ಕಾಡದಿದ್ದರೆ ಕೇಳಿ ಭುವನಾರ ಈ ಕವಿತೆಗಳು

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ‘ಅವಧಿ’ಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಭುವನಾ ಹಿರೇಮಠ್  ಅವರ ಕವಿತೆಗಳ ಬಗ್ಗೆ ವಿಮರ್ಶಕ ಶ್ರೀಶೈಲ ನಾಗರಾಳ ಅವರು ತಮ್ಮ ನೋಟವನ್ನು ಕಟ್ಟಿಕೊಡಲಿದ್ದಾರೆ.

ಭುವನೇಶ್ವರಿ ರಾಚಯ್ಯ ಹಿರೇಮಠ

ಹುಟ್ಟೂರು:ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕು, ಸೋಮನಟ್ಟಿ ಎಂಬ ಪುಟ್ಟ ಹಳ್ಳಿ
ತಂದೆ: ರಾಚಯ್ಯ (ಪ್ರವಚನಕಾರರು)
ತಾಯಿ: ಶಿವಗಂಗಾ
ಪತಿ: ಮೆಹಬೂಬ. ಮುಲ್ತಾನಿ
ವೃತ್ತಿ:  ಶಿಕ್ಷಕಿ (ಗಣಿತ) ಸರಕಾರಿ ಪ್ರೌಢಶಾಲೆ, ಹಿರೇನಂದಿಹಳ್ಳಿ. ಚನ್ನಮ್ಮನ ಕಿತ್ತೂರು ತಾಲೂಕು, ಬೆಳಗಾವಿ ಜಿಲ್ಲೆ

ಚಿಕ್ಕಂದಿನಿಂದಲೂ ಸಾಹಿತ್ಯಾಸಕ್ತಳಾಗಿದ್ದು ಶಾಲಾ ದಿನಗಳಲ್ಲಿ ಪತ್ರಿಕೆಗಳಲ್ಲಿ ಬರುವ ಸಾಹಿತ್ಯಿಕ ವಿಷಯಗಳನ್ನೇ ತುಸು ಹೆಚ್ಚು ಓದುತ್ತಾ ಬಂದಿರುವೆ. ಬದುಕೆಂಬ ಬಯಲಿಗೆ ಅಕ್ಷರಗಳ ಉಲ್ಲೇಖ ಒಂದು ಮಿತವಾದ ಮಾಧ್ಯಮವಾದರೂ ನನ್ನ ಆತ್ಮಸಂತೋಷಕ್ಕಾಗಿ ಬರವಣಿಗೆಯ ಜಗತ್ತಿನಲ್ಲಿ ತೆರೆದುಕೊಳ್ಳುವ ಪ್ರಯತ್ನದಲ್ಲಿರುವೆ.

ಗುಟ್ಟಾದ ಗೆಳೆಯ

ನಿನ್ನೆ ರಾತ್ರಿ ಮಂಚದ ಪಕ್ಕದಲ್ಲೇ
ಮುದುರಿಕೊಂಡು ಕುಳಿತ
ಕನಸಿನ ಸುಳಿವು ಹಿಡಿಯಲೆಂದೇ
ಎದ್ದು ಕುಳಿತಿದ್ದೆ,
ಮಸುಕು ಮಸುಕು
ಕಣ್ಣುಜ್ಜಿದೆ ಎರಡು ಬಾರಿ
ಕನಸು ಮಟಾಮಾಯ

ಮತ್ತೆ ದಿಂಬಿನ ಮೇಲೆ
ರಾತ್ರಿಯನ್ನಿರಿಸಿ
ಹಗಲಿನ ಕಣ್ಮುಚ್ಚಿ
ಮೊದಲು ನಿದ್ದೆಗಾಗಿ ಕಾದಿದ್ದೆ

ನಿದ್ದೆ ಆವರಿಸುವವರೆಗೂ
ಕನಸಿಗಾಗಿ ಕಾದದ್ದೂ
ನನ್ನ ಪರಿಜ್ಞಾನಕ್ಕೆ ಎಟುಕುತ್ತಿತ್ತು.

ವಿರಳ ಕೂದಲುಗಳ
ಹರೆಯದ ಗಂಡಸೊಬ್ಬ
ಮುಖದ ಮೇಲೆ ಚೂರೂ
ನಗುವಿಲ್ಲದೆ
ನನ್ನನ್ನುದ್ದೇಶಿಸಿ
ನೋಟ ನೆಟ್ಟಿದ್ದಾನೆ.

ಜಾಗೃತ ಸ್ಥಿತಿಯಲ್ಲಿ
ನೋಡಲಾಗದ ಅತೀ ಸುಂದರ
ಗುಟ್ಟಾದ ಗೆಳೆಯನನ್ನು
ಮಂಚದ ಪಕ್ಕದಲ್ಲಿ
ಹುಡುಕುವ ದಡ್ಡತನ!
ಈ ಕನಸಿನದೇ ಕಾರುಬಾರು

ಪದ್ಯ ಓದಿದ ಗೆಳೆಯರು
ತಲೆಗೂದಲು ಎಣಿಕೆ ಮಾಡುತ್ತಿದ್ದಾರೆ

ಕಾಮಾತುರ ಆತ್ಮಗಳು

ಒಂದು ಬೆಳದಿಂಗಳ ರಾತ್ರಿ
ನಾನು ಅವನು
ಆತ್ಮಗಳನ್ನು ಅರ್ಧಮಟ್ಟದವರೆಗೆ ಇಳಿಸಿ
ಶಾಪಗ್ರಸ್ಥ ಚಂದ್ರರ ಕುರಿತು
ಚಿಂತಿಸಿದೆವು,

ಅವನ ತೆಕ್ಕೆಗೆ ನಾನು
ನನ್ನ ತೆಕ್ಕೆಗೆ ಅವನು
ಆಗಾಗ ತೂಕಡಿಸಿ ಬಿದ್ದು
ಮತ್ತೆ ಎದ್ದು ಕುಳಿತು
ಕಣ್ಣುಜ್ಜಿಕೊಳ್ಳುತ್ತ
ಆಗಸ ದಿಟ್ಟಿಸಿದರೆ,

ಕತ್ತಲೆಯ ಕಡಲಿಗೆ ಹಾರಿ
ಆತ್ಮಹತ್ಯೆಗೆ ಶರಣಾದ ಚಂದ್ರರ
ಜೀವ ಉಳಿಸಲಾಗದೆ
ಪಶ್ಚಾತ್ತಾಪದಿಂದ ಮುಗಿಲ ಬಂಧ
ಕಳಚಿಕೊಂಡು ಬಯಲಿಗೆ ಧುಮುಕುವ
ತಾರೆಗಳ ಮಿಣುಕು,

ಕಣ್ಣು ಕುಕ್ಕುತಿವೆ ನಮಗೆ
ವಯಸ್ಸು ಹೋದ ಮುದುಕರಲ್ಲ
ನಾವು,
‘ಓ ಮುಗಿಲೇ, ನೀರಡಿಸಿದ ಮುಗಿಲೇ’
ಇಬ್ಬರೂ ಏಕಾಏಕಿ
ಕೈ ಕೈ ಜೋಡಿಸಿ ಕುಣಿಯುತ್ತ
ಈ ಹಾಡು ನಮ್ಮ ಬಾಲ್ಯವನ್ನೂ
ಯೌವ್ವನವನ್ನೂ
ಮುಟ್ಟಿ ಬರುವವರೆಗೂ
ಕಾಲಾವಕಾಶವಿದೆ.

ಅರ್ಧ ಇಳಿಸಿದ ಆತ್ಮಗಳ
ಏರಿಸಿ ಹಾರಿಸಿ
ಕೇಕೆ ಹಾಕಿ
ಸಿಳ್ಳು ಹೊಡೆದೊಡನೆ
ಮರಳಿ ಹೆಜ್ಜೆ ಇರಿಸಿದ ಹಾಡಿಗೆ
ಬೆಳದಿಂಗಳ ಕೊನೆಯ ಛಾಯೆ
ಚಂದ್ರರೆಲ್ಲ ನೀರಡಿಸಿದ್ದಾರೆ
ನಾಲಿಗೆಯಾದರೂ ತೊಯ್ಯಲಿ,
ನನ್ನ ತುಟಿಗೆ ಅವನು
ಅವನ ತುಟಿಗೆ ನಾನು
ಹಸಿ ಹಸಿ ಮುತ್ತನಿಡುತ್ತ
ಕಾಮಾತುರ ಆತ್ಮಗಳ
ಹಸಿವು ಹಿಂಗಿಸಿಕೊಂಡೆವು

ಮುಗಿಲ ಅಳುವಿನಲ್ಲಿ
ಎಷ್ಟೊಂದು ಕಾದಾಟಗಳು
ಬೆಂಕಿ ಚೀತ್ಕಾರ
ಕೊನೆಗೊಂದಿಷ್ಟು ಹನಿಗಳು…

ಕುಪ್ಪಸಗಳ ಅಂತರಂಗ

ಸಾವಿರ ಮಚ್ಚೆಗಳ ಪಾದ ನನ್ನದು
ಯಾವ ಚಿತ್ರಗಾರನಿಗೂ ಸವಾಲಾಗದ ಬಣ್ಣ
ಕ್ಯಾನ್ವಾಸಿನ ಪಿಕ್ಸೆಲ್ಲುಗಳಲ್ಲಿ
ಸಿಲುಕಿಕೊಂಡು ವಿರಮಿಸುವಲ್ಲಿ
ನೆರಿಗೆಗಟ್ಟುತ್ತಿರುವ ಚರ್ಮದ ಮಡಿಕೆಗಳ ನಿಸ್ತೇಜ ಹೊಳಪು
ಅದೊಂದೇ ಕುಂಚದಿಂದ ಸಾಧ್ಯ

ನಮ್ಮ ಆತ್ಮಗಳಿಗೆ
ಮೊಲೆಗಳಿರುವುದೇಯಿಲ್ಲ
ಆದರೂ ಅದುಮುತ್ತೀರಿ
ಅದೊಂದು ನಿಪುಣನೊಬ್ಬನ ಮೂರು ಆಯಾಮಗಳ
ಕಲ್ಪಿತ ತ್ರಿ-ಡಿ ಆ್ಯನಿಮೇಶನ್

ನಿಮಗೆ ಮನಬಂದಂತೆ ಕೆತ್ತಬಲ್ಲಿರಿ
ಜೋತುಬಿದ್ದ ಮೊಲೆಗಳ
ಒಂದು ಶಿಲ್ಪವೂ ಕಾಣುವುದಿಲ್ಲ
ನಿಪುಣನ ಊಹೆಗೆ
ಎಂದೂ ಮುಪ್ಪಡರಿಲ್ಲ,
ಕುಪ್ಪಸಗಳ ಅಂತರಂಗದಲಿ
ಮುಚ್ಚಿಡಲಾರೆವು
ವಯಸ್ಸುಹೋದ ಅಂದಕ್ಕೆ
ಒಂದು ಬಾಡಿದ ಹೂವಿನ ರೂಪಕವೂ ಒಲಿದಿಲ್ಲ.

ಇದು ಫೋರ್-ಜಿ ಗಳ ಕಾಲ
ಎಲ್ಲವನ್ನೂ ತಿದ್ದಿ ತೀಡಬಲ್ಲೆವು,
ನೆರಿಗೆ ಕಣ್ಣ ಕೆಳಗಿನ ಕಪ್ಪು
ಇಳಿಬಿದ್ದ ಕೆನ್ನೆ
ತ್ರಿವೇ ರಸ್ತೆಯಂತೆ ದಣಿದ ಹಣೆ
ರಸಾಯನವಿಲ್ಲದ ತುಟಿಗಳು

ಆತ್ಮದ ಮೈಮಾಟವನ್ನು ತಿದ್ದಲಾರೆವು ನಾವು,
ಬೆರಳ ಸ್ಪರ್ಶಗಳನ್ನೂ ಕೂಡ.

ಕಾಲ ನಿಲ್ಲುವುದಿಲ್ಲ

ಬಾನಂಚಿನ ಅಂಗೈಗೆ
ಮುತ್ತಿಡುವ ಬೆಳಕಿನಲಿ
ಮೈಯೆಲ್ಲ ಅರಿಶಿನ ಮೆತ್ತಿಕೊಂಡ
ಅಚ್ಚರಿಯ ಸಂಜೆಯೊಂದನು
ಗಟ್ಟಿಯಾಗಿ ತಬ್ಬಲೆಂದೇ
ತಲತಲೆಮಾರುಗಳಿಂದ
ಸಿಂಗರಿಸಿಕೊಂಡು ನಿಂತಿದ್ದೇನೆ.

ಮಾತು ಬಾರದ ಅಶೋಕವೃಕ್ಷ
ಮಮ್ಮಲ ಮರುಗುತ್ತ
ಆಚೀಚೆ ಬಾಗಿ ಸಂತೈಸುತ್ತದೆ
ತಲೆಸವರುವ ಅವ್ವನಂತೆ

ಕಂಬಳಿಯೊಳಗವಿತ ಮೊದಲಗಿತ್ತಿಯ ಕಣ್ಣುಗಳಲ್ಲಿ
ಅದ್ಯಾವುದೋ ದಿವ್ಯಕಾಂತಿ
ಯಾವ ಪುರಾಣದ ಆಧ್ಯಾತ್ಮ ಅರೆದು ಕುಡಿದಿರುವಳೋ,
ನಾನಿನ್ನೂ ಕಾಯಬೇಕು
ವಯಸ್ಸಾಗುವವರೆಗೆ
ಇದೇ ಹಣ್ಣುಹಣ್ಣಾದ ಅಶೋಕದ ಎಲೆಗಳ ಹಾಸಿನ ಮೇಲೆ,
ಸಂಜೆಗಳೇ ಓಡಿಬಂದು
ನಡುಬಳಸಿ ಕಣ್ಣಲ್ಲಿ ಕಣ್ಣಿಡುವ ತನಕ ಬಲ ಬರುವುದಿಲ್ಲ,
ತವರಿನಂತೆ ಆವರಿಸುವ ಹಳದಿ ಹೂವುಗಳ ಸಂತೆಯಲ್ಲಿ ಕಳೆದುಹೋಗಿದ್ದೇನೆ.

ಅದೆಷ್ಟು ಜಗತ್ತುಗಳಡಗಿವೆ
ನನ್ನೂರಿನ ಹಾಲುಹಾದಿಯಲ್ಲಿ,
ಒಂಟಿ ತಾರೆಯ ಬೆಳಕಿಗೂ ಕರುಣೆಯಿಲ್ಲ,
ಕಾಲದ ಅಂಗಿ ಜಗ್ಗಿ
ನನ್ನ ಸೀರೆಯ ಸೆರಗಿನೊಂದಿಗೆ
ಗಂಟು ಬಿಗಿಯಲೇಯಿಲ್ಲ,

ಇನ್ನೂ ಕಾಯುತ್ತಿದ್ದೇನೆ
ಬೋಳು ಅಶೋಕವೃಕ್ಷಕ್ಕೀಗ
ಮುಪ್ಪು
ಹಿಮ್ಮಡಿ ಸವೆಯುವಷ್ಟು ದಾರಿ ಸಾಗಿದರೂ
ನನ್ನ ವಯಸ್ಸಿಗೆ ಹಿರಿತನವೇ ಬರಲಿಲ್ಲ
ಕಾಲ ನಿಲ್ಲುವುದಿಲ್ಲ
ನಾವು ಕೂಡುವುದಿಲ್ಲ.

ಕಳೆದುಕೊಂಡ ನಕ್ಷತ್ರ

ಹಗಲಿಗೆ ತೆರೆಬೀಳುವ ಮುನ್ನ
ಒಂಟಿಗಾಲಲಿ ನಿಂತು
ಒಮ್ಮೆ ಕ್ಲಿಕ್ಕಿಸಿಬಿಡು
ಜೀವಂತ ಸಂಜೆಗಳ ಲೆಕ್ಕ
ನಿನ್ನಿಷ್ಟದಂತೆ ಖರ್ಚಾಗುವುದಿಲ್ಲ,

ಕಳೆದುಕೊಂಡ ನಕ್ಷತ್ರ ಮತ್ತಿದೇ ಗೆಲಕ್ಸಿಯಲಿ ಜನ್ಮತಾಳುವ ಮಾತು
ಬರೀ ತುಟಿಗಳ ಚಲನೆ.
ಸತ್ಯಗಳಲ್ಲಿ ನಂಬಿಕೆಯಿಲ್ಲ
ಈಗೀಗ ಬೆಳಕಿಗಿಂತ
ಇರುಳುಗಳೇ ಎಚ್ಚರಗೊಂಡಿವೆ.

ನಾನಾದರೂ ಎಲ್ಲಿ ಹೋಗಲಿ
ಯಾವುದೋ ಅಂಚಿನಲ್ಲಿ
ದಿಗಂತವೂ ಸುಳ್ಳಾಗಿ ಅಣಕಿಸಿದರೆ,
ಕೈಕುಲುಕಿದ ನಿನ್ನ ನೆನಪನ್ನೇ
ಕಣ್ತುಂಬ ಅಪ್ಪಿಕೊಂಡು
ಕಳೆದುಕೊಂಡ ನಕ್ಷತ್ರ ಹುಡುಕುತ್ತಲೇ
ಹಜಾರು ಜನ್ಮಗಳ ದೂಡುತ್ತೇನೆ,
ಒಂದಾನೊಂದು ದಿನ
ಬಯಲಿಗೂ ಕರುಣೆ ಉಕ್ಕಿ ಬಂದ ದಿನ,
ಅನಂತದಲೊಮ್ಮೆ ನಿನ್ನ ಸೇರುತ್ತೇನೆ

26 comments

 1. ಕುಪ್ಪಸಗಳ ಅಂತರಂಗ…

  ಸಂಜೆಗಳೇ ಓಡಿಬಂದು
  ನಡುಬಳಸಿ ಕಣ್ಣಲ್ಲಿ ಕಣ್ಣಿಡುವ ತನಕ ಬಲ ಬರುವುದಿಲ್ಲ,.

  ಹಿಮ್ಮಡಿ ಸವೆಯುವಷ್ಟು ದಾರಿ ಸಾಗಿದರೂ
  ನನ್ನ ವಯಸ್ಸಿಗೆ ಹಿರಿತನವೇ ಬರಲಿಲ್ಲ.

  ಕಳೆದುಕೊಂಡ ನಕ್ಷತ್ರ..

  sogasada kavitegalu

  Nutana Doshetty

 2. ಆಹಾ ಭುವನಾ.. ಅಪರೂಪಕ್ಕೆ ಒಳ್ಳೆಯ ಕವಿತೆಯನ್ನೋದಿದೆ. ಇದನ್ನು ನಾನು ಬರೆಯಬೇಕಿತ್ತು ಎಂಬ ಸಣ್ಣ ಹೊಟ್ಟೆ ಕಿಚ್ಚಿನೊಂದಿಗೆ

  • ನಿಮ್ಮ ಕವಿತೆಗಳನ್ನೋದಿದಾಗ ನನಗೂ ಹಿಗೆಯೇ ಅನಿಸಿದೆ

 3. ಮಾತು ಬಾರದ ಅಶೋಕವೃಕ್ಷ
  ಮಮ್ಮಲ ಮರುಗುತ್ತ
  ಆಚೀಚೆ ಬಾಗಿ ಸಂತೈಸುತ್ತದೆ
  ತಲೆಸವರುವ ಅವ್ವನಂತೆ

  ವಾವ್! ಸೂಪರ್.
  ತುಂಬಾ ಇಷ್ಟವಾಯಿತು. ಕವಿತೆಗೆ ಅಮ್ಮನ ನೆರಳು!!

 4. ಅರ್ಥಪೂರ್ಣ ಕವಿತೆಗಳು ಭುವನಾ ಅಭಿನಂದನೆಗಳು

  • ನಿಮ್ಮ ಓದಿನ ಪ್ರೀತಿಗೆ ಶರಣು ಅಮ್ಮ… ನಾನು ನಿಮ್ಮ ದೊಡ್ಡ ಅಭಿಮಾನಿ

 5. ಒಳ್ಳೆಯ ಕವಿತೆಗಳು ಅಕ್ಕ..
  ಅಭಿನಂದನೆಗಳು…

 6. ಒಳ್ಳೆಯ ಕವಿಗಳು ಅಕ್ಕಾ…
  ಅಭಿನಂದನೆಗಳು…

 7. ಭುವನಾ ಚೆಂದ…. ನಿನ್ನ ಎಲ್ಲ ಕವಿತೆಗಳಂತೇ ತೀವ್ರ….

 8. ಕವಿತೆಗಳು ಸುಂದರವಾಗಿವೆ.ಮನತಟ್ಟುವ ಕವಿತೆಗಳನ್ನು ಬರೆದಿರುವ ಭುವನಾರವರಿಗೆ ಅಭಿನಂದನೆಗಳು

 9. “ಆತ್ಮದ ಮೈಮಾಟವನ್ನು ತಿದ್ದಲಾರೆವು ನಾವು, ಬೆರಳ ಸ್ಪರ್ಶಗಳನ್ನೂ ಕೂಡ” Nijakku kaduva kavithegalu Bhuvana

Leave a Reply