ಪ್ರತಿಭಾ ಕಂಡ ಗಿಲಿ ಹೈಮೋವಿಚ್ 

ಗಿಲಿ ಹೈಮೋವಿಚ್ ಇಸ್ರೇಲಿನ ಕವಿ ಮತ್ತು ಅನುವಾದಕಿ.

ಬೆಂಗಳೂರು ಕಾವ್ಯ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದಾರೆ.

ಹಿಬ್ರು ಮತ್ತು ಇಂಗ್ಲಿಷ್ ಭಾಷೆಯಲ್ಲಿಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇಸ್ರೇಲಿನಲ್ಲಿ ಜ್ಯು ಆಗಿರುವ ಬಗ್ಗೆ, ಅಲ್ಪಸಂಖ್ಯಾತ ಜನಾಂಗದವರನ್ನು ಜಗತ್ತು

ನೋಡುವ ಬಗ್ಗೆ ಬಹಳ ಗಂಭೀರವಾಗಿ ಮಾತನಾಡಿದರು.  ಮರ ಬೇರು ಬಿಟ್ಟು ನೆಲೆಸುವ ಬಗ್ಗೆ ರೂಪಕವಾಗಿಸಿ ಅನೇಕ ಕವನಗನ್ನು ಬರೆದಿದ್ದಾರೆ.  ಸಂಕಲನದಿಂದಆಯ್ದ ಮೂರು ಕವನಗಳು ಕನ್ನಡದಲ್ಲಿ.

ಅವರ ಪುಸ್ತಕವನ್ನು ನನಗೆ ಕೊಡುವಾಗ ಅದರಲ್ಲಿ “ನಮ್ಮ ಬೇರುಗಳು ಎಲ್ಲೇ ಇದ್ದರೂ ಕ್ಷಿತಿಜದಲ್ಲಿ ನಾವುಭೇಟಿಯಾಗುವ ಅವಕಾಶ ಎಷ್ಟು ಸಂತೋಷದಾಯಕ ” ಎಂದು ಬರೆದರು.

 

ಕನ್ನಡಕ್ಕೆ  : ಪ್ರತಿಭಾ ನಂದಕುಮಾರ್

 

ಬೇರುಗಳು

-1-

ಕಾಲುದಾರಿಯ ಬೇರುಗಳು

ಕೆಳಗೆ ಅವಿತ ಮರದ ಬೇರುಗಳಿಂದಾಗಿ

ಕಾಲುದಾರಿಗಳು ಬಿರುಕುಬಿಟ್ಟಿವೆ.

ಮರದ ಮೇಲಿನ ಹಣ್ಣುಗಳು ಹಕ್ಕಿ ಪಿಕ್ಕೆಗಳಂತೆ ಕಾಣುತ್ತಿವೆ

ಹಕ್ಕಿಗಳು ಮಾತ್ರ ಅವನ್ನು ತಿನ್ನಬಹುದು

ಇಷ್ಟರಲ್ಲೇ ಮಳೆಯಾಗಲಿದೆ

ಆಗ ಕಪ್ಪು ಹಣ್ಣುಗಳು ಬಿದ್ದು ಕಾಲುದಾರಿ ಹೊಳೆಯುತ್ತವೆ.

ಊರುಗೋಲಿಲ್ಲದೆ ನಡೆಯುವವರು

ಸುಲಭಕ್ಕೆ ಜಾರುವುದಿಲ್ಲ ಆದರೂ

ಕಾಲಿಗೆ ಸಿಗುವ ಲೋಳೆ ಹಣ್ಣುಗಳನ್ನು ತಪ್ಪಿಸಲಾಗುವುದಿಲ್ಲ.

ನಾವು ಮರಗಳಂತಲ್ಲ

ನಾವು ಎಲ್ಲದರ ಬಗ್ಗೆಯೂ ಮಾತಾಡುತ್ತೇವೆ

ನಿದ್ದೆಯಿಂದ ತೊಡಗಿ ಬೀಳುವವರೆಗೂ ಜಾರುತ್ತೇವೆ

ಅಕಸ್ಮಾತ್ ತಪ್ಪಿ ಆಡಿದ ನಾಲಿಗೆ

ಕೊಕ್ಕು ಆಗುವವರೆಗೂ.

 

-2-

ಕಾಣಿಸುತ್ತಿದೆ

ಈ ಮರದ ಬೇರುಗಳು ಕಾಣಿಸುತ್ತಿದೆ

ಕಿತ್ತುಹೋಗಿ ದಪ್ಪಗಂಟಿನ ಬೇರುಗಳು

ಆಟದ

ಬಯಲಿನಲ್ಲಿ

ಕಾಣಿಸುತ್ತಿದೆ.

ಬರಿಗಾಲಲ್ಲಿ ಬೇಕಂತಲೇ

ಮಕ್ಕಳು ಅದನ್ನು ತುಳಿದಾಗ,

ಮರ ಮುದುರಿಕೊಳ್ಳುತ್ತದೆಯೇ?

ಮುಚ್ಚಿಕೊಂಡಿಲ್ಲದ ಅದರ ಬೇರುಗಳು

ಗಾಳಿಯೇ ಹೆಚ್ಚಾಗಿ ಮಣ್ಣು ಕಡಿಮೆಯಾಗಿ

ನಡುಗುತ್ತದೆಯೇ?

ಯಾರು ಯಾರನ್ನು ಧರಿಸಿದ್ದಾರೆ?

ಮರವು ಮಣ್ಣನ್ನು ಹಿಡಿದಿಟ್ಟಿದೆಯೇ?

ಅಥವಾ ಭೂಮಿಯು ಮರ ರೆಂಬೆ ಟಿಸಿಲೊಡೆಯುವುದನ್ನು

ತಡೆಯಲು ಯತ್ನಿಸುತ್ತಿದೆಯೇ?

ನಮ್ಮ ಸಂಬಂಧವನ್ನು ನಾನು ಪ್ರೀತಿ ದ್ವೇಷದ್ದೆಂದು ಕರೆಯುವುದಿಲ್ಲ

ಆದರೆ ಯಾಕೋ

ನಾನು

ನಿನ್ನನ್ನು

ಇವೆರಡರ ನಡುವೆ

ಇರಿಸಿದ್ದೇನೆನ್ನಿಸುತ್ತಿದೆ.

ಮರದ ಹಲಗೆಯ ಆಚೆ ಮತ್ತು ಈಚೆ ಬದಿಗೆ ನಾವು

ನಮ್ಮ ಇಬ್ಬರು ಮಕ್ಕಳನ್ನು ಇರಿಸೋಣಾ.

ಅಂಬೆಗಾಲಿಡುವ ಮಗುವಿನ ಬದಿಗೆ ನನ್ನನ್ನಿರಿಸಬೇಡಾ

ಅಥವಾ ನಾವು ಈ ಮಳೆಗಾಗಿ ಕಾಯುತ್ತಿರುವಂತೆ ನಿಂತ

ಸದಾ ಹಸಿರು ಮರದಂತೆ

(ಅದರ ಮೇಲ್ಛಾವಣಿ ಎಂದಿಗೂ ಗಾಢವಾಗಿರುವುದಿಲ್ಲ)

ಅಲಕ್ಷ್ಯದಲ್ಲಿ ನಿಲ್ಲೋಣಾ.

ಕಾಯುತ್ತಲೇ ಇರುವ ಮರ

ಕೊನೆಗೆ ಮಳೆ ಸುರಿದಾಗಲೂ ಕೃತಜ್ಞವಾಗುವುದಿಲ್ಲ.

ನಮಗಿಬ್ಬರಿಗೂ ಗೊತ್ತು

ನೆಲದಲ್ಲಿ ಇರಿಸಿದಾಗ ಮಾತ್ರ

ಸೀ – ಸಾ ಸಮವಾಗಿರುತ್ತದೆ.

ನಿನಗೆ ಮತ್ತು ನನಗೆ ತಿಳಿಯುವುದಿಲ್ಲ

ಅದರ ನರಮಂಡಲದಲ್ಲಿ

ಅದರ ಸಣ್ಣ ಒರಟು ಅಂಚುಗಳ ಅಸ್ತಿತ್ವದಲ್ಲಿ

ಇನ್ನೂ ಎಷ್ಟು ಬದುಕು ಬಾಕಿ ಇದೆ ಎಂದು.

-3-

ವ್ಯರ್ಥ ಬೇರು

ಹುಲ್ಲು ನಿನ್ನನ್ನು ಮಡಿಲಿನಲ್ಲಿ ಮಲಗಿಸಿಕೊಳ್ಳುವುದಿಲ್ಲ

ಹಸಿರು ಮೋಡಿ ಮಾಡುವುದಿಲ್ಲ

ಸತ್ತ ಮರದ

ಸಿಟ್ಟಿನಿಂದ ಕುದಿಯುತ್ತಿರುವ ಬೇರು ನೀನು.

ಭೂಮಿಯಡಿಯಲ್ಲಿ ಸಿಕ್ಕಿ ಇರಲಾರದೇ

ಮೇಲೆ ಬರಲು ತವಕಿಸಿ ನುಗ್ಗಿ ಬರುತ್ತೀಯ

ಫುಟ್ ಪಾತಿನ ಕಲ್ಲುಗಳು ಮತ್ತು ಬೇಲಿ ಅಂಚಿನ ನಡುವೆ

ಸಧ್ಯ ಅದು ನಿನ್ನದೇ ಜಾತಿಯ ಹಲಗೆಯಲ್ಲ

ಪಾರ್ಕಿನಲ್ಲಿ ಮಕ್ಕಳ ಸ್ವಚ್ಛಂಧತೆ ನೋಡುತ್ತ

ಅವರ ಮುದ್ದಾಟಕ್ಕೆ ಅಥವಾ ಹಕ್ಕಿಯ ಇಂಚರಕ್ಕೂ ಕರಗದೇ

ನೀನು ಸುಮ್ಮನೆ ಬಿದ್ದುಕೊಂಡಿದ್ದೀಯಾ

ಅಲಕ್ಷ್ಯದ ಸಾಕ್ಷಿಯಾಗಿ

ಇನ್ನಷ್ಟು ಮಣ್ಣಿಗೆ ಹಾತೊರೆದು

ನಿನ್ನ ಸಂವೇದನೆಗಳು

ಒರಟಾಗಿರುವುದನ್ನು ಸಮರ್ಥಿಸಿಕೊಳ್ಳುತ್ತಾ.

2 comments

Leave a Reply