‘ಇಲ್ಲಿಬರಲ್‍ ಇಂಡಿಯಾ’ದಲ್ಲಿ ಕಂಡ ಗೌರಿ

ಪರಮೇಶ್ವರ ಗುರುಸ್ವಾಮಿ 
“ತಮ್ಮದೇ ಸರಿ ಅಂದುಕೊಳ್ಳುವ ಬಲಪಂಥೀಯರಿಗೆ, ಹಿಂದುಗಳಾಗಲಿ ಮುಸಲ್ಮಾನರಾಗಲಿ, ಸಾಮಾಜಿಕ ಕಟ್ಟುಪಾಡುಗಳು ಸ್ವಲ್ಪ ಸಡಿಲವಾದರೂ ಭಯವಾಗುತ್ತದೆ. ಯಾಕೆಂದರೆ ಇದರಿಂದ ಯಾವುದೇ ಸಾಂಪ್ರದಾಯಿಕ ಧರ್ಮಗಳ ಶ್ರೇಷ್ಠತೆಯ ಮುದ್ರೆಗಳಾದ ಪುರಾತನ ಪಿತೃಪ್ರಾಧಾನ್ಯ ಮತ್ತು ಮೇಲ್ಗಾರಿಕೆಗಳು ಅಲ್ಲಾಡತೊಡಗುತ್ತವೆ.
ಮಹಿಳೆಯರು ತಮ್ಮ ಆಯ್ಕೆಗಳನ್ನ ತಾವೇ ಮಾಡಿಕೊಳ್ಳುತ್ತಾರೆ ಅಥವಾ ಹಾಗೆ ಮಾಡುವ ಸ್ವಾತಂತ್ರವನ್ನು ಕೇಳುತ್ತಾರೆ ಅಂದಾಗ ಪ್ರತಿಯೊಂದು ಧರ್ಮದ ಮೂಲ ಹೇತುಗಳಾದ ಪಿತೃಪ್ರಧಾನತ್ವ ಮತ್ತು ಸ್ತ್ರೀ ವಿರುದ್ಧದ ಪೂರ್ವಗ್ರಹಗಳಿಗೆ ಸವಾಲು ಹಾಕಿದಂತಾಗುತ್ತದೆ.”
– ಚಿದಾನಂದ ರಾಜಘಟ್ಟ, ಇಲ್ಲಿಬರಲ್‍ ಇಂಡಿಯಾ ( Illiberal India ) ಪುಸ್ತಕದಲ್ಲಿ
ಗೌರಿ ಲಂಕೇಶ್, ಬದುಕಿದ್ದು ಹೀಗೆಯೆ: ತಮ್ಮ ಆಯ್ಕೆಗಳನ್ನು ತಾವೇ ಮಾಡಿಕೊಂಡರು. ತಮ್ಮ ಆಯ್ಕೆಗಳ ಸ್ವಾತಂತ್ರ್ಯವನ್ನು ತಮ್ಮಲ್ಲೇ ಇಟ್ಟುಕೊಂಡರು. ಇಂಥ ವ್ಯಕ್ತಿತ್ವವನ್ನು ತಾವೇ ಸ್ವತಃ ತಿದ್ದಿ ತೀಡಿ ರೂಪಿಸದಿದ್ದರೂ ಅರಳಲು ಅನುವು ಮಾಡಿಕೊಟ್ಟ ಲಂಕೇಶರ ಬಗ್ಗೆ ವಿಸ್ಮಯವೆನಿಸುತ್ತದೆ.
ಗೌರಿಯವರ ಒಡನಾಡಿಯಾಗಿದ್ದೂ ನೆಲದ ಅಗತ್ಯವನ್ನು ಅರಿಯಲಾರದೆ ಜಾಗತಿಕವಾಗಿ ಕಾಲು ಚಾಚಿ ಹೋದ ಚಿದಾನಂದ ಅವರೂ  ಮೇಲೆ ಉದ್ಧರಿಸಿದ ಮಾತುಗಳನ್ನು ಬರೆಯಬಹುದಾದ ಅರಿವನ್ನು ಮೂಡಿಸಿದ್ದು ಖುದ್ದು ಗೌರಿಯವರೇ . ಇದಕ್ಕೆ ಕಾರಣ ಅವರೆಡೆಗೆ  ಗೌರಿ ಚಾಚಿದ ಮಾತೃತ್ವ. ಬಸವನಗುಡಿಯ ರಸ್ತೆಗಳಲ್ಲಿ ಸೈಕಲ್ ಹೊಡೆದುಕೊಂಡು ಹಕ್ಕಿಯಂತೆ ಹಾರಾಡಿಕೊಂಡಿದ್ದ ಪುಟ್ಟ ಹುಡುಗಿ ಹುತಾತ್ಮೆಯಾದದ್ದು ನಮ್ಮ ಕಾಲದ ದೊಡ್ಡ ಕುತೂಹಲ.
ಐದು ವರ್ಷಗಳ ಕಾಲದ ಹರೆಯದ ಪ್ರೇಮ, ಐದು ವರ್ಷಗಳ ಎಲ್ಲರಂತಲ್ಲದ ದಾಂಪತ್ಯ. ವಿಚ್ಛೇದನಾ ನಂತರದ ಬೌದ್ಧಿಕ ಸಾಂಗತ್ಯ. ವಿಚ್ಛೇದನವಾದ ಮೇಲೂ ಇವರಿಬ್ಬರ ಮುರಿಯದ ಸ್ನೇಹದ ಬಗ್ಗೆ ಕೆಲ ಸ್ನೇಹಿತ(ತೆ)ಯರು ಆಶ್ಚರ್ಯ ಪಡುತ್ತಿದ್ದರು ಎಂದು ಚಿದಾನಂದ ತಿಳಿಸುತ್ತಾರೆ. ‘ನಾವು ಸ್ಫೋಟಕ ಕ್ಷಣಗಳನ್ನು ಕಳೆದಿದ್ದೇವೆ, ಆದರೆ ಅವುಗಳನ್ನೆಲ್ಲ ತಕ್ಷಣ ಮೀರಿ ಹೆಚ್ಚಿನ ಆದರ್ಶಗಳಿಂದ ಬೆಸೆದುಕೊಳ್ಳುತ್ತಿದ್ದೆವು.’ ಎನ್ನುತ್ತಾರೆ ಚಿದಾನಂದ.
ನ್ಯಾಷನಲ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದವರು ಐದು ವರ್ಷ ಪ್ರೀತಿಸಿ ಸರಳ ಮದುವೆಯಾಗಿ ಐದು ವರ್ಷ ಸಂಸಾರ ಮಾಡಿ ವಿಚ್ಛೇದನ ಪಡೆದ ಮೇಲೂ ಗೌರಿ ಹತ್ಯೆಯಾಗುವವರೆಗೂ ಆರೋಗ್ಯಕರ  ರೀತಿಯಲ್ಲಿ ಆತ್ಮೀಯರಾಗಿದ್ದವರು. ಬೌದ್ಧಿಕ ಸಾಂಗತ್ಯ ಕಾಪಾಡಿಕೊಂಡಿದ್ದವರು ಇವರಿಬ್ಬರು. ಅದು ಮೂವತ್ತೇಳು ವರ್ಷಗಳ ಕಾಲದ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳು ತುಂಬಿದ್ದ ಸಾಂಗತ್ಯ.  ಇಂಗ್ಲಿಷ್ ಮಾಧ್ಯಮದಲ್ಲೇ  ಓದು ಬರಹದಲ್ಲಿ ತೊಡಗಿಕೊಂಡು ಚಿದಾನಂದ ಅಮೆರಿಕದೆಡೆಗೆ ಜಾಗತಿಕವಾಗಿ ಚಾಚಿಕೊಂಡರೆ, ಗೌರಿ, ಸ್ಥಳೀಯವಾಗುತ್ತಾ ಕನ್ನಡಲೋಕಕ್ಕೆ ತಮ್ಮನ್ನು ಕೇಂದ್ರೀಕರಿಸಿಕೊಳ್ಳುತ್ತಾರೆ.
ಹರೆಯದ ದಿನಗಳಲ್ಲಿ ಕಾಲೇಜು ದಿನಗಳಲ್ಲಿ ಚಿದಾನಂದ ಸಿಗರೇಟು ಸೇದುವುದನ್ನು ಗೌರಿ ಸ್ವಲ್ಪವೂ ಇಷ್ಟ ಪಟ್ಟಿರುವುದಿಲ್ಲ. ಭಾರತದಿಂದ ಅಮೆರಿಕಕ್ಕೆ ಉದ್ಯೋಗಸಂಬಂಧ ಹೋಗುವಾಗ ಲಂಡನ್ ನ  ಹೀಥ್ರೊ ವಿಮಾನ ನಿಲ್ದಾಣದಲ್ಲಿ ಸೇದಿದ ಕೊನೆಯ ಸಿಗರೇಟು ತುಂಡನ್ನು ಎಸೆದ ಮೇಲೆ ದೇಹದಾರ್ಢ್ಯ ಬೆಳಸಿಕೊಳ್ಳುತ್ತಾರೆ ಚಿದಾನಂದ.  ಆದರೆ, ಇಲ್ಲಿ ಗೌರಿ, ಹೋರಾಟಗಳಲ್ಲಿ ಮುಳುಗಿ ತಮ್ಮ ಅಂದಗಾಣಿಕೆಯನ್ನು ಕಡೆಗಣಿಸಿದರು.
ಇಡೀ ಪುಸ್ತಕದಲ್ಲಿ ಗೌರಿಯವರ ಗಟ್ಟಿಯಾದ ವ್ಯಕ್ತಿತ್ವವನ್ನು, ರಾಜಕೀಯ ಮತ್ತು ಸಾಮಾಜಿಕ ಬದ್ಧತೆಗಳನ್ನು, ಇವುಗಳ ನಡುವೆಯೇ ಅವರಲ್ಲಿದ್ದ ತಾಯ್ತನವನ್ನು ಪ್ರೀತಿಯನ್ನು, ಕಕ್ಕುಲತೆಯನ್ನು ಆಪ್ತವಾಗಿ ಪದರ ಪದರವಾಗಿ ಚಿದಾನಂದರು ಬಿಡಿಸಿಕೊಟ್ಟಿದ್ದಾರೆ. ಕೊನೆಯಲ್ಲಿ ಗೌರಿ ಎಂದರೆ, ‘ನಿಬ್ಬೆರಗಿಸುವ ಸೊಬಗು’ ( ಅಮೇಜಿಂಗ್ ಗ್ರೇಸ್ ) ಎಂದು ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ‘ಉಳಿದೆಲ್ಲ ಹಣೆಪಟ್ಟಿಗಳನ್ನು ಮರೆತುಬಿಡಿ: ಎಡಪಂಥೀಯೆ, ತೀವ್ರವಾದಿ, ಹಿಂದುತ್ವವಿರೋಧಿ, ಧರ್ಮಾತೀತ, ಇತ್ತ್ಯಾದಿ. ನನಗೆ, ಇಷ್ಟೇ: ಆಕೆ ನಿಬ್ಬೆರಗಿಸುವ ಸೊಬಗಿನ ಸಾರ.  ಚಿದಾನಂದ ಅವರ ಈಗಿನ ಹೆಂಡತಿ,  ಮೇರಿ ಬ್ರೀಡಿಂಗ್ ಬರೆಯುತ್ತಾರೆ: ‘ಆಕೆ(ಗೌರಿ)ಯ ಪರಿಚಯ ಮಾತ್ರವೇ ನಿಮ್ಮಲ್ಲಿ ಹೆಮ್ಮೆ ಹುಟ್ಟಿಸುತ್ತದೆ…. ಗೌರಿ, ನನ್ನ ಮಗಳಿಗೆ ಆದರ್ಶ ಮಾದರಿಯಾಗಬೇಕು ಅನಿಸುತ್ತದೆ, ಗಟ್ಟಿತನ ಮತ್ತು ತೀವ್ರ ಸ್ವಂತಿಕೆ….’
ಚಿದಾನಂದ ಮತ್ತು ಗೌರಿ ಲಿಂಗಾಯತ/ವೀರಶೈವರಾಗಿ ಹುಟ್ಟಿದರೂ ಹರೆಯದಲ್ಲಿ ಹೇಗೆ ಭಾವೋದ್ರೇಕದ ಉದಾರವಾದಿತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೇ ತಮಗೆ ಜಗತ್ತಾಗಿತ್ತು ಎಂಬುದನ್ನು ಚಿದಾನಂದ ಕಟ್ಟಿಕೊಡುತ್ತಾರೆ. ಹಾಗೆ ರೂಪುಗೊಳ್ಳಲು  ನ್ಯಾಷನಲ್ ವಿದ್ಯಾ ಸಂಸ್ಥೆ ಮತ್ತು ಅಂದಿನ ಹಲವಾರು ಚಳುವಳಿಗಳು ವ್ಯಕ್ತಿಗಳು ಕಾರಣ ಎಂಬುದನ್ನು ಚಾರಿತ್ರಿಕ ಮೂಲಗಳು ಮತ್ತು ವರ್ತಮಾನದ ಆಗುಹೋಗುಗಳ ಮೂಲಕ ಅರ್ಥೈಸುತ್ತಾರೆ.
ಶರಣ ಚಳುವಳಿ, ಅದರ ಆಶಯಗಳು ಈಗ ಅರ್ಥ ಕಳೆದುಕೊಂಡು ವೈದಿಕ ಆಚರಣೆಗಳಲ್ಲಿ ಮರೆಯಾಗಿರುವುದು, ಈ ರೀತಿಯ ಸಂಪ್ರದಾಯವಾದಿಗಳನ್ನು ‘ಕಲ್ಕಟ್ಟು’ಗಳೆಂದು ಆಡಿಕೊಳ್ಳುತ್ತಿದ್ದುದು, ವೈಚಾರಿಕತೆಯನ್ನು ಪ್ರಚೋದಿಸಿದ ಎಚ್.ನರಸಿಂಹಯ್ಯನವರ ಪ್ರಭಾವ, ಕನ್ನಡಜ್ಞಾನದ ಕೊರತೆಯ ಮಿತಿ, ಕಲಬುರ್ಗಿಯವರ ಮಾರ್ಗ-1 ಲಿಂಗಾಯತ/ವೀರಶೈವ ಸಮಾಜದಲ್ಲಿ ಉಂಟು ಮಾಡಿದ ಅಲ್ಲೋಲಕಲ್ಲೋಲ, ಕಲಬುರ್ಗಿಯವರು ತಮ್ಮ ಬದ್ಧತೆಗೆ, ಸಂಶೋಧನಾ ಸತ್ಯಕ್ಕೆ ವಿರುದ್ಧವಾಗಿ ಕ್ಷಮೆ ಕೇಳ ಬೇಕಾಗಿ ಬಂದಿದ್ದು, ನಂತರ ಅವರು ಲಿಂಗಾಯತವೇ ಬೇರೆ ವೀರಶೈವವೇ ಬೇರೆ ಎಂದು ಸಾಧಿಸಿದ್ದು, ಈ ಎಲ್ಲ ಅಂಶಗಳು ತಮ್ಮಿಬ್ಬರ ವ್ಯಕ್ತಿತ್ವಗಳನ್ನು ರೂಪಿಸಿರುವುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಇವರಿಬ್ಬರು ಮದುವೆಯಾಗಿ ಮನೆ ಮಾಡಿದಾಗ ಕೊಂಡುಕೊಂಡ ಅಗತ್ಯ ವಸ್ತುಗಳಲ್ಲಿ ಹತ್ತು ಸಾವಿರ ರೂಪಾಯಿಯ ಎನ್‍ ಸೈ ಕ್ಲೋಪೀಡಿಯಾ ಬ್ರಿಟಾನಿಕದ ಮುವ್ವತ್ತೆರಡು ಸಂಪುಟಗಳು ಸೇರಿದ್ದವು. ಇಲ್ಲಿಬರಲ್ ಇಂಡಿಯ ಪುಸ್ತಕದ ಪೂರ್ತ ಗೌರಿಯವರನ್ನು ಅವರು ಹೋರಾಟಗಾರ್ತಿಯಾಗಿ ರೂಪುಗೊಂಡದ್ದನ್ನು ಸನ್ನಿವೇಶಗಳು ಘಟನೆಗಳು ಪ್ರಸಂಗಗಳು ಮಾತುಕತೆಗಳ ಮೂಲಕ, ಅವುಗಳ ಐತಿಹಾಸಿಕ, ಸಾಮಾಜಿಕ, ಸಧ‍್ಯದ ಭೂತ ಮತ್ತು ವರ್ತಮಾನದ ಎಳೆಗಳ ಮೂಲಕ ನೇಯ್ದು ಕೊಟ್ಟಿದ್ದಾರೆ. ಇವರಿಬ್ಬರ ಸಾಂಗತ್ಯ ಒಂದು ಬೌದ್ಧಿಕ ಪಯಣ ಎನ್ನ ಬಹುದು. ಇವರಿಬ್ಬರ ಪ್ರೇಮ ಮತ್ತು ದಾಂಪತ್ಯ, ವಿಚ್ಛೇದನ ಅಮುಖ್ಯ. ಗೆಳೆತನವೇ ಇಲ್ಲಿ ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಸಹಿಷ್ಣುಗಳಾಗಿದ್ದ ಕನ್ನಡಿಗರು ಅಸಹಿಷ್ಣುಗಳಾದ ಬಗೆ, ಪರಿಣಾಮವಾಗಿ ವೀರಶೈವ ವಲಯದ ಅಸಹಿಷ್ಣುತೆ  ಹಾಗೆಯೇ ಹಿಂದು ವಿಸ್ತೃತ ವಲಯದ  ಅಸಹಿಷ್ಣುತೆ ಕಲಬುರ್ಗಿಯವರನ್ನು ಬಲಿತೆಗೆದು ಕೊಂಢಿದ್ದು, ನಂತರ   ಗೌರಿಯವರನ್ನು ಬಲಿ ತೆಗೆದುಕೊಳ್ಳುವಂತೆ ಬೆಳೆದದ್ದನ್ನು ಪುಸ್ತಕದುದ್ದಕ್ಕೂ ಹಂತಹಂತವಾಗಿ ಬಿಡಿಸಿಟ್ಟಿದ್ದಾರೆ.
ರಾಮಾಯಣ,ಮಹಾಭಾರತ ಧಾರಾವಾಹಿಗಳು ದೂರದರ್ಶನ ಒಂದೇ ವಾಹಿನಿಯಿದ್ದಾಗ ಪ್ರಸಾರವಾದದ್ದು, ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆ ಸೀಮಿತವಾಗಿ ಹಿಂದುತ್ವ ಭೋರ್ಗರೆತದ ರಾಮರಾಜ್ಯವಾದದ್ದು. ಅದ್ವಾನಿಯವರ ರಥಯಾತ್ರೆ,  ರಾಮಮಂದಿರದ ಕಲ್ಪನೆ, ಹೆಮ್ಮೆಯ ವ್ಯಕ್ತಿಯೆನಿಸಿದ್ದ ಮೈಸೂರು ಹುಲಿ ಟಿಪ್ಪು ಮತಾಂಧ ದಬ್ಬಾಳಿಕೆಯ ಕೊಲೆಗಡುಕ ದ್ರೋಹಿ ಟಿಪ್ಪು ಆದದ್ದು, ಈ ಪ್ರಕ್ರಿಯೆಯಲ್ಲಿ ಟಿಪ್ಪುವಿನ ಖಡ್ಗ(Sword of Tippu) ಧಾರಾವಾಹಿ  ಬಳಕೆಯಾದದ್ದು. ಇವೆಲ್ಲದರ ಮೇಳೈಕೆಯಾಗಿ ಉಗ್ರ ಹಿಂದುತ್ವ ತಲೆ ಎತ್ತುತ್ತಿದ್ದಾಗ ಮಂಡಲ್ ಮಸೀದಿ ವಿವಾದಗಳು ಉತ್ತುಂಗದಲ್ಲಿದ್ದಾಗ ಇವರಿಬ್ಬರೂ  ರಾಮಾಯಣದಲ್ಲಿ ಇತರ ಹಿಂದುಳಿದ ಜಾತಿಗಳ(OBC) ಪಾತ್ರಗಳನ್ನು ಹುಡುಕುವ ಆಟ ಆಡುತ್ತಿರುತ್ತಾರೆ!
ಪ್ರಾಸಂಗಿಕವಾಗಿ ಹಲವು ರಾಮಾಯಣಗಳನ್ನು ನೆನಪಿಸುತ್ತಾ ರಾಮಕಥೆ, ಹಿಂದು ಕತೆ ಮಾತ್ರವಲ್ಲ, ಭಾರತದ್ದು ಮಾತ್ರವಲ್ಲ, ಇತರ ಏಶಿಯಾ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ರಾಮಲೀಲಾದ ಹಲವಾರು ರೂಪಗಳನ್ನು ವಿವರಿಸಿ ಮಲಯಾಳದ ‘ಮಾಪಿಳ್ಳೆ ರಾಮಾಯಣ’ದ ಬಗ್ಗೆಯೂ ತಿಳಿಸುತ್ತಾರೆ. ಇದರಲ್ಲಿ ರಾಮ, ಶೂರ್ಪಣಖಿಗೆ, “ಒಬ್ಬ ಗಂಡಸಿಗೆ ಒಬ್ಬಳೇ ಹೆಣ್ಣು, ಒಬ್ಬ ಹೆಂಗಸಿಗೆ ಒಬ್ಬನೇ ಗಂಡು: ಇದು ಶರಿಯತ್ ಕಾನೂನು” ಎನ್ನುತ್ತಾನೆ! ಎಫ಼್.ಎಮ್. ಹುಸೇನರು ದೇಶ ಬಿಟ್ಟು ಹೋದ ಕೆಲ ವರ್ಷಗಳ ನಂತರ ಕೇರಳದ ಮಾತೃಭೂಮಿ ಪತ್ರಿಕೆಯಲ್ಲಿ ಲೇಖಕ ಎಮ್.ಎಮ್.ಬಷೀರ್ ಅವರು ಬರೆಯುತ್ತಿದ್ದ ರಾಮಾಯಣ ಕುರಿತ ಲೇಖನಮಾಲೆಯನ್ನು ಹಿಂದುತ್ವವಾದಿಗಳು ನಿಲ್ಲಿಸಿದರು. “ಎಪ್ಪತ್ತೈದನೇ ವಯಸ್ಸಿನಲ್ಲಿ ನನ್ನನ್ನು ಕೇವಲ ಮುಸ್ಲಿಂ ಲೇಖಕನಾಗಿ ಇಳಿಸಿಬಿಟ್ಟರು. ನನಗೆ ತಡೆದುಕೊಳ್ಳಲಾಗಲಿಲ್ಲ. ಬರೆಯುವುದನ್ನೇ ನಿಲ್ಲಿಸಿಬಿಟ್ಟೆ.” ಎಂದು ಹೇಳಿದರು.
ಈ ರಾಮಾಯಣಗಳ ನೆವದಲ್ಲೇ ರಾವಣನ ಪಾತ್ರವನ್ನು ಎತ್ತಿಕೊಂಡು ಉತ್ತರ ಭಾರತದ ರಾಮಾಯಣಗಳು ದಕ್ಷಿಣ ಭಾರತದ ರಾಮಾಯಣಗಳ ಗ್ರಹಿಕೆಗಳ ವ್ಯತ್ಯಾಸಗಳನ್ನು ಗುರುತಿಸುತ್ತ ಕುವೆಂಪುರವರ ರಾವಣನನ್ನು ಕಂಬರಾಮಾಯಣದ ರಾವಣನನ್ನು ಪ್ರಸ್ತಾಪಿಸುತ್ತಾ ದಕ್ಷಿಣದ ಪುರಾಣಗಳು ಮುಕ್ತ ಆಶಯಗಳನ್ನು ಹೊಂದಿವೆ ಎನ್ನುತ್ತಾರೆ.
ಗೌರಿಯವರಿಗೆ ಮೂರ್ತಿಭಂಜಕತನ ಅವರ ರಕ್ತದಲ್ಲೇ(DNA) ಇದೆ ಎಂದು ಚಿದಾನಂದ ಗುರುತಿಸುತ್ತಾರೆ. ಲಂಕೇಶರನ್ನು ಇವರೂ ಅಪ್ಪ ಎಂದೇ ಕರೆಯುವುದು. ಇವರ ತಂದೆ ತಾಯಿ ಸಂಪ್ರದಾಯಸ್ಥ ವೀರಶೈವರು. ಅಕ್ಕ, ತನಗಿಷ್ಟವಾದವರನ್ನು ಮದುವೆಯಾಗಿ ಮನೆಗೆ ದೂರಾಗಿದ್ದರು. ಅಣ್ಣ, ತಂದೆತಾಯಿಯ ಇಷ್ಟದಂತೆ ಇಂಜಿನಿಯರ್ ಆಗದೆ ಮರ್ಚೆಂಟ್  ನೇವಿ ನೌಕರಿಗೆ ಸೇರಿ ಅಲೆಮಾರಿಯಾಗಿದ್ದರು. ಆದ್ದರಿಂದ ಮದುವೆ ಆಗಿರಲಿಲ್ಲ.
ಅವರಿಗೆ ಸರೀಕರ ಮುಂದೆ ತಲೆ ಎತ್ತಿಕೊಂಡು ಇರುವುದಕ್ಕಾಗಿ ಚಿದಾನಂದರ ಮದುವೆ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ಮೂರು ದಿನದ ಒಂದು ಈವೆಂಟ್ ಮ್ಯಾನೇಜ್ಮೆಂಟ್ ಆಗಬೇಕಿತ್ತು. ಅರೆ ಮನಸ್ಸಿನ ಒಪ್ಪಿಗೆ ಮಾತ್ರ ಸಿಕ್ಕಿತ್ತು. ಇವರ ಮದುವೆಗೆ ನಿರಾತಂಕವಾದ ಒಪ್ಪಿಗೆ ಕೊಟ್ಟವರು ಲಂಕೇಶ್ ಒಬ್ಬರೇ. ನಂತರವೂ ಇವರಿಬ್ಬರ ವಿಚ್ಛೇದನವಾದ ಮೇಲೂ ಆ ವಿಷಯವನ್ನು ತಲೆಗೇ ಹಚ್ಚಿಕೊಳ್ಳದೆ ಮಗಳು ಮತ್ತು ಮಾಜಿ ಅಳಿಯನನ್ನು ಸ್ನೇಹಿತರಂತೇ ನಡೆಸಿಕೊಂಡರು.
ಕನ್ನಡ ಸರಿಯಾಗಿ ಗೊತ್ತಿಲ್ಲದ ಇವರಿಬ್ಬರಿಗೆ ಕನ್ನಡದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕರ್ನಾಟಕದ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆ ಹೆಚ್ಚು ಅರಿವುಂಟಾಗುವುದೇ ಲಂಕೇಶರ ಕಾರಣಕ್ಕೆ.  ರಾಜಕೀಯ, ಸಾಂಸ್ಕೃತಿಕ ಲೋಕದ ದೊಡ್ಡ ವ್ಯಕ್ತಿಗಳೆಲ್ಲಾ ಪರಿಚಯವಾಗುತ್ತಾರೆ.
ಚಿದಾನಂದರಿಗೆ ಲಂಕೇಶರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಮಹಾ ಗೌರವ. ಅವರ ವ್ಯಕ್ತಿತ್ವದ ನ್ಯೂನ್ಯತೆಗಳ ಕುರಿತೂ ಅಷ್ಟೇ ನಿರ್ಮೋಹಿಯಾಗಿ ಬರೆಯುತ್ತಾರೆ. ಲಂಕೇಶರ ಒಡ್ಡೋಲಗ, ಅದರ ಆಸ್ಥಾನಿಕರು ಅವರ ಸ್ವಭಾವಗಳನ್ನು ಚಿತ್ರಿಸಿದ್ದಾರೆ.  ಲಂಕೇಶರು ಗುರುತಿಸುವಿಕೆಯನ್ನು ಇಷ್ಟ ಪಡುತ್ತಿದ್ದರು. ಸಾಹಿತ್ಯಿಕ ಖುಷಿಗಳನ್ನು ಸಿಟ್ಟುಗಳನ್ನು ಮುಚ್ಚಿಡುತ್ತಿರಲಿಲ್ಲ. ಅವರ ಕಟಕಿ ಚುಚ್ಚಿ ನೋಯಿಸುವಂಥದ್ದು.
ಒಮ್ಮೆ ಅವರ ಕಟಕಿಯಿಂದ ನೊಂದ ಬಹು ಕಾಲದ ಗೆಳೆಯ ನಿಸಾರ್ ಅಹ್ಮದ್ ರವರು ಬರುವುದನ್ನೇ ಬಿಟ್ಟುಬಿಟ್ಟರಂತೆ. ಕೊನೆಯವರೆಗೂ ಸಹಿಸಿಕೊಂಡು ಖಾಯಂ ಆಗಿದ್ದವರು ರಾಮಚಂದ್ರ ಶರ್ಮ.  ಬೆಂಗಳೂರಿಗೆ ಬಂದಾಗಲೆಲ್ಲ ಚಿದಾನಂದ ತಾವು ಅಪ್ಪ ಎಂದೇ ಕರೆಯುತ್ತಿದ್ದ ಲಂಕೇಶರನ್ನು ಭೇಟಿ ಮಾಡುತ್ತಿದ್ದರು. ಅವರ ಒಡ್ಡೋಲಗದಲ್ಲಿ ಭಾಗವಹಿಸುತ್ತಿದ್ದರು.
ಗೌರಿಯವರ ಹತ್ಯೆ ರಾಜ್ಯಾದಾದ್ಯಂತ ಮಿಶ್ರ ಪ್ರತಿಕ್ರಿಯೆ ಮೂಡಿಸಿತು.  ಹಿಂದು ಬಲ ಪಂಥೀಯರು ಸಂಭ್ರಮ ಪಡುವುದಲ್ಲದೆ ಬಹಳ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಅವರವರ ಪತ್ರಿಕೆಗಳಲ್ಲಿ ಬರೆದುಕೊಂಡರು. ಆದರೆ ಇದು ನಗಣ್ಯ. ಹತ್ಯೆಯನ್ನು ಖಂಡಿಸಿ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆಗಳು ಬಂದುವು.
ಗೌರಿಯವರ ಸಾವು ಅವರ ಹತ್ತಿರದವರಲ್ಲಿ ಹುಟ್ಟು ಹಾಕಿದ ಎರಡು ಪ್ರತಿಕ್ರಿಯೆಗಳು ಬಹಳ ಮುಖ್ಯ. ಒಂದು, ಪ್ರಕಾಶ್ ರೈ/ರಾಜ್ ರವರ Just Asking ಚಳವಳಿ. ಸರಣಿ ಪ್ರಶ್ನೆಗಳನ್ನು ಅವರು ರಾಜ್ಯದಾದ್ಯಂತ ಹಿಂದು ಬಲ ಪಂಥೀಯರಿಗೆ ಕೇಳಿದರು. ಇನ್ನೊಂದು, ಈ ಪುಸ್ತಕ. “ಈ ‘ದಂತ ಕತೆ’ ನಾನು ತಿಳಿದೇ ಇರದ ಗೌರಿ.” ಎಂದು ಬರೆಯುತ್ತಾರೆ.
ನನ್ನ ಮಾತು :  ನಾನು ವ್ಯಕ್ತಿಯಾಗಿ ಗೌರಿಯನ್ನು ನೋಡಿಲ್ಲ. ಭೇಟಿಯಾಗಿಲ್ಲ. ಹತ್ತಿರದಿಂದಾಗಲಿ ದೂರದಿಂದಾಗಲಿ ನೋಡಿಲ್ಲ. ಫೋ಼ಟೋಗಳಲ್ಲಿ ಮಾತ್ರ ನೋಡಿದ್ದೇನೆ. ಆದರೆ ಮೊದಲಿಂದಲೂ ನನಗೆ ಗೊತ್ತಿರುವುದು, ಲಂಕೇಶರು ಬರೆದುಕೊಂಡಿರುವ ತಮ್ಮ ಪುಟಾಣಿ ಮಗಳು ಗೌರಿಯ ಒಂದು ಚಿತ್ರ: ಲಂಕೇಶರ ಪುಸ್ತಕಗಳ ಮೇಲೆ ಗೀಚುತ್ತಿರುವ ಗೌರಿ. ಈ ಪುಸ್ತಕ ಓದುವಾಗ ಸದಾ ಆ ಚಿತ್ರ ಹಿನ್ನೆಲೆಯಲ್ಲಿತ್ತು.

2 comments

  1. ಚಿದಾನಂದರು ಆಪ್ತವಾಗಿ ಬರೆದ ಪುಸ್ತಕವನ್ನು ಎಲ್ಲರೂ ಓದಬೇಕೆಂಬ ಆತುರ ಹುಟ್ಟಿಸುವಂತೆ ಪರಿಚಯ ಮಾಡಿಕೊಟ್ಟಿದ್ದೀರಿ. ವಂದನೆಗಳು.

  2. ಹೃದಯದಲ್ಲಿ ಹುಟ್ಟಿದ ಪ್ರೀತಿ ಬೌದ್ಧಿಕವಾಗಿ ಬೆಳೆದು ಎಲ್ಲರ ಹೃದಯಗಳನ್ನು ತಲುಪಿದೆ. ಸಾವು ಇನ್ನೊಂದು ಬದುಕಿನ ಆರಂಭ ಎಂಬ ಮಾತಿಗೆ ಸಾಕ್ಷಿಯಾಗಿದೆ.

Leave a Reply