ಎದುರಿಸಿ, ನನ್ನ ಜನರೇ, ಅವರನ್ನು ಎದುರಿಸಿ..

ದರಿನ್ ಟೌಟರ್ (೩೩) , ಪ್ಯಾಲೇಸ್ಟಿನಿಯಾದ ಕವಿ, ಫೋಟೋಗ್ರಾಫರ್ ಮತ್ತು ಹೋರಾಟಗಾರ್ತಿ.

ಇತ್ತೀಚಿಗೆ ಜೆನೆಟಿಕ್ ಇಂಜಿನಿಯರ್ ವಿದ್ಯಾರ್ಥಿನಿ, ಮೂರು ಮಕ್ಕಳ ತಾಯಿ ಇಸ್ರಾ ಅಬೆಡ್ ಳನ್ನು ಹಾಡಹಗಲೇ ಬಸ್ ಸ್ಟಾಂಡ್ ನಲ್ಲಿ ಸೈನಿಕರು ಸುತ್ತುವರೆದು ಘೋರವಾಗಲಿ ಗುಂಡಿನ ಮಳೆಗರೆದು ಕೊಂದ ವಿಡಿಯೋ ವೈರಲ್ ಆಗಿತ್ತು.

ದರಿನ್ ಅದನ್ನು ತನ್ನ ಫೇಸ್ ಬುಕ್ ನಲ್ಲೂ ಹಾಕಿ ಖಂಡಿಸಿದ್ದಳು ಮತ್ತು “ಮುಂದಿನ ಹುತಾತ್ಮಳೂ ನಾನೇ” ಎಂದು ಬರೆದಿದ್ದಳು. ಅಲ್ಲದೆ ಅವಳು ಬರೆದು ಪ್ರಸ್ತುತಪಡಿಸಿದ ಕವನ ಕೂಡಾ ವೈರಲ್ ಆಗಿತ್ತು.

ಹಾಗಾಗಿ ಅವಳನ್ನು ಕೈದು ಮಾಡಿ ಜೈಲಿಗೆ ಕಳಿಸಿದೆ.

ದರಿನ್ ಟೌಟರ್

ಕನ್ನಡಕ್ಕೆ : ಪ್ರತಿಭಾ ನಂದಕುಮಾರ್ 

ಎದುರಿಸಿ , ನನ್ನ ಜನರೇ, ಅವರನ್ನು ಎದುರಿಸಿ
ಜೆರುಸಲೇಮ್ ನಲ್ಲಿ ನಾನು ನನ್ನ ಗಾಯಗಳಿಗೆ ಪಟ್ಟಿ ಕಟ್ಟಿ
ನನ್ನ ನೋವುಗಳನ್ನು ಉಸಿರಾಡಿದೆ
ನನ್ನ ಹಿಡಿಯೊಳಗೆ ಆತ್ಮವನ್ನು ಬಚ್ಚಿಟ್ಟುಕೊಂಡೆ.
ಅರಬ್ ಪ್ಯಾಲೇಸ್ಟಿನಿಗಾಗಿ
“ಶಾಂತಿಯುತ ಸಂಧಾನ” ದ ಕುತಂತ್ರಕ್ಕೆ ನಾನು ಬಲಿಯಾಗಲಾರೆ
ನನ್ನ ಬಾವುಟವನ್ನು ಎಂದಿಗೂ ನೆಲಕ್ಕಿಳಿಸಲಾರೆ
ಅವರನ್ನು ನನ್ನ ನೆಲದಿಂದ ಹೊರದೂಡುವವರೆಗೂ
ಮುಂಬರುವ ದಿನಗಳಿಗಾಗಿ ಅವರನ್ನು ಪಕ್ಕಕ್ಕೆಸೆಯುತ್ತೇನೆ
ವಿರೋಧಿಸಿ ನನ್ನ ಜನರೇ ಅವರನ್ನು ವಿರೋಧಿಸಿ
ವಲಸೆ ಬಂದವರ ಕಳ್ಳತನವನ್ನು ವಿರೋಧಿಸಿ
ಹುತಾತ್ಮರ ಮೆರವಣಿಗೆಯನ್ನು ಹಿಂಬಾಲಿಸಿ

ನಾಚಿಕೆಗೇಡಿನ ಸಂವಿಧಾನವನ್ನಿ ಹರಿದೆಸೆಯಿರಿ
ಅವನತಿಯನ್ನು, ಅವಮಾನವನ್ನು ಹೇರಿ
ನಮಗೆ ನ್ಯಾಯ ಸಿಗದಂತೆ ಮಾಡಿದೆ ಅದು.
ಮುಗ್ಧ ಮಕ್ಕಳನ್ನು ಬೆಂಕಿಗೆಸೆದರು ಅವರು
ಹದಿಲ್ ಳನ್ನು ಬಹಿರಂಗವಾಗಿ ಹಾಡಹಗಲಲ್ಲೇ
ಗುಂಡಿಕ್ಕಿ ಕೊಂದರು.
ವಿರೋಧಿಸಿ ನನ್ನ ಜನರೇ  ವಿರೋಧಿಸಿ
ವಸಾಹತುಶಾಹಿಗಳ ಆಕ್ರಮಣವನ್ನು ವಿರೋಧಿಸಿ
ನಮ್ಮ ನಡುವೆಯೇ ಬಿಟ್ಟಿರುವ ಅವನ ಗೂಢಚಾರಿ
ನಮಗೆ ಶಾಂತಿಯ ಭ್ರಮೆ ಹುಟ್ಟಿಸುತ್ತಾನೆ
ಅವನನ್ನು ನಂಬದಿರಿ
ಸಂಶಯದ ನಾಲಿಗೆಗೆ ಬೆದರದಿರಿ
ನಿಮ್ಮ ಎದೆಯೊಳಗಿನ ಸತ್ಯ ಹೆಚ್ಚು ಶಕ್ತಿಯುತ
ಧಾಳಿ ವಿಕ್ರಮಗಳನ್ನು ಕಂಡುಬಾಳಿದ ನಮ್ಮ ನೆಲದಲ್ಲಿ
ವಿರೋಧಿಸುವವರೆಗೆ
ಕೂಗಿ ಹೇಳಿದ ಅಲಿ ತನ್ನ ಗೋರಿಯಿಂದ
ಎದುರಿಸಿ, ನನ್ನ ಬಂಡಾಯದ ಬಂಧುಗಳೇ,
ಅಗರುಕಟ್ಟಿಗೆಯ ಮೇಲೆ ನನ್ನನ್ನು ಗದ್ಯವಾಗಿ ಬರೆಯಿರಿ
ಉತ್ತರವಾಗಿ ನನ್ನ ಅಸ್ಥಿ ಪಡೆಯಿರಿ
ಎದುರಿಸಿ ನನ್ನ ಜನರೇ ಅವರನ್ನು ಎದುರಿಸಿ.

Leave a Reply