ಅರ್ಪಣೆ ಪುಟವೆಂಬ Confession Room

‘ನಾನು ಏಕೆ ಬರೆಯಬೇಕು?’ ಎನ್ನುವ ಪ್ರಶ್ನೆಯೊಂದಿಗೆ, ಜಗತ್ತಿನ ಬಹುತೇಕ ಲೇಖಕರು ತಮ್ಮನ್ನು ತಾವು ಒಮ್ಮೆಯಾದರೂ ನಿಖಷಕ್ಕೆ ಒಡ್ಡಿಕೊಳ್ಳುತ್ತಾರೆ. ಹಾಗೆ ಒಡ್ಡಿಕೊಳ್ಳುವುದು ಬರವಣಿಗೆ ಮಾಡಬೇಕು ಎಂದುಕೊಳ್ಳುವವರು, ತಮ್ಮನ್ನು ತಾವು ಬರವಣಿಗೆಗೆ ಒಪ್ಪಿಸಿಕೊಳ್ಳುವ ಪ್ರಕ್ರಿಯೆಯೊಂದರ ಅವ್ಯಕ್ತ ಪ್ರಾಮಾಣಿಕತೆಯ ದ್ಯೋತಕಮುದ್ರೆ. ಹೀಗೆ ಬರೆದವರಿಗೂ ತಿಳಿಸದೆ ಒಂದಿಷ್ಟು ಜನರು ಮಾತ್ರ, ಬರೆದವನು ಹೇಳುವ ಕತೆ, ಕಾದಂಬರಿ ಹಾಗೂ ಕಾವ್ಯಗಳಲ್ಲಿ ಮೈ ಸುಡುವ ಬಿಸಿಲಿನಲ್ಲಿ ಜತೆಯಾದ ನೆರಳಿನಂತೆ, ಅಮೂರ್ತ ರೂಪಗಳ ಉಡುಗೆ ತೊಟ್ಟು ಜತೆಯಾಗಿಬಿಡುತ್ತಾರೆ.

ಹಾಗೆ ಬಂದವರು ಬರೆದವನ ಕತೆ, ಕಾದಂಬರಿಯ ಪಾತ್ರವಾಗಿಯೋ ಅಥವಾ ಕಾವ್ಯದೊಳಗಿನ ರೂಪಕವಾಗಿಯೋ, ವಸ್ತುವಾಗಿಯೋ ಉಳಿದುಬಿಡುತ್ತಾರೆ. ಹೀಗೆ ಅವರೆಲ್ಲರೂ ಉಳಿದು ಹೋಗುವುದೇ ಲೇಖಕನ ಬದುಕು ಹಾಗೂ ಬರವಣಿಗೆಗೆ ತನ್ನನ್ನ ತಾನು ನೈಜವಾಗಿ ಒಡ್ಡಿಕೊಂಡಿದ್ದರ ಮೌಲ್ಯಮಾಪನದ ಫಲಿತಾಂಶವಿರಬಹುದು. ಅಲ್ಲಿ ಲೇಖಕನ ಪ್ರಾಮಾಣಿಕತೆ ಎನ್ನುವುದು ಜೀವಂತವಾಗಿ ಕಾಣಲೂಬಹುದು. ಒಂದು ವೇಳೆ ಕತೆ, ಕಾದಂಬರಿ ಹಾಗೂ ಕಾವ್ಯಗಳಲ್ಲಿ ಲೇಖಕ ಸುಳ್ಳಾಗಬಹುದು!.

ಆದರೆ ನೂರಾರು ಪುಟಗಳ ಇಡೀ ಪುಸ್ತಕದಲ್ಲಿ ಸುಳ್ಳಾಗಬಹುದಾದ ಲೇಖಕ ಅದೊಂದೇ ಒಂದು ಪುಟದಲ್ಲಿ ಮಾತ್ರ ತಪ್ಪಿಯೂ ಸುಳ್ಳನ್ನಾಡುವುದು ಅಷ್ಟು ಸಲೀಸಾಗಿರುವುದಿಲ್ಲ. ಆಗಷ್ಟೇ ಕಟ್ಟಿಸಿದ ಖಾಲಿ ಮನೆಯೊಳಗೆ ಮನೆಯ ತನ್ನಿಷ್ಟದವರನ್ನ ಕರೆತಂದು, ಇದು ವರಾಂಡ, ಇದು ಅಡಿಗೆ ಮನೆ, ಇದು ರೂಮು ಎಂದು ತೋರಿಸಿ ವಿವರಿಸುವವಂತೆ, ಅದೊಂದು ಖಾಲಿಪುಟದ ಸಣ್ಣ ಅಜ್ಞಾತ ಮೂಲೆಯಲ್ಲಿ ಲೇಖಕ ತನ್ನಿಷ್ಟದವರನ್ನ ತಂದು ನಿಲ್ಲಿಸಿಬಿಡುತ್ತಾನೆ. ಹಾಗೇ ನಿಲ್ಲಿಸಿ ತಾನು ಮಾತ್ರ ನಿರಾಳವಾಗಿ ಅದೆತ್ತಲೋ ನೋಡುತ್ತ ನಿಂತುಬಿಡುತ್ತಾನೆ.

ಅದು ಅರ್ಪಣೆಯ ಪುಟ.

ಪುಸ್ತಕದಲ್ಲಿನ ಅರ್ಪಣೆಯ ಪುಟ ಎನ್ನುವುದು ಲೇಖಕನ ಪಾಲಿಗೆ Confession Room. ಅದೊಂದು ಪುಟದಲ್ಲಿ ಬದುಕಿನುದ್ದಕ್ಕೂ ಅವನು ತೇಕುತ್ತ ಉಳಿಸಿಕೊಂಡಿದ್ದ ಸರ್ವಭಾವಗಳು ಸಮ್ಮಿಶ್ರಣದಿಂದ ನಿರ್ಮಿತವಾದ ಬಿಡಿ ಭಾಗಗಳಂತ ಅಂಗಗಳಿರುತ್ತವೆ. ಪಾಪ ನಿವೇದನೆಯ ವೇದಿಕೆಯದು. ಅಲ್ಲಿ ಕೃತಜ್ಞತೆ, ಬೇಡಿಕೆ, ಸತ್ಯ, ಗುಟ್ಟು, ಪ್ರೀತಿ, ಸಿಟ್ಟು, ಮುನಿಸು, ಒಂದು ನಿಮಿಷ ಬರುತ್ತೇನೆ ಎಂದು ಹೊರಟವರು ವರ್ಷಗಳು ಕಳೆದರು ಬರದೇ ಹೋದಂತವರಿಗೆ ಹೇಳಬಹುದಾದಂತ ಕಡೆ ಬಾರಿಯ ಮಾತುಗಳಿರುತ್ತವೆ. ಬೆರಳುಗಳನ್ನು ಬಲವಂತವಾಗಿ ಮಡಚಿ ನೆಟಿಕೆ ತೆಗೆಯುವಾಗ ನೊಚ್ಚಗಾದರೂ ಸಣ್ಣದಾಗಿ ನೋಯಿಸುವಂತಹ ಅಷ್ಟೇ ಸಣ್ಣ ಸಂಕಟಗಳೂ ಇರುತ್ತವೆ. ಅರ್ಪಣೆಯ ಪುಟ ಎನ್ನುವುದು ಅದೊಂದು ಮುಕ್ತ ಮಾರುಕಟ್ಟೆಯಂತೆ.

ಕವಿ ಜಯಂತ ಕಾಯ್ಕಿಣಿ ಮುಂಬಯಿ ಹಾಗೂ ಗೋಕರ್ಣದೊಂದಿಗೆ ಅದೊಂದು ತೆರನಾದ ಸಂಬಂಧವನ್ನ ಥೇಟು ಅವರ ಹೆಗಲ ಮೇಲಿನ ಬ್ಯಾಗ್‍ನಂತೆಯೇ ಕಾದಿಟ್ಟುಕೊಂಡು ಬಂದವರು. ಬರೆದ ಬಹುತೇಕ ಕತೆಗಳು ಅವರು ನಡೆದಾಡಿದ ಮುಂಬೈ ಹಾಗೂ ಗೋಕಾರ್ಣದ ಬೀದಿಗಳಿಂದಲೇ ಸೀದಾ ಪುಸ್ತಕದ ಹಾಳೆಯೊಳಗೆ ಸೇರಿಕೊಂಡವು. ಅವರ ದಗಡೂ, ಅಸಾವರಿ ಲೋಖಂಡೆ, ತಲೆ ಕೂದಲು ಶ್ವೇತವರ್ಣಕ್ಕೆ ತಿರುಗಿದರೂ ಹಾಗೇ ಉಳಿದುಹೋದ ಸತ್ಯಜಿತ್, ಮತ್ತಾರಿಗೋ ಉಪಕಾರ ಮಾಡುತ್ತಿದ್ದೇನೆ ಎನ್ನುವ ಭ್ರಮೆಯೂ ಅಲ್ಲದ ವಾಸವ್ತವೂ ಅಲ್ಲದ ಸ್ಥಿತಿಯಲ್ಲಿ ಕದಲದೆ ಇಂದಿಗೂ ನಿಂತುಬಿಟ್ಟಿರುವ ಗೋಲ್ಡನ್ ಫ್ರೇಂ ವರ್ಕ್ಸ್ ನ ಗಂಗಾಧರ ಮುಂಬೈ ನಿವಾಸಿಗಳು ಎನಿಸುತ್ತಾರೆ. ಇನ್ನು ಪಬ್ಬೂ, ಅಂಜಲಿ ಗೋಕರ್ಣದ ಹಳೆಯ ನಿವಾಸಿಗಳಂತೆ ಗೋಚರಿಸುತ್ತಾರೆ. ಇವೆಲ್ಲವೂ ಕೇವಲ ನೆನಪುಗಳಲ್ಲ ಅದು ಜಯಂತರೊಳಗಿನ ಲೇಖಕ ಮುಂಬೈ ಹಾಗೂ ಗೋಕಾರ್ಣದೊಂದಿಗೆ ಸಾಧಿಸಿದ ಅಪ್ಪಟ ಜೀವಂತಿಕೆ.

ದೀಪಾವಳಿಯ ವಿಶೇಷಾಂಕದ ಕತೆಗೆ ಪ್ರಥಮ ಬಹುಮಾನ ಬಂದಾಗ ಮುಂಬೈನ ಬೀದಿಗಳಲ್ಲಿ ಅಸೀಮ ಧೀರನಂತೆ ನಡೆದಾಡಿದ ಜಯಂತರಿಗೆ ಈಗ ಇಷ್ಟು ವರ್ಷಗಳ ನಂತರ ಅದೇ ಮುಂಬೈ ಎಲ್ಲ ಜೀವಂತಿಕೆಯ ನಡುವೆಯೂ ನೀರಸ ಎನಿಸಬಹುದು. ಈಗ ಮುಂಬೈನಲ್ಲಿ ಮಾಲತಿ- ಯಶವಂತ ಚಿತ್ತಾಲ, ಗಾಯತ್ರಿ ನಾಡಕರ್ಣಿ, ಮುಕುಂದ ಜೋಷಿ ಹಾಗೂ ಆಗಾಗ ಬಂದಾಗಷ್ಟೇ ಕಂಡಿದ್ದ ಗೋಪಾಲಕೃಷ್ಣ ಅಡಿಗರಿಲ್ಲ. ಅವರ ನೆನಪುಗಳಷ್ಟೇ ಅವರು ಕಂಡುಕೊಂಡ ಮುಂಬೈನಲ್ಲಿ ಉಳಿದುಕೊಂಡಿವೆ.ಕಳೆದಹೋದ ಅವರೆಲ್ಲರನ್ನೂ ಜಯಂತರು ಮತ್ತೊಂದು ಬಗೆಯಲ್ಲಿ ಉಳಿಸಿಕೊಳ್ಳಲು ಯತ್ನಿಸಿದ್ದಾರೆ.

ಜಯಂತರು ತಮ್ಮ ‘ತೂಫಾನ್ ಮೇಲ್’ ಪುಸ್ತಕವನ್ನು

“ನನ್ನನ್ನು ಉಳಿಸಿಕೊಂಡು ಬಂದ
ಹಾಸ್ಟೆಲ್ ಕೋಣೆಗಳಿಗೆ,
ಬ್ಯಾಚುಲರ್ ಡೆನ್‍ಗಳಿಗೆ,
ನಂತರದ ಬೆಕ್ಕಿನ ಬಿಡಾರಗಳಿಗೆ

ಇನ್ನೂ ಮುಂದೆಲ್ಲೋ ಇರುವ
ಅಗೋಚರ ಹೊಸ ವಿಳಾಸಗಳಿಗೆ”

ಎಂದು ಅರ್ಪಿಸಿದ್ದರೆ “ತೆರೆದಷ್ಟೇ ಬಾಗಿಲು” ಹಾಗೂ  “ಅಮೃತ ಬಳ್ಳಿಯ ಕಷಾಯ” ಪುಸ್ತಕಗಳನ್ನುತೀರಿ ಹೋದ ನಾಗಭೂಷಣ ಹೆಗಡೆ ಹಾಗೂ ಅವರ ಗೋಕರ್ಣದಿಂದ ಹೊರಡುತ್ತಲೇ ಇರುವ ಬಸ್ಸುಗಳಿಗೆ ಅರ್ಪಿಸಿದ್ದಾರೆ. ಅವರ ಅರ್ಪಣೆ ಪುಟಗಳಲ್ಲಿ ಸೂಕ್ಷ್ಮವಾಗಿ ಕಣ್ಣಾಡಿಸಿದರೆ ಸಣ್ಣ ಜಾಗದಲ್ಲೇ ಜಯಂತರು ತಾವು ಬರೆದ ಅಷ್ಟೂ ಕತೆಗಳಲ್ಲಿ ಹೇಳಿಕೊಳ್ಳಲಾರದ ಅಥವಾ ದಾಟಿಸಲಾಗದ ಏನನ್ನೋ ಬಹುತೇಕ ಖಾಲಿಯಾಗೇ ಉಳಿದುಹೋಗುವ ಅದೊಂದು ಸಣ್ಣ ಪುಟದ ಮೂಲಕ ದಾಟಿಸಲು ಯತ್ನಿಸಿದ್ದಾರೆ ಎನಿಸುತ್ತದೆ.

ಹೀಗೆ ಓದಿದ ಲೇಖಕರ ಎಲ್ಲ ಪುಸ್ತಕಗಳನ್ನು ತೆಗೆದು ನೋಡುತ್ತ ಹೋದಂತೆ ಅವರೊಳಗಿನ ಖಾಸಗಿ ಲೋಕದ ಬಾಗಿಲುಗಳು ವೈಕುಂಠದ ಸಪ್ತದ್ವಾರಗಳಂತೆ ತೆರೆದುಕೊಳ್ಳುತ್ತವೆ. ಅಲ್ಲಿ ತಾನು ಯಾರೂ ಮಾಡದ ಉಪಕಾರವೊಂದನ್ನು ಮಾಡುತ್ತಿದ್ದೇನೆ ಎನ್ನುವ ಭಾವನೆಗಳು ಪ್ರತಿ ಅರ್ಪಣೆಯ ಪುಟಗಳಲ್ಲೂ ನಿಧಾನವಾಗಿಯಾದರೂ ಸ್ಪುರಿಸುತ್ತಿರುತ್ತವೆ.

ಜೆ.ಡಿ ಸ್ಯಾಲಿಂಜರ್ ಬರೆದಿದ್ದು ಕೆಲವೇ ಕೃತಿಗಳು. ಬರೆಯಬೇಕು ಎಂದುಕೊಂಡವನಿಗೆ ಮಾತಿನ ಅಗತ್ಯವಾದರೂ ಏನು ಎನ್ನುವಂತೆ ಬದುಕಿದ ಅನಾತ್ಮ ಅವನು. ತನ್ನ ಒಂದೇ ಒಂದು ಪುಸ್ತಕದಿಂದ ವಿಶ್ವಮಾನ್ಯತೆ ಗಳಿಸಿದ ಅವನು ದಿನ ಕಳೆದಂತೆ ಒಂಟಿಯಾಗಿಯೇ ಉಳಿದುಹೋದವನು. ಪತ್ರಿಕಾ ಸಂದರ್ಶನ, ರೇಡಿಯೋ ಕಾರ್ಯಕ್ರಮಗಳು, ಓದುಗರ ವಯಕ್ತಿಕ ಭೇಟಿಗಳಿರಲಿ, ಅವನ ಮನೆಯವರಿಂದಲೂ ದೂರವಾಗಿ ಅಕ್ಷರಶಃ ಒಂಟಿಯಾಗಿ ಉಳಿದುಹೋದವನು ಸ್ಯಾಲಿಂಜರ್.

ಕೇವಲ ವಿರಕ್ತಿಯಂತಹ ಮೌನ. ದೀರ್ಘವಾದ ಬಿಡುವು. ರುಚಿಗೆ ತಕ್ಕಷ್ಟು ಉಪ್ಪು ಎನ್ನುವಂತೆ ಅಗತ್ಯ ಎನಿಸಿದಾಗಷ್ಟೇ ಬರವಣಿಗೆ. ಇವುಗಳನ್ನಷ್ಟೇ ನಂಬಿಕೊಂಡು ಬದುಕಿದ ಸ್ಯಾಲಿಂಜರ್ 1953ರಲ್ಲಿ ಶೆರ್ಲಿ ಬ್ಯಾನಿ ಎನ್ನುವ ಪುಟ್ಟ ಹುಡುಗಿಯ ಸ್ಕೂಲ್ ಮ್ಯಾಗಜೈನ್‍ಗೆ ಸಂದರ್ಶನ ನೀಡಿದ್ದ. ಅದೊಂದು ಸಂದರ್ಶನ ಮತ್ತಷ್ಟು ಪ್ರಸಿದ್ದಿ ತಂದಿದ್ದರಿಂದ ಆದಾದ ನಂತರ ಅಂತಹ ಕೆಲಸಗಳಿಂದ ದೂರವೇ ಉಳಿದುಹೋದ, ಮತ್ತಾರಿಗು ಕಾಣಿಸಲೂ ಇಲ್ಲ. ಹೀಗೆ ನಿಗೂಢವಾಗಿ ಬದುಕಿದ ಸ್ಯಾಲಿಂಜರ್ ತನ್ನ ಸಾವನ್ನೂ ನಿಗೂಢವಾಗಿಸಿಕೊಂಡಿದ್ದ. ತನ್ನ 93ನೇ ವಯಸ್ಸಿಗೆ ತೀರಿಹೋದ ಸ್ಯಾಲಿಂಜರ್‍ನಂತಹ ಅದ್ಬುತ ಲೇಖಕನ ಸಾವು ಅಷ್ಟು ದೊಡ್ಡ ಸುದ್ದಿಯಾಗಲಿಲ್ಲ. ಅವನ ಸಾವು ಕೂಡ ಅವನ ಮೌನದಷ್ಟೇ ಕಿರಿದಾಗಿ ಸರಿದುಹೋಗಿತ್ತು.

ಹೀಗೆ ಎಲ್ಲವನ್ನು ಎಲ್ಲರನ್ನು ಧಿಕ್ಕರಿಸಿದವರಂತೆ ಬದುಕಿದ, ಬರೆದ ಸ್ಯಾಲಿಂಜರ್ ತನ್ನ “ಕ್ಯಾಚರ್ ಇನ್ ದಿ ರೈ” ಪುಸ್ತಕವನ್ನ ‘ಟು ಮೈ ಮದರ್’ ಎಂದು ಅರ್ಪಿಸಿಕೊಂಡಿದ್ದಾನೆ. ಸ್ಯಾಲಿಯಂಜರ್‍ನಂತಹ ಘನಮೌನಿಯೊಳಗೂ ಅವನ ಅಮ್ಮ ಅದೆಷ್ಟು ಗಾಢವಾದ ಗುರುತುಗಳನ್ನು ಉಳಿಸಿರಬಹುದು!. ಹೀಗೆ ಒಂಟಿಯಾಗಿಯೇ ಉಳಿದುಹೋಗುತ್ತೇನೆ ಎಂದುಕೊಂಡಿದ್ದ ಸ್ಯಾಲಿಂಜರ್ ಹಾಗಾದರೆ ಅವನಮ್ಮನ ಕುರಿತು ಅದೆಷ್ಟು ಯೋಚಿಸರಬಹುದು? ಸ್ಯಾಲಿಂಜರ್ ಎಳೆಯ ಮಗುವಾಗಿದ್ದ ಅವನ ಎಳೆಯ ಬೆರಳುಗಳನ್ನು ಹಿಡಿದು ನಡಿಗೆ ಕಲಿಸಿರಬಹುದಾದ ಅವನ ಅಮ್ಮನ್ನನ್ನ ಅರ್ಪಣೆ ಪುಟದವರೆಗೂ ಕರೆದುತಂದ ಅವನ ಆಲೋಚನೆಗಳು ಏನಿರಬಹುದು. ಹೀಗೆ ಅವನಮ್ಮನನ್ನ ತನ್ನ ಪುಸ್ತಕದ ಮಿತಿಯಾದ ಅರ್ಪಣೆಯ ಪುಟದ ಒಂದು ಮೂಲೆಯಲ್ಲಿ ನೆನೆದುಕೊಂಡಿದ್ದು, ಅವನದೇ ಅಸ್ತಿತ್ವವನ್ನು ಕಂಡುಕೊಳ್ಳಲು ಯತ್ನಿಸಿದ ಪ್ರಯತ್ನದಂತೆ ಕಾಣುವುದಿಲ್ಲವೇ?

ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ತಮ್ಮ “Anticipating India” ಕೃತಿಯನ್ನ ಅವರು ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಎಕ್ಸ್ಪ್ರೆಸ್ ಗ್ರೂಪ್‍ನ ಪಬ್ಲಿಷರ್ ಆಗಿದ್ದ ವಿವೇಕ್ ಗೋಯಂಕ ಅವರಿಗೆ ಅರ್ಪಿಸಿದರೆ, ರಾಣಾ ಅಯೂಬ್ ತಮ್ಮ “Gujarat Files” ಪುಸ್ತಕವನ್ನ ಮುಕುಲ್ ಸಿನ್ಹಾ ಹಾಗೂ ಶಹೀದ್ ಅಜ್ಮಿಗೆ ಅರ್ಪಿಸಿದ್ದಾರೆ. ಇಲ್ಲಿಯೂ ಕೃತಜ್ಞತ ಭಾವನೆಗಳೇ ಹೊರಜಾರಿವೆ. ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ವಿಶ್ಲೇಷಣೆ ಮಾದರಿಯ ಲೇಖನಗಳನ್ನ ಬರೆಯಲು ಯಾವತ್ತಿಗೂ ತೊಡಕಾಗದಕ್ಕೆ ಕೃತಜ್ಞಪೂರ್ವಕವಾಗಿ ಈ ಪುಸ್ತಕ ಎಂದು ಗುಪ್ತಾ ಹೇಳಿಕೊಂಡರೆ, ರಾಣಾ ಅಯೂಬ್ ಪತ್ರಿಕೋದ್ಯಮದಂತ ರಣಾಂಗಣಕ್ಕಿಳಿಯಲು ನನ್ನೊಳಗೆ, ಹೋರಾಟದ ಕಿಚ್ಚು ಹಚ್ಚಿದ ಮುಕುಲ್ ಹಾಗೂ ಶಹೀದ್‍ಗೆ ಈ ಪುಸ್ತಕ ಎಂದಿದ್ದಾರೆ.

ಇಡೀ ಪುಸ್ತಕದ ತುಂಬೆಲ್ಲಾ, ಫೇಕ್ ಎನ್‍ಕೌಂಟರ್, ರಾಜಕೀಯ, ಚುನಾವಣೆ, ಯಾವುದೋ ಹಗರಣದ ಕುರಿತು ಈ ಇಬ್ಬರೂ ಮಾತನಾಡಿದ್ದಾರೆ. ಹೀಗೆ ಮಾತನಾಡುವಾಗ ತಮ್ಮದೇ ಕಠಿಣ ನಿಲುವು, ಅಭಿಪ್ರಾಯ ಹಾಗೂ ವಾದಗಳನ್ನೂ ಮಂಡಿಸುತ್ತಾರೆ. ಆಗೆಲ್ಲಾ ಅವರಿಬ್ಬರು ಕೇವಲ ಅವರೊಳಗಿನ ಬೌದ್ಧಿಕ ಸಾಮಾಗ್ರಿಗಳನ್ನು ಮಾತ್ರ ಹೊಂದಿರುವ ಪತ್ರಕರ್ತರಂತೆ ಕಾಣಬಹುದು. ಅದೇ ಅದೊಂದು ಅರ್ಪಣೆಯ ಪುಟವನ್ನ ನಿಧಾನವಾಗಿ ತೆಗೆದು ಗೋವಿನ ಕೊರಳ ತುರಿಸುವಂತೆ ಅರ್ಪಣೆಯ ಪುಟದ ಹಾಳೆಯ ಮೇಲೆ ತಮ್ಮ ಬೆರಳುಗಳನ್ನು ಹಿಡಿದಾಡಿಸುವಾಗ ಇಬ್ಬರೂ ಮಗುವಿನಂತಾಗಿಬಿಟ್ಟರೇನೋ ಅನಿಸುತ್ತದೆ. ಇಬ್ಬರೂ ಅದು ತಮಗಷ್ಟೇ ತಿಳಿದವರ ಸತ್ಯ ಎಂದಕೊಳ್ಳುತ್ತಲೇ ಆವರೆಗೂ ಕಾಪಡಿಕೊಂಡಿದ್ದ ಸಾರಂಶವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಅದೊಂದು ಪುಟವನ್ನು ಬಳಸಿಕೊಳ್ಳುತ್ತಾರೆ.

ಇದಷ್ಟೇ ಅಲ್ಲ. ಪುಸ್ತಕದೊಳಗಿನ ಅರ್ಪಣೆಯ ಪುಟಗಳು ನೋವು, ವಿರಹಕ್ಕೂ ಹಾಗೂ ಸಂತೋಷಕ್ಕೂ ಸೀಮಿತವಾಗಿವೆ. ದೇವನೂರು ಮಹಾದೇವ ತಮ್ಮ “ಎದೆಗೆ ಬಿದ್ದ ಅಕ್ಷರ” ಪುಸ್ತಕವನ್ನ “ಸಮಾನತೆ ಉಸಿರಾಡುವ ಜೀವಿಗಳ ಪಾದಗಳಿಗೆ” ಅರ್ಪಿಸಿದ್ದಾರೆ. ಇಡೀ ಪುಸ್ತಕದ ತುಂಬಾ ಶೋಷಣೆ, ಜಾತಿ ಪದ್ದತಿ ಹೀಗೆ ನೋವು ಹಾಗೂ ಅಸಮಾನತೆಯನ್ನೇ ಮಾತನಾಡಿದ ಅವರು ಅರ್ಪಣೆಯ ಪುಟದಲ್ಲಿ ಅವರ ಸಹಜ ವ್ಯಕ್ತಿತ್ವ ಸೂಟಿಯಾಗದ ಮತ್ತಾವುದಕ್ಕೋ ಅರ್ಪಿಸಿ ಸುಳ್ಳಾಗುವುದು ಹೇಗೆ? ದೇವನೂರು ಸ್ವಪಜ್ಞೆಯಿಂದ ಹಠ ಹಿಡಿದು ಮತ್ತಾರಿಗೋ ಮತ್ತಾವುದಕ್ಕೋ ಅರ್ಪಿಸಬಹುದು ಆದರೆ ಅಸಲಿಯಾಗಿ ನೋವು, ಅವಮಾನಗಳನ್ನು ಕಂಡು, ಅನುಭವಿಸಿದ ಅವರೊಳಗಿನ ಲೇಖಕ ಪುಸ್ತಕವನ್ನ “ಸಮಾನತೆ ಉಸಿರಾಡುವ ಜೀವಿಗಳ ಪಾದಗಳಿ”ಲ್ಲದೆ ಮತ್ತೆ ಏನನ್ನೂ ನೆನೆಯಲಾರ.ಪಾಕಿಸ್ತಾನದ ಮಿಲಿಟರಿ ಆಡಳಿತಕ್ಕೆ ಬಲಿಯಾಗಿ ಪ್ರಾಣ ತೆತ್ತಿದ ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಆಲಿ ಭುಟ್ಟೋ ಪುತ್ರಿ ಬೆನಜಿರ್ ಭುಟ್ಟೋ ತಮ್ಮ ಆತ್ಮಕತೆ “ಡಾಟರ್ ಆಫ್ ದಿ ಈಸ್ಟ್” ಪುಸ್ತಕವನ್ನ “ In loving memories of my father, My brother, and all those who lost their lives in opposing General Zia’s Martial law in Pakistan”

ಅರ್ಪಿಸಲು ಮೊದಲೇ ನಿರ್ಧರಿಸಿಕೊಂಡಿದ್ದರಂತೆ. ಅಷ್ಟು ಅಕ್ಕರೆಯಿಂದ ಕಂಡ ತಂದೆ ತಾನು ಸಭಲವಾಗಿದ್ದ ದಿನಗಳಲ್ಲೇ ಗಲ್ಲಿಗೇರಿದ್ದನ್ನ ಕಂಡವಳು ಬೆನಜಿರ್. ಇದಾದ ಕೆಲವೇ ದಿನಗಳಲ್ಲಿ ತನ್ನ ಆತ್ಮಕತೆಯನ್ನ ಅಂದುಕೊಂಡಂತೆ ಪ್ರಕಟಿಸಿದ್ದಳು. ಇಡೀ ದಿನ ತಂದೆಯನ್ನೇ ಧ್ಯಾನಿಸುವ ಮಗಳಾದ ಬೆನಜಿರ್ ತನ್ನ ಆತ್ಮಕತೆಯನ್ನ “ In loving memories of my father, My brother, and all those who lost their lives in opposing General Zia’s Martial law in Pakistan” ಸೀಮಿತವಾಗಿಸಿದ್ದಳು.

ಅದೊಂದು ಅರ್ಪಣೆಯ ಪುಟದಲ್ಲೇ ಬೆನಜಿರ್ ತನ್ನ ಇಡೀ ಆಂತರ್ಯವನ್ನ ತೆರೆದಿಟ್ಟ ಬಟಾಬಯಲಾಗಿಸಿದ್ದಳು. ತನ್ನ ನಿಲುವುಗಳು ಏನು ಎನ್ನುವುದನ್ನೂ ಸಾಭೀತುಮಾಡಿದ್ದಳು. ವಿಶೇಷ ಎಂದರೆ ಬೆನಜಿರ್ ತನ್ನ ಆತ್ಮಕತೆಯಲ್ಲಿ ವಿರೋಧಿಸಿದವರನ್ನ ತನ್ನ ಬದುಕಿನುದಕ್ಕೂ ವಿರೋಧಿಸುತ್ತಲೇ ಬಂದಳು. ಹಾಗಾದರೆ ಅದೊಂದು ಅರ್ಪಣೆಯ ಪುಟ ಬೆನಜಿರ್ ನ ಅಂತರಾತ್ಮದ ಸತ್ಯದಂತೆ ಕಾಣುವುದಿಲ್ಲವೇ.

ಈ ಅರ್ಪಣೆಯ ಪುಟಗಳು ಯಾರು ಬೇಕಾದರೂ ಪ್ರವೇಶಿಸಬಹುದಾದಂತಹ ಖಾಸಗಿ ಕೊಠಡಿಗಳು. ದಿವ್ಯಕಾಂತಿಯ ಘಮಲನ್ನು ಸೂಸುತ್ತಲೆ ಇರುವ ಆ ಖಾಸಗಿ ಕೊಠಡಿಯೊಳಗೆ ಪ್ರವೇಶ ಪಡೆದವರು ಘಮಲನ್ನ ಸಾಲಗಾರರಂತೆ ಪಡೆದು ಅಲ್ಲಿನ ಖಾಸಾಗಿತನವನ್ನ ಹಾಗೇ ಉಳಿಸುವುದು ಓದುಗನ ಪ್ರಾಮಾಣಿಕ ಸಂಕೇತ.

ಕಾಯ್ಕಿಣಿ, ಸ್ಯಾಲಿಂಜರ್, ಶೇಖರ್ ಗುಪ್ತಾ, ಅಯೂಬ್ ಮಹಾದೇವರು ಒಂದಿಷ್ಟು ಉದಾಹರಣೆಯಷ್ಟೇ. ನಮ್ಮಗಳ ಪುಸ್ತಕದ ಕಪಾಟು ಜಾಲಾಡುತ್ತ, ಓದಿದ ಲೇಖಕರ ಅರ್ಪಣೆಯ ಪುಟಗಳ ಮೇಲೆ ಕಣ್ಣಾಡಿಸಿದರೆ, ಅವರ ದೆಸೆಯಿಂದಲೇ ಮತ್ತೊಂದು ಲೋಕಕ್ಕೆ ಹಾರಿಬಿಡಲೂಬಹುದು. ಓದುಗ ಅಸೂಕ್ಷ್ಮನಾಗಿ ಎದುರಾಗುವ ಅವಕಾಶವನ್ನ ತಪ್ಪಿಸಿಕೊಳ್ಳಬಾರದು ಅಷ್ಟೇ.

3 comments

  1. “ಪಾಪ ನಿವೇದನೆಯ ಕೊಠಡಿ” ತುಂಬಾ ಒಳ್ಳೆ ಶೀರ್ಷಿಕೆ ಸಂದೀಪ್

  2. ಸೂಕ್ಷ್ಮ ಒಳನೋಟ ನೀಡುವ ಉತ್ತಮವಾದ ಲೇಖನ. ತುಂಬ ಮೆಚ್ಚುಗೆಯಾಯ್ತು.
    ಚಂದ್ರ ಐತಾಳ

Leave a Reply