ಅಮಾವಾಸ್ಯೆ ಬಂತು ಮಣ್ಣು ತನ್ನಿ..

ವಿಜಯಭಾಸ್ಕರ್. ಸೇಡಂ

ಸಣ್ಣ ಅಗಸಿಯ ಕುಂಬಾರ ಗಲ್ಲಿಯಲ್ಲಿದ್ದ ನಾವು ಹಬ್ಬಕ್ಕೆ ಮತ್ತು ಜಾತ್ರೆಗೆ ತಾತನ ಹತ್ತಿರ ಕಾಡಿಬೇಡಿ 50 ಪೈಸೆ ತೊಗೊಂಡು ಪಿಂಜರ್ ನತಿಜಾಬಿ ಹತ್ತಿರ ಬಾದಾಮಿ ಖರೀದಿ ಮಾಡಿ ಯಾರಿಗೂ ನೀಡದೆ ತಿಂದದ್ದು ಈಗಲೂ ಸಂತೆಯಲ್ಲಿ ಅಥವಾ ಬಾದಾಮಿ ಗಿಡ ನೋಡಿದಾಗ ನೆನಪಾಗಿ ಬಾಲ್ಯದ ದಿನಗಳು ಎದೆಗೆ ಅಬ್ಬರಿಸುತ್ತವೆ.

ಸಣ್ಣ ಅಗಸಿ ಎಂದರೆ ಅದು ಬರೀ ಒಂದು ವಠಾರವಾಗಿರಲಿಲ್ಲ. ಅದು ಸರ್ವ ಜನಾಂಗದ ಸಮಚಿತ್ತವಾದ ಅನ್ಯೋನ್ಯತೆಯಾಗಿತ್ತು. ಕುಂಬಾರಗಲ್ಲಿಯ ಹಿಂದಿನ ಜಾಗದಲ್ಲಿ ಮಡಿಕೆ, ಹಣತೆ, ಮಣ್ಣಿನ ವಸ್ತುಗಳನ್ನು ಗುಮ್ಮಿಮಾಡಿ ಸುಡುವ ಕ್ರಿಯೆ ನಡೆಯುತ್ತಿತ್ತು. ಆ ಕ್ರಿಯೆಯನ್ನು ನೋಡಲು ನಾವು ಒಂಟಿಗಾಲಲ್ಲಿ ನಿಂತು ನೋಡುತ್ತಾ ನಿಬ್ಬೆರಗಾಗಿ ನಿಲ್ಲುತ್ತಿದ್ದೆವು.

ನಮ್ಮೂರಿಗೆ ಪ್ರಸಿದ್ದಿಯಾಗಿದ್ದ ಕುಂಬಾರಿಕೆ ಅದು ನಮ್ಮ ವಠಾರದಲ್ಲಿದೆ ಎನ್ನುವುದು ನಮಗೆ ಗೊತ್ತಿರದ ಸಂಗತಿ. ಮಣ್ಣನ್ನ ಹದ ಬರುವವರೆಗೂ ತುಳಿದು ಅದಕ್ಕೆ ಬೂದಿ, ಸುಣ್ಣದ ಪುಡಿ, ನೀರು ಹಾಕಿ ಬೆರೆಯುವವರೆಗೂ ತುಳಿಯುವ ಆ ರೂಡಿನೇ ನೋಡಲು ಚಂದ. ಆದರೆ ಆ ತುಳಿಯುವ ರೀತಿ ಕುಂಬಾರಿಕೆ ಮಾಡುವವರಿಗೆ ಮಾತ್ರ ಗೊತ್ತು. ನಾನು ಹೀಗೆ ಪೆದ್ದು ಪೆದ್ದು ಹಾಗೇ ಮೊಂಡು ಧೈರ್ಯ ಮಾಡಿ ಮಣ್ಣು ತುಳಿಯಲು ಹೋಗಿ ಮೈ ತುಂಬ ಕೆಸರು ಮಾಡಿಕೊಂಡದ್ದು ಇದೆ.

ಮಾಸ್ತರ್ ಕುಟುಂಬದಲ್ಲಿ ಬೆಳೆದ ನಮಗೆ ಜಾಸ್ತಿ ಮರ್ಯಾದೆ ಕೊಡುತ್ತಿದ್ದರು. ಮಣ್ಣೆತ್ತಿನ ಅಮಾವಾಸೆ ಬಂತೆದರೆ ಕುಂಬಾರರಿಗೆ ಬಲು ವ್ಯಾಪಾರ. ಮಣ್ಣಿನಿಂದ ಮಾಡಿದ ಎತ್ತುಗಳನ್ನು ಕುಂಬಾರರ ಹತ್ತಿರ ಜೋಳ ಅಥವಾ ದುಡ್ಡು ಕೊಟ್ಟು ಖರೀದಿ ಮಾಡಿ ಮನೆಯ ಜಗುಲಿ ಮೇಲೆ ಇಟ್ಟು ಪೂಜೆ ಮಾತ್ರ ಮಾಡುವ ಸಂಪ್ರದಾಯ ಇದೆ.

ಹಾಗಾಗಿ ಮಣ್ಣೆತ್ತಿನ ಹಬ್ಬ ಬಂದರೆ ಕುಂಬಾರರಿಗೆ ವ್ಯಾಪಾರವೋ ವ್ಯಾಪಾರ. ಈ ಹಬ್ಬದ ತಿಂಗಳಿನ ಮುಂಚೆಯೇ ಎತ್ತುಗಳನ್ನು ತಯಾರಿ ಮಾಡುತ್ತಿದ್ದರು. ಆಗ ನಾವು ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಸಿಂಗಾರ ಮಾಡುವುದು, ಕಣ್ಣುಗಳು, ಕಿವಿ, ಬಾಲ ಮಾಡುತ್ತಾ ನಮಗೂ ಸ್ವಲ್ಪ ಕುಂಬಾರಿಕೆ ಬರುತ್ತಿತ್ತು. ಹಾಗೆ ಮಾಡಿದ ಎತ್ತುಗಳ ಸಿಂಗರಿಸಿದಕ್ಕೆ ತಲಾ ಒಂದು ರೂಪಾಯಿ ನೀಡುತ್ತಿದ್ದರು. ಬಂದ ಹಣದಿಂದ ಬಾಡಿಗೆ ಸೈಕಲ್ ತೊಗೊಂಡು ಊರು ಸುತ್ತುವ ಗೋಜಿಗೆ ಹೋಗ್ತಾ ಇದ್ವಿ.

ಇಂದು ಮಣ್ಣೆತ್ತಿನ ಅಮಾವಾಸ್ಯೆ. ಉತ್ತರ ಕರ್ನಾಟಕದ ಮಂದಿಗೆ ಅದರಲ್ಲೂ ರೈತರಿಗೆ ಹಬ್ಬದ ಸಡಗರ. ಮನೆಯಲ್ಲಿ ಹಬ್ವದ ವಾತಾವರಣ ಮತ್ತು ಜೋಡಿ ಮಣ್ಣಿನ ಎತ್ತುಗಳನ್ನು ನೋಡಿದ ಮೇಲೆ ಬಾಲ್ಯ ನೆನಪಾಯಿತು.

3 comments

Leave a Reply