ನಮ್ಮ ಮೇಲೆ ರಾಮಾಚಾರಿ ಆಹ್ವಾನೆಯಾಗಿಬಿಟ್ಟ..

ನಾಗರಹಾವಿನ ನೆನಪು….

ಸಿರೂರ್ ರೆಡ್ಡಿ 

ಆ ಕಾಲಕ್ಕೆ ಕಾಲೇಜಿನಲ್ಲಿದ್ದ ನಮಗೆಲ್ಲ ಮೋಡಿ ಮಾಡಿದ ಸಿನೆಮಾ “ನಾಗರಹಾವು” ಚಿತ್ರ ಮತ್ತೆ ಬಿಡುಗಡೆಯಾಗಿ ಚೆನ್ನಾಗಿ ಓಡುತ್ತಿದೆಯೆಂಬ ಸುದ್ದಿ ಕೇಳಿ ಖುಷಿಯಾಗಿದೆ.

ಆಗ ಸಿನೆಮಾದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿತ್ತು.

ಆದೇ ಸಮಯಕ್ಕೆ ಬಳ್ಳಾರಿಯ ಮಿತ್ರನೊಬ್ಬ ಶೂಟಿಂಗ್ ನೋಡಲೇಬೇಕೆಂಬ ಹುಳ ನಮ್ಮ ತಲೆಯೊಳಗೆ ಬಿಟ್ಟ ಕೂಡಲೇ ತಯಾರಿ ಶುರುವಾಯ್ತು.

ಮನೆಯಲ್ಲಿ ಹೇಳೋ ಹಾಗಿಲ್ಲ! ಆದರೆ ಅಷ್ಟೊತ್ತಿಗೆಲ್ಲ ಮನೆಯ ಹಿರಿಯರಿಗೆ ಸುಳ್ಳು ಹೇಳಿ ನಮ್ಮ ಆಶೆಗಳನ್ನ ತೀರಿಸಿಕೊಳ್ಳೋದರಲ್ಲಿ ನಾವು ಎಕ್ಸ್ಪರ್ಟ್ ಕಿಲಾಡಿಗಳಾಗಿಬಿಟ್ಟಿದ್ದೆವಲ್ಲ.

ಇನ್ನೇನು ತಡ …. ಕೈಯಲ್ಲಿ ಕಾಸಿಲ್ಲ ಆದರೇನಂತೆ!

ಬಳ್ಳಾರಿಯಿಂದ ಚಿತ್ರದುರ್ಗ ೧೪೦ ಕಿಲೋಮೀಟರ್ ದೂರ. ಅಂತೂ ಒಂದು ದಿನ ಬೆಳಗಿನ ಜಾವ ಮೂವರು ಗೆಳೆಯರು (ನಾನು, ಅಬ್ರಹಾಂ ಮತ್ತು ಮನೋಹರ) ಅವರವರ ಅಪ್ಪಂದಿರಿಗೆ ಸೇರಿದ ಲಡಾಸು ಸೈಕಲ್ ಎಗರಿಸಿ ಹೊರಟುಬಿಟ್ಟೆವು. ಬಳ್ಳಾರಿ ಸೀಮೆಯ ರಣಬಿಸಿಲಲ್ಲಿ ಸಾಗಿದ ಸೈಕಲ್ ಪ್ರಯಾಣ ಚಳ್ಳಕೆರೆ ತಲುಪಲು ಅಲ್ಲಲ್ಲಿ ಜಾಲಿ ಗಿಡಗಳ ಇಲ್ಲದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತ ಎಂಟು ತಾಸು ಬೇಕಾಯಿತು. ಅಂತೂ ಚಿತ್ರದುರ್ಗ ಸೇರಿದಾಗ ಸೂರ್ಯ ಮುಳುಗುತ್ತಿದ್ದ.

ದುರ್ಗದ ಸರ್ಕಾರೀ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸರೋಜಕ್ಕನ (ಅಬ್ರಹಾಂ ಅಕ್ಕ) ಮನೆ ಬಾಗಿಲಿಗೆ ನಾವು ಬಂದು ನಿಂತಾಗ ನಮ್ಮ ಅವತಾರ ಮತ್ತು ಘನ ಉದ್ದೇಶಕ್ಕೆ ಪ್ರತಿಫಲವೆಂಬಂತೆ ಬೈಗುಳ ಸ್ವಾಗತಿಸಿದವು. ಸರಿಯಾದ ಹೊಡೆತಕ್ಕೆ ಅಭ್ಯಾಸವಾಗಿದ್ದ ನಮ್ಮ ಮೈಗಳು ಬರೀ ಬೈಗುಳ ಕೇಳಿ ಬಚಾವಾದವು.

ಕೂಡಲೇ ಸರೋಜಕ್ಕ ಆಸ್ಪತ್ರೆ ಫೋನ್ ಬಳಸಿ ಬಳ್ಳಾರಿಯ ಮನೆಯವರಿಗೆ ನಮ್ಮ ಸುದ್ದಿ ಮುಟ್ಟಿಸಿದಾಗ ವಾಪಾಸು ಹೋದ ಮೇಲೆ ಬೀಳೋ ಏಟುಗಳಿಗೆ ಮೈ ಮನಸ್ಸುಗಳು ಆ ಕ್ಷಣದಿಂದಲೇ ತಯಾರಾಗತೊಡಗಿದವು. ಕೊನೆಗೂ ಶಾಂತಳಾದ ಸರೋಜಕ್ಕ ನಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಂಡು ಮಾರನೇ ದಿನ ಶೂಟಿಂಗ್ ನಡೀತಿರೋ ದುರ್ಗದ ಬೆಟ್ಟಕ್ಕೆ ದಾರಿ ತೋರಿಸಿದ್ದಾಯ್ತು.

ನಾವು ಕೋಟೆ ಮೇಲೇರಿ ಶೂಟಿಂಗ್ ನೋಡಿದಾಗ ಯಾಕೋ ನೀರಸ ಅನ್ನಿಸತೊಡಗಿತು. ಆಗ “ಕರ್ಪೂರದಾ ಬೊಂಬೆ” ಹಾಡು, ವಿಷ್ಣುವರ್ಧನ ಮತ್ತು ಮಾರ್ಗರೆಟ್ (ನಟಿ ಶುಭ) ನಡುವೆ ನಡೆಯೋ ಸಂಭಾಷಣೆಗೆ ನಡೆದ ಶೂಟಿಂಗ್ ಹತ್ತಾರು ಸಾರಿ ಕಟ್ ಮಾಡಿಸಿಕೊಂಡು ಮತ್ತೆ ಮತ್ತೆ ಚಿತ್ರೀಕರಣಗೊಂಡಿದ್ದು ನೋಡಿ ನಮಗೆ ಇಂಪ್ರೆಸ್ ಆಗಲಿಲ್ಲ ಅಂಥ ಕಾಣುತ್ತೆ.

ಆಗ ಕೆಲವರು ನಟಿ ಶುಭ ಅವರಿಗೆ ಆಕ್ಟಿಂಗ್ ಬರಲ್ಲ ಅಂತ ಗೊಣಗಿದ್ದೂ ಕಿವಿಗೆ ಬಿತ್ತು. ಬಳ್ಳಾರಿಯಲ್ಲಿ ಸರೀ ಸಮ ತೆಲುಗು ಚಿತ್ರಗಳನ್ನ ನೋಡುತ್ತಿದ್ದ ನಮಗೆ ಕನ್ನಡದ ಗೊತ್ತಿಲ್ಲದ ಹೀರೋ ಅಂತಲೂ ಅಸಡ್ಡೆ ಇರಬೇಕು. ಅಂತೂ ಇಂತೂ ನಮ್ಮ ಘನ ಉದ್ದೇಶ ಪೂರ್ಣಗೊಂಡ ಹಿನ್ನೆಲೆಯಲ್ಲೇ ಬಳ್ಳಾರಿಗೆ ಮತ್ತೆ ಕಷ್ಟಪಟ್ಟು ಸೈಕಲ್ ಹೊಡೆದುಕೊಂಡು ಹೋದಮೇಲೆ ಆಗೋ ಮಂಗಳಾರತಿ ನೆನಪು ಮಾಡಿಕೊಂಡು ಈ “ನಾಗರಹಾವಿ”ನ ಸಹವಾಸ ಮಾಡಿದ್ದಕ್ಕೆ ನಮ್ಮನ್ನೇ ನಾವು ಬೈದುಕೊಂಡಿದಾಯ್ತು.

ಆದರೆ ನಂತರ ಸಿನಿಮಾ ನೋಡಿದೆವಲ್ಲ … ಅದ್ಭುತ ಅನುಭವ ಅದು. ಆ ಸಿನಿಮಾ ನೋಡಿದ ಮೇಲೆ ಕೆಲ ಕಾಲ ನಮ್ಮ ಮೇಲೆ ರಾಮಾಚಾರಿ ಆಹ್ವಾನೆಯಾಗಿ ಹಲವು ಸಾರಿ ಬಳ್ಳಾರಿ ಕೋಟೆಯೇರಿಸಿದ್ದ.

ಚಿಕ್ಕವರಿದ್ದಾಗ ನಾವೆಲ್ಲ ಮಾಡಿದ ತರಲೆಗಳ ನೆನಪುಗಳೇ ಮಧುರ. ಅಂದ ಹಾಗೆ ಈ ಸೈಕಲ್ ಪ್ರಯಾಣದ ಹುಚ್ಚು ನನ್ನನ್ನ ಅಲ್ಲಿಗೇ ಬಿಡಲಿಲ್ಲ. ಅದು ಮುಂದೆ ಬಳ್ಳಾರಿಯಿಂದ ಮದರಾಸಿಗೆ (೬೦೦ ಕಿಲೋಮೀಟರ್) ಸಾಗಿದ ಭಯಾನಕ ನೆನಪುಗಳನ್ನ ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ.

Leave a Reply