ಕಣ್ಣು ತೆರೆಸುವ ಅರಣ್ಯದಂಚಿನ ಬದುಕು 

ವಿಜಯೇಂದ್ರ 

ನಾನು ವೃತ್ತಿನಿರತ ಟೈಪಿಸ್ಟ್ ಅದ ಕಾಲದಿಂದಲೂ ಇದುತನಕ ನೂರಾರು ಸಂಶೋಧನಾ ಪ್ರಭಂದಗಳನ್ನು ಓದಿದ್ದೇನೆ, ತಿದ್ದಿದ್ದೇನೆ, ಸಿದ್ದಪಡಿಸಿದ್ದೇನೆ.

ಸಾಹಿತ್ಯ ಮಾನವಿಕ ಶಾಸ್ತ್ರ ಗಳ ಅಧ್ಯಯನಕ್ಕೆ ಸಂಬಂಧಿಸಿದ ನೂರಾರು ಪ್ರಬಂಧಗಳನ್ನು ಓದಿದ್ದೇನೆ. ಎಷ್ಟೋ ಪ್ರಬಂಧಗಳಿಗೆ ನಾನು Ghost writer ಆಗಿಯೂ ಬರೆದುಕೊಟ್ಟಿದ್ದು ಅವುಗಳಿಗೆ ಅಯಾ ಕಾಲದಲ್ಲಿ ಡಾಕ್ಟರೇಟ್ ಮನ್ನಣೆ ಸಿಕ್ಕಿದೆ (ನನಗೆ ಸಾಕಷ್ಟು ಕಾಸೂ ಸಿಗುತ್ತಿತ್ತು ಎಂಬುದನ್ನು ಹೇಳಬೇಕಾದ ಅಗತ್ಯವಿಲ್ಲ).

ರಾಜ್ಯದ ಹತ್ತಾರು ವಿಶ್ವವಿದ್ಯಾಲಯಗಳು ಪ್ರತಿವರ್ಷ ವಿವಿದ ಅಧ್ಯಯನ ವಿಭಾಗಗಳಿಂದ ನೂರಾರು ಸಂಶೋಧನಾ ಪ್ರಬಂಧಗಳು ತಯಾರಾಗುತ್ತವೆ. ತಾವೆಷ್ಟು ಪ್ರಬಂಧಗಳಿಗೆ ಗೈಡ್ ಆಗಿದ್ದೇನೆ ಎಂದು ಕೊಚ್ಚಿಕೊಳ್ಳುವ ಹಲವಾರು ಪ್ರಾಧ್ಯಾಪಕರುಗಳನ್ನು ನಾನು ಕಂಡಿದ್ದೇನೆ.

ಇಂತಹ ಪ್ರಬಂಧಗಳಿಗೆ ವಿವಿಗಳ ಮನ್ನಣೆ ಸಿಕ್ಕಿ ಸಂಶೋದಕರು ಡಾಕ್ಟರ್ ಬಿರುದಾಂಕಿತರಾಗುವುದು, ಈ ಕಿರೀಟ ಧರಿಸಿ ಉದ್ಯೋಗ ಮಾರುಕಟ್ಟೆಯಲ್ಲಿ ಸೆಣಸಾಡುವುದು.( ಹಣ, ಜಾತಿ, ಪ್ರಭಾವ, ಮನೆತನದ ಹಿನ್ನಲೆ, ವಶೀಲಿ ಸರಿಯಾಗಿ ಕೆಲಸ ಮಾಡಿದಲ್ಲಿ ಉದ್ಯೋಗ ನೀಡಲು ಡಾಕ್ಟರೇಟ್ ಎನ್ನುವುದು ಒಂದು additional feather) ಹೀಗೆ ಡಾಕ್ಟರೇಟ್ ಪಡೆದು ಉದ್ಯೋಗ ಗಳಿಸಿದ ನಂತರ ಆ ಪ್ರಬಂಧಗಳು ಅಲ್ಲಿಯೇ ಅವಸಾನಗೊಳ್ಳುತ್ತವೆ.

ವಿವಿಗಳು ತಾವು ಪ್ರತಿ ವರ್ಷ ನೀಡುವ ಡಾಕ್ಟರೇಟ್ ಪ್ರಬಂಧಗಳನ್ನು ಪ್ರಕಟಿಸಬೇಕು. ಸಾರ್ವಜನಿಕ ಓದಿಗೆ ಮುಕ್ತಗೊಳಿಸಬೇಕು. ಅದರೆ ವಾಸ್ತವವಾಗಿ ನಡೆಯುತಿಲ್ಲ. ಪ್ರಬಂಧ ಮಂಡನೆ, ಸ್ವೀಕಾರ, ಡಾಕ್ಟರೇಟ್ ನೀಡಿಕೆ ಎನ್ನುವುದು ವಿವಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಒಂದು ಮುಖವಾಗಿದೆ.

ಎಷ್ಟೋ ಪ್ರಕರಣಗಳಲ್ಲಿ ಗೈಡ್ ಕೂಡಾ ಪ್ರಬಂಧ ಓದಿಯೇ ಇರುವುದಿಲ್ಲ. Cut and paste ವಿಧಾನದಲ್ಲಿ ಡಾಕ್ಟರೇಟ್ ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಿದ ಅಸಂಖ್ಯಾತ ಮಹಾನಭಾವರನ್ನು ನಾನು ಕಂಡಿದ್ದೇನೆ.

ಪತ್ರಕರ್ತನಾಗಿ ನಾನು ಡಾಕ್ಟರೇಟ್ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲುವ ಕಿರು ಪ್ರಯತ್ನ ಕೂಡ ಮಾಡಿದ್ದೆ.

ಕನಕಪುರ ತಾಲೂಕಿನ ಉರಗನದೊಡ್ಡಿಯಿಂದ ಬಂದು ಬೆಂಗಳೂರು ವಿವಿಯ ಸಾಮಾಜಿಕ ಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ಡಾ. ಯು.ಎಂ. ರವಿ ಅವರ ಸಂಶೋಧನಾ ಗ್ರಂಥ “ಅರಣ್ಯದಂಚಿನ ಬದುಕು”  ಓದಲು ಸಾಧ್ಯವಾದಾಗ ಈ ಎಲ್ಲ ನನ್ನ ಪೂರ್ವಾಗ್ರಹಗಳು ಒಂದು ಬದಿ ನಿಂತು ಒಂದು ಉತ್ತಮ ಅಪರೂಪದ ಓದು ಪಡೆಯಲು ಸಾದ್ಯವಾಯಿತು.

ಶತಶತಮಾನಗಳಿಂದಲೂ ಅರಣ್ಯ ಪರಿಸರಗಳಲ್ಲಿ ವಾಸವಾಗಿದ್ದು ಅರಣ್ಯ ಉತ್ಪನ್ನಗಳ ಮೇಲೆ ಜೀವನಾವಂಬನೆ ನಡೆಸಿ ತಮ್ಮದೇ ಅದ  ಸಂಸ್ಕ್ರತಿ ಕಟ್ಟುಪಾಡುಗಳ ನಡುವೆ ಜೀವಿಸುತ್ತಿದ್ದ, ಇದೀಗ ಸರಕಾರದ ನೂರಾರು ಕಾಯ್ದೆಗಳ ಅಸಮರ್ಪಕ ಅನುಷ್ಠಾನದಿಂದ ತಮ್ಮ ಮೂಲನೆಲೆ ಯಿಂದ ಸರಕಾರ ಕೊಡಮಾಡಿರುವ ವಸತಿಗಳಲ್ಲಿ ಬದುಕುತ್ತ ನವ ನಾಗರಿಕತೆಯ ಹಾವಳಿಯಲ್ಲಿ ತಮ್ಮ ವೈಶಿಷ್ಟ್ಯತೆಗಳನ್ನು ಕಳೆದುಕೊಂಡ ದುರಂತ ಸ್ಥಿತ್ಯಂತರ ಕ್ಕೆ ಒಳಪಟ್ಟ ಜೇನು ಕುರುಬರು, ಬೆಟ್ಟ ಕುರುಬರು, ಯರವರು, ಸೋಲಿಗರು, ಇರುಳಿಗರು, ಲಂಬಾಣಿಗಳು, ಹಕ್ಕಿಪಿಕ್ಕಿ ಇತ್ಯಾದಿ ಬುಡಕಟ್ಟು ಸಮುದಾಯಗಳ ಕುರಿತು ಮಾಡಿದ ಅಧ್ಯಯನದ ಪಲಶ್ರುತಿ ಈ ಗ್ರಂಥ.

ಬೆಂಗಳೂರು ವಿವಿ ೨೦೧೪ ರಲ್ಲಿ ಈ ಪ್ರಬಂಧಕ್ಕೆ ಡಾಕ್ಟರೇಟ್ ನೀಡಿದ್ದು ಮಾರ್ಗದರ್ಶಿ ಜನಪ್ರಿಯ ಪ್ರೊಫೆಸರ್ ಡಾ.ಎಮ್.ವಿ. ವಸು (ವಸೂ ಇಂದು ನಮ್ಮೊಂದಿಗೆ ಇಲ್ಲ) ಅವರ ಒತ್ತಾಸೆ ಉತ್ತೇಜನಗಳ ಫಲವಾಗಿ ರವಿ ತಮ್ಮ ಕೃತಿಯನ್ನು ಪ್ರಕಟಿಸಿದ್ದಾರೆ.

ಅರಣ್ಯದಂಚಿನ‌ ಬದುಕು, ವ್ಯಾಖ್ಯಾನ, ಚಾರಿತ್ರಿಕ ಹಿನ್ನೆಲೆ, ಕಾಡು- ನಾಡಿನ ಬೇರ್ಪಡಿಸಲಾಗದ ಸಂಭಂದದ ವಿವರಣೆಯೊಂದಿಗೆ ಆರಂಭವಾಗುವ ಪ್ರಭಂದ ಬುಡಕಟ್ಟು ಜನರ ಸಾಂಸ್ಕ್ರತಿಕ ಬದುಕು,ಅರ್ಥಿಕ ಸ್ಥಿತಿಗತಿ ಹಾಗೂ ಆಧುನಿಕ ಬದುಕು, ಅರಣ್ಯ ಇಲಾಖೆ ಹಾಗು ಬುಡಕಟ್ಟು ಜನರ ಹೋರಾಟಗಳು, ಅರಣ್ಯ ನಾಶಕ್ಕೆ ಇಂಬು ಕೊಡುವಂತಹ ಅರಣ್ಯ ಕಾಯ್ದೆಗಳು, ಈ ಜ್ವಲಂತ ಸಮಸ್ಯೆಯ ಬಗ್ಗೆ ನಮ್ಮ ಕನ್ನಡ ಸಾಹಿತ್ಯ ಸಮಾಜ ಇತರ ಕೋಮುಗಳು ಹೇಗೆ ಸ್ಪಂದಿಸಿವೆ ಎಂಬ ವಿಶೇಷ ಅಧ್ಯಯನದ ಮಾಹಿತಿ ಈ ಪುಟಗಳಲ್ಲಿ ಸಮೃದ್ಧವಾಗಿ ಸಿಗುತ್ತವೆ.

ಸ್ವಾತಂತ್ರೋತ್ತರ ಕರ್ನಾಟಕ ರಾಜ್ಯದ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ನೀಲಗಿರಿ ಪ್ರದೇಶ. ಇದಕ್ಕೆ ಹೊಂದಿಕೊಂಡಿರುವ ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳು, ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಬನ್ನೇರುಘಟ್ಟಅರಣ್ಯಗಳಅಂಚಿನಲ್ಲಿ, ಅರಣ್ಯದೊಳಗೆ ಹಾಡಿ, ಪೋಡು, ಪಡಗ, ದೊಡ್ಡಿ, ಕಾಲೋನಿಗಳಲ್ಲಿ ಬದುಕನ್ನು ಕಟ್ಟಿಕೊಂಡು ಕಾಡನ್ನೇ ಅವಲಂಬಿಸಿ ಬದುಕು ಸವೆಸುತ್ತಿರುವ ಅಸಂಖ್ಯ ಜನರ ದೇವರು, ಧರ್ಮ, ಅಹಾರ ಪದ್ದತಿ, ದೇವರ ಕಾಡು, ವೃಕ್ಷಾರಾಧನೆ, ಪ್ರಾಣಿ ಪೂಜೆ, ಪ್ರಾಣಿ ಬೇಟೆ ಹಾಗೂ ದೈವತ್ವದ ಹೆಸರಿನಲ್ಲಿ ಕಾಡು ಹಾಗು ವನ್ಯಮೃಗಗಳ ರಕ್ಷಣೆ ಬಗೆಗಳನ್ನು ಅಭ್ಯಸಿಸಲಾಗಿದೆ.

ಕಳೆದ ಐದು ದಶಕಗಳಲ್ಲಿ ಅರಣ್ಯಗಳ ಮೇಲೆ ಮೇಲಾಗುತ್ತಿರುವ ನಿರಂತರ ಲೂಟಿ, ಪರಿಸರ ನಾಶ, ಅರಣ್ಯ ರಕ್ಷಣೆಯ ನೆಪದಲ್ಲಿ ಸರಕಾರ ಹೊರತಂದಿರುವ ಅಸಂಖ್ಯ ಜನವಿರೋದಿ ಕಾಯ್ದೆಗಳು, ಅವುಗಳ ಜಾರಿಯ ನೆಪದಲ್ಲಿ ಅರಣ್ಯ ಅಧಿಕಾರಿಗಳು ತಳಸಮುದಾಯಗಳ ಮೇಲೆ ನಡೆಸುತ್ತಿರುವ ಅತ್ಯಾಚಾರ, ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ  ಯಾವುದನ್ನೂ ಈ ಪುಸ್ತಕ ಮುಚ್ಚಿಟ್ಟಿಲ್ಲ.

ಕಾಡುಗಳ್ಳ ವೀರಪ್ಪನ್ ಸೇರಿದಂತೆ ಅನೆಕ ರಾಬಿನ್ ಹುಡ್ ಗಳು, ಕಾಡು ಸಂಪತ್ತನ್ನು ಸೂರೆಗೊಂಡು ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಕಾಡು ಜನರ ಜೀವನವನ್ನು ಬರಬಾದು ಮಾಡುತ್ತಿರುವ ಅಧಿಕಾರಿಶಾಹಿ ರಾಜಕೀಯ ವ್ಯವಸ್ಥೆಯ ಬಗ್ಗೆ ಕೃತಿ ಮಹತ್ತರ ಸಂಗತಿಗಳನ್ನು ದಾಖಲಿಸಿವೆ.

ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನ ಕೃತಿಗಳ ಗುಣಮಟ್ಟದ ಬಗ್ಗೆ ಬಹುದೊಡ್ಡ ಅಪಸ್ವರಗಳು ಕೇಳಿಬರುತ್ತವೆ. ಅವರಿವರ ಪುಸ್ತಕಗಳಿಂದ ಅಧ್ಯಾಯ ಅಧ್ಯಾಯಗಳನ್ನೇ ಕದ್ದು ತಮ್ಮದಾಗಿಸಿಕೊಳ್ಳುವ ದಂಧೆಯಿಂದ ಹಿಡಿದು ಕಾಟಾಚಾರಕ್ಕೆ ಬಾಯಿಗೆ ಬಂದದ್ದನ್ನು ಬರೆದು ವಶೀಲಿಬಾಜಿಯಲ್ಲಿ ಡಾಕ್ಟರೇಟ್ ಹೊಡೆದುಕೊಳ್ಳುವ ಮೇಧಾವಿಗಳನ್ನು ಒಳಗೊಂಡ ಈ ಹಗರಣಗಳ ಉಪಾದ್ವಾಪ ಅನಂತಮುಖಿಯಾಗಿವೆ.

ಇಂತಹ ಸಂದರ್ಭದಲ್ಲಿ ಶ್ರಮ, ಶ್ರದ್ಧೆ, ಆಸಕ್ತಿ, ಬದ್ದತೆ, ಪ್ರಾಮಾಣಿಕತೆ, ಅಧ್ಯಯನಶೀಲತೆಗಳ ಪರಿಣಾಮರೂಪಿಯಾಗಿ ಬಂದಿರುವ ಈ ಪ್ರಬಂಧಕ್ಕೆ ಮುನ್ನುಡಿ ರೂಪದ ಮಾತುಗಳನ್ನು ಬರೆಯುವುದು ಗೌರವ ಸೂಚಕವೆಂದು ಭಾವಿಸಿದ್ದೇನೆ ಎಂಬ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರ ಆಶಯದ ನುಡಿಗಳು ಅಕ್ಷರಷಃ ನಿಜ ಹಾಗು ಯಾವುದೇ ಉತ್ಪ್ರೇಕ್ಷೆಯಲ್ಲ ಎಂಬುದು ಕೃತಿಯನ್ನು ಓದಿದವರಿಗೆ ಅರಿವಾಗುತ್ತದೆ.

ಡಾ.ರವಿ ಈಗ ಕೆ ಅರ್ ಪುರದ ಭಾರತೀಯ ಸಂಸ್ಕತಿ ವಿದ್ಯಾಪೀಠ ಕಾಲೇಜಿನಲ್ಲಿ ಚರಿತ್ರೆ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರವಿಯವರಿಗೆ ಶುಭ ಹಾರೈಸಿ ನನಗೆ ಸಿಕ್ಕ ಓದುವಿಕೆಯ ಸುಖ ಇತರರಿಗೂ ಸಿಗಲಿ ಎಂಬ ಸದಾಶಯದೊಂದಿಗೆ ಅವರ ಕೃತಿಯ ಕುರಿತ ಮಾಹಿತಿ ನೀಡುತ್ತಿದ್ದೇನೆ.

5 comments

  1. ಡಾ.ರವಿ ಅವರ ಪುಸ್ತಕ ಕುರಿತ ನನ್ನ ಅನಿಸಿಕೆಯನ್ನು ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು.

  2. ಒಳ್ಳೆಯ ವಿಷಯದ ಬಗ್ಗೆ ಒಳ್ಳೆಯ ಸಂಶೋಧನೆಯ ಒಳ್ಳೆಯ ಪರಿಚಯ. ಇಂತಹ ವಿಷಯವನ್ನು ಕೈಗೆತ್ತಿಕೊಳ್ಳುವುದೇ ಅಪರೂಪ. ಕೈಗೊಂಡರೂ ವಾಸ್ತವಿಕ ಕ್ರೌರ್ಯಗಳನ್ನು ದಿಟ್ಟವಾಗಿ ತೆರೆದಿಡುವುದು ಇನ್ನೂ ಅಪರೂಪ. ವಿದ್ಯಾರ್ಥಿಯ ಶ್ರಮಕ್ಕಾಗಿ ಅವರಿಗೆ ಅಭಿನಂದನೆಗಳು

Leave a Reply