ಹಚ್ಚೆ ಹಾಕುವ ಹುಡುಗಿ..

ಎನ್ ಸಂಧ್ಯಾರಾಣಿ 

ಹಚ್ಚೆ ಹಾಕುವ ಹುಡುಗಿ
ಹಚ್ಚಗೆ ನಗುತ್ತಾಳೆ
ಕಪ್ಪು ಬಾನಿನಲ್ಲಿ ಚುಕ್ಕಿ ಫಳಕ್ ಎಂದಂತೆ
ನಗುತ್ತಾಳೆ ಹುಡುಗಿ, ಜೊತೆಯಲ್ಲಿ ಮಗಳು
ಅಮ್ಮನಲ್ಲಿರುವ ಮಗು, ಮಗುವಿನಲ್ಲಿರುವ ಅಮ್ಮ

ಬದಲಾಗುತ್ತವೆ ಪಾತ್ರಗಳು ಆಗಿಂದಾಗ್ಗೆ
ಇಷ್ಟು ಚುಕ್ಕೆಯಿಟ್ಟ ಹುಡುಗಿ ಮಗಳ ಕಡೆಗೆ ತಿರುಗುತ್ತಾಳೆ
ಆಡುತ್ತಾಡುತ್ತಲೇ ಮಗಳು ಅಮ್ಮನ ಕಣ್ಣಲ್ಲಿ ಏನೋ ಹುಡುಕುತ್ತಾಳೆ
ಕಾಯುತ್ತಾರೆ ಒಬ್ಬರು ಇನ್ನೊಬ್ಬರ
ಹಚ್ಚಗೆ ನಗುತ್ತಾಳೆ ಹುಡುಗಿ, ಕಣ್ಣೆದುರಲ್ಲಿ
ಚಿತ್ರ ಹರಡುತ್ತಾಳೆ
ಚಂದ್ರತಾರೆ, ಮೀನುಗಾಳ, ಹುಟ್ಟಿಲ್ಲದ ದೋಣಿ
ಎಂದೂ ಹಾರದ ಚಿಟ್ಟೆ, ಮೂಕ ಪಲುಕುಗಳು
ನೋಡೇ ನೋಡುತ್ತೇನೆ

ಹುಡುಗಿ ಮುಂದುವರೆಸುತ್ತಾಳೆ
’ಇದೋ ಇದು, ಬುದ್ಧನ ಮುಕ್ತಿಮಾರ್ಗ
ಭವದ ಬಂಧನ, ಜಗದ ಸಿಕ್ಕು, ಬಿಡಿಸಿಕೊಳ್ಳುತ್ತಾ
ಬಿಡಿಸಿಕೊಳ್ಳುತ್ತಾ ಬಂಧ ವಿಮುಕ್ತಿ. ಭವದ ದಾರ ಕಡಿದು
ಬಿಂದುವಾದಾಗ ಸಂಪೂರ್ಣ ಸ್ವತಂತ್ರ.’
ಮಾತನಾಡುತ್ತಲೇ ಮೌನವಾಗುತ್ತಾಳೆ.
ಹಚ್ಚೆ ನನ್ನ ಇಂದಿನ ಕನಸಲ್ಲ
ಅಮ್ಮನ ಹಣೆಯ ಮೇಲಿದ್ದ ಗುಂಡು ಹಚ್ಚೆ
ಅಜ್ಜಿಯ ಕೈಗಳ ಮೇಲಿದ್ದ ಅಂಬಾರಿ ಹಚ್ಚೆ

ಹಚ್ಚೆ ಚರ್ಮಕ್ಕಂಟಿದ ಸಂಗಾತಿ
ಸತ್ತರೂ ಹಚ್ಚೆ ಜೊತೆಗೇ ಬರುತ್ತದೆ
ಅಜ್ಜಿ ನಗುತ್ತಿದ್ದಳು, ನಾನು ಅಜ್ಜಿ ಕೈಗಳ ಮೇಲಿನ
ಅಂಬಾರಿಯನ್ನು ಸವರೇ ಸವರುತ್ತಿದ್ದೆ
ಈಗ ನಡುವಯಸ್ಸಿನಲ್ಲಿ ಖಾಲಿ ಕೈಚಾಚಿ ಕುಳಿತಿದ್ದೇನೆ
ಅಕಾಲದಲ್ಲಿ ಅಸಹಜ ಆಸೆ ಅನ್ನಿಸಬಹುದೆ ಅವಳಿಗೆ?
ಒಂದೂ ಪ್ರಶ್ನೆ ಕೇಳದೆ
ಹಚ್ಚಗೆ ನಗುತ್ತಾಳೆ ಹುಡುಗಿ,
ಅಜ್ಜಿ ಹಚ್ಚೆಯನ್ನು ಬಣ್ಣಿಸಿದ್ದ ಕತೆ ಕೇಳಿ
ಮೌನದಲ್ಲೇ ಚುಕ್ಕೆ ಇಟ್ಟಳು
’ಹಚ್ಚೆ ಕೂಡ ಬಿಟ್ಟುಹೋಗುತ್ತದೆ’
ಅಳುವಿನಂತಹ ನಗುನಕ್ಕಳು
ಅವಳ ಮೈಮೇಲಿನ ಹಚ್ಚೆ ನೋಡುತ್ತೇನೆ
ಚಿತ್ತಾರ ಎಣಿಸುತ್ತೇನೆ
ನಿನ್ನ ಮೈ ಮೇಲೆ ಹಚ್ಚೆ ಹಾಕುವವರ್ಯಾರು?
ತಡೆಯದೇ ಕೇಳಿಬಿಡುತ್ತೇನೆ
’ನಾನೆ’, ಮೆಲುದನಿಯಲ್ಲಿ ಉತ್ತರಿಸುತ್ತಾಳೆ ಹುಡುಗಿ
ಅಯ್ಯೋ ನೋವಾಗದೆ?
’ನೋವಾದಾಗಲೇ ಹಾಕಿಕೊಳ್ಳುತ್ತೇನೆ’
ಹಚ್ಚಗೆ ನಗುತ್ತಾಳೆ ಹುಡುಗಿ
ಹಚ್ಚೆ ಹುಡುಗಿಯ ಕೈಗಳ ಮೇಲೆ ಅರಳಿದ
ಮಂಡಲ ನೋಡುತ್ತಾ ಕೇಳುತ್ತೇನೆ,
’ಹುಡುಗಿ ನಿನ್ನ ಮೈಮೇಲಿರುವ ಹಚ್ಚೆಗಳೆಷ್ಟು?’
ಕೈ ತೋರಿಸಿದ ಹುಡುಗಿ, ಬೆರಳು ಮಡಿಸಿದಳು,
ಮೆಲುದನಿಯಲ್ಲಿ ಹೇಳಿದಳು,
’ಎದೆಯ ಮೇಲೆ ಗಂಡನ ಹೆಸರಿತ್ತು, ಮೊನ್ನೆ ಅಳಿಸಿದೆ..’
ಹಚ್ಚೆ ಹುಡುಗಿ ಈಗ ನಗುತ್ತಿಲ್ಲ

15 comments

 1. ಅಬ್ಬಾ! ನೀನು ಬರೆದಿರುವುದರಲ್ಲೆಲ್ಲ ಇದು ನನಗೆ ಹುಚ್ಚು ಹಿಡಿಸಿತು ಸಂಧ್ಯಾ …. ಎಂಥ ತೀವ್ರತೆ! ಈ ವಿಷಾದ ಅಳಿಯಲು ಇನ್ನೂ ತುಂಬ ಹೊತ್ತು ಬೇಕಾಗುತ್ತದೆ ….

  • Thank you.. ಆ ವಿಷಾದ ನನ್ನಲ್ಲೂ…ಕಳಚಿಕೊಳ್ಳಲಾಗಲೇ ಇಲ್ಲ…

 2. ಹಚ್ಚೆ ಚರ್ಮಕ್ಕಂಟಿದ ಸಂಗಾತಿ
  ಸತ್ತರೂ ಹಚ್ಚೆ ಜೊತೆಗೇ ಬರುತ್ತದೆ
  ಅಜ್ಜಿ ನಗುತ್ತಿದ್ದಳು….

  ***
  ’ಹಚ್ಚೆ ಕೂಡ ಬಿಟ್ಟುಹೋಗುತ್ತದೆ’
  ಅಳುವಿನಂತಹ ನಗುನಕ್ಕಳು..

  ***
  ಭಿನ್ನ ಪೀಳಿಗೆಗಳು ಸ್ಪಂದಿಸುವ ರೀತಿಯಲ್ಲಿನ ವ್ಯತ್ಯಾಸವನ್ನು ಎಷ್ಟು ನವುರಾಗಿ ಚಿತ್ರಿಸಿದ್ದೀರಿ.

  ಅಥವಾ ನನಗೇ ಈ ವ್ಯತ್ಯಾಸ ಕಂಡಿತೇ ಎಂಬ ಗೊಂದಲ ಈಗ….

  ಇಷ್ಟವಾಯ್ತು ಸಂಧ್ಯಾ!

  • ಅಹಲ್ಯಾ…..ಅದನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿದ್ದದ್ದನ್ನು ನೀವೂ ಗುರುತಿಸಿದಿರಿ…ಥ್ಯಾಂಕ್ಯೂ…

  • ಇದು ಭಿನ್ನಪೀಳಿಗೆಗಳಿಗೆ ಬದುಕು ದಕ್ಕುವ ರೀತಿಯೂ ಹೌದು ಅಲ್ಲವೆ?

  • ಇರಬಹುದು…

   ಆದರೂ ” ಬದಲಾಗುತ್ತವೆ ಪಾತ್ರಗಳು ಆಗಿಂದಾಗ್ಗೆ” 🙂

 3. ಒಹ್! ಎಷ್ಟು ಗಾಢ! ಎಷ್ಟು ತೀವ್ರ!….
  ತುಂಬಾ ಇಷ್ಟವಾಯ್ತು ಸಂಧ್ಯಾ..

 4. ಅವಧಿಯಲ್ಲಿ ಕಾಣುವ ಹಲವಾರು paintings ತುಂಬಾ ಗಮನ ಸೆಳೆಯುತ್ತವೆ. ಅವುಗಳನ್ನು ಬಿಡಿಸಿದವರ ಹೆಸರು ಕಾಣಿಸಿದರೆ ಅವರ ಬಗ್ಗೆ ತಿಲಿದಮ್ತಾಗುತ್ತದೆ. ಕೆಲವು ಚಿತ್ರಕಲಾವಿದರನ್ನು ನಾನೇ ಪತ್ತೆ ಹಚ್ಚಿ ಸಂಪರ್ಕ ಏರ್ಪಡಿಸಿಕೊ೦ಡಿದ್ದೇನೆ.

  ಚಂದ್ರು

 5. ಅಬ್ಬಾ! ಈ ಪಾಟಿ ಆಳನಾ……..ನೆಬ್ಬೆರಾದ ಮಂಜುತಿಮ್ಮ.

 6. ಎದೆಯ ಮೇಲೆ ಗಂಡನ ಹೆಸರಿತ್ತು ,ಮೊನ್ನೆ ಅಳಿಸಿದೆ,ಈಗ ಹಚ್ಚೆ ಹುಡುಗಿ ಅಳುತ್ತಿಲ್ಕ..ಭಾವುಕಳಾದೆ…ಪ್ರತಿ ಪದವೂ ಇಷ್ಟ ಆದವು

Leave a Reply