ಸುರತ ಸುಖ ಕಟ್ಟಿಕೊಡುವುದರಲ್ಲಿ ಕನ್ನಡ ಕವಿಗಳೇನು ಕಡಿಮೆಯೇ?

ಶೃಂಗಾರಮೆ ರಸಂ, ಕಾಮಕೂಟದ ಸುಖಮೆ ಮೋಕ್ಷ ಸುಖಂ.

ಭಾರತೀಯ ಸಂಸ್ಕೃತಿಯ ನಿಲುವುಗಳಲ್ಲಿ ಕಾಮದ ಬಗೆಗೆ ವಿಶೇಷವಾದ ನಿಲುವೊಂದಿದೆ. ‘ಕಾಮ’ ವು ಪರಮ ಪುರುಷಾರ್ಥವಾದ ಮೋಕ್ಷಕ್ಕೆ ಅಡ್ಡಿಯನ್ನುಂಟುಮಾಡುವುದಿಲ್ಲ ಬದಲಾಗಿ, ಮೋಕ್ಷಕ್ಕೆ ದಾರಿ ತೋರಿಸುತ್ತದೆ ಎಂದು.

ಹಾಗಾಗಿಯೆ ಚತುರ್ವಿಧ ಪುರುಷಾರ್ಥಗಳಲ್ಲಿ “ಕಾಮ” ವೂ ಮೋಕ್ಷಕ್ಕಿಂತ ಮೊದಲು ಬರುತ್ತದೆ.

ಜಗತ್ತಿನ ಎಲ್ಲ ಜೀವರಾಶಿಗಳಲ್ಲಿ ಹಸಿವು, ನೀರಡಿಕೆಯಷ್ಟೆ ಸಹಜವಾದದ್ದು ಕಾಮಕ್ರಿಯೆ. ಇದು ಸೃಷ್ಟಿ ನಿಯಮವೂ ಹೌದು. ಹಾಗಾಗಿ ಸೃಷ್ಠಿಯ ಮುಂದುವರಿಕೆಗಾಗಿ ಸಂತಾನ ಅವಶ್ಯಕ. ಸಂತಾನಕ್ಕೆ ಗಂಡು ಹೆಣ್ಣಿನ ಸಂಭೋಗ ಕ್ರಿಯೆ ಅನಿವಾರ್ಯ.

ಭಾರತೀಯ ಮಹಾಕಾವ್ಯಗಳಲ್ಲಿ, ಕಾವ್ಯದ ಲಾಕ್ಷಣಿಕರು ಅಷ್ಟಾದಶವರ್ಣನೆಗಳು ಇರಬೇಕು ಎನ್ನುತ್ತಾರೆ. ಆ ಹದಿನೆಂಟು ವರ್ಣನೆಗಳಲ್ಲಿ ಕಾಂತಾರತಿ ವರ್ಣನೆ (ಸುರತ) ಹದಿಮೂರನೆಯದು.

ಕನ್ನಡ ಮಹಾಕಾವ್ಯಗಳಲ್ಲಂತೂ ನಮ್ಮ ಕವಿಗಳು ಸುರತ ವರ್ಣನೆಯನ್ನು ಅತ್ಯುತ್ಸಾಹದಿಂದ ವಿವರಿಸಿದ್ದಾರೆ.
ಕನ್ನಡ ಕವಿಗಳು ತಮ್ಮ ಕಾವ್ಯಗಳಲ್ಲಿ ಕಟ್ಟಿಕೊಟ್ಟಿರುವ ಸಂಭೋಗ ವರ್ಣನೆಯ ವಿವರಗಳನ್ನು ಓದುತ್ತಿದ್ದರೆ, ನಮ್ಮ ಕವಿಗಳ ರಸಿಕತೆಯ ಜೊತೆಗೆ ಆ ಕ್ರಿಯೆಯನ್ನು ಅವರು ಗ್ರಹಿಸಿರುವ ಬಗೆ ಎಂತಹದ್ದು ಎಂದು ತಿಳಿದುಬರುತ್ತದೆ.

ಸುರತ ಸುಖದ ಬಗೆಗೆ ಕನ್ನಡ ಕವಿಗಳು ಹೇಳುವುದೇನೆಂದರೆ “ಗಂಡು – ಹೆಣ್ಣು ಸರಿಸಮನಾದ ಸುಖವನ್ನು, ಸಮಾನತೆಯನ್ನು ಪಡೆಯುವುದು ಸುರತಕ್ರೀಡೆಯಲ್ಲಿ ಮಾತ್ರವೇ, ಹಾಗಾಗಿ ಈ ಕಾರಣದಿಂದಲೇ ಜೀವನದಲ್ಲಿ ಸಾಮರಸ್ಯ ಹೊಂದುವುದು ಎನ್ನುತ್ತಾರೆ.

ಇಂಥ ಸುರತಸುಖ ಕ್ರೀಡೆಯ ಆರಂಭದಿಂದ ಹಿಡಿದು ಅಂತ್ಯ ಮತ್ತು ಆನಂತರದ ಎಲ್ಲ ಅವಸ್ಥೆಗಳನ್ನು ನಮ್ಮ ಕವಿಗಳು ವಿವರಣಾತ್ಮಕವಾಗಿ ವಿವರಿಸಿದ್ದಾರೆ.

ನಮ್ಮ ಕವಿಗಳು ಕಟ್ಟಿಕೊಟ್ಟಿರುವ ಸುರತಕ್ರೀಡೆಯ ಆರಂಭದ ವರ್ಣನೆ :

ಸುರತದ ಆರಂಭದ ಹಂತವನ್ನು ವರ್ಣಿಸುತ್ತಾ ಗಂಡು ಹೆಣ್ಣಿನ ಮಾನಸಿಕ ಸ್ಥಿತಿಯನ್ನೂ ಮತ್ತು ಅವರ ಶೃಂಗಾರ ಚೇಷ್ಟೆಗಳನ್ನು ರಸಮಯವಾಗಿ ಚಿತ್ರಿಸಿದ್ದಾರೆ.

1.

ನೆಗಳ್ದುಡೆನೂಲಗೆಜ್ಜೆಯುಲಿ ಕೀರದ ಸಾರಿಕೆಯಿಂಚರಂಗಳಂ
ಮಿಗೆ ಚರಣಸ್ಫುರನ್ನಖಮಯೂಖದ ಬೆಳ್ಪುಪಹಾರ ಪುಷ್ಪಮಂ
ದ್ವಿಗುಣಿಸೆ ಸುಯ್ಯಕಂಪಗುರುಧೂಪದ ಕಂಪನದಿರರ್ಪೆ ದೀಪಕಾಂತಿಗೆ ತನುಕಾಂತಿ ಮಾರ್ಮಲೆಯೆ ಪೊಕ್ಕಳ್ ಇಳಾನುತೆ ವಾಸಗೇಹಮಂ.
– ಜಗನ್ನಾಥವಿಜಯಂ ಕಾವ್ಯದ ಪದ್ಯ.

– ಅವಳು ಧರಿಸಿದ್ದ ಕಟಿಸೂತ್ರ ( ಬೆಳ್ಳಿ ಉಡುದಾರ)ದ ಗೆಜ್ಜೆಗಳ ಧ್ವನಿಯು ಗಿಳಿ ಮತ್ತು ಸಾರಿಕೆಗಳ ದನಿಗಿಂತಲೂ ಇನಿದಾಗಿರುವ, ಅವಳ ಪಾದದ ಉಗುರಗಳ ಕಾಂತಿಯು, ಪೂಜೆಗಿಟ್ಟಿದ್ದ ಪುಷ್ಪಗಳ ಕಾಂತಿಗಿಂತಲೂ ಹೆಚ್ಚಾಗಿ, ಅವಳ ಉಸಿರ ಪರಿಮಳವು, ಪರಿಮಳ ದ್ರವ್ಯಗಳನ್ನೆ ಹೆದರಿಸುವಂತಿರಲು, ಅಲ್ಲಿದ್ದ ದೀಪದ ಬೆಳಕಿಗೆ, ಅವಳ ಮೈಕಾಂತಿಯು ಪೈಪೋಟಿಗೆ ಬಿದ್ದಂತಿರಲು ಮಲಗುವ ಕೋಣೆಯನ್ನು ಪ್ರವೇಶಿಸಿದಳು.

2.
ಅವತಂಸೋತ್ಫಲತಾಡನಂ ಕನಕಕಾಂಚೀಬಂಧನ ನೂಪುರಾ
ರವಝಂಕಾರಿತಚಾರುವಾಮಚರಣಾಘಾತಂ ಚಳದ್ರ್ಭೂಲತಾ
ಗ್ರವಿಭಾಗೋತ್ಕಟತರ್ಜನಂ ತರಳಿತಾತಾಮ್ರಾಧರಂ ಚಕ್ರಿಗಿತ್ತುವಲಪಂ ಪ್ರಣಯಪ್ರಕೋಪಸುರತ ಪ್ರಾರಂಭದೊಳ್ ಕಾಂತೆಯಾ.
– ಆದಿಪುರಾಣ 24- ಹನ್ನೆರಡನೆ ಆಶ್ವಾಸ.

ಚಿನ್ನದ ಡಾಬನ್ನು ಧರಿಸಿದ, ಕೋಮಲವಾದ ಕೆಂದುಟಿಗಳ ಚೆಲುವೆ ಸುರತಕ್ರೀಡೆಯ ಮೊದಲಲ್ಲಿ ಪ್ರಣಯಾವೇಶದಿಂದ ಕನ್ನೈದಿಲೆಯ ಮಾಲೆಯಿಂದ ಹೊಡೆದು, ಝಂಜಣಿಸುವ ಕಾಲಂದುಗೆಯ ತೊಟ್ಟ ಸುಂದರ ಎಡಗಾಲಿನಿಂದ ಒದೆದು, ಚಂಚಲಿತ ವಾರೆಗಣ್ಣಿನಿಂದ ಬೆದರಿಸುವ ಪ್ರಿಯತಮೆಯ ಈ ಎಲ್ಲ ಆಟಗಳು ಭರತಚಕ್ರಿಗೆ ಇಷ್ಟವಾದವು.

ಸುರತಕ್ರೀಡೆಯ ವರ್ಣನೆ :
1.
ತಂಬೆಲರಂತೆ ಸೋಂಕಿ ಖಗದಂತಿರೆ ಮೇಳಿಸಿ ತುಂಬಿಯಂದದಿಂ ಚುಂಬಿಸಿ ಸೊಕ್ಕನಿಕ್ಕಿ ಮರಪಿಕ್ಕಿ ಪದಂಬಿಡೆ ಚಿತ್ತಮೆಯ್ದೆ ನಾಣಂ ಬಿಡೆ ಬಿಟ್ಟ ಮೆಯ್ಯರಿದು ಮೈನವಿರುರ್ವಿ ಪೊದಳ್ದಲರ್ಚೆ ಮೆಯ್ಯಂ ಬಿಗಿಯಪ್ಪಿ ಬಾಲೆಯ ಭಯಂಗಳೆದಂ ನವಸಂಪ್ರಯೋಗದೊಳ್.
– ಲೀಲಾವತಿ ಪ್ರಬಂಧಂ.16 ನೇ ಪದ್ಯ, 13ನೇ ಆಶ್ವಾಸ.

ಪ್ರಿಯನು ತಂಗಾಳಿಯಂತೆ ಸ್ಪರ್ಶಿಸಿ, ಹಕ್ಕಿಯಂತೆ ಜೊತೆಯಾಗಿ, ದುಂಬಿಯಂತೆ ಚುಂಬಿಸಿ ,ರತಭಾವದ ಅಮಲೇರಿಸಿ ಮೈಮರೆಸಿದಾಗ, ಆಕೆಯ ಮನಸ್ಸು ಸಂಪೂರ್ಣವಾಗಿ ನಾಚಿಕೆಯ ತೊರೆದು, ಅರಿವಾಗಿ, ಮೈ ನವಿರೆದ್ದು, ಅರಳಿದಾಗ ಅವನು ಅವಳನ್ನು ಬಿಗಿದಪ್ಪಿ ಅವಳಿಗೆ ಸುರತಸುಖದ ಬಗೆಗಿದ್ದ ಭಯವನ್ನು ಹೋಗಲಾಡಿಸಿದನು.

2.
ಸಮಸಂದಳ್ಕರಲಂಪನೀಯೆ ಶಯನಂ ಘರ್ಮಾಂಬುವಿಂ ನಾನೆ ಮುನ್ನವೆ ನಾಣೊಳ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ ವಿಭ್ರಮಮಂ ಕಂಠರವಕ್ಕೆ ತಾಡನ ರವಂ ತಂದೀಯೆ ತಚ್ಛ‌ಯ್ಯೆಯೊಳ್ ಸಮಹಸ್ತಂಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ.
– ಪಂಪಭಾರತ 4ನೇ ಆಶ್ವಾಸ 109 ನೇ ಪದ್ಯ.

ಅಗಲಿದ ನಲ್ಲ ನಲ್ಲೆಯರು ಮತ್ತೆ ಸೇರಿದ ಕಾರಣದಿಂದ ದೊರೆತ ಪ್ರೀತಿಯು ಸೊಗಸ ನೀಡಲು, ಹಾಸಿಗೆಯು ಬೆವರಿನಿಂದ ಒದ್ದೆಯಾಗಲು, ನಾಚಿಗೆಯ ಪ್ರವಾಹವು ನಿಲ್ಲಲು, ಹೊರಹೊಮ್ಮಿದ ಸುರತದ್ರವವು ಗಂಗೆಯ ನೀರಿನಂತೆ ಕಾಣುತ್ತಿರಲು, ಗಂಟಲಿನ ದನಿಗೆ, ರತದ ಹೊಡೆತದ ದನಿಯೂ ಸೇರಿ ಸೊಗಸುಕೊಡಲು, ಆ ಹಾಸಿಗೆಯಲ್ಲಿ ಸುರತಕ್ರೀಡೆಯ ಅಬ್ಬರವು ಸಮಪ್ರಮಾಣದಲ್ಲಿದ್ದಿತು.

3.
ಕುಣಿವ ಕುರುಳ್ ಕುರುಳ್ವಿಡಿದು ಜೋರ್ವ ಬೆಮರ್ ಬೆಮರತ್ತಣಿಂ ಕರಂ ದಣಿದವೊಲ್ ಏಳ್ಗೆವೆತ್ತ ಪುಳಕಂ ಪುಳಕಂಗಳ ಕೂರ್ಪು ಕೂರಿತೆಂದು ಎಣಿಸದೆ ಮೀರುವಪ್ಪು ಬಿಗಿಯಪ್ಪಿನ ಗಾಢತೆ ಹಿಂಡಿದಂತೆ ಸಂದಣಿಸುವ ತೆಳ್ವದಂಗಳ ಪೊನಲ್ ಬಗೆಗೊಂಡವು ಸಂಪ್ರಯೋಗದೊಳ್.
– ಸೂಕ್ತಿ ಸುಧಾರ್ಣವ -56ನೇ ಪದ್ಯ.

ಕುಣಿಯುವ ಕೂದಲು, ಆ ಕೂದಲಿಂದ ಸುರಿವ ಬೆವರು, ಬೆವರಿನಿಂದ ದಣಿದ ಹಾಗೆ ಮೂಡಿದ ರೋಮಾಂಚನ, ಆ ರೋಮಾಂಚನದ ಮೊನೆಗಳು ಹರಿತವಾದುವು ಎಂಬುದನ್ನು ಲೆಕ್ಕಿಸದೆ, ಮಿತಿಮೀರಿದ ಬಿಗಿಯಪ್ಪುಗೆಯು ಹಿಂಡಿದಂತೆ ತೆಳುವಾದ ಸುರತದ್ರವವು ಆ ಸುರತಕ್ರೀಡೆಯ ಕ್ರಿಯೆಯಲ್ಲಿ ಕಂಡು ಬಂದುವು.

ಸುರತಾಂತ್ಯದ ವರ್ಣನೆ :

1 .
ಉಟ್ಟ ದುಕೂಲದೊಳ್ ಬೆವರಬೀಸುತೆ ಮೋರೆಯನೆತ್ತಿಗಲ್ಲಮಂ
ತಟ್ಟುತ ನಲ್ಲ ನಲ್ಲ ಎನುತ ಎಬ್ಬಿಸಿ ಚುಂಬಿಸಿ ಚುನ್ನವಾಡುತಂ ದಿಟ್ಟಿಸಿನೋಡುತಂ ಕುಟುಕುದಂಬಲವೀವುತೆ ಕೂಡಿ ಸೌಖ್ಯದಿಂ ಮುಟ್ಟಿದ ಮೋಹದೊಳ್ ಸುರತಸೇದೆಯನಾರಿಸಿದಳ್ ಮನಃಪ್ರಿಯಳ್.
– ಕಾವ್ಯಸಾರ.ಮಲ್ಲಕವಿ.

ಉಟ್ಟಿದ್ದ ರೇಷ್ಮೆ ಬಟ್ಟೆಯಿಂದ ಬೀಸಿ ಬೆವರ ಹೋಗಲಾಡಿಸುತ್ತ, ಮುಖವೆತ್ತಿ ನಲ್ಲ ನಲ್ಲ ಎಂದು ಎಬ್ಬಿಸಿ ಚುಂಬಿಸಿ, ಕೊಂಕು ನುಡಿದು, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, ಚೂರು ಚೂರು ತಾಂಬುಲವನ್ನು ಕೊಡುತ್ತಾ, ಸಂತೋಷದಿಂದ ನಲ್ಲನನ್ನು ಕೂಡಿದ ದಣಿದ ಸಂಭೋಗದ ಆಯಾಸವನ್ನು ನಲ್ಲೆ ಹೋಗಲಾಡಿಸಿಕೊಂಡಳು.

2.
ಕೆದರಿದ ಕುಂತಳಂ ಪರೆದ ಕಜ್ಜಳಮ್ ಉಣ್ಮುವ ನುಣ್ಬೆಮರ್ ಕರಂ ಪುದಿದ ವಿಲೋಚನಂ ಬಳಿಯಿನಟ್ಟುವ ಕಡು ಜೋಲ್ದವೇಣಿ ಬತ್ತಿದ ಬೆಳರ್ವಾಯ್ ಬಳಲ್ದಲುಳಿತಾಂಬರರಮೊಪ್ಪೆ ರತಾಂತ ಕಾಲದೊಳ್ ಮುದಮನೊಡರ್ಚುವಂಗನೆಯ ರೂಪು ವಿಚಿತ್ರಮನುಂಟು ಮಾಡದೇ.
– ಕಾವ್ಯಸಾರಂ.ಮಲ್ಲಕವಿ.

ಕೆದರಿದ ತಲೆಗೂದಲು, ಅರ್ಧ ಅಳಿಸಿದ ಕಾಡಿಗೆ, ಹಣೆ, ಮೈ ಮೇಲಿನ ಕೋಮಲ ಬೆವರು, ಮುಚ್ಚಿದ ಕಣ್ಣುಗಳು, ಮತ್ತೆ ಮತ್ತೆ ಸೂಸುವ ನಿಟ್ಟುಸಿರು, ಇಳಿಬಿದ್ದ ಕೂದಲು, ಒಣಗಿ,ಬಿಳಿಚಿಕೊಂಡ ಬಾಯಿ, ಅಸ್ತವ್ಯಸ್ತವಾದ ಬಟ್ಟೆ, ಸುರತಸುಖದಾನಂತರದ ಸಮಯದಲ್ಲಿ ಆನಂದವನ್ನು ಕೊಡುತ್ತಿರುವ ಈ ಸುಂದರಿಯ ರೂಪ ಅಚ್ಚರಿಯನ್ನುಂಟು ಮಾಡುವುದಿಲ್ಲವೆ.

ಹೀಗೆ ಕನ್ನಡ ಕವಿಗಳು ಸುರತಸುಖದ ಹಂತಗಳನ್ನು ವರ್ಣಿಸುತ್ತಲೇ “ಕಾಮಕೂಟದ ಸುಖಮ್ ಅಲ್ತೆ ಮೋಕ್ಷಸುಖಂ” (ಕಾಮಕೂಟದ ಸುಖವು ಮೋಕ್ಷದ ಸುಖವೇ ಅಲ್ಲವೇ) ಎಂದು ಒಬ್ಬ ಕವಿ ಹೇಳಿದರೆ. “ಕಾಮಾಗಮವೆ ಪರಮಾಗಮಂ” (ಕಾಮಧರ್ಮವೇ ಶ್ರೇಷ್ಟಧರ್ಮ) ಸಂಭೋಗವೇ ಭೋಗ, ಸುರತ ಸುಖಮೇ ಸುಖಂ, ಮಾನಮೋಕ್ಷಮೇ ಮೋಕ್ಷಂ” ಎಂದು ಮತ್ತೊಬ್ಬ ಹೇಳುತ್ತಾನೆ.

ಮಗದೊಬ್ಬನು ಸುರತಸುಖವೆಂಬುದು ಅನಂತವಾದದ್ದು. ಅತೃಪ್ತಿಯೇ ಅದರ ಸಹಜ ಸ್ವರೂಪವೆಂದು, ಹಾಗಾಗಿ “ಕೂಡಿ ತಣಿವಿಲ್ಲದ ಕೂರ್ಮೆ ನವೀನಮಾಗೆ” (ಕೂಡಿಯೂ ತೃಪ್ತಿಯಾಗದ ಪ್ರೀತಿ ಮತ್ತೆ ಹೊಸದಾಗಿರಲು) ಎಂದು ಸುರತದ ವೈಶಿಷ್ಟ್ಯತೆಯನ್ನು ವಿವರಿಸುತ್ತಾನೆ.

ಹೀಗೆ ಕನ್ನಡ ಕವಿಗಳು ತಮ್ಮ ಕಾವ್ಯಗಳಲ್ಲಿ ಸುರತಸುಖದ ಮಹತ್ವವನ್ನು ಕಟ್ಟಿಕೊಟ್ಟಿದ್ದಾರೆ.

Leave a Reply