ನನ್ನಮ್ಮನಂತಹ ಸೀತೆಯ ಸಹಚಾರಿಗಳಿಗೆ..

 

ಸೀತೆಯೆಂಬ ಭೂಮಿಯ ಮಗಳು

ಆರಡಿಯ ಅಜಾನುಬಾಹು ಅಪ್ಪನೆದುರು ಐದಡಿಯೂ ಇಲ್ಲದ ಅಮ್ಮ ಮತ್ತಷ್ಟು ತಗ್ಗಿ ಬಗ್ಗಿ ಬಾಳುವೆ ಮಾಡುತ್ತಿದ್ದಳು. ಆದರೂ ಹೆಂಡತಿಗೆ ಬೈಯ್ಯದಿದ್ದರೆ ಗಂಡಸೇ ಅಲ್ಲ ಎಂಬ ಪರಂಪರೆಯ ವಾರಸುದಾರನಾದ ಅಪ್ಪ ಅಗಾಗ ಹೆಂಡತಿಗೆ ಬೈಯ್ಯುತ್ತಲೂ, ಅಪರೂಪಕ್ಕೊಮ್ಮೆ ಹೊಡೆಯುತ್ತಲೂ ತನ್ನ ಗಂಡಸುತನವನ್ನು ಸಾಬೀತುಪಡಿಸುತ್ತಿದ್ದ.

ಅದನ್ನೆಲ್ಲ ಮಾಮೂಲಿಯೆಂಬಂತೆ ಸ್ವೀಕರಿಸುತ್ತಿದ್ದ ಅಮ್ಮ, ಎಲ್ಲಿಯಾದರೊಮ್ಮೆ ತನ್ನ ತವರಿನವರೆದುರು ಅಪ್ಪ ತನ್ನ ಪೌರುಷವನ್ನು ಮೆರೆದಾಗ ಮಾತ್ರ ಭೂಮಿಗಿಳಿದುಹೋಗುತ್ತಿದ್ದಳು. ಕಂಡಕಂಡವರಲ್ಲಿ ಹನಿಗಣ್ಣಾಗಿ ತನಗಾದ ಅವಮಾನವನ್ನು ಹೇಳಿಕೊಳ್ಳುವುದರ ಜೊತೆಗೆ, ತವರಿನೆದುರು ಮಾನ ಕಳೆದಾಗ ಈ ಭೂಮಿಯೇ ಬಾಯ್ದೆರೆದು ನುಂಗಬಾರದೇ? ಎನಿಸಿತು ನನಗೆ ಎಂದು ಅಲವತ್ತುಗೊಳ್ಳುತ್ತಿದ್ದಳು. ಆದರೆ ಇದ್ಯಾವುದೂ ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಅವಳ ನಿಯಂತ್ರಣದಲ್ಲಿರಲಿಲ್ಲ.

ಅಮ್ಮ ಮತ್ತು ಅಮ್ಮನಂತಹ ಅನೇಕ ಹೆಂಗಳೆಯರಿಗೆ ಇವೆಲ್ಲವನ್ನೂ ಸಹಿಸಿಕೊಳ್ಳಲು ಪ್ರೇರಣೆಯಾದವಳೆಂದರೆ ಸಾಕ್ಷಾತ್ ರಾಮಚಂದ್ರನ ಮಡದಿ ಸೀತಾದೇವಿ. ‘ಅಂತಹ ಸೀತೆಗೇ ಕಷ್ಟಗಳ ಸರಮಾಲೆ ತಪ್ಪಿದ್ದಲ್ಲ, ಇನ್ನು ನಮ್ಮಂತಹ ಹುಲುಮಾನವರ ಪಾಡೇನು?’ ಎಂದವರು ತಮ್ಮ ದುಃಖವನ್ನು ಸೈರಿಸಿಕೊಳ್ಳುತ್ತಿದ್ದರು. ಪ್ರತಿದಿನ ಸಂಜೆ ಅದೆಂಥದ್ದೋ ‘ರಾಮಚರಿತ್ರೆ’ ಎಂಬ ಸೀತಾಮಾತೆಯ ಕರುಣಕಥೆಯ ಗೀತೆಯನ್ನು ಹಾಡುತ್ತಿದ್ದರು.

ಸೀತೆ ರಾಮನನ್ನುದ್ದೇಶಿಸಿ ಹೇಳುವಂತಿದ್ದ ಆ ಹಾಡಿನ ತುಂಬಾ ಸೀತೆಯ ಶೋಕಗೀತೆಯಿತ್ತು.

“ಜನಕರಾಜನ ಮಗಳಾಗಿ ನಾ ಜನಿಸಿದೆ ಶ್ರೀರಾಮ ರಾಮ
ಅಂತಾ ಭುವಿಜಾಕ್ಷಿ ಭೂಮಿತಾಯಿಗೆ ನಾ ಮಗಳಾಗಿ ಜನಿಸಿದೆ ಶ್ರೀರಾಮ ರಾಮ
……………………………………….
ಶಿವನ ಬಿಲ್ಲನು ಆಟಿಗೆಯಾಗಿ ಎತ್ತಿದೆ ಶ್ರೀರಾಮ ರಾಮ
ಬಿಲ್ಲ ಮುರಿದು ನನ್ನ ಉದ್ಧರಿಸಿದೆ ಶ್ರೀರಾಮ ರಾಮ
……………..
ಹೆಣ್ಣು ಜನ್ಮವೆ ಸಾಕು ನನ ಕಂಡು ಮರೆಯಿರೋ ಶ್ರೀರಾಮ ರಾಮ

ಎಂದೇನೋ ಮುಂದುವರೆಯುತ್ತದೆ ಈ ಹಾಡು.

ಅಮ್ಮ ಹೇಳಿದ ಎಲ್ಲ ಹಾಡುಗಳನ್ನೂ ಬಾಯಿಪಾಠ ಕಲಿಯುತ್ತಿದ್ದ ನನಗೆ ಈ ದುಃಖದ ಹಾಡನ್ನು ಬಾಯಿಪಾಠ ಕಲಿಯಬೇಕೆನಿಸಿರಲಿಲ್ಲ. ಅದನ್ನು ಹಾಡುವಾಗ ಅಮ್ಮನ ಕಣ್ಣಲ್ಲಿ ಜಿನುಗುವ ನೀರಹನಿಯನ್ನು ಕಂಡು ಅವರನ್ನು ಕೇಳಿದ್ದೆ, ಅದ್ಯಾಕೆ ಅದೇ ಶೋಕಗೀತೆಯನ್ನು ದಿನವೂ ಹಾಡುವಿರೆಂದು? ಅದಕ್ಕವರ ಉತ್ತರ ದಿನವೂ ರಾಮಚರಿತೆ ಹಾಡಿದರೆ ಶೋಕಗಳೆಲ್ಲವೂ ಕಳೆಯುವುದೆಂಬುದಾಗಿತ್ತು. ಹೀಗೆ ಹೆಂಗಳೆಯರಿಂದಲೇ ಬೆಳೆದುಬಂದ ಪಾತ್ರ ಜಾನಕಿಯದು. ಅವರ ದುಃಖಗಳೆಲ್ಲವನ್ನೂ ಮೀರಿದ ದುಃಖವನ್ನು ಸಹಿಸಿದ ಸೀತೆ, ಅವರ ದಿನದ ದುಃಖವನ್ನು ಭರಿಸಲೊಂದು ನೋವು ನಿವಾರಕವಾಗಿದ್ದಳು.

ಅಶೋಕವನದ ನೆರಳಿನಲ್ಲಿ ಕುಳಿತ ಸೀತೆ ಕೊಂಚ ಬಿಡುವಾಗಿದ್ದಾಳೆ. ಹಾಗೆಂದು ಅವಳು ಯಾವಾಗಲೂ ತುಂಬಾ ಕಾರ್ಯತತ್ಪರಳಾಗಿರುತ್ತಿದ್ದಳು ಎಂದೇನೂ ಅಲ್ಲ. ಇಡಿಯ ಬದುಕನ್ನೊಮ್ಮೆ ತಿರುಗಿ ನೊಡುವ ಏಕಾಂತ ಅರಮನೆಯಲ್ಲಿ ಅವಳಿಗೆ ಸಿಕ್ಕಿರಲಿಲ್ಲ. ಅರಮನೆಯ ದಾಸಿಯರ ಪರಿವಾರದ ನಡುವೆ ಏಕಾಂತವೆಂಬ ಪದ ನುಸುಳಲು ಸಾಧ್ಯವೇ ಇರಲಿಲ್ಲ. ಇಲ್ಲಿ, ಈಗ, ಈ ಅಶೋಕವನದ ನಡುವಲ್ಲಿ ಅವಳು ಏಕಾಂತದಲ್ಲಿದ್ದಾಳೆ. ಮೊದಮೊದಲು ಈ ವಾತಾವರಣ ಅವಳಿಗೆ ಭಯ ತರಿಸಿದ್ದು ನಿಜ. ಹೇಳಿ ಕೇಳಿ ದುಷ್ಟ ಆ ರಾವಣ. ಎಷ್ಟು ಹೊತ್ತಿಗೆ ಏನು ಮಾಡಿಬಿಡುವನೋ ಎಂಬ ಭಯ.

ಆದರೆ ಇಲ್ಲಿ ಅವಳಿಗೊಬ್ಬಳು ಗೆಳತಿ ಸಿಕ್ಕಿದ್ದಾಳೆ. ಅವಳನ್ನು ನೋಡಿಕೊಳ್ಳಲೆಂದು ಇಟ್ಟ ರಕ್ಕಸಿಯರ ಗಡಣದಲ್ಲಿ ಒಬ್ಬಳು ಅಪ್ಪಟ ಮನುಷ್ಯೆಯಿದ್ದಾಳೆ. ಅವಳೇ ಸುರಮೆ. ವಿಭೀಷಣನ ಹೆಂಡತಿಯ ಊಳಿಗದವಳಂತೆ. ಎಲ್ಲ ರಕ್ಕಸಿಯರೂ ಕಂಠಪೂರ್ತಿ ಸುರೆಯನ್ನು ಹೊಟ್ಟೆಗಿಳಿಸಿ, ಅರೆಪ್ರಜ್ಞಾವಸ್ಥೆಗೆ ಜಾರಿದ ಕೂಡಲೇ ಇವರ ಮಾತುಕತೆಗೊಂದು ಕಳೆಯೇರುತ್ತದೆ. ಅವಳೇ ಸೀತೆಗೆ ರಾವಣನ ಬಗೆಗಿನ ಭಯವನ್ನು ಹೋಗಲಾಡಿಸದವಳು.

‘ಬಾಯಲ್ಲಷ್ಟೇ ಜೋರು! ಒಳಗಿನಿಂದ ಬಹಳ ಸಾಧು ನಮ್ಮ ದೊರೆ. ನಿನ್ನ ತಂದಾಗ ಮಡದಿ ಮಂಡೋದರಿ ಮುಸಿ, ಮುಸಿ ಮಾಡಿದ್ದಕ್ಕೆ ಪೂರ್ತಿ ಕರಗಿ ಹೋಗಿದ್ದಾನೆ. ಒಲಿದು ಬರದೆ ಅವಳನ್ನು ಬಲಾತ್ಕರಿಸೆ ಎಂದು ಮಡದಿಗೆ ಭಾಷೆಯಿಟ್ಟಿದ್ದಾನೆ. ಒಂದಿನಿತೂ ಭಯಬೇಡ. ತಂದುದಕ್ಕೆ ಪಶ್ಚಾತ್ತಾಪವಾಗಿರಲೂ ಸಾಕು. ತೋರಿಸಿಕೊಳ್ಳಲು ದೊಡ್ಡಸ್ತಿಕೆ ಈ ಗಂಡುಮುಂಡೇವಕ್ಕೆ. ನಿನ್ನ ಗಂಡ ಬರಲಿ ನೋಡು, ನಿನ್ನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸುತ್ತಾನೆ’ ಎಂದು ರಾವಣನ ನಿಜ ಬಣ್ಣವನ್ನು ಬಯಲು ಮಾಡಿದ್ದಳು ಅವಳು. ಇಲ್ಲವಾದಲ್ಲಿ ಸೀತೆಗಾದರೂ ತನ್ನ ಬಾಳಪಯಣದ ಮಜಲುಗಳನ್ನು ಅವಳಲ್ಲಿ ಹಂಚಿಕೊಳ್ಳುವ ನಿರಾಳತೆ ಬರುತ್ತಿತ್ತಾದರೂ ಹೇಗೆ?

ಈ ಹೆಂಗಸರಿಗೆ ತವರೆಂದರೆ ಅದೆಂಥ ವಾಂಛೆಯೋ? ತವರಿನ ಬಗ್ಗೆ ಹೊಗಳಿದಷ್ಟೂ ಕಡಿಮೆಯೆ. ಸೀತೆಗೂ ಹಾಗೆಯೆ. ತನ್ನ ತವರು ಮಿಥಿಲೆಯ ಬಗ್ಗೆ ಹೇಳುವಾಗಲೆಲ್ಲ ಅವಳ ಇಡಿಯ ದೇಹವೇ ಬಾಯಾಗವುದು.

“ಬಿರಿದ ಬಿಳಿಯ ಮೊಗ್ಗಿನಂತೆ
ಮಲ್ಲಿಗೆಯ ನವಿರು ಬಾಲ್ಯ
ಚಿಗುರೆಲೆಯ ಹಾಸಿನಂತೆ
ತಂಪು ಸುರಿವ ಮಧುರ ಬಾಲ್ಯ
ಬೆಳ್ಳಕ್ಕಿ ಸಾಲು ಹಾರಿದಂತೆ
ಹೂವ ಹಗುರ ಬೆರಗು ಬಾಲ್ಯ
ಬೆಳಕ ಕುದುರೆಯೇರಿದಂತೆ
ಪುಳಕಗೊಳುವ ಚಂದ ಕಾವ್ಯ”

ಸೀತೆ ಮಾತಾದಳೆಂದರೆ ಸುರಮೆಗೆ ಕೇಳಿಸಿಕೊಳ್ಳುವುದಷ್ಟೇ ಕೆಲಸ. ಬಾಲ್ಯದ ತುಂಟತನದಲ್ಲೊಮ್ಮೆ ಸೀತೆ ಹರನ ಬಿಲ್ಲನ್ನು ಎತ್ತಿದ್ದು, ಅಚ್ಚರಿಗೊಂಡ ತಂದೆ ಅದನ್ನೇ ಅವಳ ಸ್ವಯಂವರದ ಪಣವಾಗಿಸಿದ್ದು, ರಾಮನೆಂಬ ನೀಳಕಾಯದ ಚೆಲುವ ಅದನ್ನು ಎತ್ತುವ ಮೊದಲೇ ಬಿಲ್ಲೆರಡು ತುಂಡಾಗಿ ಬಿದ್ದದ್ದು.. ಸೀತೆ ಏನೊಂದನ್ನೂ ಬಿಡದೇ ಸುರಮೆಗೆ ಹೇಳುತ್ತಾಳೆ. ರಾಮನ ಬಗ್ಗೆ ಮಾತನಾಡುವಾಗಲೆಲ್ಲ ಅವಳ ಕಂಗಳು ಪ್ರೀತಿಯಿಂದ ಹೊಳೆಯುವುದನ್ನು ಕಂಡು ಸುರಮೆ ಕರಗುತ್ತಾಳೆ. ಅವಳಿಗೂ ಸೀತಾ ರಾಮರನ್ನೊಮ್ಮೆ ಒಟ್ಟಿಗೆ ನೋಡುವಾಸೆ. ಆದರೆ ಕಾಲ ಕೂಡಿ ಬರಬೇಕಲ್ಲ?

ಸುರಮೆಗೆ ಒಂದು ಸಂಶಯ. ಅಂತಹ ಬಿಲ್ಗಾರನಾದ ರಾಮನ ಕಣ್ಣುತಪ್ಪಿಸಿ ರಾವಣ ಸೀತೆಯನ್ನು ತಂದುದಾದರೂ ಹೇಗೆ? ಎಂದು. ಸೀತೆ ಅವಳಿಗೆ ಬಣ್ಣದ ಹರಿಣದ ಕಥೆ ಹೇಳುತ್ತಾಳೆ. ತಾನು ಕಾಡಿನಲ್ಲಿ ಏನೊಂದು ಬೇಕೆಂದರೂ ತಂದುಕೊಡುವ ತನ್ನ ಮೈದುನ ಮತ್ತು ಗಂಡನ ಗುಣಗಾನ ಮಾಡುತ್ತಾಳೆ. ಬಂಗಾರದ ಬಣ್ಣದ ಆ ಜಿಂಕೆಯನ್ನು ಕಂಡು ತಾನು ಪರವಶಗೊಂಡದ್ದು, ರಾಮ ಬೇಡ ಬೇಡವೆಂದರೂ ತನಗದು ಮುದ್ದಿಸಲು ಬೇಕೇಬೇಕೆಂದು ಹಠಹಿಡಿದದ್ದು, ಅದನ್ನು ತರಲು ರಾಮ ಹೋದದ್ದು, ಅವನ ಕೂಗನ್ನು ಕೇಳಿ ಲಕ್ಷ್ಮಣನೂ ಹಿಂಬಾಲಿಸಿದ್ದು, ರಾವಣನ ಸಂನ್ಯಾಸಿ ವೇಷದಲ್ಲಿ ಬಂದು, “ಅಮ್ಮಾ, ಹಸಿದಿದ್ದೇನೆ, ಭಿಕ್ಷೆ ನೀಡಿ” ಎಂದು ಕರುಣಾಜನಕವಾಗಿ ಬೇಡಿದ್ದು, ಅಮ್ಮಾ… ಎಂಬ ಅವನ ನುಡಿ ತನ್ನೊಳಗಿನ ತಾಯ್ತನವನ್ನು ಜಾಗೃತಗೊಳಿಸಿದ್ದು, ಹಸಿದ ಮಗುವಿಗೆ ಕೈತುತ್ತು ನೀಡುವ ತಾಯಂತೆ ತಾನು ಭಿಕ್ಷೆ ನೀಡಲು ಮುಂದಾಗಿದ್ದು, ತನ್ಮೂಲಕವಾಗಿ ರಾವಣ ಬೀಸಿದ ಮಾಯೆಯ ಬಲೆಗೆ ಸಿಲುಕಿದ್ದು… ಸೀತೆ ಹೇಳುತ್ತಾ ಹೋಗುವಾಗ ಸುರಮೆ ಪಕಪಕನೆ ನಕ್ಕುಬಿಡುತ್ತಾಳೆ. ತನ್ನ ಹೆಂಡತಿಯ ಮುಂದೆ ತಾನು ರಾಮನೆದುರಲ್ಲೇ ಅವಳನ್ನು ಎಳೆದು ತಂದೆನೆಂದು ಜಂಭಕೊಚ್ಚಿಕೊಂಡ ರಾವಣನ ಕಥೆಯನ್ನು ಹೇಳಿ ಸೀತೆಯನ್ನೂ ನಗಿಸುತ್ತಾಳೆ. ಗಂಡಸರೇ ಹೀಗಲ್ಲವೆ? ‘ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಬಾರದು’ ಎಂದು ಇಬ್ಬರೂ ಒಮ್ಮತಕ್ಕೆ ಬರುತ್ತಾರೆ.

ತನ್ನನ್ನೇಕೆ ಕದ್ದು ತಂದ ಈ ಅಸಾಮಿ? ಎಂಬ ಸೀತೆಯ ಪ್ರಶ್ನೆಗೆ ಸುರಮೆ ಉತ್ತರವಾಗುತ್ತಾಳೆ. ಶೂರ್ಪನಖಿಯೆಂಬ ಅವನ ತಂಗಿಯನ್ನು ರಾಮ ಲಕ್ಷ್ಮಣರು ಕ್ರೂರವಾಗಿ ಹಿಂಸಿಸಿದ್ದು ನಿಜವೇ? ಎಂದು ಪ್ರಶ್ನಿಸುತ್ತಾಳೆ. ಸೀತೆ ಆ ಕ್ಷಣಕ್ಕೆ ಮಂಕಾಗುತ್ತಾಳೆ. ಆ ದಿನ ನಿಜಕ್ಕೂ ಅವಳೂ ನೊಂದಿದ್ದಳು. ಪ್ರಾಯದ ಹೆಣ್ಣು ಶೂರ್ಪನಖಿ. ಅಪ್ರತಿಮ ಚೆಲುವೆಯ ರೂಪ ತೊಟ್ಟು ರಾಮ ಲಕ್ಷ್ಮಣರನ್ನು ಮೋಹಿಸಲು ಬಂದಿದ್ದೇನೋ ನಿಜ. ಆದರೆ ನಿರಾಕರಿಸಿ ಅವಳನ್ನು ಕಳಿಸಲು ಸಾಕಷ್ಟು ಮಾರ್ಗಗಳಿದ್ದವು. ಮೈದುನ ಲಕ್ಷ್ಮಣ ಅಣ್ಣನ ಆಜ್ಞಾನುವರ್ತಿಯಾಗಿ ಕ್ರೂರವಾಗಿ ಅವಳ ಮೂಗು, ಮೊಲೆಗಳನ್ನು ಕತ್ತರಿಸಿದ್ದ! ಆ ಕ್ಷಣದಲ್ಲವಳು ಅವರಿಬ್ಬರನ್ನು ದೂಷಿಸದೇ ಸೀತೆಯನ್ನೇ ನೋಡಿ, “ನೀನೇ ಕಾರಣ ನನ್ನ ಈ ದುಃಸ್ಥಿತಿಗೆ. ನಿನ್ನನ್ನು ಬಿಡಲಾರೆ” ಎಂದು ಕಿರುಚುತ್ತಾ ಕಣ್ಮರೆಯಾಗಿದ್ದಳು.

ಸೀತೆಗಾಗ ಹೊಳೆದಿರಲಿಲ್ಲ ಅವಳ ಅಪರಾಧವೇನೆಂದು. ಆದರೆ ಈಗ ಅರಿವಾಗುತ್ತಿದೆ. ಅವಳು ಸ್ವಲ್ಪವೇ ಮನಸ್ಸು ಮಾಡಿದ್ದರೂ ಈ ಪ್ರಸಂಗವನ್ನು ತಿಳಿಗೊಳಿಸಬಹುದಿತ್ತು. ಹೆಣ್ಣೊಬ್ಬಳ ಸಂಕಷ್ಟ ಹೆಣ್ಣಿಗೆ ತಾನೆ ಅರಿವಾಗಬೇಕಾದುದು? ಆದರೆ ಸೀತೆ ಮೂಕಪ್ರೇಕ್ಷಕಳಾಗಿ ಎಲ್ಲವನ್ನೂ ನೋಡಿದ್ದಳು. ಇದೀಗ ಮಾತಾಗದ ಆ ತಪ್ಪಿಗೆ ಶಿಕ್ಷೆಯೆಂಬಂತೆ ಸುರಮೆಯಲ್ಲಿ ಎಲ್ಲವನ್ನೂ ತಪ್ಪೊಪ್ಪಿಗೆ ಮಾಡುತ್ತಿದ್ದಾಳೆ. ಶೂರ್ಪನಖಿಯ ಅವಮಾನದ ಸೇಡಿಗಾಗಿ ರಾವಣ ತನ್ನನ್ನು ತಂದಿದ್ದಾನೆ, ತನ್ನ ಮೇಲಿನ ಮೋಹದಿಂದಲ್ಲ ಎಂಬ ವಿಷಯ ಅವಳನ್ನು ಕೊಂಚ ನಿರಾಳಗೊಳಿಸುತ್ತದೆ.

ಹನುಮಂತ ತನ್ನನ್ನು ಹುಡುಕಿ ಬಂದು ಹೋದ ನಂತರ ಸೀತೆಗೆ ರಾಮನ ಬರವು ಸನ್ನಿಹಿತವಾಗುತ್ತಿದೆಯೆನಿಸಿತು. ಒಂದು ಮುಂಜಾನೆ ಸುರಮೆ ಅವಳಿಗೆ ರಾಮ ತನ್ನ ಕಪಿಸೈನ್ಯದೊಂದಿಗೆ ಲಂಕೆಗೆ ಸೇತುವೆ ನಿರ್ಮಿಸಿ ಬಂದಿಳಿದ ಶುಭ ಸಮಾಚಾರವನ್ನೂ ತಿಳಿಸಿದಳು. ಸೀತೆಗೆ ರಾಮನನ್ನು ಸೇರುವ ಕಾತರ. ಸುರಮೆ ಅವಳಿಗೆ ದಿನ ದಿನದ ಬೆಳವಣಿಗೆಗಳ ಬಗ್ಗೆ ಹೇಳುವಳು. ಇವಳೂ ಅಷ್ಟೇ ಉತ್ಸಾಹದಿಂದ ಕೇಳಿಸಿಕೊಳ್ಳುವಳು.

“ಸುರಮೆ ಏನಾಯಿತು ಹೇಳೆ?
ಪಿಮಾತಲಿ ಬಳಿಬಂದು ನೀ ಹೇಳೆ
ಹೇಳು ಯುದ್ಧದಾ ಕಥೆಯ
ದಿನದಿನದಾ ಸಂಗತಿಯಾ
ರಾಮ ಗೆದ್ದನೇನೆ ಹೇಳು
ಅಳಿದನೇನೆ ದೈತ್ಯನು?
ಪ್ರಿಯನ ಸೇರುವಂಥ ಗಳಿಗೆ
ಬರಬಹುದೆ ನಾಳೆಗೆ?
ಇಂದಿನಿರುಳು ಕಳೆದ ಮೇಲೆ
ನಾಳೆ ನನ್ನದೇನೆ ಹೇಳೆ?”

ನಿಜಕ್ಕೂ ಯುದ್ಧದ ಕೊನೆಯ ಹಗಲು ಕಳೆದು, ಇರುಳು ಉರುಳಿ ಬೆಳಗಾಯಿತು. ಸೀತೆಯಷ್ಟೇ ಖುಶಿ ಸುರಮೆಗೆ ಕೂಡಾ. ಉಳಿದ ರಕ್ಕಸಿಯರೆಲ್ಲ ರಾಮನ ಭಯದಲ್ಲಿ ಓಡಿಹೋದರೆ ಸುರಮೆ ಮಾತ್ರ ಸೀತಾ ರಾಮರ ಮಿಲನವನ್ನು ನೋಡಲು ಸಾವನ್ನೇ ಬೇಕಾದರೂ ಎದುರಿಸಿಯೇನೆಂದು ಅಲ್ಲೇ ನಿಂತಿದ್ದಳು. ವಿಜಯಿ ರಾಮ ತನ್ನ ಪರಿವಾರದೊಂದಿಗೆ ಆ ತುದಿಯಲ್ಲಿ ನಿಂತಿದ್ದಾನೆ. ಸೀತೆ ಅವನನ್ನು ಕಂಡವಳೇ ಅವನ ತೋಳಲ್ಲಿ ಸೆರೆಯಾಗುವಾಸೆಯಿಂದ ಓಡೋಡಿ ಅವನತ್ತ ಧಾವಿಸುತ್ತಿದ್ದಾಳೆ. ಸುರಮೆಗೆ ಒಂದು ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಗುವ ಸಂಭ್ರಮ. ಇನ್ನೇನು ಸೀತೆ ರಾಮನನ್ನು ತಬ್ಬುವ ಗಳಿಗೆಯಲ್ಲಿ ಕೇಳಿತು ರಾಮನ ದೃಢವಾದ ಧ್ವನಿ, “ನಿಲ್ಲು ಸೀತೆ, ನೀನು ಪರಪುರುಷನ ವಶದಲ್ಲಿದ್ದ ಹೆಣ್ಣು. ನಿನ್ನನ್ನು ಪರೀಕ್ಷಿಸದೇ ಪರಿಗ್ರಹಿಸಲಾರೆ”

ಸೀತೆ ಕಲ್ಲಾಗಿ ನಿಂತಳು. ಸುರಮೆಗೆ ಮೊದಲ ಬಾರಿಗೆ ಅನಿಸಿತ್ತು ಭೂಮಿ ಬಾಯಿಬಿಡಬಾರದೆ? ಎಂದು. ಸೀತೆ ಸುರಮೆಯತ್ತ ನೋಡಿದಳು. ಅವಳ ಪಶ್ಚಾತ್ತಾಪದ ನೊಟವನ್ನು ಎದುರಿಸಲಾಗಲಿಲ್ಲ ಸುರಮೆಗೆ. ಥಟ್ಟನೆ ಅಲ್ಲಿಂದ ನಿರ್ಗಮಿಸಿದಳು. ‘ಸೀತೆ ಅಗ್ನಿಯನ್ನೇ ದಾಟಿದಳು’ ಎಂದೆಲ್ಲ ಲಂಕೆಯವರು ಅವಳ ಪಾತಿವೃತ್ಯವನ್ನು ಹೊಗಳುವುದನ್ನು ಅವಳು ಕೇಳಿಸಿಕೊಂಡಿದ್ದಾಳೆ. ‘ರಾಮನ ಮಾತುಗಳೆಂಬ ಅಗ್ನಿಗಿಂತ ಇನ್ನು ಬೆಂಕಿಯುಂಟೆ?’ ಎಂದು ತನ್ನಷ್ಟಕ್ಕೇ ನಕ್ಕು ಸುಮ್ಮನಾಗಿದ್ದಾಳೆ.

ರಾಜಕುಮಾರಿ ಸೀತೆ ಕಾಡಿನಲ್ಲಿ ಅದೆಷ್ಟು ಪಡಿಪಾಟಲು ಪಟ್ಟಳು ಎಂದು ನೋಯುವವರೆಡೆಗೆ ಒಂದು ನಿರುಮ್ಮಳ ನೋಟ ಬೀರುತ್ತಾಳೆ ಸೀತೆ. ಭೂಮಿಯ ಮಗಳಿಗೆ ಕಾಡಿನ ವಾಸ ತವರಿನ ಸಂತಸವನ್ನೇ ನೀಡಿದೆ. ನಾಡಿನ ನಿಯಮಗಳು ಅವಳನ್ನು ಕಾಡಿವೆ. ಅವಳ ಸಹಜ ಬಯಕೆಗಳೂ ಕೂಡ ಭಯಾನಕವಾದ ಶಿಕ್ಷೆಯಾಗಿ ಬದಲಾಗಿವೆ. ಗರ್ಭಿಣಿಯರಿಗೆಲ್ಲ ತವರಿನ ನೆನಪಾಗುವುದು ಸಹಜವಲ್ಲವೇನು? ಹಾಗೆಯೇ ಅವಳೂ ಕಾಡಿಗೆ ಹೋಗುವ ಬಯಕೆಯನ್ನು ಹೇಳಿದ್ದಳು. ಆದರೆ ಅಗ್ನಿಯಲ್ಲಿ ಬೆಂದು ಸಾಬೀತುಪಡಿಸಿದ ಪಾತಿವೃತ್ಯವೂ ಕೂಡ ಮತ್ತೆ ಪರೀಕ್ಷೆಗೆ ಒಳಪಟ್ಟಿತ್ತು. ರಾಮನಿಗೆ ತಾನೊಬ್ಬ ಆದರ್ಶ ದೊರೆಯಾಗುವ ಹಂಬಲವಿತ್ತೆ ಹೊರತು ಸೀತಾಪತಿಯಾಗುವ ಹುಮ್ಮಸ್ಸಲ್ಲ. ಸಾಮಾನ್ಯ ಪ್ರಜೆಯ ಬಗೆಗಿರುವ ಕಾಳಜಿ ಸೀತೆಯ ಬಗೆಗೆ ಇರಲಿಲ್ಲ. ಬಹುಶಃ ಹೆಣ್ಣುಗಳೆಲ್ಲ ರಾಮರಾಜ್ಯದಲ್ಲಿ ಪ್ರಜೆಗಳೆಂಬ ಅರ್ಹತೆ ಪಡೆದಿರಲಿಲ್ಲವೋ ಏನೊ? ಮತ್ತೆ ಕಾಡು ಅವಳನ್ನು ಕರೆಯಿತು. ಅದುವೇ ಅವಳ ಹೆರಿಗೆಯ ಮನೆಯೂ ಆಯಿತು. ವಾಲ್ಮೀಕಿಯ ಆಶ್ರಮದಲ್ಲಿ ತನ್ನ ಅವಳಿ ಮಕ್ಕಳೊಡನೆ ಸುಖವಾಗಿದ್ದಳವಳು.

ಕುಲದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಲು ಅಶ್ವಮೇಧ ನಡೆಯಬೇಕು. ಅಶ್ವಮೇಧದ ದೀಕ್ಷೆ ತೊಡಬೇಕೆಂದರೆ ಹೆಸರಿಗೊಬ್ಬ ಹೆಂಡತಿಯೂ ಬೇಕು. ಅವಳಿಗೆ ಜೀವವಿರಬೇಕು ಎಂದೇನೂ ಇಲ್ಲ. ಚಿನ್ನದ ಪುತ್ಥಳಿಯಂತೆ ಪರಿಶುದ್ಧಳಾಗಿರಬೇಕು ಅಷ್ಟೆ. ಚಿನ್ನದ ಪುತ್ಥಳಿಯೇ ಸೀತೆಯಾಯಿತು. ಅಶ್ವಮೇಧ ಪ್ರಾರಂಭಗೊಂಡಿತು. ಮತ್ತೆ ಮಕ್ಕಳೆದುರಿನಲ್ಲಿ ಸೀತಾರಾಮರ ಪುನರ್‍ಮಿಲನ. ವಂಶೋದ್ಧಾರಕರನ್ನು ಕರೆದೊಯ್ಯುವ ಇಚ್ಛೆ ರಾಮನಿಗೆ. ಚಿನ್ನದ ಪುತ್ಥಳಿಯನ್ನು ಮುಂದಿನ ದೊರೆಯಾಗಿಸಲಾಗದು. ಶೂರರಾದ ರಾಜಕುಮಾರರೇ ಬೇಕದಕ್ಕೆ. ಸೀತೆಗೆ ಒಳಗೊಳಗೇ ನಗು. ಮತ್ತೆ ಉಪಚಾರಕ್ಕೆ ಸೀತೆಯನ್ನೂ ಜೊತೆಗೆ ಕರೆದ ಶ್ರೀರಾಮ.

ಸೀತೆ ನಕ್ಕು ನುಡಿದಳು, “ ಮತ್ತೆ ಆ ಚಿನ್ನದ ಸೀತೆಯ ಗತಿಯೇನು ರಾಮ? ವಾಲ್ಮೀಕಿಗಳಿಗೆ ಆ ಸೀತೆ ಬೇಡವಂತೆ. ಇಲ್ಲಿ ಗಿಡಮರಗಳಿಗೆ ನೀರೂಡಿಸಲು ಜೀವಂತ ಸೀತೆಯೇ ಬೇಕು.” ಜಟ್ಟಿ ಕೆಳಗೆ ಬಿದ್ದರೂ… ರಾಮ ಹುಸಿ ಗಂಭೀರತೆಯಿಂದ ನುಡಿದ, “ಮಕ್ಕಳಿಗೆ ನಿನ್ನ ಮಮತೆ ಬೇಕಲ್ಲವೆ ಸೀತಾ?” ಸೀತೆಗೆ ನಗು ತಡೆಯಲಾಗಲಿಲ್ಲ. “ಮೂರು ಜನ್ಮಕ್ಕೆ ಸಾಕಾಗುವಷ್ಟು ಮಮತೆ, ವಾತ್ಸಲ್ಯಗಳನ್ನು ಈಗಾಗಲೇ ಧಾರೆಯೆರೆದಿರುವೆ. ಅವರಿಗಿನ್ನು ದಿನವೂ ವಂದಿಸಲು ತಾಯಿಯೆಂಬ ಪ್ರತಿಮೆ ಬೇಕಷ್ಟೆ. ಅದಕ್ಕೆ ಚಿನ್ನದ ಪುತ್ಥಳಿ ನಡೆಯುತ್ತದೆ ಬಿಡು” ರಾಮ ನಿರುತ್ತರನಾದ ಗಳಿಗೆಯದು. ಸೀತೆ ಭೂಮಾತೆಯ ಸೆರಗಿನಲ್ಲಿ ಕಣ್ಮರೆಯಾದಳು.

ನನ್ನಮ್ಮನಂತಹ ಸೀತೆಯ ಸಹಚಾರಿಗಳಿಗೆ ಸೀತೆ ಮತ್ತಲ್ಲಿ ಸಂಚರಿಸುತ್ತಿರುವುದು ಬೇಕಾಗಿಲ್ಲ. ಎಲ್ಲಿಯಾದರೂ ತಮ್ಮಂತೆಯೇ ರಾಮನ ಸೆಳೆತಕ್ಕೊಳಗಾಗಿ ಕಷ್ಟಕೋಟಲೆಗಳಿಗೆ ಒಳಗಾಗುವಳೇನೋ ಎಂಬ ಆತಂಕ. ಹಾಗಾಗಿ ಸೀತೆಯನ್ನು ಭೂಮಾತೆಯ ಒಡಲಿನೊಳಗೆ ಸೇರಿಸಿ ನಿರಾಳವಾಗುತ್ತಾರೆ.

ಹೌದು, ಎಷ್ಟೆಲ್ಲ ಸೀತೆಯರಿದ್ದಾರೆ ಇಲ್ಲಿ!

ಕ್ಷಣಕ್ಷಣಕ್ಕೂ ಅಗ್ನಿಪರೀಕ್ಷೆಗೆ ಗುರಿಯಾಗುವವರು, ಕಾಂಕ್ರೀಟ್ ಕಾಡಿನಲ್ಲಿ ಏಕಾಂಗಿಯಾಗಿ ಬದುಕನ್ನು ಅರಸುವವರು, ಆಶ್ರಯಕ್ಕಾಗಿ ಋಷಿಸದೃಶ ವ್ಯಕ್ತಿಯೊಬ್ಬರಿಗಾಗಿ ಹಂಬಲಿಸುವವರು, ರಾವಣನಿಗಿಂತಲೂ ಕ್ರೂರಿಯಾದನಲ್ಲ ನನ್ನ ರಾಮ ಎಂದು ಕೊರಗುವವರು, ಮಡಿಲಲ್ಲಿರುವ ಅಥವಾ ಒಡಲಿನಲ್ಲಿರುವ ಮಕ್ಕಳಿಗಾಗಿ ಬದುಕುವವರು, ಸಾವು ಅನಿವಾರ್ಯವಾದಾಗ ಕರುಳ ಕುಡಿಗಳನ್ನೂ ಜೊತೆಯಲ್ಲಿಯೇ ಸಾವಿನಮನೆಗೆ ಕರದೊಯ್ಯುವವರು….

ಎಲ್ಲರಿಗೂ ಈ ಸೀತೆಯೇ ಆದರ್ಶ. ಆದರೆ ಭೂಮಿಯೆಂಬ ತಾಯಿಯ ಆಸರೆಯೊಂದು ಸಿಕ್ಕಿದರೆ ಅವರೆಲ್ಲರೂ ಬದುಕನ್ನು ಹಸಿರಾಗಿಸಿಕೊಳ್ಳಬಲ್ಲರು. ತುಂಡು ಭೂಮಿಯಲ್ಲವರು ಮಲ್ಲಿಗೆ, ತರಕಾರಿ, ಹೂವು, ಹಣ್ಣು … ಏನನ್ನಾದರೂ ಉಕ್ಕಿಸಬಲ್ಲ ಕುಶಲಿಗರು. ಬದುಕ ಕಟ್ಟಿಕೊಳ್ಳಲು, ದುಃಖ ಮರೆಯಲು, ಹಾಡು ಹೊಸೆಯಲು ಅವರಿಗೆ ಒಂದು ತುಂಡು ಭೂಮಿ ಬೇಕಷ್ಟೆ. ಸೀತೆಯ ಈ ವಂಶಜರಿಗೆ ತುಂಡುಭೂಮಿಯೇ ಮಹಾನ್‍ಭಾಗ್ಯ. ಭೂಮಿ ಸೀತೆಯರನ್ನು ಸದಾ ಕಾಯುತ್ತಾಳೆ.

ಹಾಗೆ ನೋಡಿದರೆ ಎಲ್ಲ ಸ್ತ್ರೀಯರೂ ಭೂಮಾತೆಯ ಮಕ್ಕಳೆ. ತವರಿನಂತಹ ಮುನಿಯ ಆಶ್ರಮದಲ್ಲಿ ಮತ್ತೆ ರಾಮ ಕೇವಲ ಉಪಚಾರಕ್ಕೆಂಬಂತೆ ತನ್ನನ್ನು ಮರಳಿ ಕರೆದಾಗ ಸೀತೆಗೂ ನನ್ನಮ್ಮನಂತೆಯೇ ಭೂಮಿ ಬಾಯಿಬಿಡಬಾರದೆ ಅನಿಸಿರಬಹುದು. ಅವಳು ಬೆವರು ಹರಿಸಿದ ಭೂಮಿ ಕೈಚಾಚಿ ಅವಳನ್ನು ತನ್ನ ಹಸಿರಿನ ಸಿರಿಯೊಳಗೆ ಸೆಳೆದುಕೊಂಡಿರಲೂಬಹುದು. ಭೂಮಿಯ ಸೆಳೆತವೆಂಬುದು ಹೆಣ್ಣಿಗೆ ತಾಯಿಯೊಡಲಿನಂತೆಯೇ ಅಪ್ಯಾಯಮಾನ. ಏಕೆಂದರೆ ಅವಳೂ ಪ್ರಕೃತಿಯಲ್ಲವೆ?

13 comments

 1. ಮಗುವಿಗೆ ನಾನು ಸೀತೆಯ ಕಥೆಯನ್ನು ಹೇಳಿ ಮುಗಿಸಿದಾಗ ಕೆಲಹೊತ್ತು ಮೌನ. ಮತ್ತೆ ಪ್ರಶ್ನೆ ಬಂತು – “Seetha never came back?”
  ನಾನು ವಿಷಣ್ಣಳಾಗಿ , “No, Aria, she didn’t “, ಎಂದೆ. ಕೆಲಕ್ಷಣ ಮೌನ. ಮತ್ತೆ ಪ್ರಶ್ನೆ ಬಂತು.
  “Why didn’t Rama go with her?”
  ನಾನು ಸ್ತಬ್ಧಳಾದೆ! ಸುಧಾರಿಸಿಕೊಂಡು ನುಡಿದೆ.
  ” He had to look after the kingdom, isn’t it? Howcould he go.?”
  ಥಟ್ಟನೆ ಬಂತು ಪ್ರತಿಕ್ರಿಯೆ –
  “So what? He could have asked Laxman to look after the kingdom?”
  ನಿರುತ್ತರ!

  • ಹೌದಲ್ಲಾ. ಮಕ್ಕಳು ಮತ್ತೆ ರಾಮಾಯಣವನ್ನು ಮುರಿದು ಕಟ್ಟಬಲ್ಲರು. ಹಾಗಾದಾಗ ಮಾತ್ರವೇ ರಾಮನು ಇಳಿಯಬಲ್ಲ ಅಲ್ಲವೆ?

 2. ಎಷ್ಟೆಲ್ಲಾ ಕಟ್ಟುಪಾಡುಗಳು ಸೀತೆಗೆ. ರಾಮನಿಗೂ…

  ಆಸಕ್ತಿಯಿಂದ ಓದಿಸಿಕೊಂಡಿತು, ಸುಧಾ

 3. ಲೇಖನದ ಜೊತೆಗಿರುವ ಚಿತ್ರಗಳಂತೂ ಅದ್ಭುತ.

 4. after reading the article I felt the women are born to suffer, right from Ramrajya to date. However, the circumstances of those period varies and our interpretation of their actions with our present beliefs may not be correct. But, women are treated as man’s chattel even today world over and by Civilised educated men. Sorry state of affairs.

  • ನೀವು ಹೇಳ್ತಿರೋದು ಸರಿ. ಆದರೆ ಪುರಾಣವನ್ನು ವರ್ತಮಾನದ ಕಣ್ಣಲ್ಲಿ ನೋಡದಿದ್ದರೆ ಅದೇ ಭವ್ಯ, ದಿವ್ಯ ಎಂಬ ಉತ್ಪ್ರೇಕ್ಷೆ ಯ ಸನ್ನಿಗೆ ಒಳಗಾಗುತ್ತೇವೆ. ಹಾಗೆ ಮುಖಾಮುಖಿಯಾಗುತ್ತಲೇ ಅವುಗಳನ್ನು ಪುನರ್ ನಿರ್ವಚಿಸಿಕೊಂಡರೆ ನಮ್ಮೊಂದಿಗೆ ಅವೂ ಚಲಿಸುತ್ತವೆ ಅಲ್ಲವೆ?

Leave a Reply