ಕನಸು ಕಂಡದ್ದಂತೂ ನಿಜ, ಆದರೆ..

ಶಿಲ್ಪಶ್ರೀ ಜಿ 

ಕನಸು ಕಂಡದ್ದಂತೂ ನಿಜ
ಆದರೆ
ಆ ಕನಸುಗಳು
ಗಾಜಿನ ಮನೆಯ
ಹೂಗಳಾಗಿಬಿಡಬಹುದೆಂಬ
ಸಣ್ಣ ಕಲ್ಪನೆಯೂ ಇರಲಿಲ್ಲ

ಅಳೆದೂ ಸುರಿದೂ
ಇಡುವ ಹೆಜ್ಜೆ
ಹೆಚ್ಚುಕಡಿಮೆಯಾಗದಂತೆ
ಆಡುವ ಮಾತುಗಳು
ತೂಕ ಹೊಂದಿಸಿಕೊಂಡು ನಗುವ
ಮುಗಳ್ನಗು
ಭಾವನೆಗಳ ಸ್ಪರ್ಶವನ್ನೇ ಮರೆತ
ಕಣ್ಣುಗಳು
ಎಲ್ಲವೂ ಇಲ್ಲಿ ನಿಯಂತ್ರಿತ
ಗಾಜಿನ ಮನೆಯಲ್ಲಿನ
ಹೂಗಳಂತೆ


ಇಂತಿಷ್ಟೇ ಅರಳಬೇಕು
ಇಂಥದೇ ಬಣ್ಣ
ಪಸರಿಸುವ ಘಮಲೂ ಇಲ್ಲಿ
ಪೂರ್ವ ನಿರ್ಧರಿತ
ಅಳತೆಗೋಲು ಕತ್ತರಿ
ಸುತ್ತ ಸುಳಿವುದ ಕಂಡ
ಕನಸುಗಳು
ಕಸಿಯಾಗುವ ಭಯಕ್ಕೆ
ನಡುಗಿ
ತಮ್ಮ ತಾವೆ ಅಗೆದು
ಸೇರಿದವು ಮನದ ಗೋರಿ

ಹೊರಹಾಕಲಾರದೆ
ನುಂಗಿದ ಕಂಬನಿಯೊಂದು
ಮನವ ಹದಮಾಡಿ
ಕನಸ ಬೀಜವ ಚಿಗುಟಿ
ಚಿಗುರಿಸಿತು ಮತ್ತೆ
ರೆಕ್ಕೆ ಮೂಡಿದಂತಾಗಿ
ಸೊಂಪಾಗಿ ಬೆಳೆದು
ಸುತ್ತಲೂ ಹರಡಿದ ಕನಸ
ಕಳೆ ಕಿತ್ತಂತೆ ಕಿತ್ತು
ಹೊರಗೆಸೆದದ್ದ ಕಂಡು
ಉಳಿದ ಕನಸುಗಳೆಲ್ಲ
ಗರಿ ಮುದುರಿ ಸೇರಿದವು
ಮತ್ತೆ ಮನದ ಗೂಡು

Leave a Reply