ಖಡಕ್ ಮಾತು, ನಿಲುವಿನ ಕಾಡನಕುಪ್ಪೆ

ಆದರ್ಶ – ಪ್ರಾಮಾಣಿಕ : ಕಾಡನಕುಪ್ಪೆ ಸ್ಮರಣೆ

ಆರ್ ಜಿ ಹಳ್ಳಿ ನಾಗರಾಜ

* ಶಿವರಾಮು ಕಾಡನಕುಪ್ಪೆ ನನಗೆ ಮೈಸೂರಿನಲ್ಲಿ ೧೯೭೭ರಿಂದ ಪರಿಚಯ. ಅವರ “ಸಂವಹನ” ವಿಮರ್ಶೆಯ ಕೃತಿ ಆಗ ಬಿಡುಗಡೆ ಆಗಿತ್ತು. ನಾವೆಲ್ಲ ಆಗತಾನೆ ಕಾಲೇಜು ಮೆಟ್ಟಿಲು ತುಳಿದ ವಿದ್ಯಾರ್ಥಿಗಳು. ಆ ಕೃತಿಯಲ್ಲಿನ ಅವರ ಬರಹಕ್ಕೆ ಮನಸೊಪ್ಪಿಸಿದ್ದವು. ಆಗಲೇ ನವ್ಯ ಸಾಹಿತ್ಯದ ಬಗ್ಗೆ ನಿಷ್ಠುರವಾಗಿ ಮಾತಾಡಿದ್ದರು. ಬಂಡಾಯ ಸಾಹಿತ್ಯದ ಟಿಸಿಲು ಅವರ ಬರಹದಲ್ಲಿ ಮೂಡಿತ್ತು. ಕುವೆಂಪು ಅವರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ನಿಷ್ಠುರವಾಗಿ ಮಾತಾಡುತ್ತಿದ್ದರು. ಸರಸ್ವತಿಪುರಂ ೧೪ನೇ ಮುಖ್ಯರಸ್ತೆಯ ಬಸ್ ನಿಲ್ದಾಣದಲ್ಲೇ ಅವರ ಮನೆ. ವರಾಂಡದಲ್ಲಿ ಕೂತು ಅವರ ಜೊತೆ ಎಷ್ಟೋ ಹರಟಿದ್ದೇನೆ. ನನ್ನ ಮೊದಲ ಕವನ ಸಂಕಲನ ೧೯೭೯ರಲ್ಲಿ ಪ್ರಕಟವಾದಾಗ ಅದಕ್ಕೆ ಪ್ರೊ. ಭಗವಾನ್ – ಕಾಡನಕುಪ್ಪೆ ಜಂಟಿಯಾಗಿ ಅಭಿಪ್ರಾಯ ಕೊಟ್ಟಿದ್ದರು.

* ಕಾಡನಕುಪ್ಪೆ ಒಬ್ಬ ಆದರ್ಶ ವ್ಯಕ್ತಿ. ಅತ್ಯುತ್ತಮ ಪ್ರಾಧ್ಯಾಪಕ. ಉತ್ತಮ ಆಡಳಿತಗಾರ. ಅವರು ತಮ್ಮ ಪ್ರಾಮಾಣಿಕ ಹಾಗೂ ನಿಷ್ಠುರ ಮಾತುಗಳಿಂದ ನನಗೆ ಮತ್ತಷ್ಟು ಹತ್ತಿರವಾಗಿದ್ದರು. ಅವರನ್ನು ಮೈಸೂರಿಗೆ ಹೋದಾಗಲೆಲ್ಲ ಭೇಟಿ ಮಾಡುತ್ತಿದೆ. ಸಾಹಿತ್ಯ, ರಾಜಕಾರಣ, ಸಂಸ್ಕೃತಿಯ ಚಿಂತನೆ ನಮ್ಮ ಚರ್ಚೆಯ ವಿಷಯಗಳಾಗಿದ್ದವು. ಈಚೆಗೆ ಮೈಸೂರಿಗೆ ಹೋದಾಗ ಅವರ ಮನೆಕಡೆ ಹೊರಟು ದಾರಿ ಮಧ್ಯೆ ಫೋನ್ ಮಾಡಿದಾಗ ಅವರ ಶ್ರೀಮತಿ ಸ್ವೀಕರಿಸಿ, ಸಧ್ಯ ಬರಬೇಡಿ, ಆರೋಗ್ಯ ತೀರಾ ಹದಗೆಟ್ಟಿದೆ ಎಂದಿದ್ದರು. ಬರಹಗಾರ ಮಿತ್ರ ಡಿ. ಹೊಸಳ್ಳಿ ಶಿವು ನಾನು ವಾಪಾಸು ಬಂದೆವು.

*ಎರಡು ವರ್ಷದ ಹಿಂದೆ ಅವರಿಗೆ ಬೆಂಗಳೂರಿನ ಖಾಸಗಿ ಸಂಸ್ಥೆಯ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದೆ. ಪತ್ರಿಕೆಗಳಲ್ಲಿ ಫೋಟೋ ಸಹ ಪ್ರಕಟವಾಯ್ತು. ನಾನು ಫೋನ್ ಮಾಡಿ ಪ್ರಶಸ್ತಿ ಒಪ್ಪಿಕೊಳ್ಳಿ ಸಾರ್ ಎಂದೆ. ಅವರು ಸಂಸ್ಥೆ ಬಗ್ಗೆ ವಿವರ ಪಡೆದು “ನಾನು ಈ ಪ್ರಶಸ್ತಿ ಸ್ವೀಕರಿಸೊಲ್ಲ. ನೀವು ಹೇಳುವಂತೆ ಬಿಲ್ಡರ್ ಸಂಸ್ಥೆ ಇದರ ಹಿಂದೆ ಇದೆ. ಅವರು ಪ್ರಾಮಾಣಿಕವಾಗಿಲು ಸಾಧ್ಯವಿಲ್ಲ. ತಪ್ಪು ತಿಳಿಯಬೇಡಿ. ನಿಮ್ಮ ವಿಶ್ವಾಸಕ್ಕೆ ಥ್ಯಾಕ್ಸ್” ಎಂದು ಖಡಕ್ ಮಾತು ಹೇಳಿ ಫೋನ್ ಇಟ್ಟರು.

* ಈ ಪ್ರಸಂಗ ನಡೆದ ಆರೇಳು ತಿಂಗಳ ನಂತರ ಅವರ ಮನೆಗೆ ಹೋದೆ. ಆಗಲೇ ಆರೋಗ್ಯ ಹದಗೆಟ್ಟಿತ್ತು. ಮರುಜೀವ ಪಡೆದು ಬಂದಿದ್ದರು. ಆಸ್ಪತ್ರೆ ಅನುಭವ, ಕಾಯಿಲೆಯ ಪ್ರಸ್ತಾಪ, ತನ್ನನ್ನು ಉಳಿಸಿದ ಅನೇಕರ ಸಹಕಾರ ಸ್ಮರಿಸಿ ಪುಸ್ತಕ ಬರೆದರು. ಅದನ್ನು ಮನೆಗೆ ಹೋದಾಗ ನೀಡಿದರು.

* ಕಾಡನಕುಪ್ಪೆ ಕುಟುಂಬ ಸಾಹಿತ್ಯ, ಪತ್ರಿಕೋದ್ಯಮ, ವೈದ್ಯಕೀಯದಲ್ಲಿ ಹೆಸರಾಗಿದೆ. ಅವರದ್ದು ಆ ಕಾಲಕ್ಕೆ ಸರಳ ಹಾಗೂ ಆದರ್ಶದ ಮದುವೆ. ಮುಂದೆ ಇದು ನನಗೂ ಆದರ್ಶವಾಯಿತು. ಅವರ ಬಾಳ ಸಂಗಾತಿ ಸುವರ್ಣ ಕಾಡನಕುಪ್ಪೆ ಕವಯಿತ್ರಿ. ಕವನ ಸಂಕಲನ ಪ್ರಕಟವಾಗಿದೆ. ಮಗಳು ಡಾ. ಸುಶಿ ಕಾಡನಕುಪ್ಪೆ ವಿಚಾರವಾದಿ ಲೇಖಕಿ, ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕಿ. ಮಗ ನೇಸರ ಕಾಡನಕುಪ್ಪೆ ಪತ್ರಕರ್ತ. ಮನೆಗೆ ಹೋದಾಗ ಒಬ್ಬರಲ್ಲಾ ಒಬ್ಬರು ಭೇಟಿ ಆಗುತ್ತಿದ್ದರು.

* ಕಾಡನಕುಪ್ಪೆ ಸಹೋದರ ವಕೀಲರಾಗಿದ್ದರು. ರಾಮನಗರದಲ್ಲಿ ಒಮ್ಮೆ ಭೇಟಿ ಆಗಿದ್ದೆವು. ಅವರು ಅಕಾಲ ಮರಣಕ್ಕೆ ತುತ್ತಾದರು. ( ಈ ವಿಚಾರ ತಡವಾಗಿ ತಿಳಿಯಿತು)

*”ಸುಧಾ” ವಾರಪತ್ರಿಕೆಯಲ್ಲಿ “ಶಿಕಾಕು” ಹೆಸರಿನಿಂದ ಹಲವಾರು ವರ್ಷದಿಂದ “ವಿಚಾರ ಲಹರಿ” ಅಂಕಣ ಬರಹ ಬರೆಯುತ್ತಿದ್ದರು. ಅದು “ಬಯಲ ಬೆಳೆ” ಎಂಬ ವೈಚಾರಿಕ ಬರಹದ ಗುಚ್ಛವಾಗಿ ಪುಸ್ತಕ ರೂಪದಲ್ಲಿ ಬಂದಾಗ ನನಗೂ ಸಹಿ ಮಾಡಿ ಕೊಟ್ಟಿದ್ದರು. (೦೩.೦೪.೨೦೧೮)

ಶಿವರಾಮ ಕಾಡನಕುಪ್ಪೆ ಸಾವಿನಿಂದ ಕನ್ನಡ ಸಾಹಿತ್ಯಕ್ಕೆ ನಷ್ಟವಾಗಿದೆ. ಅವರಿಗೆ ನನ್ನ ಸಂತಾಪ.

3 comments

  1. ಅವರ ಆಸ್ಪತ್ರೆಯ ಅನುಭವ ಕಥನ ಬಹುವಿಶಿಷ್ಟ ಕೃತಿ

  2. ನಿಜ. ಗೆಳೆಯ ಶಿವರಾಮ ಕಾಡನಕುಪ್ಪೆಯವರು ನಿಜಕ್ಕೂ ಪ್ರಾಮಾಣಿಕರೂ ಆದರ್ಶಪ್ರಿಯರೂ ಆಗಿದ್ದ ಸರಳಜೀವಿ. ಅವರದು ಅಬ್ಬರವಿಲ್ಲದ ಪ್ರತಿಭಟನೆ. ತುಂಬಾ ಕುತೂಹಲಕಾರಿಯಾಗಿದ್ದ ಕಾದಂಬರಿ ಮತ್ತು ಕೃತಜ್ಞತೆಯಿಂದ ಆರ್ದ್ರವಾಗಿದ್ದ ಆಸ್ಪತ್ರೆ ದಿನಗಳ ಕಥನವೂ ಸೇರಿದಂತೆ ಅವರ ಹಲವು ಬರೆಹಗಳು ಮತ್ತು ಅವರು ರೂಪಿಸಿದ ಮಕ್ಕಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಗಳು.
    ಎಚ್.ಎಸ್.ರಾಘವೇಂದ್ರ ರಾವ್

Leave a Reply