ನಮ್ಮ ಮನೆಯಲ್ಲಿ ಶ್ರಾದ್ಧದ ಆಚರಣೆ ಮುಕ್ತಾಯ ಆಯಿತು..

ನೆನಪು 17

ಆಯಿಯ ನಂಬಿಕೆ- ಅಜ್ಜನ ಶ್ರಾದ್ಧ- ಅಣ್ಣನ ಮುಜುಗರ

ನಮಗೆಲ್ಲಾ ಸೋಜಿಗದ ಸಂಗತಿಯೆಂದರೆ ಅತ್ತೆ (ಅಣ್ಣನ ತಂಗಿ) ತಂದು ಕೊಟ್ಟ ಕೆಂಪು ಮಡಿ (ನಮ್ಮನೆಯಲ್ಲಿ ಕೆಂಪು ಮಡಿ ಇರಲಿಲ್ಲವೆಂದು ಆಕೆ ಅವರ ಮನೆಯಿಂದ ತರುತ್ತಿದ್ದಳು. ಮತ್ತೆ ಸಂಜೆ ಹೋಗುವಾಗ ಒಯ್ಯುತ್ತಿದ್ದಳು.) ಉಟ್ಟುಕೊಂಡು, ಮನೆಯ ಒಳಗಿರುವ ದೇವರಿಗೆ -ದೇವರೆಂದರೆ ಅಡಿಗೆ ಕೋಣೆಯ ಮೂಲೆಯ ಗೋಡೆಯ ಗುಬ್ಬೆಯಲ್ಲಿ ಇಟ್ಟಿರುವ 2 ತೆಂಗಿನ ಕಾಯಿ ಅಷ್ಟೆ!- ಪೂಜೆ ಮಾಡಿ, ಪೂಜೆಯೆಂದರೆ ತೆಂಗಿನ ಕಾಯಿಯೆದುರು ಒಂದು ಸಣ್ಣ ಗಿಂಡಿಯಲ್ಲಿ ನೀರಿಟ್ಟು, ನಾಲ್ಕಾರು ತುಳಸಿ ಕೊಂಬೆ ಹಾಕಿ, ಊದಿನಕಡ್ಡಿ ಹಚ್ಚುವುದು. ಅಕ್ಕ ಬಡಿಸಿಕೊಟ್ಟ ಎಡೆಯನ್ನು ತೆಗೆದುಕೊಂಡು ಹಿತ್ತಲಿನಲ್ಲಿ ಇಟ್ಟು ಕಾಗೆಗೆ ಹಾಯ್……… ಹಾಯ್ ಎಂದು ಅಣ್ಣ ಕೂಗಿ ಕರೆಯುತ್ತಿರುವುದು….

ಕರೆಯುತ್ತಿದ್ದಂತೆ ಕಾಗೆ ಬಂದು ಎಡೆಯಲ್ಲಿ ಇದ್ದ ಪದಾರ್ಥಗಳನ್ನು ಕಚ್ಚಿಕೊಂಡು ಹೋಗುತ್ತದೆ. ಸಾಮಾನ್ಯವಾಗಿ ಅದು ಲಾಡನ್ನೋ ಅಥವಾ ಅಕ್ಕಿಯ ಇಡ್ಲಿಯನ್ನೋ ಕಚ್ಚಿಕೊಂಡು ಹೋಗುತ್ತದೆ. ಕೆಲವು ಕಡೆ ಕಾಗೆ ತಿಂದ ಹೊರತು ಯಾರಿಗೂ ಊಟ ಇಲ್ಲ.

ಆ ಕಾಗೆಯೋ ದಿನಾ “ಉಂಡ ಕೈಯಲ್ಲೂ ಕಾಗೆ ಓಡಿಸದ” ಈ ಕಂಜೂಸು ಮನುಷ್ಯರು ಇಂದು ಊಟ ಇಟ್ಟು ಕರೆಯುತ್ತಾರೆ ಎಂದರೆ ಏನೋ ಅಪಾಯ ಇರಬೇಕೆಂದು ಆ ಮರ ಈ ಮರ ಅಂತ ಅರ್ಧಗಂಟೆ ಓಡಾಡಿ ಇರುವ ದೊಡ್ಡ ಐಟೆಂನ್ನು ಎತ್ತಿಕೊಂಡು ಹೋಗುತ್ತದೆ. ಆಗ ಮನೆಯ ತುಂಬಾ ಸೇರಿದ (ತುಂಬಾ ಜನ ಎಂದರೆ ಬಹಳೇನಲ್ಲ. 10-15 ಜನ) ಜನರೆಲ್ಲಾ ಊಟ ಮಾಡುವುದು. ಇ

ದೆಲ್ಲಾ ಆಗುವಾಗ ಅಣ್ಣನ ಮುಖದಲ್ಲಿ ಅಸಹನೆ, ಮುಜುಗರ ಎದ್ದು ಕಾಣುತ್ತಿತ್ತು. ಆಯಿಗೆ ಕಾಣದಂತೆ ಪ್ರಜ್ಞಾಪೂರ್ವಕವಾಗಿ ಈ ಭಾವವನ್ನು ಆತ ಹತ್ತಿಕ್ಕಿಕೊಳ್ಳುತ್ತಿದ್ದ. ಇದು ಪ್ರತಿವರ್ಷ ನಮ್ಮೂರ ಜಾತ್ರೆಯಾದ ಹೊಸಾಕುಳಿ ಜಾತ್ರೆಯ ಮರುದಿನ ನಡೆಯುವ ಅಣ್ಣನ ಅಪ್ಪನ (ನನ್ನ ಅಜ್ಜನ) ಶ್ರಾದ್ಧದ ಚಿತ್ರ.

ನಮ್ಮ ಹಿರಿಯರು ಕಾಗೆಯ ರೂಪದಲ್ಲಿ ಬರುತ್ತಾರೆಂದೋ, ಅಥವಾ ಅನ್ಯ ಲೋಕದಲ್ಲಿ ಉಪವಾಸ ಇರುವ ಹಿರಿಯರಿಗೆ ಈ ಕಾಗೆ ಆಹಾರ ಕೊಡುತ್ತದೆಂದೋ ನಂಬಿಕೆ ಇರಬೇಕು. ಉಳಿದ ದಿನ ಕಾಗೆ ಮುಟ್ಟಿದರೆ ಸ್ನಾನ ಮಾಡಿ ಬರುವ ಜನ, “ಕೆಟ್ಟ ಕಾಗೆ…ಕರ್ ಕರ್ ಅಂಯ ಕೂಗ್ತಿದೆ. ಅದರ ಗಂಟಲು ಕಟ್ಟಹೋಗಾ” ಎಂದು ಬೈಯುವ ಜನ ಅಂದು ಮಾತ್ರ ಕಾಗೆಗೆ ಹಿರಿಯರನ್ನು ಹೋಲಿಸುವುದು ಆಶ್ಚರ್ಯ. ಇರಲಿ ಬಿಡಿ, ಈ ನೆಪದಲ್ಲಾದರೂ ಕಾಗೆಗೆ ಒಂದು ದಿನ ಹೊಟ್ಟೆ ತುಂಬಾ ಊಟ ಸಿಗುತ್ತದಲ್ಲಾ! ಆದರೆ ಇತ್ತೀಚೆಗೆ ಕಾಗೆಯ ಸಂತತಿಯೇ ಕಡಿಮೆಯಾಗುತ್ತಿದೆ. ಎಲ್ಲೂ ಕಾಣುವುದಿಲ್ಲ. ಪಾಪ! ಪರಲೋಕಲ್ಲಿರುವ ನಮ್ಮ ಹಿರಿಯರೆಲ್ಲ ಇನ್ನು ಉಪವಾಸ ಬೀಳುವುದೇ ಆಯಿತು. ಪರ್ಯಾಯ ಏನೋ ಗೊತ್ತಿಲ್ಲ?

ಹೌದು, ಪ್ರತಿವರ್ಷ ನಮ್ಮ ಮನೆಯಲ್ಲಿ ನಡೆಯುತ್ತಿರುವ ಒಂದು ಧಾರ್ಮಿಕ ಕಾರ್ಯಕ್ರಮ ಇದಾಗಿತ್ತು. ಹಾಗೆ ನೋಡಿದರೆ ಕೆಲವು ಹಬ್ಬದ ದಿನ ನಾವು ಅಜ್ಜನ ಮನೆಗೋ ಅಥವಾ ನೆಂಟರ ಮನೆಗೋ ಹೋಗಿ ಊಟ ಮಾಡಿ ಬರುತ್ತಿದ್ದೆವು. ಆದರೆ ಈ ಒಂದು ದಿನ ನಮ್ಮೂರಿನ ನಮ್ಮ ನೆಂಟರನ್ನು ಕರೆದು ಊಟ ಹಾಕುತ್ತಿದ್ದೆವು. ಯಾವಾಗಲೂ ಊಟಕ್ಕೆ ಶಂಕರ ಪೊಳೆ (ಗೋಧಿ ಹಿಟ್ಟಿನಿಂದ ಮಾಡುವ ಪುರಿ) ಪಾಯಸ ಮಾಡುತ್ತಿದ್ದರು. ನಮಗಂತೂ ಹೊಸಾಕುಳಿ ಜಾತ್ರೆಗೆ ಹೋಗುವ ಗಡಿಬಿಡಿ; ಆದರೆ ಮನೆಯಲ್ಲಿ ಹಬ್ಬದ ವಾತಾವರಣ.

ಊಟಕ್ಕೆ ಬಂದ ಹಲವರಿಗಂತೂ ಇದೊಂದು ಬಿಡಿಸಲಾರದ ಬೇತಾಳ ಪ್ರಶ್ನೆಯಾಗಿತ್ತು. ದೇವರು ದಿಂಡರನ್ನು ನಂಬದ ರೋಹಿದಾಸ ಭಾವ (ಅಣ್ಣನ ಹೆಸರು ರೋಹಿದಾಸ ಅಂತ. ಊರಿಗೆಲ್ಲಾ ನಮ್ಮಮ್ಮ ದೊಡ್ಡಕ್ಕನಾಗಿರುವುದರಿಂದ ಈತ ಭಾವನಾಗಿದ್ದ.) ಮಡಿ ಉಟ್ಟುಕೊಂಡು ಶ್ರಾದ್ಧ ಮಾಡುವುದನ್ನು ಹಲವರು ಸೋಜಿಗದಿಂದ, ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಆಮೇಲೆ ಪ್ರತಿವರ್ಷ ಊಟಕ್ಕೆ ಬರುವವರಿಗೆ ಇದು ರೂಢಿಯಾಯಿತು.

ಬಂದವರಿಗೆ ಮಾತ್ರವಲ್ಲ ನಮಗೂ ಸೋಜಿಗವೆ. “ಜೀವ ಇರುವಾಗಲೇ ಎಷ್ಟು ಬೇಕೋ ಅಷ್ಟನ್ನು ತಿಂದುಕೋ. ಬೇಕಾದರೆ ಮತ್ತೆ ತಂದು ಕೊಡ್ತೇನೆ. ಸತ್ತ ಮೇಲೆ ಮತ್ತೆ ಶ್ರಾದ್ಧಗೀದ್ಧ ಮಾಡುದಿಲ್ಲ.” ಎಂದು ಸಂದರ್ಭ ಸಿಕ್ಕಾಗೆಲ್ಲಾ ಅಣ್ಣ ಆಯಿಗೆ (ಅಜ್ಜಿಗೆ) ಹೇಳುತ್ತಿದ್ದ.

“ಯಾರು ಮಾಡು ಎಂದರು? ಸತ್ತ ಮೇಲೆ ನೀನು ಮಾಡ್ತಿಯೋ ಇಲ್ಲವೋ ಎಂದು ಯಾರು ನೋಡೋಕೆ ಬರ್ತಾರೆ? ಮಾಡು…. ಬಿಡು… ನಂದೇನು ತಕರಾರಿಲ್ಲ” ಎಂದು ಯಾವಾಗಲೂ ಆಯಿ ಪ್ರತ್ಯುತ್ತರ ಕೊಡುತ್ತಿದ್ದಳು. ಆದರೆ ಅಜ್ಜನ ಶ್ರಾದ್ಧ ಮಾಡುವುದು ಬೇಡ ಅಂತ ಎಂದೂ ಹೇಳಿದಂತಿಲ್ಲ.

ಈ ಮೇಲಿನ ಅಣ್ಣನ ಮಾತು ಶ್ರಾದ್ಧವಿಲ್ಲದ ಮನೆಯ ಪೂರ್ವಬಾವಿ ತಯಾರಿ ಇದ್ದಂತ್ತಿತ್ತು. ಮನೆಯ ಎಲ್ಲರನ್ನೂ ಮಾನಸಿಕವಾಗಿ ತಯಾರಿ ಮಾಡುವ ತರ ಇದ್ದವು.

ಅಜ್ಜಿಯು ಕೊನೆಯ ದಿನಗಳಲ್ಲಿ ಉಸಿರಾಟ ತೊಂದರೆ ಅನುಭವಿಸಿದಳು. ಅಣ್ಣ ಅವಳಿಗೆ ಮಾಡಿದ ಔಷಧ ಒಂದೆರಡಲ್ಲ… ಅದ್ಭುತವಾದ ಆರೈಕೆ ಮಾಡಿದ. ಮಧ್ಯರಾತ್ರಿ ಬೇಕಾದರೂ ವೈದ್ಯರನ್ನು ಕರೆದುಕೊಂಡು ಬರುತ್ತಿದ್ದ. ಶ್ರಾದ್ಧ, ತಿಥಿ, ಪೂಜೆ ಇವುಗಳ ಬಗ್ಗೆ ಅಣ್ಣ ನಂಬಿಕೆ ಇಟ್ಟುಕೊಂಡಿದ್ದಾನೆ ಎಂದುಕೊಂಡವರಿಗೆ ನಿರಾಶೆ ಕಾದಿತ್ತು. ಯಾಕೆಂದರೆ ಅಜ್ಜಿ ತೀರಿಕೊಂಡ ಮೇಲೆ ಅವಳ ದಿನವನ್ನೂ ಮಾಡಿಲ್ಲ; ಹಿಂದೆ ಮಾಡುತ್ತಿದ್ದ ಅಜ್ಜನ ಶ್ರಾದ್ಧವನ್ನು ಮಾಡಿಲ್ಲ!! ಅಜ್ಜಿಯ ನಿಧನದೊಂದಿಗೆ ನಮ್ಮ ಮನೆಯಲ್ಲಿ ಶ್ರಾದ್ಧದ ಆಚರಣೆ ಮುಕ್ತಾಯ ಆಯಿತು.

“ಆಯಿ ನಮ್ಮ ಕಾಲದವಳಲ್ಲ, ಅನಕ್ಷರಸ್ಥಳು. ಸಂಪ್ರದಾಯದ ನಡುವೆ ಬೆಳೆದವಳು. ಅವಳಿಗೆ ಶ್ರಾದ್ಧ, ತಿಥಿಗಳಲ್ಲಿ ನಂಬಿಕೆ ಇರಬಹುದು. ಅವಳಾಗಿ ಇಂತದ್ದೊಂದು ಕಾರ್ಯ ಮಾಡುವ ಅಥವಾ ಬಿಡುವ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಆಕೆ ಇಲ್ಲ. ಎಲ್ಲದಕ್ಕೂ ನೌಕರಿ ಇರುವ ನನ್ನನ್ನೇ ಅವಲಂಬಿಸಬೇಕು. ಹೀಗಿರುವಾಗ ನಾನು ನನ್ನ ನಂಬಿಕೆಯ ಆಧಾರದಲ್ಲಿ ಶ್ರಾದ್ಧ ಮಾಡುವುದು ಬಿಟ್ಟರೆ ಅವಳ ಮೇಲೆ ನನ್ನ ನಂಬಿಕೆಯನ್ನು ಹೇರಿದಂತಾಗುತ್ತದೆ.

ನಾನು ಯಾರ ಮೇಲೂ ನಂಬಿಕೆಯನ್ನು ಹೇರುವುದಿಲ್ಲ. ಅವರೇ ಬದಲಾಗುತ್ತಾ ಹೋಗಬೇಕು. ಬದಲಾಗುವಂತೆ ಮಾಡಬೇಕು. ಹಾಗಾಗಿ ನನಗೆ ನಂಬಿಕೆ ಇಲ್ಲದಿದ್ದರು ಆಯಿಗಾಗಿ ನಾನು ಮಾಡಲೇಬೇಕು. 10 ಜನಕ್ಕೆ ಊಟ ಹಾಕಿಸುವ ಖರ್ಚು ಉಳಿಸಲು ಹೀಗೆ ಮಾಡುತ್ತಿದ್ದಾನೆ ಮಗ ಎಂದು ಆಕೆಗೆ ಅನಿಸಬಾರದಲ್ಲ.? ಅವಳಿರುವವರೆಗೆ ಇದು ನಡೆಯಲಿ ಬಿಡು” ಎನ್ನುತ್ತಿದ್ದ.

ಆಯಿ ತೀರಿಕೊಂಡ ಮೇಲೆ ಅಣ್ಣ ದೊಡ್ಡದೊಂದು ಮುಜುಗರದಿಂದ ಪಾರಾದ ಅನ್ನಿಸಿತು ನಮಗೆ. ಆದರೂ ಆಸ್ತಿಕಳಾದ ಹೆಂಡತಿ ಮತ್ತು ಆತನ ಒಬ್ಬಳೇ ತಂಗಿ (ಮೀರಾ) ಏನೆನ್ನುತ್ತಾರೋ ಎಂಬ ಗೊಂದಲ. ಕೂಡ್ರಿಸಿ ಕೇಳಿದ, ಯಾರೂ ಶ್ರಾದ್ಧ ಮಾಡಬೇಕೆಂದು ಹೇಳಲಿಲ್ಲ.

ಆಗಲೇ ಅವರೂ ಅಣ್ಣನೊಂದಿಗೆ ಬದಲಾಗಿದ್ದರು. ಮುಂದುವರಿದು, ನಾವೂ ಅಣ್ಣನ, ಅಕ್ಕನ ಶ್ರಾದ್ಧ ಮಾಡಲಿಲ್ಲ. ಅದರ ಬದಲು ಯಾವುದಾದರೂ ಶಾಲೆಗೆ ಪ್ರತಿ ವರ್ಷ ಊಟ ಹಾಕಿಸುವ, ಪಟ್ಟಿ ಪುಸ್ತಕ ನೀಡುವ ಕೆಲಸ ಮಾಡುತ್ತಿದ್ದೇವೆ.

Leave a Reply