ಇದಕ್ಕೆ ಜೋಕಟ್ಟೆ ಅವರ ಆಪ್ತ ಶೈಲಿಯೆ ಕಾರಣ..

ಶ್ರೀನಿವಾಸ ಜೋಕಟ್ಟೆಗೂ ಮುಂಬೈಗೂ ಇನ್ನಿಲ್ಲದ ನಂಟು. ಮುಂಬೈನ ಒಳ ಹೊರಗುಗಳನ್ನು ಪತ್ರಕರ್ತನ ಚೂಪು ನೋಟದಿಂದ ನೋಡಿದ ಇವರು ಆ ಎಲ್ಲವನ್ನೂ ತಮ್ಮ ಹಲವಾರು ಕೃತಿಗಳಲ್ಲಿ ದಾಖಲಿಸಿದ್ದಾರೆ. ಕವಿತೆ, ಪ್ರವಾಸ ಕಥನ ಇವರ ಹೃದಯಕ್ಕೆ ಹತ್ತಿರವಾದದ್ದು.

ಇತ್ತೀಚಿಗೆ ಅವರ ಹಲವಾರು ಕೃತಿಗಳನ್ನು ‘ಅವಧಿ’ಗೆ ಕಳಿಸಿಕೊಟ್ಟರು

ಅದರ ಪರಿಚಯ ಇಲ್ಲಿದೆ-   

‘ಒತ್ತಿ ಬರುವ ಕತ್ತಲ ದೊರೆಗಳು’  ಡಾ.ಜಿ.ಎನ್. ಉಪಾಧ್ಯ ಕಂಡ ಬಗೆ 

ಶ್ರೀನಿವಾಸ ಜೋಕಟ್ಟೆ ಅವರು ಕನ್ನಡದ ಹೆಸರಾಂತ ಪತ್ರಕರ್ತ ಹಾಗೂ ಸಾಹಿತಿ. ಅವರದು ಬಹುಮುಖ ಪ್ರತಿಭೆ ನಾನಾ ಬಗೆಯ ವ್ಯಕ್ತಿತ್ವ. ಜೋಕಟ್ಟೆ ಅವರು ಸರ್ವ ಕುತೂಹಲಿ. ಅವರ ಆಸಕ್ತಿಯ ಹರವು ದೊಡ್ಡದು.

ಅವರ ಆಸಕ್ತಿಗೆ ಹೊರತಾದ ವಸ್ತು ವಿಷಯಗಳೇ ಇಲ್ಲವೆಂದರೂ ಅತಿಶಯೋಕ್ತಿಯಾಗದು. ಬದುಕಿನುದ್ದಕ್ಕೂ ಅನೇಕ ಸವಾಲುಗಳನ್ನು ಸ್ವೀಕರಿಸುತ್ತಲೇ ಜೀವನದಲ್ಲಿ ಉನ್ನತಿಯನ್ನು ಅವರು ಸಾಧಿಸಿದ್ದಾರೆ. ಬರೆದು ಬದುಕಬಹುದು ಎಂಬುದನ್ನು ಅವರು ಶ್ರುತಪಡಿಸಿದ ಅಪರೂಪದ ಸಾಧಕ. ತನ್ನ ನೇರ ಸರಳ ಶೈಲಿಯಿಂದ ಇಲ್ಲಿಯ ಲೇಖನಗಳು ವಾಚನೀಯವಾಗಿದ್ದು ನಮ್ಮನ್ನು ಅಡಿಗಡಿಗೆ ಚಿಂತಿಸುವಂತೆ ಮಾಡಬಲ್ಲದು. ಇದಕ್ಕೆ ಜೋಕಟ್ಟೆ ಅವರ ಆಪ್ತ ಶೈಲಿಯೆ ಕಾರಣ.

ಡಾ.ವ್ಯಾಸರಾವ್ ನಿಂಜೂರ್ ಅವರ ಮಾತುಗಳಲ್ಲಿ ‘ಸಂಬಂಧಕೀಯ’

ಪತ್ರಕರ್ತ,ಲೇಖಕ,ಕವಿ ಅದಮ್ಯ ಉತ್ಸಾಹದ ಪ್ರವಾಸಿ, ಕಥೆಗಾರ, ವಿಮರ್ಶಕ ಹೀಗೆ ಹಲವಾರು ವೈವಿಧ್ಯಪೂರ್ಣ ವ್ಯಕ್ತಿತ್ವವನ್ನು ಒಳಗೊಂಡ,ನನ್ನ ಕಿರಿಯ ಮಿತ್ರ, ಹಿರಿಯ ಸಾಧಕ ಶ್ರೀನಿವಾಸ ಜೋಕಟ್ಟೆ ಕನ್ನಡದ ಮಟ್ಟಿಗೆ ಓರ್ವ ಅಪರೂಪದ ಬರಹಗಾರ ಎಂದು ನಾನು ಗುರುತಿಸುತ್ತೇನೆ. ಅವರನ್ನು ಸಾಧಕ ಹಾಗೂ ಅಪರೂಪದ ಬರಹಗಾರ ಎಂದು ನಾನು ಕೇವಲ ಮುಖಸ್ತುತಿಗಾಗಿ ಹೇಳಿದುದಲ್ಲ. ಅತ್ಯಲ್ಪ ಕಾಲದಲ್ಲಿ ಅತಿ ಹೆಚ್ಚು ಕೃತಿಗಳನ್ನು ಅವರು ಕನ್ನಡ ಸಾರಸ್ವತ ಲೋಕಕ್ನೀಡಿದ್ದಾರೆ.

ಮಾತ್ರವಲ್ಲ, ಅನಕೃರವರ ಬಳಿಕ ಬರೇ ಬರವಣಿಗೆಯಿಂದಲೂ ಬದುಕು ನಿಭಾಯಿಸಲು ಸಾಧ್ಯ ಎಂದು ತೋರಿಸಿಕೊಟ್ಟವರಲ್ಲಿ ಒಬ್ಬರು. ಇದೇನು ಕಡಿಮೆ ಸಾಧನೆಯಲ್ಲ. ಜೋಕಟ್ಟೆಯವರನ್ನು ನಾನು ನನ್ನ ಇನ್ನೋರ್ವ ಮಿತ್ರ ಡಾ.ಗಣೇಶ ಎನ್. ಉಪಾಧ್ಯರಿಗೂ ಹೋಲಿಸುವುದುಂಟು. ಉಪಾಧ್ಯರ ಬಗ್ಗೆ ಉಲ್ಲೇಖಿಸುತ್ತ, ಅವರ ಕೃತಿಗಳ ಸಂಖ್ಯೆಯನ್ನೂ ಪರಿಗಣಿಸಿ, ಅವರು ಎರಡೂ ಕೈಗಳಲ್ಲಿ ಬರೆಯುತ್ತಾರೋ ಎಂದು ನಾನು ಅನುಮಾನಿಸಿದ್ದುಂಟು.

ಜೋಕಟ್ಟೆಯವರ ಕುರಿತೂ ನನಗೆ ಈ ಸಂದೇಹ ಕಾಡಿದ್ದು ಸುಳ್ಳಲ್ಲ. ಇರಲಿ, ಇದು ಕೇವಲ ತಮಾಷೆಗಾಗಿ ಎಂದಿಟ್ಟುಕೊಳ್ಳಿ. ಕೆಲವೊಮ್ಮೆ ಲೇಖಕರು ಏನಾದರೂ ಬರೆದುಕೊಂಡು ತಮ್ಮ ಕೃತಿಗಳ ಸಂಖ್ಯೆ ಹೆಚ್ಚಿಸುವುದುಂಟು. ಆದರೆ, ಉಪಾಧ್ಯರಾಗಲಿ, ಜೋಕಟ್ಟೆಯವರಾಗಲಿ ಈ ಆಮಿಷಕ್ಕೆ ಒಳಗಾದವರಲ್ಲ.

ಡಾ.ಎಸ್.ವಿ.ಪ್ರಭಾವತಿ ಅವರ ಅಭಿಪ್ರಾಯದಲ್ಲಿ ‘ಊರಿಗೊಂದು ಆಕಾಶ’

ದಶಕಗಳ ಹಿಂದೆ ಕರ್ನಾಟಕದಿಂದ ಹೊರಬಿದ್ದು ಮುಂಬಯಿ ಮಹಾನಗರವನ್ನು ಹೊಕ್ಕು ಅದರ ಅದ್ಭುತಕ್ಕೆ ಬೆರಗಾದ ಮುಗ್ಧ ಮನಸ್ಸು ಕ್ರಮೇಣ ಅಲ್ಲಿಯ ಸೌಂದರ್ಯ ಮತ್ತು ಕ್ರೌರ್ಯ ಎರಡಕ್ಕೂ ಹೊಂದಿಕೊಂಡು ಅಲ್ಲಿಯ ಬದುಕಿಗೆ ಸ್ಪಂದಿಸಿದ ವಿವರವಾದ ಚಿತ್ರಗಳ ಬೇರೆ ಬೇರೆ ಮುಖಗಳು ಇವರ ಕವನಗಳ ವಸ್ತು.. ಇಡೀ ದೇಶದ ದುರಂತಕ್ಕೆ ತುಡಿಯುವ ಮನಸ್ಸು ಇವರದ್ದು.

ಬಿ.ಎಂ.ರೋಹಿಣಿ ನಾನು ನೋಡಿದ ‘ಬಂಗ್ಲೆ ಮನೆಯ ಪ್ರಭು ‘

ನವ್ಯ, ಬಂಡಾಯ.. ಮುಂತಾದ ಎಲ್ಲಾ ಕಾಲದ ಕಥೆಗಳಿಗೆ ಒಂದೊಂದು ಮಾದರಿಯಾಗಿ ಉಳಿಯಬಲ್ಲ ಕತೆಗಳನ್ನು ಬರೆದಿರುವ ಶ್ರೀನಿವಾಸ ಜೋಕಟ್ಟೆಯವರು ಕಾಮ-ಪ್ರೇಮ ಮೋಹವೆಂಬ ಮಾಯಾಜಾಲದಲ್ಲಿ ಪ್ರಕೃತಿಯು ಮನುಷ್ಯನ ಬದುಕಿನ ಕೌತುಕಗಳು, ನೋವು, ತವಕ, ತಲ್ಲಣಗಳು ಭಾವಯಾನದಲ್ಲೆದುರಾಗುವ ಚಂಡಮಾರುತಗಳು ಇವೆಲ್ಲವುಗಳನ್ನು ಆತ್ಮವಿಶ್ವಾಸ ಹಾಗೂ ಸಂಯಮದಿಂದ ಹೆಣೆದು ಕಥಾರೂಪ ಕೊಡುವವರು.

1 comment

  1. ಜೋಕಟ್ಟೆಯವರು ಕವಿ ಮತ್ತು ಕಥೆಗಾರರೂ ಆಗಿದ್ದ ಕಾರಣ ಅವರ ಪತ್ರಿಕೆಯ ಸಂಪಾದಕೀಯಕ್ಕೆ ಕೂಡ ಅದೇ ಮೊನಚು, ಕಾವ್ಯಾತ್ಮಕತೆ ಮತ್ತು ಅರ್ಥವಂತಿಕೆ ಸಿದ್ದಿಸಿದೆ

Leave a Reply