ಮೈತ್ರಿಯ ಮುಲುಕಾಟ- ಕಾಂಗ್ರೆಸ್ ಕಲಿಯುವುದಿದೆ..

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಬಗ್ಗೆ ಜಿಜ್ಞಾಸೆ ಎದ್ದಿದೆ. ವಿಧಾನಸೌಧದಲ್ಲಿ ‌ಮೈತ್ರಿ ಅಡಳಿತ ನಡೆಸಿರುವ ಈ ಪಕ್ಷಗಳಿಗೀಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಹೋಗಬೇಕೆ? ಅಥವಾ ತಮ್ಮ ತಮ್ಮ ದಾರಿ ಹಿಡಿದುಕೊಂಡು ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕೆ ಎಂಬ ಚರ್ಚೆ ನಡೆದಿದೆ.

ರಾಷ್ಟ್ರಮಟ್ಟದಲ್ಲಿ ಮತೀಯ ಶಕ್ತಿಗಳ ವಿರುದ್ದ ಹೋರಾಡಲು ಜಾತ್ಯಾತೀತ ಶಕ್ತಿಗಳು ಒಟ್ಟಾಗಿ ನಿಲ್ಲಬೇಕಿದೆ ಎಂಬ ಸೂತ್ರ ರಚನೆಗೆ ಕಸರತ್ತು ನಡೆದಿರುವಾಗಲೆ ಅದಕ್ಕೊಂದು ಇಂಬು ಕೊಟ್ಟಂತೆ ರಾಜ್ಯದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ರಾಜ್ಯದಲ್ಲಿರುವುದು  ಕಾಂಗ್ರೆಸ್-ಜೆಡಿಎಸ್ ನ ಮೈತ್ರಿ ಸರ್ಕಾರವಲ್ಲ. ಅದು ಕಾಂಗ್ರೆಸ್-ಜೆಡಿಎಸ್ – ಬಿಎಸ್ಪಿ ಯ ಸಮ್ಮಿಶ್ರ ಸರ್ಕಾರ. ಬಿಎಸ್ಪಿ ಚುನಾವಣಾ ಪೂರ್ವ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಅದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದಿದ್ದರೂ ಸರ್ಕಾರದ ಪಾಲುದಾರ ಪಕ್ಷವಾಗಿ ಅದರ ಶಾಸಕ ( ಮಹೇಶ್) ರು ಸಚಿವರಾಗಿರುವುದು ಸಮ್ಮಿಶ್ರ ಸರ್ಕಾರದ ಸೂಚಕವಾಗಿದೆ.

ಇಡೀ ರಾಷ್ಟ್ರದ ಮುಂದೆ ಬಿಜೆಪಿಯನ್ನು ಕಟ್ಟಿಹಾಕುವ ದೊಡ್ಡ ಸವಾಲು ಬಿಜೆಪಿಯೇತರ ಪಕ್ಷಗಳಿಗೆ ಅನಿವಾರ‍್ಯವಾಗಿದೆ. ಎರಡು ಬಲಿಷ್ಟ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ – ಬಿಜೆಪಿಯನ್ನು ಹೊರಗಿಟ್ಟು ಅಧಿಕಾರ ಹಿಡಿಯಬಹುದಾದ ತೃತೀಯರಂಗದ ಹುಟ್ಟು ಸದ್ಯಕ್ಕೆ ಅಸಾಧ್ಯದ ಮಾತು. ತೃತೀಯರಂಗದ ಪ್ರಯೋಗಗಳು ನಡೆದು ಅದರ ಪರಿಣಾಮಗಳು ಏನಾದವು ಎಂಬ ಇತಿಹಾಸ ನಮ್ಮ ಮುಂದೆ ಇದೆ. (ಹೆಚ್.ಡಿ ದೇವೇಗೌಡ, ಐಕೆ ಗುಜ್ರಾಲ್) ಈಗ ಕಾಂಗ್ರೆಸ್‌ನೊಳಗೊಂಡಂತೆ ಪ್ರಾದೇಶಿಕ ಪಕ್ಷಗಳ ಮಹಾಮೈತ್ರಿಕೂಟ ರಚನೆಯ ಪ್ರಯತ್ನಗಳು ನಡೆಯುತ್ತಿವೆ ನಿಜ, ಆದರೆ ಈ ಕೂಟ ರಚನೆಯ ಭಾಗವಾಗುವ ಪಕ್ಷಗಳಲ್ಲಿ ಇನ್ನೂ ಸ್ಪಷ್ಟತೆ ಮೂಡಿಬಂದಿಲ್ಲ.

ರಾಜ್ಯದಲ್ಲಿ  ವಿಧಾನಸಭಾ ಚುನಾವಣೆಯಲ್ಲಿ ೧೦೪ ಸ್ಥಾನಗಳನ್ನು ಪಡೆದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಇದೇ ರಾಷ್ಟ್ರ ಮಟ್ಟದ ಮಹಾಮೈತ್ರಿಕೂಟ ರಚನೆಗೆ ವೇದಿಕೆಯಂತಾದದ್ದು ಈಗ ಹಳೆಯ ಕಥೆಯಂತೆ ಕಾಣುತ್ತಿದೆ. ಅವತ್ತು ವಿಧಾನಸೌಧದ ಮುಂಭಾಗದ ವೇದಿಕೆಯಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರುಗಳಾದ, ಸೋನಿಯಾ ಗಾಂಧಿ, ಫಾರೂಕ್ ಅಬ್ದುಲ್ಲಾ,  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಯಾವತಿ, ಆಂಧ್ರ ಚಂದ್ರಬಾಬು ನಾಯ್ಡು, ಪಾಂಡಿಚೆರಿಯ ನಾರಾಯಣಸ್ವಾಮಿ, ಬಿಹಾರದ ಅಖಿಲೇಶ್ ಯಾದವ್ ಮತ್ತಿತರರು  ಕೈ ಕೈ ಹಿಡಿದು ಬಲ ಪ್ರದರ್ಶಿಸಿದ್ದು ಆಯಿತು .

ಇದಿನ್ನೂ ಹಸಿ ಹಸಿಯಾಗಿರುವಾಗಲೇ ಕರ್ನಾಟಕದಲ್ಲಿ  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಬಗ್ಗೆ ಎರಡೂ ಪಕ್ಷಗಳಲ್ಲಿ ಒಂದು ಮಟ್ಟದ ಅಪಸ್ವರ ಕೇಳಿ ಬರುತ್ತಿದೆ.

ಮಹಾಮೈತ್ರಿಕೂಟಕ್ಕಾಗಿ ರಾಹುಲ್‌ಗಾಂಧಿ ಅವರೇ ಪ್ರಧಾನಿ ಪಟ್ಟದ ಆಕಾಂಕ್ಷೆಯಿಂದ ದೂರ ನಿಂತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇಂತಹದ್ದೊಂದು ಉದಾರತೆ ಕಾಂಗ್ರೆಸ್ ಗೆ ಬೇಕಿದೆ. ಆದರೆ ಆದೇ ರೀತಿ ಕರ್ನಾಟಕದಲ್ಲಿ  ಬಲಾಢ್ಯವಾಗಿರುವ ಬಿಜೆಪಿಯನ್ನು ಕಟ್ಟಿಹಾಕಲು ರಾಜ್ಯ  ಕಾಂಗ್ರೆಸ್ ನಾಯಕರು ಇಂತಹ ತ್ಯಾಗಕ್ಕೆ ಒಲ್ಲೆ ಎನ್ನುತ್ತಿದ್ದಾರೆ. ಮೈತ್ರಿಯಾದಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಕಾದ ಸ್ಥಿತಿ ನಿರ‍್ಮಾಣವಾಗುತ್ತದೆ ಇದರಿಂದ ಕಾಂಗ್ರೆಸ್‌ನ ಅಸ್ತಿತ್ವವೇ ಇಲ್ಲದಾಗುತ್ತದೆ ಎಂದು ಕುದಿಯುತ್ತಿರುವ ಕಾಂಗ್ರೆಸ್ ನಾಯಕರಿಗೆ ಪಕ್ಷಕ್ಕಿಂತ ತಮ್ಮ ವೈಯುಕ್ತಿಕ ರಾಜಕೀಯವೇ ಮುಖ್ಯವಾಗಿ ಕಾಣುತ್ತಿದೆ.

ಜೆಡಿಎಸ್ ರಾಜ್ಯದಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ  (ಪುಟ್ಟರಾಜು ರಾಜಿನಾಮೆಯಿಂದ ಈಗ ಒಂದೇ)  ಗೆದ್ದಿದ್ದರೂ  ವಿಧಾನಸಭಾ ಚುನಾವಣೆಯಲ್ಲಿ ಹಳೆಮೈಸೂರು ಭಾಗದಲ್ಲಿ ತನ್ನ ಹಿಡಿತವನ್ನು ಸಾಬೀತು ಪಡಿಸಿದೆ. ಜಾತ್ಯಾತೀತ ಮತಗಳ ವಿಭಜನೆಯಿಂದಲೇ ಮತೀಯ ಶಕ್ತಿಗಳ ಗೆಲುವು ಎಂಬ ಹಗಲುಸತ್ಯ ಕಣ್ಣಿಗೆ ರಾಚುತ್ತಿದ್ದರೂ ಮತ್ತೆ ಮತ್ತೆ ಅದೇ ತಪ್ಪು ಹೆಜ್ಜೆಗಳನ್ನು ಇಡುತ್ತಿರುವುದರಿಂದಲೇ ಬಿಜೆಪಿಗೆ ವರದಾನವಾಗುತ್ತಿದೆ. ೧೬ ನೇ ಲೋಕಸಭೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೧೫ ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ೯ ಕ್ಷೇತ್ರಗಳಲ್ಲಿ , ಜೆಡಿಎಸ್ ೨ ಕ್ಷೇತ್ರಗಳಲ್ಲಿ ತನ್ನ ಹಿಡಿತ ಇಟ್ಟುಕೊಂಡಿದೆ.

ರಾಜ್ಯದಲ್ಲಿ ಮೋದಿಯ ಪ್ರಭಾವವಷ್ಟೇ ಅಲ್ಲ, ಯಡಿಯೂರಪ್ಪ ಎಂಬ ಸಮುದಾಯ ನಾಯಕನ ಪ್ರಭಾವವೂ ಇನ್ನೂ ಮಸುಕಾಗಿಲ್ಲ. ಅವರ ಮೇಲೆ ಬಂದ ಆರೋಪಗಳು ಏನೇ ಇರಲಿ ಅವರಿನ್ನೂ ಗಟ್ಟಿಯಾಗಿದ್ದಾರೆ. ಬಿಜೆಪಿಯನ್ನು ದಡ ಸೇರಿಸಬಲ್ಲ ಶಕ್ತಿ ಅವರ ಹಿಂದಿದೆ ಎಂಬುದನ್ನು ಕಾಂಗ್ರೆಸ್ – ಜೆಡಿಎಸ್ ಮೆರೆಯಬಾರದು. ಕಾಂಗ್ರೆಸ್ ತನ್ನ ಹಿಡಿತವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬೇಕಾದರೆ  ಅದಕ್ಕೀಗ ಬಿಜೆಪಿಯೇತರ ಶಕ್ತಿಗಳನ್ನು ಕ್ರೂಢೀಕರಿಸಿಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ  ಜೆಡಿಎಸ್, ಬಿಎಸ್ಪಿ, ಎಡ ಪಕ್ಷಗಳ  ಜೊತೆ ಕೈ ಜೋಡಿಸಲೇ ಬೇಕು. ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಯನ್ನು ನಿರಾಕರಿಸುವುದು ಈಗಿರುವ ಮೈತ್ರಿ ಸರ್ಕಾರದ ಸೈದ್ದಾಂತಿಕ ಮತ್ತು ರಾಜಕೀಯ ದಿವಾಳಿತನದ ಪ್ರದರ್ಶನವಾದೀತು. ಮೈತ್ರಿಯ ನಿರಾಕರಣೆಯಿಂದ ಜೆಡಿಎಸ್ ಗೆ ನಷ್ಟವೇನೂ ಆಗದು. ಜೆಡಿಎಸ್ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. ಆದರೆ ಕಾಂಗ್ರೆಸ್ ಈಗಿರುವುದಕ್ಕಿಂತಲೂ ಕೆಳ ಮಟ್ಟಕ್ಕೆ ಕುಸಿಯುವುದಂತೂ ದಿಟ.

ದೇಶದಲ್ಲಿ ನರೇಂದ್ರ ಮೋದಿ ಬಲಾಢ್ಯ ವ್ಯಕ್ತಿಯಷ್ಟೇ ಅಲ್ಲ, ಶಕ್ತಿಯಾಗಿಯೂ ಬೆಳೆದು ನಿಂತಿದ್ದಾರೆ. ಪಾಕಿಸ್ತಾನವನ್ನು ಯುದ್ಧದಲ್ಲಿ ಮಣಿಸಿದ ಇಂದಿರಾಗಾಂಧಿ ಅವರನ್ನು ಅವತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ವಾಜಪೇಯಿ ಅವರು ದುರ್ಗಾಮಾತೆ ಎಂದು ಕರೆದಿದ್ದರು.  ಅದೇ ವಾಜಪೇಯಿ ಅವರು ದೇಶದ ಪ್ರಧಾನಿ ಪೀಠದಲ್ಲಿ ಕುಳಿತು ಗುಜರಾತ್‌ನಲ್ಲಿ ನಡೆಯುತ್ತಿದ್ದ ‘ಪ್ರಭುತ್ವ ಪ್ರಾಯೋಜಿತ ರಕ್ತಪಾತಕ್ಕೆ’ ಕನಲಿ,  ಖಂಡಿಸಿ ರಾಜಧರ್ಮವನ್ನು ಪಾಲಿಸುವಂತೆ ಅವರದ್ದೇ ಪಕ್ಷದ ಮುಖ್ಯಮಂತಿಯಾಗಿದ್ದ ಮೋದಿ ತಾಕೀತು ಮಾಡಿದ್ದರು.

ಇಂತಹ ವಾಜಪೇಯಿ ಅವರಲ್ಲಿನ  ರಾಜಕೀಯ ಸಂವೇದನೆಯಾಗಲಿ, ಪಾಕ್‌ನ ಚಕ್ರಾಧಿತ್ಯದ ರೂವಾರಿಯಾದ ಮೊಹಮ್ಮದ್ ಆಲಿ ಜಿನ್ನಾ ಅವರನ್ನು ಮಹಾನ್ ವ್ಯಕ್ತಿ ( “There are many people who leave an inerasable stamp on history. But there are a few who actually create history. Qaed-e-Azam Mohammad Ali Jinnah was one such rare individual,” ) ಎಂದು ಕರೆದ ಅಡ್ವಾಣಿ ಅವರಲ್ಲಿನ ರಾಜಕೀಯ ಮುತ್ಸದ್ದಿತನವಾಗಲಿ ಇಲ್ಲ.

ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನೊರ‍್ವನ ಮಾತುಗಳನ್ನು ಆಂಗಿಕ ಆಭಿನಯದ ಮಿಮಿಕ್ರಿ ಮಾಡಿ ರಂಜಿಸಬಲ್ಲರು. ದೇಶದ ಜನರ ಪ್ರಶ್ನೆಗೆ ಉತ್ತರ ಕೊಡದೆ  ಹೊರಳು ಹಾದಿಯಲ್ಲಿ ಬಿರುಬಿರನೇ ನಡೆಯಬಲ್ಲರು ಜಗಮೆಚ್ಚುವಂತೆ. ೮೦ ರ ದಶಕದ ಕೊನೆಯ ಭಾಗದಿಂದ ಹಿಂದುತ್ವದ ರಾಜಕಾರಣದ ಬೀಜ ಬಿತ್ತುತ್ತಲೆ ಯಶಸ್ಸು ಕಾಣುತ್ತಾ ಬಂದಿರುವ ಬಿಜೆಪಿ ದೇಶದ ಎಲ್ಲಾ ಕಣಗಳಲ್ಲೂ ಭರ್ಜರಿ ಫಸಲು ತೆಗೆಯುತ್ತಾ ಸಾಗಿದೆ.

ಧರ್ಮ, ದೇವರ,ಕೋಮು ದಳ್ಳುರಿಯ ಬಲಪಂಥೀಯ ರಾಜಕಾರಣಕ್ಕೆ ಮೋದಿ ಹೊಸ ವ್ಯಾಖ್ಯಾನವನ್ನೆ ಕೊಟ್ಟಿದ್ದಾರೆ. ಈ ದೇಶದಲ್ಲಿ ದನದ ಕಾರಣಕ್ಕಾಗಿ, ದಲಿತನೋರ‍್ವ ಕುದುರೆ ಏರಿದ ಕಾರಣಕ್ಕಾಗಿ,  ಹೊಸ ಬಟ್ಟೆ ತೊಟ್ಟು ರಾಜ ಮಾರ್ಗದಲ್ಲಿ ನಡೆದದ್ದಕ್ಕಾಗಿ , ಕೊನೆಗೆ ಮಕ್ಕಳು ಕಳ್ಳರು ಎಂಬ ಕಾರಣಕ್ಕಾಗಿ ಗುಂಪು ಹತ್ಯೆಯ  ಹೊಸ ಅಸ್ತ್ರಗಳನ್ನು ಸಾಣೆ ಹಿಡಿದು ಕೊಡಲಾಗುತ್ತಿದೆ. ಧರ್ಮ, ಜನಾಂಗೀಯ ದ್ವೇಷವನ್ನು ಕೇವಲ ಇಶಾರೆಗಳ ಮೂಲಕವೇ ಬಿತ್ತಿ ಬೆಳೆಯಬಹುದಾದ ವ್ಯಾಖ್ಯಾನಗಳು ಇದಾಗಿದೆ.

ಹುಸಿ ದೇಶಪ್ರೇಮದ ಅಮಲು ಕುಡಿಸಲಾಗುತ್ತಿದೆ, ಬೇಕಾದರೆ ನನ್ನನ್ನು ಗುಂಡಿಟ್ಟುಕೊಲ್ಲಿ ಆದರೆ ದಲಿತರ ಮೇಲೆ ಹಲ್ಲೆ ನಿಲ್ಲಿಸಿ.. ಎಂದು ೫೬ ಇಂಚಿನ ಎದೆಯೊಡ್ಡುವ  ನನ್ನ ಪ್ರಧಾನಿಗಳು ಜನರನ್ನು ಯುವಿಎಕ್ಸ್ ಗೆ ಕಟ್ಟಿ ಬಡಿಯುತ್ತಾ ತಲವಾರು, ತ್ರಿಶೂಲ ಹಿಡಿದು ಕೇಕೆ ಹಾಕುತ್ತಿರುವವರನ್ನು ಕಠಿಣವಾಗಿ ಶಿಕ್ಷಿಸುತ್ತೇನೆ ಎಂದು ಅಧಿಕಾರವಾಣಿಯಿಂದ ಒಂದೇ ಒಂದು ಮಾತು ಹೇಳಲಾರರು. ಅವರೀಗ ಮೋದಿ… ಮೋದಿ ..ಮೋದಿ  ಎಂಬ ಗಣಘೋಷಗಳಲ್ಲಿ ಮುಳುಗಿ ಹೋಗಿದ್ದಾರೆ.  ಮತಬೆಳೆ ತೆಗೆಯುವ ಕಸುಬು ಗೊತ್ತಿದೆ.

ರಾಜ್ಯದಲ್ಲೂ ಇಂತಹ ಹುಸಿ ದೇಶಪ್ರೇಮವನ್ನು  ಕೂಗು ಇದೆ. ಜೊತೆಗೆ   ರಾಜ್ಯದಲ್ಲಿ ೧೦೪ ಸ್ಥಾನಗಳನ್ನು ಪಡೆದ ಬಿಜೆಪಿಯನ್ನು ಅಧಿಕಾರದಿಂದ (ಯಡಿಯೂರಪ್ಪ ಅವರನ್ನು) ದೂರವಿಟ್ಟಿರುವುದು ವಚನಭ್ರಷ್ಟತೆ ಕಾಲದ ಅನುಕಂಪದಂತೆಯೂ ಇಲ್ಲದಿಲ್ಲ. ಒಂದು ಬಲಾಢ್ಯ ಜಾತಿ  ಇಂತಹ ಕೊರಗಿನಲ್ಲಿದೆ ಎಂಬುದುನ್ನು ಕಾಂಗ್ರೆಸ್ -ಜೆಡಿಎಸ್ ಎಚ್ಚರದಿಂದ ಗಮನಿಸಬೇಕು. ಬಿಜೆಪಿ ೧೦೪ ಸ್ಥಾನಗಳನ್ನು ಗಳಿಸಿದರೂ ಅದರು ಪಡೆದ ಮತ ಪ್ರಮಾಣ ಶೇ. ೩೬.೩೪ (ಶೇ.೧೬ ರಷ್ಟು ಹೆಚ್ಚಿಗೆ ). ಕಾಂಗ್ರೆಸ್ ೮೦ ಸ್ಥಾನಗಳನ್ನು ಗಳಿಸಿದರೂ ಪಡೆದ ಮತಪ್ರಮಾಣ ಶೇ.೩೮.೧೪ . ಕಾಂಗ್ರೆಸ್ ಶೇ.೧.೮ ರಷ್ಟು ಮತಗಳನ್ನು ಬಿಜೆಪಿಗಿಂತ ಹೆಚ್ಚಿಗೆ ಪಡೆದಿದೆ. ಅದೇ ಜೆಡಿಎಸ್ ಶೇ. ೧೮.೩ ರಷ್ಟು ಮತ ಪ್ರಮಾಣ ಪಡೆದಿದ್ದು, ಜಾತ್ಯಾತೀತ ಮತಗಳ ವಿಭಜನೆ ಸ್ಪಷ್ಟವಾಗಿ ಕಾಣುತ್ತಿದೆ.

ಇಷ್ಟಾದರೂ ಕಾಂಗ್ರೆಸ್ ಆಗಲಿ , ಜೆಡಿಎಸ್  ಆಗಲಿ ಇವತ್ತಿನ ಪರಿಸ್ಥಿತಿಯಲ್ಲಿ ಏಕಾಂಗಿಗಳಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ. ಎರಡೂ ಪಕ್ಷಗಳ ನಾಯಕರು ಕಳೆದು, ಪಡೆದುಕೊಳ್ಳುವ  ಬಾಗಿಲುಗಳನ್ನು ತೆರದುಕೊಳ್ಳಬೇಕು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಧ್ರುವೀಕರಣ ರಾಜಕಾರಣವನ್ನು ನೇಯಬೇಕಿದೆ. ದೇವೇಗೌಡರ ಗರಡಿಯಲ್ಲೆ ಪಳಗಿರುವ ಸಿದ್ದರಾಮಯ್ಯ ಅವರು ಗೌಡರ ಪಟ್ಟುಗಳನ್ನು ಬಲ್ಲವರು. ಅದೇ ರೀತಿ ಗೌಡರೂ ಕೂಡ ಸಿದ್ದರಾಮಯ್ಯ ಅವರ ವರಸೆಗಳನ್ನು ಬಲ್ಲವರು. ಇಬ್ಬರಿಗೂ ಬಿಟ್ಟು ಹಿಡಿಯುವ ತಂತ್ರ ಕರತಲಾಮಲಕ.
ಈ ಇಬ್ಬರೂ ನಾಯಕರು ಒಂದು ಬಿಂದುವಿನಲ್ಲಿ  ನಿಂತು ಬಾಣ ಹೂಡಬೇಕಿದೆ.

ಕಾಂಗ್ರೆಸ್ ಈಗ ರಾಷ್ಟ್ರಮಟ್ಟದಲ್ಲಿ ಏಕಾಂಗಿಯಾಗಿ ಹೋರಾಡುವ ಶಕ್ತಿಯನ್ನುಕಳೆದುಕೊಂಡಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಹೆಸರಿನಲ್ಲಿ ಪ್ರಾಣಿಯೊಂದನ್ನು ನಿಲ್ಲಿಸಿದರೂ ಗೆದ್ದು ಬರುತ್ತಿತ್ತು ಎಂಬ ನುಡಿಗಟ್ಟು ತುಕ್ಕುಹಿಡಿದು ಯಾವುದೋ ಕಾಲವಾಗಿದೆ. ಇಂದಿರಾಗಾಂಧಿ ಅವರ ಹೆಸರೇಳಿದರೆ ಓಟು ಬರುವ ಕಾಲ ಮುಗಿದುಹೋಗಿದೆ ಎಂದು ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ತಮ್ಮ ಪಕ್ಷದ ಸಭೆಯಲ್ಲಿ ಹೇಳಿದ್ದರು.

ಕಾಂಗ್ರೆಸ್ ನಾಯಕರಿಗೆ ಇಂತಹ ವಾಸ್ತವ ಸತ್ಯ ಅರಿವಾಗಿದೆ ಎಂದರೆ ಆ ಪಕ್ಷ ನಾಯಕರು ವರ್ತಮಾನದ ಪರಿಸ್ಥಿತಿಗೆ ಕಣ್ಣುತೆರೆದಿದ್ದಾರೆ ಎಂದರ್ಥ. ಇಂದಿರಮ್ಮನನ್ನು ಸರಿಸಿ  ಕಾಲ ಬಹಳ ಮುಂದೆ ಬಂದಿದೆ.  ಮೈತ್ರಿ ವಿರೋಧಿಸುತ್ತಿರುವ  ಕಾಂಗ್ರೆಸ್ ನಾಯಕರು ಬಿಜೆಪಿಗೆ ಪರೋಕ್ಷವಾಗಿ ದಾರಿ ಮಾಡಿಕೊಡುತ್ತಿದ್ದಾರೆ.  ಪಕ್ಷಕ್ಕಿಂತ ವ್ಯಕ್ತಿಗತ  ಲಾಭವೇ ಕಾಂಗ್ರೆಸ್ಸಿಗರ ಹುಟ್ಟಾಣಿಕೆ . ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಂತಿಮವಾಗಿ ದಿಲ್ಲಿಯಲ್ಲಿ ಅಖೈರುಗೊಳ್ಳಲಿದೆ.  ಅದೇನೆ ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಧೃತರಾಷ್ಟ್ರ ಆಲಿಂಗನವಾಗದಿರಲಿ.

Leave a Reply