ಉತ್ತರದ ಒಡಕಿಗೆ ಹೊರಟ ‘ಉತ್ತರ’ ಕುಮಾರರು!


ಒಂದೂವರೆ ದಶಕದ ಹಿಂದೆ ಕನ್ನಡದ ಖ್ಯಾತ ಸಾಹಿತಿ ದುಂ.ನಿ ಬೆಳಗಲಿ ನೆನಪಿನಲ್ಲಿ ನಡೆಯುವ ಸಾಹಿತ್ಯ ಪ್ರತಿಷ್ಠಾನದ ಕಾರ‍್ಯಕ್ರಮಕ್ಕೆ ಹೊರಟ ನನಗೆ ಉತ್ತರ ಕರ್ನಾಟಕವನ್ನು ಮೊದಲ ಬಾರಿಗೆ ನೋಡುವ ಅವಕಾಶವೊಂದು ಸಿಕ್ಕಿದಂತಾಗಿತ್ತು.

ನಾನು, ನನ್ನ ಗೆಳೆಯರಿದ್ದ ಕಾರು ಮುಧೋಳ ಹಾದು ಮಹಾಲಿಂಗಪುರ ಮಾರ್ಗವಾಗಿ ರಬಕವಿ ಬನ್ನಹಟ್ಟಿಯ ರಸ್ತೆ ಹಿಡಿದಾಗ ರಾತ್ರಿ ೨ ಗಂಟೆಯಾಗಿತ್ತು.

ಗವ್ವನೆ ಕತ್ತಲು ನಿರ್ಜನ ರಸ್ತೆಯಲ್ಲಿ ಗುಂಡಿ ಗೊಟರುಗಳು ನಮ್ಮನ್ನು ಎತ್ತಿ ಆಡಿಸುತ್ತಾ ಕೀಲು, ಮೂಳೆಗಳನ್ನು ಮೀಟುತಿದ್ದವು. ರಸ್ತೆಯ ಎಡ ಪಕ್ಕೆಯ ಕೂಗಳತೆಯಲ್ಲಿ ಸುಮಾರು ಒಂದು ಕಿ.ಮೀ ನಷ್ಟು ಉದ್ದಕ್ಕೂ ಕತ್ತಲಲ್ಲಿ ಅಸ್ಪಷ್ಟವಾದ ಸಾಲೊಂದು, ಅಲ್ಲಲ್ಲಿ ಅಕೃತಿಗಳು ಸಣ್ಣದಾಗಿ ಸರಿದಾಡುವುದು ಕಾಣುತ್ತಿತ್ತು.

ಎತ್ತಿನ ಗಾಡಿಗಳು ನಿಂತಿದ್ದವು. ಅಲ್ಲಿರುವವರು ಮನುಷ್ಯರೆಂದು ಖಾತ್ರಿಯಾದ ಮೇಲೆ ಕುತೂಹಲಕ್ಕೆ ಕಾರು ನಿಲ್ಲಿಸಿ ಹತ್ತಿರ ಹೋಗಿ ನೋಡಿದಾಗ ದಂಗು ಬಡಿದಿದ್ದೆವು. ನಮ್ಮ ಅನುಭವಕ್ಕೆ ಬರುವುದಿರಲಿ, ಇಂತಹದ್ದೊಂದು ಪರಿಸ್ಥಿತಿಯೂ ನಮ್ಮ ರಾಜ್ಯದಲ್ಲಿದೆ ಎಂದು ಊಹಿಸಿಕೊಂಡಿರಲಿಲ್ಲ.

೧೫ ದಿನಕ್ಕೊಮ್ಮೆ ಟ್ಯಾಂಕರ್‌ನಲ್ಲಿ ಬರುವ ಕುಡಿಯುವ ನೀರಿಗಾಗಿ ಈ ಭಾಗದ ಅಕ್ಕಪಕ್ಕದ ಹಳ್ಳಿಗಳ ಜನ ಸರಿರಾತ್ರಿಯಲ್ಲಿ ಸಾಲು ಗಟ್ಟಿ ತೂಕಡಿಸುತ್ತಾ ಕುಳಿತಿರುವುದು ಅದೊಂದು ಕಣ್ಣೀರ ಕಥೆ. ಈ ಕಣ್ಣೀರ ಕಥೆಯನ್ನು ಕಣ್ತುಂಬಿಕೊಂಡು ರಬಕವಿಯ ಸಣ್ಣದೊಂದು ಲಾಡ್ಜ್ ಗೆ ಸೇರಿಕೊಂಡ ನಮಗೆ ಬೆಳಗ್ಗೆ ತಲಾ ಅರ್ಧಬಕೇಟ್ ನೀರು ಸಿಕ್ಕಿದ್ದಷ್ಟೇ ಪುಣ್ಯ

ಅಭಿವೃದ್ದಿ ಇರಲಿ, ಇದಾದ ನಂತರದಲ್ಲಿ ಅದೆಷ್ಟೋ ಬಾರಿ ಉತ್ತರಕರ್ನಾಟಕದ ಜಿಲ್ಲೆಗಳಲ್ಲಿ ಸುತ್ತಾಡಿದ್ದೇನೆ. ರಸ್ತೆ,ನೀರು, ಆರೋಗ್ಯದಂತಹ ಮೂಲಭೂತಸೌಕರ್ಯಗಳ ಅದ್ವಾನಗಳನ್ನು ಕಣ್ಣಾರೆ ಕಂಡು ಬಂದಿದ್ದೇನೆ. ಜನ ನಮ್ಮ ಮಲೆನಾಡಿನ ಕಾಫಿ ತೋಟಗಳಿಗೆ ಗುಳೆ ಬರುವುದನ್ನು ಕಂಡು ಮಾತಾಡಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಉತ್ತರಕರ್ನಾಟಕವನ್ನು ಪ್ರತ್ಯೇಕ ರಾಜ್ಯಮಾಡಿ ಎಂದು ಹೇಳುವುದಿಲ್ಲ. ಬದಲಿಗೆ ಈ ಭಾಗದ ಜನಪ್ರತಿನಿಧಿಗಳಿಗೆ ಬಡಿದ ರೋಗವೇನು ಎಂದು ಪದೇ ಪದೇ ಕೇಳುತ್ತೇನೆ.

ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ, ತಾರತಮ್ಯ ಕುರಿತು ಒಂದು ಸಮಗ್ರ ಚರ್ಚೆ, ಅವಲೋಕನ ನಡೆಯಲು ಇದು ಸಕಾಲ ಎನಿಸುತ್ತಿದೆ. ಒಡಕಿನ ಮಾತುಗಳು ಬೀಜವಾಗಿ ನೆಲಹೂತು ಬೇರು ಬಿಟ್ಟು ಬೆಳದು ನಿಲ್ಲುವ ಮುಂಚೆ ದೂದ್ ಕಾ ದೂದ್, ಪಾನಿ ಕಾ ಪಾನಿ ಎಂಬುದನ್ನು ಇತ್ಯರ್ಥಪಡಿಸಲೇಬೇಕಿದೆ.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ, ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಇಂದು ನೆನ್ನೆಯದಲ್ಲ. ಆಗ್ಗಾಗ್ಗೆ ಕೇಳಿ ಬರುತ್ತಲೆ ಇರುತ್ತದೆ. ಹೀಗೆ ಕೇಳಿಬರುವ ಈ ಮಾತುಗಳು ಬಹುತೇಕ ರಾಜಕೀಯ ಪ್ರೇರಿತವಾಗಿಯೇ ಇರುತ್ತವೆ. ಈಗ ಎದ್ದಿರುವ ಕೂಗು ಕೂಡ ಅದೇ ಆಗಿದೆ.

ಉತ್ತರಕರ್ನಾಟಕದ ಪ್ರತ್ಯೇಕ ರಾಜ್ಯದ ಕುರಿತು ಮಾತನಾಡುತ್ತಿರುವವರ ಮಾತುಗಳಲ್ಲಿ ನಿಜವಾಗಿಯೂ ಉತ್ತರ ಕರ್ನಾಟಕದ ಸಾಮಾಜಿಕ ಬದುಕಿನ ಉನ್ನತೀಕರಣ, ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಉದ್ಯೋಗ, ಮಾನವಶಕ್ತಿಯ ಕಲ್ಯಾಣದಂತಹ ಉದ್ದೇಶಗಳಿಗಿಂತ ರಾಜಕೀಯ ಒತ್ತಾಸೆಗಳಿರುವುದೆ ಧ್ವನಿಸುತ್ತಿದೆ. ಉತ್ತರ ಕರ್ನಾಟಕದ ರಾಜಕಾರಣಕ್ಕೆ ಪ್ರತ್ಯೇಕ ರಾಜ್ಯ ಎಂಬುದು ಬೆದರಿಕೆಯ ಒಂದು ಅಸ್ತ್ರವಾಗಿ ಬಳಕೆಯಾಗುತ್ತಿದೆ ವಿನಃ ಜನಪರವಾದ ಕಾಳಜಿಯಲ್ಲ.

ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ಬಜೆಟ್‌ನಲ್ಲಿ, ಸಾಲಮನ್ನಾದಲ್ಲಿ ಅನ್ಯಾಯವಾಗಿದೆ ಎನ್ನುವುದೇ ಅದರೆ ಅದಕ್ಕಾಗಿ ಆ ಭಾಗದ ಜನಪ್ರತಿನಿಧಿಗಳು ಹೋರಾಟವನ್ನು ಹೂಡಬೇಕು. ಅದಕ್ಕಾಗಿ ರಾಜ್ಯ ಒಡೆಯುವುದಲ್ಲ. ಒಂದು ರಾಜ್ಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಬೇಧ ಸಲ್ಲದು, ಉತ್ತರ ಕರ್ನಾಟಕವನ್ನು ಒಂದು ಸುತ್ತುಹಾಕಿ ಬಂದರೆ ಉತ್ತರಕರ್ನಾಟಕದ ದುಃಸ್ಥಿತಿ ಕಣ್ಣಿಗೆ ಕಟ್ಟುತ್ತದೆ.

ಏಕೀಕರಣ ಕರ್ನಾಟಕದ ಭಾಗವೇ ಆಗಿರುವ ಉತ್ತರದ ಜಿಲ್ಲೆಗಳು ದಕ್ಷಿಣಕ್ಕೆ ಹೋಲಿಸಿದಾಗ ಯಾಕಿನ್ನೂ ಹೀಗೆ ಬಾಲಗ್ರಹ ಪೀಡಿತ ಮಗುವಿನಂತೆ ಕೃಷಕುಷ್ಠದಿಂದ ನರಳುತ್ತಿವೆ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಇರದು. ಇದು ಕೇವಲ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಕ್ಷಣದಲ್ಲೇ ಆದ ನಿರ್ಲಕ್ಷ್ಯವೆನ್ನುವುದು ಅಥವಾ ಕುಮಾರಸ್ವಾಮಿ ಅವರ ಕಾಲದಲ್ಲೇ ಹಿಂದಿನ ಎಲ್ಲಾ ನಿರ್ಲಕ್ಷ್ಯಗಳನ್ನು ಸರಿಪಡಿಸಿಬಿಡಬೇಕು ಎನ್ನುವುದು ರಾಜಕೀಯ ಅವಿವೇಕವಾದೀತು. ಈಗ ಪ್ರತ್ಯೇಕ ರಾಜ್ಯದ ಕಹಳೆಯ ಒಡಕಲು ದನಿ ಎತ್ತುತ್ತಿರುವವರದ್ದು ಇಂತಹ ಅವಿವೇಕವೇ ಅಗಿದೆ.

ಅವತ್ತಿನ ಮುಖ್ಯಮಂತ್ರಿ ಹೆಚ್.ಡಿ ದೇವೇಗೌಡರು (೧೯೯೪- ೯೫) ಕೃಷ್ಣ ಜಲಯೋಜನೆಯನ್ನುಅನುಷ್ಠಾನಕ್ಕೆ ತರದಿದ್ದರೆ ಉತ್ತರ ಕರ್ನಾಟಕದ ಸ್ಥಿತಿ ಊಹಿಸಲೂ ಆಗುತ್ತಿರಲಿಲ್ಲ. ಇದು ದಕ್ಷಿಣದ ದೇವೇಗೌಡರು ಉತ್ತರಕ್ಕೆ ಕೊಟ್ಟ ಕೊಡುಗೆ ಎಂದು ಯಾಕೆ ಭಾವಿಸುವುದಿಲ್ಲ.

ಇದೇ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ನುಂಗಿ ನೊಣೆದವರಲ್ಲಿ ಉತ್ತರ ಕರ್ನಾಟಕದ ಜನನಾಯಕರುಗಳದ್ದು ಪಾಲು ಇತ್ತು.ಇದು ಉತ್ತರ ಕರ್ನಾಟಕಕ್ಕೆ ಮಾಡಿದ ದ್ರೋಹವೆಂದೂ ಯಾರಿಗೆ ಯಾಕೆ ಅನಿಸುತ್ತಿಲ್ಲ?

ಏಕೀಕರಣ ಕರ್ನಾಟಕವನ್ನು ಆಳಿದವರಲ್ಲಿ ಉತ್ತರ ಕರ್ನಾಟಕದ ಘಟಾನುಘಟಿ ನಾಯಕರುಗಳೇ ಹೆಚ್ಚು, ಬಿ.ಡಿ ಜತ್ತಿ, ಎಸ್.ಆರ್ ಕಂಠಿ, ನಿಜಲಿಂಗಪ್ಪ. ವಿರೇಂದ್ರ ಪಾಟೀಲ್, ಎಸ್.ಆರ್ ಬೊಮ್ಮಾಯಿ, ಧರ್ಮಸಿಂಗ್, ಜಗದೀಶ್ ಶೆಟ್ಟರ್ ಅವರುಗಳು ಮುಖ್ಯಮಂತ್ರಿಗಳಾಗಿದ್ದವರು.

ಯಾವುದೇ ಸರ್ಕಾರದಲ್ಲೂ ಪ್ರಭಾವಿ ಖಾತೆಗಳನ್ನೆ ಹೊಂದಿದವರು ಉತ್ತರ ಕರ್ನಾಟಕದ ನಾಯಕರುಗಳೇ ಎಂಬುದು ಇತಿಹಾಸ ನೋಡಿದಾಗ ಕನ್ನಡಿ ಹಿಡಿಯುತ್ತದೆ. ಹೀಗಿದ್ದಾಗ್ಯೂ ಉತ್ತರದ ಅಭಿವೃದ್ದಿ ಪ್ರಶ್ನೆಯಾಗಿ ಉಳಿದಿರುವುದು ಯಾಕೆ? ಇದಕ್ಕೆ ಕಾರಣರ‍್ಯಾರು? ಉತ್ತರಕ್ಕೆ ಆಯಾ ಕಾಲದಲ್ಲಿ ಬಿಡುಗಡೆಯಾದ ಅನುದಾನ ಎಲ್ಲಿ ಹೋಯಿತು? ಈ ಭಾಗದ ಜನಪ್ರತಿನಿಧಿಗಳು ವಹಿಸಿದ ಪಾತ್ರವೇನು? ಎಂಬುದನ್ನು ಅವಲೋಕನ ಮಾಡುತ್ತಾ ಉತ್ತರ ಕಂಡುಕೊಳ್ಳುವ ಕಾಲ ಬಂದಿದೆ ಈಗ.

ಏಕೀಕರಣಕ್ಕೂ ಮೊದಲು ದಕ್ಷಿಣ ಕರ್ನಾಟಕದಲ್ಲಿದ್ದ ರಾಜಶಾಹಿ ಆಡಳಿತ ತಕ್ಕ ಮಟ್ಟಿಗೆ ಪ್ರಜಾಪ್ರಭುತ್ವವನ್ನು ಮೈಗೂಡಿಸಿಕೊಂಡಿದ್ದವು. ನೀರಾವರಿ ಯೋಜನೆಗಳು ರಾಜರ ಆಡಳಿತ ಕಾಲದಲ್ಲೇ ಅನುಷ್ಠಾನಗೊಂಡಿದ್ದವು. ಕೆರೆ ಕಟ್ಟೆಗಳನ್ನು ಕಟ್ಟಲಾಯಿತು, ಜನಪರ ಚಳುವಳಿಗಳು, ಶೈಕ್ಷಣಿಕ ವಿಸ್ತಾರತೆ ಜನರನ್ನು ತಮ್ಮ ಹಕ್ಕುಗಳಿಗಾಗಿ ಜಾಗೃತಗೊಳಿಸಿದ್ದವು.

ಮೈಸೂರು ಅರಸರು ತಮ್ಮ ಸಕಲ ಸಂಪತ್ತನ್ನು ಕನ್ನಂಬಾಡಿಕಟ್ಟೆ ಕಟ್ಟಲು ಧಾರೆ ಎರೆದದ್ದು ಸ್ಮರಣೀಯ ಚರಿತ್ರೆಯಾಗಿ ನಮ್ಮ ಮುಂದೆ ಇದೆ. ಉತ್ತರದಲ್ಲಿದ್ದ ದಿವಾನಶಾಹಿ, ನಿಜಾಮರ ಆಡಳಿತಗಳು ಲೋಲುಪತೆಯಲ್ಲಿ, ಕಚ್ಚಾಟದಲ್ಲಿ ಮೆರೆದಾಡಿದ್ದೇ ಹೆಚ್ಚು.

ಏಕೀಕರಣದಿಂದ ಪ್ರಜಾಪ್ರಭುತ್ವ ನೆಲಕಂಡರೂ ನಿಜಾಮರ, ದಿವಾನಶಾಹಿ ಆಡಳಿತದಿಂದ ಅಧಿಕಾರ ಜನರ ಕೈಗೆ ಬರುವ ಬದಲು ಪಾಳೆಗಾರರು , ವಂಶಗತವಾದ ಸಾಹುಕಾರರ ಮುಷ್ಟಿಗೆ ಸಿಲುಕಿದವು. ಉತ್ತರ ಕರ್ನಾಟಕ ಡೆಮಾಕ್ರಟಿಕ್ ಆಗಲಿಲ್ಲ. ಪಾರುಪತ್ಯೆಗಾರರ ಹಿಡಿತಕ್ಕೆ ಜನಾಡಳಿತ ಜಾರಿತು. ದಕ್ಷಿಣದಂತೆ ಉತ್ತರದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಲಿಲ್ಲ .

ಇಂದಿಗೂ ಉತ್ತರದ ರಾಜಕಾರಣ ಕೆಲವು ಮನೆತನಗಳ ಹಿಡಿತದಲ್ಲೇ ಇವೆ. ಪಾಳೆಗಾರರ ವಂಶಗಳ ವಾಡಿಗಳಲ್ಲಿವೆ. ಸಕ್ಕರೆ ಮಾಫಿಯಾ, ಶೈಕ್ಷಣಿಕ ಮಾಫಿಯಾ, ಮಣ್ಣು ಮಾಫಿಯಾ ಜನರನ್ನು ಆಳುತ್ತಿದೆ. ಇಂತಹ ಮಾಫಿಯಾಗಳಿಂದ ನಾಯಕರಾದವರೇ ಇಂದು ಇದ್ದಾರೆ ಹೊರತು, ಜನರ ಕಷ್ಟ-ಸುಖಕ್ಕಾಗಿ ತ್ಯಾಗ ಮಾಡಿದ ನಾಯಕರನ್ನು ಬೂದುಗನ್ನಡಿಯಲ್ಲಿ ಹುಡುಕಬೇಕಾಗಿದೆ.

ಜಾರಕಿಹೊಳಿ, ಹುಕ್ಕೇರಿ, ಬಸವರಾಜ ಬೊಮ್ಮಾಯಿ ಹೆಚ್.ಕೆ ಪಾಟೀಲ್ , ಖಂಡ್ರೆ ಕುಟುಂಬಗಳು ಪಕ್ಷಾತೀತವಾಗಿ ನಿರಂತರವಾಗಿ ಅಧಿಕಾರವನ್ನು ಅನುಭವಿಸುತ್ತಲೆ ಬರುತ್ತಿವೆ. ಮುರುಗೇಶ್ ನಿರಾಣಿ, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಬಳ್ಳಾರಿ ರೆಡ್ಡಿ ಪಾಳೆಯಗಳು ಹಣಬಲ. ತೋಳ್ಬಲಗಳಿಂದ ಆಳುತ್ತಲೇ ಬಂದಿದ್ದರೆ, ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಯವರಂತಹ ಆಧುನಿಕ ಕುಟುಂಬಗಳು ರಾಜಕಾರಣದಲ್ಲಿ ಬಲ ಬಿಗಿಗೊಳಿಸಿಕೊಂಡಿವೆ. ಹೀಗಿದ್ದಾಗ್ಯೂ ಉತ್ತರಕರ್ನಾಟಕದ ಅಭಿವೃದ್ದಿಯ ಕೂಗು ಜೀವಂತವಾಗಿರುವುದು ಶೋಚನೀಯ. ಉತ್ತರ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಸ್ವತ್ತು ಮತ್ತು ಸತ್ತೆ ಖಾದಿ ವೇಷ ತೊಟ್ಟ ಬಲಾಢ್ಯರ, ಕಳ್ಳಕಾಕರ ಕೈಗೆ ಸಿಕ್ಕು ಸೂರೆಗೊಳ್ಳುತ್ತಿದೆ.

ಪ್ರತ್ಯೇಕ ರಾಜ್ಯದ ಪರಿಣಾಮ ದಕ್ಷಿಣಕ್ಕೆ ನಷ್ಟವಂತೂ ಆಗದು. ರಾಜ್ಯದ ಆದಾಯ ಮತ್ತು ಆರ್ಥಿಕ ವಹಿವಾಟು ಲೆಕ್ಕ ಹಾಕಿದಾಗ ಒಡೆದುಕೊಳ್ಳಬಹುದಾದ ಉತ್ತರ ರಾಜ್ಯಕ್ಕೆ ನಷ್ಟವಂತೂ ಕಟ್ಟಿಟ್ಟ ಬುತ್ತಿ. ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿ ಹೋರಾಟ ಮಾಡುವುದಾಗಿ ಪೌರುಷ ತೋರುತ್ತಿರುವವರು ಬಳ್ಳಾರಿಯಲ್ಲಿ ರಾಜ್ಯದ ಗಡಿಕಲ್ಲನ್ನೆ ಕಿತ್ತು ಹಾಕಿ ಸಾವಿರಾರು ಕೋಟಿ ರೂ.ಗಳ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದದ್ದು ಉತ್ತರ ಕರ್ನಾಟಕದ ಜನರಿಗೆ ಮಾಡಿದ ಘೋರ ಅಪರಾಧವಲ್ಲವೆ ಎಂಬುದನ್ನು ಹೇಳಬೇಕು,

ಉತ್ತರ ಕರ್ನಾಟಕದ ಜನತೆ ಪ್ರತ್ಯೇಕ ರಾಜ್ಯಕ್ಕೆ ಪ್ರಚೋದಿಸುತ್ತಿರುವವರ ಬಗ್ಗೆ ಎಚ್ಚರವಹಿಸಬೇಕು. ಹಾಗೊಮ್ಮೆ ಪ್ರತ್ಯೇಕ ರಾಜ್ಯವೇ ಆಗಿದ್ದಾದರೆ ಉತ್ತರ ಕರ್ನಾಟಕರ ಮತ್ತದೆ ಪಾಳೆಗಾರರ, ದುಡ್ಡಿನ ಧಣಿಗಳ,ವಂಶಾವಳಿ ಆಡಳಿತದ ವಸಹತುಶಾಹಿ ಮಾತ್ರ ಆಗಬಲ್ಲದು, ಗಡಿ ಅಭಿವೃದ್ದಿ ಸಮಿತಿ ಹೆಸರಿನಲ್ಲಿ ಆರ‍್ಟಿಕಲ್ ೩೭೧(ಜೆ) ಅಡಿಯಲ್ಲಿ ವಿಶೇಷ ಅನುದಾನಗಳು ಹರಿದು ಬರುತ್ತಿವೆ.

ಉತ್ತರ ಕರ್ನಾಟಕ ಜಿಲ್ಲೆಗಳ ಅಭಿವೃದ್ದಿಗೆ ಬಿಡುಗಡೆ ಆಗುವ ಸಾವಿರಾರು ಕೋಟಿ ರೂ.ಗಳ ಅನುದಾನ ಎಲ್ಲಿ ಸೋರಿಕೆಯಾಗುತ್ತಿದೆ. ಯಾವ ರಾಜಕಾರಣಿಯ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ. ಮೊದಲು ಅದು ವಿಜ್ಹೆಲೆಂಟ್ ಆಗಬೇಕು.

ಉತ್ತರ ಕರ್ನಾಟಕದ ಜನತೆ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಜನಾಂದೋಲನ ರೂಪಿಸಬೇಕು, ಯೋಜನೆಗಳ ಫಲ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಜನರಲ್ಲಿ ಅಭಿವೃದ್ದಿಯ ಗೀಳು ಹಚ್ಚುವ ಕನಿಷ್ಟ ಪ್ರಜ್ಞೆಯನ್ನು ಹುಟ್ಟುಹಾಕಬೇಕಿದೆ. ಪ್ರತ್ಯೇಕ ರಾಜ್ಯ ಎಂಬುದು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರವಲ್ಲ. ಅದೊಂದು ಸ್ವಾರ್ಥ ರಾಜಕೀಯ ಸಂಘರ್ಷದ ಅಸ್ತ್ರವಷ್ಟೆ. ಅದಕ್ಕೆ ಜನತೆ ಗುರಾಣಿಗಳಾಗಬಾರದು.

ಕಲ್ಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಶರಣಬಸಪ್ಪ ಅಪ್ಪ ಅವರು ಹೇಳುವಂತೆ ಉತ್ತರಕರ್ನಾಟಕ ಹಿಂದುಳಿಯಲು ಈ ಭಾಗದ ಶಾಸಕರುಗಳೇ ಕಾರಣ. ಇದು ದೇವವಾಣಿಯಂತೆ ಕೇಳಿಸುತ್ತಿದೆ.

ಸಮ್ಮಿಶ್ರ ಸರ್ಕಾರ ಬಿಜೆಪಿಗೆ ಈಗ ನುಂಗಲಾರದ ತುತ್ತಾಗಿದೆ. ಪ್ರತ್ಯೇಕ ರಾಜ್ಯದ ಕೂಗಿಗೆ ಬಿಜೆಪಿ ಬೆಂಬಲವಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಮಗು ಚಿವುಟಿ ಆಗಿದೆ. ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಸುಪಾರಿ ಕೊಟ್ಟಾಗಿದೆ ಮುಂದಿನದ್ದು ಡ್ರಾಮ ಮಾತ್ರ.

ಹೆಚ್.ಡಿ ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿ. ಅವರು ಮುಖ್ಯಮಂತ್ರಿ ದನಿಯಲ್ಲೇ ಮಾತಾಡಬೇಕು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಬೆಂಬಲ ಸಿಗಲಿಲ್ಲ ನಿಜ, ಜಿದ್ದು ಸಾಧಿಸಬಾರದು. ಅಧಿಕಾರ ದಂಡ ಎಂಬುದು ಅಪ್ರಿಯ ಸತ್ಯವನ್ನು ಅರಗಿಸಿಕೊಂಡು ಸಮವಾಗಿ ತೂಗಬೇಕು. ಅದು ಜನರ ಮನಗೆಲ್ಲುವ ಪರಿಯೂ ಹೌದು. ಉತ್ತರ ಕರ್ನಾಟಕದ ಜನರ ಅಹವಾಲುಗಳಿಗೆ ಕಿವಿತೆರೆದುಕೊಳ್ಳಬೇಕು. ರಾಜಕೀಯ ಟೀಕೆ, ಪ್ರಾಯೋಜಿತ ಹೋರಾಟಗಳಿಂದ ವಿಚಲಿತರಾಗಿ ತಾಳ್ಮೆ ಕಳೆದುಕೊಳ್ಳಬಾರದು. ನಾಯಕತ್ವವನ್ನು ಒರೆಗಚ್ಚುವ ಕಾಲ ಸದಾ ಇದ್ದೇ ಇರುತ್ತದೆ. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಅಭಿವೃದ್ದಿಯ ವಿಷಯದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಮುಖ್ಯ ಅಜೆಂಡವನ್ನಾಗಿಸಿಕೊಂಡು ಜನಾಂದೋಲವನ್ನು ರೂಪಿಸಲಿ. ವಿಪಕ್ಷವಾಗಿ ಕರ್ತವ್ಯವೂ ಹೌದು. ಅದು ಬಿಟ್ಟು ಮನೆ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು.

ಹುಬ್ಬಳ್ಳಿಯಲ್ಲಿ ಊರಿನ ಮಲ-ಮೂತ್ರ ಬಾಚಿ ಬಳಿದು ಬದುಕುವ ಪೌರಕಾರ್ಮಿಕರು ಮಾಡಿದ ಕೆಲಸಕ್ಕೆ ಸಂಬಳ ಕೇಳಿ ಮಲ ಸುರಿದುಕೊಂಡು ಪ್ರತಿಭಟಿಸಿದರು. ಉತ್ತರ ಕರ್ನಾಟಕದ ಯಾವ ರಾಜಕಾರಣಿಗೂ ಇದು ಅನ್ಯಾಯ, ಅಮಾನವೀಯ ಎಂದು ಅನಿಸಲೇ ಇಲ್ಲ. ಪೌರಕಾರ್ಮಿಕರು ಉತ್ತರ ಕರ್ನಾಟಕದ ಅಭಿವೃದ್ದಿಯ ಪಾಲುದಾರರು ಎಂದು ಯಾರಾದರೂ ಯಾಕೆ ಪರಿಗಣಿಸಲಿಲ್ಲ. ಛೇ.!

ಉತ್ತರಕರ್ನಾಟಕದವರೇ ಆದ ಬಿಜೆಪಿ ಹಿರಿಯ ನಾಯಕ (?) ಹಾಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಾನು ಮಂತ್ರಿಯಾಗಿದ್ದರೆ ಬುದ್ದಿಜೀವಿಗಳಿಗೆ ಗುಂಡಿಕ್ಕಿಸಿ ಕೊಲ್ಲುಸುತ್ತಿದ್ದೆ ಎಂದಿದ್ದಾರೆ.

ನಾನೂ ಅಷ್ಟೇ. ನಾನು ಮಂತ್ರಿಯಾಗಿದ್ದರೆ ಇಂತಹ ಕ್ರಿಮಿನಲ್ ಸ್ಟೇಟ್‌ಮೆಂಟ್ ಕೊಟ್ಟ ಬಸವನಗೌಡ ಪಾಟೀಲರ ಕೈಗೆ ಕೋಳ ತೊಡಿಸಿ ಗೋಲುಗುಂಬಜ್ ಸುತ್ತ ಮೆರವಣಿಗೆ ಮಾಡಿ ನ್ಯಾಯಾಲಯದ ಕಟಕಟೆಗೆ ನಿಲ್ಲಿಸುತ್ತಿದ್ದೆ.

1 comment

  1. ಬಹುತೇಕ ರಾಜಕೀಯ mattu MATAGALA ಪ್ರೇರಿತವಾಗಿಯೇ ಇರುತ್ತವೆ. ಈಗ ಎದ್ದಿರುವ ಕೂಗು ಕೂಡ ಅದೇ ಆಗಿದೆ.

Leave a Reply