ಕೋಟೆಗೂ ಜೈಲಿಗೂ ಏನು ವ್ಯತ್ಯಾಸ..?

ಭಾರತ ಸ್ವತಂತ್ರಗೊಂಡ ನಂತರವೂ ಗೋವಾ ಪೋರ್ಚುಗೀಸರ ವಶದಲ್ಲೇ ಇತ್ತು.

ಗೋವಾ ಬಿಟ್ಟು ಹೊರಡಬೇಕೆಂಬ ಸೂಚನೆಯನ್ನು ಜವಾಹರ್ ಲಾಲ್ ನೆಹರೂ ಕೊಟ್ಟಾಗ, ಪೋರ್ಚುಗೀಸರು ತಿರಸ್ಕರಿಸಿದರು. ಆದರೆ ಫ್ರಂಚರು ಗೌರವಪೂರ್ವಕವಾಗಿಯೇ ಪುದುಚೆರಿ ಮುಂತಾದ ಸಣ್ಣ ಪುಟ್ಟ ವಸಾಹತುಗಳಿಂದ ಹೊರನಡೆದಿದ್ದರು. 1954ರಲ್ಲಿ ಭಾರತೀಯ ಸತ್ಯಾಗ್ರಹಿಗಳು ದಾದ್ರ ಮತ್ತು ನಗರಹವೇಲಿಯನ್ನು ಆಕ್ರಮಿಸಿ, ವಶಪಡಿಸಿಕೊಂಡರು. ಈ ಸಂಬಂಧ ಪೋರ್ಚುಗೀಸರು ಹೇಗ್‍ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಅದು ಅಡ್ಡಗೋಡೆ ಮೇಲೆ ದೀಪವಿಟ್ಟಂಥಾ ತೀರ್ಪು ಕೊಟ್ಟಿತು.

1955ರಲ್ಲಿ ಸತ್ಯಾಗ್ರಹಿಗಳ ಗುಂಪು ಮತ್ತೆ ಪೂರ್ಚುಗೀಸರ ವಿರುದ್ಧ ದಂಗೆಯೆದ್ದರು. ಸುಮಾರು 22 ಜನ ಪೋರ್ಚುಗೀಸರ ಗುಮಡಿಗೆ ಬಲಿಯಾದರು. ಇದಾದನಂತರ ಜವಹರ್ ಲಾಲ್ ನೆಹರೂ ಅವರು ಸ್ಪಷ್ಟವಾಗಿ “ಪೋರ್ಚುಗೀಸರು ಗೋವಾದಲ್ಲಿರುವುದನ್ನು ಇನ್ನು ಸಹಿಸುವುದಿಲ್ಲ” ವೆಂದು ಘೋಷಿಸಿದರು. ಗೋವಾ, ದಿಯು ಮತ್ತು ಡಾಮನ್‍ನಿಂದ ಪೋರ್ಚುಗೀಸರು ಹೊರಹೋಗುವಂತೆ ಒತ್ತಾಯಿಸಿದರು. ಪೋರ್ಚುಗೀಸರು ಮಣಿಯಲೇಬೇಕಾಯ್ತು.

16, ಡಿಸೆಂಬರ್ 1961 ರಲ್ಲಿ ಭಾರತೀಯ ಸೇನೆ ಅಕ್ಷರಷಃ ಗೋವಾದೊಳಕ್ಕೆ ನುಗ್ಗಿತು. ಕೇವಲ 36 ಗಂಟೆಗಳಲ್ಲಿ ಗೋವಾದ ನೆಲ, ಜಲ, ವಾಯುಯಾನದ ನೆಲೆಗಳಲ್ಲಿ ಭಾರತೀಯ ತ್ರಿವರ್ಣಧ್ವಜವನ್ನು ಹಾರಿಸಲಾಯ್ತು, ಈ ಯಶಸ್ವೀ ಭಾರತೀಯ ಸೈನ್ಯ ಕಾರ್ಯಾಚರಣೆಯನ್ನು“ಆಪರೇಷನ್ ವಿಜಯ್” ಎಂದು ಕರೆಯಲಾಗಿದೆ. 19, ಡಿಸೆಂಬರ್ 1961ರಂದು ಪೋರ್ಚುಗೀಸರು ಬೇಷರತ್ತಾಗಿ ಶರಣಾದರು. ರಾಷ್ಟ್ರಸಂಘದೆದುರು ಈ ಆಕ್ರಮಣದ ವಿರುದ್ಧ ದೂರುಗಳು ಹೋದವು ಆದರೆ ಭಾರತದ ಮಿತ್ರರಾಷ್ಟ್ರವಾದ ರಷ್ಯಾ ವೀಟೋ ಚಲಾಯಿಸಿ ಈ ದೂರುಗಳನ್ನು ತಳ್ಳಿಹಾಕಿತು. ಸ್ವತಃ ಗೋವನ್ನರು ತಾವು ಸ್ವತಂತ್ರ ರಾಜ್ಯವಾಗಿರಲು ಇಚ್ಚಿಸಿದರು. ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿದ್ದ 1987ರಲ್ಲಿ ಭಾರತದೊಳಕ್ಕೆ ಒಂದು ರಾಜ್ಯವಾಗಿ ಸೇರ್ಪಡೆಗೊಂಡಿತು.

ಗೋವಾ ತನ್ನ ಸ್ವಾತಂತ್ರ್ಯ ದಿನವನ್ನು ಡಿಸೆಂಬರ್ 19ರಂದು ಆಚರಿಸಿಕೊಳ್ಳುತ್ತದೆ. ಹೊಸ ವರ್ಷದ ಆಚರಣೆ, ಕ್ರಿಸ್‍ಮಸ್ ಜೊತೆಗೆ ಸ್ವಾತಂತ್ರ್ಯ ದಿನ ಎಲ್ಲ ಸೇರಿದ ಡಿಸೆಂಬರ್ ತಿಂಗಳು ಗೋವಾದಲ್ಲಿ ಝಗಮಗ.. ಜನಸಾಗರವನ್ನು ಭರಿಸುವುದು ಗೋವನ್ನರಿಗೆ ಬಲಗೈ ಕೆಲಸ.. ಈ ದಿನಗಳು ಎಲ್ಲರಿಗೂ ದುಡಿಮೆಯ ದಿನಗಳು.. ಹೋಟೆಲು, ರಿಸಾರ್ಟು, ಬಟ್ಟೆಯಂಗಡಿ, ಟ್ಯಾಟೂ ಹಾಕುವ ಹುಡುಗಿಯರಿಗಂತೂ ಸುಗ್ಗಿ..ಎಲ್ಲರ ಜೇಬುಗಳೂ ಭರ್ತಿ, ಬೆಳಗಿನ ಕುಳಿರ್ಗಾಳಿ, ಛಳಿತುಂಬಿದ ರಾತ್ರಿಗಳು ಯಾವ ಲೆಕ್ಕವೂ ಅಲ್ಲ.
ಮತ್ತು ಎಲ್ಲದರೊಂದಿಗೆ ವೇಶ್ಯಾವಾಟಿಕೆಯ ನೇತ್ಯಾತ್ಮಕ ಮುಖವೂ ಈ ಸಮಯದಲ್ಲಿ ವಿಜೃಂಭಿಸುತ್ತದೆ.
ವಯಸ್ಸಿನ ಭೇದವಿಲ್ಲದೆ ಹೆಣ್ಣೆಂಬ ದೇಹ ಇಲ್ಲಿ ಸರಕಾಗಿಬಿಡುತ್ತದೆ. ಬೇಕೋ, ಬೇಡವೋ, ಒಪ್ಪಿಯೋ ಒಪ್ಪದೆಯೋ ಒಟ್ಟಾರೆ ದೇಹದಾಹಕ್ಕೆ ಬಲಿಯಾಗುವುದೂ ನಿರಂತರ ನಡೆದಿದೆ. ಈ ವೇಶ್ಯೆಯರಿಗೂ ಒಂದು ಸ್ವಾತಂತ್ರ್ಯದ ದಿನ ಬರುವುದೇ..?
ಉತ್ತರ ತುಂಬ ಕಷ್ಟ.

ಕೋಟೆಗೂ ಜೈಲಿಗೂ ಏನು ವ್ಯತ್ಯಾಸ..?
ಏನೂ ಇಲ್ಲ ಎಂಬುದೇ ನನ್ನ ಉತ್ತರ..

ಕೋಟೆ ಕಟ್ಟಿಕೊಂಡು ತನ್ನನ್ನು ತಾನು ಬಂಧಿಸಿಕೊಂಡ ಪ್ರಭುತ್ವ ಅದರ ಇನ್ನೊಂದು ರೂಪವಾಗಿ ಜೈಲನ್ನು ಸೃಷ್ಟಿಸಿತು. ಗೋಡೆಗಳಿರುವ ವಾತಾವರಣದಲ್ಲಿ ಉಸಿರಾಡುವುದೇ ಕಷ್ಟವಾಯಿತು. ಅಪರಾಧಗಳನ್ನು ಹತೋಟಿಯಲ್ಲಿಡಲು ಕಂಡುಕೊಂಡ ಜೇಲೆಂಬ ವ್ಯವಸ್ಥೆ ಅನಂತರ ಏನೆಲ್ಲಾ ವಿಕೃತ ರೂಪ ಪಡೆಯಿತೆಂಬುದನ್ನು ಚರಿತ್ರೆ ಓದಿದವರೆಲ್ಲರೂ ಬಲ್ಲರು. ಪ್ರಭುತ್ವದ ಎರಡು ಮುಖಗಳಾದ ಇವೆರಡೂ ಜೊತೆಜೊತೆಗೇನೇ ಇರುತ್ತವೆಂಬುದು ಮತ್ತೊಂದು ವಿಪರ್ಯಾಸ.

ಹಾಗೆ ನೋಡಿದರೆ ಗೋವಾ ಸಮುದ್ರತೀರದ ಕೋಟೆಗಳು ತುಂಬ ಸುಂದರ- ಮತ್ತು ಕ್ರೂರ. ಒಮ್ಮೆ ಒಳಹೋಗಿ ಬಾಗಿಲು ಮುಚ್ಚಿತೆಂದರೆ ತೀರಿತು.. ಎಷ್ಟು ಸೊಗಸಾದ ಕಟ್ಟೋಣವಾಗಿದ್ದರೆ ಏನಂತೆ..ಸ್ವಾತಂತ್ರ್ಯವೇ ಇಲ್ಲದ ಬಳಿಕ..? ಕೋಟೆಗಳೇ ಹೀಗನಿಸುವಾಗ ಇನ್ನು ಜೈಲುಗಳು..? ಗೋವಾ ಕೋಟೆಗಳು ಸಮುದ್ರಮುಖಿಗಳು.. ಹೊರಹೋದರೂ ಉಪ್ಪುನೀರಿನ ಪಾಲು..
ಬಂಧನದ ಪರಿಕಲ್ಪನೆಯಾದರೂ ಹೇಗೆ ಬಂದಿರಬಹುದು ಮನುಷ್ಯನಿಗೆ ಎಂದು ಅಶ್ಚರ್ಯವಾಗುತ್ತದೆ. ಮತ್ತು ಅಗುಡಾ ಕೋಟೆಯನ್ನು ಏರಿ ಸಮುದ್ರಕ್ಕೆ ಮುಖ ಮಾಡಿದಾಗ ಅಥವಾ ಹಿಂಭಾಗದ ದಟ್ಟಕಾನನವನ್ನು ದಿಟ್ಟಿಸುವಾಗ ಹೀಗೆಲ್ಲಾ ಅನಿಸಿತು.
ಹಾಗೆ ನೊಡಿದರೆ ಅಗೂಡಾ ಕೋಟೆ ಕೇವಲ ಕೋಟೆಯಾಗಿರಲಿಲ್ಲ. ಅದೊಂದು ನೀರಿನ ಬೃಹತ್ ಸಂಗ್ರಹಾಗಾರ.

ಅಗುವಾ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ನೀರು. ಇದರ ಶಿರೋಭಾಗದಲ್ಲಿ ಮಳೆಯಿಂದುಂಟಾಗುವ ಜಲಪಾತವು ಸೃಷ್ಟಿಸಿದ ಸರೋವರ ಒಂದಿತ್ತಂತೆ. ಮಾಂಡೋವಿಯಲ್ಲಿ ಹೋಗಿ ಬಂದು ಮಾಡುವ ವ್ಯಾಪಾರಿ ಮತ್ತು ನಾಗರಿಕ ಹಡಗುಗಳ ನೀರಿನ ಅವಶ್ಯಕತೆಯನ್ನು ಇಲ್ಲಿಂದ ಪೂರೈಸಲಾಗುತ್ತಿತ್ತು. ಹಾಗಾಗಿ ಈ ಕೋಟೆಗೆ ಅಗೂಡಾ ಎಂದು ಹೆಸರಾಯ್ತು. ಇದನ್ನು ಪೋರ್ಚುಗಿಸರು 1604 ಮತ್ತು 1612ರ ಮಧ್ಯಭಾಗದಲ್ಲಿ ಕಟ್ಟಿಸಿದರು. ಈ ಕೋಟೆಯ ಮುಖ್ಯ ಉದ್ದೇಶ ಡಚ್ಚರ ಆಕ್ರಮಣವನ್ನು ತಡೆಯುವುದಾಗಿತ್ತು.

ಸಾಹಿತ್ಯಕ, ಮುದ್ರಕ ಗೋವಾ

ಗೋವಾ ಸಾಹಿತ್ಯವನ್ನು ಕುರಿತು ಗಂಭೀರವಾಗಿ ಅಧ್ಯಯನ ಮಾಡಲು ಹೊರಟರೆ ತಲೆಚಿಟ್ಟು ಹಿಡಿದುಹೋಗುತ್ತದೆ. ಭರ್ತಿ 13 ಭಾಷೆಗಳಲ್ಲಿ ಗೋವನ್ ಲೇಖಕರು ಬರೆದಿದ್ದಾರೆ..! ಮತ್ತು ಬರೆಯುತ್ತಿದ್ದಾರೆ..! ಮುಖ್ಯವಾಗಿ ಕೊಂಕಣಿ, ಮರಾಠಿ, ಇಂಗ್ಲಿಷ್ ಮತ್ತು ಪೋರ್ಚುಗೀಸ್‍ನಲ್ಲಿ ಸಾಹಿತ್ಯಕೃಷಿ ಹೆಚ್ಚು. . ಕನ್ನಡದಲ್ಲಿ ಬರೆದವರು ಕೈಬೆರಳೆಣಿಕೆಯಷ್ಟು ಜನ. ಇವರೆಲ್ಲಾ ಗೋವಾದಲ್ಲೇ ನೆಲೆನಿಂತವರು ಅಲ್ಲ. ತಂತಮ್ಮ ಕಾರಣಗಳಿಗೆ ಗೋವಾದಿಂದ ಹೊರಹೋದವರು, ಆದರೂ ತಮ್ಮ ಬೇರುಗಳು ಜನ್ಮಸ್ಥಳದಲ್ಲೇ ಇವೆಯೆಂದು ಗಾಢವಾಗಿ ನಂಬಿದವರು. ಹಾಗಾಗಿ ಭಾಷೆ ಯಾವುದಾದರೇನು.. “ಗೋವಾತನ” ಹಾಸು ಹೊಕ್ಕಾಗಿಯೇ ಇದೆ.

ಹಾಗೆ ನೋಡಿದರೆ ಏಷ್ಯಾದಲ್ಲೇ ಮುದ್ರಣ ಯಂತ್ರವನ್ನು ಕಂಡ ಮೊದಲ ದೇಶ ಗೋವಾ. 1556ರಲ್ಲೇ ಪ್ರಿಂಟಿಂಗ್ ಪ್ರೆಸ್ ಯುರೋಪಿನಿಂದ ಗೋವಾಕ್ಕೆ ಬಂದಿತ್ತು. ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕನ್ನಡದಲ್ಲಿ ಬರೆದ ಧಾರ್ಮಿಕ ಪುಸ್ತಕವನ್ನು ಮುದ್ರಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗದೇ ಹೋಯ್ತು. ಒಟ್ಟಾರೆ ಅಕ್ಷರಮೋಹವಿರುವ ಗೋವಾದಲ್ಲಿ ಕಾವ್ಯ, ಕಾದಂಬರಿಗಳು ಅರಬಿ ಸಮುದ್ರದ ಅಲೆಯಂತೆ ನಿರಂತರವಾಗಿ ಚಲನಶೀಲವಾಗಿವೆ.. ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ..

ಗೋವಾದ ಮೊದಲ ಕಾದಂಬರಿ ಫ್ರಾನ್ಸಿಸೋ ಲೂಯಿಸ ಗೋಮ್ಸ್ ಬರೆದ “ಬ್ರಾಹ್ಮಣಾಸ” 1866ರಲ್ಲಿ ಪೋರ್ಚುಗೀಸ್ ಪ್ರಭಾವವಿರುವ ಕೊಂಕಣಿಯಲ್ಲಿ ಪ್ರಕಟವಾಯಿತು. ತದನಂತರ ಅನೇಕ ನವಸಾಕ್ಷರರಾದ ಕೊಂಕಣಿ ಲೇಖಕರು ಮೂಡಿಬಂದರು. ಶೆಣೋಯ್ ಗೊಎಂಬಾಬ್ ಅವರಲ್ಲಿ ಪ್ರಮುಖರು. ಕೊಂಕಣಿ ಗೋವಾದ ಅಧಿಕೃತ ಪ್ರದೇಶಿಕ ಭಾಷೆಯಾಗಿಯೂ ಬೆಳವಣಿಗೆ ಕಂಡಿತು ಈಗಲೂ ಕೊಂಕಣಿ ಶಾಲೆಗಳು ಸಾಕಷ್ಟು ಸಂಖ್ಯೆಯಲ್ಲಿವೆ.

ಇದರೊಟ್ಟಿಗೆ ಬೆಳೆದ ಮತ್ತೊಂದು ಭಾಷೆ ಮರಾಠಿ. ಆರ್. ವಿ. ಪಂಡಿತ್ ಸೃಜನಶೀಲ ಕೃತಿಗಳನ್ನು ಪ್ರಕಟಿಸಿದರೆ ಎಸ್. ಎಂ ತಾಡ್ಕೋಡ್ಕರ್ ಸಂಶೋಧನಾ ಕೃತಿಗಳನ್ನು ಪ್ರಕಟಿಸಿದರು. ಕನ್ನಡದ ಪ್ರಭಾವವೇನೂ ಕಡಿಮೆಯಿರಲಿಲ್ಲ. ಹಾಗಾಗಿ ಬಹುಭಾಷೆಗಳು ಒಟ್ಟಾಗಿ 18ನೆಯ ಶತಮಾನದ ಗೋವಾಸಾಹಿತ್ಯ ಸಾಕಷ್ಟು ಪ್ರಗತಿ ಕಂಡಿತ್ತು.

ಅನಂತರ 19ನೇ ಶತಮಾನದಲ್ಲಿ ಕ್ರಾಂತಿಕಾರಿ ರೀತಿಯಲ್ಲಿ ಆದ ಬದಲಾವಣೆಯೆಂದರೆ ಬ್ರಿಟಿಷರೊಂದಿಗಿನ ಸಂಪರ್ಕ. ಎಲ್ಲಾ ಭಾಷೆಗಳನ್ನೂ ಇಂಗ್ಲಿಷ್ ಕೊಚ್ಚಿಕೊಂಡು ಹೋಗುವ ರೀತಿಯಲ್ಲಿ ಆಕ್ರಮಿಸಿತು ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಹಾಗಾಗಿ ಇಂಗ್ಲಿಷಿನಲ್ಲಿ ಸಾಹಿತ್ಯಸೃಷ್ಟಿ ಅತೀ ಹೆಚ್ಚಿನ ಮಟ್ಟದಲ್ಲಿ ಆಗಿದೆ. ಜೋಸೆಫ್ ಫರ್ಟಡೋ, ಎಡ್ವರ್ಡ ಡಿ.ಲಿಮಾ ಆಗಿನ ಮುಖ್ಯಬರಹಗಾರರು.

ಹಾಗೆ ನೋಡಿದರೆ ಪತ್ರಿಕಾ ಕ್ಷೇತ್ರದಲ್ಲಿ ಮರಾಠಿ ಭಾಷೆಯದೇ ಮೇಲುಗೈ. ದೈನಿಕ ಗೋಮಾಂತಕ್, ತರುಣ್ ಭಾರತ್, ನವಪ್ರಭಾ, ಗೋವಾದೂತ್ ಇನ್ನೂ ಮುಂತಾದ ಮರಾಠಿ ದಿನಪತ್ರಿಕೆಗಳದೇ ಕಾರುಬಾರು. ಆದರೆ ಸೃಜನಶೀಲ ಸಾಹಿತ್ಯದಲ್ಲಿ ಇಂಗ್ಲಿಷ್‍ನಲ್ಲಿ ಬರೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೊಸ ಸಾಹಿತ್ಯ ಪ್ರಕಾರದ ಫಿಕ್ಷನ್, ನಾನ್ ಫಿಕ್ಷನ್, ಕಾವ್ಯ, ಮತ್ತು ರಂಗಭೂಮಿಕೃತಿಗಳು ಸೃಷ್ಟಿಯಾದವು. ಸಾಹಿತ್ಯಕ್ಷೇತ್ರ ನಿರೀಕ್ಷೆಗೂ ಮೀರಿ ಬೆಳೆಯಿತು. ಆಧುನಿಕರಲ್ಲಿ ಲಕ್ಷ್ಮಣರಾವ್ ಸರ್ದೇಸಾಯಿ, ಆರ್. ವಿ. ಪಂಡಿತ್, ಮರಾಠಿ, ಕೊಂಕಣಿ ಮತ್ತು ಪೋರ್ಚುಗಿಸ್ ಭಾಷೆಗಳನ್ನು ಬಲ್ಲವರಾಗಿದ್ದರು. ರವೀಂದ್ರ ಕೆಲೆಕರ್ ಮತ್ತು ಪುಂಡಲೀಕ್ ನಾಯಕ್ ಕೊಂಕಣಿಯ ಕಾದಂಬರಿಕಾರರು.

ಇದರೊಟ್ಟಿಗೆ ಸಾಹಿತ್ಯಕ್ಷೇತ್ರದಲ್ಲಿ ಮುಖ್ಯಘಟನೆಯೊಂದು ನಡೆಯಿತು. ಪಣಜಿಯ ಪೊರ್ಚುಗೀಸ್ ಸಾಂಸ್ಕೃತಿಕ ಸಂಸ್ಥೆ ಫಂಡ್ಯಾಕೋ ಓರಿಯೆಂಟೆ ಕೆಲವು ಆಯ್ದ ಲೇಖಕರಿಗೆ ಹಲವು ಸಾವಿರ ರೂಪಾಯಿಗಳನ್ನು ಕೊಡಮಾಡಿ ಪುಸ್ತಕ ಪ್ರಕಟಣೆಗೆ ನೆರವಾಯಿತು. ಇದು ಅನೇಕ ಕೃತಿಗಳು ಹೊರಬರಲು ಕಾರಣವಾಯ್ತು.

ಇದರ ನಂತರ ನಡೆದ ಮತ್ತೊಂದು ಮುಖ್ಯಘಟನೆಯೆಂದರೆ ಗೋವಾ ಯೂನಿವರ್ಸಿಟಿ ಲೈಬ್ರರಿಯಲ್ಲಿ ಎಲ್ಲಾ ಭಾಷೆಗಳ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸುವ ತೀರ್ಮಾನ ಕೈಗೊಳ್ಳಲಾಯ್ತು ಮತ್ತು ಯೂನಿವರ್ಸಿಟಿಯೊಂದು ಮಾಡಲೇಬೇಕಾದ ಕೆಲಸ ಇದಾಗಿತ್ತೆಂದು ಹೇಳಬಹುದು. ಇಲ್ಲಿ ಕೊಂಕಣಿ, ಮರಾಠಿ, ಕನ್ನಡ, ಇಂಗ್ಲಿಷ್, ಪೋರ್ಚುಗೀಸ್, ಫೆಂಚ್ ಭಾಷೆಯ ಹಸ್ತಪ್ರತಿ, ಮುದ್ರಿತ ಪುಸ್ತಕಗಳು ಮತ್ತು ಟೆಲಿಫಿಲ್ಮ್ ಗಳನ್ನು ಅಪಾರ ಸಂಖ್ಯೆಯಲ್ಲಿ ಸಂಗ್ರಹಿಸಿ, ರಕ್ಷಿಸಿಡಲಾಗಿದೆ.

ಗೋವಾ ಸ್ಟೇಟ್ ಸೆಂಟ್ರಲ್ ಲೈಬ್ರೆರಿ ಮತ್ತೊಂದು ಅಮೂಲ್ಯ ಆಕರಗಳ ಗ್ರಂಥಭಂಡಾರ. ಈ ಗ್ರಂಥಾಲಯವು ದಕ್ಷಿಣ ಏಷ್ಯಖಂಡದ ಅತಿ ಹಳೆಯ ಗ್ರಂಥಾಲಯವೆಂದು ಗುರುತಿಸಿಕೊಂಡಿದೆ. 17ನೆಯ ಶತಮಾನದಿಂದೀಚೆಗೆ ಮುದ್ರಿತಗೊಂಡ ಸಮಗ್ರ ಸಂಪುಟಗಳನ್ನೆಲ್ಲವನ್ನೂ ಇಲ್ಲಿ ಸಂಗ್ರಹಿಸಿ ಅಧಯನಕ್ಕೆ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ. ಸಮಯ, ತಾಳ್ಮೆ ಮತ್ತು ಪ್ರಾಯೋಜಕತ್ವವಿದ್ದಲ್ಲಿ ಈ ಸಾಹಿತ್ಯರಾಶಿಯ ಕುರಿತು ಪಂಡಿತರು ಸಮಗ್ರ ಅಧ್ಯಯನ ಕೈಗೊಳ್ಳಬಹುದು ಎನ್ನಲಡ್ಡಿಯಿಲ್ಲ..

ಈ ಹೊತ್ತಿನ ಗೋವಾದಲ್ಲಿ ನಡೆಯುವ ಪ್ರಮುಖ ಸಾಹಿತ್ಯಕ ಸಮ್ಮೇಳನವೆಂದರೆ ಸ್ವಯಂಸೇವಕರುಗಳೇ ಮುಂದಾಗಿ ನಡೆಸುವ ಗೋವಾ ಕಲೆ ಮತ್ತು ಸಾಹಿತ್ಯ ಹಬ್ಬ. ಇದು ನಿಜಕ್ಕೂ ಒಂದು ಅಂತರಾಷ್ಟ್ರಿಯ ಮಟ್ಟದ ಹಬ್ಬವಾಗಿದ್ದು ಇದರಲ್ಲಿ ಕಲೆ, ಸಾಹಿತ್ಯ, ಫೋಟೋಗ್ರಫಿ, ಜನಪದ, ರಂಗಭೂಮಿಗಳ ಹುಟ್ಟು ಮತ್ತು ಬೆಳವಣಿಗೆಗಳನ್ನು ಚರ್ಚಿಸುವ ಮೂರುದಿನಗಳ ಮನಸು ಮಿದುಳಿಗೆ ಸಾಕಷ್ಟು ಮಾಹಿತಿ ಕೊಡುವ ಹಬ್ಬ. ವಿಚಾರಗೋಷ್ಟಿ, ಚರ್ಚಾಗೋಷ್ಟಿ, ಚರ್ಚೆ ನೃತ್ಯ ಎಲ್ಲವೂ ಇರುವ ಸ್ಥಳ ಇದು,

ಫ್ರಾನ್ಸಿಸ್ ಲೂಯಿಸ ಗೋಮ್ಸ್, ಓರ್ಲಾಂಡೋ ದಿಕೋಸ್ಟಾ, ನರೋನ್ಹಾ, ಮನೋಹರ್ ಸರ್‍ದೇಸಾಯಿ, ದಾಮೋದರ್ ಮೌಝೋ, ಪುಂಡಲೀಕ್ ನಾಯಕ್, ಮನೋಹರ್ ಶೆಟ್ಟಿ, ರೋಹನ್ ಗಾವೆಂಕರ್, ಇವರೆಲ್ಲ ಕಾಲಾಂತರದಲ್ಲಿ ಬರೆಯುತ್ತಿರುವ ಲೇಖಕರಾದರೆ ಶೀಲಾ ಜಯಂತ್, ಅಮಿತಾ ಕಾನೆಕರ್, ಲೀನೋ ಲೀಟೋ, ವೈಲಟ್ ಲ್ಯಾನೋಯ್ ಡಯಾಸ, ಅನಿತಾ ಪಿಂಟೋ ಇವರು ಲೇಖಕಿಯರು. ಬಹುತೇಕರು ಹೊರದೇಶಗಳಲ್ಲಿ ನೆಲೆಸಿದವರು ಆದರೆ ಗೋವಾದ ಸಾಂಸ್ಕøತಿಕ ಬೇರುಗಳನ್ನು ಬರಹದ ಆತ್ಮವಾಗಿ ಹೊಂದಿದವರು.

Leave a Reply