ಹೇಗೋ ಮರೆತು ಬಿಡುತ್ತೇನೆ ಅಥವಾ ಮರೆತಂತೆ ನಟಿಸುತ್ತೇನೆ..

ಪರೀಕ್ಷೆ

ನಂದಿನಿ ವಿಶ್ವನಾಥ ಹೆದ್ದುರ್ಗ

ಸೆಮಿಸ್ಟರಿನ ಜೀವನದಲ್ಲಿ
ವರ್ಷಕ್ಕೆ ಎರಡೇ ಪರೀಕ್ಷೆ.
ಉತ್ತರ ಬರೆಯಲು ಪ್ರಶ್ನೆಗಳೇ
ಇಲ್ಲದ ಪಠ್ಯ.
ನಿತ್ಯವೂ
ಹೊಸ ಹೊಸ ಪಾಠ ಕಲಿಯುವೆ
ಅತೀವ ಆಸಕ್ತಿಯಲಿ.
ಕಳೆದ ಬಾರಿಯ ಪಾಠ
ಈ ಸೆಮಿಸ್ಟರಿನ‌ ಪರೀಕ್ಷೆಗೆ
ಒದಗುವ ಎಲ್ಲಾ
ಸಾಧ್ಯತೆಗಳಿದ್ದಾಗ್ಯೂ
ಹೇಗೋ ಮರೆತು ಬಿಡುತ್ತೇನೆ
ಅಥವಾ ಮರೆತಂತೆ ನಟಿಸುತ್ತೇನೆ.

ಬಾಯ ತುದಿಯಲ್ಲಿರುವ
ಉತ್ತರ
ಬರೆಯಲು ಬಾರದೆ
ತಡಬಡಾಯಿಸುವುದರ
ಸುಖ ತಿಳಿದವರಿಗಷ್ಟೇ ಗೊತ್ತು.
ಪ್ರಶ್ನೆಗಳೇ ಇಲ್ಲದ ಪರೀಕ್ಷೆಗೆ
ನಕಲಿಗೆಂದು ಒಯ್ದ ಪುಸ್ತಕದಲಿ
ಉತ್ತರಗಳು ಹುಟ್ಟದೆ
ಅಥವಾ ಹುಡುಕಲಾಗದೆ
ಬೇಸತ್ತು ಪಠ್ಯ
ತೂರಿದವರು ಬೇಕಷ್ಟಿದ್ದಾರೆ,
ನಮ್ಮ ನಡುವೆಯೇ.

ಉತ್ತರಕಿಂತಲೂ ಪ್ರಶ್ನೆ,
ಪಾಸಿಗಿಂತಲೂ ನಪಾಸೇ
ಖುಷಿ ಎಂದು ನಂಬಿದ ಮೇಲೆ
ಪಾಸಾಗುವ ಕುರಿತು
ಯೋಚಿಸಲೆ ಇಲ್ಲ.
ಬೇಸರವಿರದ ಪಠ್ಯಗಳಲಿ
ಉತ್ತರಗಳು ತೋಚದಿದ್ದರೂ
ಒಡ್ಡಿಕ್ಕೊಳ್ಳುವ ಪರೀಕ್ಷೆಗಳು
ಬಗೆಬಗೆಯದಾಗಿರಬೇಕು
ಎನುವ ಕುಶಾಲು ನನಗೆ.

ಪಾಠದಿಂದಲೆ ಪಾಠ
ಕಲಿಯುವುದು ಕಷ್ಟಸಾಧ್ಯವಾದ
ಸಾಮಾನ್ಯರಿಗೆ
ತಪ್ಪುಗಳಿಂದ
ಕಲಿಯಬಹುದೆನ್ನುವುದು
ನಗು ತರುವ ವಿಚಾರ.
ಸ್ಪರ್ಧೆಯಲ್ಲಿ ಸೋಲು ಖಚಿತವೇ
ಆದರೂ ಪಾಲುಗೊಳುವಿಕೆಯಲ್ಲಿ
ಒಂದಷ್ಟು ಉನ್ಮಾದಗಳು ಹುಟ್ಟಿ
ಹಾದಿಗೊಂದಿಷ್ಟು ಹಸಿರು
ಹಸುರಿಗೊಂದಿಷ್ಟು ಹೂವು
ಅರಳಿಸುತ್ತವೆ.
ಎಂದೇ ಪರೀಕ್ಷೆಗಳ ಕುರಿತು
ಮುಗಿಯದ ಕುತೂಹಲ ನನಗೆ
ತಟಸ್ಥಳಾಗಲಾರೆ ಕೊನೆಯವರೆಗೆ.

Leave a Reply