ಇಷ್ಟಾಗಿಯೂ ಸಾಲು, ಸಾಲು ಊರ್ಮಿಳೆಯರು ಕಾಯುತ್ತಿದ್ದಾರೆ ಇಲ್ಲಿ..

ಕಾಯುತ್ತಿದ್ದಾರೆ ಊರ್ಮಿಳೆಯರು ಊರ್ಮಿಳೆ ಕಾಯುತ್ತಲೇ ಇದ್ದಾಳೆ. ಕಾಯುವಿಕೆ ಅವಳಿಗೆ ಹೊಸದೇನೂ ಅಲ್ಲ. ಅದವಳಿಗೆ ಹುಟ್ಟಿದಾಗಿನಿಂದ ಬಂದ ಅನುದಿನದ ಕಾಯಕ. ಅವಳು ಹೆಸರಿಗಷ್ಟೇ ಮಿಥಿಲೆಯ ಮಹಾರಾಜ ಜನಕರಾಜನ ಮೊದಲ ಮಗಳು. ಆದರೆ ಅವಳು ಹುಟ್ಟುವ ಮೊದಲೇ ಜನಕನಿಗೆ ಸೀತಾದೇವಿಯೆಂಬ ಅನರ್ಘ್ಯ ರತ್ನವೊಂದು ನೆಲದ ಮಡಿಲಿನಲ್ಲಿ ಸಿಕ್ಕಿಬಿಟ್ಟಿತ್ತು. ಆ ಸಂಭ್ರಮವನ್ನವಳು ಅವರಿವರ ಬಾಯಲ್ಲಿ ಅನೇಕ ಸಲ ಕೇಳಿದ್ದಾಳೆ.

ಅಂದು ಮಿಥಿಲೆಯಲ್ಲಿ ಭೂಮಿ ಮುಹೂರ್ತದ ಸಂಭ್ರಮ. ಮಿಥಿಲೆಯ ನೆಲವೆಂದರೆ ಅದೆಂಥ ಫಲವತ್ತು ಗಾಳಿ ತೂರಿ ತಂದ ಬೀಜವೆಲ್ಲ ಮಿಥಿಲೆಯಲ್ಲಿ ಮೊಳೆಯುತ್ತದೆ ಎನ್ನುತ್ತಿದ್ದರು ಆಚೀಚೆಯ ಊರಿನವರು. ಅಂತಹ ರಾಜ್ಯದಲ್ಲಿ ಮೊದಲ ನೇಗಿಲ ಗೆರೆಯನ್ನು ರಾಜನೇ ಎಳೆಯಬೇಕಾದ್ದು ಸಂಪ್ರದಾಯ.

ರಾಣೀವಾಸದವರು ಮೊದಲಿಗೆ ಭೂತಾಯಿಯನ್ನು ಫಲಪುಷ್ಪಗಳನ್ನಿಟ್ಟು ಪೂಜಿಸಿದ್ದಾರೆ. ಜನಕ ಮಹಾರಾಜ ನೇಗಿಲಿನೊಂದಿಗೆ ಹೊಲದೊಳಗೆ ಇಳಿದಿದ್ದಾನೆ. ರಾಜನ ಉಳುಮೆಯೆಂದರೇನು ಸಾಮಾನ್ಯವೆ? ಎತ್ತುಗಳನ್ನುಇನ್ನಿಲ್ಲದಂತೆ ಶೃಂಗರಿಸಲಾಗಿದೆ. ನೇಗಿಲು ಹಿಡಿದು ಜನಕ ಮಹಾರಾಜ ಒದ್ದೆನೆಲದ ಮೇಲೆ ನೇಗಿಲಿನ ಗೆರೆಯನ್ನು ಎಳೆದುದೇ ತಡ, ಸುತ್ತ ಸೇರಿದ ಜನರೆಲ್ಲ ‘ಉಘೇ…’ ಎಂದು ಜಯಘೋಷ ಮಾಡಿದ್ದಾರೆ.

ಜನಕ ಮಹಾರಾಜನ ಹಿಂದೆಯೇ ಪ್ರಜಾಜನರು ಸಾಲಲ್ಲಿ ನೇಗಿಲುಗಳನ್ನು ಹಿಡಿದು ತಮ್ಮ, ತಮ್ಮ ಎತ್ತುಗಳೊಂದಿಗೆ ಹೊಲಕ್ಕೆ ಇಳಿದಿದ್ದಾರೆ. ಮುಂಚೂಣಿಯಲ್ಲಿ ನಿಂತು ಹೊಲ ಉಳುತ್ತಿರುವ ಜನಕ ಮಹಾರಾಜನ ಮನಸ್ಸಿನಲ್ಲಿ ಹೀಗೊಂದು ಆಲೋಚನೆ ಮೂಡಿದೆ. ಮಿಥಿಲೆಯ ನೆಲದಂತೆ ನನ್ನ ಮಡದಿಯ ಗರ್ಭವೂ ಇರಬಾರದಿತ್ತೆ? ಹುಲುಸಾದ ಬೆಳೆಯ ಮಾತಂತಿರಲಿ, ಹೆಸರಿಗೊಂದಾದರೂ ಕುಡಿ ಒಡಮೂಡಬಾರದೆ?

ಇನ್ನೂ ಹುಟ್ಟದ ಪುಟ್ಟ ಮಗುವಿನ ಮುಖವೊಂದು ಎದುರಿಗೆ ಬಂದಂತಾಗಿ ಬಾಗಿದವನಿಗೆ ಕಂಡದ್ದು ನೇಗಿಲ ತುದಿಯ ಅಂಚಿನಲ್ಲಿ ಮಲಗಿದ ಮುದ್ದಾದ ಹೆಣ್ಣುಮಗು! ಜನಕನ ಖುಶಿಗೆ ಪಾರವೇ ಇರಲಿಲ್ಲ. ಮಗುವನ್ನೆತ್ತಿ ಪಟ್ಟದರಸಿಯ ಕೈಗಿಡುವಾಗ ದಿಗ್ವಿಜಯ ಸಾಧಿಸಿದ ಸಾರ್ಥಕತೆ. ಮಿಥಿಲೆಯ ಹೊಲದಲ್ಲಿ ಸಿಕ್ಕ ಮಗುವಿಗೆ ಭೂಮಾತೆಯ ಮಗಳೆಂಬ ಘನತೆ. ಪ್ರತಿದಿನ ಅವಳ ಮುಖ ನೋಡಿಯೇ ಜನಕ ಆಸ್ಥಾನಕ್ಕೆ ತೆರಳುವುದು.

ಅವಳನ್ನು ನೋಡಿದ ನಂತರವೇ ಶಯನಾಗಾರಕ್ಕೆ ಪಯಣಿಸುವುದು. ಮತ್ತೆ ಹುಟ್ಟಿದವಳು ಊರ್ಮಿಳೆ. ಊರ್ಮಿಳೆ ಬಂದ ನಂತರ ಸೀತೆಯನ್ನೆಲ್ಲಾದರೂ ಮಹಾರಾಣಿ ಕಡೆಗಣಿಸುವಳೇನೋ ಎಂಬ ಆತಂಕ ಮಹಾರಾಜನಿಗೆ. ಮಾತೆತ್ತಿದರೆ ಅವಳ ಬಗ್ಗೆಯೇ ವಿಚಾರಣೆ. ಮಹಾರಾಣಿಗೂ ಇದು ತಿಳಿಯದ್ದೇನಲ್ಲ.

ಮಹಾರಾಜನ ಆತಂಕ ವಿನಾಕಾರಣದ್ದು ಎಂಬುದನ್ನವಳು ತನ್ನ ಪ್ರತಿನಡೆಯಲ್ಲೂ ಸಾಬೀತುಪಡಿಸುತ್ತಿದ್ದಳು. ಹಾಗಾಗಿ ಊರ್ಮಿಳೆ ತಂದೆಯ ತೊಡೆಯನ್ನೇರಲು, ತಾಯಿಯ ಮಡಿಲಿಗೆ ಜಾರಲುಸದಾಕಾಲ ಕಾಯಲೇಬೇಕು. ಸೀತೆ ಖಾಲಿ ಮಾಡಿದ ಮೇಲಷ್ಟೇ ಅದನ್ನವಳು ಪಡೆಯಬಲ್ಲಳು.

ವಿವಾಹವಾದರೂ ಅಷ್ಟೆ. ಸೀತೆ ತನ್ನ ಹುಡುಗಾಟಿಗೆಯಲ್ಲಿ ಶಿವನ ಧನುಸ್ಸನ್ನೆತ್ತಿಬಿಟ್ಟಿದ್ದಳು. ಆಗ ಎಲ್ಲರ ಬಾಯಲ್ಲೂ ಅದೇ ಮಾತು. ಹಾಗಾಗಿ ಬಿಲ್ಲನ್ನೆತ್ತುವ ಶೂರ ಬರುವವರೆಗೂ ಅವಳ ಸ್ವಯಂವರ ನಡೆಯದು. ಅವಳದಾಗದೇ ಊರ್ಮಿಳೆಯ ಮದುವೆಯೆಂತು ನಡೆದೀತು? ಹಾಗಾಗಿ ಅಲ್ಲಿಯೂ ಊರ್ಮಿಳೆ ಕಾದವಳೆ. ಶ್ರೀರಾಮ ಹರಧನುಸ್ಸನ್ನು ಭಂಗಿಸಿ ಸೀತೆಯನ್ನು ವರಿಸಿದ ಬಳಿಕ ಊರ್ಮಿಳೆ ಅವನೊಂದಿಗೆ ಬಂದ ಲಕ್ಷ್ಮಣನಿಗೆ ವಧುವಾಗುವುದೆಂದು ನಿಶ್ಚಯವಾಯಿತು. ಸೀತೆಯೊಂದಿಗೆ
ಊರ್ಮಿಳೆಯೂ ಅಯೋಧ್ಯೆಗೆ ಬರುವಂತಾಯಿತು.

ಅಂದು ತಂದೆಯ ಆಜ್ಞಾಧಾರಕನಾಗಿ ಶ್ರೀರಾಮ ಕಾಡಿಗೆ ಹೊರಟಾಗ ಸೀತೆಯೂ ಅವನೊಂದಿಗೆ ಹೊರಟಳು. ಲಕ್ಷ್ಮಣನೂ ಹೊರಡುತ್ತಿದ್ದಾನೆ ಎಂದು ಅರಮನೆಯ ದಾಸಿ ಹೇಳಿದಾಗ ಊರ್ಮಿಳೆಗೆ ಅದೆಂತಹ ಹುಮ್ಮಸ್ಸು! ತಾನೂ ತನಗೆ ಬೇಕಾದುದನ್ನೆಲ್ಲ ಒಂದುಗೂಡಿಸತೊಡಗಿದಳು. ಅಣ್ಣನೊಂದಿಗೆ ಅತ್ತಿಗೆಯೂ ಹೊರಡುತ್ತಿರುವಾಗ ತನ್ನೊಂದಿಗೆ ಹೆಂಡತಿಯೂ ಬರುವಳೆಂಬ ಸೂಕ್ಷ್ಮ ತನ್ನ ಗಂಡನಿಗೆ ತಿಳಿದಿದೆಯೆಂಬುದು ಅವಳ ನಂಬಿಕೆ.

ಆದರೆ ಲಕ್ಷ್ಮಣ, “ಊರ್ಮಿಳೆ, ನಾನಿನ್ನು ಬರಲೆ?” ಎಂದು ವಿದಾಯದ ಮಾತುಗಳನ್ನಾಡಿದ್ದಾನೆ. ಸ್ತಂಭೀಭೂತಳಾಗಿ ನಿಂತಳು ಊರ್ಮಿಳೆ! ಕ್ಷಣಕಾಲ ಮೈಮರೆತರೂ ಅವಕಾಶ ಕೈತಪ್ಪುವುದೆಂದು ಸಾವರಿಸಿಕೊಂಡು ಕೇಳಿದಳು, “ನಾನೂ ಬರುವೆ ನಿಮ್ಮೊಂದಿಗೆ.” ನಕ್ಕ ಲಕ್ಷ್ಮಣ. “ನಾವೇನು ವನವಿಹಾರಕ್ಕೆ ಹೊರಟಿರುವೆಯೆಂದುಕೊಂಡೆಯಾ?” ಪ್ರಶ್ನೆ ಚೂರಿಯಂತೆ ಇರಿದಿತ್ತು ಅವಳನ್ನು.

“ನಿನ್ನ ಅಕ್ಕನನ್ನೇ ಕೇಳು, ಏನೆನ್ನುವಳೆಂದು.” ಊರ್ಮಿಳೆ ಸಾವರಿಸಿಕೊಂಡು ನುಡಿದಳು, “ಅಕ್ಕನೂ ಬರುತ್ತಿರುವಳಲ್ಲ” ಲಕ್ಷ್ಮಣನಿಗೀಗ ಕೋಪ ಬಂದಿತ್ತು. “ಹೌದು ಬರುತ್ತಿದ್ದಾಳೆ. ಅದಕ್ಕೆಂದೇ ನಾನೂ ಹೋಗುತ್ತಿರುವುದು, ಅವರಿಬ್ಬರ ರಕ್ಷಣೆಗೆಂದು. ಮುಂದೆ ಅಣ್ಣ ಶ್ರೀರಾಮ, ಹಿಂದೆ ನಾನು,ನಡುವೆ ಅತ್ತಿಗೆ. ಮತ್ತೆ ನಿನ್ನನ್ನೆಲ್ಲಿ ನಡೆಸಲಿ ಹೇಳು? ಸುಖವಾಗಿ ಇಲ್ಲೇ ಇರು.” ಮತ್ತೆ ಮಾತಿಗೆ ಅವಕಾಶವಿಲ್ಲವೆಂಬಂತೆ ತೆರಳಿದ ಲಕ್ಷ್ಮಣ. ಊರ್ಮಿಳೆಗೀಗ ಒಂದೇ ಭರವಸೆಯೆಂದರೆ ಅಕ್ಕ ಸೀತೆ.

ಅವಳೇನಾದರೂ ಸಮ್ಮತಿಸಿದರೆ ತಾನೂ ಗಂಡನೊಂದಿಗೆ ಹೊರಡಬಹುದೆಂಬ ಸಣ್ಣ ಆಸೆ. ಸೀತೆಯನ್ನು ಭೇಟಿಯಾದಳು. ಅವಳು ಬೇರೆಯೇ ಮಾತನ್ನಾಡಿದಳು, “ನೋಡು ಊರ್ಮಿಳಾ, ನಿನ್ನ ಪತಿ ಸರಿಯಾಗಿಯೇ ಹೇಳಿದ್ದಾನೆ. ಇದರಲ್ಲಿ ಇನ್ನೊಂದು ಸೂಕ್ಷ್ಮವೂ ಅಡಗಿದೆ. ಈಗ ನಾವಿಬ್ಬರೂ ಗಂಡಂದಿರೊಂದಿಗೆ ಹೊರಟೆವು ಎಂದಿಟ್ಟುಕೊಳ್ಳೋಣ. ಆಗ ಪುರಜನರೆಲ್ಲ ಏನೆನ್ನುತ್ತಾರೆ ಹೇಳು?ಈ ಮಿಥಿಲೆಯ ಹೆಣ್ಣುಗಳನ್ನು ತಂದೇ ಮಹಾರಾಜ ಕೆಟ್ಟ. ವಯಸ್ಸಾದ ಅತ್ತೆ ಮಾವಂದಿರನ್ನು ಬಿಟ್ಟು ಗಂಡಂದಿರೊಂದಿಗೆ ಕಾಡಿಗೆ ಹೊರಟೇಬಿಟ್ಟರು. ಇಲ್ಲಿ ಇವರನ್ನು ಕೇಳುವವರಿಲ್ಲ ಎನ್ನುವುದಿಲ್ಲವೇನು? ನಾನು ಪಾತಿವ್ರತ್ಯದ ನಿಯಮವನ್ನು ಪಾಲಿಸುವೆ. ನೀನು ಸೊಸೆಯಾಗಿ ಅತ್ತೆ ಮಾವಂದಿರನ್ನು ಪರಿಪಾಲಿಸು. ಮಾಂಡವಿ, ಶೃತಕೀರ್ತಿಯರಿಗೆ ರಾಜಮನೆತನದ ನೀತಿ, ನಡಾವಳಿಗೆಲ್ಲ ತಿಳಿಯವು. ಆಗ ನಾವು ತವರಿನ ಕೀರ್ತಿಯನ್ನು ಎತ್ತಿಹಿಡಿಯಬಹುದು.”

ಅರಮನೆಯಲ್ಲಿ ರಾಣಿಯರನ್ನು ನೋಡಿಕೊಳ್ಳಲು ಜನರಿಗೇನು ಕಡಿಮೆಯೆ? ಆದರೆ ಹಾಗೆಂದು ಕಿರಿಯರು ಹಿರಿಯವರನ್ನು
ಪ್ರಶ್ನಿಸಲಾಗದು. ಚೆಂದದ ಪದಗಳ ಬೇಲಿ ಹೆಣ್ಣುಗಳನ್ನುಸುತ್ತುವರೆಯಲು ಸದಾ ಹವಣಿಸುತ್ತಿರುತ್ತದೆ!

 

ಹೌದು, ಈ ಕೀರ್ತಿ, ಮರ್ಯಾದೆ, ಪಾವಿತ್ರ್ಯ ಇವೆಲ್ಲ ಎಷ್ಟು ಚೆಂದದ ಪದಗಳು! ಆದರೆ ಅದಕ್ಕೆ ತೆರಬೇಕಾದ ಬೆಲೆಯೇನೂ
ಕಡಿಮೆಯದ್ದಲ್ಲ. ಊರ್ಮಿಳೆ ಮನಸ್ಸನ್ನು ಕಲ್ಲಾಗಿಸಿಕೊಂಡಳು.

ಕಲ್ಲಾಗಿ ಹೋಗಿ ಆಸೆಗಳೇ
ಕಲ್ಲಾಗಿ ಹೋಗಿ ಬಯಕೆಗಳೇ
ಕಲ್ಲಾಗಿ ಹೋಗಿ ಭಾವಗಳೇ
ಕಲ್ಲಾಗಿ ಹೋಗಿ ಅಂಗಾಂಗಳೇ
ಕಲ್ಲಾಗಿ ಹೋಗಿ ಕನಸುಗಳೇ

ಎಲ್ಲ ಕಲ್ಲಾದ ಮೇಲೆಯೂ ಮತ್ತೆ ತನ್ನ ಗಂಡ ಮರಳಿ ಬರುವನೆಂಬ ನಿರೀಕ್ಷೆಯಿದೆಯಲ್ಲ, ಅದು ಜೀವಂತವಾಗಿಯೇ ಮನದ
ಮೂಲೆಯಲ್ಲಿ ಮಿನುಗುತ್ತಿತ್ತು. ಕಾಡುಪಾಲಾಗಿ ಕಷ್ಟ ಪಡುತ್ತಿರುವ ಸೀತೆಯ ಗುಣಗಾನ ಅಯೋಧ್ಯೆಯನ್ನು ಇಡಿಯಾಗಿ
ವ್ಯಾಪಿಸಿತೇ ಹೊರತು, ಊರ್ಮಿಳೆಯ ನಿಟ್ಟುಸಿರಲ್ಲ.

ಮತ್ತೆ ಬಂದ ಲಕ್ಷ್ಮಣ. ಊರ್ಮಿಳೆಯ ಹೃದಯದಲ್ಲೀಗ ಹೊಸರಾಗ! ಹದಿನಾಲ್ಕು ವರ್ಷಗಳ ತನ್ನ ಕಾಯುವಿಕೆಗೊಂದು ಪ್ರೀತಿಯ ಸಾಂತ್ವನವನ್ನವಳು ಅವನಿಂದ ಬಯಸಿದ್ದಳು. ಆದರೆ ಆ ಗಂಡು ಹೃದಯಕ್ಕೆ ಅವಳ ಮೃದುವಾದ ಭಾವ ಮಿಡಿತ ನಾಟಲೇಇಲ್ಲ. ಬಂದವನೇ ಅವಳೊಂದಿಗೆ ಗಡಬಡಿಸಿ ನುಡಿದ, “ಊರ್ಮಿಳೆ, ಇಲ್ಲೇನು ಮಾಡುತ್ತಿರುವೆ? ಅಲ್ಲಿ ಅತ್ತಿಗೆ ಲಂಕಾಧೀಶನ ಸೆರೆಯಲ್ಲಿದ್ದು ಬಹಳವೇ ಬಳಲಿದ್ದಾರೆ. ಇನ್ನೆರಡು ದಿನಗಳಲ್ಲಿ ಪಟ್ಟವೇರಲು ಸಜ್ಜಾಗಬೇಕಿದೆ ಅವರು. ಹೋಗಿ
ಸಂತೈಸಬಾರದೇನು? ಅರಮನೆಯ ವಾಸದಂತಲ್ಲ ಕಾಡಿನ ಸಹವಾಸ. ಅವಳಿಗೀಗ ನಿನ್ನ ಸಾಂತ್ವನ ಬೇಕಿದೆ”

“ನಾನೂ ನಿಮ್ಮಿಂದ ಅದನ್ನೇ ಬಯಸುತ್ತಿದ್ದೇನೆ” ಎಂಬ ಅವಳ ಮಾತು ಗಂಟಲಲ್ಲೇ ಆರಿತು. ಊರ್ಮಿಳೆ ಕಾಯುತ್ತಿದ್ದಾಳೆ
ಅವನ ಒಂದೇ ಒಂದು ಪ್ರೀತಿಯ ಮಾತಿಗಾಗಿ……..

ಪುರಾಣದೀಚಿಗೆ ಜಿಗಿದರೆ ಕಣ್ಮುಂದೆ ನಿಲ್ಲುತ್ತಾರೆ ಸಾಲು, ಸಾಲು ಊರ್ಮಿಳೆಯರು. ಬಹಳ ವರ್ಷಗಳ ಹಿಂದೆ ನನ್ನ ಸಹೋದ್ಯೋಗಿಯೊಬ್ಬರು ತನ್ನ ತಮ್ಮನಿಗೆ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಅವರ ತಮ್ಮ ಮುಸ್ಲಿಂ ದೇಶವೊಂದರಲ್ಲಿ ಉದ್ಯೋಗಿಯಾಗಿದ್ದರು.

ಹೀಗೆ ಒಂದರೆಡು ಹುಡುಗಿಯರ ಬಗೆಗೆ ಹೇಳಿದ ನಂತರ ಅವರು ನನ್ನಲ್ಲಿ ಗುಟ್ಟಾಗಿ ಹೇಳಿದರು, “ನೋಡಿ ಮೇಡಂ, ಅವನಿಗೆ ಶಿಕ್ಷಕಿಯಾಗಿರುವ ಹುಡುಗಿಯಾದರೆ ಒಳ್ಳೆಯದು. ಹೇಗೂ ಹೆಂಡತಿಯನ್ನಂತೂ ಅಲ್ಲಿಗೆ ಕರೆದೊಯ್ಯುವಂತಿಲ್ಲ. ವರ್ಷಕ್ಕೆ ಒಂದು ತಿಂಗಳು ಮಾತ್ರ ರಜೆಯಲ್ಲಿ ಅವನಿಲ್ಲಿಗೆ ಬರುತ್ತಾನೆ ಅಷ್ಟೆ.” ನನಗೆ ಏನೂ ಅರ್ಥವಾಗದೇ ಅವರ ಮುಖ ನೋಡಿದೆ.

ಅದಕ್ಕವರು, “ಅದೇ… ಶಿಕ್ಷಕಿಯರು ಅಂದರೆ ಒಂದು ಶಿಸ್ತಿನಲ್ಲಿ ಇರ್ತಾರೆ ನೋಡಿ. ಜನರ ನಿಂದನೆಗಳಿಗೆ ಹೆದರ್ತಾರೆ. ಮತ್ತೆ ದಿನವೂ ಮಕ್ಕಳೊಡನೆ ಒಡನಾಡುತ್ತಿರುವುದರಿಂದ ಬೇರೆ ಯೋಚನೆಗಳೆಲ್ಲ ಕಡಿಮೆಯಿರುತ್ತದೆ. ಅವರ ಮೇಲೆ ಇಡಿಯ ಸಮಾಜವೇ ಕಣ್ಣಿಟ್ಟಿರುವುದಿಲ್ಲ. ಕೆಲಸವಿರುವುದರಿಂದ ಅವನೊಂದಿಗೆ ಬರುವೆನೆಂದು ಹಠ ಹಿಡಿಯುವುದಿಲ್ಲ. ಅಲ್ಲೆಲ್ಲ ಹೆಂಗಸರನ್ನುಕರೆದುಕೊಂಡು ಹೋದರೆ ಕಷ್ಟ ಅಲ್ವಾ? ಹಾಗಾಗಿ…..” ನನಗೆ ಅವರ ಮುಂದಿನ ಮಾತುಗಳು ಕೇಳಿಸಲೇ ಇಲ್ಲ. ಹೆಣ್ಣನ್ನು ಮಣಿಸಲು ಏನೆಲ್ಲ ತಂತ್ರಗಳು!

ನಮ್ಮ ಕಾಲೇಜು ದಿನಗಳಲ್ಲಿ ನಮ್ಮೂರಿನವರೇ ಆದ ಕೃಷ್ಣಾನಂದ ಕಾಮತ್ ಮತ್ತು ಜೋತ್ಸ್ನಾ ಕಾಮತ್ ಅವರ ಪ್ರೇಮಪತ್ರಗಳು ನಮ್ಮಲ್ಲಿ ಭಾರೀ ಸಂಚಲನ ಮೂಡಿಸಿದ್ದದವು. ಅನೇಕ ವರ್ಷಗಳ ಕಾಲ ಉದ್ಯೋಗದ ಕಾರಣದಿಂದ ದೂರ ದೂರದ ಊರುಗಳಲ್ಲಿ ನೆಲೆಸಿದ್ದ ಅವರು ಬರೆದುಕೊಂಡ ಪತ್ರಗಳನ್ನು ಓದುವಾಗಲೆಲ್ಲ ನನಗಂತೂ ಹಾಗೆ ಚೆಂದದ ಪತ್ರಗಳನ್ನು ಬರೆಯಲಾದರೂ ಗಂಡ ದೂರವೇ ಇರಬೇಕು ಅನಿಸುತ್ತಿತ್ತು.

ಮುಂದೆ ಮದುವೆಯಾಗಿ ಉದ್ಯೋಗದ ಕಾರಣದಿಂದ ಒಂದೆರಡು ವರ್ಷ ದೂರವಿದ್ದಾಗಲೇ ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬುದು ಅರಿವಾಯಿತು. ಪಾಪ, ಈ ಹುಡುಗಿಯರಿಗೂ ಹಾಗೆಯೇ ಇರಬೇಕು. ದೊಡ್ಡ ಸಂಬಳ ತರುವ ಉದ್ಯೋಗ, ಸ್ಫುರದ್ರೂಪಿ ವರ ಕಣ್ಮುಂದೆ ಬಂದಾಗ ವಿದೇಶೀ ವಾಸವೆಂಬುದು ಗೌಣವೆನಿಸುತ್ತದೆ. ದಾಂಪತ್ಯದ ಸಾಂಗತ್ಯದ ಅರಿವಾಗುವುದು ಮದುವೆಯ ನಂತರ ತಾನೆ?

ಗಂಡ ಊರಿಗೆ ಬರುವನೆಂದಾಗ ಅವರ ಮನಸ್ಸು ಗರಿಬಿಚ್ಚಿ ಹಾರುತ್ತದೆ. ಗಂಡನಿಗೋ ಇವಳೊಬ್ಬಳೇ ಅಲ್ಲವಲ್ಲ ಅವನನ್ನು ಕಾಯುವುದು? ಎಲ್ಲರ ನಿರೀಕ್ಷೆಗಳನ್ನು ಅವನು ಪೂರೈಸಬೇಕು. ತಂಗಿಯ ಮದುವೆ, ಅಕ್ಕನ ಮನೆ ನಿರ್ಮಾಣ, ತಮ್ಮನ ಓದು, ಅಪ್ಪನ ಸಾಲ, ಅಮ್ಮನ ಚಿನ್ನ, ನೆರೆಹೊರೆಯವರ ಸಣ್ಣಪುಟ್ಟ ಬಯಕೆಗಳು, ಬಳಗದ ಎಲ್ಲ ಮಕ್ಕಳ ಚಾಕಲೇಟ್ ಆಸೆ ಎಲ್ಲಕ್ಕೂ ತಲೆಕೊಡಬೇಕು.

ಎಲ್ಲ ಸ್ನೇಹಿತರಿಗೆ ಕನಿಷ್ಠ ಒಣ ಹಣ್ಣುಗಳ ಪೂರೈಕೆಯಾದರೂ ಆಗಬೇಕು. ಸಂಬಂಧಿಕರೆಲ್ಲರ ಮನೆಯನ್ನು ಸಂದರ್ಶಿಸಬೇಕು. ಹೀಗೆ ಒಂದು ತಿಂಗಳೆಂಬುದು ಒಂದು ಕ್ಷಣದಂತೆ ಹಾರಿಹೋಗುವುದು. ಮತ್ತೆ ಹೊರಡುವ ಕ್ಷಣ ಬಂದಾಗ ಮನವು ಹೊಯ್ದಾಡುವುದು. ಸಂಪರ್ಕಕ್ಕೆ ಪತ್ರಗಳೇ ಆಧಾರವಾದ ಆ ದಿನಗಳಲ್ಲಂತೂ ಒಂದೇ ಕಾಗದವನ್ನು ಅದು ಕಣ್ಣೀರಿನಿಂದ ತೋಯ್ದು ಮುದ್ದೆಯಾಗುವವರೆಗೂ ಓದುತ್ತಿರಬೇಕು.

ಮೆಲ್ಲನೆ ಒಡಲಲ್ಲಿ ಮಿಸುಕುವ ಕುಡಿಗೆ ಒಂಟಿ ಸಾಂತ್ವನ. ಮಗು ಭೂಮಿಗಿಳಿಯುವಾಗಲೂ ಜನ್ಮದಾತ ಜೊತೆಗಿರುವನೆಂಬ ಖಾತ್ರಿಯೇನಿಲ್ಲ. ಮತ್ತೆ ಬಂದವನ ಕೈಗೆ ಮಗುವಿಡುವಾಗ ಕಾಲ ಇಲ್ಲಿಯೇ ನಿಲ್ಲಲೆಂಬ ಬಯಕೆ. ಕಾಲದ ಕಾಲನ್ನು ಕಟ್ಟಲು ಸಾಧ್ಯವೆ? ಓಡುತ್ತಲೇ ಇರುತ್ತದೆ. ಮಗು ಅಂಬೆಗಾಲಿಟ್ಟು ಓಡಾಡುವಂತಾದಾಗ ಮತ್ತೆ ಅಪ್ಪ ಬರುತ್ತಾನೆ. ಮಗು ಅಪರಿಚಿತರಂತೆ ಅವನನ್ನುದಿಟ್ಟಿಸುತ್ತದೆ. ಓಹ್! ಎಲ್ಲವೂ ಅಯೋಮಯ ಇಲ್ಲಿ.

ದೂರದಲ್ಲಿರುವ ಅವನನ್ನು ಕಂಡರೆ ಎಲ್ಲರಿಗೂ ಎಲ್ಲಿಲ್ಲದ ಅಕ್ಕರೆ. ಇವಳೊಬ್ಬಳೇ ಅಲ್ಲ ಅವನ ವಾರಸುದಾರಳು ಎಂದು ಕ್ಷಣಕ್ಷಣಕ್ಕೂ ಎಚ್ಚರಿಸುತ್ತಾರೆ. ಪ್ರತಿಸಲ ಇವಳಿಗೆಂದು ಅವನು ತರುವ ಕಿರಿ ಬೆರಳು ಗಾತ್ರದ ಚೈನು ಇವಳನ್ನು ಅಣಕಿಸುತ್ತದೆ. ಎಲ್ಲಿಯಾದರೂ ಅವನ ಕೆಲಸಕ್ಕೆ ಸಂಚಕಾರ ಬರುವುದೆಂಬ ಸಣ್ಣ ಸೂಚನೆ ಬಂದರೂ ಸಾಕು, ಪ್ರೀತಿಯ ಬಂಡವಾಳಗಳೆಲ್ಲವೂ ಬಯಲಾಗುತ್ತವೆ. ಎಲ್ಲ ತಿಳಿದೂ ಏನನ್ನೂ ಹೇಳಲಾರದ ಚಡಪಡಿಕೆ ಅವಳಿಗೆ. ಅವನೋ ಒಂದು ತಿಂಗಳ ಅತಿಥಿ. ಇವಳ ಇಡಿಯ ಬದುಕು ಇವರೊಂದಿಗೇ ಬೆಸೆದುಕೊಂಡಿದೆ. ಆಡಲಾಗದ, ಅನುಭವಿಸಲಾರದವುಗಳೆಲ್ಲ ಹಾಗೆಯೇ ಇಂಗಿಹೋಗುತ್ತವೆ.

ಎಲ್ಲದಕ್ಕೂ ಹೊಂದಾಣಿಕೆಯಾಗಿ ಬದುಕು ಸುಸೂತ್ರವಾಗುವ ಗಳಿಗೆಯಲ್ಲಿಯೇ ಅವನು ಇಲ್ಲಿಗೆ ಬರುವ ಮಾತಾಡುತ್ತಾನೆ. ಇವಳಿಗೂ ಈಗ ಭರವಸೆಯಿಲ್ಲ, ಅವನೊಂದಿಗೆ ಸುಖವಾಗಿರಬಲ್ಲೆನೆಂದು. ಮತ್ತೇನಾದರೂ ಸಂಶಯದ ಸುಳಿಯಲ್ಲಿ ಸಿಕ್ಕಿದರೆ, ಕೆಲಸವಿಲ್ಲದ ಅವನ ತಲೆಯೊಳಗೆ ಬೇಡದ ಭಾವಗಳು ಮಡುಗಟ್ಟಿದರೆ.. ಹೀಗೆಯೇ ಸಾಗುತ್ತವೆ ಆಲೋಚನೆಗಳು.. ಬೇಕೆನಿಸಿದಾಗ ಇಲ್ಲದ, ಬೇಡವೆಂದಾಗ ಒದಗುವ ಭಾಗ್ಯದಂತೆ ಬದುಕು ಒದಗಿಬರುತ್ತದೆ…….

ಕಾಲ ಬದಲಾಗಿದೆ ಇಂದು. ಇಡಿಯ ಜಗತ್ತನ್ನೇ ಅಂಗೈಯ್ಯಲ್ಲಿಟ್ಟಿದೆ ಇಂದಿನ ತಂತ್ರಜ್ಞಾನ. ಇಲ್ಲಿಯೇ ಕುಳಿತು ಅದೆಲ್ಲೋ ಇರುವವರ ಮುಖ ನೋಡಿ ಮಾತನಾಡುವ ಅವಕಾಶವೂ ಇಂದು ನಮ್ಮೆದುರು ಇದೆ. ಇಷ್ಟಾಗಿಯೂ ಸಾಲು, ಸಾಲು ಊರ್ಮಿಳೆಯರು ಕಾಯುತ್ತಿದ್ದಾರೆ ಇಲ್ಲಿ..

..ಲಕ್ಷ್ಮಣನ ಸಾಂಗತ್ಯಕ್ಕೆ, ಅವನ ಒಂದೇ ಒಂದು ಪ್ರೀತಿಯ ಸಾಂತ್ವನಕ್ಕೆ, ಇಡಿಯ ಬದುಕನ್ನು ಅವನ ಅನುಪಸ್ಥಿತಿಯಲ್ಲಿ ಸುಧಾರಿಸಿದ ತಮ್ಮ ಬಗೆಗೊಂದು ಮೆಚ್ಚುಗೆಯ ನೋಟಕ್ಕೆ.. ದೂರ ಹತ್ತಿರವಾದಂತೆ, ಹತ್ತಿರವೂ ದೂರವಾಗುತ್ತಿದೆ ಇಂದು. ಪಕ್ಕದಲ್ಲೇ ಇದ್ದೂ, ದೂರವಾಗಿರುವ ಲಕ್ಷ್ಮಣರನ್ನೂಕಾಯುತ್ತಿದ್ದಾರೆ ಸಾಲು, ಸಾಲು ಊರ್ಮಿಳೆಯರು..

2 comments

  1. Preetiya Sudha,Nimma prathiyondu lekhanavu sogasu. Ellavu ondu hosa holahannu needuvantaddu, Heege Hosa chintanegalannu huttu hakuva nimage hagu nimma barahagalige ido nannandondu dodda Salam.

Leave a Reply