ಹೆಸರು ಮರೀನ ಬೇ ಸ್ಯಾಂಡ್ಸ್.. 

 

ಕೈಯಲ್ಲೊಂದು ಗ್ಲಾಸ್ ಕಪ್. ಕಪ್ಪಿನೊಳಗೆ ಒಂದಿಷ್ಟು ಷಾಂಪೇನ್. ಕೂತಲ್ಲೇ ಇಡೀ ದೇಶದ ಭವ್ಯ ಮನೋಹರ ನೋಟ. ಯಾರ ಹಂಗೂ ಇಲ್ಲದ ಏಕಾಂತ. ನಮ್ಮನ್ನು ನಾವು ಮಾತಾಡಿಸಿಕೊಳ್ಳುವ ಅವಕಾಶ. ಯಾರಿಗುಂಟು ಯಾರಿಗೆ ಇಲ್ಲ. ಮನೆ ಕೆಲಸ , ಮನೆಯಲ್ಲಿದ್ದವರ ಆರೈಕೆ ಎಲ್ಲವೂ ವಿರಾಮದ ಬಳಿಕ. ಇದು ಪಂಚವಾರ್ಷಿಕ ಯೋಜನೆಯ ರೀತಿಯಲ್ಲಿ ನಡೀತಿರುವ ನನ್ನ ಸ್ಕೆಚ್.

ಈ ಘಟನೆ, ಸಾಕ್ಷಿ ಆಗೋಕೆ ನಾನು ಆಯ್ಕೆ ಮಾಡಿರುವ ಜಾಗ, ಸಿಂಗಾಪುರದ ಒಂದು ಐಷರಾಮಿ ಹೋಟೆಲ್. ನಂಗಂತೂ ಈ ಹೋಟೆಲ್ ಮೇಲೆ ಅದ್ಯಾಕೋ ಒಂದು ಕಣ್ಣು. ಕನಸು ಕಂಡ್ರೆ ದೊಡ್ಡ ಕನಸೇ ಕಾಣಬೇಕಂತೆ. ಹಾಗೆ ಆಗಿದೆ ನನ್ನ ಸ್ಥಿತಿ. ಬಸ್ , ಟ್ಯಾಕ್ಸೀನಲ್ಲಿ ಅದೆಷ್ಟೋ ಬಾರಿ ಈ ಹೋಟೆಲ್ ಬಳಿಯಿಂದ ಹಾದು ಹೋಗಿದ್ದು ಇದೆ. ದೃಷ್ಟಿ ಹಾಯಿಸಿದಾಗಲೆಲ್ಲಾ ಅದೇನೋ ಆಕರ್ಷಣೆ.

ಅಬ್ಬಾ..! ಅದನ್ನು ಹೋಟೆಲ್ ಅಂತಾರ..? ನಿಜಕ್ಕೂ ಅದ್ಭುತ ಜಗತ್ತು. ಇದರ ಹಿಂದೆ – ಮುಂದೆ , ಮೇಲೆ – ಕೆಳಗೆ ನಿಂತು ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಅದರ ಒಳಗಿನ ಸೌಂದರ್ಯವನ್ನು ಅನುಭವಿಸುವ ಭಾಗ್ಯ ಮಾತ್ರ ಇನ್ನೂ ವೈಟಿಂಗ್ ಲಿಸ್ಟ್.  ಸಿಂಗಾಪುರ ದೇಶವನ್ನು ಬಿಂಬಿಸುವಲ್ಲಿ ಈ ಹೋಟೆಲಿದ್ದು ಪ್ರಮುಖ ಸ್ಥಾನ.

ಹೆಸರು ಮರೀನ ಬೇ ಸ್ಯಾಂಡ್ಸ್..  ವಯಸ್ಸು ಸುಮಾರು ೭ ವರ್ಷ. ಉದ್ದನೆಯ ದೋಣಿಯನ್ನೇ ತಲೆಯಲ್ಲಿ ಹೊತ್ತ ರೂಪ. ಮೈಯೆಲ್ಲಾ ಇಳಿಜಾರು ಬಂಡಿಯಂತಿರುವ ಆಕೃತಿ. ಈ ದೋಣಿಯ ಹೆಸರೇ  ಸ್ಕೈ ಪಾರ್ಕ್. ಇದರ ಆಧಾರಕ್ಕೆ 3 ಗೋಪುರಗಳು. ಈ ಮೂರರಲ್ಲಿ ಒಟ್ಟು  2,561 ಕೋಣೆಗಳು. ಇವು 55 ಮಹಡಿಗಳ ಮೂಲಕ ವಿಸ್ತರಿಸಿಕೊಂಡಿವೆ. ಒಂದು ರೂಮಿನ ಅರಮನೆಗೆ ಒಂದು ದಿನದ ವೆಚ್ಚ 1,598 ಡಾಲರ್. ಇದು ಎರಡು ದಿನಗಳ ಹಿಂದೆ ಅಷ್ಟೇ ಪರಿಶೀಲಿಸಿದ ದರ. ರೂಪಾಯಿ ಲೆಕ್ಕದಲ್ಲಿ ಹೇಳೋದಾದ್ರೆ 80,400 ..! ಅತಿರಂಜಿತ ಹೋಟೆಲ್ ಕೊಠಡಿಗಳು, ವಾಲ್ ಪೇಪರ್ ಚಿತ್ರಗಳಷ್ಟೇ ಬೆರಗುಗೊಳಿಸುವ ವಿಹಂಗಮ ನೋಟ. ಆಕರ್ಷಕವಾಗಿ ಹೊಳೆಯುವ ಸ್ನಾನದ ಮನೆಗಳು.

ರೂಮಿನ ಹೊರಗೆ ಕಾಲಿಡುತ್ತಿದ್ದಂತೆ ಮತ್ತಷ್ಟು ಕೆಲ ಸಂಗತಿಗಳು ನಮ್ಮನ್ನು ಮಂತ್ರ ಮುಗ್ದಗೊಳಿಸುತ್ತವೆ. ಕನ್ವೆನ್ಷನ್-ಪ್ರದರ್ಶನ ಕೇಂದ್ರ, ಮಳಿಗೆಗಳು, ಮ್ಯೂಸಿಯಂ, ಎರಡು ದೊಡ್ಡ ಥಿಯೇಟರ್ ಗಳು, “ಸೆಲೆಬ್ರಿಟಿ ಶೆಫ್ ” ರೆಸ್ಟೋರೆಂಟ್ ಗಳು, ಎರಡು ತೇಲುವ ಕ್ರಿಸ್ಟಲ್ ಪೆವಿಲಿಯನ್ಸ್, ಕಲಾ-ವಿಜ್ಞಾನ ಪ್ರದರ್ಶನಗಳು ಇತ್ಯಾದಿ. ಪ್ರೀಮಿಯಂ ಮತ್ತು ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಗಳ ಅತಿ ದೊಡ್ಡ ಸಂಗ್ರಹಗಳು ಇಲ್ಲಿವೆ. ಈ ಹೋಟೆಲ್ ಬುಕ್ ಮಾಡುವ ಪ್ರವಾಸಿಗರಿಗೆ, ಇದುವೇ ಒಂದು ದೊಡ್ಡ ಪ್ರವಾಸಿ ತಾಣ ಆಗೋದ್ರಲ್ಲಿ ಸಂಶಯವಿಲ್ಲ.

ಇಷ್ಟೇನಾ  ಅನ್ಕೋಬೇಡಿ… ಇಲ್ಲಿನ ಇನ್ನೊಂದು ಆಕರ್ಷಣೆ ಕ್ಯಾಸಿನೋ. ಇದರ ಆಸ್ತಿ ಬರೋಬ್ಬರಿ ೮ ಶತಕೋಟಿ ಡಾಲರ್. ವಿಶ್ವದ ಅತಿದೊಡ್ಡ Atrium casino ಎಂದೇ ಖ್ಯಾತಿ. ಅಪ್ರತಿಮ ರೂಪದ ರಚನೆಗಳ ಪೈಕಿ ಇದು ಒಂದು. ಇಲ್ಲಿನ ಕ್ಯಾಸಿನೊ  4  ಮಹಡಿಗಳಲ್ಲಿ ಚದುರಿಕೊಂಡಿ ದ್ದು, 3.7 ಎಕರೆ ಜಾಗವನ್ನು ಹೊಂದಿದೆ. ಇದು 600 ಕ್ಕೂ ಹೆಚ್ಚು ಟೇಬಲ್ ಆಟಗಳು, 1,600 ಸ್ಲಾಟ್ ಗಳನ್ನು ಹೊಂದಿದೆ. ಹೋಟೆಲ್ ನಲ್ಲಿ ತಂಗುವ ಎಲ್ಲಾ ಅತಿಥಿಗಳಿಗೆ ಅತ್ಯುತ್ಕೃಷ್ಟವಾದ ಕಾರ್ಯಕ್ರಮವನ್ನು ಇಲ್ಲಿ ಒದಗಿಸಲಾಗುತ್ತದೆ. ಸ್ಯಾಂಡ್ಸ್ ರಿವಾರ್ಡ್ ಕ್ಲಬ್ ನ  ಸದಸ್ಯರಿಗೆ ಈ ಅವಕಾಶವಿದೆ. ಕ್ಯಾಸಿನೊ ಆಟದಲ್ಲಿ ವಿಜೇತರಾದವರಿಗೆ ಸ್ಯಾಂಡ್ಸ್ ಪಾಯಿಂಟುಗಳು, ಸ್ಯಾಂಡ್ಸ್ ಡಾಲರ್ ಗಳು ಮತ್ತು ಸ್ಯಾಂಡ್ಸ್ ಬೋನಸ್  ಡಾಲರ್ ಗಳನ್ನು ನೀಡಲಾಗುತ್ತದೆ. ಶಾಪಿಂಗ್, ಊಟ, ಮನರಂಜನೆ ಮತ್ತು ಹೋಟೆಲ್ ತಂಗುವಿಕೆಗಳಿಗಾಗಿ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಕ್ಯಾಸಿನೊದಲ್ಲಿ ಭಾಗವಹಿಸುವವರ ವಯಸ್ಸು 21 ದಾಟಿರಬೇಕು. ವಿಶ್ವದ ಅತಿದೊಡ್ಡ ಸ್ವಾರೊಸ್ಕಿ ಸ್ಫಟಿಕ ಗೊಂಚಲು ಇಲ್ಲಿ ಕಾಣಬಹುದು.

ಮಧ್ಯರಾತ್ರಿಯ ಬಳಿಕ ಯಕ್ಷಗಾನದ ಬಯಲಾಟದ ಕಥಾ ಪ್ರಸಂಗಗಳ ಮುಖ್ಯ ಭಾಗಗಳು ನಡೆಯುವ ಹಾಗೇ. ಈಟಿವಿ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಬರುತ್ತಿದ್ದ ಪ್ರೈಮ್ ಟೈಮ್ ನ್ಯೂಸ್ ತರ. ಈಗ ನಾನು ಕೂಡ ಹೇಳಲು ಹೊರಟಿರೋದು ಮರೀನಾ ಬೇ ಸ್ಯಾಂಡ್ಸ್ ನ ಪ್ರಮುಖ ಭಾಗ. ಅದುವೇ ಸ್ಕೈ ಪಾರ್ಕ್.

ಇದನ್ನ ನೋಡ್ತಾ ಇದ್ರೆ.. ಸ್ವರ್ಗ ಲೋಕವೇ ಇಳಿದು ಬಂದಿದೆಯೋ ಎಂಬ ಅನುಭವ. ಮೂರು ಹೋಟೆಲ್ ಟವರ್ ಗಳನ್ನು ಒಟ್ಟು ಸೇರಿ 1 ಹೆಕ್ಟೇರ್ ಛಾವಣಿಯ ಟೆರೇಸ್ ಇದಾಗಿದೆ. ಈ ಸ್ಕೈಪಾರ್ಕ್ ನ ಆಕರ್ಷಣೆಯ ಕೇಂದ್ರ  ವಿಶ್ವದ ಅತಿ ಉದ್ದದ ಈಜುಕೊಳ. ಇದು ನೆಲದಿಂದ  627 ಅಡಿ  ಎತ್ತರದಲ್ಲಿದೆ. ಈ ಸ್ವಿಮ್ಮಿಂಗ್  ಪೂಲ್ ನ ಬದಿಗಳು ಅದೃಶ್ಯವಾಗಿರೋದೇ ಇದರ ಸ್ಪೆಶ್ಯಾಲಿಟೀ.  “ಇನ್ಫಿನಿಟೀ ಪೂಲ್ “ ಎಂದು ಕರೆಸಿಕೊಳ್ಳುವ ಪರಿಕಲ್ಪನೆ.

ಇದು 146-ಮೀಟರ್ (479 ಅಡಿ) ನಷ್ಟು ವಿಸ್ತಾರವಾಗಿದೆ. ಈ ಕೊಳಗಳು ಸ್ಟೇನ್‌ಲೆಸ್ ಸ್ಟೀಲ್ ಗಳಿಂದ ರಚನೆಯಾಗಿದೆ. 376,500 ಯುಎಸ್  ಗ್ಯಾಲನ್  ನಷ್ಟು (1,425 ಕ್ಯೂಬಿಕ್ ಮೀಟರ್ ಗಳು) ನೀರನ್ನು ಇದರಲ್ಲಿ ಸಂಗ್ರಹಿಸಬಹುದಾಗಿದೆ. ಮೊದಲ ಬಾರಿಗೆ ನೋಡಿದ್ದಲ್ಲಿ ತೇಲುತ್ತಿರುವ ಈಜುಕೊಳವೇನೋ ಎಂಬ ಭಾವ. ಸ್ಕೈ ಪಾರ್ಕ್ ರೂಫ್‌ಟಾಪ್ ನಲ್ಲಿ ನೈಟ್‌ಕ್ಲಬ್ಸ್ ಗಳಾದ ಲಾವೋ (ನ್ಯೂಯಾರ್ಕ್, ವೆಗಾಸ್) ಮತ್ತು ಸಿ ಲಾ ವಿಯ್  ಕಾಣಬಹುದು.

ಇವಲ್ಲದೆ, ಸುಂದರ ಉದ್ಯಾನ, ಜಾಗಿಂಗ್ ಟ್ರ್ಯಾಕ್ಸ್, ನೂರಾರು ಮರಗಿಡಗಳು, ಸಾರ್ವಜನಿಕ ವೀಕ್ಷಣಾಲಯದ ಡೆಕ್ ನ್ನು ಅಳವಡಿಸಲಾಗಿದೆ. ಈ ಮೂಲಕ ೩೬೦ ಡಿಗ್ರಿನಲ್ಲಿ ಭವ್ಯ ಮನೋಹರ ಅದ್ಭುತ ನೋಟ ನಮ್ಮ ಕಣ್ಣ ಮುಂದೆ. ಆಗ್ನೇಯ ಏಷ್ಯಾದಲ್ಲೇ ಅತಿ ದೊಡ್ಡದಾದ  ಲೈಟ್ – ವಾಟರ್ ಶೋ ಮತ್ತು ಲೇಸರ್ ಶೋಗಳು ಪ್ರವಾಸಿಗರಿಗಾಗಿ ಇಲ್ಲಿ ಪ್ರತಿನಿತ್ಯ ನಡೆಯುತ್ತವೆ.

ಇಷ್ಟೆಲ್ಲಾ ಬಣ್ಣಿಸಿದ ಮೇಲೆ , ಇದರ ಹಿಂದಿನ ರೂವಾರಿಗಳ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಅಂದ ಹಾಗೇ ಇದನ್ನು ವಿನ್ಯಾಸಗೊಳಿಸಿದವರು ಮೊಶೆ ಸಫೀ.  ಇಸ್ಪೀಟಾಟದ ಎಲೆಗಳ ಕಟ್ಟುಗಳೇ ಇದಕ್ಕೆ ಸ್ಫೂರ್ತಿ ಎನ್ನಲಾಗಿದೆ. ಲಾಸ್ ವೇಗೆಸ್ ಸ್ಯಾಂಡ್ಸ್ ಕಾರ್ಪ್ ಇದನ್ನು ಅಭಿವೃದ್ಧಿಪಡಿಸಿದೆ. ಹಾದಿಯುದ್ದಕ್ಕೂ ಕಾಣುವ ವಾಸ್ತುಶಿಲ್ಪ ಮತ್ತು ಪ್ರಮುಖ ವಿನ್ಯಾಸದ ಬದಲಾವಣೆಗಳನ್ನು ” ಫೆಂಗ್ ಶೂಯಿ” ಸಲಹೆಗಾರರಿಂದ ಪಡೆಯಲಾಗಿದೆ. ಚೀನಿಯರ ಜೋತಿಷ್ಯ ಶಾಸ್ತ್ರವನ್ನು ” ಫೆಂಗ್ ಶೂಯಿ”  ಎಂದು ಕರೆಯಲಾಗುತ್ತದೆ.

ಒಟ್ಟು 20-ಹೆಕ್ಟೇರ್ ಸ್ಥಳದ ರೆಸಾರ್ಟ್ ನಲ್ಲಿ ಹೋಟೆಲ್ , ಕ್ಯಾಸಿನೊ ಜೊತೆಗೆ ಇತರ ಕಟ್ಟಡಗಳಾದ ಆರ್ಟ್ ಸೈನ್ಸ್ ಮ್ಯೂಸಿಯಂ,  ಕನ್ವೆನ್ಶನ್ ಸೆಂಟರ್ ಗಳು  ಒಟ್ಟಾರೆ 45,000 ಜನರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿವೆ. ಸಿಂಗಾಪುರದ Central Business District (CBD) ನ ಹೃದಯಭಾಗದಲ್ಲಿರುವ ಏಷ್ಯಾದ ಅತ್ಯಂತ ಅದ್ಭುತ ಮನರಂಜನಾ ಸ್ಥಳ ಇದಾಗಿದೆ.

ದುಡ್ಡಿನ ಆಟ ಅನ್ನೋದು ಒಂದು ಸೋಜಿಗ. ಇದಕ್ಕೆ ಭವಿಷ್ಯದ ಗ್ಯಾರಂಟಿ ಅನ್ನೋದು ಇಲ್ಲ. ಬಂದ್ರೆ ಬಂತು, ಹೋದ್ರೆ ಹೋಯಿತು. ಇವತ್ತು ಉಳಿಸಿದ ಹಣ ಸುಖಾಸುಮ್ಮನೆ ಯಾವುದಕ್ಕೂ ಪ್ರಯೋಜನವಾಗದೇ, ನೀರಿನಲ್ಲಿ ಹೋಮ ಆಗೋದು ಇದೆ ಕೆಲವೊಮ್ಮೆ. ಭವಿಷ್ಯದ ಕಷ್ಟಕಾಲವನ್ನೇ ಅರಸುತ್ತಾ ಕೂತರೆ, ವರ್ತಮಾನದಲ್ಲಿ ಅನುಭವಿಸಬೇಕಿದ್ದ ಸಂತೋಷಗಳ ಪಾಡು..!

ಶಿವರಾಮ ಕಾರಂತರ “ಅಪೂರ್ವ ಪಶ್ಚಿಮ” ಪುಸ್ತಕದಲ್ಲಿರುವ ಅನುಭವಗಳಿಗೆ, ಸಾಲ-ಸೋಲ ಮಾಡಿ ಕೈಗೊಂಡ ಅವರ ವಿದೇಶಿ ಯಾತ್ರೆ ಮುಖ್ಯ ಕಾರಣ. ಜೊತೆಗೆ ನೋಡಿಯೇ ಬಿಡುವೆನೆಂಬ ಧೈರ್ಯ, ಛಲ. ಇತ್ತೀಚಿನ ದಿನಗಳಲ್ಲಂತೂ ಹೊಸ ಟ್ರೆಂಡ್ ಶುರುವಾಗಿ ಬಿಟ್ಟಿದೆ.

ತಿಂಗಳಿಗೆ ಒಮ್ಮೆಯಾದ್ರೂ, ಗೆಳೆಯರ ಜೊತೆ, ಕುಟುಂಬ ಸದಸ್ಯರ ಜೊತೆ ಪ್ರವಾಸ ಹೋಗಿಲ್ಲ ಅಂದ್ರೆ ಅದ್ಯಾಕೋ ಲೈಫ್ ಬೋರ್ ಅನ್ನುವ ಭಾವನೆಗಳು.  ಇದೇ ಕಾರಣಕ್ಕೆ ನಮಗೂ ಕೂಡ ಸಿಂಗಾಪುರದ ಅಕ್ಕಪಕ್ಕ ದೇಶಗಳನ್ನು ನೋಡುವ ಸೌಭಾಗ್ಯ ದೊರಕಿದೆ.

ಇದೀಗ ಒಬ್ಬಳೇ ಅಥವಾ ಫ್ರೆಂಡ್ಸ್ ಜೊತೆ ಸುತ್ತಾಡಿ ಬರಬೇಕೆಂಬ ಹುಮ್ಮಸ್ಸು. ನನ್ನ ಪಂಚವಾರ್ಷಿಕ ಯೋಜನೆಯಿಂದ ಮಾತ್ರ ಹೊರಬರಬೇಕಾಗಿದೆ ಅಷ್ಟೇ.

Leave a Reply