ಅಪ್ಪನ ನಗುಮುಖವನ್ನು ನೋಡುವುದು ನನಗೆ ಬಹಳ ಖುಷಿ ಕೊಡುತಿತ್ತು..

ಅಪ್ಪನ ಹಾದಿ ಪ್ರೀತಿ, ಸಹನೆ, ಅಂತಃಕರಣ.

ಸುಶಿ ಕಾಡನಕುಪ್ಪೆ 

ಅಪ್ಪನ ಪ್ರೀತಿಯ ಆರೈಕೆಯಲ್ಲಿ ನಾನು ಅರಳಿದ್ದೇನೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅವರು ತೋರಿಸಿರುವ ಹಾದಿಯಿದೆ. ನಾನು ಕಂಡಂತೆ ಅಪ್ಪನ ಹಾದಿ ಪ್ರೀತಿ, ಸಹನೆ ಮತ್ತು ಅಂತಃಕರಣ. ಅವರ ಪ್ರೀತಿ ಸಹಜೀವಿಗಳಿಗಾಗಿತ್ತು. ಹಾಗಾಗಿ ಮನುಷ್ಯರಾಚೆಗೆ ಪ್ರಾಣಿ-ಪಕ್ಷಿ, ಪ್ರಕೃತಿಗೂ ಚಾಚಿಕೊಂಡಿತ್ತು.

ಚಿಕ್ಕವಳಿದ್ದಾಗ ನನಗೆ ನೆನಪಿರುವಷ್ಟು ನಾನು ಅಪ್ಪನ ತೆಕ್ಕೆಯಲ್ಲೇ ಇರುತ್ತಿದ್ದೆ. ಕೆಲವೊಮ್ಮೆ ಅಪ್ಪ ನನಗೆ ಆಕಾಶ ಕಾಣುವಂತೆ ನನ್ನನ್ನು ಎತ್ತಿಕೊಂಡು ಕೈಗಳಲ್ಲಿ ಮಲಗಿಸಿಕೊಂಡು ಹಿಡಿಯುತ್ತಿದ್ದರು. ಆಗ ಆಕಾಶವನ್ನು ಒಮ್ಮೆ, ನನ್ನನ್ನೇ ಗಮನಿಸುತ್ತಿದ್ದ ಅಪ್ಪನ ನಗುಮುಖವನ್ನು ಒಮ್ಮೆ ನೋಡುವುದು ನನಗೆ ಬಹಳ ಖುಷಿ ಕೊಡುತಿತ್ತು.

ನಾನು ನಡೆಯುವುದನ್ನು ಕಲಿತಾದ ಮೇಲೆ ಅಪ್ಪನ ಕೈ ಹಿಡಿದು ನಡೆಯುವುದು ತುಂಬಾ ಖುಷಿ ಕೊಡುವ ಚಟುವಟಿಕೆಯಾಗಿತ್ತು. ಅಪ್ಪನ ಕೈಯ ಕಿರುಬೆರಳನ್ನು ಮಾತ್ರ ಹಿಡಿಯುವಷ್ಟು ನನ್ನ ಕೈ ಚಿಕ್ಕದಾಗಿತ್ತು. ಹಾಗೆಯೇ ಕಿರುಬೆರಳನ್ನು ಹಿಡಿದು ಅಪ್ಪನ ಕೈಯಲ್ಲಿ ಇನ್ನೆಷ್ಟು ಬೆರಳುಗಳಿವೆ ಎಂದು ಎಣಿಸುತ್ತಾ ಹೋಗುವುದು. ಆಗ ಅಪ್ಪ ಕೆಲವೊಮ್ಮೆ ಒಂದು ಅಥವಾ ಎರಡು ಬೆರಳುಗಳನ್ನು ಬೇಕಂತಲೇ ಮಡಿಚಿ ಬಚ್ಚಿಟ್ಟಾಗ ನನಗೆ ಆಗುತ್ತಿದ್ದ ಗಾಬರಿ ಅಷ್ಟಿಷ್ಟಲ್ಲ.

ಆಗ ಹಟ ಮಾಡಿ ಅಪ್ಪನ ಕೈಯನ್ನು ಪೂರ ಬಿಡಿಸಿ ನೋಡಿ ಐದೂ ಬೆರಳುಗಳು ಸರಿಯಾಗಿಯೇ ಇವೆ ಎಂದು ಖಾತ್ರಿ ಪಡಿಸಿಕೊಂಡು ಖುಷಿಯಿಂದ ಕುಣಿದು ಹರ್ಷ ಪಡುತ್ತಿದ್ದೆ. ಈ ಅನುಭವಗಳೆಲ್ಲಾ ನನಗೆ ಯಾವಾಗಲೂ ಸಂತೋಷ ಕೊಡುವ ನೆನಪುಗಳು.

ಅಪ್ಪ ತಮ್ಮ ಕಾಲೇಜಿನ ಕೆಲಸ ಮುಗಿಸಿ ನೇರವಾಗಿ ಮನೆಗೆ ಬರುತ್ತಿದ್ದರು. ಅವರು ದಿನವೂ ಮನೆಯಲ್ಲೇ ನಮ್ಮ ಜೊತೆಯಲ್ಲಿ ಕಾಲ ಕಳೆಯುತ್ತಿದ್ದರು. ಅಪ್ಪ, ಅಮ್ಮ, ನಾನು ಮತ್ತು ನೇಸರ ಒಳ್ಳೆಯ ಸ್ನೇಹಿತರಾಗಲು ಹೀಗೆ ದಿನವೂ ನಾವೆಲ್ಲರೂ ಜೊತೆಗೂಡಿ ನಮ್ಮ ಜೀವನವನ್ನು ಹಂಚಿಕೊಂಡಿದ್ದರಿಂದ. ನಾವು ದೊಡ್ಡವರಾಗುತ್ತ ನಮ್ಮದೇ ವ್ಯಕ್ತಿತ್ವವನ್ನು ಬೆಳೆಸಿಕೊಂಡರೂ ಅಪ್ಪ ಅಮ್ಮ ಇಬ್ಬರೂ ನಮ್ಮ ಆತ್ಮೀಯ ಗೆಳೆಯರಂತೆ ನಮ್ಮ ಜೊತೆಯಲ್ಲಿದ್ದರು.

ನಾನು ಶಾಲೆಗೆ ಹೋಗುವ ದಿನಗಳಲ್ಲಿ ಅಪ್ಪ ಎಂದಿಗೂ ನನಗಾಗಲೀ ಅಥವ ನನ್ನ ತಮ್ಮನಿಗಾಗಲೀ ಶಾಲೆಗೆ ಬಿಟ್ಟುಬರುವ ಅಭ್ಯಾಸ ಮಾಡಲಿಲ್ಲ. ನಾವೇ ಬಸ್ಸು ಹತ್ತಿ ಹೋಗುವುದನ್ನು ಕಲಿಸಿದ್ದರು. ಮೊದಲ ಕೆಲವು ದಿನಗಳಲ್ಲಿ ಅಮ್ಮ ಬಸ್ಸಿನಲ್ಲಿ ಹೋಗುವ ರೀತಿ, ಯಾವ ಸ್ಟಾಪ್ನಲ್ಲಿ ಇಳಿಯಬೇಕು, ಹೇಗೆ ಟಿಕೆಟ್ ಕೇಳಿ ಪಡೆಯಬೇಕು ಎಂದು ನನ್ನ ಜೊತೆ ಬಂದು ಹೇಳಿಕೊಟ್ಟಿದ್ದಷ್ಟೇ.

ನನ್ನ ತಮ್ಮ ನನ್ನ ಶಾಲೆಗೇ ಸೇರಿದ್ದರಿಂದ ಅವನನ್ನು ನಾನೇ ಕರೆದು ಹೋಗುತ್ತಿದ್ದೆ. ನಮ್ಮಿಬ್ಬರಿಗೂ ಚಿಕ್ಕಂದಿನಿಂದಲೂ ಸ್ವತಂತ್ರವಾಗಿ ನಮ್ಮ ಕೆಲಸ ನಾವೇ ಮಾಡಿಕೊಳ್ಳುವ ಸಾಮರ್ಥ್ಯವನ್ನು ಅಪ್ಪ ಬೆಳೆಸಿದ್ದರು. ಶಾಲೆಯಲ್ಲಿ ಮಾಡಿದ ಪಾಠಗಳನ್ನು ಆ ದಿನವೇ ಓದಿ ಮುಗಿಸಬೇಕು ಎಂದು ಅಪ್ಪ ಬಹಳ ಕಟ್ಟುನಿಟ್ಟಿನಲ್ಲೆ ಬೆಳೆಸಿದರು.

ಈ ರೀತಿಯ ಶಿಸ್ತಿನ ಬೆಳವಣಿಗೆ ಜೀವನದಲ್ಲಿ ನಮಗೆ ಬಹಳ ಅನುಕೂಲಗಳನ್ನು ತಂದು ಕೊಟ್ಟಿದೆ. ನನಗಾಗಲೀ ನನ್ನ ತಮ್ಮನಿಗಾಗಲೀ ಎಂದೂ ಮನೆಪಾಠದ ಅವಶ್ಯಕತೆಯೇ ಬೀಳಲಿಲ್ಲ. ಅಪ್ಪ ನಮ್ಮಲ್ಲಿ ಅದೆಷ್ಟು ಆತ್ಮವಿಶ್ವಾಸ ತುಂಬಿಸಿ ಬೆಳೆಸಿದ್ದಾರೆಂದರೆ ಅದು ಬತ್ತಿ ಹೋಗದ ಚಿಲುಮೆಯಂತೇ ಈಗಲೂ ನಮ್ಮನ್ನು ಪೋಷಿಸುತ್ತಿದೆ.

ಶಾಲೆಯ ದಿನಗಳಲ್ಲಿ ನನಗೆ ಅರಿವಾದ ಒಂದು ಮುಖ್ಯ ವಿಷಯವೆಂದರೆ, ನನ್ನ ಮತ್ತು ನನ್ನ ತಮ್ಮನ ಶಾಲಾ ದಾಖಲೆಗಳಲ್ಲಿ ಜಾತಿ ಅಥವಾ ಧರ್ಮದ ಕಾಲಮ್‌ಗಳನ್ನು ಖಾಲಿ ಬಿಟ್ಟಿದ್ದು. ಧರ್ಮದ ಜಾಗದಲ್ಲಿ ನಮ್ಮ ತಂದೆ ‘ಮನುಷ್ಯ ಧರ್ಮ’ ಎಂದು ಬರೆಸಿದ್ದರು. ಜಾತಿಯ ಜಾಗವನ್ನು ಖಾಲಿ ಬಿಡಿಸಿದ್ದರು. ಜಾತಿ ಅಥವಾ ಧರ್ಮದ ಬಗ್ಗೆ ಮೊದಲು ನನಗೆ ಅರಿವಾಗಿದ್ದು ಆಗಲೇ.

ಮನೆಯಲ್ಲಿ ಇದರ ಬಗ್ಗೆ ವೈಚಾರಿಕವಾಗಿ ನಮ್ಮ ಜೊತೆ ಚರ್ಚೆಮಾಡುತ್ತಿದ್ದ ಅಪ್ಪ ನಮ್ಮಲ್ಲಿ ವಾಸ್ತವ ಸಮಾಜದ ಪರಿಕಲ್ಪನೆಯ ಅರಿವನ್ನು ಮೂಡಿಸಿದ್ದರು. ನಾವು ಜೀವಿಸುತ್ತಿರುವ ಸಮಾಜದ ರಚನೆಯ ಸ್ವರೂಪವನ್ನು ತಿಳಿಸಿಕೊಡುತ್ತಿದ್ದರು. ಆದರೆ ಸಮಾಜದ ಒಪ್ಪಿತ ಸಿದ್ಧ ಮಾದರಿಯನ್ನು ಕುರುಡಾಗಿ ಅನುಸರಿಸಬಾರದು ಎಂದು ನಮ್ಮಲ್ಲಿ ತಿಳಿಹೇಳಿದ್ದರು.

ನನ್ನ ಹನ್ನೊಂದನೆಯ ವಯಸ್ಸಿನಲ್ಲಿ ಅಪ್ಪ ನನಗೆ ಎ. ಎನ್. ಮೂರ್ತಿರಾಯರ ‘ದೇವರು’ ಪುಸ್ತಕವನ್ನು ಓದಲು ಕೊಟ್ಟರು. ಆ ಪುಸ್ತಕವನ್ನು ನಾನು ಪದೇ ಪದೇ ಓದಿದ್ದೇನೆ. ನನ್ನ ವಯಸ್ಸು ಹೆಚ್ಚಿದಂತೆ ನನಗೆ ಹೆಚ್ಚು ಹೆಚ್ಚು ಅರ್ಥವಾಗುತ್ತಾ ಹೋಯಿತು.

ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಮತ್ತು ಗಾಂಧಿಯ ವಿಚಾರಗಳನ್ನು ನಮ್ಮ ತಲೆಗೆ ತುಂಬುತಿದ್ದರು. ಹಾಗೆಯೇ ಟಾಲ್ಸ್ಟಾಯ್, ಗಾರ್ಕಿ, ಶೇಕ್ಸ್ ಪಿಯರ್, ಕುವೆಂಪು, ಶಿವರಾಮ ಕಾರಂತ ಮತ್ತು ತೇಜಸ್ವಿ ಬರಹಗಳ ಬಗ್ಗೆ ಒಲವು ಮೂಡಿಸಿದರು. ಬರ್ಟೆಂಡ್ ರಸಲ್ ಅವರ ವೈಚಾರಿಕ ಚಿಂತನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದರು. ಹಾಗೆಯೇ ಇವರೆಲ್ಲರ ಬರಹಗಳನ್ನು ಓದುವ ಹವ್ಯಾಸಕ್ಕೆ ನನ್ನನ್ನು ಹಚ್ಚಿದರು.

 

ಅಪ್ಪನಿಗೆ ಓದಿನ ಹವ್ಯಾಸ ಅತಿಯಾಗಿತ್ತು. ದಿನವೂ ಓದುತ್ತಲೇ ಇರುತ್ತಿದ್ದರು. ಅವರು ಇಂಗ್ಲೀಷ್ ಕಾದಂಬರಿಗಳನ್ನು ಒಂದಾದಮೇಲೊಂದರಂತೆ ಓದಿ ಮುಗಿಸುತ್ತಿದ್ದರು. ಅದಕ್ಕಾಗಿಯೇ ಸರ್ಕುಲೇಟಿಂಗ್ ಲೈಬ್ರರಿಯಲ್ಲಿ ಸದಸ್ಯರಾಗಿದ್ದರು. ನಮ್ಮನ್ನು ಅಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅಪ್ಪನ ಈ ಓದಿನ ಹವ್ಯಾಸದಿಂದ ನನಗೆ ಹಲವಾರು ಇಂಗ್ಲೀಷ್ ಕಾದಂಬರಿಗಾರರ ಪರಿಚಯವಾಗತೊಡಗಿತು.

ನಾನು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದರೂ ಮನೆಯಲ್ಲಿ ಅಪ್ಪ ಇಂಗ್ಲೀಷ್ ಭಾಷೆಯ ಪರಿಚಯವನ್ನು ಸದಾ ಮಾಡಿಕೊಡುತ್ತಿದ್ದರು. ನಾನು ಆರನೆಯ ತರಗತಿಯಲ್ಲಿದ್ದಾಗಲೇ ಇಂಗ್ಲಿಷ್‌ನ ಮಕ್ಕಳ ಕಾದಂಬರಿಗಳನ್ನು ಓದಲು ಶುರು ಮಾಡಿದೆ. ಸರ್ಕಾರಿ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದು ಅಲ್ಲಿಂದ ಪುಸ್ತಗಳನ್ನು ತರುತ್ತಿದ್ದೆ. ಬೇಸಿಗೆ ರಜೆಯಲ್ಲಿ ಎನಿಡ್ ಬ್ಲೈಟನ್ ಅವರ ಮಕ್ಕಳ ಪತ್ತೇದಾರಿ ಕಾದಂಬರಿಗಳನ್ನು ಓದುವುದು ನನಗೆ ಭಾರಿ ಖುಷಿ ಕೊಡುತಿತ್ತು.

ಇದು ಹಾಗೆಯೇ ಮುಂದುವರೆದು ನಾನು ಪಿಯುಸಿಗೆ ಸೇರುವ ಹೊತ್ತಿಗೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ಎಷ್ಟೋ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಓದಿನ ಹವ್ಯಾಸ ಅಪ್ಪನ ಕೊಡುಗೆಯೇ. ಓದು ನಮ್ಮನ್ನು ಒಂದು ಮಾಂತ್ರಿಕ ಲೋಕಕ್ಕೆ ಕೊಂಡೊಯ್ಯುವ ಅನುಭವವವನ್ನು ತೋರಿಸಿಕೊಟ್ಟಿದ್ದೇ ಅಪ್ಪ.

ಅಪ್ಪ ಕುವೆಂಪು ಅವರ ವೈಚಾರಿಕ ಚಿಂತನೆಗಳನ್ನು ನಮ್ಮೊಡನೆ ಚರ್ಚಿಸುತ್ತಿದ್ದರು. ಕುವೆಂಪು ಅವರ ಕ್ರಾಂತಿ ಗೀತೆಗಳನ್ನು ಮನಸ್ಸಿಗೆ ತಟ್ಟುವಂತೆ ಹಾಡುತ್ತಿದ್ದರು. ಹಾಗೆಯೇ ವಿವರಿಸುತ್ತಿದ್ದರು. ನಾನು, ತಮ್ಮ ಮತ್ತು ಅಮ್ಮ ಕೂತು ಕೇಳುತ್ತಿದ್ದೆವು. ಮಕ್ಕಳಾಗಿದ್ದ ನಮ್ಮ ಮಾತುಕತೆಯಲ್ಲಿ ಪ್ರಶ್ನೆಗಳ ಸುರಿಮಳೆಯೇ ಇರುತಿತ್ತು. ನಮ್ಮ ಚರ್ಚೆಗಳು ಇನ್ನೂ ಹೆಚ್ಚು ಬಿರುಸಾಗಿ ವಾದ ಪ್ರತಿವಾದಗಳು ಏಳುತ್ತಿದ್ದವು.

ನಮಗೆ ದಿನವೂ ಸಂಜೆ ಒಂದು ಗಂಟೆಯಾದರೂ ಊಟವಾದ ಮೇಲೆ ಈ ರೀತಿ ಕಾಲ ಕಳೆಯುವುದು ಅತ್ಯಂತ ಸಂತೋಷದ ಸಮಯವಾಗಿತ್ತು. ಈಗಲೂ ಇದು ನಮ್ಮ ಮನೆಯಲ್ಲಿ ರೂಢಿಯಲ್ಲಿದೆ. ಇದು ನಮ್ಮ ದಿನಚರಿಯೇ ಆಗಿದೆ. ಪ್ರಶ್ನೆಗಳಿಗೆ ವೈಚಾರಿಕವಾಗಿ ಉತ್ತರಗಳನ್ನು ಕಂಡುಕೊಳ್ಳುವ ಬಗೆಯನ್ನು ನಾನು ಹೀಗೆಯೇ ಕಲಿತದ್ದು.

ನಮ್ಮ ಮನೆಯಲ್ಲಿ ದೇವರ ಕೋಣೆಯಾಗಲೀ, ದೇವರ ವಿಗ್ರಹ ಅಥವಾ ಚಿತ್ರವಾಗಲೀ ಎಂದೂ ಇಲ್ಲ. ಶಾಲೆಗೆ ಸೇರುವ ಮುನ್ನ
ನನಗೆ ದೇವರು ಎನ್ನುವ ಕಲ್ಪನೆಯ ತಿಳಿವೇ ಇರಲಿಲ್ಲ. ಶಾಲೆಯಲ್ಲಿ ಸಹಪಾಠಿಗಳಿಂದ ಮತ್ತು ಶಿಕ್ಷಕರಿಂದ ಮೊದಲ ಬಾರಿ ದೇವರುಗಳ ಹೆಸರುಗಳು ಮತ್ತು ಆ ಹೆಸರಿನಲ್ಲಿ ನಡೆಯುವ ಹಬ್ಬದ ಆಚರಣೆಗಳು ನನ್ನ ಕಿವಿಗೆ ಬೀಳತೊಡಗಿದವು. ಆಗ ಮನೆಗೆ ಬಂದು ಅಪ್ಪ ಅಮ್ಮನಲ್ಲಿ ಪ್ರಶ್ನೆಗಳನ್ನು ಕೇಳುವುದು ನನ್ನ ರೂಢಿಯಾಗಿತ್ತು.

ಅಪ್ಪನ ಮಾತುಗಳು ನನಗೆ ಒಂದು ಬಗೆಯ ರೋಮಾಂಚನದ ಅನುಭವ ತಂದುಕೊಡುತ್ತಿದ್ದವು. ಅವರು ವಿಷಯವನ್ನು ಮಂಡಿಸುತ್ತಿದ್ದ ರೀತಿ ನನ್ನ ಪುಟ್ಟ ಮನಸ್ಸಿಗೂ ಸರಳವಾಗಿ ಅರ್ಥವಾಗುವಂತೆ ಇರುತಿತ್ತು. ಅಮ್ಮನ ವಿಚಾರಗಳೂ ಅಪ್ಪನಿಗೆ ಪೂರಕವಾಗಿರುತ್ತಿದ್ದವು.

ಭಾಗ ೨
ಕನ್ನಡ ಕಲಿಕೆಯಿಂದ ಸುಲಭವಾಯ್ತು ಇಂಗ್ಲಿಷ್ ಕಲಿಕೆ

ಮಗುವಿನ ಮನಸ್ಸಿಗೆ ನೋವಾಗುತ್ತದೆ ಎಂದು ಅಪ್ಪ (ಶಿವರಾಮು ಕಾಡನಕುಪ್ಪೆ) ಸುಳ್ಳನ್ನು ಮನಸ್ಸಿಗೆ ಇಷ್ಟವಾಗುವಂತೆ ಹೇಳಿಲ್ಲ. ವಿಷಯವನ್ನು ಇದ್ದ ಹಾಗೆಯೇ ಹೇಳುವ ಪರಿ ಮತ್ತು ಜೀವನವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಅರಿಯುವುದನ್ನು ನಾನು ಚಿಕ್ಕವಳಿದ್ದಾಗಿನಿಂದಲೇ ಕಲಿಯುವಂತಾಯಿತು.

ವಾಸ್ತವವಾದಿಯಾಗಿ ಬದುಕನ್ನು ಅರ್ಥಮಾಡಿಕೊಳ್ಳುವುದರಲ್ಲೇ ನಮಗೆ ಜೀವನ ಪ್ರೀತಿ ಇನ್ನಷ್ಟು ಇಮ್ಮಡಿಯಾಗುತ್ತದೆ. ಪುನರ್ಜನ್ಮ ಮತ್ತು ಆತ್ಮದ ನಂಬಿಕೆ ನಮ್ಮನ್ನು ಭ್ರಮೆಯಲ್ಲಿ ಬದುಕುವಂತೆ ಮಾಡುತ್ತವೆ. ಇದರಿಂದ ನಮ್ಮ ಈ ಕ್ಷಣದ ಬದುಕನ್ನು ಆಸ್ವಾದಿಸಲು ಇಂತಹ ಭ್ರಮೆಗಳು ದೊಡ್ಡ ಗೋಡೆಯಾಗಿ ನಿಲ್ಲುತ್ತವೆ. ವಾಸ್ತವದ ಅರಿವು ನಮಗೆ ಸಿಕ್ಕಿರುವ ಜೀವನ ಸ್ವಾತಂತ್ರ್ಯ ಎಷ್ಟು ಅತ್ಯಮೂಲ್ಯವಾದದು ಎಂಬುದನ್ನು ತಿಳಿಸಿಕೊಡುತ್ತದೆ.

ನಾನು ನಾಸ್ತಿಕಳಾಗಿರುವುದಕ್ಕೆ ಮತ್ತು ಅಷ್ಟೇ ಪ್ರಮುಖವಾಗಿ ವಾಸ್ತವವಾದಿಯಾಗಿರುವುದಕ್ಕೆ ಅಪ್ಪನ ಜೊತೆಗಿನ ಚರ್ಚೆಗಳು ಮತ್ತು ಅವರು ಬೆಳೆಸಿದ ಓದಿನ ಅಭಿರುಚಿಯೇ ಕಾರಣ. ಪ್ರತಿಕ್ಷಣವು ಒಂದು ಅದ್ಭುತ ಕ್ರಿಯೆಯಂತೆ ಅನುಭವಿಸುವ ನನ್ನ ಸ್ವಭಾವ ನನಗೆ ಎಲ್ಲಿಲ್ಲದ ಸಂತೋಷ, ನೆಮ್ಮದಿ ಮತ್ತು ಬೌದ್ಧಿಕ ಸ್ವಾತಂತ್ರ್ಯ ನೀಡಿದೆ.

ನನ್ನ ಪ್ರಾಥಮಿಕ ಶಾಲಾ ಶಿಕ್ಷಣವು ಕನ್ನಡ ಮಾಧ್ಯಮದಲ್ಲೇ ಆಗುವಂತೆ ಅಪ್ಪ ನೋಡಿಕೊಂಡರು. ನನ್ನ ತಮ್ಮ ಪ್ರೌಢಶಾಲೆ ಶಿಕ್ಷಣವನ್ನೂ ಕನ್ನಡದಲ್ಲೇ ಪೂರೈಸಿದ. ಕನ್ನಡ ಮಾಧ್ಯಮದ ಕಲಿಕೆ ನನ್ನ ಗ್ರಹಿಕೆಯ ವಿಸ್ತಾರವನ್ನು ಹೆಚ್ಚಿಸಿದೆ. ಇಂಗ್ಲೀಷ್ ಭಾಷೆಯ ಕಲಿಕೆಯು ಸುಲಭವಾಗಲು ಕನ್ನಡ ಮಾಧ್ಯಮದ ನನ್ನ ಕಲಿಕೆಯೇ ಕಾರಣ. ಕನ್ನಡ ಭಾಷೆಯ ನಮ್ಮ ಕಲಿಕೆ ನಮಗೆ ಆತ್ಮವಿಶ್ವಾಸ ಮತ್ತು ಜೀವನದಲ್ಲಿ ಮುನ್ನುಗ್ಗುವ ಧೈರ್ಯವನ್ನು ತಂದುಕೊಟ್ಟಿದೆ.

ಹಾಗೆಯೇ ನಾವು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದಿದ್ದರಿಂದ ಸಮಾಜದ ಕೆಳಸ್ಥರದ ವಿಧ್ಯಾರ್ಥಿಗಳ ಜೊತೆ ಬೆರೆಯುವ ಮತ್ತು ಜೀವನವನ್ನು ಕಲಿಯುವ ಅವಕಾಶ ನಮಗೆ ಸಿಕ್ಕಿತು. ನನ್ನಲ್ಲಿ ಸಾಮಾಜಿಕ ಕಾಳಜಿ ಮತ್ತು ಸಂವೇದನಾಶೀಲ ಮನೋಭಾವ ಬೆಳೆಯಲು ಕನ್ನಡ ಮಾಧ್ಯಮ ಶಿಕ್ಷಣ, ಸರ್ಕಾರಿ ಶಾಲೆಗಳು ಮತ್ತು ಕುಕ್ಕರಹಳ್ಳಿಯ ವಾಸ ಬಹು ಮುಖ್ಯ ಪಾತ್ರ ವಹಿಸಿವೆ.

ಪಿಯುಸಿ ಮುಗಿಸಿ ಮುಂದೆ ಯಾವ ಕ್ಷೇತ್ರ ಆಯ್ಕೆ ಮಾಡುವುದು ಎಂಬ ಸಂದರ್ಭ ಬಂದೊದಗಿದಾಗ ಅಪ್ಪ ಅದರ ಆಯ್ಕೆಯನ್ನು ನನಗೇ ಬಿಟ್ಟರು. ನನಗೆ ಬಹಳ ಕ್ಷೇತ್ರಗಳಲ್ಲಿ ಆಸಕ್ತಿ ಇತ್ತು. ಎಲ್ಲಾ ಕ್ಷೇತ್ರಗಳನ್ನೂ ತಿಳಿಯುವ ಅಪರಿಮಿತ ಉತ್ಸಾಹ ನನ್ನನ್ನು ದಾರಿತಪ್ಪಿಸದಂತೆ ನೋಡಿಕೊಳ್ಳುವುದಷ್ಟೇ ಅಪ್ಪ ಮಾಡಿದ್ದು.

ಆಗ ಎಲ್ಲರೂ ಇಂಜಿನಿಯರಿಂಗ್ ಮಾಡಬೇಕು, ಅದರಿಂದಲೇ ಹೆಚ್ಚು ಲಾಭವೆಂದು ಹೇಳುತ್ತಿದ್ದರು. ನಾಲ್ಕೇ ವರ್ಷಗಳಲ್ಲಿ ಓದು ಮುಗಿಯುವುದಲ್ಲದೇ ತಕ್ಷಣವೇ ಕೈತುಂಬಾ ಸಂಬಳ ತರುವ ಕೆಲಸವೂ ಸಿಗುವುದು ಎಂದು ಎಲ್ಲರ ಚಿಂತನೆಯಾಗಿತ್ತು. ಆಗ ಅಪ್ಪನ ಸಲಹೆ ಕೇಳಿದಾಗ, ನನ್ನ ಆಸಕ್ತಿ ಮತ್ತು ಶ್ರಮದ ಬಗ್ಗೆ ಅಪಾರ ನಂಬಿಕೆಯಿಟ್ಟಿದ್ದ ಅವರು ‘ಕೇವಲ ಸಂಬಳ ತರುವ ಕೆಲಸವೊಂದೇ ನಮಗೆ ದಾರಿ ತೋರಿಸುವ ದೃಷ್ಟಿಯಾಗಬಾರದು’ ಎಂದು ಹೇಳಿದರು.

ಅವರ ಆ ಮಾತು ನನ್ನ ಜೀವನದ ಬಹುಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ದಾರಿ ತೋರಿಸಿತು. ನನ್ನ ಆಸಕ್ತಿಗೆ ಸರಿ ಹೊಂದುವ ಕ್ಷೇತ್ರವನ್ನೇ ನಾನು ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಮಾಡಿಕೊಂಡೆ. ಪಿಎಚ್ಡಿ ಮಾಡುವ ನನ್ನ ನಿರ್ಧಾರಕ್ಕೂ ಅಪ್ಪ ನಮಲ್ಲಿ ಮೂಡಿಸಿರುವ ಸಂಶೋಧನಾ ಮತ್ತು ಅಧ್ಯಯನದ ಮನಸ್ಥಿತಿಯೇ ಕಾರಣ.

ಶಿಕ್ಷಣದ ನನ್ನ ಎಲ್ಲಾ ಆಯ್ಕೆಗಳಿಗೂ ಅಪ್ಪ ಸಂಪೂರ್ಣ ಬೆಂಬಲವನ್ನು ಕೊಟ್ಟರು. ದಂತವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನಾ ವೃತ್ತಿಯಲ್ಲಿ ತೊಡಗಿರುವ ನನ್ನ ಜೀವನದಲ್ಲಿ ಸ್ವಾತಂತ್ರ್ಯ ಮತ್ತು ನೆಮ್ಮದಿ ಇದೆ. ಯಾವ ಕ್ಷೇತ್ರದಲ್ಲಿ ನಮಗೆ ಆಸಕ್ತಿಯಿರುತ್ತದೋ ಆ ಕ್ಷೇತ್ರವೇ ನಮಗೆ ಜೀವನ ತೋರಿಸಬೇಕು ಎನ್ನುವುದನ್ನು ಅಪ್ಪ ಯಾವುದೇ ಪ್ರವಚನವಿಲ್ಲದೆ ನನಗೆ ಮನವರಿಕೆ ಮಾಡಿಕೊಟ್ಟಿದ್ದರು.

ನುಡಿದಂತೆ ನಡೆಯುವ ಅವರ ಜೀವನ ಮತ್ತು ಸಮಾಜಪರ ನಡೆಗಳಿಂದ ನಾವು ಕಲಿತದ್ದು ಹೆಚ್ಚು. ಇದಕ್ಕೆ ಒಂದು ಸಣ್ಣ ಉದಾಹರಣೆ: ನಮ್ಮ ಮನೆಯನ್ನು ಕಟ್ಟಿ ಮುಗಿಸಿದಾಗ ನಾವು ಗೃಹಪ್ರವೇಶ ಇಟ್ಟುಕೊಂಡಿರಲಿಲ್ಲ. ಸಾಂಪ್ರದಾಯಿಕ ಗೃಹಪ್ರವೇಶವೆಂಬ ಆಚರಣೆಗಳಲ್ಲಿ ನಮಗೆ ನಂಬಿಕೆಯೂ ಇಲ್ಲ.

ಆಗ ನಮ್ಮ ಮನೆ ಕಟ್ಟಲು ಶ್ರಮಿಸಿದ ಎಲ್ಲಾ ಕೂಲಿಕಾರ್ಮಿಕ ಬಂಧುಗಳಿಗೆ ಒಂದು ಔತಣ ಕೂಟವನ್ನು ಇಡಬೇಕೆಂದು ನಮ್ಮ ತಂದೆ ನಮ್ಮಲ್ಲಿ ಹೇಳಿಕೊಂಡರು. ಅಪ್ಪನ ಇಚ್ಛೆ ನಮಗೂ ತುಂಬಾ ಸರಿಯೆನಿಸಿತು. ಏಕೆಂದರೆ ಅಪ್ಪ ಅದಕ್ಕೆ ಕೊಟ್ಟ ಕಾರಣ ಇಷ್ಟೆ.

ಒಂದು ಮನೆಯನ್ನು ಕಟ್ಟಲು ನಾವೆಲ್ಲಾ ಕಷ್ಟಪಡುವುದು ಸರಿಯೆ. ಆದರೆ ನಮಗಿಂತಲೂ ಹೆಚ್ಚು ಕಷ್ಟಪಡುವವರು ತಮ್ಮ ದೈಹಿಕ ಶ್ರಮವನ್ನೆಲ್ಲಾ ಹಾಕಿ ಬಿಸಿಲು ಗಾಳಿಯೆನ್ನದೆ ದುಡಿಯುವ ನಮ್ಮ ಕೂಲಿಕಾರ್ಮಿಕರು. ಅವರನ್ನು ನಾವೆಂದೂ ನಮ್ಮ ಮನೆಕಟ್ಟಿ ಮುಗಿಸಿದ ಸಂತೋಷ ಕೂಟದಲ್ಲಿ ಆಹ್ವಾನಿಸುವುದಿಲ್ಲ. ಆದ್ದರಿಂದಲೇ ಅವರಿಗೆ ಒಂದು ಔತಣಕೂಟವನ್ನು ಏರ್ಪಡಿಸಿದ್ದರು ಅಪ್ಪ. ಅಪ್ಪ ಅವರಿಗೆ ಇಷ್ಟವಾದ ಮಾಂಸಹಾರದ ಖಾದ್ಯಗಳನ್ನು ಮಾಡಿಸಿ ಬಡಿಸಿದರು. ಅವರ ಜೊತೆ ನಮ್ಮ ಆತ್ಮೀಯ ಗೆಳೆಯರನ್ನೂ ಆಹ್ವಾನಿಸಿದ್ದರು.

ಅಪ್ಪ ದಿನವೂ ಸಾಯಂಕಾಲ ನಮ್ಮೊಟ್ಟಿಗೆ ಕುಳಿತು ಹರಟೆ ಹೊಡೆಯುವುದು ನನಗೆ ತುಂಬಾ ಇಷ್ಟವಾಗುತಿತ್ತು. ನಾವು ಸ್ವಂತ ಮನೆಗೆ ಕಾಲಿಟ್ಟಾಗ ನಮ್ಮ ರಸ್ತೆಗೆ ಇನ್ನೂ ವಿದ್ಯುತ್ ದೀಪವಿರಲಿಲ್ಲ. ನಾವು ಆರ್ಥಿಕವಾಗಿ ಸುಧಾರಿತ ಪರಿಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ ವಿದ್ಯುತ್ ಇಲ್ಲದಿದ್ದರೂ ಸ್ವಂತ ಮನೆಗೆ ಹೋಗೋಣ ಎಂದು ನಮ್ಮನ್ನೆಲ್ಲಾ ಒಪ್ಪಿಸಿದ್ದರು.

ವಿದ್ಯುತ್ ದೀಪವಿಲ್ಲದ ಕಾರಣ ಟಿವಿ ನೋಡುವ ಗೊಡವೆಯಿರಲಿಲ್ಲ. ಹಾಗಾಗಿ ಸಂಜೆ ನಮಗೆಲ್ಲಾ ಜೊತೆಯಲ್ಲಿ ಕೂತು ಕಳೆಯಲು ಬಹಳ ಸಮಯ ಸಿಗುತಿತ್ತು. ಸುಮಾರು ಎರಡು ವರ್ಷಗಳ ಕಾಲ ವಿದ್ಯುತ್ ಇಲ್ಲದೆ ಕಳೆದ ಆ ಸಮಯ ನಮ್ಮನ್ನು ಮತ್ತಷ್ಟು ಹತ್ತಿರ ತಂದಿತ್ತು. ಸಂಜೆ ಆಕಾಶದ ನಕ್ಷತ್ರಗಳನ್ನು ಎಣಿಸುವುದು, ಬಾಹ್ಯಾಕಾಶದ ಬಗೆಗಿನ ಕುತೂಹಲಕಾರಿ ವಿಷಯಗಳನ್ನು ಚರ್ಚಿಸುವುದು ನನಗೆ ತುಂಬಾ ಇಷ್ಟವಾಗುತಿತ್ತು.

ಜಗತ್ತಿನ ವಿಸ್ಮಯಗಳ ಬಗ್ಗೆ ಅಚ್ಚರಿಯಿಂದ ತೆರೆದುಕೊಳ್ಳುವುದು ಮತ್ತು ಯಾವುದೇ ಹೊಸ ವಿಷಯವನ್ನು ವ್ಶೆಜ್ಞಾನಿಕ ದೃಷ್ಟಿಕೋನದಿಂದ ನೋಡಿ ತಿಳಿಯುವುದನ್ನು ಅಪ್ಪನಿಂದಲೇ ನಾನು ಕಲಿತದ್ದು. ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕತೆಯ ಮೊದಲ ಪಾಠ ಅಪ್ಪನದ್ದೇ.

ಕೊನೆಯವರೆಗೂ ಅವರೊಡನೆ ನಾನು ನಡೆಸಿದ್ದ ಸಂವಾದಗಳು ಹೆಚ್ಚಾಗಿ ಸಾಮಾಜಿಕ ವಿಷಯಗಳ ಬಗ್ಗೆಯೇ ಇದ್ದು, ವೈಚಾರಿಕವಾಗಿ ವಿಶ್ಲೇಷಿಸುವ ಅವರ ಪ್ರಖರ ವಸ್ತುನಿಷ್ಠ ವಿಮರ್ಶೆ ನನಗೆ ದಿನವೂ ಕಲಿಯುವ ಅವಕಾಶ ಕೊಟ್ಟಿತ್ತು.

 

ಭಾಗ ೩
ಅನಾರೋಗ್ಯದಲ್ಲೂ ಎದೆಗುಂದಲಿಲ್ಲ ಅಪ್ಪ

ಅಪ್ಪನ ಪರಿಸರದ ಮೇಲಿನ ಕಾಳಜಿ ಮತ್ತು ಪ್ರೀತಿಯನ್ನು ನಾನು ನೋಡಿ ಕಲಿತಿದ್ದೇನೆ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವುದನ್ನು ಅಪ್ಪನಿಂದಲೇ ಕಲಿತದ್ದು. ನಮ್ಮ ಮನೆಯ ಅಂಗಳದಲ್ಲಿ ಮರಿ ಮಾಡುತ್ತಿದ್ದ ಪಕ್ಷಿಗಳನ್ನು ನಮಗೆ ತೋರಿಸುತ್ತಿದ್ದರು. ನಮ್ಮ ಮನೆಯ ನಾಯಿ ಮತ್ತು ಬೆಕ್ಕುಗಳನ್ನು ಮಕ್ಕಳಂತೆ ಬೆಳೆಸಿದರು. ನಾವು ಸಾಕಿದ್ದ ಮೂರೂ ನಾಯಿಗಳು ಕೇವಲ ನಮ್ಮ ಮನೆ ಕಾಯುವ ನಾಯಿಗಳಾಗಿರದೇ, ನಮ್ಮ ಮನೆಯ ಮಕ್ಕಳಂತಿದ್ದವು.

ನಮ್ಮ ಮನೆಯ ಉದ್ಯಾನವನವನ್ನು ಆರೈಕೆ ಮಾಡುತ್ತಿದ್ದ ರೀತಿಯಿಂದಲೇ ಪ್ರಕೃತಿಯ ಬಗ್ಗೆ ಅಪ್ಪನಿಗಿದ್ದ ಅಪಾರವಾದ ಪ್ರೀತಿ ನನ್ನೊಳಹೊಕ್ಕಿದ್ದು. ಅವರು ಬೆಳೆಸಿದ ಸಸಿಗಳಿಗೆ ಮಕ್ಕಳ ರೀತಿಯಲ್ಲಿ ಕಾಳಜಿ ವಹಿಸುವುದು, ಪ್ರಾಣಿ ಪಕ್ಷಿಗಳ ಮೇಲಿನ ಅವರ ಪ್ರೀತಿ ಅದ್ಭುತವಾದ ಅನುಭವವನ್ನು ತಂದುಕೊಟ್ಟಿವೆ. ನನ್ನಲ್ಲಿ ಒಂದು ರೀತಿಯ ಸಂವೇದನಾಶೀಲತೆಯನ್ನು ಮತ್ತು ಜೀವಪರ ನಿಲುವನ್ನು ಬೆಳೆಸಿದೆ.

ಅಪ್ಪನಲ್ಲಿ ನಾನು ಕಂಡ ಇನ್ನೊಂದು ಬಹು ಮುಖ್ಯ ಗುಣವೆಂದರೆ ಅವರಿಗಿರುವ ತಾಯಿ ಹೃದಯ. ಅಪ್ಪ ನಮ್ಮನ್ನು ತಾಯಿಯಂತೆಯೇ ಆರೈಕೆ ಮಾಡಿದ್ದಾರೆ. ಮೊದಲು ನಮ್ಮ ಮನೆಯಲ್ಲಿ ಮಾಂಸಾಹಾರದ ಅಡಿಗೆಯನ್ನು ಮಾಡುತ್ತಿದ್ದುದು ಅಪ್ಪನೇ. ಅಮ್ಮ ಸಸ್ಯಾಹಾರಿಯಾಗಿದ್ದರಿಂದ ಅಪ್ಪನೇ ನಮಗೆ ಕೋಳಿ ಸಾರು, ಫ್ರೈ ಮಾಡಿಕೊಡುತ್ತಿದ್ದರು. ನಾವು ಅವರಿಂದಲೇ ಮಾಂಸಾಹಾರದ ಅಡಿಗೆಯನ್ನು ಕಲಿತುಕೊಂಡೆವು. ಕಾಲಕಳೆದಂತೆ ಅಮ್ಮ ಕೂಡ ಮಾಂಸಾಹಾರ ತಿನ್ನುವ ಆಯ್ಕೆ ಮಾಡಿಕೊಂಡರು. ಇದು ಅವರ ಸ್ವಂತ ಆಯ್ಕೆಯೇ ಹೊರತು ಅಪ್ಪನ ಹೇರಿಕೆ ಅಲ್ಲವೇ ಅಲ್ಲ.

ಅವರ ಧೈರ್ಯ ಮತ್ತು ಸಾಹಸ ಪ್ರವೃತ್ತಿ ನನಗೆ ಮತ್ತಷ್ಟು ಮನವರಿಕೆಯಾಗಿದ್ದು ಮತ್ತು ಸ್ಪೂರ್ತಿಯಾಗಿದ್ದು ಅವರ ಅನಾರೋಗ್ಯದ ದಿನಗಳಲ್ಲಿ.

ಅಪ್ಪನಿಗೆ ೨೦೦೩ ರಲ್ಲಿ ಥೈಮೋಮ ಟ್ಯೂಮರ್ ಇರಬಹುದು ಎಂದು ಮೊದಲ ತಪಾಸಣೆಯಲ್ಲಿ ರಿಪೋರ್ಟ್ ಗಳನ್ನು ಓದಿದಾಗಲೆ ನನಗೆ ಅನುಮಾನ ಉಂಟಾಗಿತ್ತು. ಇದನ್ನು ಹೇಗೆ ತಿಳಿಸುವುದು ಎಂದು ನನ್ನಲ್ಲಿ ಗೊಂದಲ ಉಂಟಾಗಿದ್ದು ನಿಜ. ಆದರೆ ಅದನ್ನು ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಕುಳಿತು ಚರ್ಚಿಸಿದಾಗ ಅಪ್ಪ ಆ ಸುದ್ದಿಯನ್ನು ತೆಗೆದುಕೊಂಡ ರೀತಿ ನನಗೆ ಅಚ್ಚರಿ ಉಂಟು ಮಾಡಿತ್ತು.

ಆ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಲು ನಮ್ಮಿಂದ ಸಾಧ್ಯವಾಗಿದ್ದು ಅಪ್ಪನ ಧೈರ್ಯದಿಂದಲೇ. ಅವರು ಎದೆಗುಂದಿದ್ದರೆ ನಮಗೆ ಶಕ್ತಿಯಿರುತ್ತಿರಲಿಲ್ಲ. ನನ್ನ ಸ್ನಾತಕೋತ್ತರ ಪದವಿಗೆ ಪ್ರವೇಶ ಪರೀಕ್ಷೆಯನ್ನೂ ಕೂಡ ನಾನು ಇದೇ ಸಂದರ್ಭದಲ್ಲಿ ಎದುರಿಸಬೇಕಾಯಿತು. ಪರೀಕ್ಷೆ ಬರೆದು ಒಳ್ಳೆಯ ರಾಂಕ್ ಪಡೆದ ಮೇಲೆ ದೆಹಲಿಗೆ ಕೌನ್ಸಿಲಿಂಗ್‌ಗಾಗಿ ಹೋಗಬೇಕಾಯಿತು. ಅಪ್ಪ ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುತ್ತಲೇ ನನ್ನನ್ನು ದೆಹಲಿಗೆ ಕರೆದೊಯ್ದಿದ್ದರು.

ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿದ್ದಾಗಲೇ ೨೦೦೭ರಲ್ಲಿ ಅಪ್ಪನ ಕಾಲು ಮುರಿದು ನಡೆಯಲೇ ಆಗದಂತಹ ಪರಿಸ್ಥಿತಿಯೂ ಬಂದೊದಗಿತು. ಆಗಲೂ ನಮಗೆಲ್ಲಾ ಧೈರ್ಯನೀಡುತ್ತಾ ಬೆನ್ನೆಲುಬಾಗಿ ನಿಂತರು. ಅವರ ಆರೋಗ್ಯವೇ ಅವರಿಗೆ ಶತ್ರುವೇನೋ ಎನಿಸುವಷ್ಟು ಅವರು ಅನಾರೋಗ್ಯದ ದಿನಗಳನ್ನು ಅನುಭವಿಸಿದ್ದಾರೆ.

೨೦೧೧ರಿಂದೀಚೆಗೆ ಅಪ್ಪ ಹೆಚ್ಚು ಕೃಷವಾಗುತ್ತಾ ಬಂದರು. ಮೈಕೈ ಎಲ್ಲಾ ನಿತ್ರಾಣಗೊಳ್ಳುತ್ತಿದ್ದವು. ನಿವೃತ್ತಿ ಹೊಂದಲು ಇನ್ನು ಎರಡು ವರ್ಷಗಳಿರುವುದರಿಂದ ಕಾಲೇಜಿನ ಕಡೆ ಗಮನ ಕೊಡಬೇಕಿದೆ ಎಂದು ಸರಿಯಾಗಿ ವೈದ್ಯಕೀಯ ತಪಾಸಣೆಗೆ ಹೋಗುವುದು ಕಡಿಮೆ ಮಾಡಿದ್ದರು.

೨೦೧೩ರಲ್ಲಿ ನಿವೃತ್ತಿ ಹೊಂದಿದ ಎರಡು ತಿಂಗಳಲ್ಲೇ ಮಯಾಸ್ತೇನಿಯಾ ಗ್ರೇವಿಸ್ ಎಂಬ ಭಯಾನಕ ಆಟೋಇಮ್ಯುನ್ ಕಾಯಿಲೆ ಅವರನ್ನು ಜೀವನ್ಮರಣದ ಹಾದಿಯಲ್ಲಿ ಪೀಡಿಸಿತು. ಇದಕ್ಕೆ ಕಾರಣ ಹಿಂದೆ ಬಂದು ಮರೆಯಾಗಿದ್ದ ಥೈಮೋಮ ಕ್ಯಾನ್ಸರ್ ಗಡ್ಡೆಯು ಮರುಕಳಿಸಿರುವುದು ಎಂಬುದನ್ನು ಅಪೋಲೋ ಆಸ್ಪತ್ರೆಯಲ್ಲಿ ಪತ್ತೆಹಿಡಿದರು. ಆದರೂ ಧೃತಿಗೆಡದೆ ಸುಮಾರು ಎರಡು ತಿಂಗಳುಗಳ ಕಾಲ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಉಳಿದು ಹೋರಾಡಿದ ಅವರ ಜೀವನ ಪ್ರೀತಿಗೆ ನಾವು ಕೈಸೇರಿಸಿದ್ದೇವಷ್ಟೆ. ಅವರ ಈ ಜೀವನ ಪ್ರೀತಿ ಮುಂದೆ ಆಸ್ಪತ್ರೆಯ ಅನುಭವಗಳ ಪುಸ್ತಕದ ರೂಪದಲ್ಲಿ ಹೊರಬಂದಿತು (ಆಸ್ಪತ್ರೆಯಲ್ಲಿ ೫೪ ದಿನಗಳು).

೨೦೧೪ ರಲ್ಲಿ ಮಯಾಸ್ತೇನಿಕ್ ಕ್ರೈಸಿಸ್ ನಿಂದ ಹೊರಬಂದರೂ ಅವರ ಆರೋಗ್ಯ ತುಂಬಾ ಸೂಕ್ಷ್ಮವಾಗಿತ್ತು. ಆಟೋ ಇಮ್ಮ್ಯೂನ್ ರೋಗವಾದ್ದರಿಂದ ಅತಿ ಹೆಚ್ಚು ಕಾಳಜಿ ವಹಿಸಿ ಆರೋಗ್ಯ ಕಾಪಿಡಬೇಕಾಗುತ್ತದೆ. ೨೦೧೮ರ ವರೆಗೂ ಅವರು ಹಲವು ವೈದ್ಯಕೀಯ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಮತ್ತು ಇಮ್ಮ್ಯುನ್ ಮಾಡಿಫಿಕೇಶನ್ ಪಡೆದರು. ಅನಾರೋಗ್ಯದ ನೋವು ಮತ್ತು ಹಿಂಸೆಯನ್ನು ಯಾವಾಗಲೂ ನಗುತ್ತಲೇ ಶಾಂತ ಚಿತ್ತರಾಗಿ ಅಪ್ಪ ಅನುಭವಿಸಿದರು.

ಅವರಿಗೆ ಅದೆಷ್ಟು ಹಿಂಸೆಯಾಗಿದ್ದರೂ, ಅದೆಷ್ಟು ಆಸ್ಪತ್ರೆಯ ವಾಸವಾದಾಗಲೂ ಮಾನಸಿಕ ಖಿನ್ನತೆಗೆ ಒಳಗಾಗಲಿಲ್ಲ. ಅವರಷ್ಟೇ ಅಲ್ಲದೆ ನಮ್ಮನ್ನು ಖಿನ್ನತೆಗೊಳಗಾಗದಂತೆ ಅವರು ನೋಡಿಕೊಂಡರು. ನಮ್ಮನ್ನು ಸಲಹಿದರು. ಮಾರ್ಗದರ್ಶನ ನೀಡುತ್ತಿದ್ದರು. ಕುಟುಂಬಕ್ಕಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ಅವರನ್ನು ಶುಶ್ರೂಷೆ ಮಾಡುತ್ತಿದ್ದ ವಾರ್ಡ್ ಬಾಯ್ಸ್, ನರ್ಸ್ ಗಳನ್ನು ಅತ್ಯಂತ ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರು.

ಆಸ್ಪತ್ರೆಯ ಸಿಬ್ಬಂದಿ ಅಪ್ಪನನ್ನು ತುಂಬಾ ಹಚ್ಚಿಕೊಂಡಿದ್ದರು. ಆಸ್ಪತ್ರೆಯ ವೈದ್ಯರುಗಳಾದ ಡಾ. ಹರಿಶ್ ನಾಯಕ್, ಡಾ. ಆಮೀರ್ ಮೊಯಿನ್, ಡಾ. ರಾಮಕೃಷ್ಣ, ಡಾ. ಮಧು ಮತ್ತು ಸಿಬ್ಬಂದಿ ಅಪ್ಪನನ್ನು ತುಂಬಾ ಕಾಳಜಿ ವಹಿಸಿ ಐದು ವರ್ಷಗಳ ಕಾಲ ನಮಗೆ ಬದುಕಿಸಿಕೊಟ್ಟರು. ಆಗ ನಮಗೆ ಬೆನ್ನೆಲುಬಾಗಿ ನಿಂತವರು ಬಹಳ. ಅದರಲ್ಲೂ ಅಪ್ಪನ ಸ್ನೇಹಿತರಾದ ಪ್ರೊ. ಜಿ. ಚಂದ್ರಶೇಖರ್ ಎಂದಿಗೂ ನಮಗೆ ಜೊತೆ ನೀಡಿದ್ದಾರೆ. ಅಪ್ಪನ ಜನರೊಟ್ಟಿಗಿನ, ವಿದ್ಯಾರ್ಥಿಗಳೊಟ್ಟಿಗಿನ ಸ್ನೇಹ ಮತ್ತು ಪ್ರೀತಿವಿಶ್ವಾಸಗಳನ್ನು ಇಂಥಾ ಸಂದರ್ಭಗಳಲ್ಲೇ ನಾನು ನೋಡಿ ತಿಳಿದದ್ದು.

ಅಪ್ಪನ ಆರೋಗ್ಯ ಪಾಲನೆಯಲ್ಲಿ ಅಮ್ಮನ ಪಾತ್ರ ದೊಡ್ಡದು. ’ನಿಮ್ಮ ಅಮ್ಮ ನನಗೆ ಗೆಳತಿ, ಬಾಳಸಂಗಾತಿ ಅಷ್ಟೇ ಆಗಿರದೆ ನನ್ನ ತಾಯಿ ಕೂಡ ಆಗಿದ್ದಾಳೆ. ಆಕೆಗೆ ಸರಳ ಮತ್ತು ಪ್ರಾಮಾಣಿಕ ಮನಸ್ಸಿದೆ. ಆಕೆ ದೊಡ್ಡವಳು’, ಎಂದು ಅಪ್ಪ ಹಲವಾರು ಬಾರಿ ನಮ್ಮ ಜೊತೆ ಹೇಳಿಕೊಂಡಿದ್ದಾರೆ. ಅನಾರೋಗ್ಯದ ಸ್ಥಿತಿಯಲ್ಲೂ ಅಮ್ಮನಲ್ಲಿ ಜೀವನೋತ್ಸಾಹವನ್ನು ಅಪ್ಪ ಕಾಪಾಡುತ್ತಿದ್ದರು. ಸುಮಾರು ಇಪ್ಪತ್ತು ವರ್ಷಗಳಷ್ಟು ಧೀರ್ಘವಾದ ಅಪ್ಪನ ಅನಾರೋಗ್ಯದ ಜೀವನದಲ್ಲಿ ಅಮ್ಮ ಎದೆಗುಂದದೆ ಖಿನ್ನತೆಗೊಳಗಾಗದೆ ಇರುವಂತೆ ಅಪ್ಪನ ಸ್ಫೂರ್ತಿ ನೋಡಿಕೊಂಡಿದೆ.

ತೀರ ಇತ್ತೀಚಿನವರೆಗೂ ಅಪ್ಪ ಮನೆಕೆಲಸದಲ್ಲಿ ಅಮ್ಮನಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಅವರು ಅಮ್ಮನಿಗೆ ಕೊಡುತ್ತಿದ್ದ ಅಪಾರವಾದ ಗೌರವ ಮತ್ತು ಪ್ರೀತಿ, ಮಧುರ ದಾಂಪತ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕಾರಣವಾಗಿತ್ತು. ಮೂರು ದಶಕಗಳಿಗಿಂತ ಹೆಚ್ಚಾಗಿ ಜೊತೆಗೆ ಬದುಕಿದ್ದರೂ ಇಂದಿಗೂ ಅಪ್ಪ ಅಮ್ಮನಲ್ಲಿ ಪ್ರೀತಿಯ ಆರ್ದತೆಯಿತ್ತು. ಪ್ರತಿದಿನವೂ ಅವರಿಬ್ಬರ ಕಣ್ಣುಗಳು ಆತ್ಮೀಯತೆಯಿಂದ ಬೆರೆಯುತ್ತಿದ್ದವು, ಮಾತುಗಳು ಪ್ರೇಮವನ್ನು ಒಸರುತ್ತಿದ್ದವು.

ಇಂತಹ ಆರೋಗ್ಯಕರ ದಾಂಪತ್ಯ ಮಕ್ಕಳಾದ ನಮಗೆ ಒಳ್ಳೆಯ ಕೌಟುಂಬಿಕ ವಾತಾವರಣವನ್ನು ಕೊಟ್ಟಿದೆ. ಇದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಅಪಾರ ಕೊಡುಗೆಯಾಗಿದೆ. ಹಾಗೆಯೇ ಆದರ್ಶ ದಾಂಪತ್ಯದ ಒಂದು ಉದಾಹರಣೆಯಾಗಿ ನಮ್ಮ ತಂದೆ ತಾಯಿ ನಿಲ್ಲುತ್ತಾರೆ.

ಅಪ್ಪ, ನೇಸರನ ಪತ್ನಿ ಮೇಘಾಳನ್ನು ’ಮಗಳೇ’ ಎಂದೇ ಕರೆಯುತ್ತಿದ್ದರು. ಮೇಘಾ ಮದುವೆಯಾಗಿ ಬಂದ ದಿನದಿಂದ ಅಪ್ಪನನ್ನು ಮಗುವಿನಂತೆ ನೋಡಿಕೊಂಡಳು. ’ಅಪ್ಪ’ ಎಂದು ಕರೆಯುತ್ತಾ ಮುದ್ದಾದ ಚುರುಕಾದ ಕಂದ ಅಕ್ಷರನನ್ನು ಸಾಕಾರಗೊಳಿಸಿ ನಮ್ಮ ತಂದೆಗೆ ತಾತನ ಅನುಭವವನ್ನು ಕೊಟ್ಟಳು. ಅಪ್ಪನಿಗೆ ಅಕ್ಷರನನ್ನು ಎತ್ತಿಕೊಳ್ಳಲು ಆಗುತ್ತಿರಲಿಲ್ಲವಾದರೂ ಅಕ್ಷರ ಯಾವಾಗಲು ಅಪ್ಪನ ಕಾಲುಗಳ ಮಧ್ಯೆ ನಿಲ್ಲುತ್ತಾ ಅಪ್ಪನ ಕೈಗಳ ಜೊತೆ ಆಟವಾಡುತ್ತಿದ್ದನು.

ಅಕ್ಷರನಿಗೆ ಮಾತು ಬಂದ ಮೇಲಂತೂ ಒಂದೇ ಸಮನೆ ಮಾತನಾಡುತ್ತಾ ತಾತನ ಮುಂದೆ ನೆಲದ ಮೇಲೆ ಕೂತು ಆಟವಾಡುತ್ತಿದ್ದನು. ರಾತ್ರಿ ಮಲಗುವ ಮುನ್ನ ತಾತ ಅಜ್ಜಿಯ ರೂಮಿನಲ್ಲಿ ಸ್ವಲ್ಪ ಹೊತ್ತು ಆಟವಾಡಿ, ಹೊರಡುವ ಮುನ್ನ, ’ಏನಾದರೂ ಬೇಕಿದ್ದರೆ ಕೇಳಿ, ಗುಡ್ ನೈಟ್’ ಎಂದು ಕೈಬೀಸುತ್ತಾ ಮುಗುಳ್ನಗುತ್ತಾ ತನ್ನ ರೂಮಿಗೆ ಹೋಗುತ್ತಿದ್ದನು.

ತಾತನ ಆರೋಗ್ಯ ಸರಿಯಿಲ್ಲದ್ದು ಅಕ್ಷರನ ಪುಟ್ಟ ಮನಸ್ಸು ಅರ್ಥ ಮಾಡಿಕೊಂಡಿತ್ತು. ಪುಟ್ಟ ಅಕ್ಷರನ ಬುದ್ಧಿವಂತಿಕೆ, ಅಂತಃಕರಣ ಮತ್ತು ಪ್ರೀತಿಯನ್ನು ನಾನು ಆಶ್ಚರ್ಯ, ಸಂತೋಷ ಮತ್ತು ಗೌರವದಿಂದ ಕಂಡೆ. ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದ ತಾತನನ್ನು ಅಕ್ಷರ ಈಗಲೂ ’ತಾತ ಆಸ್ಪತ್ರೆಯಲ್ಲಿ ಇದೆಯಾ?’ ಎಂದು ನೆನೆಯುತ್ತಾನೆ. ಈ ಸೆಪ್ಟೆಂಬರ್ ತಿಂಗಳಿಗೆ ಅಕ್ಷರ ಮೂರು ವರ್ಷದವನಾಗುತ್ತಾನೆ.

ಅಪ್ಪ ಬೆಳೆಸಿದ ಹೊಂಗೆ ಮರ ತನ್ನ ರೆಂಬೆಕೊಂಬೆಗಳನ್ನು ಹರಡಿಕೊಂಡು ವಿಶಾಲವಾಗಿ ನಮ್ಮ ಮನೆಯನ್ನು ಅಪ್ಪಿಕೊಂಡಿದೆ. ಅಪ್ಪ ಕಾಳಜಿಯಿಂದ ಸಲಹಿದ ಆಕಾಶ ಮಲ್ಲಿಗೆ ಮುಗಿಲೆತ್ತರಕ್ಕೆ ಬೃಹದಾಕಾರವಾಗಿ ಬೆಳೆದು ಆಕಾಶಕ್ಕೆ ಏರುತ್ತಲೇ ಇದೆ. ಅಪ್ಪನನ್ನು ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿಬಂದ ರಾತ್ರಿ ಅದರ ಕಾಂಡವನ್ನು ಹಿಡಿದು ಒಮ್ಮೆ ತಬ್ಬಿದೆ. ಆಕಾಶಮಲ್ಲಿಗೆಯ ಕಾಂಡ ನನ್ನ ಕೈಗಳಿಗೆ ಪೂರಾ ಸಿಗಲಿಲ್ಲ. ಸ್ವಲ್ಪಹೊತ್ತು ಅದರ ಕಾಂಡಕ್ಕೆ ತಲೆಕೊಟ್ಟು ಒರಗಿದೆ. ಮರದ ತೊಗಟೆ ನನ್ನ ಕೆನ್ನೆಯನ್ನು ಸವರಿ ನನ್ನ ಕಣ್ಣೀರನ್ನು ಹೀರಿಕೊಂಡಿತು.

ಸ್ವಲ್ಪ ಸಮಯದ ನಂತರ ಅದರ ಪಕ್ಕದಲ್ಲಿ ಚಾಚಿಕೊಂಡು ನಿಂತಿರುವ ಹೊಂಗೆ ಮರವನ್ನು ತಬ್ಬಿದೆ. ಅದರ ಕಾಂಡ ನನ್ನ ಕೈಗಳಿಗೆ ಪೂರಾ ಸಿಕ್ಕಿತು. ಹಾಗೇ ತಲೆಕೊಟ್ಟು ಕಣ್ಣು ಮುಚ್ಚಿದೆ. ನನ್ನ ಅಪ್ಪನನ್ನು ನಾನು ಇನ್ನು ಮುಂದೆ ಹೀಗೇ ತಬ್ಬುವುದು.

। ಮುಗಿಯಿತು ।

2 comments

  1. ಸುಶೀ , ಮಾರ್ದವತೆ ತುಂಬಿದ ಆಪ್ಯಾಯಮಾನ ಬರಹ.. ನಮ್ಮಪ್ಪನ ಪಕ್ಕದಲ್ಲಿ ಈಗ ನಿಮ್ಮಪ್ಪನೂ ನಿಂತಿದ್ದಾರೆ . ಹೆಚ್ಚು ನುಡಿಯದಂತೆ ಹೃದಯ ಭಾರವಾಗಿದೆ. ಥ್ಯಾಂಕ್ಯೂ ಸುಶೀ.

  2. ಆಸ್ಪತ್ರೆಯಲ್ಲಿ ಐವತ್ನಾಲ್ಕು ದಿನಗಳು ಕೃತಿ ಓದಿ ಕಾಡನಕುಪ್ಪೆಯವರ ಸಾವಿನೆದುರು ಪ್ರೀತಿಯಿಂದ ನಿಲ್ಲುವ ದಿಟ್ಟತನಕ್ಕೆ ಬೆರಗಾಗಿದ್ದೆ. ಎದೆತೊಯ್ಸಿದ ಬರಹ. ಮೂಕನಾಗಿದ್ದೇನೆ. ಧನ್ಯವಾದಗಳು ಮೇಡಂ.

Leave a Reply