ಏನೆಲ್ಲಾ ಅಚ್ಚರಿಗಳು ಸಂಭವಿಸುತ್ತವೆ!

 

 

 

ಕೆ ಪುಟ್ಟಸ್ವಾಮಿ 

 

ಎಂತೆಂಥಾ ರೋಮಾಂಚನಗಳು ಮುತ್ತುತ್ತವೆ!!!

ಇಂದು ಬೆಳಿಗ್ಗೆ ಎದ್ದವನು ಮೊಣಕಾಲ ನೋವಿನಿಂದಾಗಿ walk ಹೋಗಲಿಲ್ಲ. ಟೀ ಕುಡಿಯುತ್ತಾ ವಿಶ್ವ ಫುಟ್ಬಾಲ್ ಪ್ರಸಾರ ಮಾಡುವ ಕ್ರೀಡಾ ಚಾನಲ್ ಆನ್ ಮಾಡಿದೆ. ಜಾಹೀರಾತು ಬರುತ್ತಿತ್ತು. ಅದನ್ನು ಬದಲಿಸಿದ ನಂತರ ಇಪ್ಪತ್ತು ವರ್ಷಗಳ ಒಳಗಿನವರಿಗಾಗಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಆಮೆಟರ್ ಅಥ್ಲೆಟಿಕ್ ಫೆಡರೇಷನ್ನ ಕ್ರೀಡಾಕೂಟ ಪ್ರಸಾರವಾಗುತ್ತಿತ್ತು.

ಜಾವೆಲಿನ್ ಸ್ಪರ್ಧೆಯ ಪ್ರಸಾರದ ನಂತರ ಮಹಿಳೆಯರ ನಾನೂರು ಮೀಟರ್ ಓಟದ ಸ್ಪರ್ಧಾಳುಗಳನ್ನು ತೋರಿಸಿದರು. ನಾಲ್ಕನೇ ಲೇನ್ ನಲ್ಲಿ ಭಾರತದ ಹಿಮಾ ದಾಸ್. ಹೀಟ್ಸ್ ನಲ್ಲಿ ಬಹಳ ವೇಗವಾಗಿ ಓಡಿ ಸುದ್ದಿ ಮಾಡಿದ್ದ ತುಣುಕು ಹಿಂದೆ ಓದಿದ ನೆನಪಾಯಿತು. ಆದರೂ ಆಕೆ ಅಂತಿಮ ಹಂತದಲ್ಲಿ ಗೆಲ್ಲುವ ಬಗ್ಗೆ ಸಂಶಯಗಳು ಇದ್ದವು.

ಸ್ಪರ್ಧೆ ಆರಂಭವಾದ ನಂತರ ನಾಲ್ಕನೇ ಲೇನ್ ನಲ್ಲಿ ನನ್ನ ಕಣ್ಣು ಕೇಂದ್ರೀಕರಿಸಿತು ಸ್ಪರ್ಧೆಯ ಆರಂಭದ ಹಂತದಲ್ಲಿ ಹಿಂದೆಯೇ ಉಳಿದಿದ್ದ ಹಿಮಾ ದಾಸ್ ಗುರಿಮುಟ್ಟಲು ಕೊನೆಯ 80 ಮೀಟರ್ ಅಂತರದಲ್ಲಿ ಇದ್ದಕ್ಕಿದ್ದಂತೆ ಸ್ಫೋಟಿಸಿದ ರೀತಿ ನಿಬ್ಬೆರಗಾಗಿಸಿತು. ನೋಡು ನೋಡುತ್ತಿದ್ದಂತೆಯೇ ಟ್ರ್ಯಾಕ್ ನಲ್ಲಿ ತನ್ನ ಮುಂದೆ ಇದ್ದ ಐವರನ್ನು ದಾಟಿ 1 ಮೀಟರ್ ಅಂತರದಲ್ಲಿ ಕೊನೆಯ ಸ್ಪರ್ಧಾಳನ್ನು ಹಿಂದಿಕ್ಕಿ ಗೆಲುವಿನ ಗೆರೆ ದಾಟಿದಾಗ ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ . ಎಂಥ ಓಟ. ಎಂಥ ಗೆಲುವು. ಕಾಲ ಕೆಲಕ್ಷಣ ನಿಂತಂಥ ಅನುಭವ.

 

1984ರಲ್ಲಿ ಲಾಸ್ ಏಂಜಲಿಸ್ ಒಲಂಪಿಕ್ಸ್ ನ 400 ಮೀಟರ್ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ ಮಾಡಿದರು ಸಹ ಕೂದಲೆಳೆಯಿಂದ ಪದಕ ವಂಚಿತಳಾದ ಪಿ ಟಿ ಉಷಾ ಅವರ ನೆನಪಾಯಿತು.

ಆದರೆ ಇಲ್ಲಿ ಅದು ಮರುಕಳಿಸಲಿಲ್ಲ. ಗೆದ್ದ ತಕ್ಷಣ ಎರಡೂ ತೋಳನ್ನು ಬೀಸಿ ಪ್ರೇಕ್ಷಕರನ್ನೇ ಹುರುದುಂಬಿಸುವವಳಂತೆ ನಗುತ್ತಾ ತ್ರಿವರ್ಣ ಧ್ವಜವನ್ನು ಹೊತ್ತು ಕ್ರೀಡಾಂಗಣ ಸುತ್ತಿದ್ದು ಭಾರತದ ಅಥ್ಲೆಟಿಕ್ಸ್ ರಂಗಕ್ಕೆ ಹೊಸ ಚರಿತ್ರೆಯೊಂದನ್ನು ಬರೆದಂತೆ ಕಂಡಿತು.

ಅಸ್ಸಾಂನ ಗದ್ದೆ ಬಯಲಿನಲ್ಲಿ ಹುಡುಗರ ಜೊತೆ ಫುಟ್ಬಾಲ್ ಆಡಿ ಬೆಳೆದ ಹುಡುಗಿ ಎರಡು ವರ್ಷದ ಹಿಂದೆಯಷ್ಟೇ ಓಟದ ರಂಗಕ್ಕೆ ಬಂದದ್ದು. ಇಷ್ಟು ಸಣ್ಣ ಅವಧಿಯಲ್ಲಿ ಮಾಡಿದ ಹಿಮಾಳ ಸಾಧನೆ ಹಿಮಾಲಯ ಸದೃಶ.

ಅಂತರ್ರಾಷ್ಟ್ರೀಯ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮಹಿಳೆಯ ಮೊದಲ ಸಾಧನೆ. ಇದು ಚಿನ್ನದ ಅಕ್ಷರಗಳಲ್ಲಿ ಬರೆಯಬೇಕಾದ ಸಾಧನೆ. ಆಕೆ ಚರಿತ್ರೆಯನ್ನು ಸೃಷ್ಟಿಸಿದ ಸಾಧನೆ ಭಾರತದ ಮಹಿಳೆಯ ಸಂಕಲ್ಪ ಶಕ್ತಿಯನ್ನು ಜಗತ್ತಿಗೆ ತೋರಿದ ಗಳಿಗೆ. ಅವರಿಗೆ ಸಾವಿರ ಶರಣು

ಅಂದಹಾಗೆ ಮಾಧ್ಯಮಗಳೆಲ್ಲಾ ಮನಸ್ಸು ಕೆಡಿಸುತ್ತದೆ ಎಂಬ ಟೀಕೆ ಇದೆಯಲ್ಲವೇ ನಿಜ. ಆದರೆ ಕ್ರೀಡಾ ಚಾನಲ್ ಗಳನ್ನು ನೋಡುತ್ತಿರಿ. ಇಂಥ ಅಚ್ಚರಿಗಳು ನಿಮ್ಮನ್ನು ಬಂದು ಮುತ್ತುತ್ತವೆ. ಕಾಡುತ್ತವೆ. ಮನಸ್ಸನ್ನು ಹಗುರ ಮಾಡುತ್ತವೆ. ಮುದಗೊಳಿಸುತ್ತವೆ. ಹಾಸ್ಯ ಪ್ರಸಂಗಗಳು ಬೇಕೆನಿಸಿದಾಗ ನ್ಯೂಸ್ ಚಾನಲ್ ಗಳನ್ನು ಹಾಕಿ ನೋಡಿ. ಕೊನೆಯ ವಾಕ್ಯ ಬೇಡವಿತ್ತೋ

Leave a Reply