ಮೊದಲ ಪತ್ರಿಕಾಗೋಷ್ಠಿ ಹೀಗಿತ್ತು..

ದಕ್ಷಿಣ ಕನ್ನಡ ಜಿಲ್ಲೆ ಕನ್ನಡದ ಮೊಟ್ಟ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ಕ್ಕೆ ಜನ್ಮ ನೀಡಿದ ತಾಣ. ಇಲ್ಲಿನ ಪತ್ರಿಕೋದ್ಯಮಕ್ಕೂ ತನ್ನದೇ ಆದ ಛಾಪು ಇದೆ. ಹಿರಿತಲೆಮಾರಿನ ಮೇಧಾವಿ ಪತ್ರಕರ್ತರು ರಾಜ್ಯ, ದೇಶದಾದ್ಯಂತ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ, ಹೊಸತಲೆಮಾರಿನವರೂ ಅನೇಕ ಮಂದಿ ಈಗ ಕ್ರಿಯಾಶೀಲರಾಗಿದ್ದಾರೆ. ಹಳೆ ತಲೆಮಾರಿನ ಪತ್ರಿಕೋದ್ಯಮಕ್ಕೆ ತನ್ನದೇ ಆದ ಮಿತಿಗಳಿದ್ದವು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಅಂತಹ ಮಿತಿಯಲ್ಲೂ ತಮ್ಮತನವನ್ನು ಮೆರೆದವರು ಬಹಳ ಮಂದಿಯಿದ್ದಾರೆ. ಅಂಥವರನ್ನು ಹೊಸತಲೆಮಾರು ಮರೆಯುವಂತಿಲ್ಲ.

೮೦ರ ದಶಕದಲ್ಲಿ ಮಂಗಳೂರಿನಲ್ಲಿದ್ದ ಪತ್ರಕರ್ತರು ಕೇವಲ ಐದಾರು ಮಂದಿ. ಇಲ್ಲೇ ಮುದ್ರಣವಾಗುತ್ತಿದ್ದ ನವಭಾರತ, ಮುಂಗಾರು, ಹೊಸದಿಗಂತ, ಮಣಿಪಾಲದಿಂದ ಪ್ರಕಟವಾಗುತ್ತಿದ್ದ ಉದಯವಾಣಿ ಹೊರತು ಪಡಿಸಿದರೆ ಉಳಿದೆಲ್ಲವೂ ಬೆಂಗಳೂರಿನಿಂದಲೇ ಬರುತ್ತಿದ್ದವು. ಮುಂಜಾನೆ ಏಳುವ ಮೊದಲೇ ಸಿಗುತ್ತಿದ್ದ ಸ್ಥಳೀಯ ಪತ್ರಿಕೆಗಳನ್ನು ಬಿಟ್ಟರೆ ಉಳಿದವುಗಳೆಲ್ಲವೂ ಎಂಟುಗಂಟೆ ಹೊತ್ತಿಗೆ ಸ್ಟಾಲ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅಂಥ ಕಾಲಘಟ್ಟದಲ್ಲಿನ ಪತ್ರಕರ್ತರನ್ನು ನೆನಪಿಸಿಕೊಳ್ಳುವುದಾದರೆ ಪ.ಗೋಪಾಲಕೃಷ್ಣ ನನ್ನ ಕುತೂಹಲಕ್ಕೆ ಕಾರಣರಾದವರು.

ನಾನೂ ಕೂಡಾ ಆ ಹೊತ್ತಿಗೆ ಹೊಸದಾಗಿ ಪತ್ರಕರ್ತ ವೃತ್ತಿಗೆ ಸೇರಿದ್ದವನು. ಹಳೆತಲೆಮಾರಿನ ಪತ್ರಕರ್ತರ ಬಗ್ಗೆ ಹೆಚ್ಚೇನೂ ಗೊತ್ತಿರದವ. ಆದರೆ ಗೋಪಾಲಕೃಷ್ಣ ನನಗೇನೂ ಗೊತ್ತಿಲ್ಲವೆಂದು ಕೇವಲವಾಗಿ ಕಂಡವರಲ್ಲ ಎನ್ನುವುದು ವಿಶೇಷ. ಪದ್ಯಾಣ ಗೋಪಾಲಕೃಷ್ಣ ಅವರ ಪೂರ್ಣ ಹೆಸರು. ಆದರೆ ಅವರನ್ನು ಹೆಚ್ಚಾಗಿ ಕರೆಯುತ್ತಿದ್ದುದು ಪ.ಗೋ ಎಂದೇ.

ಕಂಕನಾಡಿ ಕಪಿತಾನಿಯಾ ಹೈಸ್ಕೂಲ್ ಸಮೀಪದ ಓಣಿಯಲ್ಲಿ ಹಾವಿನಂಥ ತಿರುವಿನ ರಸ್ತೆಯಲ್ಲಿ ಸುಮಾರು ಒಂದು ಕೀ.ಮೀ ಸಾಗಿದರೆ ಆಳವಾದ ಪ್ರಪಾತದಂಥ ಸ್ಥಳ ಸಿಗುತ್ತದೆ. ಅಲ್ಲೇ ಅವರ ಮನೆ. ಪ.ಗೋ ಮನೆ ಎನ್ನುವುದು ಗೊತ್ತಗಬೇಕಾದರೆ ನಾನು ವೃತ್ತಿಗೆ ಸೇರಿ ಕೆಲವು ತಿಂಗಳುಗಳೇ ಬೇಕಾಯಿತು. ಅವರೇ ಅದೊಂದು ದಿನ ‘ಮನೆಗೆ ಬರ್ತೀಯಾ ?’ ಎಂದಾಗ ಅವರ ಜೊತೆ ಹೋದ ಕಾರಣ ಅವರ ಮನೆ ಗೊತ್ತಾಯಿತು.

ಪ.ಗೋ ರಾಜಧಾನಿ ಬೆಂಗಳೂರು ಸಹಿತ ಸುತ್ತಾಡಿ ಪತ್ರಿಕೆಗಳಲ್ಲಿ ಕೆಲಸ ಮಾಡಿ ಕೊನೆಗೆ ಮಂಗಳೂರಲ್ಲೇ ನೆಲೆ ನಿಂತಿದ್ದರು. ನನಗೆ ಪರಿಚಯವಾಗುವ ಕಾಲಕ್ಕೆ ಅವರು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ವರದಿಗಾರರು.

ನಾನು ‘ಮುಂಗಾರು’ ಪತ್ರಿಕೆ ಸೇರಿ ಒಂದು ವಾರವಷ್ಟೇ ಕಳೆದಿತ್ತು. ಅಲ್ಲಲ್ಲಿ ಕಾರ್ಯಕ್ರಮಗಳಿಗೆ ವರದಿಗಾರಿಕೆಗೆ ಹೋಗುತ್ತಿದ್ದ ಕಾರಣ ಪತ್ರಕರ್ತರ ಪರಿಚಯವಾಗಿತ್ತು. ಅವರನ್ನು ಪರಿಚಯ ಮಾಡಿಸಿದ್ದೂ ಕೂಡಾ ಇದೇ ಪ.ಗೋ. ಯು.ನರಸಿಂಹರಾವ್ ‘ದಿ ಹಿಂದೂ’, ಎ.ವಿ.ಮಯ್ಯ ‘ಉದಯವಾಣಿ’ , ಶಂಕರ್ ‘ಪಿಟಿಐ’, ಎನ್.ಆರ್.ಉಭಯ ‘ದಿ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ, ನಾಯಕ್ ಫಲಿಮಾರ್ಕರ್ ‘ಹೊಸದಿಗಂತ’ ನನ್ನ ಅವಧಿಯಲ್ಲೇ ಮನೋಹರ್ ಪ್ರಸಾದ್ ಉದಯವಾಣಿಗೆ ಸೇರಿದ್ದರು. ಇದು ಅಂದಿನ ಮಂಗಳೂರು ಪತ್ರಕರ್ತರ ಟೀಮ್. ಈ ಪೈಕಿ ಹೆಚ್ಚಾಗಿ ಮಾತನಾಡುತ್ತಿದ್ದವರು ಪ.ಗೋ, ಈ ಕಾರಣಕ್ಕೇ ಅವರನ್ನು ಗುಟ್ಟಾಗಿ ವಾಚಾಳಿ ಎನ್ನುವ ಹೆಸರಿಟ್ಟು ಕರೆಯುತ್ತಿದ್ದರು ನಮ್ಮವರು.

ಪ.ಗೋ ನಮ್ಮ ಟೀಮ್ನಲ್ಲೇ ಡಿಫರೆಂಟ್ ಎನ್ನುವುದು ಗೊತ್ತಾದದ್ದೂ ಪೇಜಾವರ ಮಠಾಧೀಶ ವಿಶ್ವೇಶ್ವರ ಶ್ರೀಗಳ ಪತ್ರಿಕಾಗೋಷ್ಠಿಯಲ್ಲಿ. ನನ್ನ ವೃತ್ತಿ ಬದುಕಿನ ಮೊಟ್ಟ ಮೊದಲ ಸ್ವಾಮೀಜಿ ಪತ್ರಿಕಾಗೋಷ್ಠಿ ಕೂಡಾ ಅದಾಗಿತ್ತು. ರಾಘವೇಂದ್ರ ಮಠದಲ್ಲಿ ಸಂಜೆ ಹೊತ್ತಿಗೆ ಸ್ವಾಮೀಜಿಯವರ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಅದೇ ಮೊದಲ ಸಲ ರಾಘವೇಂದ್ರ ಮಠಕ್ಕೆ ಹೋಗಿದ್ದು ಕೂಡಾ. ಪ.ಗೋ ಮಠದ ಹೊರಗೆ ನಿಂತುಕೊಂಡು ಬೀಡಿ ಸೇದುತ್ತಿದ್ದರು. ಆಗ ಕಲ್ಬಾವಿಯವರು ಮಠದ ಒಳಕ್ಕೆ-ಹೊರಕ್ಕೆ ಎಡತಾಕುತ್ತಿದ್ದರು ಏನೋ ಕಳೆದುಕೊಂಡವರಂತೆ. ಯಾರೊಬ್ಬರು ಹೊರಗೆ ಸುಳಿಯದಿದ್ದರೂ ಕಲ್ಬಾವಿಯವರು ಮಾತ್ರ ರೇಷ್ಮೆ ಪಂಚೆ, ಜುಬ್ಬ, ಮೇಲೊಂದು ಶಲ್ಯ ಹಾಕಿಕೊಂಡು ಗಮನ ಸೆಳೆಯುತ್ತಿದ್ದರು. ನನಗಾದರೂ ಅವರ ಬಗ್ಗೆ ಹೆಚ್ಚೇನು ಗೊತ್ತಿರದ ಕಾರಣ ಕುತೂಹಲಕ್ಕಾಗಿ ಪ.ಗೋ ಅವರನ್ನು ಕೇಳಿದೆ ಈ ವ್ಯಕ್ತಿ ಯಾಕೆ ಹೀಗೆ ಗಡಿಬಿಡಿ ಮಾಡುತ್ತಿದ್ದಾರೆಂದು. ಅದಕ್ಕೆ ಪ.ಗೋ ಕೊಟ್ಟ ಉತ್ತರ ‘ಒಳಗೆ ಸ್ವಾಮೀಜಿಯಿದ್ದಾರೆ, ಜೊತೆಗೆ ಮರಿಸ್ವಾಮೀಜಿಗಳೂ ಇದ್ದಾರೆ. ಇವರಿಗೆ ಪತ್ರಿಕೆಯವರು ಇನ್ನೂ ಬಂದಿಲ್ಲವೆಂದು ಪೀಕಲಾಟ ಶುರುವಾಗಿದೆ’ ಎಂದರು ನಗುತ್ತಾ ಜೋರಾಗಿ ಬೀಡಿ ಹೊಗೆ ಬಿಟ್ಟು.

ಮತ್ತೆ ಪ.ಗೋ ಬಳಿಗೆ ಬಂದ ಕಲ್ಬಾವಿಯವರು ಬನ್ನಿ ಒಳಗೆ ಕುಳಿತುಕೊಳ್ಳಿ ಎಂದರು. ಆಗ ಪ.ಗೋ ‘ಒಳಗಿರುವುದಕ್ಕಿಂತ ಹೊರಗಿರುವುದೇ ಒಳ್ಳೆಯದು ’ ಎಂದಾಗ ಅವರು ಆಯ್ತು ಆಯ್ತು ನಿಮ್ಮ ಕೆಲಸ ಮುಗಿಸಿ ಎಂದು ನಕ್ಕರು. ಅಂದಹಾಗೆ ಇವರು ಯಾರು ? ಎನ್ನುವ ಪ್ರಶ್ನೆ ಕಲ್ಬಾವಿಯವರಿಂದ ನನ್ನ ಬಗ್ಗೆ.
‘ಇವರ ಹೆಸರು ಚಿದಂಬರ ಬೈಕಂಪಾಡಿ. ಜನಶಕ್ತಿ ಬೆಳೆ ತೆಗೆವ ಮುಂಗಾರು ಪತ್ರಿಕೆಯ ವರದಿಗಾರರು. ಇನ್ನು ಆಗಾಗ ಇವರನ್ನು ನೋಡುತ್ತಿರುತ್ತೀರಿ ’ ಎಂದು ಪರಿಚಯ ಮಾಡಿಸಿದಾಗ ಕಲ್ಬಾವಿಯವರು ವಿನಯದಿಂದ ನಗುತ್ತಲೇ ಕೈಮುಗಿದು ‘ಒಳ್ಳೇದು ಒಳ್ಳೇದು’ ಎಂದವರೇ ಮಠದ ಒಳಗೆ ಹೋದರು.

ಸ್ವಲ್ಪ ಹೊತ್ತಲ್ಲಿ ಪತ್ರಕರ್ತರು ಒಬ್ಬೊಬ್ಬರಾಗಿ ಬರತೊಡಗಿದರು. ಬಹುತೇಕ ಎಲ್ಲರೂ ಬಂದಿದ್ದರಾದರೂ ಎ.ವಿ.ಮಯ್ಯ ಮಾತ್ರ ಬಂದಿರಲಿಲ್ಲ. ಅವರು ಬರದೆ ಪತ್ರಿಕಾಗೋಷ್ಠಿ ಆರಂಭವಾಗುವುದಿಲ್ಲವೆನ್ನುವುದು ಆಗ ಖಾತ್ರಿ. ಹೊರಗೆ ಯಾಕೆ ನಿಲ್ಲುವುದು ಯಾಕೆಂದು ‘ಒಳಗೆ ಹೋಗೋಣ’ ಎಂದೆ.
ತಟ್ಟನೆ ಪ.ಗೋ ‘ಸ್ವಾಮೀಜಿ ಕಿವಿಯಲ್ಲಿ ಮಾತಾಡಬೇಕೇ ?’ ಎಂದಾಗ ಗಾಬರಿ ಆಯ್ತು. ಅಷ್ಟಕ್ಕೂ ನಾನು ಸ್ವಾಮೀಜಿಯನ್ನು ಹತ್ತಿರದಿಂದ ನೋಡೇ ಇರಲಿಲ್ಲ. ಯಾಕೆ ಹೀಗೆ ಕೇಳಿದರೆಂದು ಕುತೂಹಲವಾಯಿತು. ಸ್ವಾಮೀಜಿ ಕಿವಿಯಲ್ಲಿ ಯಾಕೆ ಮಾತನಾಡಬೇಕು ? ಎಂದೆ. ಮತ್ತೇನು ಅವಸರ ಇಲ್ಲೇ ನಿಲ್ಲುವಾ ಎಂದು ಮತ್ತೊಂದು ಬೀಡಿಗೆ ಬೆಂಕಿ ಹಚ್ಚಿದರು.

ಮರುಕ್ಷಣಕ್ಕೆ ಅವರಿಗೆ ಏನನ್ನಿಸಿತೋ ‘ನಿನಗೆ ಸ್ವಾಮೀಜಿ ಆಶೀರ್ವಾದ ಬೇಕೇ ?, ಉದ್ದಂಡ ನಮಸ್ಕಾರ ಮಾಡು’ ಎಂದರು. ‘ಉದ್ದಂಡ ನಮಸ್ಕಾರ ಮಾಡಲೇಬೇಕೇ ? ’ ಎಂದೆ. ‘ಮಾಡಬೇಕಾಗಿಲ್ಲ, ಆಶೀರ್ವಾದ ಬೇಕಾದರೆ ಮಾಡಬೇಕು’ ಎಂದರು. ಬಹುತೇಕ ಪ.ಗೋ. ಉದ್ದಂಡ ನಮಸ್ಕಾರ ಮಾಡುವುದಿಲ್ಲವೆಂದು ನಾನೇ ಖಾತ್ರಿ ಮಾಡಿಕೊಂಡೆ ಹೊರತು ಕೇಳಲಿಲ್ಲ. ಅಷ್ಟರಲ್ಲಿ ವೇಗವಾಗಿ ಒಂದು ಕೈಯಲ್ಲಿ ಪಂಚೆಯ ಮೂಲೆ ಹಿಡಿದುಕೊಂಡು ಮಯ್ಯ ಬರುತ್ತಿದ್ದರು. ಆಗ ಪ.ಗೋ ‘ಕಲ್ಬಾವಿಯವರೇ ಬನ್ನಿ ನೀವು ಕಾಯುತ್ತಿದ್ದವರು ಬಂದರು’ ಎಂದು ಛೇಡಿಸಿದರು. ಅದಕ್ಕೆ ಮಯ್ಯ ಹೇಳಿದ್ದು ‘ಇಲ್ಲೂ ತಮಾಷೆಯಾ ?’.

ನಾನು, ಪ.ಗೋ ಮಯ್ಯರನ್ನು ಹಿಂಬಾಲಿಸಿ ಮಠ ಪ್ರವೇಶ ಮಾಡಿದೆವು. ಮಯ್ಯ ಮುಂದಿನ ಸಾಲಿನ ಕುರ್ಚಿಯಲ್ಲಿ ಕುಳಿತರು. ಪ.ಗೋ ಅವರು ಮಾತ್ರ ಎಲ್ಲರಿಗಿಂತಲೂ ಹಿಂದೆ ಕುಳಿತುಕೊಳ್ಳಲು ಕುರ್ಚಿ ಹುಡುಕುತ್ತಿದ್ದಾಗ ಮತ್ತೆ ಕಲ್ಬಾವಿಯವರು ಪ.ಗೋ ಅವರನ್ನು ಮುಂದಕ್ಕೆ ಬರಲು ಒತ್ತಾಯಿಸಿದರು. ಆದರೆ ಪ.ಗೋ ಮಾತ್ರ ಮುಂದಿನ ಸಾಲಲ್ಲಿ ಕುಳಿತುಕೊಳ್ಳಲು ಒಪ್ಪಲಿಲ್ಲ. ‘ಇಲ್ಲೇ ನನಗೆ ಕಂಫರ್ಟೆಬಲ್, ಪ್ಲೀಸ್’ ಎಂದು ಕುಳಿತರು, ನಾನು ಅವರ ಪಕ್ಕದಲ್ಲೇ ಕುಳಿತೆ. ನೀನು ಮುಂದೆ ಬೇಕಾದರೆ ಹೋಗು ಎಂದರು. ಆದರೆ ನಾನು ಹೋಗದೆ ಅಲ್ಲೇ ಕುಳಿತೆ.

ಪೇಜಾವರ ಶ್ರೀಗಳು ತಮ್ಮ ಪರ್ಯಾಯದ ಬಗ್ಗೆ ಒಂದಿಪ್ಪತ್ತು ನಿಮಿಷಗಳ ಕಾಲ ವಿವರವಾಗಿ ಹೇಳಿದರು. ಏನಾದರೂ ಇದ್ದರೆ ಕೇಳಿ ಎನ್ನುವ ಮನವಿ ಮಾಡಿದರು. ಯಾರಲ್ಲೂ ಪ್ರಶ್ನೆಗಳಿರಲಿಲ್ಲ. ಯಾರೂ ಮಾತನಾಡದಿದ್ದಾಗ ಪ.ಗೋ ‘ಸ್ವಾಮೀಜಿ ಕಲೆಕ್ಷನ್ ಹೇಗಿದೆ ?’ ಎನ್ನುವ ಪ್ರಶ್ನೆ ಹಾಕಿದರು.

ಆಗ ಸ್ವಾಮೀಜಿ ‘ನೋಡಿ ನಾವು ಯಾರನ್ನೂ ಒತ್ತಾಯ ಮಾಡುವುದಿಲ್ಲ. ಇದು ದೇವರ ಕೈಂಕರ್ಯ. ಭಕ್ತರೇ ಮುಂದೆ ಬಂದು ಎಲ್ಲವನ್ನೂ ಮಾಡುತ್ತಾರೆ. ದೈವಸಂಕಲ್ಪ, ಆದ್ದರಿಂದ ನಾವು ಕಲೆಕ್ಷನ್ ಮಾಡುವುದಿಲ್ಲ. ಭಕ್ತರೇ ಭಗವಂತನಿಗೆ ಸೇವಾರೂಪವಾಗಿ ತಮಗೆ ತೋಚಿದನ್ನು ಮಾಡುತ್ತಾರೆ’ ಎಂದವರೇ ಮಂತ್ರಾಕ್ಷತೆ ತೆಗೆದುಕೊಳ್ಳಲು ಮಯ್ಯರನ್ನು ಕರೆದರು. ಅಲ್ಲಿಗೆ ಪತ್ರಿಕಾಗೋಷ್ಠಿ ಸಮಾಪ್ತಿ.

ಇದೆಲ್ಲವೂ ನನಗೆ ಹೊಸದಾಗಿದ್ದ ಕಾರಣ ವಿಧೇಯ ವಿದ್ಯಾರ್ಥಿಯಂತೆ ಪ.ಗೋ ಪಕ್ಕದಲ್ಲಿ ಕುಳಿತು ಕೇಳಿ ಬರೆದುಕೊಂಡೆ. ಅಷ್ಟರಲ್ಲಿ ಪತ್ರಕರ್ತರು ಕ್ಯೂ ನಿಂತರು ಮಂತ್ರಾಕ್ಷತೆ ತೆಗೆದುಕೊಳ್ಳಲು. ಒಂದಷ್ಟು ಜನ ಸ್ವಾಮೀಜಿ ಪರಿವಾರದವರು ನಮ್ಮನ್ನೇ ನೋಡುತ್ತಿದ್ದರು. ಮೊದಲಿಗರಾಗಿ ಮಯ್ಯ ಉದ್ದಂಡ ನಮಸ್ಕಾರ ಮಾಡಿ ಮಂತ್ರಾಕ್ಷತೆ ಪಡೆದುಕೊಂಡರು. ಸರದಿಯಲ್ಲಿ ಸ್ವಾಮೀಜಿಗಳಿಂದ ಮಂತ್ರಾಕ್ಷತೆ ಪಡೆದ ಮೇಲೆ ನನ್ನ ಸರದಿ ಬಂದಾಗ ಅದೇ ಮೊದಲ ಬಾರಿಗೆ ನನ್ನನ್ನು ನೋಡಿದ್ದ ಸ್ವಾಮೀಜಿಯವರು ನಿಮ್ಮ ಪರಿಚಯವಾಗಲಿಲ್ಲವೆಂದರು. ನಾನು ಪರಿಚಯ ಹೇಳಿಕೊಂಡೆ ನಮಸ್ಕರಿಸಿ ಮಂತ್ರಾಕ್ಷತೆ ತೆಗೆದುಕೊಂಡೆ. ಕೊನೆಯದಾಗಿ ಪ.ಗೋ ಮಂತ್ರಾಕ್ಷತೆ ತೆಗೆದುಕೊಳ್ಳುವಾಗ ‘ಪರ್ಯಾಯಕ್ಕೆ ಬನ್ನಿ’ ಎನ್ನುವ ಆಹ್ವಾನಕೊಟ್ಟರು. ನನ್ನದೇನು ಬಿಡಿ ‘ ಅಲ್ಲಿ ನಿಂತವರು ಬರುವಂತೆ ನೋಡಿಕೊಳ್ಳಿ ’ ಎಂದು ಮಯ್ಯರನ್ನು ತೋರಿಸಿದರು. ಆಗ ಸ್ವಾಮೀಜಿ ‘ಅವರೂ ಬೇಕು, ನೀವೂ ಬರಬೇಕು’ ಎಂದರು.

ಮಠದ ಹೊರಗೆ ಬಂದ ಮೇಲೆ ಪ.ಗೋ ‘ಹೇಗಿತ್ತು ಅನುಭವ ?’ ಎಂದು ಕೇಳಿದರು. ‘ನನಗೇನೂ ಗೊತ್ತಾಗಲಿಲ್ಲ, ಹೇಗೆ ಹೇಳಬೇಕೋ ?’ ಎಂದೆ. ‘ಮುಂದೆ ನಿನಗೇ ಗೊತ್ತಾಗುತ್ತೆ, ನಿಧಾನವಾಗಿ ಅರ್ಥವಾಗಬೇಕು’ ಎಂದರು.

Leave a Reply