ಮೋಡದಿಂದೆತ್ತಿಟ್ಟುಕೊಂಡ ನಾಯಿಮರಿ

ಪರಮೇಶ್ವರ ಗುರುಸ್ವಾಮಿ 

ನೆನಪಿನಾಕಾಶದಲ್ಲಿ
ಎಂದೋ ತೇಲಿ ಸಾಗಿದ
ಮೋಡಗಳು ಇಂದು ಧುತ್ತೆಂದು ಪ್ರತ್ಯಕ್ಷವಾಗಿ
ಬಿಡುತ್ತವೆ ರಾಗರಂಗುಗಳ ಪರಿಮಳ
ದುರ್ನಾತಗಳೂ ತಪ್ಪಿಸಿಕೊಳ್ಳುವುದಿಲ್ಲ
ಗುಡುಗು ಸಿಡಿಲು ಕಾರ್ಗತ್ತಲು
ಪ್ರವಾಹಗಳೂ ದಾಳಿಯಿಡುತ್ತವೆ

ಒಂದು ದಿನ ನಾಯಿಮರಿ ಮೋಡವೊಂದನ್ನು
ಇಳಿಸಿಕೊಂಡಿದ್ದೆ ಮುಗಿಲ ಮಂದೆಯಿಂದ.
ಆಗ ಚಿಕ್ಕವನು ನಾನು ಅದ ಚೆಡ್ಡಿ ಜೇಬಿಗಿಳಿಸಿದ್ದೆ
ಮನಜೇಬಿನಲ್ಲಿ ಅದು ಎಷ್ಟು ಸಾರಿ ಉಚ್ಚೆ
ಹೊಯ್ದಿತ್ತೋ, ಬೊಗಳಿತ್ತೋ ಸಂಗಾತಿಗಾಗಿ
ಹಂಬಲಿಸಿತ್ತೋ ನಾನು ಗಮನಿಸಿರಲೇ ಇಲ್ಲ
ಇದುವರೆಗೂ ಗಮನಿಸಿಯೇ ಇರಲಿಲ್ಲ.

ಇಗ ಎಲ್ಲರೂ ಸರಿದ ಮೇಲೆ
ಕೊನೆಯಂಕಣಕ್ಕೆ ರೆಡಿಯಾಗುತ್ತಿರುವಾಗ
ಸೈಡ್‌ವಿಂಗಿನಿಂದ ಬೊಗಳುತ್ತಿದೆ
ತಾನೂ ಬರುತ್ತೇನೆಂದು.

ನಾಟಕ ನಡೆಯುವಾಗ ಸ್ಕ್ರಿಪ್ಟ್‌ನಲ್ಲಿಲ್ಲದ
ನಾಯಿಗೆ ಪಾತ್ರವಲ್ಲದ ನಾಯಿಗೆ ಎಂಟ್ರಿ?

ನಿರ್ದೇಶಕ ಬಿಡುತ್ತಾನೆಯೆ ನನ್ನ?
ಟೀಮಿನವರು ಉಗಿದು ಉಪ್ಪಿನಕಾಯಿ
ಹಾಕುವುದಿಲ್ಲವ ನನ್ನ?
ಇದು ಬೊಗಳಿದ್ದೇ ರಸಾಭಾಸವಾಗಿದೆ
ಆದರೇನು ಮಾಡಲಿ ನನಗಿಂತ ಮೊದಲೇ
ಎಲ್ಲಂದರಲ್ಲಿಗೆ ಬಾಲವಾಡಿಸಿಕೊಂಡು
ಮುನ್ನಡೆಯುತ್ತಿದೆ.

ನಾಯಿಮರಿ ನಾಯಿಮರಿ ತಿಂಡಿ ತಿಂದೆಯ
ತಿನ್ನದಿದ್ದರೂ ಒಣಕೊಂಡಿದ್ದರೂ ನನ್ನ ಕಾಯ್ವೆಯಾ.

1 comment

Leave a Reply