನಿಮಿತ್ತ ಎರಡೂ ಕಾಲುಗಳು ಹೋಗಿವೆ. ಈಗ ಮೊದಲಿನಂತೆ
ಕುಡಿಯುವುದಿಲ್ಲ. ಅವರ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿ ಅವರಿಗೂ ಮಕ್ಕಳಾಗಿವೆ. ಮೊದಲು ಯಾವ ಯಾವ ಕಾರಣಕ್ಕೋ ಅವಮಾನದಲ್ಲಿ ತಲೆ ತಗ್ಗಿಸುತ್ತಿದ್ದ ಅವರು ಈಗ ಎದುರಾಗಾದ ಸಂದೀಪ್ ಹೇಗಿದ್ದೀಯಾ ಎಂದು ನಿರ್ಮಲವಾಗಿ ಮಾತಾನಾಡುತ್ತಾರೆ. ಏನನ್ನೋ ಜಯಿಸಿದ ಠೀವಿಯ ತುಣುಕು ಅವರ ನಗುವಿನಲ್ಲಿ ಕಾಣುತ್ತದೆ.
ಆಗೆಲ್ಲ ಖುಷಿಯಾಗುತ್ತದೆ.ಅವರ ದನಿಯೊಳಗಿನ ವಾತ್ಸಲ್ಯಕ್ಕೆ. ಬದಲಾದ ಅವರ ಬದುಕಿಗೆ.

ಬದುಕು ಇದಂತೆ ಇರುವುದಿಲ್ಲ ಎನ್ನುವುದಕ್ಕೆ ಇವರು ನಾನು ಕಂಡುಕೊಂಡ ಸಜೀವ ಉದಾಹರಣೆ.

ಇತ್ತೀಚೆಗೆ ಮೈಸೂರಿಗೆ ಹೋಗಿದ್ದಾಗ ಜಯಲಕ್ಷ್ಮಿ ಆಂಟಿ ಮನೆಗೆ ಬಂದಿದ್ದರು. ಅಮ್ಮನೊಂದಿಗೆ ಅದು ಮಾತನಾಡುವಾಗ ಏನೇನೋ ಮಾತುಗಳು ಬಂದು ಕಡೆಗೆ ಹಳೆಯ ದಿನಗಳ ಮಾತಿಗೆ ಬಂದು ನಿಂತಿತ್ತು. ಮನುಷ್ಯ ಹಂಚಿಕೊಳ್ಳಲು ವಿಷಯಗಳು  ಖಾಲಿಯಾದಾಗ ತನ್ನ ಕಷ್ಟಗಳನ್ನು ನೆನೆದು ಮಾತನಾಡುತ್ತಾನೆ ಎಂದು ಸಾಕ್ರಟೀಸ್ ಹೇಳಿದ್ದು ನೆನಪಾಯ್ತು‌‌.

ಜಯಲಕ್ಷ್ಮಿ ಆಂಟಿಯ ಕಷ್ಟದ ದಿನಗಳನ್ನೂ ನೋಡಿದ್ದ ನಾನು, ಸುಮ್ಮನೇ ಕಿಚಾಯಿಸುವ ರೀತಿಯಲ್ಲಿ ಹೇಳಿದೆ‌. ಅಲ್ಲಾ‌, ಅವರನ್ನ ಮದುವೆಯಾಗಿ ನೀವು ಅಷ್ಟು ಕಷ್ಟಪಡುವ ಬದಲು ಆವತ್ತೇ ನಿಮ್ಮ ಗಂಡನಿಗೆ ಡಿವೋರ್ಸ್ ಕೊಡಬಹುದಿತ್ತು ಅಲ್ವಾ ಆಂಟಿ? ಆಗ ನೀವು ನೆಮ್ಮದಿಯಾಗಿರಬಹುದಿತ್ತು ಎಂದೆ.

ತಕ್ಷಣವೇ ಅದೊಂದು ಬಗೆಯ ನೋಟ ಅವರೊಳಗಿನಿಂದ ಹರಿದು ಬಂತು.  ಅಡಿಗೆ ಮನೆಯಲ್ಲಿ ನಿಂತಿದ್ದ ನಮ್ಮಮ್ಮನಿಗೆ ದೂರಿದರು‌.

“ನೋಡಿದ್ಯಾ ನಿನ್ನ ಮಗ ಏನಂದಾ? ಯಾಕೋ ಹಾಗಂತೀಯಾ? ಅವರು ಕುಡಿತಾ ಇದ್ರು, ಹೊಡಿತಾ ಇದ್ರು, ನನ್ನ ಗಂಡನೇ ಆಯ್ತಾ? ಅದು ಏನೋ ಕೆಟ್ಟ ಘಳಿಗೆ, ಹಣೆ ಬರಹ ಎಲ್ಲವೂ ನಡೆದುಹೋಯ್ತು‌.  ಈಗ ನೋಡು ನೀನೇ ತಂದುಕೊಟ್ಟರು ಅವರು ಕುಡಿಯುವುದಿಲ್ಲ ಗೊತ್ತಾ? ನಮ್ ಜೀವನಾನೂ ಬದಲಾಗತ್ತೆ  ಎಂದರು‌.

ನನ್ನೊಳಗಿನಿಂದ ಅಬ್ಬಾ ಎನ್ನುವ ಉದ್ಗಾರವಷ್ಟೇ ಹೊರಗೆ ಬಂತು.

ಅವರ ಜೀವನಪ್ರೀತಿ ನೋಡಿದಾಗ ಪ್ರೀತಿ, ತಾಳ್ಮೆ, ಹೊಂದಾಣಿಕೆ ಎನ್ನುವುದೆಲ್ಲ ಅದೆಷ್ಟೋ ಸತ್ಯಾಂಶಗಳು ದೊಡ್ಡದು ಮಾರಾಯ ಎನಿಸಿದೆ.

ಹಾಗಾದರೆ ಇವರು ಹುಡುಕಿದ ಬದುಕಿನ ಸೆಕ್ಯೂರಿಟಿಗಳು ಏನಿರಬಹುದು? ಗೊತ್ತಿಲ್ಲ.

***

ಈ ಎಲ್ಲವೂ ನೆನಪಾದಾಗ ಹಂಸಲೇಖಾ ಯೋಗರಾಜ್ ಭಟ್ಟರ ಹಾಡುಗಳನ್ನ ಈ ಇಬ್ಬರಿಗೂ ತಳುಕಿನೋಡುವ ಯತ್ನದಲ್ಲಿ ತೊಡಗಿಕೊಳ್ಳುತ್ತೇನೆ.

4 comments

  1. ವೈಧವ್ಯ ಅಂತ ಹೆಸರಾ??!!!!! ಅಯ್ಯಯ್ಯೋ ..seriously!!

  2. ನನಗೂ ಇದೆ ಪ್ರಶ್ನೆ ಇದೆ‌. ಅಪರೂಪಕ್ಕೆ ಎದುರಾದರೂ ಅವಳ ಹೆಸರಿನ ಬಗ್ಗೆ ಕೇಳಿದಿನಿ. ಅದಕ್ಕಿರುವ ಅರ್ಥವನ್ನೂ ಹೇಳಿದ್ದು ಆಯ್ತು. ಆದರು ಅವಳು ಹೋಗಲಿ ಬಿಡೋ ಎನ್ನುತ್ತಾಳೆ. ಮತ್ತೆ ಸಿಕ್ಕರೆ ಕೇಳಬೇಕು ಅಷ್ಟೇ. .

  3. ಚೆಂದ ಬರೆದ್ದಿದ್ದೀ ಈಶಾನ್ಯ … ಅಭಿನಂದನೆಗಳು.

  4. ಈ ಹಾಡುಗಳನ್ನು ಹೊರತುಪಡಿಸಿದರೆ, ಈ ಸ್ಟೋರಿ ಒಳ್ಳೆಯ ಬರವಣಿಗೆ. ಸಮಕಾಲೀನವಾಗಿ ಇರುವ ಜಯಲಕ್ಷ್ಮಿ ಯರ ಉದಾಹರಣೆ ಸಿಕ್ಕಿದ್ದರೆ …..

Leave a Reply