ಅಡುಗೆ ಮನೆಯ ರಾಗಗಳು..

ಜಿ ಎನ್ ಮೋಹನ್

ಮುಂಬೈನಿಂದ ಗಿರಿಜಾ ಶಾಸ್ತ್ರಿ ಅವರು ತಾವು ಓದಿದ ಕೃತಿಯ ಬಗ್ಗೆ ಒಂದು ಟಿಪ್ಪಣಿ ಬರೆದು ಕಳಿಸಿದ್ದರು. ಅದರ ಹೆಸರು ‘ರಾಗಿ ರಾಗಿಣಿ’. ಅರೆ! ಇದೇನಿದು ಪುಸ್ತಕದ ಹೆಸರೇ ವಿಚಿತ್ರವಾಗಿದೆ ಎಂದು ಮುಂದೆ ಓದಿದರೆ ಕೃತಿಗೆ ಇದ್ದ್ ಟ್ಯಾಗ್ ಲೈನ್ ‘ಕ್ರಾನಿಕಲ್ಸ್ ಫ್ರಂ ಅಜ್ಜೀಸ್ ಕಿಚನ್’ ಆರ್ಥಾತ್ ‘ಅಜ್ಜಿಯ ಅಡುಗೆ ಮನೆಯ ಆಖ್ಯಾನ’ ಅಜ್ಜಿಯ ಅಡುಗೆಮನೆಯ ಮೂಲಕ ಮೂರು ತಲೆಮಾರಿನ ಕಥೆ ಹೇಳುವ ಕೃತಿ. ಅಷ್ಟೇ ಅಲ್ಲ ಅಡುಗೆ ಮನೆಗೆ ಸಿಕ್ಕದೆ ಹೋದ ಬದುಕನ್ನೂ ಹೇಳುವ ಕೃತಿ. ಅಡುಗೆ ಮನೆಯ ವಸ್ತುಗಳ ಜೊತೆಯಲ್ಲಿಯೇ ಒಡನಾಡುತ್ತಾ ತಮ್ಮನ್ನು ಕಂಡುಕೊಂಡವರ ಕಥೆ… ಹೀಗೆ ಏನೇನೋ.

ಇದನ್ನು ಓದುವಾಗ ನೆನಪಾದ ಇನ್ನೊಂದು ಲೇಖನ ಪ್ರೊ ಬಿ ಎ ವಿವೇಕ ರೈ ಅವರ ‘ಬಿಚ್ಚಬೇಕಾದ ಕಟ್ಟಡಗಳು ಆಲಿಸಬೇಕಾದ ದನಿಗಳು’. ಹೇಗೆ ಒಂದು ನಿಟ್ಟುಸಿರು ಒಂದು ಮನೆಯೊಳಗೆ ಚೆಲ್ಲಾಡಿರುತ್ತದೆ. ಅದು ಹೇಗೆ ಮನೆಯೊಳಗಿನ ವಸ್ತುಗಳ ಅಸ್ತವ್ಯಸ್ತತೆಯಲ್ಲಿ ಗೊತ್ತಾಗುತ್ತದೆ ಎನ್ನುವ ಅಂಶ ಇತ್ತು ಆ ಲೇಖನದಲ್ಲಿ.

ಈ ಮಧ್ಯೆ ‘ಅಮ್ಮ ರಿಟೈರ್ ಆಗ್ತಾಳೆ’ ಎನ್ನುವ ನಾಟಕ ನನಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಮ್ಮ ತನ್ನ ಎಲ್ಲಾ ಕೆಲಸಗಳಿಂದ ರಿಟೈರ್ ಆಗ್ತೇನೆ ಎಂದು ಘೋಷಿಸಿಕೊಂಡ ನಂತರದಲ್ಲಿ ಹೇಗೆ ಇಡೀ ಮನೆಯೇ ಅಸ್ತವ್ಯಸ್ತವಾಗುತ್ತಾ ಹೋಗುತ್ತದೆ ಎನ್ನುವ ನಾಟಕ ಅದು.

ನಾನು ‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಬರೆದಾಗ ಅಡುಗೆಮನೆಯೊಳಗೆ ಹೇಗೆ ಜಾಗತೀಕರಣ ಜಾಗ ಮಾಡಿಕೊಂಡು ಕುಳಿತಿದೆ ಎನ್ನುವದನ್ನು ನಾನು ಕಂಡುಕೊಂಡಿದ್ದೆ.

ಗೀರ್ವಾಣಿ ಭಟ್ ತಮ್ಮ ಇತ್ತೀಚಿಗೆ ಕೃತಿಯಲ್ಲಿ ಬರೆದ ಅವರ ಮಾತುಗಳೂ ಸಹಾ ನನ್ನನ್ನು ಹೀಗೇ ಸೆಳೆದಿತ್ತು. ಪಾತ್ರೆಗಳನ್ನು ತೊಳೆಯುವಾಗ, ಅಡುಗೆ ಮಾಡುವಾಗ ಹೇಗೆ ಅವರು ಆ ವಸ್ತುಗಳನ್ನು ತಮ್ಮ ಒಡನಾಡಿಗಳನ್ನಾಗಿ ಮಾಡಿಕೊಂಡುಬಿಡುತ್ತಾರೆ ಎನ್ನುವುದು ನನ್ನನ್ನು ಕಾಡಿತ್ತು.

ಇದನ್ನೆಲ್ಲಾ ಮೆಲುಕು ಹಾಕುತ್ತಿರುವಾಗಲೇ ಬಿ ವಿ ಭಾರತಿ ಫೇಸ್ ಬುಕ್ ನೊಳಗೆ ತಮ್ಮ ಅಡುಗೆ ಕವಿತೆಗಳನ್ನು ಹಿಡಿದುಕೊಂಡು ಎಂಟ್ರಿ ಕೊಟ್ಟರು. ಅಡುಗೆಯ ಮೂಲಕ, ಅಡುಗೆಮನೆಯ ಸಲಕರಣೆಗಳ ಮೂಲಕ, ಅಡುಗೆ ಮನೆ ಹೊಕ್ಕ ತರಕಾರಿಗಳ ಮೂಲಕ ಇವರು ಕಟ್ಟಿಕೊಟ್ಟ ಕಣ್ಣೋಟ ಅದು ಅಡುಗೆಮನೆಯನ್ನು ಮೀರಿ ಬದುಕನ್ನು ಹೇಳುತ್ತಿತ್ತು.

‘ರಾಗಿ ಕಲ್ಲಿನ ಮೇಲೆ ಚೆಲ್ಲೀದೆ ನಮ್ಮ ಹಾಡು / ಬಲ್ಲಂತ ಜಾಣರು ಬರಕೊಳ್ಳಿ / ನಮ್ಮ ಹಾಡ ಬಳ್ಳ ತಕ್ಕೊಂಡು ಆಳಕೊಳ್ಳಿ ಎನ್ನುತ್ತಿದ್ದರು ಜನಪದರು. ರಾಗಿ ಕಲ್ಲಿನ ಕಾಲ ಹಿಂದೆ ಸರಿದು ಮಿಕ್ಸಿ ಗ್ರೈಂಡರ್, ಮೈಕ್ರೋ ವೇವ್ ಗಳ ಕಾಲದಲ್ಲಿ ನಿಟ್ಟುಸಿರು ಮರೆಯಾಗಿ ಹೋಗಿರಬಹುದು ಎಂದು ಭಾವಿಸಿಕೊಂಡವರಿಗೆ ಇಲ್ಲಿದೆ ಅದೆಲ್ಲದರ ಮಧ್ಯೆ ಹೊರಬಿದ್ದ ಹೇಳಿಕೊಳ್ಳಲೇಬೇಕಾದ ಕವಿತೆಗಳು.

ಭಾರತಿಯವರ ಬರವಣಿಗೆಗೆ ಸೆಳೆದುಕೊಳ್ಳುವ ಗುಣವಿದೆ. ಅವರ ಬರಹಗಳು ಯಾವ ಶೋಕಿಯನ್ನೂ ಮಾಡದೆ, ಹೇಳಬೇಕಾದ್ದನ್ನು ಯಾವುದೇ ಮೇಕ್ ಅಪ್ ಇಲ್ಲದೆ ದಾಟಿಸುವ ಗುಣ ಉಳ್ಳದ್ದು. ಈ ಕಿಚನ್ ಕವಿತೆಗಳ ಒಳಹೊಕ್ಕರೆ ನೀವೂ ‘ಹೌದು’ ಎನ್ನುತ್ತೀರಿ

ಕೃತಿ ಕೊಳ್ಳಲು ಈ ವಿವರಗಳನ್ನು ಗಮನಿಸಿ-

 

 

3 comments

 1. ಮೆನು-ಪರಿಚಯ ಘಮಘಮಿಸುತ್ತಿದೆ…

  ವೈದೇಹಿಯವರ ‘ತಿಳಿದವರೇ ಹೇಳಿ’ ನೆನಪಾಯ್ತು.

  “ಕಾವ್ಯದ ಬಗ್ಗೆ ತಿಳಿದವರೇ
  ಹೇಳಿ. ನನಗೆ ಕಾವ್ಯ ಗೊತ್ತಿಲ್ಲ
  ತಿಳಿಸಾರು ಗೊತ್ತು…..”

  ಹೊಸ ರುಚಿಗಾಗಿ ಮುಂಚಿತವಾಗಿಯೇ ಅಭಿನಂದನೆಗಳು, ಭಾರತಿ!

 2. ಬಿ. ವಿ ಭಾರತಿ ಅವರ ಬರಹ ಎಪ್. ಬಿ ಯಲ್ಲಿ ಓದುತ್ತಾ ಬಂದಿರುವೆನು. ಅವರ ಮೊದಲ ಕೃತಿಯೂ ಜೀವನ ಮೌಲ್ಯವನ್ನು ಕಟ್ಟಿಕೊಟ್ಟಿವೆ. ಇದೀಗ ಕಿಚನ್ ಕವಿತೆಗಳ ಪರಿಚಯ. ಅಭಿನಂದನೆಗಳು ಬಿ. ವಿ. ಭಾರತಿ ಅವರಿಗೆ.

Leave a Reply