ಸಿಂಗಪುರ್ ನಲ್ಲಿ ಸಾಯಿಬಾಬಾ..

ಕೆಲ ದಿನಗಳ ಹಿಂದೆ, ನಮ್ಮ ಫ್ರೆಂಡ್ಸ್ ಗ್ರೂಪಿನ ಸದಸ್ಯರೊಬ್ಬರ ಮನೆಯಲ್ಲಿ ಪೂಜಾ ಕಾರ್ಯಕ್ರಮ. ವಾರ ಬಾಕಿ ಇರುವಾಗಲೇ ನಮ್ಮೆಲ್ಲರ ತಯಾರಿಯೂ ಆರಂಭವಾಗಿತ್ತು. ದೇವರ ಮೇಲಿನ ಪ್ರೀತಿಯೋ, ಫ್ರೆಂಡ್ಸ್ ಎಲ್ಲರೂ ಒಟ್ಟು ಸೇರುವ ಖುಷಿಯೋ. ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ನಿರ್ಧರಿಸಿದ್ದೆವು.

ದೇವರ ಮೂರ್ತಿಗಳನ್ನು ಮನೆಗಳಲ್ಲಿ ತಂದು ಪೂಜಿಸುವವರು ಸಿಂಗಾಪುರನಲ್ಲೂ ಇದ್ದಾರೆ. ನಿತ್ಯ ಅಭಿಷೇಕಗಳು, ವಾರಕ್ಕೊಮ್ಮೆ ಪಾರಾಯಣಗಳು, ವರ್ಷಕ್ಕೊಮ್ಮೆ ಪೂಜಾ ಪುನಸ್ಕಾರಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಪೂಜಾ ಕಾರ್ಯಕ್ರಮಗಳು ಕೇವಲ ಹೆಂಗಳೆಯರು ಒಟ್ಟೂಗೂಡಿ ನೆರವೇರಿಸಲಾಗುತ್ತದೆ. ಇದಕ್ಕಾಗಿ ವ್ಹಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ, ದೊಡ್ಡ ಬಳಗವನ್ನೇ ಮಾಡಲಾಗುತ್ತದೆ. ಈ ಮೂಲಕ ಸಿಂಗಾಪುರದ ಮೂಲೆ ಮೂಲೆಯಲ್ಲೂ ನೆಲೆಸಿರುವ ಭಾರತೀಯ ಮಹಿಳೆಯರ ಮುಖಾಮುಖಿ ಪರಿಚಯಕ್ಕೆ ಅವಕಾಶ ದೊರೆತಂತಾಗುತ್ತದೆ. ವಿದೇಶದಲ್ಲಿ ನೆಲೆಸಿರುವ ನಮಗೆ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಹಬ್ಬದ ವಾತಾವರಣ.

ಕೊನೆಗೂ ಬಂದೇಬಿಡ್ತು ಆ ದಿನ.. ಮನೆಯಲ್ಲಿದ್ದ ಮಕ್ಕಳನ್ನು ಶಾಲೆಗೆ ಕಳುಹಿಸಿ, ಗಂಡಂದಿರನ್ನೂ ಆಫೀಸ್ ಗೆ ಓಡಿಸಿ.. !! ಬಹುದಿನಗಳಿಂದ ಕಾದಿದ್ದ ‘ಮಹಿಳೆಯರ ಸಾಮ್ರಾಜ್ಯ’ಕ್ಕೆ ತೆರಳಲು ಅಣಿಯಾದೆವು. ಪೂಜಾ ಸಮಾರಂಭ ಆದ ಕಾರಣ, ಎಲ್ಲರೂ ಭಾರತೀಯ ಸಂಸ್ಕೃತಿಯನ್ನ ಬಿಂಬಿಸುವ ಉಡುಗೆಗಳಲ್ಲಿ ತಯಾರಾದೆವು.

ನಮ್ಮದು ಅಪಾರ್ಟ್ಮೆಂಟ್ ನಲ್ಲಿ ವಾಸ. ಹೀಗಾಗಿ ಇಂಡಿಯನ್ ಫ್ರೆಂಡ್ಸ್ ಮಾಡ್ಕೊಳೋದು ಕಷ್ಟದ ಕೆಲಸ ಅನ್ನಿಸಿರಲಿಲ್ಲ. ಅಂದ ಹಾಗೆ, ಸಿಂಗಾಪುರದಲ್ಲಿ 3 ಬಗೆಯ ಮನೆಗಳು. ಒಂದು ಸರ್ಕಾರವೇ ಕಟ್ಟಿಸಿ, ಬಾಡಿಗೆಗೆ ದೊರಕುವ ಮನೆಗಳು. ಅದನ್ನು HDB – Housing & Development Board ಅಂತ ಕರೀತಾರೆ. ಇನ್ನೊಂದು ಪ್ರೈವೇಟ್ ಅಪಾರ್ಟ್ಮೆಂಟ್ ಗಳು. ಮತ್ತೊಂದು ಇಂಡಿವಿಜುವಲ್ ಹೌಸ್ ಗಳು. ಕಡ್ಡಿ ಪೆಟ್ಟಿಗೆ ತರ ಇರುವ HDB ಮನೆಗಳು, ಸಿಂಗಲ್ ಬೆಡ್ ರೂಮ್, ಡಬಲ್, ಎಗ್ಸಿಕ್ಯುಟಿವ್ ಹೀಗೆ ಹಲವು ವಿಧಗಳಲ್ಲೂ ದೊರಕುತ್ತವೆ. ಚಾವಣಿಯ ಒಳಮೈ ಅಥವಾ ಸೀಲಿಂಗ್ ಕೈಗೆಟಕುವ ರೀತಿಯಲ್ಲಿ ಮನೆಗಳು  ನಿರ್ಮಾಣವಾಗಿರುತ್ತವೆ. ಸುರಕ್ಷತೆಯ ಹಿನ್ನಲೆಯಲ್ಲಿ ಸರ್ಕಾರದ ಕಾನೂನು ಪ್ರಕಾರ, ಸೀಲಿಂಗ್ ಫ್ಯಾನ್ ಯಾರೂ ಬಳಸುವ ಹಾಗಿಲ್ಲ. ಟೇಬಲ್ ಫ್ಯಾನ್ ಗೆ ಮಾತ್ರ ಅವಕಾಶ. ಅದು ಬಿಟ್ಟರೆ AC ಅಳವಡಿಸಲಾಗುತ್ತದೆ.

ಈ ದೇಶದಲ್ಲಿ ಒಂದು ಮಾತಿದೆ. ಅಡುಗೆ ಪ್ರಾಮುಖ್ಯವಾದ ಕಾರಣ ನೀರನ್ನ ಹೆಚ್ಚು ಬಳಕೆ ಮಾಡೋರು ಭಾರತೀಯರು. ಚೀನಿಯರದ್ದು ಏನಿದ್ರೂ ಹೊರಗಡೆ ತಿನ್ನೋ ಅಭ್ಯಾಸ.

ಆದರೆ ವಿದ್ಯುತ್ ಬಳಕೆ ಇವರಲ್ಲಿ ಅಧಿಕ…!!. ಸಿಂಗಾಪುರ ದೇಶವು ಉಷ್ಣವಲಯದ ಹವಾಮಾನವನ್ನು ಹೊಂದಿದೆ. ವರ್ಷ ಪೂರ್ತಿ ಧಾರಾಕಾರ ಮಳೆ ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಹ್ಯುಮಿಡಿಟಿ. ಏಕರೂಪದ
ತಾಪಮಾನಗಳನ್ನು ಇಲ್ಲಿ ಕಾಣಬಹುದು. ಈಶಾನ್ಯ ಮಾನ್ಸೂನ್ ಡಿಸೆಂಬರ್ ನಿಂದ ಮಾರ್ಚ್ ಆರಂಭದಲ್ಲಿ ನಡೆದರೆ, ಜೂನ್ ನಿಂದ ಸೆಪ್ಟೆಂಬರ್ ವರೆ ಗೆ ನೈಋತ್ಯ ಮಾನ್ಸೂನ್ ಸಂಭವಿಸುತ್ತದೆ.

ಇನ್ನೂ HDB ಯಲ್ಲೂ ಹಲವಾರು ರೂಲ್ಸ್ ಗಳಿವೆ. ಬಾಡಿಗೆಗೆ ಯಾರು ಬೇಕಾದರೂ ಈ ಮನೆಗಳನ್ನು ತೆಗೆದುಕೊಳ್ಳಬಹುದು. ಆದರೆ ಸ್ವಂತ ಮನೆ ಹೊಂದಲು, ಈ ಸರ್ಕಾರ ಕೆಲ ವರ್ಗೀಕರಣಗಳನ್ನು ಮಾಡಿದೆ. ಮೊದಲನೆಯ ವಿಭಾಗ ಈ ದೇಶದ ಪೌರತ್ವವನ್ನು ಹೊಂದಿದವರು. ಎರಡನೇ ವಿಭಾಗ ಪರ್ಮನೆಂಟ್ ರೆಸಿಡೆನ್ಸ್ {ಪಿ ಆರ್}. ಮೂರನೆಯದ್ದು ಉದ್ಯೋಗದ ಪಾಸ್ {ಎಂಪ್ಲಾಯ್ಮೆಂಟ್ ಪಾಸ್} ಹಾಗೂ ದೀರ್ಘಾವಧಿಯ ಪಾಸ್ ಹೊಂದಿದವರು. ಜನರು ಬಂದ ವರ್ಷ, ಅವರ ಉದ್ಯೋಗ ಕ್ಷೇತ್ರಗಳು, ದೇಶಕ್ಕೆ ಅವರಿಂದಾದ ಸಾಮಾಜಿಕ ಕಾರ್ಯಗಳು ಹೀಗೆ ನಾನಾ ರೀತಿಯಲ್ಲಿ ಪರಿಗಣಿಸಿ ಪಾಸ್ ಗಳನ್ನು ನೀಡಲಾಗುತ್ತದೆ. ಸರ್ಕಾರದ ಪ್ರಯೋಜನಗಳನ್ನು ಕೇವಲ ಮೊದಲೆರಡು ವರ್ಗಗಳು ಮಾತ್ರ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಈ ಸರ್ಕಾರದ ಮನೆಗಳನ್ನು ಸ್ವಂತ ಪಡೆಯಲು ಮೊದಲ ಎರಡು ವರ್ಗದ ಸದಸ್ಯರಿಗೆ
ಮಾತ್ರ ಅವಕಾಶ.

ಇನ್ನೊಂದು ಬಗೆಯ ಮನೆಗಳು ಪ್ರೈವೇಟ್ ಅಪಾರ್ಟ್ಮೆಂಟ್ ಗಳು. ಇವನ್ನ Condominium ಅಂತ ಕರೀತಾರೆ. ನಮ್ಮ ಬೆಂಗಳೂರಿನಲ್ಲಿ ಪ್ರೆಸ್ಟೀಜ್, ಶೋಬಾ ಹೀಗೆ ಹಲವು ಬಿಲ್ಡರ್ಸ್ ಓನರ್‌ಶಿಪ್ ನಲ್ಲಿರೋ ಅಪಾರ್ಟ್ಮೆಂಟ್ ತರಹ ಇದು ಕೂಡ. ಈ ಮನೆಗಳನ್ನು ಯಾರು ಬೇಕಾದ್ರೂ ಕೊಂಡುಕೊಳ್ಳಬಹುದು. ಬಾಡಿಗೆಗೂ ನೀಡಿ ಮಾಲೀಕ ಯಾವ ದೇಶದಲ್ಲೂ ಬೇಕಾದ್ರೂ ನೆಲೆಸಿರಬಹುದು. ಸ್ವಿಮ್ಮಿಂಗ್ ಪೂಲ್, ಟೆನ್ನಿಸ್ ಕೋರ್ಟ್, ಪಾರ್ಟೀ ಹಾಲ್ ಹೀಗೆ ನಾನಾ ಬಗೆಯ ವ್ಯವಸ್ಥೆಗಳು ಇಲ್ಲಿನ ಹೈಲೈಟ್ಸ್ . ಈ ಮನೆಗಳ ಮಾರಾಟ ಮಿಲಿಯನ್ ಅಥವಾ ಬಿಲಿಯನ್ ಡಾಲರ್ ಗಳಲ್ಲಿ ನಡೆಯುತ್ತವೆ. ಆದರೆ ಇತ್ತೀಚಿನ ದಿನಗಲ್ಲಿ ಕಡಿಮೆ ಬೇಡಿಕೆ ಹಾಗೂ ಮಾರುಕಟ್ಟೆ ದರದಲ್ಲಿ ಏರಿಳಿತಗಳಿಂದಾಗಿ, ಪ್ರೈವೇಟ್ ಮನೆಗಳ ಬಾಡಿಗೆಯಲ್ಲೂ ಇಳಿಕೆ ಆಗಿದೆ. ಹೀಗಾಗಿ ನಾನು ಮೊದಲೇ ತಿಳಿಸಿದ ಮೂರನೇ ವರ್ಗದ ಪಾಸ್ ಹೊಂದಿದ ವಿದೇಶಿಗರು, ಇಂತಹ ಮನೆಗಳನ್ನು ಬಾಡಿಗೆ ಅಥವಾ ಸ್ವಂತದ್ದಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರದ ಕಾನೂನುಗಳಲ್ಲೂ ಕೂಡ ಇಂತಹ ಮನೆಗಳಿಗೆ ರಿಯಾಯಿತಿ ನೀಡಲಾಗಿದೆ.

ಮೂರನೆಯದ್ದು, ಇಂಡಿವಿಜುವಲ್ ಹೌಸ್. ನಮ್ಮ ಊರಿನ ಮನೆಗಳ ರೀತಿ. ಆದರೆ ಇವುಗಳಲ್ಲಿ ವಾಸ ಮಾಡೋ ಬಹುತೇಕ ಮಂದಿ ಮಿಲಿಯನೇರ್ ಆಥವಾ ಬಿಲಿಯನೇರ್ ಆಗಿರುತ್ತಾರೆ. ಬಂಗಲೆಗಳು ಕೂಡ ಇದೇ ರೀತಿಯಾಗಿವೆ. ಅಂತಹ ಮನೆಗಳನ್ನ ನೋಡಿ ಸಮಾಧಾನ ಪಡಕೊಳೋದಷ್ಟೆ ನಮ್ಮ ಕೆಲಸ. ಮತ್ತೆ ನನ್ನ ಕಥೆ ಮುಂದುವರಿಸುತ್ತಾ, ನಮ್ಮ ಅಪಾರ್ಟ್ಮೆಂಟ್ ನಿಂದ ಗೆಳತಿಯ ಮನೆಗೆ ೧೦ ನಿಮಿಷದ ದಾರಿಯಾಗಿತ್ತು. ದೊಡ್ಡ ಗುಂಪೊಂದೇ ಇದ್ದ ಕಾರಣ ಟ್ಯಾಕ್ಸೀ ಬುಕ್ ಮಾಡೋ ಬಗ್ಗೆ ನಿರ್ಧರಿಸಿದೆವು. ಅಲ್ಲಿಗೆ ತಲುಪಿ ವಿಷ್ಣು ಸಹಸ್ರ ನಾಮ, ಸಾಯಿ ಬಾಬ ಆರತಿ ಹೀಗೆ ನಾನಾ ರೀತಿಯ ಪೂಜಾ ಕಾರ್ಯದಲ್ಲಿ ಭಾಗವಹಿಸಿ – ಪ್ರಸಾದ ಪಡೆದು ಧನ್ಯರಾದೆವು. ಅಚ್ಚರಿ ಅಂದ್ರೆ ಆ ಕಾರ್ಯಕ್ರಮದಲ್ಲಿ ಸೇರಿದ್ದ ಭಾರತೀಯ ಮಹಿಳೆಯರ ಸಂಖ್ಯೆ ನೂರಕ್ಕೂ ಅಧಿಕ. ಒಂಥರಾ ಇಡೀ ಊರಿನ ಜನರೇ ಸೇರಿದ್ದರೋ ಎಂಬ ಭಾವ. ಹೊಸ ಹೊಸ ಮುಖಗಳ ಪರಿಚಯ, ಮಾತು .. ಹೊಸ ಪ್ರಪಂಚವೇ ಸೃಷ್ಟಿ ಯಾದ ಅನುಭವ.

ಆದರೆ ಹಿಂದೆ ಬರುವ ಸಮಯದಲ್ಲಿ ಆದ ಪಜೀತಿಯೇ ಬೇರೆ. ಆಗಲೇ ಗಂಟೆ ೧.೩೦ರ ಬಳಿ ಇತ್ತು. ಕೆಲ ಗೆಳತಿಯರ ಮಕ್ಕಳು ಶಾಲೆಯಿಂದ ಬರುವ ಸಮಯ. ಹಾಗಾಗಿ ಯಾರಿಗೆಲ್ಲಾ ಬೇಗ ತಲುಪಬೇಕಿತ್ತೋ ಅವರೆಲ್ಲ ಒಂದು ಟ್ಯಾಕ್ಸೀ ಬುಕ್ ಮಾಡಿ ತೆರಳಿದ್ರು. ಮತ್ತೆ ನಾನು ಸೇರಿದಂತೆ ಉಳಿದ ಗೆಳತಿಯರು ಇನ್ನೊಂದು ಟ್ಯಾಕ್ಸೀ ಬುಕ್ ಮಾಡುವ ವಿಚಾರಿಸಿದೆವು.

ಈ ಮಧ್ಯೆ ಸಿಂಗಾಪುರ ಶಾಲೆಗಳ ಬಗ್ಗೆ ಹೇಳೋದಾದ್ರೆ, ಇಲ್ಲೂ ಎರಡು ಬಗೆಯ ಶಾಲೆಗಳು. ಒಂದು ಸರ್ಕಾರ ನಡೆಸುವ ಶಾಲೆಗಳು. ಇನ್ನೊಂದು ಅಂತಾರಾಷ್ಟ್ರೀಯ ಶಾಲೆಗಳು. ಮತ್ತೆ ಮೊದಲೇ ತಿಳಿಸಿದ ಮಾತನ್ನ ನೆನಪು ಮಾಡೋದಾದ್ರೆ… ಮೊದಲ ಎರಡು ವರ್ಗಕ್ಕೆ ಈ ಸ್ಥಳೀಯ ಶಾಲೆಗಳು ತುಂಬಾ ಸುಲಭವಾಗಿ ದೊರಕಿ ಬಿಡ್ತಾವೆ. ಆದರೆ ಮೂರನೆಯ ವರ್ಗದವರು ಪಡುವ ಪಾಡು ಅಷ್ಟಿಷ್ಟಲ್ಲ. ಸಿಕ್ಕಿದ್ರೆ ಲಕ್.

ಸರ್ಕಾರಿ ಶಾಲೆ ಅಂದ್ರೆ ನಮ್ಮಲ್ಲಿ ಒಂದು ಹೆಜ್ಜೆ ಹಿಂದೆ ಹೋಗೋರೆ ಹೆಚ್ಚು.ಆದ್ರೆ ಇಲ್ಲಿ ಹಾಗಲ್ಲ. ಲಂಚ, ದೊಡ್ಡ ವ್ಯಕ್ತಿಗಳ ಪ್ರಭಾವಗಳು ಯಾವುದೂ ನಡೆಯದ ಈ ದೇಶದಲ್ಲಿ ಸರ್ಕಾರ ಹೇಳಿದ್ದೇ ಫೈನಲ್. ಇಲ್ಲಿನ ಲೋಕಲ್ ಸ್ಕೂಲ್ ಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್. ಎಜುಕೇಶನ್ ಕ್ವಾಲಿಟಿ ಅಷ್ಟು ಚೆನ್ನಾಗಿದೆ. ಇಲ್ಲಿನ ಸರ್ಕಾರಿ ಶಾಲೆಗಳು ಬೆಳಿಗ್ಗೆ 7.30 ಗೆ ಆರಂಭವಾಗುತ್ತೆ. ಅಪರಾಹ್ನ 1 ಗಂಟೆವರೆಗೆ. ಇಲ್ಲಿನ ವಿದ್ಯಾಭ್ಯಾಸ ಹೇಗಂದ್ರೆ, ಪುಸ್ತಕದಲ್ಲಿ ಇರೋ ವಿಷಯಗಳು, ಶಾಲೆಯಲ್ಲಿ ನಡೆಯುವ ಪಾಠಗಳು ಮಕ್ಕಳಿಗೆ ಮಾದರಿ ಅಷ್ಟೇ. ಪರೀಕ್ಷೆಗಳಲ್ಲಿ ಪುಸ್ತಕದಲ್ಲಿರೋದು ಯಾವುದೂ ಬರೋದಿಲ್ಲ. ಅದೇ ಮಾದರಿಯಲ್ಲಿ, ಆದರೆ ಪ್ರಶ್ನೆಗಳು ಯಾವ ರೀತಿಯಲ್ಲೂ ಬರಬಹುದು. ಅದಕ್ಕೆ ಉತ್ತರಿಸಲು ಮಕ್ಕಳು ರೆಡಿಯಾಗಿರಬೇಕು. ಬೈಹಾರ್ಟ್ ಮಾಡೋ ಯಾವ ವ್ಯವಸ್ಥೆಯೂ ಇಲ್ಲಿಲ್ಲ. ಹೀಗಾಗಿ ಟ್ಯೂಷನ್ ಅನ್ನೋ ಭೂತ ಇಲ್ಲಿ ಎಲ್ಲೆಡೆ ಹಬ್ಬಿದೆ. ದೊಡ್ಡ ಮಟ್ಟದ ವ್ಯಾಪಾರ ಕೂಡ. ೧ ನೇ ಕ್ಲಾಸ್ ನಿಂದಲೇ ಮಕ್ಕಳು ಇಲ್ಲಿ ಟ್ಯೂಷನ್ ಹೋಗ್ತಾರೆ. ೩ ನೇ ಕ್ಲಾಸ್ ಬರೋ ಹೊತ್ತಿಗೆ ದಡ್ಡರು, ಬುದ್ಧಿವಂತರು , ಸಾಧಾರಣ ಕಲಿಯೋ ಮಕ್ಕಳು ಎಂಬ ರೀತಿ ಗಳಲ್ಲಿ ವರ್ಗೀಕರಣ ಮಾಡಿ ಬಿಡ್ತಾರೆ. ಒತ್ತಡದ ವಾತಾವರಣ. ಹಾಗೆ ನೋಡಿದ್ರೆ ಅಂತಾರಾಷ್ಟ್ರೀಯ ಕೆಲ ಶಾಲೆಗಳಲ್ಲಿ ಅದೆಷ್ಟೋ ತರಗತಿಗಳವರೆಗೆ ಪರೀಕ್ಷೆಗಳೇ ಇರೋದಿಲ್ಲ.

ಮತ್ತೆ ನನ್ನ ಕಥೆ ಹೇಳ್ತಾ…ಕೊನೆಗೆ ನಮಗೂ ಟ್ಯಾಕ್ಸೀ ಸಿಕ್ತು. ಮಾತಾಡ್ತಾ ಮಾತಾಡ್ತಾ ನಮ್ಮ ಗುಂಗಿನಲ್ಲೇ ಮುಳುಗಿದ್ದೆವು. ಇನ್ನೂ ಯಾಕೆ ಮನೆ ತಲುಪಿಲ್ಲ ಅಂತ ನಮ್ಮಲ್ಲಿ ಯಾರಿಗೋ ತಲೆಗೆ ಹೊಳೆದಾಗ, ೧೦ ನಿಮಿಷ
ಕಳೆದು ಅದೆಷ್ಟೋ ಸಮಯ ದಾಟಿತ್ತು. ಸುತ್ತಮುತ್ತ ನೋಡಿದಾಗ ನಾವಿದ್ದ ಕಾರು, ಬೇರೆ ಕಡೆಯತ್ತ ಮುಖ ಮಾಡಿ ಚಲಿಸ್ತಾ ಇರೋದು ಗಮನಕ್ಕೆ ಬಂತು. ಒಂದೇ ಸಮಯಕ್ಕೆ ಅಚ್ಚರಿ ಭಯ, ಸಿಟ್ಟು ಬಂತಾದ್ರೂ, ಬೆಂಗಳೂರಿನಲ್ಲಿಸುತ್ತಿ ಬಳಸಿ ಹೋಗೋ ಆಟೋ ಡ್ರೈವರ್ ಗಳಿಗೆ ಬೈಯ್ಯೋ ಹಾಗೇ, ಈ ದೇಶದಲ್ಲಿ ನಡಿಯೋದಿಲ್ಲ. ಅವರ ತಪ್ಪಿರಲಿ, ನಮ್ಮದಿರಲಿ ಶಾಂತಾ ಚಿತ್ತದಿಂದ ವ್ಯವಹರಿಸಬೇಕು. ಇನ್ನೂ ದಾರಿ ಮಧ್ಯದಲ್ಲೇ ಇಳಿಸಿ ಹೇಳೋ ಹಾಗೇನೂ ಇಲ್ಲ. ಕಾನೂನು ಅಡ್ಡ ಬರುತ್ತೆ.

ಸರಿ ನಮ್ಮ ಭಾಷೆಯಲ್ಲೇ ನಾವು ಚರ್ಚೆ ಮಾಡಿ ಡ್ರೈವರ್ ಗೆ ಕೇಳೆ ಬಿಟ್ಟೆವು. ‘ಎಲ್ಲಿ ಹೋಗ್ತಾ ಇದ್ದೀರಿ.. ಇದು ನಮ್ಮ ದಾರಿ ಅಲ್ಲ’ ಅಂದೆವು. ಅದಕ್ಕೆ ಅವನು..’ ನೋ.. ಲಾ.. ಸೇಮ್ ಪ್ಲೇಸ್ ಐ ಆಮ್ ಗೊಯಿಂಗ್’ {ಚೀನೀಯರು ತಮ್ಮ ಇಂಗೀಷ್ ಪದಗಳ ಜೊತೆ ‘ಲಾ’ ಬಳಕೆ ಹೆಚ್ಚು ಪ್ರಯೋಗಿಸ್ತಾರೆ}. ಯಾವುದಕ್ಕೂ ಬುಕ್ ಮಾಡಿದ ವಿಳಾಸವನ್ನು ನೋಡಿದಾಗ ‘ಕಾರ್ಪೊರೇಶನ್ ರೋಡ್’ ಟೈಪ್ ಆಗುವ ಬದಲು ‘ಕಾರ್ನೇಶನ್ ರೋಡ್’ ಸೆಲೆಕ್ಟ್ ಆಗಿತ್ತು..!!! ಸಿಂಗಾಪುರದಲ್ಲಿ ಹಂಗೂ ಒಂದು ಹೆಸರಿನ ರೋಡ್ ಇದೆ ಅನ್ನೋದು ಅವತ್ತೇ ಗೊತ್ತಾಗಿದ್ದು ನಮಗೆ. ಮುಂದೆನೂ..! ಡ್ರೈವರ್ ಹತ್ರ ಕ್ಷಮೆ ಕೇಳಿ.. ಅಲ್ಲೇ ಮುಂದೆ ಸಿಕ್ಕಿದ ಬಸ್ ಸ್ಟಾಪ್ ನಲ್ಲಿ ಇಳಿದು ಬಸ್ ಹತ್ತಿ ಬಂದೆವು. ಮುಂಜಾಗ್ರತ ಕ್ರಮವಾಗಿ ಬಸ್ ಡ್ರೈವರ್ ನಲ್ಲೂ ವಿಚಾರಿಸಿ ಬಸ್ ಪ್ರಯಾಣ ಮಾಡಿದೆವು. ೧೦ ನಿಮಿಷದ ದಾರಿ ಕೊನೆಗೆ ೨ ಗಂಟೆಯ ಪ್ರವಾಸದ ಮೂಲಕ ಕೊನೆಗೊಂಡಿತು.

2 comments

  1. ಕಥನ ಶೈಲಿ ಓದಿಸಿಕೊಂಡು ಹೋಗುವ ಓದುಗನಿಗೆ ಮುದ ನೀಡುವಂತೆ ಒಬ್ಬ ಸಾಹಿತಿ ಮತ್ತು ಜರ್ನಲ್ ಲೇಖಕಿ ವಿಭಿನ್ನತೆ ಇರುವುದು ನನ್ನ ಓದಿಗೆ ದಕ್ಕಿದ್ದು ಆದರೆ ತುಂಬ ಚೆನ್ನಾಗಿ ಅನುಭವಹಂಚಿಕೊಂಡಿದ್ದಿರಿ

  2. ಸಿಂಗಾಪುರ್ ಮುಖವನ್ನು ಪರಿಚಯಿಸಿದಿರಿ.ಧನ್ಯವಿದಗಳು

Leave a Reply