ನಮ್ಮನ್ನು ನೀವು ನಿರ್ದೇಶಿಸಬೇಡಿ!..

   ಎಂ ಆರ್ ಕಮಲಾ

ನೀವು ಬರೆದ ನಾಟಕಗಳಿಗೆ ಬಣ್ಣ ಹಚ್ಚಿ
ಹೇಳಿಕೊಟ್ಟ ಮಾತು ಉರುಹೊಡೆದು
ರಂಗವೇರುವುದಕ್ಕೆ ಸಾಲುಗಟ್ಟಿದವರಲ್ಲ
ನಮ್ಮನ್ನು ನೀವು ನಿರ್ದೇಶಿಸಬೇಡಿ

ಯಾರೊಂದಿಗೆ ಎಷ್ಟು ಮಾತು, ನಗು,
ಯಾವ ಗುಂಪಿನಲ್ಲಿ ಯಾವ ಗೆಳೆಯರು
ಎಂಬ ಗುಟ್ಟು ಪಟ್ಟನ್ನೆಲ್ಲ ಕಲಿಸಬೇಡಿ
ನಮ್ಮನ್ನು ನೀವು ನಿರ್ದೇಶಿಸಬೇಡಿ

ಭಾವಚಿತ್ರಗಳ ಸ್ಕ್ಯಾನ್ ಮಾಡಿ
ಎಲ್ಲಿ, ಯಾರೊಂದಿಗೆ ಹೇಗೆ ನಿಂತಿರಿ
ತಾಲೀಮಿನಲ್ಲಿ ತಪ್ಪುತ್ತಿದ್ದೀರಿ ಎಂದೆಲ್ಲ
ನಮ್ಮನ್ನು ನೀವು ನಿರ್ದೇಶಿಸಬೇಡಿ

ನಾವೇನು ಹೆಜ್ಜೆ ಕಲಿಯುತ್ತಿರುವ
ಕಂದಮ್ಮಗಳಲ್ಲ, ಏಳು ಬೀಳುಗಳಲಿ
ಮುನ್ನಡೆದು, ಸಿಹಿ, ಕಹಿ ಉಂಡು
ಬದುಕ ಸಿದ್ಧಾಂತ ರೂಪಿಸಿಕೊಂಡಿದ್ದೇವೆ.
ನಮ್ಮನ್ನು ನೀವು ನಿರ್ದೇಶಿಸಬೇಡಿ

ಅಡುಗೆಮನೆಯ ಕತ್ತಲಲ್ಲೇ ಕಳೆದು
ಹೊತ್ತು ಹೊತ್ತಿಗೆ ಬಡಿಸಿ, ಉಣಿಸಿ
ಮನದ ಮಾತುಗಳ ಡಬ್ಬಿಗಳಲಿ
ಮುಚ್ಚಿಟ್ಟಿದ್ದವರು, ತೆರೆದಿದ್ದೀವಿ
ನಮ್ಮನ್ನು ನೀವು ನಿರ್ದೇಶಿಸಬೇಡಿ

ನೀವೇ ಅತ್ತರೂ ಎದೆಗಾತುಕೊಂಡು
ಸೋತರೆ ಜೊತೆ ನಿಂತು ನಡೆಸಿದ್ದೇವೆ.
ನಲಿವಿಗೆ, ನೋವಿಗೆ ಮಿಡಿದಿದ್ದೇವೆ
ನಮ್ಮನ್ನು ನೀವು ನಿರ್ದೇಶಿಸಬೇಡಿ

ಏಕಾಂಗಿ ನಡೆ ದಿಟ್ಟವಾಗಿ ಇಡುವಾಗ
ಗುಂಪಿನಲ್ಲಿ ಕಟ್ಟಿ ಹಾಕಲು ಯತ್ನಿಸಬೇಡಿ
ನೀವೆಂದೂ ನಮ್ಮೊಂದಿಗೆ ಇರಲೇ ಇಲ್ಲ!

 

1 comment

Leave a Reply