ಈಕೆಯ ಮದುವೆಯೂ ‘ಸ್ಫೂರ್ತಿ’

ಜಗದೀಶ್ ಕೊಪ್ಪ 

ಗೆಳೆಯರೇ, ಇದು ನನ್ನ ಪಾಲಿಗೆ ಭಾವನಾತ್ಮಕ ವಿಷಯ. ಭಾವುಕತೆಗೆ ಕ್ಷಮೆಯಿರಲಿ.

ನಮ್ಮ ಹುಡುಗಿ, ನಮ್ಮ ಕಣ್ಣ ಮುಂದೆ ಬೆಳೆದ ಕೂಸು ಹರವು ಸ್ಪೂರ್ತಿ ಎಂಬ ಪ್ರಜಾವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತೆ ಹಾಗೂ ಕವಯತ್ರಿ ಮುಂದಿನ ವಾರ ಸರಳ ವಿವಾಹದ ಮೂಲಕ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾಳೆ.

ಮುವತ್ತು ವರ್ಷಗಳ ಹಿಂದೆ ಅದ್ದೂರಿ ಮದುವೆ, ಹಾಗೂ ಹೀರೊ ಹೊಂಡ ಬೈಕ್ ಮತ್ತು ಬಜಾಜ್ ಸ್ಕೂಟರ್ ಗಳನ್ನು ಮದುವೆ ಚಪ್ಪರದಲ್ಲಿ ಪ್ರದರ್ಶನಕ್ಕೆ ಇಟ್ಟು ವಿವಾಹ ಮಾಡುತ್ತಿದ್ದ ವೈಖರಿಯನ್ನು ಪ್ರತಿಭಟಿಸಿ ನನ್ನ ತಲೆಮಾರಿನ ಅನೇಕ ಗೆಳೆಯರು ಮತ್ತು ನಾನೂ ಸೇರಿದಂತೆ, ತಿಥಿ, ನಕ್ಷತ್ರ, ರಾಹುಕಾಲ, ಗೂಳಿಕಾಲ, ಪುರೋಹಿತ ಮತ್ತು ಅದ್ದೂರಿತನವನ್ನು ವಿರೋಧಿಸಿ ಸರಳವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದೆವು.

ಅಪ್ಪ ಮಗಳು

ಅಪ್ಪ ಮಗಳು

ಮಂಡ್ಯ ಜಿಲ್ಲೆಯಲ್ಲಿ ರೈತ ಸಂಘಟನೆಯ ಮೂಲಕ ಇಂತಹ ಸಾವಿರಾರು ವಿವಾಹಗಳು ನೆರವೇರುವುದರ ಮೂಲಕ ಇಡೀ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಮಾದರಿಯಾಗಿತ್ತು.

ಈಗ ಅದೇ ಜಿಲ್ಲೆಯಲ್ಲಿ ಅಸಹ್ಯ ಮಾತ್ರವಲ್ಲ, ವಾಕರಿಕೆ ಬರುವ ಹಾಗೆ ವೈಭೋಗದ ವಿವಾಹಗಳು, ಬೀಗರ ಊಟದ ಕಾರ್ಯಕ್ರಮಗಳು ಜರುಗುತ್ತಿವೆ. ವಿವಾಹಕ್ಕೆ ಮುನ್ನ ಹುಡುಗ ಹುಡುಗಿಯನ್ನ ಊಟಿ, ಮೈಸೂರು ಮುಂತಾದ ಕಡೆ ಕರೆದೊಯ್ದು ವೀಡಿಯೋ ಶೂಟಿಂಗ್ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.

ಕಲ್ಯಾಣ ಮಂಟಪದಲ್ಲಿ ಇದನ್ನು ವಿವಾಹದ ದಿನ ಪ್ರದರ್ಶಿಸಲಾಗುತ್ತದೆ. ಜೊತೆಗೆ ಈಗ ಮದುವೆ ಮನೆಯಲ್ಲಿ ಗಂಡು ಹೆಣ್ಣಿನ ಮುಖ ನೋಡುವ ಬದಲು ಫೋಟೋಗ್ರಾಫರ್ ಹಾಗೂ ವೀಡಿಯೊಗ್ರಾಪರ್ ಗಳನ್ನೇ ನೋಡುವಂತಾಗಿದೆ. ಇವರುಗಳ ಜೊತೆಗೆ ಮೊಬೈಲ್ ವೀರರು ಮತ್ತು ವನಿತೆಯರ ಕಾಟ ಬೇರೆ.

ಹಾಗಾಗಿ ಕಳೆದ ಎಂಟತ್ತು ವರ್ಷಗಳಿಂದ ವಿವಾಹ ಕಾರ್ಯಕ್ರಮಗಳಿಂದ ದೂರ ಉಳಿದಿದ್ದೇನೆ.ಇದಕ್ಕೆ ಪ್ರತಿ ಉತ್ತರ ಎಂಬಂತೆ ನನ್ನ ಮಿತ್ರ ಹರವು ದೇವೇಗೌಡರು ತಮ್ಮ ಪುತ್ರಿಯ ವಿವಾಹವನ್ನು ಸರಳ ವಿವಾಹದ ಮೂಲಕ ಮಾಡುವುದರ ಮೂಲಕ ನಂದಿ ಹೋಗಿದ್ದ ಕ್ರಾಂತಿಯ ದೀಪಕ್ಕೆ ಮತ್ತೆ ಬೆಳಕನ್ನು ಹಚ್ಚುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಹರವು ಗ್ರಾಮದ ತಮ್ಮ ಮನೆಯಲ್ಲಿ ಕವಿಗೋಷ್ಟಿ, ಮತ್ತು ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ ದೇವೇಗೌಡರ ಮನೆಗೆ ಮಂಡ್ಯ ಮತ್ತು ಮೈಸೂರಿನಿಂದ ನಾವು ಅನೇಕ ಗೆಳೆಯರು ಲಗ್ಗೆ ಹಾಕುತ್ತಿದ್ದವು. ಪುಟ್ಟ ಕೂಸಾಗಿದ್ದ ಸ್ಪೂರ್ತಿ ನಮ್ಮಗಳ ತೊಡೆಯ ಮೇಲೆ ಕುಳಿತು ಆಡಿ ಬೆಳೆದ ಹೆಣ್ಣುಮಗಳು.

ಇದೀಗ ಹೆಸರನಿಂದ ಮಾತ್ರವಲ್ಲದೆ, ಕ್ರಿಯೆಯಿಂದ ಕೂಡ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ. ಈ ಮಗಳ ಬದುಕು ಸುಖಮಯವಾಗಿರಲಿ ಎಂದು ನನ್ನ ಹಾರೈಕೆ. ಈಕೆಯ ವಿವಾಹಕ್ಕೆ ಹಾಜರಾಗುವುದು ನನ್ನ ನೈತಿಕ ಕರ್ತವ್ಯ ಎಂದು ಭಾವಿಸಿದ್ದೀನಿ.

ಇಂತಹ ದಿಟ್ಟ ಹೆಜ್ಜೆಯನ್ನಿಟ್ಟ ವಧು- ವರರ ಪೋಷಕರು ನಿಜಕ್ಕೂ ಅಭಿನಂದನಾರ್ಹರು.

2 comments

  1. It takes lot of will power to conduct such simple marriage in these days of glamour and exhibitionism. Wish the Bride and Groom a loving and cheerful life

Leave a Reply