ಅವರು ಗೋವಾಕ್ಕೆ ಬಂದರು..

 

ಪೋರ್ಚುಗೀಸರ ಸೈನ್ಯದೊಂದಿಗೆ ಕೆಲಸಗಾರರ ಒಂದು ದೊಡ್ಡ ಗುಂಪು ಗೋವಾಕ್ಕೆ ಬಂದಿಳಿಯಿತು.
ಅವರೆಲ್ಲರೂ ಬಹುತೇಕ ಕರಿಯರು.
ಕೆಲದಿನಗಳ ನಂತರ ಇವರೊಂದಿಗೆ ಭಾರತೀಯರ ಇನ್ನೊಂದು ಗುಂಪು ಸೇರ್ಪಡೆಯಾಯಿತು.
ಬೀದಿಬೀದಿಗಳಲ್ಲಿ ಹರಾಜು ಕೂಗುತ್ತಾ ಈ ಮನುಷ್ಯರನ್ನು ಮಾರಲಾಗುತ್ತಿತ್ತು.
ಗುಲಾಮಗಿರಿಯ ನಗ್ನಸತ್ಯಗಳು ಅನೇಕ.

ಇದು ಎಲ್ಲ ಸಾಮ್ರಾಜ್ಯಷಾಹಿಯ ಐಷಾರಾಮದ ಕಾಲಬುಡದ ಕತ್ತಲಲ್ಲಿ ಕಂಡುಬರುವ ಅಮಾನವೀಯ ದೃಷ್ಯ. ಗೋವಾದಲ್ಲಿದು ಮುಸ್ಲಿಮರ ಕಾಲದಿಂದಲು ಇತ್ತು. ಅದಕ್ಕೂ ಹಿಂದೆಯೂ ಇದ್ದಿರಬಹುದು. ಬಲಿಷ್ಟನು ಬಲಹೀನನ ಮೇಲೆ ಸವಾರಿ ಮಾಡುವುದು ಅಪರೂಪದ ಸಂಗತಿಯೇನಲ್ಲ. ಈ ಗುಲಾಮಗಿರಿ ಪೋರ್ಚುಗೀಸರ ಕಾಲದಲ್ಲೂ ಇತ್ತು. ಹಡಗನ್ನು ಮುನ್ನಡೆಸುತ್ತಿದ್ದವರು ಕೂಡಾ ಗುಲಾಮರೇ.

ಅನಾಮಿಕ ಸೈನಿಕರಂತೆ ಇವರು ಅನಾಮಿಕರಾಗಿಯೇ ಉಳಿದುಹೋಗಿದ್ದಾರೆ.
ಹೀಗೆ ಬಂದ ಗುಲಾಮರಿಂದಾಗಿಯೇ ಗೋವಾದಲ್ಲಿ ಪೋರ್ಚುಗೀಸರು ಸುವರ್ಣಯುಗವನ್ನು ಕಂಡರು.
ಅದು ಶುರುವಾಗಿದ್ದು ವಾಸ್ಕೋಡಗಾಮಾನಿಂದ.

ವಾಸ್ಕೋಡಗಾಮಾ ನಿಜಕ್ಕೂ ಒಬ್ಬ ಸಾಮಾನ್ಯ ಸೈನಿಕವಾಗಿ ಪೋರ್ಚುಗೀಸ ನೌಕಾದಳವನ್ನು ಸೇರಿದ್ದ. ಕ್ಯಾಸ್ಟೈಲ್ ವಿರುದ್ದದ ಯುದ್ಧದಲ್ಲಿ ಧೀರೋದಾತ್ತ ಹೋರಾಡಿದ್ದ. ಅನಂತರ ಅತಿವೇಗವಾಗಿ ನೌಕಾಯಾದ ಕಲೆಗಾರಿಕೆಯ ಬಗ್ಗೆ, ಹಡಗು ದಿಕ್ಸೂಚಿ ಇತ್ಯಾದಿ ತಂತ್ರಜ್ಞಾನದ ಬಗ್ಗೆ ಜ್ಞಾನ ಸಂಪಾದಿಸಿಕೊಂಡ ನಂತರ ದೀರ್ಘವಾದ ನೌಕಾಯಾನವನ್ನು ಕೈಗೊಂಡ. 1497-98ರ ಅವಧಿಯಲ್ಲಿ ಲಿಸ್ಬನ್ ನಿಂದ ಹೊರಟು ಒಂದು ವರ್ಷದ ಧೀರ್ಘಯಾನದ ನಂತರ ಕಲ್ಕತ್ತಕ್ಕೆ ಕಾಲಿಟ್ಟ. ಅಲ್ಲಿಗೆ ಅರಬಿಗಳ ಕುದುರೆವ್ಯಾಪಾರದ ಏಕಸ್ವಾಮ್ಯ ಮುರಿದುಬಿತ್ತು.

1510ರಲ್ಲಿ ನಿಜಕ್ಕೂ ಪೋರ್ಚುಗೀಸರ ಆಳ್ವಿಕೆಯ ಆರಂಭ ಎಂದು ಗುರುತಿಸಬಹುದು. ಎಲ್ಲಾ ಕಡೆಯಿದ್ದಂತೆ ವಿದೇಶಿಯರಿಗೆ ನೆರವು ನೀಡಿದ ಸ್ಥಳೀಯ ಮುಂಖಂಡರು ಗೋವಾದಲ್ಲೂ ಇದ್ದರು.
ಆತನ ಹೆಸರು ತಿಮ್ಮಯ್ಯ.

ನಿಜಕ್ಕೂ ಗೋವಾದ ಮೇಲೆ ತನ್ನದೇ ಹತೋಟಿಯಿರಬೇಕೆಂದು ಬಯಸಿದಾತ.

ಆದರೆ ಬಿಜಾಪುರದ ಇಸ್ಮಾಯಿಲ್ ಅದಿಲ್ ಷಾನ ಎದುರು ಅತನ ಆಟ ನಡೆಯದೆ ಮುಖ್ಯಸ್ಥನಂತೂ ಆಗಿದ್ದ. ಪೋರ್ಚುಗಿಸರ ಅಡ್ಮಿರಲ್ ಅಫೋನ್ಸೋ ಡಿ ಆಲ್ಬುಕರ್ಕ ಗೋವಾ ಆಕ್ರಮಿಸಿದಾಗ ಕೆಲವು ಮಾಹಿತಿಗಳನ್ನು ಕೊಟ್ಟ. ಪೋರ್ಚುಗೀಸರ ಸೇನೆ ಬಲಷ್ಠವೂ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಹೊಂದಿತ್ತು. ಅತಿ ಕಡಿಮೆ ಅವಧಿಯಲ್ಲಿ ಎರಡನೆಯ ಬಾರಿಗೆ ಆಲ್ಬುಕರ್ಕ್ ಗೋವಾದ ಮೇಲೆ ದಂಡೆತ್ತಿಬಂದಾಗ ಇಸ್ಮಾಯಿಲ್ ಅದಿಲ್ ಷಾ ಸೋತುಹೋದಲ್ಪೋರ್ಚುಗೀಸರ ಯುದಧೋತ್ಸಾಹ ಎಷ್ಟಿತ್ತೆಮದರೆ ಒಂದೇ ದಿನದಲ್ಲಿ 6,000 ಜನ ಮುಸ್ಲಿಂ ಸೈನಿಕರನ್ನು ಗೋವಾದ ಬೀದಿಬೀದಿಗಳಲ್ಲಿ ನಿರ್ದಾಕ್ಷಣ್ಯವಾಗಿ ಕೊಂದು ಹಾಕಿದರು. ಕೆಲವರು ಯುದ್ಧ ಮಾಡುವಾಗ ಮತ್ತೆ ಕೆಲವರು ತಪ್ಪಿಸಿಕೊಂಡು ಓಡುವಾಗ ಒಟ್ಟಾರೆ ಅದಿಲ್ ಷಾಹಿ ಸೈನ್ಯದ ಮುಕ್ಕಾಲುಪಾಲು ಸೈನಿಕರು ಅಸುನೀಗಿದರು. ಇಸ್ಮಾಯಿಲ್ ಅದಿಲ್ ಷಾ ಶರಣಾದ.

ಇದು ತಿಮ್ಮಯ್ಯನನ್ನೂ ಕೂಡಾ ಹತಾಶನನ್ನಾಗಿಸಿತು. ಮುತ್ಸದ್ದಿ ಆಲ್ಬುಕರ್ಕ್ ಹಿಂದೂ ಮತ್ತು ಮುಸ್ಲಿಂ ಜನರ ವಿಶ್ವಾಸಕ್ಕೆ ತೆಗೆದುಕೊಂಡ. ತಿಮ್ಮಯ್ಯನನ್ನೇ ಗೋವಾದ ಮುಖ್ಯಆಡಳಿತಗಾರರನ್ನಾಗಿ ನೇಮಿಸಿದ. ಸ್ಥಳೀಯರೊಂದಿಗೆ ಸಂಪರ್ಕ ಸಾಧಿಸಲು ತಿಮ್ಮಯ್ಯನನ್ನು ಆಡಳಿತಗಾರನನ್ನಾಗಿ ಮಾಡುವುದು ಬುದ್ಧಿವಂತಿಕೆಯೇ ಆಗಿತ್ತು. ಜೊತೆಗೆ ತೆರಿಗೆ ಕಡಿತಗೊಳಿಸುವ ಬಗ್ಗೆ ಭರವಸೆ ಕೊಟ್ಟ. ಹೀಗೆ ನಿಧಾನವಾಗಿ ಹಿಂದೂ-ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಂಟ ನಂತರ ಗೋವಾದ ಇತರ ಭಾಗಗಳೆಲ್ಲವೂ ಪೋರ್ಚುಗಿಸರ ವಶವಾಗುವುದೇನೂ ತಡವಾಗಲಿಲ್ಲ.

ಅಲ್ಬುಕರ್ಕನಿಗೆ ಸ್ಥಳೀಯರ ಮನವೊಲಿಸಿಕೊಳ್ಳುವ ಇನ್ನೊಂದು ಸುವರ್ಣಾವಕಾಶ ದೊರೆಯಿತು.

ಆಗ ನಾಣ್ಯಗಳ ಕೊರತೆಯುಂಟಾಗಿತ್ತು.
ವ್ಯಾಪಾರಿಗಳು ಮತ್ತು ಆಡಳಿತಗಾರರು ಈ ಅಂಶವನ್ನು ಆಲ್ಬುಕರ್ಕನ ಗಮನಕ್ಕೆ ತಂದರು.
ತಕ್ಷಣ ಆತ ಚಿನ್ನ, ಬೆಳ್ಳಿ ಮತ್ತು ಕಂಚಿನ ನಾಣ್ಯಗಳನ್ನು ಚಲಾವಣೆಗೆ ತಂದ. ನಾಣ್ಯದ ಒಂದು ಬದಿಯಲ್ಲಿ, ಶಿಲುಬೆ ಮತ್ತೊಂದು ಬದಿಯಲ್ಲಿ ಪೋರ್ಚುಗೀಸ್ ಸೈನ್ಯದ ಬ್ಯಾಡ್ಜ್ ಇತ್ತು. ಈ ಮೂಲಕ ಕ್ರಿಶ್ಚಿಯನ್ ಧರ್ಮವನ್ನು ಅಧಿಕೃತವಾಗಿ ಗೋವಾದಲ್ಲಿ ಜಾರಿ ಮಾಡಿದ. ಗೋವನ್ನರಿಗೆ ಇದನ್ನೊಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಇದನ್ನು ಅರ್ಥಮಾಡಿಕೊಂಡ ಅಲ್ಬುಕರ್ಕ ಗೋವಾದ 30 ಸಾಮುದಾಯಿಕ ಹಳ್ಳಿಗಳನ್ನು ಸ್ವಾಯತ್ತವಾಗಿಯೇ ಇರಲು ಅನುವು ಮಾಡಿಕೊಟ್ಟ. ಗೋವಾಕ್ಕಾಗಿಯೇ ಹಲವು ಕಾನೂನುಗಳು ಸೃಷ್ಟಿಯಾದವು. ಅದರಲ್ಲಿ “ಸತಿಪದ್ದತಿ ವಿರೋಧಿ ಕಾನೂನು” ಒಂದು. ಈಗಲೂ ಪೋರ್ಚುಗೀಸ್ ಭಾಷೆಯಲ್ಲಿರುವ ಈ ಕಾನೂನು ಪುಸ್ತಕ ಐತಿಹಾಸಿಕ ದಾಖಲೆಯಾಗಿದ್ದು ಇದನ್ನು “ಸೆಂಟ್ರಲ್ ಲೈಬ್ರೆರಿ ಆಫ್ ಗೋವಾ”ದಲ್ಲಿ ಇರಿಸಲಾಗಿದೆ.

ಹೀಗೆ ಗೋವಾ ರಾಜಕೀಯವಾಗಿ, ಸಾಮಾಜಿಕವಾಗಿ ತನ್ನ ಕೈವಶ ಮಾಡಿಕೊಂಡ ನಂತರ ಅಲ್ಬುಕರ್ಕ ತಮ್ಮ ಅತಿಮುಖ್ಯ ಉದ್ದೆಶವಾದ ವ್ಯಾಪಾರ ವಹಿವಾಟಿನತ್ತ ಗಮನ ಹರಿಸಿದ. ಏಷ್ಟೈದಲ್ಲಿ ಗೋವಾ ಪೋರ್ಚುಗಿಸರ ರಾಜಧಾನಿಯನ್ನಾಗಿ ಘೋಷಿಸಿದ. ಸುಸಜ್ಜಿತವಾದ ನೌಕಾನೆಲೆಯನ್ನು ಸ್ಥಾಪಿಸಿದ. ನಂತರ ಸಂಬಾರು ಪದಾರ್ಥಗಳ ಸಂಪೂರ್ಣ ಹತೋಟಿ ಸಾಧಿಸುವ ಸಲುವಾಗಿ ಗೋವಾದಲ್ಲಿ ವಿಸ್ತಾರವಾದ, ವ್ಯವಸ್ಥಿತವಾದ ಮಾರುಕಟ್ಟೆಯನ್ನು ಸ್ಥಾಪಿಸಿದ. ಈ “ಬಝಾರ್” ನಲ್ಲಿಮಪೌರ್ವಾತ್ಯದೇಶಗಳ ಬಹುತೇಕ ಸರಕುಗಳು ಮಾರಾಟಕ್ಕೆ ಲಭ್ಯವಿದ್ದವು. ಅದರಲ್ಲಿ ಮುಖ್ಯವಾದವುಗಳೆಂದರೆ ಬಹ್ರೇನಿನ ಮುತ್ತು ಮತ್ತು ಹವಳಗಳು, ಚೀನಾದ ಪಿಂಗಾಣಿ ಮತ್ತು ರೇಷ್ಮೇ, ಪೋರ್ಚುಗೀಸರದೆ ಆದ ವೆಲ್ವೆಟ್, ಮತ್ತಿತರ ವಸ್ತುಗಳು, ಔಷಧಿಗಳು ಹಾಗು ಮಲೇóಷಿಯಾದ ಕೆಲವು ಮಸಾಲೆ ಪದಾರ್ಥಗಳು ಹೀಗೆ.. ಗೋವಾ ಪೂರ್ವ ಏಷಿಯಾದ ಕೇಂದ್ರ ಮಾರುಕಟ್ಟೆಯಾಯಿತು.

ಇದು ನಿಜಕ್ಕೂ ಗೋವಾದಲ್ಲಿ ಪೋರ್ಚುಗೀಸರ ಸುವರ್ಣಯುಗ.
ದೀಪದ ಕೆಳಗೆ ಕತ್ತಲೆಯೆಂಬ ಮಾತುಂಟು.

ಹೀಗೆ ಸಮೃದ್ಧವೂ, ಶ್ರೀಮಂತವೂ, ಬಲಿಷ್ಠವೂ ಆಗಿದ್ದ ಪೋರ್ಚುಗೀಸ್ ಗೋವಾದಲ್ಲಿ ಗುಲಾಮರಿಗಾಗಿಯೂ ಒಂದು ಮಾರುಕಟ್ಟೆಯಿತ್ತು. ಗುಲಾಮರು ಮುಖ್ಯವಾಗಿ ಭಾರತೀಯ ತಳವರ್ಗದ ಜನರೆ ಆಗಿದ್ದರು. ನಂತರದ ಸ್ಥಾನ ಆಫ್ರಿಕಾದ್ದು. ಬಹುತೇಕ ದೈಹಿಕ ಸಾಮಥ್ರ್ಯ ಬೇಡುವ ಎಲ್ಲ ಕೆಲಸಗಳನ್ನು ಗುಲಾಮರೇ ಮಾಡುತ್ತಿದ್ದರು. ಮನೆಗೆಲಸ, ಮನೆ ಸುತ್ತಣ ತೋಟದ ಕೆಲಸ, ವಾಹನಗಳನ್ನು ಸರಿಯಾದ ಸ್ಥಿತಿಯಲ್ಲಿಡುವುದು, ಬಾಡಿಗಾರ್ಡ ಕೆಲಸಗಳನ್ನೂ ಮಾಡಬೇಕಾಗಿತ್ತು. ಇದು ಬಹುವರ್ಷ ಚಾಲ್ತಿಯಲ್ಲಿದ್ದ ಗುಲಾಮಿಪದ್ಧತಿ. ಹೀಗೆ ಗುಲಾಮರು ತಳವರ್ಗವನ್ನು ಪ್ರತಿನಿಧಿಸುತ್ತಿದ್ದರೆ ಪೋರ್ಚುಗಿಸ ಆಡಳಿತಗಾರರು, ವೈಸ್‍ರಾಯರು ಶ್ರೀಮಂತ ಭೋಗಜೀವನದಲ್ಲಿ ಮುಳುಗಿದ್ದರು. ಬಂಗಲೆಗಳು, ಸುತ್ತಲೂ ವಿಶಾಲವಾದ ತೊಟ, ವಾಹನಗಳು, ಅರಬಿ ಕುದುರೆಗಳು, ಶ್ರೀಮಂತಿಕೆಯ ಉಡುಪುಗಳು ಹೀಗೆ ಗೋವಾದಲ್ಲಿ ಕಣ್ಣುಕುಕ್ಕುವ ಇವರ ಜೀವನ ಆರಂಭವಾಯಿತು.

1542 ಸೇಂಟ್ ಕ್ಸೇವಿಯರ್ ಗೋವಾಕ್ಕೆ ಬರುವಷ್ಟರಲ್ಲಿ ಒಂದು ರೀತಿಯಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪ್ರಾಬಲ್ಯ ಆರಂಭವಾಯ್ತು. ಕ್ಸೇವಿಯರ್ ಬರಹಗಾರರೂ ಆಗಿದ್ದರು. ತಮ್ಮ ಪುಸ್ತಕದಲ್ಲಿ ಗೋವಾದಲ್ಲಿ ನಿರ್ಮಾಣಗೊಲ್ಳುತ್ತಿದ್ದ ಚರ್ಚುಗಳ ಶಿಲ್ಪಕಲೆಯನ್ನು ಬಾಯ್ತುಂಬಾ ಹೊಗಳಿದ್ದಾನೆ. ಇದರಲ್ಲಿ ಉತ್ಪ್ರೇಕೆಯೇನೂ ಇಲ್ಲ. ಐದಾರು ಶತಮಾನಗಳ ನಂತರವೂ ಈ ಚರ್ಚುಗಳು ಸ್ವಲ್ಪವೂ ಮುಕ್ಕಾಗದೇ ಉಳಿದು ಈ ಹೊತ್ತು ವಿಶ್ವಪರಂಪರೆಯ ತಾಣಗಳೆಂದು ಹೆಗ್ಗಳಿಕೆ ಹೊತ್ತು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಿಶ್ವದಲ್ಲೇ ಇಷ್ಟು ವಿಶಾಲವಾದ, ವೈಭವಯುತವಾದ ಚರ್ಚುಗಳಿಲ್ಲ ಎಂದು ಹೇಳಲಾಗುತ್ತಿದೆ. ಇಂಥ ಕಟ್ಟಡಗಳನ್ನು ಕಟ್ಟಲು ಅದೆಷ್ಟು ಜನ ಕಾರ್ಮಿಕರು ಅನವರತ ದುಡಿದಿರಬಹುದೋ..? ಅದೆಷ್ಟು ಜನ ಗುಲಾಮರು ದುಡಿಯುತ್ತಲೇ ಜೀವ ತೆತ್ತಿರಬಹುದೋ..? ಇದನ್ನು ಯಾವ ಇತಿಹಾಸಕಾರನೂ ದಾಖಲಿಸಿಲ್ಲವೆಂಬುದು ಸದಾಕಾಲದ ದುರಂತ.

ಆದರೆ ಸಂಘರ್ಷ ಶುರುವಾಗಿದ್ದು ಮಿಷಿನರಿಗಳು ಧಾರ್ಮಿಕ ಒತ್ತಡವನ್ನು ತಂದಾಗ. ಇದು 1583ರಲ್ಲಿ ಕಂಕೋಲಿಮ್‍ನಲ್ಲಿ
ಶುರುವಗಿ, ಉಗ್ರರೂಪ ತಾಳಿತು. ಸ್ಥಳಿಯ ಗೋವನ್ನರು ಬಹುತೇಕ ಎಲ್ಲ ಮಿಷನರಿಗಳನ್ನೂ ಕೊಂದುಹಾಕಿದರು. ಪರಿಣಾಮವಾಗಿ ಪೋರ್ಚುಗಿಸರು ಗೋವಾದ ಸಮುದಾಯಿಕ ಹಳ್ಳಿಗಳ ಎಲ್ಲ ಮುಖ್ಯಸ್ತರನ್ನು ಅಸ್ಸೋಲ್ನಾ ಕೋಟೆಯಲ್ಲಿ ಸಭೆ ಕರೆದರು. ಅಲ್ಲಿ ನಿರ್ಧಕ್ಷಿಣ್ಯವಾಗಿ ಎಲ್ಲ ಮುಖ್ಯಸ್ತರನ್ನು ಕೊಂದುಹಾಕಿದರು. ಇಬ್ಬರು ಮಾತ್ರ ಕೋಟೆ ಹಾರಿ ಅರಬಿ ಸಮುದ್ರಕ್ಕೆ ಜಿಗಿದು ಕಾರವಾರದವರೆಗೂ ಈಜಿ ಹೋದದ್ದನ್ನು ಬಿಟ್ಟರೆ ಮತ್ತೆ ಯಾವ ಸ್ಥಳೀಯ ಆಡಳಿತಗಾರನೂ ಬದುಕುಳಿಯಲಿಲ್ಲ.

ಇದು ಪೋರ್ಚುಗೀಸ್ ಗೋವಾದ ಇತಿಹಾಸದಲ್ಲೆ ದುರಂತ ಅಧ್ಯಾಯವಾಗಿ ದಾಖಲಾಗಿದೆ.

ಸ್ಥಳೀಯ ಪ್ರಜೆಗಳು ತಮ್ಮ ಮುಖಂಡರನ್ನು ಕಳೆದುಕೊಂಡ ಈ ಸಂದರ್ಭದಲ್ಲೇ ಪೋರ್ಚುಗೀಸರು ಅವರ ಭೂಮಿಯನ್ನು ಆಕ್ರಮಿಸಿಕೊಳ್ಳತೊಡಗಿದರು. ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಸಾರಕ್ಕೆ ಒತ್ತುಕೊಡತೊಡಗಿದರು. ಜಗತ್ರ್ಪಸಿದ್ಧ ವಿಶ್ವಪರಂಪರೆಯ ತಾಣಗಳ ಹಿಂದೆ ಈ ರೀತಿಯ ಹತ್ಯಾಕಾಂಡದ ರಕ್ತದ ಹನಿಗಳಿರುವುದು ವಿಪರ್ಯಾಸ.

ಶಿಕ್ಷಣ ಧರ್ಮಪ್ರಸಾರದ ಮತ್ತೊಂದು ಅಂಗದಂತೆ ಅನೇಕ ಬಾರಿ ವರ್ತಿಸಿದೆ.
“ಸೇಂಟ್ ಪಾಲ್ ಕಾಲೇಜ್” ಸೇಂಟ್ ಕ್ಸೇವಿಯರ್ ಅವರಿಂದ ಸ್ಥಾಪನೆಗೊಡಿದ್ದು ಇದೆ ಸಮಯದಲ್ಲಿ. ಇದನ್ನು ಮುಖ್ಯವಾಗಿ ಮಿಷನರಿಗಳನ್ನು ತರಬೇತಿಗೊಳಿಸಲು ಬಳಸಿಕೊಳ್ಳಲಾಗುತ್ತಿತ್ತು. “ಗೋವಾ ಮೆಡಿಕಲ್ ಕಾಲೇಜು” ಸ್ಥಾಪನೆಗೊಂಡು ಏಷ್ಯಾದ ಮೊದಲ ಮೆಡಿಕಲ್ ಕಾಲೇಜೆಂದು ಹೆಸರು ಪಡೆಯಿತು. ರೋಮನ್ ಕ್ಯಾಥೋಲಿಕರ ಬಹುತೇಕ ಶಿಕ್ಷಣಸಂಸ್ಥೆಗಳು ವಿಫುಲವಾಗಿ ಬೆಳೆದವು. ಇಲ್ಲಿ ಉನ್ನತ ಶಿಕ್ಷಣ, ವಿಜ್ಞಾನ, ಕಲೆ, ಇತಿಹಾಸ ವೈದ್ಯಕೀಯ ಇತ್ಯಾದಿ ಎಲ್ಲ ಕ್ಷೇತ್ರಗಳ ಅಧ್ಯಯನ ನಡೆಯುತ್ತಿತ್ತು. ಆದರೆ ಇದೆಲ್ಲದರ ಧಾರ್ಮಿಕ ಹಿನ್ನೆಲೆ ಸ್ಥಳಿಯರಿಗೆ ಅನುಮಾನ ಹುಟ್ಟಲು ಕಾರಣವಾಯ್ತು.

1 comment

  1. ನೀವೇನು ಗೋವಾಕ್ಕೆ ಹೋಗಿದ್ದಿರೋ ಇಲ್ಲವೊ? ಇದುವರೆಗೂ ನಾಲ್ಕು ಸಂಚಿಕೆ ಆಯ್ತು. ಗೋವಾದ ಪುರಾಣ, ಇತಿಹಾಸ ಇಷ್ಟನ್ನೇ ಹೇಳುತ್ತಿರುವಿರಿ. ನಿಮ್ಮ ಅನುಭವ ಏನೂ ಬರೆಯುತ್ತಿಲ್ಲ. ಇಷ್ಟನ್ನು ಪೀಠಿಕೆ ಎಂದುಕೊಳ್ಳಬಹುದೆ? ಬರೀ ಇಷ್ಟನ್ನೇ ಬರೆಯಲು ಗೋವಾಕ್ಕೆ ಹೋಗುವುದು ಬೇಕಾಗಿಯೇ ಇಲ್ಲ.

Leave a Reply