ನನ್ನ ಕಣ್ಣೆದುರು ನರಗುಂದ ಬಂಡಾಯ..

ಜಿ ಎನ್ ನಾಗರಾಜ್ 

ಕರ್ನಾಟಕದ ರೈತ ಚಳುವಳಿಯ ಹೊಸ ಅಲೆಯನ್ನು ಎಬ್ಬಿಸಿದ ನರಗುಂದ, ನವಲಗುಂದ ರೈತ ಬಂಡಾಯ,
ನನ್ನ ಬದುಕನ್ನು ಗುರುತು ಸಿಗದಂತೆ ಬದಲಿಸಿದ ಹೋರಾಟ.

“ರೈತರು ಬರುವರು ದಾರಿಬಿಡಿ, ರೈತರ ಕೈಗೆ ರಾಜ್ಯ ಕೊಡಿ .”
“ಈಗ ಮಾಡೀವಿ ಆರಂಭ, ವಿಧಾನಸೌಧದಿ ರಣಗಂಭ ”
“ಸರೀ ಸರೀ ಸರಿ ಹಿಂದಕ್ಕ, ಸಾಗಿ ಬರುತೇವಿ ಮುಂದಕ್ಕ.”
ಇವು ಆ ಹೋರಾಟದ ಸ್ಫೂರ್ತಿಯುತ ಘೋಷಣೆಗಳು.

1980 ಜುಲೈ 21, ನರಗುಂದ, ನವಲಗುಂದ, ಸವದತ್ತಿಗಳಲ್ಲಿ ಬಂದ್.

ಅಂದಿನಿಂದ ಉಕ್ಕೇರಿತು ಇಡೀ ರಾಜ್ಯದಲ್ಲಿ ಎಲ್ಲೆಂದರಲ್ಲಿ ರೈತ ಚಳುವಳಿಗಳು. ಇಂದೇ ವಾರದಲ್ಲಿ ನೂರಾರು ತಾಲ್ಲೂಕು ಕೇಂದ್ರಗಳಲ್ಲಿ ಒಂದೇ ಬಾರಿಗೆ ರೈತರ, ಇತರರ ಜನರ ಚಳುವಳಿಗಳು. ಲಾಠೀ ಚಾರ್ಜ್‌ಗಳು, ಹತ್ತಾರು ಕಡೆ ಗುಂಡೇಟಿನಿಂದ 25ಕ್ಕಿಂತ ಹೆಚ್ಚು ರೈತರ ಹತ್ಯೆಗಳು.

ಇವುಗಳ ಪರಿಣಾಮವಾಗಿ ಈ ಹೋರಾಟದ ನೇತೃತ್ವ ವಹಿಸಿದ್ದ 1957 ರಲ್ಲಿ ಸ್ಥಾಪಿತವಾದ ಕರ್ನಾಟಕ ಪ್ರಾಂತ ರೈತ ಸಂಘದ ವಿಸ್ತರಣೆ. ಹೊಸ ಜಿಲ್ಲೆಗಳಿಗೆ. ಕರ್ನಾಟಕ ರಾಜ್ಯ ರೈತ ಸಂಘದ ಸ್ಥಾಪನೆ. ದಿಢೀರ್ ಬೆಳವಣಿಗೆ.

ಈ ಹೋರಾಟದ ದಿನ ನರಗುಂದದಲ್ಲಿ ತಹಸೀಲ್ದಾರ್ ಕಛೇರಿಯನ್ನೇ ಸುಟ್ಟು ಹಾಕಿದರು. ಅಂದೇ ಇಬ್ಬರು ರೈತರ ಹತ್ಯೆ. ರಾಜ್ಯದಾದ್ಯಂತ ಎದ್ದ ಹೋರಾಟದ ಅಲೆ ಗುಂಡೂರಾವ್ ಸರ್ಕಾರವನ್ನು ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲ್ಲಾಡಿಸಿತು.

ಗುಂಡೂರಾವ್ ತಡಬಡಾಯಿಸಿ ರೈತರ ಮುಖ್ಯ ಬೇಡಿಕೆ ಬೆಟರ್‌ಮೆಂಟ್ ಲೆವಿ ರದ್ದು ಮಾಡಿದ್ದು ಮಾತ್ರವಲ್ಲದೆ ಮತ್ತೆ ಹತ್ತಾರು ಒತ್ತಾಯಗಳನ್ನು ಈಡೇರಿಸಿದರು. ಕೆಂಪೇಗೌಡ ನ್ಯಾಯಾಂಗ ಆಯೋಗದ ತನಿಖೆ, ಶಾಸಕಾಂಗ ಜಂಟಿ ಸಮಿತಿ ಹೀಗೆ ಹಲವಾರು ಕ್ರಮಗಳು. ವಿಧಾನಸಭೆಯಲ್ಲಿ ಹಲವಾರು ದಿನಗಳ ಚರ್ಚೆ. ವಿರೋಧ ಪಕ್ಷಗಳ ಧರಣಿ ಸತ್ಯಾಗ್ರಹ.

ಇಲ್ಲೊಂದು ಐತಿಹಾಸಿಕ ವ್ಯಂಗ್ಯ ಎಂದರೆ ಈ ಎಲ್ಲ ಹೋರಾಟಗಳ ಫಲ, ಈ ಹೋರಾಟಗಳಲ್ಲಿ ಯಾವುದೇ ರೀತಿ ಭಾಗವಹಿಸದೇ ಪ್ರೇಕ್ಷಕನಾಗಿದ್ದ ಜನತಾದಳ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತು.

ಈ ಹೋರಾಟದ ಎಲ್ಲ ಹಂತಗಳ ನಾನು ಕಣ್ಣಾರೆ ಕಂಡ ಹೋರಾಟ. ನನ್ನ ಭವಿಷ್ಯವನ್ನು ಬದಲಿಸಿದ ಹೋರಾಟ.

* ಈ ಹೋರಾಟದ ಬಗೆಗೆ ಅದನ್ನು ಮೊದಲು ಆರಂಭಿಸಿದ ಸೊಪ್ಪಿನ್‌ರವರ ಅನುಭವದ ಬರಹ,
* ಈ ಹೋರಾಟಕ್ಕೆ ಮಾದರಿ ಮತ್ತು ಮಾರ್ಗದರ್ಶಿಯಾದ ಭಕ್ರಾ ನಂಗಲ್ ನೀರಾವರಿ ರೈತರ ಬೆಟರ್‌ಮೆಂಟ್ ಲೆವಿ ವಿರುದ್ಧದ ಹೋರಾಟದ ಬಗ್ಗೆ ಅದರ ನೇತೃತ್ವ ವಹಿಸಿದ್ದ ಪ್ರಸಿದ್ಧ ರೈತ ನೇತಾರ , ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಹರ್ಕಿಷನ್ ಸಿಂಗ್ ಸುರ್ಜೀತ್‌ರವರ ಕಿರು ಪುಸ್ತಿಕೆ.
* ಮಲಪ್ರಭಾ ರೈತರ ಮೇಲಿನ ದಬ್ಬಾಳಿಕೆಯ ಬಗ್ಗೆ ನೇಮಕವಾದ ಕೆಂಪೇಗೌಡ ನ್ಯಾಯಾಂಗ ಆಯೋಗದ ತನಿಖಾ ವರದಿ. ಒಂದು ಅಮೂಲ್ಯ ಆಕರ.
* ಗುಂಡೂರಾವ್ ಸರ್ಕಾರ ರೈತರಿಗೆ ವಿವಿಧ ಪರಿಹಾರಗಳನ್ನು ಘೋಷಿಸಿ ಹೊರಡಿಸಿದ ಶ್ವೇತ ಪತ್ರ. ಮತ್ತೊಂದು ಮುಖ್ಯ ಆಕರ.
ಇಲ್ಲಿ ನಿಮ್ಮ ಮುಂದೆ.

Leave a Reply