ಪಾರ್ವತಿ ಜೊತೆ ಜಗಳ ಮಾಡಿಕೊಂಡ ಶಿವ ಬಂದದ್ದೂ ಗೋವಾಕ್ಕೆ..

ಪೌರಾಣಿಕ ಕಥೆಯೊಂದಿದೆ. ಜಗತ್ತಿನೆಲ್ಲಾ ಕ್ಷತ್ರಿಯರನ್ನು ಕೊಂದು ಲೋಕವನ್ನೆಲ್ಲಾ ಗೆದ್ದ ಪರಶುರಾಮನಿಗೆ ಕಾರಣಾಂತರಗಳಿಂದ ಲೋಕಭ್ರಷ್ಟನಾಗಬೇಕಾಗಿ ಬಂತು. ಗೆದ್ದ ಎಲ್ಲ ಸ್ಥಳಗಳನ್ನೂ ಕಳೆದುಕೊಂಡು ನೆಲೆಯೇ ಇಲ್ಲದಂತಾದಾಗ ಸಹ್ಯಾದ್ರಿ ಪರ್ವತಗಳ ಕಡೆಯಿಂದ ಏಳುಬಾಣಗಳನ್ನು ಬಿಟ್ಟು, ಸಮುದ್ರದ ನೀರು ಹಿಂದೆ ಸರಿಯುವಂತೆ ಮಾಡಿದ.

ಹಾಗೆ ಸಮುದ್ರ ಹಿಂದೆ ಸರಿದ ಜಾಗದಲ್ಲಿ ಸೃಷ್ಟಿಯಾದ ಹೊಸ ಭೂಭಾಗವೇ “ಗೋಮಾಂತ” ಅರ್ಥಾತ್ ಗೋವುಗಳ ನಾಡು. ಇದಕ್ಕೆ ಪರಶುರಾಮ ಕ್ಶೇತ್ರವೆಂಬ ಮತ್ತೊಂದು ಹೆಸರೂ ಇದೆ. ಈ ಕ್ಷೇತ್ರದ ಸೃಷ್ಟಿ ಮಾಡಿಕೊಂಡ ನಂತರ ಪರಶುರಾಮನು ಉತ್ತರದ ಕಡೆಯಿಂದ ಬ್ರಾಹ್ಮಣರನ್ನು ಕರೆಯಿಸಿ, ಯಜ್ಞಯಾಗಾದಿಗಳಲ್ಲಿ ನಿರತನಾದನೆಂಬ ಪ್ರತೀತಿ. ಪುರಾಣ ನಂಬುವವರಿಗೆ ಇದೊಂದು ಪುಣ್ಯಕ್ಷೇತ್ರವೇ ಆಯಿತಲ್ಲ..! ಇನ್ನೊಂದು ದೃಷ್ಟಿಯಲ್ಲಿ ನೋಡುವುದಾದಲ್ಲಿ, ಈ ಪುರಾಣೇತಿಹಾಸವನ್ನು ವೈಜ್ಞಾನಿಕವಾಗಿ ಹೀಗೆ ವಿಶ್ಲೇಷಿಸಬಹುದು.

ಭೂಮಿಯ ಮೇಲಿನ ಭೂಭಾಗವೆಲ್ಲವೂ ಒಂದಾನೊಂದು ಕಾಲದಲ್ಲಿ ಸಮುದ್ರದಿಂದ ಮೇಲೆದ್ದು ಬಂದ ಪ್ರಕೃತಿ ಸಹಜ ಪ್ರಕ್ರಿಯೆಗಳೇ ತಾನೇ..! ಗೋವಾ ಸಹಾ ಕಾಲಾಂತರದಲ್ಲಿ ಸಮುದ್ರ ಹಿಂದೆ ಸರಿದ ಕಾರಣಕ್ಕಾಗಿಯೇ ಸೃಷ್ಟಿಯಾದ ಭೂಭಾಗ. ಇದು ಎಲ್ಲ ನಡುಗಡ್ಡೆ, ಭೂಶಿರಗಳಲ್ಲಿ ನಡೆಯುವ ಅತಿ ನಿಧಾನವಾದ ಭೌಗೋಳಿಕ ಪ್ರಕ್ರಿಯೆ.

ಇದು ನಡೆದದ್ದು ಸುಮಾರು ಕ್ರಿಸ್ತಪೂರ್ವ 12,000ರ ಕಾಲಮಾನದಲ್ಲಿ. ಸಮುದ್ರತೀರದ ಭಾಗಗಳಲ್ಲಿ ದೊರಕಿರುವ ಪಳಿಯುಳಿಕೆಗಳು, ಶಂಖಚಿಪ್ಪುಗಳು, ಇದಕ್ಕೆ ಸಾಕ್ಷಿ ಒದಗಿಸುತ್ತವೆ. ಅದರಲ್ಲೂ ಮುಖ್ಯವಾಗಿ ಕರಾವಳಿ ತೀರದ “ಸುರ್ಲ” ಎಂಬ ಹಳ್ಳಿಯಲ್ಲಿ 1863ರ ಸುಮಾರಿಗೆ ದೊರಕಿರುವ ಶಂಖಗಳದ್ದು ಅತಿಮುಖ್ಯ ಐತಿಹಾಸಿಕ ಪುರಾವೆ. ಚೆದುರಿದಂತಿರುವ ಸಹ್ಯಾದ್ರಿ ತಪ್ಪಲಿನ ಅನೇಕ ಹಳ್ಳಿಗಳಲ್ಲಿ ಕೂಡಾ ಈ ಶಂಖಗಳು ಮುಖ್ಯ ಪಳಿಯುಳಿಕೆಗಳು. ಸಮುದ್ರದಲೆಗಳ ತಿಕ್ಕಾಟದಿಂದಾಗಿ ಬಹುದೊಡ್ಡ ಭೂಭಾಗ ಮೇಲಕ್ಕೆ ಸರಿದುಬಂದು ಪಶ್ಚಿಮ ಕರಾವಳಿಯು ರೂಪುಗೊಂಡಿತ್ತು ಮತ್ತು ದಖ್ಖನ್ ಪ್ರಸ್ತಭೂಮಿಯು ಸೃಷ್ಟಿಯಾದದ್ದೂ ಇದೇ ರೀತಿ ತಾನೇ? ಗೋವಾ ಸಹಾ ಈ ಪ್ರಕ್ರಿಯೆಯ ಒಂದುಭಾಗ. ಅಂತೂ ಪರಶುರಾಮನ ಸೃಷ್ಟಿಗೂ ಇದಕ್ಕೂ ತಾಳೆಯಾಗಿರುವುದಕ್ಕೂ ಸಾಕು.

ಗೋವಾ ಪೌರಾಣಿಕತೆ ಇಲ್ಲಿಗೆ ಮುಗಿದಿಲ್ಲ. ಭೀಷ್ಮಪರ್ವ, ಸ್ಕಂದ ಪುರಾಣ, ಸುತ ಸಮಾಹಿತಗಳಲ್ಲಿ “ಗೋವಾಪುರಿ”ಯ ಪ್ರಸ್ತಾಪವಿದೆ. ಪರಶುರಾಮ ಯಜ್ಞಗಳಿಗಾಗಿ ಪುರೋಹಿತರನ್ನು ಕರೆಸಿದನಷ್ಟೇ.. ಅವರಲ್ಲಿ ಏಳುಜನರು ಪರಶಿವನ ವಿಶೇಷಪ್ರೀತಿಗೆ ಪಾತ್ರರಾಗಿ ಸಪ್ತರ್ಷಿಗಳೆನಿಸಿದರು. ಮುಂದೆ ಸಪ್ತಕೂಟೇಶ್ವರರೆಂಬ ಹೆಸರಿನಿಂದ ಪ್ರಸಿದ್ಧರಾದರು. ಒಮ್ಮೆ ಶಿವನೇ ಪಾರ್ವತಿಯೊಡನೆ ವಿರಸವೇರ್ಪಟ್ಟಾಗ ಗೋವಾಕ್ಕೆ ಬಂದು ಕೆಲಕಾಲ ಕಳೆದನಂತೆ.

ಮತ್ತೊಂದು ಪ್ರತೀತಿಯ ಪ್ರಕಾರ ಶ್ರೀಕೃಷ್ಣನು ಮಗಧದ ರಾಜನೂ, ತನ್ನ ವೈರಿಯೂ ಆದ ಆದ ಜರಾಸಂಧನನ್ನು ಸೋಲಿಸಿದ್ದು ಸಹಾ ಗೋಮಾಂಚಲದಲ್ಲಿ. ಇದು ಹರಿವಂಶ ಪುರಾಣದಲ್ಲಿ ಉಲ್ಲೇಖಿತಗೊಂಡಿದೆ. ಗೋವಾಪುರಿಯು ಏಳು ಯೋಜನಗಳಷ್ಟು ವಿಸ್ತಾರದಲ್ಲಿ ಹರಡಿಕೊಂಡಿತ್ತು ಮತ್ತು ದರ್ಶನಮಾತ್ರದಿಂದಲೇ ಪಾಪ ಪರಿಹಾರ ಮಾಡುವಷ್ಟು ಪವಿತ್ರ ಕ್ಷೇತ್ರವಾಗಿತ್ತೆಂದು ಶ್ರೀಸ್ಕಂದ ಪುರಾಣದ ಸಹ್ಯಾದ್ರಿ ಖಾಂಡದಲ್ಲಿ ವರ್ಣಿತಗೊಂಡಿದೆ.

ಇಷ್ಟಕ್ಕೂ “ಗೋಮಾಂತ” ಎಂಬುದರ ಅರ್ಥವೇನೆಂದು ಎಲ್ಲೂ ವಿವರಣೆ ಸಿಗುತ್ತಿಲ್ಲ. ಗುಡ್ಡಗಾಡು, ಹುಲ್ಲುಗಾವಲಿನ ತಪ್ಪಲು ಪ್ರದೇಶವಾದ್ದರಿಂದ ಗೋವಾದಲ್ಲಿ ಗೋ ಸಂಪತ್ತು ಸಾಕಷ್ಟಿದ್ದಿರಬಹುದು. ಗೋವಾ ಆಯಕಟ್ಟಿನ ಜಾಗದಲ್ಲಿರುವ ಬಂದರು ಪ್ರದೇಶವಾದ್ದರಿಂದ ವಿದೇಶಗಳ ದೃಷ್ಟಿ ಮೊದಲು ಗೋವಾದ ಮೇಲೆಯೇ ಬೀಳುತ್ತಿತ್ತು. ಗೋವುಗಳನ್ನು ಹೈನುಗಾರಿಕೆಗೆ ಮಾತ್ರವಲ್ಲದೆ ಮಾಂಸಕ್ಕಾಗಿಯೂ ಬಳಸುತ್ತಿದ್ದುದು ಸಾಮಾನ್ಯ. ಗೋವಾದಿಂದ ಗೋವುಗಳ ವ್ಯಾಪಾರವೂ ನಡೆಯುತ್ತಿತ್ತೇ..? ಗೋಮಾಂತ ಎಂದರೆ ಗೋವುಗಳ ಅಂತ್ಯ ಎಂದರ್ಥವೇ ಅಥವಾ ಗೋವುಗಳ ಸಾಕಣೆ ವಿಷಯದಲ್ಲಿ ಗೋವಾಪುರಿಯನ್ನು ಬಿಟ್ಟರಿಲ್ಲ ಎಂದರ್ಥವೇ? ಇರಬಹುದು, ಇರದೆಯೂ ಇರಬಹುದು. ಈ ಕುರಿತು ಹೆಚ್ಚು ಸಂಶೋಧನೆಗಳು ನಡೆಯದೆ ಇರುವುದಕ್ಕೆ ಧಾರ್ಮಿಕ ಕಾರಣಗಳೂ ಇರಬಹುದು. ಬಲ್ಲವರು ಈ ಕುರಿತು ಬೆಳಕು ಚೆಲ್ಲಲಿ ಎಂದು ಆಶಿಸಬಹುದಷ್ಟೇ.

ಗೋವಾ ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಸ್ಥಳವೂ ಹೌದು. ಯಾವ ಪ್ರವಾಸಿಗರಾದರೂ ನೋಡಲೇಬೇಕೆಂದು ಗುರುತಿಸಿಕೊಳ್ಳುವ ಬಹುತೇಕ ಸ್ಥಳಗಳು ಪುರಾತನ ಟಿಪ್ಪಣಿಯೊಂದನ್ನು ತಮ್ಮಲ್ಲಿ ಹುದುಗಿಸಿಕೊಂಡಿವೆ. ಅದು ಚರ್ಚ್, ದೇವಾಲಯ, ಕೋಟೆ, ಬಂದರು ಹೀಗೆ ಯಾವುದೂ ಆಗಿರಬಹುದು. ಆಧುನಿಕತೆಯ ಹೊಸ ಕಟ್ಟಡವು ಹಳೆಯ ನೆನಪೊಂದರ ಬುನಾದಿಯ ಮೇಲೆಯೇ ಎದ್ದುನಿಂತಿರುವುದನ್ನು ಗಮನಿಸಬಹುದು. ಬದಲಾವಣೆಗಳೇನಿದ್ದರೂ ಈ ಐತಿಹಾಸಿಕತೆಯ ವಾಸನೆ ಮಾತ್ರ ಹಾಗೇ ಉಳಿದುಕೊಂಡಿದೆ.

ಗೋವಾದ ಅಸ್ತಿತ್ವ ಇತಿಹಾಸಪೂರ್ವ ಕಾಲದಲ್ಲಿಯೇ ಕಂಡುಬರುತ್ತದೆ. ಮುಖ್ಯವಾಗಿ “ಕುಶಾವತಿ ನದೀ ತೀರದ ಸಂಸ್ಕೃತಿ”ಯ ಕುರಿತು ಸಂಶೋಧಿಸಲಾಗಿರುವ ಸಂಗತಿಗಳು ಗೋವಾದ ಮೂಲನಿವಾಸಿಗಳ ಬಗ್ಗೆ ನಂಬಲರ್ಹ ಮಾಹಿತಿಯನ್ನು ಒದಗಿಸಿವೆ. ವಲಸೆಬಂದ ಹರಪ್ಪ ನಾಗರಿಕತೆಯ ನೆರಳಿನಂತೆ ಕಂಡುಬರುವ ಮೂಲನಿವಾಸಿಗಳ ಮತ್ತು ವಲಸೆ ಬಂದ ಜನರ ಮಿಶ್ರ ಸಮುದಾಯ ಗೋವಾದಲ್ಲಿ ಆರಂಭದಲ್ಲಿಯೇ ಕಂಡುಬಂದಿದೆ. ಎಲ್ಲ ನಾಗರಿಕತೆಯ ಆರಂಭವೂ ನದಿಮುಖಜ ಭೂಮಿಗಳಲ್ಲೇ ಆಗಿರುವಂತೆ ಈ ಸಂಸ್ಕೃತಿಯ ಆದಿವಾಸಿಗಳೂ ಗೋವಾದ ಈಶಾನ್ಯ ಭಾಗದಲ್ಲಿ ಹರಿಯುತ್ತಿತ್ತೆನ್ನಲಾದ ಕುಶಾವತಿ ನದಿಯ ದಂಡೆಯಲ್ಲಿ ನೆಲೆಸಿದ್ದರು. ಸ್ಥಳೀಯ ಕಾಡು, ನದಿ, ಝರಿ, ಪ್ರಾಣಿ, ಪಕ್ಷಿ, ಮೀನು, ಗಿಡ, ಮರಗಳ ಕುರಿತು ಅತ್ಯುತ್ತಮ ಮಾಹಿತಿಜ್ಞಾನ ಇವರಿಗಿತ್ತು.

ಉತ್ಖನನದ ಅವಧಿಯಲ್ಲಿ ದೊರಕಿರುವ ಪಳಿಯುಳಿಕೆಗಳ ಮೇಲೆ ಆಧಾರಿತ ಅಧ್ಯಯನಗಳ ಪ್ರಕಾರ ಅದು ಸುಮಾರು 6,000 ದಿಂದ 8,000 ವರ್ಷಗಳ ಹಿಂದೆ ಇದ್ದ ಚಿಕ್ಕ ಬುಡಕಟ್ಟು ನಾಗರಿಕತೆ. ಆಗಿನ್ನೂ ವ್ಯವಸಾಯ ರೂಢಿಯಲ್ಲಿಲ್ಲದ ಕಾಲ. ಬೇಟೆಯನ್ನೇ ಅವಲಂಬಿಸಿದ್ದ ಜನ ಇವರು. ಹಾಗಾಗಿ ಬೇಟೆಯ ವಿವಿಧ ಸಾಧನಗಳನ್ನೂ ಬಳಸುತ್ತಿದ್ದುದು ಕಂಡುಬಂದಿದೆ. ಕಲ್ಲಿನ ಸಾಧನಗಳನ್ನು ಬಳಸಿ ಬೇಟೆಯಾಡಿ ಬದುಕುತ್ತಿದ್ದ ಕೊನೆಯ ತಲೆಮಾರು ಇದು ಎನ್ನಬಹುದು. ಇವರು ನಿಜಕ್ಕೂ ಗೋವಾದ ಆದಿವಾಸಿಗಳು ಎಂಬುದಕ್ಕಿಂತ ವಲಸೆ ಬಂದು ನೆಲೆ ನಿಂತವರು ಎಂಬ ವಾದವೇ ಇದುವರೆಗೂ ಚಾಲ್ತಿಯಲ್ಲಿದೆ. ಏಕೆಂದರೆ ಗೋವುಗಳನ್ನೂ ಸಾಕಣೆ ಮಾಡಿಕೊಂಡು ಅದುವರೆಗೂ ಗೋವಾದಲ್ಲಿ ಧಾರ್ಮಿಕ ಕಾರ್ಯಗಳನ್ನೇ ಮಾಡಿಕೊಂಡಿದ್ದವರೂ ಕೂಡಾ ಉತ್ತರದಿಂದ ವಲಸೆ ಬಂದವರು. ಆರ್ಯನ್ ಸಂಸ್ಕೃತಿಗೆ ಹೆಚ್ಚು ಹೋಲಿಕೆಯಾಗುತ್ತದೆ.

“ಉಪ್ಪು” ಆಗ ಗೋವಾದ ಮತ್ತೊಂದು ಆಕರ್ಷಣೆಯಾಗಿತ್ತು. ಅದಕ್ಕಾಗಿಯೂ ಹಲವು ಜನಾಂಗಗಳು ಗೋವಾಕ್ಕೆ ಬಂದು ನೆಲೆಸಿ, ಕಾಲಾಂತರದಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿರಬಹುದು. ಹೀಗೆ ವಲಸೆ ಬಂದವರಲ್ಲಿ ಕೊಂಕಣಿಗಳು, ಕೋಲ, ಮುಂಡಾರಿಗಳು, ಖಾರ್ವಿಗಳು ಹೀಗೆ ಅನೇಕರಿದ್ದರು. ಗೋವಾ ಯಾರನ್ನೂ ನಿರಾಕರಿಸದಷ್ಟು ಸಮೃದ್ಧ ಸಂಪತ್ತಿನ ಪ್ರದೇಶ. ವಲಸಿಗರೆಲ್ಲರೂ ಯಾವ ಕೊರತೆಯಿಲ್ಲದಂತೆ ಇಲ್ಲಿ ನೆಲೆಸಿದರು, ತಂತಮ್ಮ ಭಾಷೆ, ಸಾಮಾಜಿಕ ವಿಧಿವಿಧಾನಗಳನ್ನು ಬೆಳೆಸಿದರು. ಈಗಲೂ ಮುಂಡಾರಿ ಬುಡಕಟ್ಟಿನ ಪ್ರಭಾವವಿರುವ ಗೌಡ ಮತ್ತು ಕುನ್ಬಿ ಜನ ಇಲ್ಲಿದ್ದಾರೆ. ಮನೆಗಳಲ್ಲಿ ಇವರೆಲ್ಲ ತಂತಮ್ಮ ಪುರಾತನ ರೂಢಿ ಆಚಾರ ಸಂಪ್ರದಾಯಗಳನ್ನು ಉಳಿಸಿಕೊಂಡಿರಬಹುದು ಆದರೆ ಮನೆಯಿಂದ ಹೊರಬಂದೊಡನೆ ಆಧುನಿಕತೆಯ ಪ್ರವಾಹಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳಲೇ ಬೇಕಾಗುತ್ತದೆ. ಮೀನುಗಾರಿಕೆ ಮತ್ತು ಪ್ರವಾಸೋದ್ಯಮ, ಹೋಟೆಲ್ ಮ್ಯಾನೇಜ್ ಮೆಂಟ್ ಗಳನ್ನು ಕಲಿತವರು ಹೆಚ್ಚುಹೆಚ್ಚು ಕಂಡುಬರುತ್ತಾರೆ. ಇಷ್ಟಕ್ಕೂ ಕಲಿತವರೇ ಈ ವ್ಯವಹಾರಗಳನ್ನು ಮಾಡಬೇಕೆಂದೂ ಇಲ್ಲವಲ್ಲ್ಲ…. ಹಾಗಾಗಿ ಯಾವ ಬುಡಕಟ್ಟಿನವರಾದರೂ ಇಲ್ಲಿ ಈಗ ಬ್ಯುಸಿನೆಸ್‍ಮನ್‍ಗಳೇ.

ಭೌಗೋಳಿಕ ಚರಿತ್ರೆ ಗೋವಾ ಜೀವಿಗಳ ವಿಕಾಸ ಹಂತದಿಂದಲೂ ಅಸ್ತಿತ್ವದಲ್ಲಿರುವ ಭೂಭಾಗ. ವಾಸಯೋಗ್ಯ ಪ್ರದೇಶಗಳನ್ನು ಹುಡುಕುತ್ತಾ ಹೋಮೋ ಸೆಪಿಯನ್ನರು ಬಂದು ನೆಲೆಸಿರಬಹುದಾದ ಜಾಗ. ಶಿಲಾಯುಗದಷ್ಟು ಹಳೆಯದಾದ ಕುಶಾವತಿ ನಾಗರಿಕತೆ ಗುಹೆಗಳಲ್ಲಿ, ಬೇಟೆಗಾರ ಸಂಸ್ಕøತಿಯಲ್ಲಿ ಜೀವಂತವಾಗಿತ್ತು. ನದೀತೀರದಿಮದ ಸಮುದ್ರತೀರಕ್ಕೆ ಇವರು ಹೊರಟಿದ್ದು ಉಪ್ಪಿಗಾಗಿ. ಭೂದೇವತೆಯ ಕಲ್ಪನೆ ಕೂಡ ಆಗ ಹುಟ್ಟಿದ್ದು. ಅಲೆಮಾರಿಗಳಾಗಿದ್ದ ಇವರು ಶಿಲಾಚಿತ್ರಕಲೆಯಲ್ಲಿ ಪರಿಣಿತರಾಗಿದ್ದರು. ಬೇಟೆ, ಮೀನು ಹಿಡಿಯುವುದು, ಬಲೆಗಳ ಉಪಯೋಗದ ಜೊತೆಗೆ ಗಡ್ಡೆಗೆಣಸು, ಬಿದಿರು, ಅಣಬೆಗಳು ಪ್ರಮುಖ ಆಹಾರವಾಗಿದ್ದವು. ಮುಖವಾಡಗಳನ್ನು ಬಳಸುವದು, ಸಸ್ಯಾಧಾರಿತ ಬಣ್ಣಗಳನ್ನು ಬಳಸುವುದು ಆರಂಭವಾಗಿ ನಾಟಕಕಲೆ, ಸಂಗೀತಗಳನ್ನು ಆಸ್ವಾದಿಸಿದವರು. ಅಷ್ಟರಮಟ್ಟಿಗೆ ಅವರು “ಮುಂದುವರಿದವರು” ಎನ್ನಬಹುದು. ಕಾಡುಕುದುರೆ, ಕಾಡೆಮ್ಮೆಗಳನ್ನು ಹಿಡಿದು ಪಳಗಿಸಿ ಸಂಚಾರಕ್ಕೆ ಬಳಸಿಕೊಂಡದ್ದು ಕುಶಾವತಿ ನಾಗರಿಕರ ಬಹುಮುಖ್ಯ ಸಾಧನೆ. ಕುಂಬಾರಿಕೆಯ ಆರಂಭವೂ ಆಗಿದ್ದಿರಬಹುದಾದ ಕುರುಹುಗಳಿವೆ.

ಕ್ರಿಸ್ತಪೂರ್ವ 1000ರಲ್ಲಿ ವ್ಯವಸಾಯ ಆರಂಭವಾದ ಬಗ್ಗೆಯೂ ಕುರುಹುಗಳಿವೆ. ನೇಗಿಲಿನ ಸಂಶೋಧನೆ, ಕರಾವಳಿತೀರದಲ್ಲಿ ಹಣ್ಣಿನ ಮರಗಳ ನೆಡುತೋಪು, ಬಯಲುಪ್ರದೇಶದ ಯಜಮಾನಿಕೆ, ಹೀಗೆ ನಾಗರಿಕತೆ ಬೆಳೆಯತೊಡಗಿತು. ಆಗ ಆಳ್ವಿಕೆಯ ಸ್ಪಷ್ಟ ಕಲ್ಪನೆಯಿರಲಿಲ್ಲವಾದರೂ ತಮ್ಮನ್ನು ತಾವು ಸಮಾಜಜೀವಿಗಳೆಂದು, ತಮಗೊಬ್ಬ ನಾಯಕನಿದ್ದಾನೆಂದು ಗುರುತಿಸಿಕೊಂಡರು.

ಕ್ರಿಸ್ತಪೂರ್ವ 500 ರ ಸುಮಾರಿಗೆ ಜೈನ ಮತ್ತು ಬೌದ್ಧಧರ್ಮಗಳು ದಕ್ಷಿಣಭಾರತವನ್ನು ಪ್ರವೇಶಿಸಿದವು. ಆ ಸಂದರ್ಭದಲ್ಲಿ ಗೋವಾ ಕೂಡಾ ಈ ಧರ್ಮಗಳ ಸಂಪರ್ಕಕ್ಕೆ ಬಂದಿತು. ಧರ್ಮದ ಮೂಲಕ ರಾಜಕಾರಣವೂ ಪ್ರವೇಶ ಪಡೆಯಿತು. ಮೌರ್ಯರು ಕರಾವಳಿಯ ಕಡೆಗೆ ಚಲಿಸುತ್ತಾ ಗೋವಾ ತಲುಪಿದರು. ಅಲ್ಲಿ ನಾಯಕತ್ವವೇ ಇಲ್ಲದ ಕಾರಣ ತುಂಬ ಸುಲಭವಾಗಿ ಮೌರ್ಯರು ಗೋವಾವನ್ನು ತಮ್ಮ ರಾಜ್ಯದ ಸರಹದ್ದೆಂದು ಘೋಷಿಸಿಕೊಂಡರು. ಇದರಿಂದ ಗೋವಾಕ್ಕೆ ಅಂಥಾ ಹಾನಿಯೇನೂ ಆಗಲಿಲ್ಲ. ವ್ಯಾಪಾರವಾಣಿಜ್ಯ ಉದ್ದಿಮೆಗಳಿಗಾಗಿ, ಪ್ರವಾಸಿಗಳ ತಂಗುದಾಣವಾಗಿ ಗೋವಾ ತನ್ನದೇ ವಿಶಿಷ್ಟ ಸ್ಥಾನ ಹೊಂದಿದ್ದು, ರಾಜಾಸ್ಥಾನದಲ್ಲಿ ಪ್ರಮುಖಸ್ಥಾನ ಪಡೆಯಿತು. ಮೌರ್ಯರಿಂದ ಮೊದಲ್ಗೊಂಡು, ದಕ್ಷಿಣಭಾರತದ ಎಲ್ಲ ರಾಜವಂಶಗಳೂ ಗೋವಾವನ್ನು ಆಕ್ರಮಿಸಿಕೊಂಡವು. ಗೋವಾ ತಾನೂ ಬೆಳೆಯಿತು, ರಾಜ್ಯವನ್ನೂ ಬೆಳೆಸಿತು. ಪ್ರತಿಷ್ಠಾನದ ಶಾತವಾಹನರು, ಕ್ಷತ್ರಪರ ಜೊತೆಗೆ ರೋಮನ್ನರ ಸಂಪರ್ಕವೂ ಇತರ ಯುರೋಪಿಯನ್ನರ ಸಂಪರ್ಕವೂ ಸಾಧ್ಯವಾಯಿತು.

ಅಲ್ಲಿಂದಾಚೆಗೆ ಪ್ರತಿ ರಾಜವಂಶವೂ ಗೋವಾವನ್ನು ತಮ್ಮ ವಶಮಾಡಿಕೊಳ್ಳುವುದು ಪ್ರತಿಷ್ಠೆಯ ವಿಷಯವೆಂದೆ ಭಾವಿಸಿದವು. ಅರಬ್ ಕುದುರೆಗಳು ಪ್ರಥಮಬಾರಿಗೆ ಭಾರತ ಪ್ರವೇಶಿಸಿದ ಕಾಲ ಇದು. ಅಸಂಖ್ಯಾತ ಗೋಸಂಪತ್ತು ಮೊದಲೇ ಇತ್ತು. ಒಂದು ರೀತಿಯಲ್ಲಿ ಸುವರ್ಣಕಾಲವೆಂದೇ ಹೇಳಬಹುದು. ಅನಂತರ ಭೋಜರು, ಚಾಟರು, ಕದಂಬರು, ಬಾದಾಮಿಯ ಚಾಲುಕ್ಯರು, ಮಳಖೇಡದ ರಾಷ್ಟ್ರಕೂಟರು, ದೇವಗಿರಿಯ ಯಾದವರು, ಗಂಗರು, ಹೊಯ್ಸಳರು.. ಹೀಗೆ ದಕ್ಷಿಣಭಾರತದ ಇತಿಹಾಸದಲ್ಲಿ ಗೋವಾದ್ದೇ ಒಂದು ವಿಶಿಷ್ಟ ಅಧ್ಯಾಯ ಎನ್ನಲಡ್ಡಿಯಿಲ್ಲ.

ಸರ್ವಧರ್ಮ ಸಮನ್ವತೆಯ ದಾಖಲೆಯೂ ಆಗಿನಿಂದಲೇ ಶುರುವಾಯಿತು. ಜೊತೆಗೆ ಅದು ಸಂಘರ್ಷದ ಕಾಲ ಎಂದರೂ ತಪ್ಪಿಲ್ಲ. ಸರಿಸುಮಾರು 13ನೆಯ ಶತಮಾನದಲ್ಲಿ ಮುಸಲ್ಮಾನರು ಭಾರತಕ್ಕೆ ಬಂದರಷ್ಟೇ.. ಆಗ ಗೋವಾ ಮೊದಲಬಾರಿಗೆ ಮಸೀದಿಯನ್ನು ಕಂಡಿತು. ಅನಂತರ ಬಂದವರು ಪೋರ್ಚುಗೀಸರು. ಆಗ ಪಾದ್ರಿಗಳು ಧರ್ಮ, ಶಿಕ್ಷಣ ಎರಡನ್ನೂ ಹೊತ್ತುಬಂದರು. ಅದುವರೆಗೆ ಆಳಿದವರು ಹಿಂದೂ ಆಳರಸರಾದ್ದರಿಂದ ತೊಂದರೆಯಿರಲಿಲ್ಲ. ಆದರೆ, ಮುಸಲ್ಮಾನರ ಆಳ್ವಿಕೆಯ ಸಂದರ್ಭದಲ್ಲಿ, ಯುರೋಪಿಯನ್ನರ ಆಗಮನ ಸಂದರ್ಭದಲ್ಲಿ ಧಾರ್ಮಿಕ ಸಂಘರ್ಷಗಳು ಸಹಜವಾಗಿಯೇ ಉಂಟಾದವು. ರಾಜಾಶ್ರಯದಲ್ಲಿ ವಿಫುಲವಾಗಿದ್ದ ದೇವಸ್ಥಾನಗಳು ಭಗ್ನಗೊಂಡವು. ಆದರೆ ಮತ್ತೆ ಕಟ್ಟಲ್ಪಟ್ಟವು ಮತ್ತು ಪೂಜೆಪುನಸ್ಕಾರಗಳು ಯಾವ ಹಂತದಲ್ಲೂ ಸ್ಥಗಿತಗೊಂಡಿಲ್ಲ. ಇದಕ್ಕೆ ಸಮಾನಾಂತರವಾಗಿ ಮಸೀದಿಗಳು, ಚರ್ಚುಗಳು ತಲೆಯೆತ್ತಿದವು. ಆಧುನಿಕ ಯುಗದಲ್ಲಂತೂ ಕೂಡಿಬಾಳುವುದು ಎಲ್ಲಾ ಧರ್ಮದವರಿಗೂ ಅನಿವಾರ್ಯವೇ ಆಗಿದೆ.
ಗೋವಾ ಆಕ್ರಮಣ ಮಾಡಿದ ಮೊದಲ ಮುಸ್ಲಿಂ ಅರಸು ಹೊನ್ನಾವರದ ಸುಲ್ತಾನ್ ಜಮಾಲುದ್ದಿನ್ ಎನ್ನಲಾಗಿದೆ. ಅನಂತರ ಬಹಮನಿ ಸುಲ್ತಾನರ ವಶದಲ್ಲಿ ಕೆಲಕಾಲವಿತ್ತು. ಗೋವಾಕ್ಕಾಗಿ ವಿಜಯನಗರ ಮತ್ತು ಬಹಮನಿ ಸಾಮ್ರಾಜ್ಯಗಳೆರಡೂ ಯುದ್ಧ ಮಾಡಿವೆ. ಅನೇಕ ವಂಶಗಳೂ ರಾಜ್ಯಭಾರ ಮಾಡಿವೆ.

2 comments

  1. ಸುಧಾ..ಎಷ್ಟು ಕುತೂಹಲಕಾರಿ ಸಂಗತಿಗಳನ್ನು ಹೇಳಿದ್ದೀರಿ. ನನ್ನ ಗಂಡನ ಮನೆಯವರು ಮೂಲ ಕದಂಬ ವಂಶದವರು. ಕಲ್ಯಾಣದ ಕಡೆಯಿಂದ ಬಂದು ಗೋವಾದಲ್ಲಿ ಮೊದಲು ನೆಲೆಸಿ ನಂತರ ಕಾರವಾರದ ಕಡೆ ಬಂದವರು.
    ಶಿವನೂ ಗೋವಾದ ಜೊತೆ ಸಂಪರ್ಕ ಹೊಂದಿದ್ದು ನನಗೆ ತಿಳಿದಿರಲಿಲ್ಲ..
    ಥ್ಯಾಂಕ್ಯೂ…ಹೆಚ್ಚಿನ ಮಾಹಿತಿ ಸಿಕ್ಕರೆ ಮತ್ತೆ ಬರೆಯಿರಿ

  2. ನಿಮ್ಮ ಮೂಲವೂ ಗೋವಾ ಹಾಗಾದರೆ…?!
    ಅಭಿನಂದನೆ ನಿಮಗೆ ನೂತನಾ…
    ಮಾಹಿತಿ ಇನ್ನೂ ಕೆದಕಿದಷ್ಟೂ ಇದ್ದಂತೆ ತೋರುತ್ತಿದೆ, ನೋಡಬೇಕು ಇನ್ನೂ.

Leave a Reply