ನಮ್ಮನ್ನು ಎಚ್ಚರಗೊಳಿಸುವ ‘ದಲಿತರು ಬರುವರು ದಾರಿಬಿಡಿ’

ಶಿವಪ್ರಸಾದ್ ಪಟ್ಟಣಗೆರೆ 

ಜಾತಿಯನ್ನು ಮೊದಲು ಆಚರಿಸಲಾಗುತಿತ್ತು, ನಂತರ ಹೇಳಲಾಗುತಿತ್ತು, ಈಗ ಅದು ಎಲ್ಲರ ಎದೆಯೊಳಗೂ ಇದೆ ಎಂದೆನಿಸುತ್ತಿದೆ,…

‘ನಿರುತ್ತರ’ದ ಗೆಳೆಯರೆಲ್ಲಾ ಸೇರಿ ಪುಸ್ತಕ ಪ್ರಕಾಶನ ತೆರೆಯುವ ತವಕದಲ್ಲಿ ಇದ್ದೆವು. ಇದೇ ಸಂದರ್ಭದಲ್ಲಿ ಜಿ.ಎನ್. ಮೋಹನ್ ‘ದಲಿತರು ಬರುವರು ದಾರಿಬಿಡಿ…’ ಎಂಬ ಪುಸ್ತಕವನ್ನು ಹೊಸ ಚೌಕಟ್ಟಿನೊಂದಿಗೆ ತಂದುದು ತಮ್ಮಲ್ಲರನ್ನು ನಿಬ್ಬೆರಗಾಗಿಸಿತ್ತು.

ಪುಸ್ತಕ ಪ್ರಕಾಶನ ಆರಂಭಿಸುವ ತಗಾದೆಗೆ ಬಿದ್ದ ನಾವು ಯಾವ ರೀತಿಯ ಪುಸ್ತಕಗಳನ್ನು ತರುವುದು ಎಂದು ಯೋಚಿಸುತ್ತಿದ್ದಾಗ – ದಲಿತರು ಬರುವರು ದಾರಿಬಿಡಿ – ಪುಸ್ತಕ ಎಲ್ಲರೊಳಗೂ ಮತ್ತೊಮ್ಮೆ ಜಾತಿ ಪ್ರಜ್ಞೆಯ ಬೆನ್ನನ್ನು ಮುಟ್ಟಿಕೊಂಡು ನೋಡಿಕೊಳ್ಳುವಂತೆ ಮಾಡಿತು.

ಜಾತಿಯಿಂದಾಚೆಗೆ ಬದುಕಬೇಕೆನ್ನುವ ಹೊಸ ತರ್ಕ ಮತ್ತು ಮೀಮಾಂಸೆಗಳು ಕೇವಲ ನಗರಗಳಲ್ಲಿನ ಜಾತಿಸೂಚಕಗಳಂತೆ ಕಾರ್ಯ ನಿರ್ವಹಿಸದೆ ಅವು ಜಾತಿಯ ಹೊಸ ಸಾಂಸ್ಥಿಕ ರೂಪದ, ಜರಡಿ ಹಿಡಿದ ನಾವಿನ್ಯ ಜಾತಿ ನಿಶ್ಯೇಷಗಳು.

ದಲಿತರ ನೋವನ್ನು ಪತ್ರಿಕೆಗಳು, ಮಾಧ್ಯಮಗಳು ಪ್ರಸಾರ ಮಾಡುವುದಿಲ್ಲ ಕೇವಲ ಕೇಸರಿ ಪ್ರಲೋಭೆಗಳನ್ನು, ಸ್ವಾಮೀಜಿಗಳ ಭಾಷಣವನ್ನು, ಹೊಸ ತಾಂತ್ರಿಕ ಜ್ಯೋತಿಷಿಗಳನ್ನು ವೈಭವೀಕೃತವಾಗಿ ತೋರಿಸಲಾಗುತ್ತಿದೆ.ಇವುಗಳ ನಡುವೆ ದಲಿತ ಕಥನಗಳನ್ನು ಗ್ರಹಿಸಿ ವರದಿ ಮಾಡಿದ ಪಿ.ಸಾಯಿನಾಥ್ , ಮೋಹನ್ ರಂತಹ ಪತ್ರಕರ್ತರನ್ನು ಯಾವ ಪ್ರಮುಖ ಚೌಕಟ್ಟುಗಳೂ ಸಹ ಗುರ್ತಿಸುವುದಿಲ್ಲ  ಎಂಬುದು ಇನ್ನೂ ನನ್ನಂತಹ ಎಷ್ಟೋ ಜನರಿಗೆ ತಿಳಿದಿಲ್ಲ.

ಹೊಸ ಬಟ್ಟೆ ಹಾಕುವುದೇ ಒಂದು ಅಪರಾಧ ಅಕಸ್ಮಾತಾಗಿ ಆತನ ಹೊಸ ಬಟ್ಟೆ ಸ್ವಲ್ಪ ಕಣ್ಣು ಕೋರೈಸಿದರೆ ಇತರೆ ಮೇಲ್ವರ್ಗದ ಜನ ಆತನನ್ನು ಪರೀಕಿಸುವ ಬಗೆಯೇ ಬೇರೆಯದಾಗಿರುತ್ತದೆ.ಇದು ಜಾತಿಯನ್ನು ಮೇಲ್ಮುಖವಾಗಿ ಆಚರಿಸಲಾಗದ ನಗರಗಳಲ್ಲಿ ಇಂದಿಗೂ ಕಾಣಸಿಗುವ ಹೊಸ ಅಫೀಮು.

ದಲಿತರು ಪೋಲೀಸ್ ಠಾಣೆಗೆ ಪ್ರವೇಶಿಸಲು 250 ರೂ ಪ್ರವೇಶ ಧನವನ್ನು ತೆರಬೇಕಾಗಿತ್ತು. ರಾಜಸ್ಥಾನದಲ್ಲಿ 60 ಗಂಟೆಗೆ ಒಬ್ಬ ದಲಿತ ಮಹಿಳೆ ಮೇಲೆ ಅತ್ಯಾಚಾರ ವಾಗುತ್ತದೆ ಎಂಬ ವಿಷಯಗಳು ಇಂದಿಗೂ ಎಷ್ಟೋ ಜನರಿಗೆ ತಿಳಿದಿಲ್ಲ. ಜಾತಿಯ ಹಾದರದಲ್ಲಿ ಬಿರುದು, ಸನ್ಮಾನ, ಪ್ರಶಸ್ತಿಗಳು, ಅಕಾಡೆಮಿ ಮೊತ್ತಗಳು, ಪುರಸ್ಕಾರಗಳು ಲಾಭಿಯಾಗುತ್ತಿವೆ ಎಂಬ ಸೂಕ್ಷ್ಮತೆಯೂ ದಲಿತರನ್ನೂ ಒಳಗೊಂಡಂತೆ ಪ್ರಾಜ್ಞರನ್ನೂ ಅಹುದುಹುದೆನಿಸಿದೆ.

ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಸರಿಯಾಗಿ ತಿಳಿಸುವ ಕೆಲಸವಾಗಬೇಕಿದೆ.

ಆಗ ಪ್ರಾಥಮಿಕ ಶಾಲೆಗಳಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ಹೇಗೆ ನಮಗೆ ನುಂಗಿಸುತಿದ್ದರೋ ಹಾಗೆಯೇ ಸಂವಿಧಾನವನ್ನು ನುಂಗಿಸಬೇಕಾದ ಅಗತ್ಯ ಹಾಗೂ ತುರ್ತು ಈ ಕಾಲಕ್ಕಿದೆ.

ಇವೆಲ್ಲದುರ ಮಧ್ಯೆ ಮತ್ತೆ ನಮ್ಮನ್ನು ಎಚ್ಚರಗೊಳಿಸುವ ‘ದಲಿತರು ಬರುವರು ದಾರಿಬಿಡಿ’ನಂತಹ ಪುಸ್ತಿಕೆಗಳು ಸದಾ ಜಾಗೃತವಾಗಿರುವಂತೆ ಮಾಡುತ್ತವೆ.

ಸೋ ಸ್ಪೆಷಲ್ ಥ್ಯಾಂಕ್ಸ್ ಟು ಮೋಹನ್ ಸರ್ ಅಂಡ್ ಸಾಯಿನಾಥ್ ಸರ್,…..

Leave a Reply