ಆದರ್ಶ ಕಲಿಸಿದ ಅಪ್ಪ… ಕಾಡನಕುಪ್ಪೆ

ನೇಸರ ಕಾಡನಕುಪ್ಪೆ

ಸುಮಾರು 25 ವರ್ಷಗಳ ಹಿಂದಿನ ಕಾಲವದು. ಆಗಿನ್ನೂ ನಾನು ನಾಲ್ಕೈದು ವರ್ಷದ ಬಾಲಕನಾಗಿದ್ದೆ.

ಮೈಸೂರಿನಲ್ಲಿ ನಿಜವಾದ ಪ್ರಗತಿಪರರು ಇದ್ದ ಕಾಲವದು. ಆಗ ಹೆಚ್ಚಾಗಿ ಕೋಮುಗಲಭೆಗಳು ದೇಶದಾದ್ಯಂತ ನಡೆಯುತ್ತಿವು. ಇದಕ್ಕೆ ಪೂರಕ ಎಂಬಂತೆ ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ದತ್ತ ಜಯಂತಿಯಂತಹ ಕಾರ್ಯಕ್ರಮಗಳು ಹಿಂದೂ – ಮುಸ್ಲಿಂ ಸಾಮರಸ್ಯವನ್ನು ಹಾಳುಗೆಡವುತ್ತಿತ್ತು. ಇದರ ವಿರುದ್ಧ ಯಾವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಇತ್ಯಾದಿ ಇತ್ಯಾದಿ ಚರ್ಚೆಗಳು ಮೈಸೂರಿನ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ಬಿಸಿ ಬಿಸಿಯಾಗಿ ನಡೆಯುತ್ತಿದ್ದವು. ಆಗ ವಿಚಾರವಾದಿಗಳಾದ ನನ್ನ ತಂದೆ, ಪ.ಮಲ್ಲೇಶ್, ಕೆ.ರಾಮದಾಸ್, ಕುಕ್ಕರಹಳ್ಳಿಯ ಕೆಲವು ಯುವಕರು ಆಡುತ್ತಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುನುಗುತ್ತಿವೆ…

ನಾನು ಮತ್ತು ನನ್ನ ಅಕ್ಕ ಒಂದು ಸಾಧಾರಣ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರು. ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬುದು ನನ್ನ ತಂದೆ, ತಾಯಿಯಿಬ್ಬರ ಆಶಯವೂ ಆಗಿತ್ತು. ಮಾನಸ ಗಂಗೋತ್ರಿ ಶಾಲೆಗೆ ನಿತ್ಯ ನಡೆದು ಹೋಗುತ್ತಿದ್ದ ದಿನಗಳವು. ಬಸ್‌ನಲ್ಲಿ ಹೋಗುತ್ತಿದ್ದದ್ದೂ ಉಂಟು. ಶಾಲೆ ಮುಗಿಸಿ ಮನೆಗೆ ನಡೆದುಕೊಂಡು ಕುಕ್ಕರಹಳ್ಳಿಯಲ್ಲಿದ್ದ ನಮ್ಮ ಬಾಡಿಗೆ ಮನೆಗೆ ಬರುವ ಪ್ರತಿ ದಿನವೂ, ನಾನು ಮತ್ತು ನನ್ನ ಅಕ್ಕ ಅನೇಕ ಹೊಸ ವಿಚಾರಗಳನ್ನು ಕಲಿತುಕೊಂಡಿದ್ದೇವೆ ಎಂದು ನಾನು ಬಲವಾಗಿ ನಂಬಿದ್ದೇನೆ.

ನಮ್ಮ ತಂದೆ ಪ್ರತಿಯೊಂದರಲ್ಲೂ ಏನನ್ನಾದರೂ ಕಲಿತುಕೊಳ್ಳಿ, ಎಲ್ಲರನ್ನೂ ಗೌರವಿಸಿ ಎಂದು ಹೇಳಿಕೊಟ್ಟಿದ್ದರು. ದಲಿತರ ಕೇರಿಯಾದ ಕುಕ್ಕರಹಳ್ಳಿಯ ಗಲ್ಲಿ-ಗಲ್ಲಿಗಳಲ್ಲಿ ಹೆಜ್ಜೆ ಹಾಕುತ್ತ ಅವರೊಂದಿಗೆ ಬೆರೆಯುತ್ತ ನಾವು ದಲಿತರ ಬಗ್ಗೆ ಕೇವಲ ಕನಿಕರ ತೋರಿಸಿ ಮಾತನಾಡುವುದು ಸಮಾಜವಾದವಲ್ಲ; ಅವರೊಂದಿಗೆ ಬಾಳುವುದು ನಿಜವಾದ ಸಮಾಜವಾದ ಎಂಬುದನ್ನು ನಮ್ಮ ತಂದೆಯವರಿಂದಲೇ ಕಲಿತುಕೊಂಡೆವು.

ಶಾಲೆಯಿಂದ ಮನೆಗೆ ಬರುವ ಹಾದಿಯಲ್ಲಿ ಕುಕ್ಕರಹಳ್ಳಿಗೆ ಹೊಂದಿಕೊಂಡಂತೆ ಶೇಖ್ ಸಾಹೇಬ್ ಎಂಬವರ ಮನೆಯಿತ್ತು. ಅವರು 2 ಜೊತೆ ಗೂಸ್ ಪಕ್ಷಿಗಳನ್ನು ಸಾಕಿಕೊಂಡಿದ್ದರು. ನಮಗಿಂತಲೂ ದೊಡ್ಡದಾಗಿದ್ದ (ನಾವು ಚಿಕ್ಕ ಮಕ್ಕಳು, ಹಾಗಾಗಿ) ಹಾರಲು ಬಾರದ ಆ ಪಕ್ಷಿಗಳನ್ನು ನೋಡುವುದು, ತಲೆ ಸವರುವುದು ಇವೆಲ್ಲವೂ ನಮಗೆ ರೋಮಾಂಚನವನ್ನು ಉಂಟು ಮಾಡುತ್ತಿತ್ತು. ಕೆಲವೊಮ್ಮೆ ಈ ಪಕ್ಷಿಗಳು, ಈ ಮಕ್ಕಳು ತಮಗಿಂತಲೂ ಚಿಕ್ಕದಾಗಿದ್ದಾರೆ ಎಂಬ ಕಾರಣಕ್ಕೋ ಏನೋ ನಮ್ಮನ್ನು ಅಟ್ಟಾಡಿಸಿಕೊಂಡು, ಕುಕ್ಕಿ ಕಚ್ಚಿಬಿಡುತ್ತಿದ್ದವು. ಆಗ ಅಳುತ್ತ ಮನೆಗೆ ಹೋಗಿ ಅಪ್ಪ ಅಮ್ಮನಿಂದ ಸಂತೈಸಿಕೊಳ್ಳುವುದು ಹೆಚ್ಚೂ ಕಡಿಮೆ ಆಗಾಗ ಆಗುತ್ತಿತ್ತು. ಆಗ ಅಪ್ಪ ಆ ಪಕ್ಷಿಗಳ ಬಗ್ಗೆ ಮಾಹಿತಿ ನೀಡುವುದು, ನಾವು ನಡೆದುಕೊಳ್ಳಬೇಕಾದ ರೀತಿಗಳ ಬಗ್ಗೆ ಪಾಠ ಹೇಳುತ್ತಿದ್ದರು.

ಕುಕ್ಕರಹಳ್ಳಿಯ ಮನೆಯಲ್ಲಿ ಒಂದು ದಿನ ನಾನು ತುಂಟಾಟ ಮಾಡುತ್ತ, ನನ್ನ ಎಡಗೈ ಹಸ್ತದ ಮೇಲೆ ಬಲವಾದ ಗಾಯವೊಂದನ್ನು ಮಾಡಿಕೊಂಡೆ. ಮಾಂಸ ಹೊರಬರುವಂತೆ ಬಲವಾಗಿ ಹಸ್ತ ಸೀಳಿಹೋಗಿತ್ತು. ಅಪ್ಪ ಆಗಿನ್ನೂ ಕಾಲೇಜಿನಿಂದ ಮನೆಗೆ ಬಂದಿರಲಿಲ್ಲ. ನಾನು ಮತ್ತು ನನ್ನ ಅಮ್ಮ ಕಾಮಾಕ್ಷಿ ಆಸ್ಪತ್ರೆಗೆ ನಡೆದು ಹೋದೆವು. ಅಮ್ಮ ಅಪ್ಪನಿಗೆ ಕಾಲೇಜಿಗೆ ಕರೆ ಮಾಡಿ ತಿಳಿಸಿದ್ದರು. ಅಪ್ಪ ಆಗಲೇ ಅಲ್ಲಿಗೆ ಬಂದಿದ್ದರು. ನನ್ನ ಹಸ್ತದ ಮೇಲೆ 10 ಹೊಲಿಗೆ ಹಾಕಬೇಕು ಎಂದು ವೈದ್ಯರು ಹೇಳಿದರು. ನನಗೋ ತುಂಬಾ ಭಯ. ಹಸ್ತವನ್ನು ಹೊಲಿಯುತ್ತಾರೆ ಎಂದರೆ ಗತಿಯೇನು?

ಆದರೆ, ಅಪ್ಪ ನನಗೆ ‘ಮಗೂ ಹೆದರಬೇಡ’ ಎನ್ನಲಿಲ್ಲ. ಬದಲಿಗೆ, ‘ಅವನಿಗೆ ತುಂಬಾ ಧೈರ್ಯ. ನೋಡುತ್ತಿರಿ ಹೇಗೆ ವೈದ್ಯರು ಹೊಲಿಯುವಾಗ ಧೈರ್ಯವಾಗಿ ಇರುತ್ತಾನೆ’ ಎಂದು ಬಿಟ್ಟರು! ಅವರು ಹಾಗೆ ಹೇಳಿದ್ದು, ನನ್ನಲ್ಲಿ ಎಷ್ಟು ಪರಿಣಾಮ ಬೀರಿತು ಎಂದರೆ, ನನಗೆ ಹೊಲಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಮುಗಿದ ಹಾಗಾಯಿತು. ನೋವಾಯಿತಾದರೂ, ಅದನ್ನು ತಡೆದುಕೊಳ್ಳಬೇಕು ಎಂದು ಅವರು ಆಗ ಹೇಳಿಕೊಟ್ಟರು. ಅವರ ಅಂದಿನ ಮಾತು ನನಗೆ ಈಗ ಕಿವಿಯಲ್ಲಿ ಗುನುಗುಟ್ಟುತ್ತಿದೆ.

ನನ್ನ ತಂದೆಯವರು ನಂತರದ ವರ್ಷಗಳಲ್ಲಿ, ಆರೋಗ್ಯದ ವಿಚಾರವಾಗಿ ಬಹಳಾ ನೋವನ್ನು ಅನುಭವಿಸಿದರು. ಅವರು ಎಂದೂ ಧೈರ್ಯ ಕೆಟ್ಟಿದ್ದನ್ನು ನಾನು ನೋಡಿಲ್ಲ. ಅವರಿಗೆ ಕ್ಯಾನ್ಸರ್ ಆದ ದಿನದಿಂದ, ಈಗ ತಾನೇ ‘ಮಯಸ್ತೇನಿಯಾ ಗ್ರೇವಿಸ್‌’ನಿಂದಾಗಿ (ನರ ಸಂಬಂಧಿ ಸ್ನಾಯು ದೌರ್ಬಲ್ಯ) ಉಸಿರಾಟ ನಿಂತು ಹೋಗಿದ್ದಾಗಲೂ, ಅದೇ ರೀತಿ ಧೈರ್ಯವಾಗಿ ಎಲ್ಲವನ್ನೂ ಗೆದ್ದು ಬಂದರು. ಆಗೆಲ್ಲಾ ನನಗೆ ನೆನಪಾಗುತ್ತಿದ್ದದ್ದು, ಕಾಮಾಕ್ಷಿ ಆಸ್ಪತ್ರೆಯಲ್ಲಿ ಅವರು ನನಗೆ ಹೇಳಿದ್ದ ಮಾತುಗಳು. ಅವರ ಆರೋಗ್ಯ ಹಾಳಾದ ದಿನಗಳ ಬಗ್ಗೆ ಮುಂದೆಯೂ ಹೇಳುವುದು ಸಾಕಷ್ಟಿದೆ.

ನನ್ನ ಬಾಲ್ಯದ ದಿನಗಳಿಗೆ ಹೋಗುವುದಾದರೆ, ಗಾಂಧಿ ಭವನ, ಕುಕ್ಕರಹಳ್ಳಿ, ಸರಸ್ವತಿಪುರ, ಪ್ರಗತಿಪರರಾದ ಬಿ.ಎನ್.ಶ್ರೀರಾಮ, ಪ.ಮಲ್ಲೇಶ್, ಸಾಹಿತಿ ರಾಮೇಗೌಡ (ರಾಗೌ), ಜಿ.ಎಚ್.ನಾಯಕ- ಇವೆರನ್ನೆಲ್ಲ ನನ್ನ ತಂದೆಯಿಂದ ಪ್ರತ್ಯೇಕಿಸಲು ಸಾಧ್ಯವೇ ಇಲ್ಲ. ಇವೆಲ್ಲವನ್ನೂ ಇಲ್ಲಿ ಹೇಳಲೇಬೇಕು.

ನನ್ನ ತಂದೆ ತುಂಬು ಕುಟುಂಬ ಜೀವಿ. ಕಾಲೇಜು ಮುಗಿಸಿಕೊಂಡು ಥಟ್ಟನೆ ಮನೆಗೆ ಹಾಜರಾದವರೂ ಎಲ್ಲೂ ಹೋಗುತ್ತಲೇ ಇರಲಿಲ್ಲ. ಅಮ್ಮ ಮತ್ತು ನಮ್ಮ ಜೊತೆ ಕಾಲ ಕಳೆಯುತ್ತ ಕುಕ್ಕರಹಳ್ಳಿ, ಸರಸ್ವತಿಪುರದ ರಸ್ತೆಗಳಲ್ಲಿ ವಾಕಿಂಗ್ ಮಾಡುತ್ತ, ಪ್ರತಿನಿತ್ಯವೂ ಹೊಸ ಹೊಸ ವಿಚಾರಗಳನ್ನು ಹೇಳಿಕೊಡುತ್ತಲೇ ಕಾಲ ಕಳೆಯುತ್ತಿದ್ದರು. ನಮ್ಮ ಮನೆಯ ಎದುರಿನ ರಸ್ತೆ ನೇರವಾಗಿ ಸರಸ್ವತಿಪುರಂ ಈಜುಕೊಳದ ಮೂಲಕ, ಅಗ್ನಿಶಾಮಕ ದಳದವರೆಗೆ ಹೋಗುತ್ತಿತ್ತು. ಅಲ್ಲಿಂದ ಬಳಸಿಕೊಂಡು ಮತ್ತೆ ನಾವು ನಾಲ್ಕು ಮಂದಿ ವಾಪಸ್ ಮನೆಗೆ ಬರುತ್ತಿದ್ದೆವು.

ಆಗ ಡಾ.ರಾಜ್‌ಕುಮಾರ್ ಅವರಿಂದ ಹಿಡಿದು, ಕುವೆಂಪುವರೆಗೆ, ಕನ್ನಡ- ಕರ್ನಾಟಕ – ನಮ್ಮ ನಾಡಿನ ಬಗ್ಗೆ ಅಪಾರವಾದ ಅಭಿಮಾನವನ್ನು ನಮಗೆ ತುಂಬಿದರು. ನನ್ನ ತಂದೆ ಪಕ್ಕಾ ಕನ್ನಡಾಭಿಮಾನಿ. ಅದರಲ್ಲೂ ಕುವೆಂಪು ಹಾಗೂ ಡಾ.ರಾಜ್‌ಕುಮಾರ್ ಅವರನ್ನು ಮನಸಾರೆ ಪ್ರೀತಿಸುತ್ತಾರೆ. ನಾನು ಮತ್ತು ನನ್ನ ಅಕ್ಕ ಅಪ್ಪಟ್ಟ ಕನ್ನಡಾಭಿಮಾನ ಬೆಳೆಸಿಕೊಳ್ಳಲು ಅವರೇ ಮುಖ್ಯ ಕಾರಣ. ನಾನು ನಮ್ಮ ನಮ್ಮ ಅನುಭವ, ಓದು, ಸಂಗಗಳಿಂದ ನಮ್ಮ ಕನ್ನಡಾಭಿಮಾನವನ್ನು ಮತ್ತಷ್ಟು ಹೆಚ್ಚಿಸಿಕೊಂಡೆವೇ ಆದರೂ, ಅದಕ್ಕೆ ಮೂಲ ಸ್ಫೂರ್ತಿಯಂತೂ ನನ್ನ ತಂದೆಯವರೇ.

ಆದರೆ ಅವರೆಂದೂ ಇಂಗ್ಲಿಷ್ ವಿರೋಧಿಯಲ್ಲ. ಅವರ ಬಳಿ ಇದ್ದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಗಳು, ಕೃತಿಗಳೇ ಅದಕ್ಕೆ ಸಾಕ್ಷಿ. ಸರ್ಕುಲೇಟಿಂಗ್ ಲೈಬ್ರರಿಯಲ್ಲಿ ಇಂಗ್ಲಿಷ್ ಪುಸ್ತಕಗಳನ್ನು ಎರವಲು ಪಡೆದು ಹಗಲು- ರಾತ್ರಿಗಳನ್ನು ಲೆಕ್ಕಿಸದೇ ಓದಿ ಮುಗಿಸುತ್ತಿದ್ದರು. ಬಳಿಕ ನಮಗೆ ಅವುಗಳ ಕತೆ ಹೇಳುತ್ತಿದ್ದರು. ನಾನೂ ನಂತರದಲ್ಲಿ ಇಂಗ್ಲಿಷ್ ಕಾದಂಬರಿಗಳ ಅಭಿಮಾನಿಯಾಗಲು ಅವರೇ ಕಾರಣ. ಆದರೆ, ಅವರು ಕನ್ನಡದಲ್ಲೇ ನಮ್ಮ ವೃತ್ತಿ ಇರಬೇಕು ಎಂದು ಬಲವಾಗಿ ನಂಬಿಕೆ ಇಟ್ಟುಕೊಂಡಿದ್ದಾರೆ.

ಅದಕ್ಕೇ ಏನೋ, ನಾನು ಎಸ್ಸೆಸ್ಸೆಲ್ಸಿ ನಂತರ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದೆನಾದರೂ, ಪತ್ರಿಕೋದ್ಯಮವನ್ನು ನನ್ನ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಮಾಡಿಕೊಂಡ ಬಳಿಕ, ಕನ್ನಡ ಪತ್ರಿಕೋದ್ಯಮವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದೆ. ಯಾವ ಇಂಗ್ಲಿಷ್ ಪತ್ರಕರ್ತರಿಗಿಂತಲೂ ನಾನೇನು ಕಡಿಮೆಯಿಲ್ಲ ಎಂಬ ಹೆಮ್ಮೆ ನನಗಂತೂ ಇದೆ. ನನ್ನ ಇಂಗ್ಲಿಷ್ ಸಹ ಉತ್ತಮವಾಗಿದೆ. ನನ್ನ ಪತ್ರಿಕೋದ್ಯಮದ ಮೊದಲ ಗುರುವೂ ನನಗೆ ನನ್ನ ತಂದೆಯವರೇ.

ನನ್ನ ತಂದೆ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾಗಲೇ, ಪ್ರಜಾವಾಣಿ, ಕನ್ನಡಪ್ರಭ, ಸುಧಾ, ಮಯೂರ ಮೊದಲಾದ ಪತ್ರಿಕೆಗಳಲ್ಲಿ ಸಾಹಿತ್ಯ ವಿಮರ್ಶೆ ಲೇಖನಗಳನ್ನು ಪ್ರಕಟಿಸಿದ್ದರು. ಅವು ಈಗಲೂ ನಮ್ಮ ಬಳಿ ಇವೆ. ಅವುಗಳನ್ನು ಒಂದು ಕೃತಿಯಾಗಿ ಹೊರತರುವ ಆಸೆ ನಮಗಿದೆ. ಅಂತೆಯೇ ನನ್ನ ತಂದೆ- ತಾಯಿಯ ಪ್ರೇಮಪತ್ರಗಳು. ಅವು ಅರ್ಥವಾಗುತ್ತಿದ್ದವೋ ಇಲ್ಲವೋ ಗೊತ್ತಿಲ್ಲ, ಚಿಕ್ಕಂದಿನಲ್ಲೇ ಅವನ್ನು ಕುತೂಹಲದಿಂದ ಓದುತ್ತಿದ್ದೆವು. ಮಕ್ಕಳು ಅವನ್ನೆಲ್ಲಾ ಓದಬಾರದು ಎಂದು ಅಪ್ಪ ಎಂದೂ ಹೇಳಿದವರಲ್ಲ. ಅವನ್ನು ಪ್ರಕಟಿಸಬೇಕೆಂಬ ನಮ್ಮ ಆಸೆ ಈಡೇರಬೇಕಿದೆಯಷ್ಟೇ.

ನಾನು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಮಾಡುವಾಗ, ನನ್ನ ತಂದೆಯವರೇ ನನಗೆ ಬರೆಯಲು ಪ್ರೇರೇಪಿಸಿದ್ದು. ಪತ್ರಿಕೋದ್ಯಮವನ್ನು ಕೇವಲ ಪುಸ್ತಕ ಓದಿ ಕಲಿಯಲಾಗದು; ಬರೆಯಬೇಕು, ಬರೆದು ನಮ್ಮ ಅಭಿಪ್ರಾಯ ಹೊರಹಾಕಬೇಕು. ಆಗಲೇ ನಮ್ಮ ಜೀವಂತಿಕೆ, ಅಭಿಪ್ರಾಯಗಳು ಹೊರಬರಲು ಸಾಧ್ಯ ಎಂದು ಹೇಳಿಕೊಟ್ಟರು. ಆಗ ನಾನು ದ್ವಿತೀಯ ಪದವಿಯಲ್ಲಿದ್ದೆ. ಸ್ಥಳೀಯ ಪತ್ರಿಕೆಗಳಿಗೆ ‘ಓದುಗರ ಪತ್ರ’ ಬರೆಯಲು ಆರಂಭಿಸಿದೆ. ಪತ್ರ ಬರೆದು, ಅವು ಅಚ್ಚಾಗುವುದೋ ಇಲ್ಲವೋ ಎಂದು ಕಾದು ನೋಡುವುದಿದೆಯಲ್ಲ, ಅದಕ್ಕಿಂತಲೂ ಒಳ್ಳೆಯ ಅನುಭವ ಮತ್ತೊಂದಿಲ್ಲ. ಅದರಲ್ಲೂ ಮೊದಲ ಲೇಖನಗಳು, ಅದರಲ್ಲಿ ನಮ್ಮ ಹೆಸರು ಬಂದಿದ್ದರಂತೂ ಸಂತೋಷಕ್ಕೆ ಪಾರವೇ ಇಲ್ಲ. ಪತ್ರಿಕೋದ್ಯಮದ ನನ್ನ 12ನೇ ವರ್ಷದ ವೃತ್ತಿಯಲ್ಲಿ ಈಗ ಅನೇಕ ಲೇಖನಗಳು ಅಚ್ಚಾಗಿ ಹೋಗಿವೆ. ಆದರೆ, ಆ ಮೊದಲ ಲೇಖನಗಳ ಬೆಲೆಯೇ ಬೇರೆ. ಬಹುಶಃ ಆಗ ಕನ್ನಡದಲ್ಲೇ ಓದುಗರ ಪತ್ರ, ನಂತರ, ಲೇಖನಗಳನ್ನು ಬರೆದುದಕ್ಕೇ ಏನೋ, ನಾನು ಕನ್ನಡ ಪತ್ರಿಕೋದ್ಯಮದಲ್ಲೇ ಉಳಿದುಕೊಂಡೆ, ಮುಂದೆಯೂ ಉಳಿದುಕೊಳ್ಳುತ್ತೇನೆ ಎಂದು ನಿರ್ಧರಿಸಲು ಕಾರಣವಾಯಿತು ಅನ್ನಿಸುತ್ತದೆ. ಮುಂದೆ ವೃತ್ತಿ ಕ್ಷೇತ್ರದಲ್ಲಿ ನನಗೆ ಅನೇಕ ಗುರುಗಳು ಸಿಕ್ಕರಾದರೂ, ಅಪ್ಪನ ವಿದ್ವತ್, ಅವರ ಪ್ರಚಲಿತ ವಿದ್ಯಮಾನಗಳ ಜ್ಞಾನ, ಅವುಗಳ ವಿಮರ್ಶೆ ನನ್ನನ್ನು ಸಾಕಷ್ಟು ಬೆಳೆಸಿವೆ, ಮಾಗಿಸಿವೆ ಎಂದು ನಂಬಿದ್ದೇನೆ. ಈಗಲೂ ನನಗೆ ಅವರ ಮಾರ್ಗದರ್ಶನ ಅಮೂಲ್ಯವಾಗಿವೆ.

ಬಾಲ್ಯದ ಕೆಲವು ದಿನಗಳನ್ನು ಮತ್ತೆ ಮೆಲುಕು ಹಾಕಿದರೆ, ನನ್ನನ್ನು ಮೈಸೂರಿನ ಗಾಂಧಿ ಭವನಕ್ಕೆ ಆಗಾಗ ಅಪ್ಪ ಕರೆದೊಯ್ಯುತ್ತಿದ್ದರು. ಗಾಂಧಿ ಭವನದಲ್ಲಿ ಆಗ ನಡೆಯುತ್ತಿದ್ದ ಚರ್ಚೆಗಳು ನನಗೆ ಸಂಪೂರ್ಣವಾಗಿ ಅರ್ಥವಾಗಿವೆ ಎಂದು ನನಗೇನು ಅನ್ನಿಸಿಲ್ಲ. ಅಷ್ಟೆಲ್ಲಾ ದೊಡ್ಡ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವಷ್ಟು ವಯಸ್ಸೂ ಪ್ರೌಢಿಮೆಯೂ ನನಗೆ ಆಗ ಇರಲಿಲ್ಲ. ಆದರೂ ಮೌನವಾಗೇ ಕುಳಿತುಕೊಂಡು ಅವನ್ನೆಲ್ಲಾ ಕೇಳುತ್ತಿದ್ದೆ. ಅಲ್ಲಿ ಸೇರುತ್ತಿದ್ದವರೂ ಅಷ್ಟೇ. ಸಮಾಜವಾದದ ಬಗ್ಗೆಯೇ ಚರ್ಚಿಸುತ್ತಿದ್ದರು. ಕೆಲವೊಮ್ಮೆ ಅವರ ಚರ್ಚೆಗಳು ಎಷ್ಟು ಬಿಸಿ ಬಿಸಿಯಾಗಿರುತ್ತಿದ್ದವು ಎಂದರೆ ಜಗಳವಾಡುವಷ್ಟು, ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿಬಿಡುತ್ತಿದ್ದವು. ಆದರೂ, ಅಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಅನೇಕ ವಿಚಾರಗಳು 100 ಅಡಿ ರಸ್ತೆಯಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿ ಸಾಗುವ ಮೌನ ಮೆರವಣಿಗೆಯಲ್ಲೋ, ಕೆ.ಆರ್.ವೃತ್ತದಲ್ಲಿ ಮಾನವ ಸರಪಳಿಯ ಮೂಲಕವೋ ಪರ್ಯಾವಸಾನವಾಗುತ್ತಿದ್ದವು.

ಕೆಲವು ನಿರ್ಧಾರಗಳು ರಾಜ್ಯಮಟ್ಟದಲ್ಲಿ ಪ್ರತಿಧ್ವನಿಸುತ್ತಿದ್ದವು. ಕೆ.ಆರ್. ವೃತ್ತದಲ್ಲಿ ಪ್ರತಿಭಟನೆ, ಮಾನವ ಸರಪಳಿ ಮಾಡುವುದಂತೂ ಪ್ರಗತಿಪರರ ಜನ್ಮಸಿದ್ಧ ಹಕ್ಕಾಗಿತ್ತು. ಸರ್ಕಾರದ ಜನ ವಿರೋಧಿ, ಸಮಾಜ ವಿರೋಧಿ, ಅಂಧಶ್ರದ್ಧೆಯ ಕಾರ್ಯಕ್ರಮಗಳ ವಿರುದ್ಧ ಪ್ರತಿಭಟನೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ನಡೆದಿವೆ. ಆ ದಿನಗಳೆಲ್ಲಾ ಇಂದು ಇಲ್ಲವೇ ಇಲ್ಲ; ನಿಜವಾದ ಚಳವಳಿ, ಪ್ರತಿಭಟನೆಗಳೇ ನಿಂತು ಹೋಗಿವೆಯಲ್ಲ ಎಂದು ಬೇಸರವಾಗುತ್ತದೆ. ಕೆ.ಆರ್.ವೃತ್ತದ ಈ ಐತಿಹಾಸಿಕ ಪರಂಪರೆ ಗೊತ್ತಿಲ್ಲದ ಇಂದಿನ ಅನೇಕ ಯುವ ಅಧಿಕಾರಿಗಳು ಅಲ್ಲಿ ಪ್ರತಿಭಟನೆ ಮಾಡುವುದನ್ನೇ ನಿಷೇಧಿಸಿದ್ದಾರೆ ಎಂದರೆ ಬದಲಾಗಿರುವ ಪರಿಸ್ಥಿತಿ ತಿಳಿದೀತು! ಅಂದು ನಮ್ಮೊಂದಿಗೆ ಹೋರಾಟದಲ್ಲಿ ಇರುತ್ತಿದ್ದ ಅನೇಕ ಪ್ರಗತಿಪರ ಹೋರಾಟಗಾರರು, ಹಣ, ಅಧಿಕಾರದ ಆಸೆಗೆ ಬಿದ್ದು, ವ್ಯವಸ್ಥೆಯ ಜತೆ ರಾಜಿ ಮಾಡಿಕೊಂಡಿದ್ದಂತೂ ಗಂಟಲು ಬಿಗಿಯಾಗುವಂತೆ ಮಾಡುತ್ತವೆ.

ಈಗ ಕಾಟಾಚಾರಕ್ಕೆ, ಹಣದಾಸೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಟೆಂಟ್ ಹಾಕಿ ಒಂದೆರಡು ಘೋಷಣೆ ಕೂಗಿ ಮನವಿ ಪತ್ರವನ್ನು ಕೊಟ್ಟು ಜಾಗ ಖಾಲಿ ಮಾಡುತ್ತಾರೆ. ಅಂದಿನ ಪ್ರಾಮಾಣಿಕ ಹೋರಾಟಗಾರರು, ಈಗಿನ ಅಸಹ್ಯ ತರುವ ವ್ಯವಸ್ಥೆಗೆ ಬೇಸತ್ತು, ತಮ್ಮ ಪಾಳಿಗೆ ತಾವು ಮನೆಯಲ್ಲಿದ್ದಾರೆ. ಹುಸಿ ಹೋರಾಟಗಾರರು ಪ್ರಚಾರಕ್ಕೆ ಮಾಧ್ಯಮಗಳ ಮುಂದೆ ನಿಂತಿದ್ದಾರೆ. ಈ ಹುಸಿ ಹೋರಾಟಗಾರರಿಗಿಂತ, ಮನೆಯಲ್ಲಿ ಕುಳಿತೇ, ಆದರ್ಶ ಬಿಟ್ಟುಕೊಡದೆ, ಅದನ್ನು ಜೀವನದಲ್ಲಿ ಪಾಲಿಸುವ ಮೂಲಕ ಅನೇಕ ಪ್ರಾಮಾಣಿಕರು ಹೋರಾಟ ಮುಂದುವರಿಸಿದ್ದಾರೆ ಎಂದು ನಾನು ಬಲವಾಗಿ ನಂಬಿದ್ದೇನೆ.

ನನ್ನ ತಂದೆ ಅಪ್ಪಟ ನಾಸ್ತಿಕ. ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ವನ್ನು ನಮಗೆ ಓದಿಸಿ, ಪ್ರಶ್ನಿಸಬೇಕು, ಏನನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು, ಯಾರನ್ನೂ ದ್ವೇಷಿಸಬಾರದು, ಎಲ್ಲರನ್ನೂ ಪ್ರೀತಿಸಬೇಕು, ಆಗಲೇ ನಮ್ಮ ಉದ್ಧಾರ. ಮಾನವ ಪ್ರೀತಿಯೇ ಅತಿ ದೊಡ್ಡ ಬೌದ್ಧಿಕ ಬೆಳವಣಿಗೆ. ಕುವೆಂಪು ದೊಡ್ಡವರಾದದ್ದೂ ಹಾಗೆಯೇ ಎಂದು ಕಲಿಸಿಕೊಟ್ಟರು. ದೇವರೆಂಬುದು ಕೇವಲ ಕಲ್ಪನೆ; ಶ್ರಮ, ದುಡಿಮೆ ಹಾಗೂ ಜ್ಞಾನ ಮಾತ್ರ ಮಾನವನನ್ನು ಬೆಳೆಸುತ್ತದೆ ಎಂದು ಹೇಳಿಕೊಟ್ಟರು. ನಮ್ಮ ಮನೆಯಲ್ಲಿ ದೇವರ ಕೋಣೆಯಾಗಲಿ, ದೇವರ ವಿಗ್ರಹ, ಚಿತ್ರಗಳು, ಪೂಜಾ ಸಾಮಗ್ರಿಗಳಾವುವೂ ಇಲ್ಲ.

ನಾವು 1993ರಲ್ಲಿ ಕುವೆಂಪುನಗರಲ್ಲಿರುವ ಈಗಿನ ಮನೆ ಕಟ್ಟಿಸಿಕೊಂಡು ಹೋದಾಗ, ಮನೆ ನೋಡಲು ಬರುವವರೆಲ್ಲಾ ಮೊದಲು ಕೇಳುತ್ತಿದ್ದದ್ದು ಏನು ಗೊತ್ತೇ?- ‘ನಿಮ್ಮ ಮನೆಯಲ್ಲಿ ದೇವರ ಕೋಣೆಯೇ ಇಲ್ಲವಲ್ಲ! ಇದೆಂತಹ ಮನೆ ಕಟ್ಟಿಸಿದ್ದೀರಿ’ ಎಂದು. ಆಗ ನಮ್ಮ ತಂದೆ ಹಸನ್ಮುಖರಾಗೇ ಹೇಳುತ್ತಿದ್ದರು. ‘ನಾವು ದೇವರನ್ನು ನಂಬುವುದಿಲ್ಲ. ಇನ್ನು ಅದಕ್ಕೇಕೆ ಒಂದು ಕೋಣೆ!’ ಎನ್ನುತ್ತಿದ್ದರು. ಅದರ ಬದಲಿಗೆ ಅಪ್ಪ ಅಡುಗೆ ಮನೆಗೆ ಹೊಂದಿಕೊಂಡಂತೆ ಒಂದು ಪುಟ್ಟ ಸ್ಟೋರ್ ರೂಂ ಕಟ್ಟಿಸಿದರು. ಅಗತ್ಯ ಸಾಮಗ್ರಿಗಳನ್ನು ಇಡಲಾದರೂ ಆ ಪುಟ್ಟ ಜಾಗ ಬಳಕೆಯಾಗಲಿ. ದೇವರ ಕೋಣೆಯಲ್ಲಿ ವಿಗ್ರಹ ಇಟ್ಟು ವ್ಯರ್ಥವಾಗುವುದು ಬೇಡ ಎನ್ನುತ್ತಿದ್ದರು. ಇದನ್ನು ಅಪ್ಪ ನೇರವಾಗಿ ಎಲ್ಲರಿಗೂ ಹೇಳಿದ್ದು ಇಂದಿಗೂ ನನ್ನ ಕಿವಿಯಲ್ಲಿ ಇದೆ.

ಅಪ್ಪನ ಬಗ್ಗೆ ಹೇಳಲೇಬೇಕಾದ ವಿಚಾರಗಳಲ್ಲಿ ಒಂದೆಂದರೆ, ಪ್ರಚಾರದ ಬಗ್ಗೆ, ಪ್ರಶಸ್ತಿಗಳ ಬಗ್ಗೆ ಅವರಿಗಿರುವ ನಿರಾಸಕ್ತಿ. ಅಪ್ಪ ಎಂದಿಗೂ ಯಾರ ಹಿಂದೆಯೂ ಪ್ರತಿಫಲವನ್ನು ಬಯಸಿ ಹೋದವರಲ್ಲ. ಅವರಿಗೆ ಯಾರಿಂದಲೂ ಯಾವ ನಿರೀಕ್ಷೆಯೂ ಇಲ್ಲ. ಅಪ್ಪನಿಗಿಂತಲೂ ಪ್ರತಿಭೆಯಲ್ಲಿ ಬಹಳ ಹಿಂದಿರುವ ಅನೇಕರು ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳನ್ನು ಪಡೆದಾಗ ಮಕ್ಕಳಾದ ನಮಗೆ ಹೊಟ್ಟೆ ಕಿಚ್ಚು ಆಗುತ್ತಿದ್ದರಲ್ಲಿ ಅನುಮಾನವೇನಿಲ್ಲ. ಇದನ್ನು ಅಪ್ಪನೆದುರು ನಾವು ಪ್ರಸ್ತಾಪ ಮಾಡಿದ್ದೂ ಇದೆ.

ಆಗ ಅವರು ಅದಕ್ಕೆ ಹೇಳುತ್ತಿದ್ದರ ಸಾರಾಂಶ ಹೀಗಿದೆ–

‘ಪ್ರಶಸ್ತಿಗಳನ್ನು ನಮ್ಮ ಅರ್ಹತೆಯನ್ನು ಗುರುತಿಸಿ ನೀಡಬೇಕೇ ಹೊರತು, ಪ್ರಶಸ್ತಿಗಳ ಹಿಂದೆ ನಾವು ಹೋಗಬಾರದು. ಪ್ರಶಸ್ತಿಗಾಗಿ ಒಬ್ಬ ರಾಜಕಾರಣಿಯ ಹಿಂದೆಯೋ ಸಚಿವರ ಹಿಂದೆಯೋ ಅಲೆಯಬೇಕು ಎನ್ನುವುದನ್ನು ನನಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ…’

ಅಪ್ಪ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿಯೇ ಆದರೂ, ಕಾಡುಹರಟೆ ಹೊಡೆಯಲು, ಯಾರೊಬ್ಬರ ಬಳಿಯಾಗಲಿ, ಮನೆಗಾಗಲಿ ಹೋದವರೇ ಅಲ್ಲ. ನನಗೆ ಬುದ್ಧಿ ಬಂದಾಗಿನಿಂದಲೂ ಅದರ ನೆನಪು ನನಗಿಲ್ಲ. ನಾನು ಹುಟ್ಟುವುದಕ್ಕೆ ಮುಂಚೆ ಅವರು ಮಹಾರಾಜ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಆಗ, ದೇಶದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ, ಮಹಾರಾಜ ಕಾಲೇಜಿನಲ್ಲಿ ಅವರು ಕೆಲಸ ಕಳೆದುಕೊಳ್ಳಬೇಕಾಯಿತು.

ಆಗ ಹಾ.ಮಾ.ನಾಯಕ ಅವರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. ಪ್ರತಿಭಟನೆ ಮಾಡದಂತೆ ಅಪ್ಪನನ್ನು ಕರೆದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಅಪ್ಪ ಜಗ್ಗದಿದ್ದಾಗ ಕೆಲಸದಿಂದ ತೆಗೆದರು. ಇದಾದ ಕೆಲವೇ ದಿನಗಳಲ್ಲಿ ಸಾಹಿತಿ ಸಿಪಿಕೆ ಅವರ ಮೂಲಕ, ‘ತಪ್ಪಾಯಿತೆಂದು ಕ್ಷಮೆ ಕೇಳುವಂತೆ ಹೇಳಿ ಕಳಿಸಿದ್ದರು. ಆದರೆ, ಸ್ವಾಭಿಮಾನ ಬಿಟ್ಟುಕೊಡದ ಅಪ್ಪ ಅತ್ತ ತಲೆ ಹಾಕಲಿಲ್ಲ; ಕೆಲಸ ಕಳೆದುಕೊಂಡರು. ಹಾಗೆಂದು ಅವರೇನು ಸುಮ್ಮನೆ ಕೂರಲಿಲ್ಲ. ನಂತರ ವಿದ್ಯಾವರ್ಧಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದರು, ಅದರ ಪ್ರಾಂಶುಪಾಲರಾಗಿ ನಿವೃತ್ತರಾದರು.

ಆ ನಂತರವೂ ಅಷ್ಟೇ, ಸಾಹಿತಿ ದೇಜಗೌ ಎಷ್ಟೇ ಪ್ರಭಾವಿಯಾಗಿದ್ದರೂ ಅಪ್ಪನಿಗೆ ಆತ್ಮೀಯರೇ ಆಗಿದ್ದರೂ ಎಂದಿಗೂ ಏನಾದರೂ ಕೆಲಸ ಮಾಡಿಸಿಕೊಡಿ ಎಂದು ಅವರ ಬಳಿ ಹೋದವರೇ ಅಲ್ಲ. ಇವೆಲ್ಲಾ ಕೇವಲ ನನ್ನ ಅಲ್ಪ ಅರಿವಿನ ಉದಾಹರಣೆಗಳಷ್ಟೇ. ಎಂದಿಗೂ ಸ್ವಾಭಿಮಾನ ಬಿಡದೇ ಬದುಕಿದರು ಎಂದು ಮಾತ್ರ ನಾನು ಹೇಳಬಲ್ಲೆ.

ಮೈಸೂರಿನಲ್ಲಿನ ಕೆಲವು ಸಾಹಿತಿಗಳು, ಸಮಾಜವಾದಿಗಳು ಮಾಡುವ ಕೆಲಸಕ್ಕಿಂತ ಪ್ರಚಾರಕ್ಕೇ ಹೆಚ್ಚು ಆದ್ಯತೆ ನೀಡಿದ್ದಾರೆ ಎನ್ನುವುದರಲ್ಲಿ ನನಗಂತೂ ಅನುಮಾನವೇ ಇಲ್ಲ. ಮೈಸೂರಿನಲ್ಲಿ ಅಂತರ್ಜಾತಿ ವಿವಾಹಗಳಿಗೆ ವೇದಿಕೆಯಾಗಿರುವ ‘ಮಾನವ ಮಂಟಪ’ ವನ್ನು ಹುಟ್ಟುಹಾಕಿದರವಲ್ಲಿ ಅಪ್ಪನೂ ಒಬ್ಬರು. ಯಾರೋ ಒಬ್ಬ ವ್ಯಕ್ತಿ ಇದನ್ನು ಹುಟ್ಟು ಹಾಕಿದ್ದಲ್ಲ. ಆದರೆ, ಈಗಲೂ ಒಬ್ಬ ವ್ಯಕ್ತಿಗೆ ಮಾತ್ರ ಇದರ ಹೆಗ್ಗಳಿಕೆ ಸಲ್ಲುತ್ತಿದೆ. ಅವರ ಹೆಸರು ಇಲ್ಲಿ ಬೇಡ. ಅದೇ ರೀತಿ, ಮೈಸೂರಿನಲ್ಲಿ ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದವರು ನನ್ನ ತಂದೆ ಹಾಗೂ ಹೊರೆಯಾಲ ದೊರೆಸ್ವಾಮಿ ಅವರು. ಆದರೆ, ಇವರಿಬ್ಬರನ್ನು ಈಗ ಯಾರೂ ನೆನಪಿಸಿಕೊಳ್ಳುವುದಿಲ್ಲ. ಬಂಡಾಯ ಚಳವಳಿಯಲ್ಲಿ ಭಾಗವಹಿಸಿದಂತೆ ತೋರಿಸಿಕೊಂಡು, ಹಿಂಬಾಗಿಲಿನಲ್ಲಿ ಕದ್ದು ಓಡುತ್ತಿದ್ದ ಅನೇಕರು, ಈಗ ತಾವೇ ಅದರ ನಾಯಕತ್ವ ವಹಿಸಿದ್ದೆವು ಎಂದೂ ಹೇಳಿಕೊಳ್ಳುತ್ತಿದ್ದಾರೆ.

ಅವರಿಗೆ ಸದಾ ಕಾಲ ಆತ್ಮೀಯರಾಗಿ, ಹಿತೈಷಿಗಳಾಗಿ ಜತೆಗಿರುವವರು ಸಾಹಿತಿ ಡಾ.ರಾಮೇಗೌಡ (ರಾಗೌ) ಹಾಗೂ ಬಿ.ಎನ್‌.ಶ್ರೀರಾಮ. ಅಪ್ಪ ತನ್ನೆಲ್ಲ ಅಂತರಂಗದ ವಿಚಾರಗಳನ್ನೂ ಇವರಿಬ್ಬರ ಬಳಿ ಹಂಚಿಕೊಂಡಿದ್ದಾರೆ. ಬಹುಶಃ ಸಮಾನ ಮನಸ್ಕರಲ್ಲಿ ಸ್ನೇಹ ಎನ್ನುವುದು ಇದಕ್ಕೆ ಕಾರಣ ಇರಬಹುದು. ಇವರಿಬ್ಬರು ಸಹಾ ಎಂದೂ ಪ್ರಚಾರಕ್ಕಾಗಿ ಆಸೆಪಟ್ಟವರಲ್ಲ. ಅಂತೆಯೇ, ಪ್ರೊ.ಜಿ.ಚಂದ್ರಶೇಖರ್‌ ಹಾಗೂ ಪ್ರೊ.ಎನ್.ಎಸ್.ಸ್ವಾಮಿಗೌಡ ನಮ್ಮ ಕುಟುಂಬ ಸ್ನೇಹಿತರಾಗಿ ದುಃಖದಲ್ಲಿ ಭಾಗಿಯಾಗಿದ್ದಾರೆ.

ಈ ಮೊದಲು ಅವರ ಆರೋಗ್ಯದ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದೆ. ತಂದೆಯವರು ಅವರ ಅನಾರೋಗ್ಯವನ್ನು ಕುರಿತು ‘ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’ ಎಂಬ ಅನುಭವ ಕಥನವನ್ನು ರಚಿಸಿದ್ದಾರೆ. ಹಾಗಾಗಿ, ದೀರ್ಘ ವಿವರಣೆಯ ಅಗತ್ಯ ಇಲ್ಲಿಲ್ಲ. ಪುನರಾವರ್ತನೆಯೂ ಆಗುತ್ತದೆ. ಆದರೆ, ಇವರ ಬಗ್ಗೆ ಚುಟುಕಾಗಿ ಹೇಳಬೇಕಾದರೆ, ಅಪ್ಪನದು ಬಲು ಗಟ್ಟಿಯ ಮನಸು ಎಂದಷ್ಟೇ ಹೇಳಬೇಕು.

ಅಪ್ಪ ಎಂದೂ ದುಂದು ವೆಚ್ಚ ಮಾಡಿದವರಲ್ಲ. ನಾನು ಕೆಲಸಕ್ಕೆ ಸೇರಿದ ಮೇಲೆ ಕೊಂಚ ದುಬಾರಿ ಬಟ್ಟೆಗಳನ್ನು ಕೊಳ್ಳುವಾಗ ಅಪ್ಪ ನನಗೆ ಎಚ್ಚರಿಸುತ್ತಲೇ ಇರುತ್ತಾರೆ. ಅವರು ದುಂದು ವೆಚ್ಚ ಮಾಡುತ್ತಿರಲಿಲ್ಲ ಎನ್ನುವುದು ನಿಜವಾದರೂ, ಮಕ್ಕಳಾದ ನಮಗೆ ಎಂದೂ ಯಾವುದಕ್ಕೂ ಕಡಿಮೆ ಮಾಡಿದವರಲ್ಲ. ಸಮಾಜದಲ್ಲಿ ಗೌರವಯುತವಾದ ಬದುಕನ್ನೇ ನಾವು ಕಂಡಿದ್ದೇವೆ. ‘ಒಂದು ರೂಪಾಯಿ ಉಳಿಸಿದರೆ, ಒಂದು ರೂಪಾಯಿ ಗಳಿಸಿದಂತೆ’ ಎನ್ನುವುದನ್ನು ಕಟ್ಟುನಿಟ್ಟಾಗಿ ಪಾಲಿಸಿದವರು. ಹಾಗಾಗಿಯೇ, ಈಚೆಗೆ (2013–14ರಲ್ಲಿ) ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಬೇಕಾದಾಗ, ನಾವು ಸಾಲ ಮಾಡಿಕೊಳ್ಳದೇ ಉತ್ತಮ ಸ್ಥಿತಿಯಲ್ಲಿ ಇದ್ದುಕೊಂಡೇ ದುಬಾರಿ ವೆಚ್ಚಗಳನ್ನು ಭರಿಸಲು ಸಾಧ್ಯವಾಯಿತು.

ಅವರದು ಗಟ್ಟಿ ಜೀವ, ಉಕ್ಕಿನ ಮನಸು ಎಂದು ನಾವು ಸುಲಭವಾಗಿ ಹೇಳಿಬಿಡುತ್ತೇವೆ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರು ಅನುಭವಿಸಿದ ನೋವನ್ನು ಮಾತ್ರ ವಿವರಿಸಿ ಹೇಳುವಂಥದ್ದಲ್ಲ. ನಾನು ಸಣ್ಣ ಪುಟ್ಟ ಆರೋಗ್ಯದ ಏರಿಳಿತಗಳಿಗೂ ಹೆದರುವವನು. ಆದರೆ, ಅಪ್ಪ ಬಹು ಕಠಿಣ ಸಮಸ್ಯೆಗಳನ್ನು ಹೇಗೆ ತಡೆದುಕೊಂಡು ನಿಭಾಯಿಸಿದರು ಎಂದು ನನಗೆ ಇಂದಿಗೂ ಅಚ್ಚರಿಯಾಗುತ್ತದೆ. ಏಕೆಂದರೆ, ವೈದ್ಯಕೀಯ ಸಮಸ್ಯೆ ಅವರಿಗೆ ಒಂದೆರಡು ವರ್ಷಗಳ ಕಾಲ ಇದ್ದಿದ್ದಲ್ಲ. 16 ವರ್ಷಗಳಿಗೂ ಹೆಚ್ಚು ಕಾಲದಿಂದ ಕಾಡಿರುವಂಥದ್ದು. ಬಹುಶಃ ಅವರ ನೋವಿನ ಸಂಕಟ ನನ್ನ ಅರಿವಿನ ಮಿತಿಗೆ ಮೀರಿದ್ದು ಇರಬಹುದು.

ಈ ಹಿಂದೆ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿಗೆ ಅವರು ಸೇರಿದರು ಎಂದು ಹೇಳಿದ್ದೆ. ಅಲ್ಲಿ ಅವರು ವೃತ್ತಿಜೀವನವನ್ನು ಅತಿ ಸಮರ್ಥರಾಗಿ ಕಳೆದರು ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ. ಅವರು ಪ್ರಾಂಶುಪಾಲರಾದ ಮೇಲೆ ಕೊಂಪೆಯಂತಿದ್ದ ಕಾಲೇಜನ್ನು ಬದಲಿಸಿ, ಕಟ್ಟಿ ಬೆಳೆಸಿ, ಮೈಸೂರಿನ ಇತರ ಶಿಕ್ಷಣ ಸಂಸ್ಥೆಗಳು ಬೆದರುವಂತೆಯೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆಯೂ ಬೆಳೆಸಿದರು. ಇಷ್ಟಾದರೂ, ಕಾಲೇಜಿನ ಆಂತರಿಕ ಸಮಸ್ಯೆಗಳು ಅವರನ್ನು ಕಾಡದೇ ಬಿಟ್ಟಿದ್ದಿಲ್ಲ.

ಯಾವುದೇ ಕಾಲೇಜಿನ ವ್ಯವಸ್ಥಾಪನಾ ಮಂಡಳಿಗಳಲ್ಲಿ ಜಗಳ ಇದ್ದದ್ದೇ; ಕೆಲವೊಮ್ಮೆ ಒಂದು ಗುಂಪಿನ ಪರ ವಹಿಸಬೇಕಾದ ಅನಿವಾರ್ಯತೆಯೂ ಬರುತ್ತದೆ. ಈ ಕಾರಣಗಳಿಂದಾಗಿ, ಅಪ್ಪನನ್ನು ಕಂಡರೆ ಆಗದ ಕೆಲವರು ಅವರಿಗೆ ತೊಂದರೆ ಕೊಟ್ಟಿದ್ದು ನಿಜ. ಕಾಲೇಜನ್ನು ಬೆಳೆಸುವ ಕಷ್ಟಕಾರ್ಯ ಹಾಗೂ ಒತ್ತಡಗಳಿಂದಾಗಿಯೂ ಅವರ ಆರೋಗ್ಯ ಕೊಂಚ ಕೆಟ್ಟಿದೆ. ಆದರೆ, ಅದಕ್ಕೆ ಪ್ರತಿಫಲವಾಗಿ ಅದೇ ಕಾಲೇಜಿನ ಬಹುತೇಕ ಎಲ್ಲ ಸಿಬ್ಬಂದಿ ಅಪ್ಪ ನಿವೃತ್ತರಾದ ನಂತರವೂ ಅಪಾರ ಪ್ರೀತಿಯಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ. ಗೌರವಿಸುತ್ತಾರೆ.

ಅಪ್ಪನಿಂದ ನಾವು ಒಳ್ಳೆಯ ವ್ಯಕ್ತಿಗಳಾದೆವು, ಸಮಾಜಮುಖಿಗಳಾದೆವು ಎನ್ನುವುದು ಮಾತ್ರ ಸ್ಪಷ್ಟ. ಅಪ್ಪನಿಗೆ ಹೆಗಲಾದ ಅಮ್ಮನ ಪಾತ್ರವನ್ನು ಅಕ್ಷರಗಳಲ್ಲಿ ವಿವರಿಸಿ ಹೇಳುವುದು ಅಸಾಧ್ಯ. ಅಪ್ಪನ ಕಷ್ಟದ ಕಾಲದಲ್ಲಿ ಅವರೂ ಸಾಕಷ್ಟು ದಣಿದಿದ್ದಾರೆ.

ಈ ರೀತಿಯ ಬರಹಗಳನ್ನು ಹೇಳುವಾಗ, ಇದನ್ನು ಓದುವಾಗ ಕೆಲವರಿಗೆ ಮುಜುಗರವಾಗಬಹುದು. ಆದರೆ ಕೆಲವು ಸತ್ಯಗಳನ್ನು ಹೇಳದೇ ಇರಲೂ ಸಾಧ್ಯವಿರಲಿಲ್ಲ. ಹಾಗಾಗಿ, ಹೇಳಿದ್ದೇನೆ. ಹೇಳದೇ ಇರುವುದೂ ಸಾಕಷ್ಟಿದೆ. ಅಪ್ಪನ ಬಗ್ಗೆ ಇತರರು ಅನೇಕ ತಿಳಿಯದ ವಿಚಾರಗಳನ್ನು ಹೇಳಬಹುದು ಎಂದು ಭಾವಿಸಿದ್ದೇನೆ. ಅಪ್ಪನ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಅದರಂತೆ ಬದುಕುವುದೇ ಅವರಿಗೆ ನಾವು ಸಲ್ಲಿಸುವ ಬಹುದೊಡ್ಡ ಗೌರವ ಎಂದು ನಾನು ಭಾವಿಸಿದ್ದೇನೆ.

। ಇದನ್ನು ನಮ್ಮ ತಂದೆಯವರು ಬದುಕಿದ್ದಾಗ ಬರೆದಿದ್ದು.

ಅವರಿಗೆ ಅಭಿನಂದನಾ ಕೃತಿಯನ್ನು ತರಬೇಕೆಂದು ರಾಗೌ ಅವರು ಕೇಳಿ ಬರೆಸಿದ್ದರು.

ಆ ಕೃತಿಯಿನ್ನೂ ಪ್ರಕಟವಾಗಿಲ್ಲ ।

Leave a Reply